ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಪರಿಶಿಷ್ಟ ಪಂಗಡಗಳ ಸಮಗ್ರ ಅಧ್ಯಯನ ಕೇಂದ್ರ : ಅಂಬೇಡ್ಕರ್ ಅವರನ್ನು ಓದುವುದು ಹೇಗೆ? ಶಿಬಿರ

ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ
ಪರಿಶಿಷ್ಟ ಪಂಗಡಗಳ ಸಮಗ್ರ ಅಧ್ಯಯನ ಕೇಂದ್ರ
ಅಂಬೇಡ್ಕರ್ ಅವರನ್ನು ಓದುವುದು ಹೇಗೆ? ಶಿಬಿರ

ಅಂಬೇಡ್ಕರ್ ಅವರು ದೇಶದ ೨೦ನೇ ಶತಮಾನದ ಶ್ರೇಷ್ಠ ಮುಕ್ತ ಚಿಂತಕರು ಎಂದು ಚಿಂತಕರಾದ ಪ್ರೊ.ಸಿದ್ಧಲಿಂಗಯ್ಯ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ಪರಿಶಿಷ್ಟ ಪಂಗಡಗಳ ಸಮಗ್ರ ಅಧ್ಯಯನ ಕೇಂದ್ರವು ೧೭ ರಿಂದ ೧೮ ಜೂನ್ ೨೦೧೭ರ ವರೆಗೆ ಏರ್ಪಡಿಸಿದ್ದ ಅಂಬೇಡ್ಕರ್ ಅವರನ್ನು ಓದುವುದು ಹೇಗೆ? ಅಧ್ಯಯನ ಶಿಬಿರವನ್ನು ಭುವನವಿಜಯ ಸಭಾಂಗಣದಲ್ಲಿ ಅರಳಿಗಿಡಕ್ಕೆ (ಕುಂಡದಲ್ಲಿ) ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಬದುಕಿದ್ದಾಗ ಅವರಿಗೆ ಮಾನ್ಯತೆ ಗೌರವ ದೊರೆಯಲಿಲ್ಲ. ಉನ್ನತ ಸ್ಥಾನದಲ್ಲಿದ್ದರೂ ಅವರಿಗೆ ಸಾಮಾನ್ಯ ನಾಗರೀಕನಿಗೆ ಸಿಗುವ ಗೌರವ ದೊರೆಯಲಿಲ್ಲ. ಮಾಧ್ಯಮಗಳು ಅವರನ್ನು ದೇಶ ವಿರೋಧಿ ಎಂದು ಬಿಂಬಿಸಿದ್ದವು. ಮಾಧ್ಯಮಗಳು ನನಗೆ ಅನ್ಯಾಯ ಮಾಡಿವೆ ಎಂದು ಸ್ವತಃ ಅಂಬೇಡ್ಕರ್ ನೋವಿನಿಂದ ಹೇಳಿಕೊಂಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷವನ್ನು ಹಾಗೂ ಮಹಾತ್ಮಗಾಂಧಿಯನ್ನು ವಿರೋಧ ಮಾಡಿದ್ದು ಇದಕ್ಕೆ ಕಾರಣವಾಗಿತ್ತು. ಬ್ರಿಟೀಷ್ ವೈಸ್‌ರಾಯ್ ಮೌಂಟ್ ಬ್ಯಾಟನ್ ಅವರನ್ನು ದೇವಾಲಯದ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು. ಆದರೆ ಅಂಬೇಡ್ಕರ್‌ಗೆ ದೇವಾಲಯ ಪ್ರವೇಶಿಸಲು ಬಿಡಲಿಲ್ಲ. ಮನುಸ್ಮೃತಿ ದಹನದ ಸಂದರ್ಭದಲ್ಲಿ ಬಹಳ ಕಿರುಕುಳ ಅನುಭವಿಸಿದರು. ನೊಂದು ಮಾನಸಿಕ ಹಿಂಸೆ ಅನುಭವಿಸಿದರು. ಆದರೆ ಅವರು ದ್ವೇಷ ಬೆಳೆಸಿಕೊಳ್ಳಲಿಲ್ಲ. ದೇಶದ ಹಿತ ಆಯ್ಕೆ ಮಾಡಿಕೊಂಡು ಕಾನೂನಾತ್ಮಕವಾಗಿ ಹೋರಾಡಿದರು ಎಂದು ತಿಳಿಸುತ್ತ ಕಾಳಾರಾಮನ ದೇವಾಲಯಕ್ಕೆ ಅಂಬೇಡ್ಕರ್ ಪ್ರವೇಶಿಸಲು ಹೋದಾಗ ಬೀಗ ಹಾಕಿ ಅವರ ಮೇಲೆ ಹಲ್ಲೆ ಮಾಡಿದರು. ಇತ್ತೀಚೆಗೆ ಈ ದೇವಾಲಯದ ಪುರೋಹಿತರ ಮೊಮ್ಮಕ್ಕಳು ಪತ್ರಿಕಾಗೋಷ್ಠಿ ಕರೆದು ಆಗ ನಮ್ಮ ಹಿರಿಯರು ಅಂಬೇಡ್ಕರ್ ಅವರೊಂದಿಗೆ ವರ್ತಿಸಿದ ರೀತಿಗೆ ನಾವು ಕ್ಷಮೆ ಕೋರುತ್ತೇವೆ ಎಂದು ಕೇಳಿದ ಘಟನೆ ವಿವರಿಸಿದರು.
ಅಂಬೇಡ್ಕರ್ ಅವರನ್ನು ದಲಿತರ ನಾಯಕ, ಸಂವಿಧಾನ ಪಿತೃ ಎಂಬುದಕ್ಕಷ್ಟೇ ಸೀಮಿತಗೊಳಿಸಬಾರದು. ಶೋಷಿತರ ನಾಯಕ, ರಾಷ್ಟ್ರನಾಯಕ ಎಂದು ಬಿಂಬಿಸಬೇಕಾಗಿದೆ. ಕಾರ್ಮಿಕರಿಗೆ, ರೈತವರ್ಗಕ್ಕೆ, ಕೂಲಿಕಾರರಿಗೆ, ಮಹಿಳೆಯರಿಗಾಗಿ ಅವರು ನೀಡಿದ ಕೊಡುಗೆಯನ್ನು ಚರ್ಚಿಸಬೇಕಾಗಿದೆ. ಸಮಗ್ರಶೋಷಿತರು ಅವರ ಕೊಡುಗೆಯನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸುತ್ತ, ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಭಾರತವನ್ನು ಒಳಗೊಂಡು ಅಂಬೇಡ್ಕರ್ ಅವರನ್ನು ಕುರಿತು ಧೋರಣೆ ಬದಲಾಗಿರುವುದನ್ನು ಗೌರವಿಸುವುದನ್ನು ಕಾಣುತ್ತಿದ್ದೇವೆ. ಎಡಪಂಥೀಯರು, ಬಲಪಂಥಿಯರು ಎಲ್ಲರಿಗೂ ಅಂಬೇಡ್ಕರ್ ಬೇಕಾದ ವ್ಯಕ್ತಿ ಆಗಿದ್ದಾರೆ. ಇದು ಸಕಾರಾತ್ಮಕ ವಿಚಾರ ಎಂದು ಸಂತಸಪಟ್ಟರು.
ಔಟ್‌ಲುಕ್ ಮತ್ತು ಬಿಬಿಸಿ ನಡೆಸಿದ ಸಮೀಕ್ಷೆಯಲ್ಲಿ ಮಹಾತ್ಮಗಾಂಧಿ ನಂತರ ಶ್ರೇಷ್ಠ ವ್ಯಕ್ತಿ ಎಂದರೆ ಜವಹರ್‌ಲಾಲ್ ನೆಹರು ಅವರಿಗೆ ೮೦೦೦ ಮತ ಬಂದರೆ, ನಂತರ ಇಂದಿರಾಗಾಂಧಿ ಅವರಿಗೆ ೧೯,೦೦೦ ಮತ ಬಂದಿತ್ತು. ಆದರೆ ಅಂಬೇಡ್ಕರ್ ಅವರಿಗೆ ೧೯,೯೦೦೦ ಮತ ಬಂದಿದ್ದವು ಎಂದು ತಿಳಿಸಿದರು.
ಅಂಬೇಡ್ಕರ್ ಬಗ್ಗೆ ಉತ್ಪ್ರೇಕ್ಷೆಗಳನ್ನು, ಐತಿಹ್ಯಗಳನ್ನು ನಂಬಬೇಡಿ. ಅವರ ಬಗ್ಗೆ ತಿಳಿಯಲು ಅಧಿಕೃತವಾಗಿ ಬರೆದ ಪುಸ್ತಕಗಳನ್ನು ಓದುವುದೇ ಸೂಕ್ತ. ಅಂಬೇಡ್ಕರ್ ಅವರ ಸಮೀಪವರ್ತಿಗಳಾದ ನಾನಕ್‌ಚಂದ್ ರತ್ತು, ಶಂಕರಾನಂದ ಶಾಸ್ತ್ರಿ, ಭಗವಾನ್ ದಾಸ್ ಬರೆದ ಪುಸ್ತಕಗಳನ್ನು ಓದಿ ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳಿ ಅಲ್ಲದೆ ಅಮೆರಿಕ ಮಹಿಳೆ ಏಲಿಯೆಟ್ ಜೆಲೆನಿಯೋಲ್ ಹಾಗೂ ಜರ್ಮನಿ ಮಹಿಳೆ ಜೈಲ್ ಹೋಂಮೇಟ್ ಅಂಬೇಡ್ಕರ್ ಕುರಿತು ಬರೆದ ಪುಸ್ತಕಗಳನ್ನು ಓದಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
೧೯೩೫ರಲ್ಲಿ ಅಂಬೇಡ್ಕರ್ ಹಿಂದುವಾಗಿ ಹುಟ್ಟಿದ್ದೇನೆ. ಆದರೆ ಹಿಂದುವಾಗಿ ಸಾಯಲಾರೆ ಎಂದು ಹೇಳಿದ್ದರು. ಆದರೆ ತಕ್ಷಣ ಮತಾಂತರ ಹೊಂದಲಿಲ್ಲ. ಬದಲಾವಣೆಗಾಗಿ ಕಾದರು. ಕ್ರಿಶ್ಚಿಯನ್ ಧರ್ಮದಲ್ಲಿ ಪೋಪ್ ಇರುವಂತೆ ಹಿಂದುಧರ್ಮಕ್ಕೆ ಒಬ್ಬನೇ ಜಗದ್ಗುರು ಇರಬೇಕು. ಹಾಗೆಯೇ ಒಂದೇ ಧರ್ಮ ಗ್ರಂಥ ಇರಬೇಕು. ಅರ್ಚಕ ವೃತ್ತಿ ಅನುವಂಶಿಯವಾಗಿರಬಾರದು ತರಬೇತಿ ಪಡೆದ ಯಾರೇ ಆದರೂ ಅರ್ಚಕ ವೃತ್ತಿ ಮಾಡಬಹುದು ಎಂದೆಲ್ಲ ವೈಚಾರಿಕವಾಗಿ ಚಿಂತನೆ ಮಾಡಿ ಫಲ ಕಾಣದೆ ೨೧ ವರ್ಷಗಳ ನಂತರ ನಿರಾಶರಾಗಿ ಅವರು ಮತಾಂತರಗೊಂಡರು. ಸಾಮಾಜಿಕ ಬದಲಾವಣೆಗೆ ದಲಿತರಿಗಿಂತ ದಲಿತೇತರ ಯುವಕರು ಹೆಚ್ಚು ಚಿಂತನೆ ಮಾಡಬೇಕಿದೆ ಎಂದು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಕಟಣೆಗಳ ಕುರಿತು ಮಾತನಾಡುತ್ತ, ಪುಸ್ತಕ ಮೇಳಗಳಲ್ಲಿ ಕನ್ನಡ ವಿಶ್ವವಿದ್ಯಾಲಯದ ಪುಸ್ತಕಗಳು ಬಹಳ ಬೇಗ ಮಾರಾಟವಾಗಿ ಬೇಡಿಕೆ ಹೆಚ್ಚುತ್ತಿರುತ್ತದೆ. ಇದನ್ನು ನಾನು ಗಮನಿಸಿದ್ದೇನೆ. ಪುಸ್ತಕಗಳಲ್ಲಿ ಹೊಸನೋಟ, ಸಮಗ್ರ ಮಾಹಿತಿ ಇರುವುದೇ ಕಾರಣ ಎಂದು ತಿಳಿಸುತ್ತ, ಇಂದು ಇಡೀ ಜಗತ್ತು ಅಂಬೇಡ್ಕರ್ ಕುರಿತು ಕುತೂಹಲ ತೋರುತ್ತಿದ್ದರೆ ಅಂಬೇಡ್ಕರ್ ಅವರ ವಿದ್ವತ್ತು, ಅಧ್ಯಯನ ಶೀಲತೆ, ಪುಸ್ತಕ ಪ್ರೇಮ ಕಾರಣ. ಏಷ್ಯಾದಲ್ಲೇ ದೊಡ್ಡ ಖಾಸಗಿ ಗ್ರಂಥಾಲಯ ಹೊಂದಿದ್ದ ಇವರು ದಿನಕ್ಕೆ ೧೮ ಗಂಟೆ ವ್ಯಾಸಂಗ ಮಾಡುತ್ತಿದ್ದರು. ವಿದ್ಯಾರ್ಥಿಗಳು ಕಲಿಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡುತ್ತ ಯಾವ ಹಿಂದು ಧರ್ಮವನ್ನು ಅಂಬೇಡ್ಕರ್ ವಿರೋಧ ಮಾಡುತ್ತಿದ್ದರು, ಯಾವ ಹಿಂದುಧರ್ಮದ ಸಂವಿಧಾನ ಎಂದು ಮನಸ್ಮೃತಿಯನ್ನು ಇವತ್ತಿಗೂ ಆಚರಿಸುತ್ತ ಬದುಕುತ್ತಿದ್ದೇವೋ ಅಂತಹ ಮನುಸ್ಮೃತಿಯನ್ನು ಸುಟ್ಟು ಹಾಕಿದ ಅಂಬೇಡ್ಕರ್ ಘಟನೆಯನ್ನು ದೃಶ್ಯಮಾಧ್ಯಮಗಳ ಮೂಲಕ ಅಂಬೇಡ್ಕರ್ ಮನುಸ್ಮೃತಿಯನ್ನು ಸುಡಲೇ ಇಲ್ಲ ಎಂದು ಹೇಳುತ್ತ ಅಂಬೇಡ್ಕರ್ ಮನುಸ್ಮೃತಿಯನ್ನು ಒಪ್ಪಿಕೊಂಡಿದ್ದರು. ಆದ್ದರಿಂದ ಸಂವಿಧಾನದ ರಚನೆಯ ಸಂದರ್ಭದಲ್ಲಿ ಮನುಸ್ಮೃತಿಯಲ್ಲಿರುವ ಸಂಗತಿಗಳನ್ನು ಒದಿದ ಅಂಬೇಡ್ಕರ್ ಸಂವಿಧಾನ ರಚನೆಗೆ ಬಳಸಿಕೊಂಡರು ಎಂದು ಮತೀಯವಾದಿಗಳು ಅಬ್ಬರದಿಂದ ಹೇಳುತ್ತಿರುವುದಕ್ಕೆ ನಾವು ಧ್ವನಿಯೆತ್ತಬೇಕು. ಅಂಬೇಡ್ಕರ್ ಅವರನ್ನು ಬ್ರಿಟೀಷ್ ಆಡಳಿತದ ಪರ ಹಿಂಸಾವಾದಿ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದ ಮತೀಯವಾದಿಗಳು ಇಂದು ಅಂಬೇಡ್ಕರ್ ಅವರನ್ನು ದೇಶಭಕ್ತ ಎಂದು ಹೇಳುತ್ತಿದ್ದಾರೆ. ಮುಂಚೂಣಿಯಲ್ಲಿರುವ ಯಾವ ಮಹಿಳಾ ಚಳುವಳಿಗಾರರು ಅಂಬೇಡ್ಕರ್ ಹೆಸರನ್ನು ಯಾಕೆ ಹೇಳಲಿಲ್ಲ ಎಂದರೆ ಜಾತಿಗಳು ನಮ್ಮನ್ನು ಅಷ್ಟೇ ಸಾಂಸ್ಕೃತಿಕವಾಗಿ ಕಟ್ಟಿಹಾಕಿವೆ. ಜಾತಿ ಕಾರಣದಿಂದ ನಾವು ಅಂಬೇಡ್ಕರ್ ಅವರ ವೈಚಾರಿಕ ಸಂಗತಿಗಳಿಗೆ ಮುಖಾಮುಖಿಯಾಗಲು ಸಾಧ್ಯವಾಗಿಲ್ಲ ಎಂದು ನುಡಿದರು.
ಪೀಠದ ಸಂಚಾಲಕರಾದ ಡಾ.ಎ.ಎಸ್.ಪ್ರಭಾಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಶಿಬಿರದ ನಿರ್ದೇಶಕರಾದ ಪ್ರೊ. ರಮೇಶ ಅವರು ಆಶಯ ನುಡಿದರು. ಪ್ರೊ. ಜಿ. ಪ್ರಶಾಂತ ನಾಯಕ್ ಅವರು ವಂದಿಸಿದರು. ಹನಸೋಗೆ ಸೋಮಶೇಖರ್ ಮತ್ತು ತಂಡದವರಿಂದ ಹೋರಾಟದ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಆರಂಭ ನೀಡಿದರು. ಡಾ. ಅರುಣ್ ಜೋಳದ ಕೂಡ್ಲಿಗಿ ನಿರೂಪಿಸಿದರು.

ಮಹಿಳಾ ರಾಜಕಾರಣಿಗಳ ಆತ್ಮಕಥನ-೧ ಮಹಿಳಾ ಅಧ್ಯಯನ ವಿಭಾಗ ಮತ್ತು ಮಹಿಳಾ ಅಧ್ಯಯನ ಕೇಂದ್ರ

ಪತ್ರಿಕಾ ವರದಿ

01-302-403-204-2

ಹೊರಗಿನ ಆಭರಣಗಳು ನಮಗೆ ಎಷ್ಟೇ ಇದ್ದರೂ ನಮ್ಮೊಳಗಿರುವ ತೇಜಸ್ಸು, ಅಂತಃಸತ್ವ, ಆತ್ಮವಿಶ್ವಾಸ, ಇಚ್ಛಾಶಕ್ತಿಗೆ ಧಕ್ಕೆ ಬರದಂತೆ ಮುಕ್ಕಾದಂತೆ ಜನಸೇವೆ ಮಾಡಿದರೆ ಯಶಸ್ಸು ನಮಗೆ ಖಂಡಿತ ಎಂದು ಹಿರಿಯ ಚಿಂತಕರಾದ ಶ್ರೀಮತಿ ಶಶಿಕಲಾ ವಸ್ತ್ರದ ಅವರು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ವಿಭಾಗ ಮತ್ತು ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ೨೭ರಿಂದ ೨೮ನೇ ಫೆಬ್ರವರಿ ೨೦೧೭ರ ವರೆಗೆ ಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ರಾಜಕಾರಣಿಗಳ ಆತ್ಮಕಥನ-೧ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣಿನ ಕೈ ಜಗತ್ತಿನ ತೊಟ್ಟಿಲನ್ನು ತೂಗಬಹುದು ಎಂಬ ಅರಿವಿದ್ದರೂ ಆ ಕೈ ಮನೆಯ ತೊಟ್ಟಿಲನ್ನಷ್ಟೇ ತೂಗುತ್ತಿರಲಿ ಎಂಬ ಶಪಥ ಪುರುಷೋತ್ತಮರದು. ಹೀಗಾಗಿ ಇಂದಿನ ವ್ಯವಸ್ಥೆಗೆ ಬಂದು ನಿಂತಿದ್ದೇವೆ. ಕುಟುಂಬ ಕೇಂದ್ರಿತ ಸ್ತ್ರೀಯ ಜವಾಬ್ದಾರಿಗಳು ಕುಟುಂಬಕ್ಕೆ ಸೀಮಿತವಿರಲಿ ಎಂದು ಅವರು. ಕುಟುಂಬದೊಂದಿಗೆ ರಾಜಕಾರಣವನ್ನೂ ನಾವು ಸಮರ್ಥವಾಗಿ ನಿಭಾಯಿಸಿ ತೋರಿಸುತ್ತೇವೆ ಎಂಬ ಹಠ, ಸಮಾನತೆಯ ಕೂಗು ನಮ್ಮ ಸ್ತ್ರೀಯರದ್ದು. ರಾಜಕಾರಣವನ್ನು ನಿಭಾಯಿಸಲು ಮಹಿಳೆಯರು ಕುಟುಂಬವನ್ನು ತೊರೆಯಬೇಕೆಂದಿಲ್ಲ. ಕುಟುಂಬವನ್ನು ಜವಾಬ್ದಾರಿಯಿಂದ ನೋಡಬಲ್ಲ ತಾಯಿ ಇಡೀ ಜಗತ್ತನ್ನು ನೋಡಬಲ್ಲಳು ಎಂದು ತಿಳಿಸಿದರು.
ಮುಂದುವರೆದು ಚರಿತ್ರೆಯಿಂದಲೂ ಮಹಿಳೆಯರು ಪುರುಷರಿಗೆ ಸಮಾನಳಾಗಿ ರಾಜ್ಯ ಕಟ್ಟಿದ್ದಾರೆ. ಸಮರ್ಥವಾಗಿ ಆಳಿದ್ದಾರೆ. ರಣರಂಗದಲ್ಲಿ ಸರಿಸಮವಾಗಿ ಯುದ್ಧ ಮಾಡಿದ್ದಾರೆ. ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಯುದ್ಧ ಮಾಡಿದ ವನಿತೆಯರಿದ್ದಾರೆ. ರಣರಂಗದಲ್ಲಿ, ಕುಟುಂಬ ವ್ಯವಸ್ಥೆಯಲ್ಲಿ ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ತಾಯಿ ಇದ್ದಾಳೆ. ಅಂತಹ ಮಹಿಳೆಯರಿಗೆ ನಿರೀಕ್ಷಿತ ಮಟ್ಟದಲ್ಲಿ ರಾಜಕೀಯ ರಂಗಕ್ಕೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ರಾಜಕೀಯೇತರ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸ್ವಾಗತವಿಲ್ಲ. ಯಾರೂ ಕೆಂಪು ಹಾಸು ಹಾಕಿಲ್ಲ. ಹೀಗೆ ಮಹಿಳೆಯರನ್ನು ಹಿಂದಿಕ್ಕುತ್ತ ಬಂದಿರುವ ದುರಂತ ಪರಿಸ್ಥಿತಿಯಲ್ಲಿ ಕೆಲವೇ ಮಹಿಳಾ ರಾಜಕಾರಣಿಗಳು ಹೇಗೆ ಮುಂದೆ ಬಂದರು ಎಂಬ ಕುತೂಹಲದ ಪ್ರಶ್ನೆಗಳಿವೆ. ತನ್ನ ಬದುಕಿನಲ್ಲಿ ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಗಟ್ಟಿಯಾಗಿದ್ದರೆ ಮಾತ್ರ ಬದುಕಲು ಸಾಧ್ಯ. ನಿರ್ಭಿಡೆ, ನಿರ್ಭೀತತನ, ಮಾತನಾಡುವಾಗ ಪ್ರಾಮಾಣಿಕತೆ ಇದ್ದರೆ ಜನ ನಂಬುತ್ತಾರೆ. ಅಲ್ಲಿ ನಮ್ಮ ಅಸ್ಮಿತೆ ಇರುತ್ತದೆ ಎಂದು ಶಶಿಕಲಾ ಅವರು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ರಾಜಕೀಯ ಕ್ಷೇತ್ರ ಮಹಿಳೆಯರಿಗೆ ಒಗ್ಗದು ಎಂದು ತಿಳಿದಿರುವ ಸಮಾಜದಲ್ಲಿ ರಾಜಕೀಯ ಪ್ರವೇಶಿಸಿದ ನಮ್ಮ ಮೊದಲ ತಲೆಮಾರಿನ ಮಹಿಳಾ ರಾಜಕಾರಣಿಗಳನ್ನು ಮಾತನಾಡಿಸಿದರೆ ಮುಂದಿನ ತಲೆಮಾರಿನ ಮಹಿಳಾ ರಾಜಕಾರಣಿಗಳಿಗೆ ದಾರಿ ತೋರಿಸಿದ ಹಾಗೆ ಆಗುತ್ತದೆ ಎಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜಕಾರಣ ಮಾಡುವ ಪುರುಷರ ಮಹಿಳೆಯಲ್ಲಿರುವ ಹೆಂಡತಿಯರ ಅನುಭವಗಳನ್ನೂ ಕೇಳಬೇಕಾಗಿದೆ. ಒಬ್ಬ ಪುರುಷನ ಯಶಸ್ಸಿಗೆ ಮಹಿಳೆ ಕಾರಣ ಎಂದು ಹೇಳುವ ಸಮಾಜದಲ್ಲಿ ಯಶಸ್ವಿ ರಾಜಕಾರಣಿಗಳಾಗಿ ಕರ್ನಾಟಕದ ಚರಿತ್ರೆಯಲ್ಲಿ ರಾಜಕಾರಣ ಮಾಡಿದ ಪುರುಷರ ಮನೆಯಲ್ಲಿರುವ ಮಹಿಳೆಯರು ಹೇಗೆ ತಮ್ಮ ಮನೆಯ ಪುರುಷರನ್ನು ನಿಭಾಯಿಸಿದರು ಎಂದು ತಿಳಿಯಬೇಕಾಗಿದೆ ಎಂದು ಕುಲಪತಿಗಳು ಹೇಳುತ್ತ ರಾಜಕೀಯ ಕ್ಷೇತ್ರ ಪುರುಷರದ್ದು ಎನ್ನುವ ಸ್ಪಷ್ಟವಾದ ನಂಬಿಕೆಯನ್ನು ಒಡೆದು ಪ್ರವೇಶ ಪಡೆಯುವುದು ಬಹಳ ಕಷ್ಟದ ಕೆಲಸವೇ ಸರಿ. ಬಲಿಷ್ಠ ಶಕ್ತಿಯನ್ನು ಬೆಂಬಲವಾಗಿಟ್ಟುಕೊಂಡು ರಾಜಕಾರಣಕ್ಕೆ ಬರುವಂತಹ ಮಹಿಳೆಯರ ಅನುಭವಗಳು ಬೇರೆ ರೀತಿ ಇರುತ್ತವೆ. ಇದಾವುದಿಲ್ಲದೇ ಸಂವಿಧಾನ ಕೊಟ್ಟ ಅವಕಾಶಗಳನ್ನು ಬಳಸಿಕೊಂಡು ರಾಜಕಾರಣಕ್ಕೆ ಬರುವ ಮಹಿಳೆಯರ ಅನುಭವಗಳು ಬೇರೆ ಆಗಿರುತ್ತದೆ. ಯಾವುದೇ ರಾಜಕೀಯ ಪಕ್ಷದ ಮಹಿಳಾ ರಾಜಕಾರಣಗಳು ಆಯ್ಕೆಯಾಗಿ ಬಂದಾಗ ಸರ್ಕಾರಗಳು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆಗಳನ್ನು ಬಿಟ್ಟು ಗೃಹಖಾತೆಯನ್ನು ಕೊಟ್ಟಿದ್ದು ಕಂಡಿಲ್ಲ. ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ನೀರಾವರಿ ಖಾತೆಯನ್ನು ಲೀಲಾವತಿದೇವಿ ಆರ್. ಪ್ರಸಾದ್ ಅವರಿಗೆ ವಹಿಸಲಾಗಿತ್ತು. ಪೂರ್ಣ ಪ್ರಮಾಣದಲ್ಲಿ ಮಹಿಳಾ ಶಕ್ತಿಯನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಸಮಾಜ ಮತ್ತು ಪಕ್ಷಗಳು ಅವಕಾಶ ಮಾಡಿಕೊಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರು ರಾಜಕೀಯ ಪ್ರವೇಶಿಸಿದಾಗ ಕುಟುಂಬದ ಒಳಗೆ ಮತ್ತು ಹೊರಗೆ ಅವರು ಎದುರಿಸಿದ ಬಿಕ್ಕಟ್ಟುಗಳು ಮತ್ತು ಸಮಸ್ಯೆಗಳನ್ನು ಮೊದಲ ತಲೆಮಾರಿನ ಮಹಿಳಾ ರಾಜಕಾರಣಿಗಳು ಪ್ರಾಮಾಣಿಕವಾಗಿ ತಮ್ಮ ಅನುಭವವನ್ನು ಬಿಚ್ಚಿಟ್ಟರೆ ಅದನ್ನು ಬರಹ, ಓದು ದಾಖಲೀಕರಣದ ಮೂಲಕ ಮುಂದಿನ ತಲೆಮಾರಿನ ಮಹಿಳೆಯರಿಗೆ ಇದೆಲ್ಲವನ್ನು ಮೀರಲು ಸಾಧ್ಯವಾಗುತ್ತದೆ. ಪಕ್ಷಾಧಾರಿತವಾಗಿ ಮಾತನಾಡುವ ರಾಜಕಾರಣಕ್ಕೆ ಮಹಿಳೆಯರು ಒಳಗಾಗಬೇಕೋ ಅಥವಾ ಬೌದ್ಧಿಕ ತಿಳುವಳಿಕೆಯ ಆಧಾರಿತವಾದ ಸ್ತ್ರೀ ಕೇಂದ್ರಿತ ನೆಲೆಯೊಳಗೆ ಮಹಿಳೆ ರಾಜಕಾರಣವನ್ನು ಆರಂಭಿಸಬೇಕೋ ಎಂಬ ಸಮಸ್ಯೆಗಳು ನಮ್ಮೆದುರಿಗೆ ಇವೆ ಎಂದು ತಿಳಿಸಿದರು.
ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು ಸಾಮಾಜಿಕ ನೆಲೆಯ ಯಜಮಾನಿಕೆ ಮತ್ತು ಆರ್ಥಿಕ ನೆಲೆಯ ಯಜಮಾನಿಕೆ ಈ ಎರಡರ ಸಹಯೋಗ ಇದ್ದರೆ ಮಾತ್ರ ರಾಜಕೀಯ ಅಧಿಕಾರ ದಕ್ಕಿಸಿಕೊಳ್ಳಲು ಸಾಧ್ಯವಿರುವ ಸಂದರ್ಭದಲ್ಲಿ ಸಾಮಾಜಿಕ ಮತ್ತು ಆರ್ಥಿಕ ನೆಲೆಗಳಿಂದ ವಂಚಿತರಾದ ತಳಸಮುದಾಯ ಅಥವಾ ಒಟ್ಟು ಮಹಿಳಾ ಸಮುದಾಯ ತಮ್ಮಷ್ಟಕ್ಕೆ ತಾವೇ ಅಧಿಕಾರ ಪಡೆಯುವುದು ಬಹಳ ತ್ರಾಸದಾಯಕ. ಇವರ ಇಕ್ಕಟ್ಟು ಮತ್ತು ಬಿಕ್ಕಟ್ಟುಗಳನ್ನು ಅವರ ಬಾಯಿಂದ ಕೇಳಬೇಕಾದ ಸಂದರ್ಭ ಇದು. ಇದಕ್ಕೆ ಒಂದು ಶೈಕ್ಷಣಿಕ ಚೌಕಟ್ಟು ಅಳವಡಿಸಿ ಈ ಕಾರ್ಯಕ್ರಮ ಆಯೋಜಿಸಿದರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನಕಾರರಿಗೆ ಇದು ಬಹಳ ಮುಖ್ಯವಾಗುತ್ತದೆ ಎನ್ನುತ್ತ ಸ್ವಾಗತಿಸಿದರು.
ವಿಭಾಗದ ಮುಖ್ಯಸ್ಥರು ಮತ್ತು ಕೇಂದ್ರದ ನಿರ್ದೇಶಕರಾದ ಡಾ. ಶೈಲಜಾ ಹಿರೇಮಠ ಅವರು ಪ್ರಾಸ್ತಾವಿಕ ನುಡಿಯುತ್ತ ಸಂವಿಧಾನದ ೩೨೫, ೩೨೬ ವಿಧಿಗಳು ಮಹಿಳೆ-ಪುರುಷರಿಗೆ ಸಮಾನ ರಾಜಕೀಯ ಅಧಿಕಾರ ನೀಡಿವೆ. ನಾಗಾಲ್ಯಾಂಡ್‌ನಲ್ಲಿ ಸ್ಥಳೀಯ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.೩೩% ಮೀಸಲಾತಿಯನ್ನು ನೀಡುವ ನಿರ್ಧಾರವನ್ನು ಇಡೀ ನಾಗಾಲ್ಯಾಂಡ್ ವಿರೋಧಿಸಿ ಹೊತ್ತಿ ಉರಿಯುತ್ತಿದೆ. ಆದರೆ ಬೇರೆ ರಾಜ್ಯಗಳಲ್ಲಿ ನೇರವಾಗಿ ಹೇಳದಿದ್ದರೂ ರಾಜಕೀಯ ಪಕ್ಷಗಳು ಮತ್ತು ಮುಖಂಡರು ನಾಗಾಲ್ಯಾಂಡ್ ಮನಸ್ಥಿತಿಯನ್ನು ಹೊಂದಿದ್ದಾರೆ. ದೇಶ-ವಿದೇಶಗಳಲ್ಲೂ ಮಹಿಳಾ ರಾಜಕಾರಣಿಗಳ ಕುರಿತು ಒಂದೇ ರೀತಿಯ ಧೋರಣೆ ಕಾಣಬರುತ್ತದೆ. ಮಹಿಳೆಯರನ್ನು ಮತಬ್ಯಾಂಕ್ ಆಗಿ ಪರಿಗಣಿಸಿಲ್ಲ ಎಂದರು.
ಕೇಂದ್ರದ ಡಾ. ಯರ್ರಿಸ್ವಾಮಿ ನಿರೂಪಿಸಿ, ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಂತರ ಗೋಷ್ಠಿಯಲ್ಲಿ ಮಾಜಿ ಸಚಿವೆಯರಾದ ಡಾ.ಬಿ.ಟಿ.ಲಲಿತಾನಾಯಕ ಮತ್ತು ಡಾ.ಲೀಲಾದೇವಿ ಆರ್.ಪ್ರಸಾದ್ ಅನುಭವಗಳನ್ನು ಹಂಚಿಕೊಂಡರು.

ತಾಯ್ನುಡಿಗಳ ಅಳಿವು ಉಳಿವು ವಿಶ್ವ ತಾಯ್ನುಡಿ ದಿನದ ಅಂಗವಾಗಿ ಉಪನ್ಯಾಸ- ಕನ್ನಡ ಭಾಷಾಧ್ಯಯನ ವಿಭಾಗ

ಪತ್ರಿಕಾ ವರದಿ

೨೧ನೇ ಶತಮಾನದಲ್ಲಿ ಸಮಾಸ ಪದಗಳಾದ ತಾಯ್ನುಡಿ ತಾಯಿನೆಲ ಹೊರಜಿಗಿತ ಮತ್ತು ಒಳಹಿಡಿತದ ಜಗ್ಗಾಟದಂತೆ ಕಾಣಿಸುತ್ತದೆ. ಯಾವುದೋ ಒಂದರಿಂದ ನಾವು ಹೊರಗಡೆ ಸಿಡಿದು ಹೋಗುತ್ತ ಇದ್ದೀವಿ ಎಂದು ಆದಾಗ ಮರಳಿ ಅದಕ್ಕೆ ಅಂಟಿಕೊಳ್ಳಬೇಕು ಅನ್ನುವ ಹಂಬಲ ಸಹ ಏಕಕಾಲದಲ್ಲಿ ಹುಟ್ಟಿಕೊಳ್ಳುತ್ತವೆ. ಈ ಕಳಚಿಕೊಳ್ಳುವಿಕೆ ಮತ್ತು ಅಂಟಿಕೊಳ್ಳುವಿಕೆ ಇದು ತಾಯ್ನುಡಿಗಳ ಮುಖ್ಯವಾದ ಬಿಕ್ಕಟ್ಟು ಎಂದು ಬೆಂಗಳೂರು ವಿಜಯಕರ್ನಾಟಕ ಸಹಾಯಕ ಸಂಪಾದಕರಾದ ಶ್ರೀ ಕೆ. ವೆಂಕಟೇಶ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಕನ್ನಡ ಭಾಷಾಧ್ಯಯನ ವಿಭಾಗವು ಮಂಟಪ ಸಭಾಂಗಣದಲ್ಲಿ ೨೧ನೇ ಫೆಬ್ರವರಿ ೨೦೧೭ರಂದು ವಿಶ್ವ ತಾಯ್ನುಡಿ ದಿನದ ಅಂಗವಾಗಿ ತಾಯ್ನುಡಿಗಳ ಅಳಿವು ಉಳಿವು ವಿಷಯ ಕುರಿತು ಉಪನ್ಯಾಸ ನೀಡುತ್ತ ಮಾತನಾಡಿದರು.
ಇಂಗ್ಲಿಷ್ ಭಾಷೆ ಸಿಂಹಿಣಿಯ ಹಾಲು. ಅದನ್ನು ಕುಡಿದರೆ ನೀವು ಗಟ್ಟಿಯಾಗುತ್ತೀರಿ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಮ್ಮ ಅನೇಕ ಸಂಕಥನಗಳನ್ನು ನೋಡಿದಾಗ ದಲಿತ ಚಿಂತಕರು ಹಾಗೂ ದಲಿತೇತರ ಚಿಂತಕರು ಇಂಗ್ಲಿಷ್ ಅನ್ನು ಜಾತಿಯ ಸಂಕಷ್ಟಗಳಿಂದ ಪೀಡನೆಗಳಿಂದ ಬಿಡುಗಡೆ ಗೊಳಿಸುವುದಕ್ಕೆ ಪರ್ಯಾಯವಾಗಿ ಸಮಾನವಾಗಿ ನೋಡುವ ಪರಿಪಾಠವಿದೆ. ವಾದ ವಿದೆ. ಇಂಗ್ಲಿಷ್ ಅನ್ನು ಅಭಿವೃದ್ಧಿಯ ಹರಿಕಾರ ಎಂದು ಭಾವಿಸಲಾಗಿದೆ. ಮಕ್ಕಳ ಶಿಕ್ಷಣದ ವಿಷಯದಲ್ಲಿ ತಂದೆ ತಾಯಿಗಳು ಕಟ್ಟಿಕೊಂಡಿರುವ ಕನಸಿನಲ್ಲಿ ಇಂಗ್ಲಿಷ್ ನಿರ್ಣಯಕವಾಗಿರುತ್ತದೆ. ಇಂಗ್ಲಿಷ್ ಕಲಿತರೆ ಎಲ್ಲವೂ ಸಿಗುತ್ತದೆ ಎಂದು ಭಾವಿಸಲಾಗಿದೆ. ಆದರೆ ೧೧ ಲಕ್ಷ ಇಂಜಿನಿಯರುಗಳು ತಾವು ಓದಿರುವುದಕ್ಕಿಂತ ಭಿನ್ನವಾದ ಉದ್ಯೋಗ ಮಾಡುತ್ತಿದ್ದಾರೆ. ಇಂತಹ ಸತ್ಯಾಸತ್ಯತೆಗಳ ಕುರಿತು ನಾವು ಪರೀಕ್ಷೆ ಮಾಡಿದ್ದೇವಾ ಎಂದು ತಾಯ್ನುಡಿಗಳ ಅಸ್ತಿತ್ವ ಮತ್ತು ವಿನಾಶದ ಪ್ರಶ್ನೆಗಳ ಸಂದರ್ಭದಲ್ಲಿ ಕೇಳಿಕೊಳ್ಳಬೇಕಾಗಿದೆ. ಮನೆಮಾತು ಅಥವಾ ತಾಯ್ನುಡಿಯಿಂದ ದೇಸೀ ಜ್ಞಾನ ಸಿಗುತ್ತದೆ. ನೆಲದೊಂದಿಗೆ ಆಳವಾದ ನಂಟನ್ನು ಉಂಟು ಮಾಡುತ್ತದೆ. ತುಂಬಾ ಪರಿಣಾಮಕಾರಿಯಾದ ಸಾಮಾಜೀಕರಣ ಆಗುತ್ತದೆ. ಸಾಂಸ್ಕೃತಿಕ ನೆನಪುಗಳು ಇರುತ್ತವೆ. ಆದರೆ ಪರಕೀಯ ನುಡಿಗಳಿಂದ ಇದು ಸಾಧ್ಯವಾಗುವುದಿಲ್ಲ ಎಂದು ಉಪನ್ಯಾಸದಲ್ಲಿ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಬಹುಭಾಷೆಯ ಮೂಲಕ ಸುಸ್ಥಿರ ಸಮಾಜ ಕಟ್ಟಬಹುದು ಎಂದು ಯುನೆಸ್ಕೋ ಹೊರಡಿಸಿರುವ ಘೋಷಣೆಯು ಜಾಗತಿಕ ಭಾಷಾರಾಜಕಾರಣದ ವ್ಯಾಖ್ಯಾನವಾಗಿದೆ. ಜಗತ್ತಿನಲ್ಲಿ ಇಂದು ತಂತ್ರ ಪ್ರಣೀತವಾದಂತಹ ರಾಜಕಾರಣ ಬಹಳ ದೊಡ್ಡ ಹುನ್ನಾರವನ್ನು ಹುಟ್ಟಿಸಿದೆ. ಭಾಷೆ, ಸಂಸ್ಕೃತಿ, ಸಮಾಜ, ಧರ್ಮ ಇವೆಲ್ಲವುಗಳ ಒಳಗೆ ಬಹಳ ಸೂಕ್ಷ್ಮವಾಗಿ ಸ್ಥಳೀಯ ಮತ್ತು ಹೊರಗಿನ ಅಹಂಕಾರಗಳು ಪ್ರವೇಶ ಮಾಡಿವೆ. ಹೀಗಾಗಿ ಬಹುಭಾಷೆಯ ಕಲಿಕೆಯ ಮೂಲಕ ಸುಸ್ಥಿರ ಸಮಾಜ ಅಂದರೆ ಬಹುಭಾಷೆಯಲ್ಲಿ ಯಾವ ಭಾಷೆ ಮೇಲಿರಬೇಕು, ಕೆಳಗಿರಬೇಕು ಎಂಬ ಪ್ರಶ್ನೆಗಳು ಕಾಡುತ್ತವೆ. ಬಹುಭಾಷೆ ಕಲಿಯಬೇಕಾದರೆ ಮೊದಲು ಕನ್ನಡ ಕಲಿಯಬೇಕೆ ಅಥವಾ ಇಂಗ್ಲಿಷ್ ಕಲಿಯಬೇಕೆ ಎಂಬ ಸಂದಿಗ್ಧ. ಹೀಗಾಗಿ ಬಹುಭಾಷೆ ಇಡೀ ಜಗತ್ತಿನ ಸಾಂಸ್ಕೃತಿಕ ಲೋಕವನ್ನು ಒಂದು ಚೌಕಟ್ಟಿಗೆ ಒಳಪಡಿಸುವಂತಹ ಬಹಳ ದೊಡ್ಡ ಅಪಾಯವನ್ನು ನಮ್ಮೆದುರಿಗೆ ಇಟ್ಟು ಅದು ಎಲ್ಲೋ ಒಂದು ಕಡೆಗೆ ಶಕ್ತಿರಾಜಕಾರಣದ ಜಾಗತಿಕ ಶಕ್ತಿರಾಜಕಾರಣದ ಅಸ್ತ್ರವನ್ನಾಗಿ ಭಾಷೆಯನ್ನು ಬಳಸಿಕೊಳ್ಳುತ್ತದೆ ಎಂಬುದು ನಿಚ್ಚಳವಾಗಿದೆ. ವಸಾಹತೋತ್ತರದ ನಂತರ ಅಭಿವೃದ್ಧಿಯ ಕಡೆಗೆ ಮುಖ ಮಾಡಿದ ಎಲ್ಲ ದೇಶಗಳಲ್ಲಿಯೂ ಭಾಷಾರಾಜಕಾರಣದ ಮೂಲಕ ಸಾಂಸ್ಕೃತಿಕ ಹಲ್ಲೆ ನಡೆಯುತ್ತಿರುವುದನ್ನು ನೋಡಬಹುದು. ಮಾಧ್ಯಮ ಭಾಷೆಯಾಗಿ, ಕಲಿಕೆಯ ಭಾಷೆಯಾಗಿ ಒಂದು ಪ್ರದೇಶದ ಭಾಷೆಯನ್ನು ಪಠ್ಯಕ್ಕೆ ಅಳವಡಿಸಿದ್ದರಿಂದ ಹಲವು ಕನ್ನಡ ಭಾಷೆಯ ಸೊಗಡುಗಳನ್ನು ಕಲಿಕೆಯ ಒಳಗೆ ಪ್ರವೇಶ ಮಾಡಲು ಇಂದಿನವರೆಗೂ ಮಡಿವಂತಿಕೆಯ ಮನಸ್ಸು ಬಿಡುತ್ತಿಲ್ಲ; ನಾವು ತೆರೆದುಕೊಂಡಿಲ್ಲ. ಇಂಗ್ಲಿಷ್ ಭಾಷೆಯನ್ನು ಓದುವುದು ತಪ್ಪಲ್ಲ. ಆದರೆ ನಮ್ಮ ಸಹಜತೆಯನ್ನು ಕಳೆದುಕೊಳ್ಳುವುದು ತಪ್ಪು ಎಂದು ಕುಲಪತಿಯವರು ನುಡಿದರು.
ಲಲಿತಕಲೆಗಳ ನಿಕಾಯದ ಡೀನರಾದ ಡಾ. ಅಶೋಕಕುಮಾರ ರಂಜೇರೆ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ವಿದ್ಯಾರ್ಥಿ ಡಾ. ಜೆ. ಕುಮಾರ ನಿರೂಪಿಸಿದರು. ಸಂಗೀತ ವಿದ್ಯಾರ್ಥಿ ಪ್ರಾರ್ಥಿಸಿದರು. ಡಾ. ಸಾಂಬಮೂರ್ತಿ ವಂದಿಸಿದರು. ಉಪನ್ಯಾಸದ ನಂತರ ಚರ್ಚೆಯಲ್ಲಿ ಡಾ. ಶಿವಾನಂದ ಎಸ್. ವಿರಕ್ತಮಠ, ಡಾ. ವೀರೇಶ ಬಡಿಗೇರ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು.

dsc00372-102-2001

ರಾಜ್ಯಮಟ್ಟದ ಜನಪರ ಶಿಲಾ ಶಿಲ್ಪಕಲಾ ಶಿಬಿರದ ಸಮಾರೋಪ (ಗಿರಿಜನ ಉಪಯೋಜನಡಿಯಲ್ಲಿ)

04-1

03

02

ಶಿಲ್ಪಕಲೆಗೆ ಬೌದ್ಧಿಕ ಕೌಶಲ್ಯದೊಂದಿಗೆ ದೈಹಿಕ ಕೌಶಲ್ಯವೂಬೇಕು ಎಂದು ನಾಡೋಜ ವಿ.ಟಿ. ಕಾಳೆ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯ ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ದಿನಾಂಕ ೨೮.೧.೨೦೧೭ರಂದು ಏರ್ಪಡಿಸಿದ್ದ ರಾಜ್ಯಮಟ್ಟದ ಜನಪರ ಶಿಲಾ ಶಿಲ್ಪಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಭಿರಾರ್ಥಿಗಳು ರಚಿಸಿದ ಶಿಲ್ಪಕೃತಿಗಳನ್ನು ಲೋಕಾರ್ಪಣೆ ಮಾಡಿ ಮಂಟಪ ಸಭಾಂಗಣದಲ್ಲಿ ಅವರು ಮಾತನಾಡಿದರು.
ಶಿಲ್ಪಕಲೆಯು ಸಾವಿರಾರು ವರ್ಷಗಳ ಚರಿತ್ರೆ ಹೊಂದಿದೆ. ನಾಗರಶೈಲಿ, ವೇಸರ ಶೈಲಿ, ದ್ರಾವಿಡ ಶೈಲಿಗಳ ವಾಸ್ತುಶಿಲ್ಪಕಲೆಯನ್ನು ಐಹೊಳೆ ಪಟ್ಟದಕಲ್ಲಿನಲ್ಲಿ ನೋಡಬಹುದು. ಆಗಿನ ಕಾಲದಲ್ಲಿ ಐಹೊಳೆಯು ಸಾಂಸ್ಕೃತಿಕ ವಿಶ್ವವಿದ್ಯಾಲಯವಾಗಿತ್ತು. ಶಿಲ್ಪಕಲೆಗೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳು ಅಲ್ಲಿ ನಡೆದಿರುವುದಕ್ಕೆ ಇಂದಿಗು ಸಾಕ್ಷಿಯಿದೆ. ಇದೆಲ್ಲ ರೋಮಾಂಚಕ ಕಲೆಯಾಗಿದೆ ಎಂದು ಚಾಲುಕ್ಯ ಶಿಲ್ಪ, ಹೊಯ್ಸಳ ಶಿಲ್ಪಗಳನ್ನು ಉದಾಹರಿಸಿದರು. ಶ್ರಮ, ಪ್ರಯತ್ನ ಮತ್ತು ದೈವಕೃಪೆಯಿಂದ ಉತ್ತಮ ಶಿಲ್ಪಕಲಾವಿದರಾಗಿ ಎಂದು ಹಾರೈಸಿದರು.
ಉಪಸ್ಥಿತರಿದ್ದ ಕನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅವರು ಕಲಾವಿದರ ಬದುಕು ಉಂಡದ್ದು ಹೊಟ್ಯಾಗ ಉಳಿದದ್ದು ಬುಟ್ಯಾಗ ಎಂಬಂತೆ ಇತ್ತು. ಕಲಾವಿದರು ನಿರಹಂಕಾರಿಗಳಾಗಿರಬೇಕು ಎಂದರು.
ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಗಿರಿಜನ ಉಪಯೋಜನೆಯಡಿಯಲ್ಲಿ ನಡೆದ ಶಿಬಿರದಲ್ಲಿ ಕಲೆಯಿಂದ ವಂಚಿತರಾದ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದಿದ್ದಾರೆ ಎಂದು ಸಂತಸಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಶಿಬಿರಾರ್ಥಿ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತ, ಶಿಲ್ಪಕಲೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಆಕರ ಸಾಮಗ್ರಿ ಒದಗಿಸಬೇಕೆನ್ನುವ ಉದ್ದೇಶದಿಂದ ಶಿಬಿರ ನಡೆಸಲಾಗಿದೆ. ಲಲಿತಕಲೆಗಳಲ್ಲಿ ಶಿಲ್ಪಕಲೆಯೂ ಒಂದು. ಬೌದ್ಧಿಕ ಸಾಮರ್ಥ್ಯ ಬೇಕೆಂದರೆ ಶಿಲ್ಪ ಕಲಾವಿದರು ಓದಬೇಕು. ಯಾರಿಗೆ ಸಾಮರ್ಥ್ಯ ಇದೆಯೋ ಅವರೆಲ್ಲ ಕೌಶಲ್ಯ ಪಡೆಯಬಹುದು. ಆಧುನಿಕ ಕಾಲಕ್ಕೆ ಅನುಗುಣವಾಗಿ ನಮ್ಮ ಯೋಚನೆಯನ್ನು ಬದಲಾಯಿಸಿಕೊಳ್ಳಬೇಕು. ಶಿಲ್ಪಕಲೆ ಕಲೆಯೂ ಹೌದು, ಶಾಸ್ತ್ರವೂ ಹೌದು. ಧಾರ್ಮಿಕತೆಯ ಪ್ರವೇಶದಿಂದ ಅದು ದೈವಿಕ ಸ್ವರೂಪ ಪಡೆಯುತ್ತದೆ. ಶಾಸ್ತ್ರದ ಹಿಂದೆ ಹೊರಟಾಗ ಗಣೇಶನ ವಿಗ್ರಹ ಒಂದೇ ಭಂಗಿಯ ವಿಗ್ರಹವಾಗುತ್ತದೆ. ವೈಚಾರಿಕವಾಗಿ ನೋಡಿದಾಗ ಒಂದೇ ಗಣೇಶನ ಅನೇಕ ಭಂಗಿಗಳನ್ನು ರಚಿಸಬಹುದು ಎಂದು ಶಿಬಿರಾರ್ಥಿಗಳನ್ನು ಕುರಿತು ಹೇಳಿದರು.
ಶಿಲ್ಪಕಲಾ ಅಕಾಡೆಮಿಯ ಕುಲಸಚಿವರಾದ ಇಂದ್ರಮ್ಮ ಹೆಚ್.ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಡಾ. ಸಿದ್ದಗಂಗಮ್ಮ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಸಹಾಯಕ ಕುಲಸಚಿವರಾದ ಶ್ರೀ ಹೆಚ್. ಶ್ರೀನಿವಾಸ ವಂದಿಸಿದರು. ಶ್ರೀಮತಿ ಆಶಾ ನಿರೂಪಿಸಿದರು. ಸಂಗೀತ ವಿದ್ಯಾರ್ಥಿನಿ ಶ್ರೀಮತಿ ಮಮತ ಮನ್ವಾಚಾರ್ ಪ್ರಾರ್ಥಿಸಿದರು. ದಿನಾಂಕ ೧೭ ರಿಂದ ೨೮ ಜನವರಿ ೨೦೧೭ರ ವರೆಗೆ ನಡೆದ ೧೨ ದಿನಗಳ ಶಿಲಾ ಶಿಲ್ಪಕಲಾ ಶಿಬಿರದಲ್ಲಿ ಸುರೇಶ -ಅರ್ಧನಾರೀಶ್ವರ, ವಸಂತ ಎಲ್. ತಳವಾರ-ಉಗ್ರ ನರಸಿಂಹ, ಕೇಶವ್-ಗರುಡ, ಮನುಚಕ್ರವರ್ತಿ-ಆಧುನಿಕ ಶಿಲ್ಪ, ಮೌನೇಶ ಎಚ್.ಬದನೂರು-ಆಂಜನೇಯ, ಉಮೇಶ ದಂಡಿನ-ಆನೇಸಾಲು, ರವಿದೇಸಾಯಿ-ಸಾಸಿವೆ ಗಣೇಶ, ಹನುಮಂತ ಎಲ್. ತಳವಾರ-ದ್ವಾರಪಾಲಕ, ಅನಿಲನಾಯಕ-ಹರಿಹರ, ಲೀಲಾವತಿ ಎಂ.ಎಸ್.-ಸರಸ್ವತಿ, ತೋಟಯ್ಯ-ಮರದಲ್ಲಿ ಹಕ್ಕಿಗೂಡು ಹಾಗೂ ಅಕಾಡೆಮಿಗಾಗಿ ಕವಡೆಕಲ್ಲು ಶಿಲ್ಪಕೃತಿಗಳನ್ನು ರಚಿಸಿದ್ದಾರೆ. ಶ್ರೀ ಮಹದೇವ ಆರ್. ಶಿಬಿರದ ನಿರ್ದೇಶಕರಾಗಿದ್ದರು. ಮಂಜುನಾಥ ಕಂಚುಗಾರ ಶಿಬಿರದ ಸಂಚಾಲಕರಾಗಿದ್ದರು

.

ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ- ವಿಶೇಷ ಉಪನ್ಯಾಸ

ವಿಶೇಷ ಉಪನ್ಯಾಸ- ಅಧ್ಯಯನಾಂಗ
ಪತ್ರಿಕಾ ವರದಿ- ೨೭.೦೧.೨೦೧೭

ಆಂತರಿಕ ತುಡಿತ ಇಲ್ಲದಿದ್ದರೆ ದಯವಿಟ್ಟು ಯಾರೂ ಪತ್ರಿಕೋದ್ಯಮಕ್ಕೆ ಬರಬೇಡಿ. ನಿಮ್ಮ ನಿರಂತರ ಓದು ನಿಮ್ಮನ್ನು ಕೈ ಹಿಡಿಯುತ್ತದೆ ಎಮದು ಸಂಶೋಧನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಂಟಪ ಸಭಾಂಗಣದಲ್ಲಿ ಚಿಂತಕರು ಮತ್ತು ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರಾದ ಶ್ರೀ ರವಿ ಬೆಳೆಗೆರೆ ಅವರು ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯ ಅಧ್ಯಯನಾಂಗವು ೨೭ನೇ ಜನವರಿ ೨೦೧೭ರಂದು ಏರ್ಪಡಿಸಿದ್ದ ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ ಕುರಿತ ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಜನರಿಗೆ ಬೇಕಾಗಿರುವುದನ್ನು ಒದಗಿಸುವ ಹೊಣೆಗಾರಿಕೆ ಪತ್ರಿಕೋದ್ಯಮಕ್ಕೆ ಇರಬೇಕು. ಯಾವ ವಿಷಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಕೊಡಬಾರದು ಎಂದು ಎಚ್ಚರಿಕೆಯಿಂದ ಹೊಣೆಗಾರಿಕೆ ಅರಿತಿರಬೇಕು. ಸಾಮಾಜಿಕ ಹೊಣೆಗಾರಿಕೆ ಯಾಕೆ ಇಲ್ಲ ಎಂದರೆ ಚಳುವಳಿಗಳಿಂದ ಬಂದಿಲ್ಲ. ಚಳುವಳಿಗಳಿಂದ ಬಂದವರಿಗೆ ಏನನ್ನು ಬರೆಯಬೇಕು ಎಂಬ ಪ್ರಜ್ಞೆ ಇರುತ್ತದೆ. ಪತ್ರಿಕೋದ್ಯಮಿ ಆಗಬೇಕೆಂದರೆ ಮೊದಲು ಚೆನ್ನಾಗಿ ಓದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ಮೊದಲು ಜಾತಿ ಬಿಡಬೇಕು. ಆಗ ಹೊಸ ಜ್ಞಾನೋದಯ, ಹೊಸ ಬದುಕು ಸಿಗುತ್ತದೆ. ಆಗ ಸಾಮಾಜಿಕ ಹೊಣೆಗಾರಿಕೆ ಅರ್ಥವಾಗುತ್ತದೆ. ಯಾವ ಚಳುವಳಿ ಪತ್ರಿಕೋದ್ಯಮದೊಳಗಿನಿಂದ ಆರಂಭವಾಗುತ್ತದೆಯೋ ಅದಕ್ಕೆ ದೊಡ್ಡ ಬೆಂಬಲ ಸಿಗುತ್ತದೆ. ನನ್ನ ಹೆಸರು ಬೈ ಲೈನ್‌ಗೆ ಬರಬೇಕು. ಟಿ.ವಿ.ಯಲ್ಲಿ ನಾನು ಕಾಣಿಸಬೇಕು ಎಂಬ ಮನಸ್ಥಿತಿಯಿಂದ ಹೊರಬರಬೇಕು. ಪತ್ರಕರ್ತರಿಗೆ ಅನಿಸಿದ್ದನ್ನು ಬರೆದರೆ ಅದು ಪತ್ರಿಕೋದ್ಯಮ ಅಲ್ಲ, ಸಾಮಾಜಿಕ ಹೊಣೆಗಾರಿಕೆ ಅನುಭವಿಸಿ ಆಹ್ವಾನಿಸಿ ಬರೆಯಬೇಕು. ಭಾಷೆ ಕಲಿಯಬೇಕು. ಚಳುವಳಿಗಳನ್ನು ನೋಡಬೇಕು. ಸುತ್ತಮುತ್ತ ಗಮನಿಸಬೇಕು. ಪತ್ರಿಕೋದ್ಯಮದಲ್ಲಿ ಓದುವುದು, ಜವಾಬ್ದಾರಿ ಹಾಗೂ ಶ್ರದ್ಧೆ ಬದ್ಧತೆ ಪರಿಶ್ರಮ ಬಹಳ ಮುಖ್ಯ. ಮಹಿಳೆಯರು ಪತ್ರಿಕೋದ್ಯಮದಲ್ಲಿ ಮಹಿಳೆಯರು ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಯಾರೇ ಆದರೂ ಸುಮ್ಮನೆ ದೊಡ್ಡವರಾಗುವುದಿಲ್ಲ. ಪ್ರಯತ್ನ ಬಹಳ ಮುಖ್ಯ ಎಂದರು.
ಸಾಮಾಜಿಕ ಜಾಲತಾಣಗಳನ್ನು ಕುರಿತು ಮಾತನಾಡುತ್ತ, ಟ್ವಿಟರ್, ಫೇಸ್‌ಬುಕ್(ನನಗೆ ಅವುಗಳ ಮೇಲೆ ಗೌರವ ಇಲ್ಲ ಎನ್ನುತ್ತ) ಜಾಲತಾಣಗಳಿವೆ. ಯಾಕಿವೆ ಎಂದರೆ ಜನರಿಗೆ ಪತ್ರಕರ್ತರ ಮೇಲೆ ವಿಶ್ವಾಸ ಇಲ್ಲ ಅದಕ್ಕೆ. ಜಾಲತಾಣಗಳಿಂದ ಹೊಸ ವಿಷಯಗಳು ಬರುತ್ತವೆ ಹಾಗೂ ತಮ್ಮ ವ್ಯಕ್ತಿತ್ವ ಅದರಲ್ಲಿ ವಿಜೃಂಭಿಸಬಹುದು ಎಂದು. ಮೊದಲು ಮೊಬೈಲ್‌ಗಳಲ್ಲಿ ಎಸ್.ಎಂ.ಎಸ್.ಗಳು ಈಗ ವಾಟ್ಸ್‌ಪ್ ಇದು ಜನರನ್ನು ಬೌದ್ಧಿಕ ಆಯಾಮದತ್ತ ಕರೆದೊಯ್ಯುತ್ತಿದ್ದರೆ ಒಪ್ಪಬಹುದು. ಆದರೆ ಮೊಬೈಲ್‌ಗಳು ಹಾಗೆ ಮಾಡುತ್ತಿಲ್ಲ ಎಂದು ತಿಳಿಸುತ್ತ ರವಿ ಬೆಳಗೆರೆ ಅವರು ಸ್ವತಃ ಕಾರ್ಗಿಲ್‌ಗೆ ಹೋಗಿ ಯುದ್ಧ ಭೂಮಿಯಲ್ಲಿ ನಿಂತು ಕೆಲಸ ಮಾಡಿದ ಏಕೈಕ ಪತ್ರಕರ್ತ ತಾನು. ತಾಲಿಬಾನ್-ಅಫಘಾನಿಸ್ತಾನ ಯುದ್ಧ ವರದಿ ಮಾಡಲು ಹೋಗಿದ್ದೆ. ೩೯ ದೇಶಗಳನ್ನು ಅನೇಕ ಸಲ ಸುತ್ತಿದ್ದೇನೆ. ದೇಶ ಸುತ್ತಬೇಕು ಅನುಭವ ಗಳಿಸಬೇಕು. ಸಾಧನೆಗಳನ್ನು ಮಾಡಬೇಕು ಎಂದು ಸಂಶೋಧಕರಿಗೆ ಹೇಳಿದರು.
ಹೋರಾಟಗಾರರಾದ ದೇವಯ್ಯ ಹರವೆ, ರಾಜಕಾರಣಿಗಳಾದ ದೇವೇಗೌಡರು, ಜೆ.ಎಚ್.ಪಟೇಲರು, ಯಡಿಯೂರಪ್ಪ, ಈಶ್ವರಪ್ಪ, ಜೀವರಾಜ ಆಳ್ವ, ಲಾಲಪ್ರಸಾದ್ ಯಾದವ್, ಗುಂಡುರಾಯರು, ಪ್ರೊ.ನಂಜುಂಡಸ್ವಾಮಿ, ನಾಗೇಗೌಡರು ಮೊದಲಾದವರು ಅಲ್ಲದೆ ಬೀಚಿ, ತರಾಸು, ಅನಾಕೃ ರಿಂದ ಸಿದ್ಧಲಿಂಗಯ್ಯ ಅವರ ವರೆಗೆ ಬಹಳ ಹತ್ತಿರದಿಂದ ನೋಡಿದ್ದೇನೆ ಒಡನಾಡಿದ್ದೇನೆ. ಇಲ್ಲವಾದರೆ ವ್ಯಕ್ತಿತ್ವ ತಿಳಿಯಲು ಆಗಲ್ಲ. ಈ ರೀತಿಯ ಒಡನಾಟ, ಸಾಮಿಪ್ಯದ ಸೂಕ್ಷ್ಮ ಗಮನಿಸುವಿಕೆಯಿಂದ ಬಹಳ ಭಿನ್ನ ವ್ಯಕ್ತಿತ್ವಗಳು ಸಿಗುತ್ತವೆ. ಹತ್ತಿರದಿಂದ ನೋಡಬೇಕು ಅವರ ಹ್ಯಾಬಿಟ್ಸ್, ಮೂವ್‌ಮೆಂಟ್ಸ್, ಅವರ ಭಾಷೆ ಗಮನಿಸಬೇಕು. ಅಬ್ಸರವೇಷನ್ ಪತ್ರಕರ್ತನಿಗೆ ಬಹಳ ಮುಖ್ಯದ ವಿದ್ಯೆ. ಹೊರ ಜಗತ್ತಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳುತ್ತ ತಮ್ಮ ಕಚೇರಿಯಲ್ಲಿ ೪೦,೦೦೦ ಪುಸ್ತಕಗಳ ಸಂಗ್ರಹವಿದೆ. ನೀವು ಓದುವ ಚಟ ಬೆಳೆಸಿಕೊಳ್ಳಿ. ಪುಸ್ತಕಗಳನ್ನು ಪ್ರೀತಿಸಿ ಸಂಗೀತ ಕೇಳಿ ಎನ್ನುತ್ತ ನನಗೆ ೭೦,೦೦೦ ಹಾಡುಗಳು ಬಾಯಲ್ಲಿ ಬರುತ್ತವೆ. ನೀವು ಯಾವುದೇ ಹಾಡನ್ನು ಅರ್ಧಕ್ಕೆ ನಿಲ್ಲಿಸಿದರೆ ನಾನು ಪೂರ್ಣಗೊಳಿಸುತ್ತೇನೆ ಎಂದು ರವಿ ಅವರು ಸವಾಲು ಹಾಕಿದರು. ಬಳ್ಳಾರಿಯ ಬೇರುಗಳನ್ನು ತಾನಿನ್ನು ಕಳಿಸಿಕೊಂಡಿಲ್ಲ. ಮಿರ್ಚಿ ಮೆಣಸಿನಕಾಯಿ ಮಂಡಾಳು ಮರೆತಿಲ್ಲ ಎಂದು ಮೆಲುಕು ಹಾಕಿದರು. ಕನ್ನಡವನ್ನು ಅತ್ಯಂತ ಪ್ರೀತಿಸುವ ಮನುಷ್ಯ ನಾನು. ಕನ್ನಡಕ್ಕೆ ಬಹಳ ಸೊಗಸಾದ ಸೊಗಡಿದೆ. ಪ್ರಾಥಮಿಕ ಶಾಲೆಯವರೆಗೆ ತೆಲುಗಿನಲ್ಲಿ ಓದಿದೆ. ಪೋಸ್ಟರ್‌ಗಳನ್ನು ನೋಡಿ ಕನ್ನಡವನ್ನು ಕಲಿತೆ ಎಂದು ಹೇಳಿಕೊಂಡರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಶ್ರದ್ಧೆ ಮತ್ತು ಪರಿಶ್ರಮದಿಂದ ಏನೆಲ್ಲ ಆಗಬಹುದು ಎಂಬುದಕ್ಕೆ ರವಿ ಬೆಳೆಗೆರೆ ಅವರು ಸಾಕ್ಷಿಯಾಗಿದ್ದಾರೆ. ನಮಗೆ ಬರುವ ತಿರುವುಗಳನ್ನು ನಿಭಾಯಿಸಬೇಕು. ಪತ್ರಿಕೋದ್ಯಮ ಓದುವುದರಿಂದ ಮಾತ್ರ ಬರುವುದಿಲ್ಲ. ನೋಡುತ್ತ ಜಗತ್ತಿನ ಅನುಭವದಿಂದಲೂ ಸೂಕ್ಷ್ಮಗ್ರಹಿಕೆಯಿಂದಲೂ ಕಲಿಯಬೇಕು ಎಂದು ಹೇಳುತ್ತ, ಜ್ಞಾನದ ಹಂಬಲಕ್ಕೆ ಮುಪ್ಪಿನ ಮಿತಿ ಇಲ್ಲ. ಹಾಗೆ ರವಿ ಬೆಳಗೆರೆ ಅವರು ಇಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿಎಚ್.ಡಿ. ಅಧ್ಯಯನಕ್ಕೆ ನೊಂದಾಯಿಸಲಿದ್ದಾರೆ ಎಂದು ಸಂತೋಷಪಟ್ಟರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಸ್ವಾಗತಿಸಿದರು. ವಿದ್ಯಾರ್ಥಿ ಸಂತೋಷ ನಿರೂಪಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಧ್ಯಯನಾಂಗದ ನಿರ್ದೇಶಕರಾದ ಡಾ. ಕೆ. ರವೀಂದ್ರನಾಥ ವಂದಿಸಿದರು. ಮಂಟಪ ಸಭಾಂಗಣವು ಬೋಧಕರು, ಆಡಳಿತವರ್ಗ, ವಿದ್ಯಾರ್ಥಿಗಳು ಹಾಗೂ ರವಿ ಬೆಳಗೆರೆ ಅಭಿಮಾನಿಗಳಿಂದ ತುಂಬಿತ್ತು.

ಪೊಲಿಟಿಕಲ್ ಎಕಾನಮಿ ಆಫ್ ತ್ರಿಪುರ : ತ್ರಿಪುರ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಅವರಾದ ಶ್ರೀ ಮಾಣಿಕ್ ಸರ್ಕಾರ್ ಅವರಿಂದ ವಿಶೇಷ ಉಪನ್ಯಾಸ

01-3ವೇದಿಕೆಯಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಸಿದ್ದಗಂಗಮ್ಮ, ಪ್ರಾಧ್ಯಾಪಕರಾದ  ಡಾ. ಚಂದ್ರಪೂಜಾರಿ, ತ್ರಿಪುರ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಅವರಾದ ಶ್ರೀ ಮಾಣಿಕ್ ಸರ್ಕಾರ್ ಅವರು, ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು, ಶ್ರೀ ಜಿ.ವಿ.ಸಿದ್ಧರಾಮರೆಡ್ಡಿ ಅವರು, ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು

02-3ತ್ರಿಪುರ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಅವರಾದ ಶ್ರೀ ಮಾಣಿಕ್ ಸರ್ಕಾರ್ ಅವರಿಂದ ವಿಶೇಷ ಉಪನ್ಯಾಸ

04-4ಮಾನ್ಯ ಕುಲಪತಿಯವರಿಂದ ಅಧ್ಯಕ್ಷೀಯ ನುಡಿ 05-2 ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಮಾನ್ಯ ಕುಲಪತಿಯವರಿಂದ ಗೌರವ

ರಾಜ್ಯಮಟ್ಟದ ಜನಪರ ಶಿಲಾ ಶಿಲ್ಪಕಲಾ ಶಿಬಿರ (ಗಿರಿಜನ ಉಪಯೋಜನೆಯಡಿ)

05ವೇದಿಕೆಯಲ್ಲಿ ಉಪಸ್ಥಿತರಿರುವ ಡಾ. ಅಶೋಕಕುಮಾರ ರಂಜೇರೆ, ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು, ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅವರು ಹಾಗೂ ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು01ಶಿಲೆಯನ್ನು ಕೆತ್ತುವ ಮೂಲಕ ಶಿಬಿರವನ್ನು ಉದ್ಘಾಟಿಸುತ್ತಿರುವ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅವರು02ಉದ್ಘಾಟನಾ ಭಾಷಣ ಮಾಡುತ್ತಿರುವ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅವರು03ಅಧ್ಯಕ್ಷತೆ ನುಡಿಯುತ್ತಿರುವ ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು

ಉದ್ಘಾಟನೆಯ ಪತ್ರಿಕಾ ವರದಿ

ಪ್ರಶಸ್ತಿ ಪುರಸ್ಕಾರಗಳು ಕಲಾವಿದರನ್ನು ಹುಡುಕಿಕೊಂಡು ಬರಬೇಕೆ ವಿನಹ ಕಲಾವಿದರೇ ದೇಹಿ ಎಂದು ಬೇಡಬಾರದು. ಇದು ಅಕ್ಷಮ್ಯ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ ೧೭.೧.೨೦೧೭ರಿಂದ ೨೮.೧.೨೦೧೭ರ ವರೆಗೆ ಗಿರಿಜನ ಉಪಯೋಜನೆಯಡಿಯಲ್ಲಿ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಜನಪರ ಶಿಲಾ ಶಿಲ್ಪಕಲಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವವ್ಯಾಪಕವಾದ ವಿದ್ಯೆ ಎಂದರೆ ಕಲೆ. ಕಲಾಕಾರನಿಗೆ ದೇವಿ ಸರಸ್ವತಿಯ ಒಂದು ಮತ(ಗಿoಣe) ಸಾಕು. ಇಡೀ ಭಾರತದಲ್ಲಿ ಧ್ವಜ ಹಾರಿಸಬಲ್ಲ. ಪ್ರಾಚೀನ ಕಲಾವಿದರು ಸರಳವಾಗಿ ಬದುಕಿದ್ದರು. ಅವರಿಗೆ ಉನ್ನತವಾದ ಗೌರವಾದರಗಳು ಇದ್ದವು. ಕಾರಣ ಮಾನವೀಯ ಮೌಲ್ಯಗಳನ್ನು ಹೊಂದಿದ್ದರು ಎಂದು ತಿಳಿಸಿದರು. ವಿದ್ಯೆಯ ಕುರಿತು ಸರ್ವಜ್ಞನ ಪದ್ಯವೊಂದನ್ನು ಉಲ್ಲೇಖಿಸುತ್ತ ಕಲೆಗೆ ಯುಗಾಂತರದ ಇತಿಹಾಸವುಂಟು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಲಲಿತಕಲಾ ನಿಕಾಯದ ಡೀನರಾದ ಡಾ. ಅಶೋಕಕುಮಾರ ರಂಜೇರೆ ಅವರು ಮಾತನಾಡುತ್ತಾ ನಮ್ಮ ಶಿಕ್ಷಣದ ಪರಿಧಿಯೊಳಗೆ ಕನ್ನಡ ವಿಶ್ವವಿದ್ಯಾಲಯ ಪರಿಭಾವಿಸುವ ಈ ನೆಲದ ಜ್ಞಾನ, ಅರಿವು, ತಿಳಿವನ್ನು ಹೊರಗಿಡಲಾಗಿದೆ. ಪಾಶ್ಚಾತ್ಯ ಮಾದರಿಯ ಶಿಕ್ಷಣದ ಚೌಕಟ್ಟಿನೊಳಗೆ ಈ ನೆಲದ ತಿಳಿವು ಇಲ್ಲ. ಶಿಲ್ಪ ಮತ್ತು ಪ್ರತಿಮಾಶಾಸ್ತ್ರವನ್ನು ಕನ್ನಡ ವಿಶ್ವವಿದ್ಯಾಲಯ ಶೈಕ್ಷಣಿಕ ಪರಿಧಿಯೊಳಗೆ ಭಾವಿಸಿದೆ. ಶಿಕ್ಷಣದ ಹೊರಗಿಡುವ ಅನೇಕ ಜ್ಞಾನಗಳನ್ನು ಪುನರ್‌ಸ್ಥಾಪಿಸುವ ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಕೆಲಸ ಮಾಡಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಕಲೆ ಶಿಲ್ಪಕಲೆಗೆ ಒಂದು ಪರಂಪರೆ ಇದೆ. ಆ ಪರಂಪರೆಯ ಜೊತೆಯಲ್ಲಿ ನಿರ್ಬಂಧಗಳು, ಮಡಿ ಮತ್ತು ತಡೆಗಳಿವೆ. ಕನ್ನಡ ವಿಶ್ವವಿದ್ಯಾಲಯ ಇಂತಹ ಪಾರಂಪರಿಕವಾದ ತಡೆಗಳನ್ನು ಮೀರುವಂತಹ ಶಿಕ್ಷಣ ನೀಡುವ ಪ್ರಯತ್ನದಲ್ಲಿದೆ. ಇದರ ಫಲವಾಗಿ ಗಿರಿಜನ ಉಪಯೋಜನೆಯಡಿಯಲ್ಲಿ ಮುಕ್ತವಾಗಿ ಕಲೆಯನ್ನು ಸಾಮಾಜೀಕರಣಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ. ಪರಂಪರೆಯಲ್ಲಿ ದಾಖಲಾಗಿಲ್ಲದ ಅನೇಕ ಸಂಗತಿಗಳನ್ನು ದಾಖಲಿಸಲು ವಿಶ್ವವಿದ್ಯಾಲಯವು ಸಜ್ಜುಗೊಳ್ಳುತ್ತಿದೆ ಎಂದು ನುಡಿದರು. ವೇದಿಕೆಯಲ್ಲಿ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಸುರೇಶ, ಶ್ರೀ ಕೇಶವ, ಬಾಗಲಕೊಟ ಜಿಲ್ಲೆಯ ಶ್ರೀ ಮೌನೇಶ ಹೆಚ್. ಬದನೂರು, ಶ್ರೀ ರವಿ ದೇಸಾಯಿ, ಶ್ರೀ ವಸಂತ ಎಲ್. ತಳವಾರ, ಶ್ರೀ ವೆಂಕಪ್ಪ ಕೋಳಿ, ಶ್ರೀ ಹಣಮಂತ ಎಲ್. ತಳವಾರ, ಗದಗ ಜಿಲ್ಲೆಯ ಶ್ರೀ ಬಸಪ್ಪ ಓಲೆಕಾರ ಸೋಮನಕಟ್ಟಿ ಹಾಗೂ ಮೇಘಾಲಯದ ಶ್ರೀ ದೀಸ್ಥಾನ್ ಇವರೊಂದಿಗೆ ಬಾದಾಮಿಯ ವಿಸ್ತರಣಾ ಕೇಂದ್ರದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮೈಸೂರು ಜಿಲ್ಲೆಯ ಶಿಬಿರದ ನಿರ್ದೇಶಕರಾದ ಶ್ರೀ ಮಹದೇವ ಆರ್. ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯ ಸಂಚಾಲಕರಾದ ಮಂಜುನಾಥ ಅ. ಕಂಚಗಾರ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಡಾ. ಸಿದ್ದಗಂಗಮ್ಮ ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಶ್ರೀಮತಿ ಎಂ.ಬಿ.ಆಶಾ ನಿರೂಪಿಸಿದರು. ದೃಶ್ಯಕಲಾ ವಿಭಾಗದ ಅಧ್ಯಾಪಕರಾದ ಡಾ. ಶಿವಾನಂದ ಬಂಟನೂರ ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

 

ಯು.ಜಿ.ಸಿ ಕೋರ್ಸ್ ವರ್ಕ್ ಹಾಗೂ ಶಂಬಾ ಜೋಶಿ ಜನ್ಮದಿನದ ಅಂಗವಾಗಿ- ಸಂಶೋಧನಾ ಸಮಾವೇಶ

05-01-2017

dsc08148ಯು.ಜಿ.ಸಿ ಕೋರ್ಸ್ ವರ್ಕ್ ಹಾಗೂ ಶಂಬಾ ಜೋಶಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಸಂಶೋಧನಾ ಸಮಾವೇಶದಲ್ಲಿ ಮಾತನಾಡುತ್ತಿರುವ ಮಾನ್ಯ ಕುಲಪತಿಗಳಾದ ಡಾ.ಎಸ್.ಮಲ್ಲಿಕಾಘಂಟಿ ಅವರು.

dsc08099-1ಉಪನ್ಯಾಸ ನೀಡುತ್ತಿರುವ  ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ರಹಮತ್ ತರೀಕೆರೆ  ಅವರು.dsc08117-2ಉಪನ್ಯಾಸ ನೀಡುತ್ತಿರುವ  ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಚಂದ್ರಪೂಜಾರಿ ಅವರುdsc08126ವೇದಿಕೆಯಲ್ಲಿ  ಮಾನ್ಯ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು, ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕರಾದ ಡಾ.ಶೈಲಜಾ ಹಿರೇಮಠ, ಡಾ.ಚಂದ್ರಪೂಜಾರಿ , ಮಾನ್ಯ ಕುಲಪತಿಗಳಾದ ಡಾ.ಎಸ್.ಮಲ್ಲಿಕಾಘಂಟಿ, ಡಾ.ರಹಮತ್ ತರೀಕೆರೆ ಹಾಗೂ ಅಧ್ಯಯನಾಂಗದ ನಿರ್ದೇಶಕರಾದ ಡಾ. ರವೀಂದ್ರನಾಥ ಅವರು.

ಬೆಳ್ಳಿಹಬ್ಬ : ಮಾಧ್ಯಮದವರೊಂದಿಗೆ ಚಿಂತನ ಮಂಥನ – ೩

೨ ಮತ್ತು ೩ನೇ ಜನವರಿ ೨೦೧೭

03-13ವೇದಿಕೆಯಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು, ಶ್ರೀ.ಟಿ.ಎಸ್.ನಾಗಾಭರಣ, ಶ್ರೀಮತಿ ಗೌರಿ ಲಂಕೇಶ್, ಡಾ.ಬಿ.ಕೆ. ರವಿ, ಶ್ರೀ ಎಸ್. ನಾಗಣ್ಣ, ಶ್ರೀ ಸಂಗಮದೇವ ಐ.ಎಚ್., ಶ್ರೀ ರವೀಂದ್ರ ರೇಷ್ಮೆ, ಕುಲಸಚಿವರಾದ ಡಾ. ಪಾಂಡುರಂಗಬಾಬು ಮೊದಲಾದವರು.

02-13ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು

01-17 ಪ್ರಸ್ತಾವ ಮಂಡಿಸುತ್ತಿರುವ ವಿಶ್ಪ್ರಾವವಿದ್ಧ್ಯಾಯಾಲಯದ  ಪ್ಡಾರಾಧ್ಯಾಪಕರಾದ ಡಾ. ಎಂ. ಚಂದ್ರಪೂಜಾರಿ ಅವರು03-15
೨ನೇ ದಿನದ ಚಿಂತನ ಮಂಥನದ ವೇದಿಕೆಯಲ್ಲಿ ಶ್ರೀ ವಿಠ್ಠಪ್ಪ ಗೋರಂಟ್ಲಿ, ಶ್ರೀ ಮಂಜುನಾಥ ಅದ್ದೆ, ಶ್ರೀ ಪ್ರಕಾಶ ದೇಶಪಾಂಡೆ, ಶ್ರೀ ಮಲ್ಲಿಕಾರ್ಜುನ ಸಿದ್ದಣ್ಣವರ, ಶ್ರೀ ಉದಯಶಂಕರ ಪುರಾಣಿಕ, ಪ್ರೊ. ರವೀಂದ್ರ ರೇಷ್ಮೆ, ಮಾನ್ಯಕುಲಪತಿಯವರು, ಶ್ರೀ ಟಿ.ಎಸ್. ನಾಗಾಭರಣ, ಡಾ. ವಸಂತಕುಮಾರ ಪೆರ್ಲ, ಶ್ರೀ ಕಾರ್ದಿ ಎಸ್. ಅಚ್ಚುತನ್, ಶ್ರೀ ಗೌರೀಶ್ ಅಕ್ಕಿ, ಶ್ರೀ ಸಿದ್ದಪ್ಪ ಕಾಳೂಜಿ, ಶ್ರೀ ಎಂ.ಟಿ. ಶಿವುಕುಮಾರ, ಡಾ.ಗಣೇಶ ಅಮೀನಗಡ, ಡಾ.ಎಚ್.ಜಿ. ಶೋಭಾ ಅವರು.

ಪತ್ರಿಕಾ ವರದಿ- 02.01.2017

ಮುಂದಿನ ಜನಾಂಗಕ್ಕೆ ದುಡಿದು ಗಳಿಸುವ ಪರಿಣತಿಯನ್ನು ದಾಟಿಸುವುದು ಹಾಗೂ ಒಟ್ಟಾಗಿ ಬದುಕಲು ಪೂರಕವಾಗುವ ಸಮಾನತೆಯ ಮೌಲ್ಯವನ್ನು ಕಟ್ಟಿಕೊಡುವುದು ಉನ್ನತ ಶಿಕ್ಷಣದ ಬಹುಮುಖ್ಯ ಉದ್ದೇಶಗಳಾಗಿವೆ ಎಂದು ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಂ. ಚಂದ್ರಪೂಜಾರಿ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಮಂಟಪ ಸಭಾಂಗಣದಲ್ಲಿ ೨ ಮತ್ತು ೩ನೇ ಜನವರಿ ೨೦೧೭ರಂದು ಏರ್ಪಡಿಸಿದ್ದ ಬೆಳ್ಳಿಹಬ್ಬ ಮಾಧ್ಯಮದವರೊಂದಿಗೆ ಚಿಂತನ ಮಂಥನ ೩ರ ಚಾಲನಾ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಸ್ತಾವದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಕ್ಷಿಪ್ತ ಚಿತ್ರಣ ಮತ್ತು ಕಾರ್ಯಕ್ರಮದ ಉದ್ದೇಶವನ್ನು ತಿಳಿಸುತ್ತ ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯ ಆರಂಭವಾಗಿ ೨೫ ವರ್ಷಗಳು ತುಂಬುತ್ತಿವೆ. ಈ ಅವಧಿಯಲ್ಲಿ ೧೫೦೦ ಸಂಶೋಧನೆ ಕಾರ್ಯಯೋಜನೆಗಳನ್ನು ಸಂಪೂರ್ಣಗೊಳಿಸಿ ಪುಸ್ತಕ ರೂಪದಲ್ಲಿ ಪ್ರಸಾರಾಂಗದಿಂದ ಪ್ರಕಟಿಸಿ ಜನತೆಗೆ ತಲುಪಿಸಲಾಗಿದೆ ಎಂದರು.
ನಂತರ ಸಂಸ್ಥೆಯ ಲಕ್ಷಣವನ್ನು ವಿವರಿಸುತ್ತ ಸಮಾಜದಲ್ಲಿ ಸಮಾನತೆ ಇಲ್ಲ. ಅರ್ಥವ್ಯವಸ್ಥೆಯಲ್ಲಿ ರಾಜಕೀಯದಲ್ಲಿ ಸಮಾನತೆಯಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯನ್ನು ತರಲು ಸಾಧ್ಯತೆಗಳಿವೆ. ಬೌದ್ಧಿಕ, ಸಾಂಸ್ಥಿಕ ಸ್ವರೂಪದಲ್ಲಿ, ಪಠ್ಯಗಳಲ್ಲಿ ಸಮಾನತೆ ಬೇಕು. ಈ ಸಾಧ್ಯತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಮಾತ್ರ ಇದೆ. ಇಲ್ಲಿ ಸಂಶೋಧನೆಗೆ ಅತ್ಯಂತ ಮುಕ್ತ ವಾತಾವರಣವಿದೆ ಎಂದು ವಿಶ್ವವಿದ್ಯಾಲಯದ ಸಂಕ್ಷಿಪ್ತ ಚಿತ್ರಣ ನೀಡಿದರು.
ನಂತರ ಮಾಧ್ಯದವರೊಂದಿಗೆ ಚಿಂತನ ಮಂಥನದ ಉದ್ದೇಶ ತಿಳಿಸುತ್ತ ಒಂದು ಸಂಸ್ಥೆಯ ಏಳು ಬೀಳುಗಳನ್ನು ಗುರುತಿಸಲು ಆ ಸಂಸ್ಥೆಯ ಉದ್ದೇಶಗಳೇ ಮಾನದಂಡಗಳು. ಮೇಲ್ಪದರದ ಭಿನ್ನತೆಗಳ ನೆಲೆಯಲ್ಲಿ ಮೌಲ್ಯಮಾಪನ ಮಾಡಿದರೆ ಕನ್ನಡ ವಿಶ್ವವಿದ್ಯಾಲಯದ ಸಾಧನೆಗಳು ಭಿನ್ನವಾಗಿ ಕಾಣುವುದಿಲ್ಲ. ಜ್ಞಾನಕ್ಕೆ ಸಂಬಂಧಪಟ್ಟ ಮೂಲಭೂತ ವಿಷಯದಲ್ಲಿ ಇತರೆ ವಿಶ್ವವಿದ್ಯಾಲಯಗಳಿಗೂ ಕನ್ನಡ ವಿಶ್ವವಿದ್ಯಾಲಯಕ್ಕೂ ಭಿನ್ನತೆ ಇದೆ. ಜ್ಞಾನದ ವ್ಯಾಖ್ಯಾನದಲ್ಲಿ ಇತರೆ ವಿಶ್ವವಿದ್ಯಾಲಯಗಳಿಗೂ ಕನ್ನಡ ವಿಶ್ವವಿದ್ಯಾಲಯಕ್ಕೂ ಭಾರಿ ದೊಡ್ಡ ವ್ಯತ್ಯಾಸವಿದೆ. ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ವಿಜ್ಞಾನದ ಜ್ಞಾನದ ವ್ಯಾಖ್ಯಾನವನ್ನು, ವಿಜ್ಞಾನದ ದೃಷ್ಟಿಕೋನವನ್ನು ಯಥಾರೂಪದಲ್ಲಿ ಅನುಸರಿಸುತ್ತಿವೆ. ಆದರೆ ವಿಜ್ಞಾನ ಪ್ರತಿಪಾದಿಸುವ ವಿಜ್ಞಾನದ ಏಕಸತ್ಯ ದೃಷ್ಟಿಕೋನವನ್ನು ಅದರ ಹಾದಿಯನ್ನು ಕುರಿತು ಕನ್ನಡ ವಿಶ್ವವಿದ್ಯಾಲಯದ ತಕರಾರಿದೆ. ಆದರೆ ಸತ್ಯದ ವಿರುದ್ಧ ಅಲ್ಲ. ಪ್ರತಿ ಸಂಸ್ಕೃತಿಗಳು ತನ್ನ ಸತ್ಯವನ್ನು ಕಟ್ಟಿಕೊಳ್ಳುತ್ತಿವೆ ಎಂದು ನುಡಿದರು.
ಏಕಸತ್ಯದ ಕಲ್ಪನೆ ಮಾಡುವ ಹಾನಿ(ಡ್ಯಾಮೇಜ್) ನಮಗೆ ಅರ್ಥವಾಗಬೇಕು. ಪಶ್ಚಿಮದಲ್ಲಿ ವಿಜ್ಞಾನ ತಂತ್ರಜ್ಞಾನದ ಅಳವಡಿಕೆಯಿಂದ ಸಮಾಜ ಆಧುನೀಕರಣಗೊಂಡಿತು ಎಂದು ವಿಜ್ಞಾನ ಹೇಳಿದ್ದರಿಂದ ನಾವೆಲ್ಲ ಆಧುನೀಕರಣದ ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕಾಯಿತು. ಅದೇ ರೀತಿ ಕೆಲವು ದೇಶಗಳಲ್ಲಿ ಜಾಗತೀಕರಣ ಉದಾರೀಕರಣ, ಖಾಸಗೀಕರಣ ಯಶಸ್ಸಾಯಿತು ಎಂದು, ಪ್ರಪಂಚ ವ್ಯಾಪ್ತಿ ಕೂಡ ಏಕಸತ್ಯದ ಹೆಸರಿನಲ್ಲಿ ಆ ಪ್ರಯೋಗಕ್ಕೆ ಬಲಿಯಾಗಬೇಕಾಯಿತು. ಪ್ರತಿ ಸಂಸ್ಕೃತಿಗೂ ತನ್ನದೇ ಆದ ಕೃಷಿ ಪದ್ಧತಿ, ವ್ಯಾಪಾರ, ಉದ್ದಿಮೆ, ಆರೋಗ್ಯ, ವಾಸ್ತುಶಿಲ್ಪಗಳಿವೆ. ಅದನ್ನು ಉಳಿಸಿ ಒಂದು ಬಹುತ್ವವನ್ನು ಸ್ಥಾಪಿಸುವ ಉದ್ದೇಶ ಕನ್ನಡ ವಿಶ್ವವಿದ್ಯಾಲಯಕ್ಕೆ ಇದೆ. ಇದೇ ಕನ್ನಡ ವಿಶ್ವವಿದ್ಯಾಲಯಕ್ಕೂ ಇತರೆ ವಿಶ್ವವಿದ್ಯಾಲಯಕ್ಕೂ ಇರುವ ಬಹು ದೊಡ್ಡ ಅಂತರ. ದುರದೃಷ್ಟ ಎಂದರೆ ಇಂದು ಬಹುತೇಕ ವಿಶ್ವವಿದ್ಯಾಲಯಗಳು ಆಧುನಿಕ ಕೌಶಲ್ಯ(sಞiಟಟ)ಗಳಿಗೆ ಪ್ರಾಮುಖ್ಯತೆ ಕೊಡುತ್ತಿರುವುದರಿಂದ ಪರಂಪರೆಯಿಂದ ಬಂದ ಕೌಶಲ್ಯಗಳು ಸಂಪೂರ್ಣವಾಗಿ ಮೂಲೆಗುಂಪಾಗುತ್ತಿವೆ. ಆದ್ದರಿಂದ ನಮ್ಮ ಪಠ್ಯಗಳಲ್ಲಿ ಬೌತಿಕ ಸ್ವರೂಪದಲ್ಲಿ ಸಾಂಸ್ಥಿಕ ಸ್ವರೂಪದಲ್ಲಿ ಪ್ರಜಾಪ್ರಭುತ್ವದ ಅಂಶಗಳು ಬೇಕು. ಪಠ್ಯದಲ್ಲಿ ಶೇ.೭೦%ರಷ್ಟು ಜನರ ಬದುಕು ಬೇಕು. ಅವರ ಸಂಸ್ಕೃತಿ ನಮ್ಮ ಪಠ್ಯದಲ್ಲಿ ಬೇಕು. ಆದರೆ ಇದಾಗುತ್ತಿಲ್ಲ. ಆದ್ದರಿಂದ ಸಮಾನತೆ ಇಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ ಬಹುತೇಕರು ಮಾನ ಸಮ್ಮಾನದಿಂದ ಬದುಕಲು ಕನ್ನಡ ವಿಶ್ವವಿದ್ಯಾಲಯ ಬಯಸುತ್ತದೆ ಎಂದು ತಿಳಿಸುತ್ತ, ಸಮಾಜದ ಕೆಳಸ್ಥರಕ್ಕೆ ಸೇರಿದ ದಲಿತರು, ಬುಡಕಟ್ಟು ಜನರು ಅಲ್ಪಸಂಖ್ಯಾತರು, ಮಹಿಳೆಯರು ಈ ಸಮುದಾಯಗಳ ಮೇಲೆ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನ ಸಂಶೋಧನೆ ಕೇಂದ್ರೀಕೃತವಾಗಿದೆ. ಇದಕ್ಕಾಗಿ ಬಹಳ ದೊಡ್ಡ ಮಾನವ ಸಂಪನ್ಮೂಲ ಬೇಕು ಮತ್ತು ಹಣಕಾಸು ಬೇಕು. ಇದನ್ನು ಕೊಡಬೇಕಾದವರಿಗೆ ನಮ್ಮ ದೃಷ್ಟಿಕೋನದ ಸ್ಪಷ್ಟತೆ ಇಲ್ಲ ಎಂದು ಪ್ರೊ. ಚಂದ್ರಪೂಜಾರಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ವಿಶ್ವವಿದ್ಯಾಲಯದ ಪರಿನಿಯಮದಂತೆ ಕನ್ನಡ ವಿಶ್ವವಿದ್ಯಾಲಯವು ವಿದ್ಯೆಯನ್ನು ಸೃಷ್ಟಿಸುವ ವಿಶ್ವವಿದ್ಯಾಲಯವಾಗಿದೆ. ಆದರೆ ಪದವಿ ನೀಡುವ ವಿಶ್ವವಿದ್ಯಾಲಯ ಅಲ್ಲ. ಇದೇರೀತಿ ಕಾರ್ಯನಿರ್ವಹಿಸುತ್ತ ಬರುತ್ತಿದೆ. ಪದವಿಗಳಿಗೆ ಬೇಕಾದಂತಹ ವಿದ್ಯೆಯನ್ನು ಸಂಶೋಧಿಸುವ, ಸಂಗ್ರಹಿಸುವ ಪರಿಷ್ಕರಿಸುವ, ದಾಖಲಿಸುವ ಕೆಲಸವನ್ನು ಪ್ರಮುಖವಾಗಿರಿಸಿಕೊಂಡು ಹುಟ್ಟಿದ ಕನ್ನಡ ವಿಶ್ವವಿದ್ಯಲಯಕ್ಕೆ ಕಾಲಕ್ಕೆ ಅನುಗುಣವಾಗಿ ಕೆಲವು ತಾಂತ್ರಿಕವಾದ ಬದಲಾವಣೆಗಳು ಅನಿವಾರ್ಯವಾಗಿ ಯುಜಿಸಿ ನಿಯಮಗಳಿಗೆ ಒಳಪಡಬೇಕಾಯಿತು. ಅವತ್ತಿನ ಕಾಲಕ್ಕೆ ಅನುಗುಣವಾಗಿ ಮಾನವ ಸಂಪನ್ಮೂಲ ಮತ್ತು ಕರ್ನಾಟಕದಲ್ಲಿ ಇರುವಂತಹ ವಿದ್ವತ್ ಪ್ರಪಂಚ ಕನ್ನಡ ವಿಶ್ವವಿದ್ಯಾಲಯವನ್ನು ಅಪ್ಪಿಕೊಂಡಿದ್ದರಿಂದ ಪ್ರಾರಂಭದಲ್ಲಿ ಸಂಶೋಧನೆ ಮತ್ತು ಸಾಹಿತ್ಯಕವಾದಂತಹ ಕೆಲಸಗಳನ್ನು ಬಹಳ ಗಂಭೀರವಾಗಿ ಅರ್ಥಪೂರ್ಣವಾಗಿ ಮಾಡಿದೆ. ನಂತರ ಕನ್ನಡ ವಿಶ್ವವಿದ್ಯಾಲಯದ ನಡಿಗೆಯ ಓಘ ಕಡಿಮೆಯಾಗಲು ಹಲವು ಕಾರಣಗಳಿವೆ. ೭೨ ಅಧ್ಯಾಪಕರ ಸಂಖ್ಯೆ(ನಿವೃತ್ತಿಗಳಿಂದ) ಕಡಿಮೆಯಾಗಿದೆ. ಕನ್ನಡ ನಾಡು ಮತ್ತು ಮಾಧ್ಯಮ ಬಯಸಿದಂತೆ ಕಾರ್ಯನಿರ್ವಹಿಸಲು ಒಳಸಂಕಟಗಳಿವೆ. ಈ ಒಳಸಂಕಟಗಳನ್ನು ಜಗತ್ತಿಗೆ ಬಿಂಬಿಸುವಂತಹ ಬಹಳ ದೊಡ್ಡ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ತಿಳಿಸಿದರು.
ಸರ್ಕಾರ ಕೊಡಮಾಡಿರುವ ಅನೇಕ ವಿದ್ವಾಂಸರ ಹೆಸರಿನ ಪೀಠಗಳು ಆರ್ಥಿಕವಾಗಿ ಸೊರಗುತ್ತಾ ಹೆಸರಿಗೆ ಮಾತ್ರ ಅಸ್ತಿತ್ವ ಉಳಿಸಿಕೊಂಡಿವೆ. ವಿಸ್ತರಣ ಕೇಂದ್ರಗಳು ಆರ್ಥಿಕ ಮುಗ್ಗಟ್ಟಿನಿಂದ ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ದೇವದುರ್ಗದಲ್ಲಿರುವ ಬುದ್ಧ ಅಧ್ಯಯನ ಕೇಂದ್ರಕ್ಕೆ ಜಿಲ್ಲಾಡಳಿತ ೫೦ ಎಕರೆ ಜಮೀನು ನೀಡಿದೆ. ಕುರುಬನಕಟ್ಟೆಯಲ್ಲಿ ಒಂದು ಮಠದಲ್ಲಿ ನಮ್ಮ ವಿಸ್ತರಣಾ ಕೇಂದ್ರ ಕಾರ್ಯನಿರ್ವಹಿಸುತ್ತಿರುವುದು ನಾಡು ತಲೆತಗ್ಗಿಸುವ ಕೆಲಸವಾದರೂ ಅನಿವಾರ್ಯವಾಗಿದೆ. ಡಾ. ರಾಜಕುಮಾರ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಮತ್ತು ವಿಸ್ತರಣಾ ಕೇಂದ್ರವನ್ನು ಪ್ರಾರಂಭಿಸಲು ಸರ್ಕಾರ ಬೆಂಗಳೂರಿನಲ್ಲಿ ೨ ಎಕರೆ ಜಮೀನನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಿದೆ. ತಳಸಮುದಾಯಗಳ ಸಾಂಸ್ಕೃತಿಕ ಅಧ್ಯಯನಕ್ಕಾಗಿ ಮತ್ತು ತಳಸಮುದಾಯದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಯೋಜನೆಗಳನ್ನು ರೂಪಿಸಿಕೊಳ್ಳಲು ಸರ್ಕಾರ ಮತ್ತಷ್ಟು ಜಾಗವನ್ನು ನೀಡಿದೆ. ಈ ಎಲ್ಲ ಭೌತಿಕವಾದ ಹಿನ್ನೆಲೆಯಲ್ಲಿ ಭೌದ್ಧಿಕ ಕಾರ್ಯ ನಿರ್ವಹಿಸಲು ಹಣಕಾಸಿನ ಮುಗ್ಗಟ್ಟಿದೆ. ಈ ಕುರಿತು ಮಾಧ್ಯಮಗಳು ನಾಡಿಗೆ ಜಗತ್ತಿಗೆ ತಿಳಿಸಬೇಕೆಂದು ಈ ಚಿಂತನ ಮಂಥನ ಏರ್ಪಡಿಸಲಾಗಿದೆ ಎಂದು ನುಡಿದರು.
ಕಳೆದ ೨೫ ವರ್ಷಗಳಲ್ಲಿ ವಿವಿಧ ಸರ್ಕಾರಗಳು ಸೇರಿದಂತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಒಟ್ಟು ೫೮ ಕೋಟಿ ಅನುದಾನವನ್ನು ಅಭಿವೃದ್ಧಿಗಾಗಿ ನೀಡಿವೆ ಎಂದು ವಿಷಾದಿಸಿದರು. ಈ ಸಣ್ಣ ಅನುದಾನದಲ್ಲಿ ಜಗತ್ತೇ ನೋಡಬಹುದಾದ ಭೌತಿಕ ಮತ್ತು ಬೌದ್ಧಿಕ ಕೆಲಸಗಳನ್ನು ಮಾಡಲಾಗಿದೆ. ಸಾಂಸ್ಕೃತಿಕ ಕುರುಹುಗಳನ್ನು ಮುಂದಿನ ಜನಾಂಗಕ್ಕೆ ಉಳಿಸುವ ರವಾನಿಸುವ, ದಾಖಲಿಸುವ ಕೆಲಸವನ್ನೂ ಮಾಡಲಾಗಿದೆ. ಈಗ ನಮಗೆ ಕೇವಲ ೨ ಕೋಟಿ ಮಾತ್ರ ಅಭಿವೃದ್ಧಿ ಅನುದಾನ ಮಂಜೂರು ಆಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಿಂದ ತಳಸ್ಥರದಿಂದ ಬರುವ ವಿದ್ಯಾರ್ಥಿಗಳಿಗೆ ಕನ್ನಡ ವಿಶ್ವವಿದ್ಯಾಲಯವೇ ಪ್ರತಿ ತಿಂಗಳು ೧೦ ಸಾವಿರ ರೂಪಾಯಿಗಳಂತೆ ಅಧ್ಯಯನಕ್ಕೆ ನೆರವು ನೀಡಿ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಜಗತ್ತೇ ಗಮನಿಸುವಂತೆ ಬುಡಕಟ್ಟುಗಳಿಗೆ ಸಂಬಂಧಿಸಿದಂತೆ ಕನ್ನಡ ವಿಶ್ವವಿದ್ಯಾಲಯ ಕೆಲಸ ಮಾಡಿದೆ. ನಮ್ಮ ಸಂಶೋಧನೆಯ ಫಲಿತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದರೂ ಅಧಿಕಾರಿಗಳು ಪರಿಗಣಿಸುವುದಿಲ್ಲ. ಇಲ್ಲಿ ಕನ್ನಡ ಭಾಷೆಯನ್ನು ಕಲಿಸುತ್ತಿಲ್ಲ. ಭಾಷೆಯ ಮೂಲಕ ಕರ್ನಾಟಕವನ್ನು ಜಗತ್ತನ್ನು ಪರಿಚಯಿಸುವ ಕೆಲಸ ಮಾಡಲಗುತ್ತಿದೆ. ಇದು ಅಧಿಕಾರಶಾಹಿಗೆ ತಿಳಿಯುತ್ತಿಲ್ಲ ಎಂದರು.
ಸಾಂಸ್ಕೃತಿಕ ರಾಜಕಾರಣಕ್ಕೆ ಸಂಬಂಧಪಟ್ಟ ಹಾಗೆ ವಿಶ್ವವಿದ್ಯಾಲಯ ಇಟ್ಟುಕೊಂಡಿರುವ ನಂಬಿಕೆ, ಭರವಸೆಗಳನ್ನು ಇಂದಿನ ರಾಜಕಾರಣಿಗಳಿಗೆ ಮುಟ್ಟಿಸುವ ಜವಾಬ್ದಾರಿಯ ಹಿನ್ನೆಲೆಯಲ್ಲಿ ಜನವರಿ ೬, ೭ರಂದು ರಾಜಕಾರಣಿಗಳೊಂದಿಗೆ ೪ನೇ ಚಿಂತನ ಮಂಥನ ಏರ್ಪಡಿಸಿದೆ ಎಂದು ತಿಳಿಸಿದರು. ಇವರೆಲ್ಲರೂ ಮತ್ತು ಮಾಧ್ಯಮದವರನ್ನು ಒಳಗೊಂಡಂತೆ ಒಂದು ನಿಯೋಗ ಕರೆದುಕೊಂಡು ಸರ್ಕಾರಕ್ಕೆ ಹೋಗಲಾಗುವುದು. ಈ ನಿಯೋಗದ ಮೂಲಕ ಕನ್ನಡ ವಿಶ್ವವಿದ್ಯಾಲಯ ಪಾರಂಪರಿಕ ವಿಶ್ವವಿದ್ಯಾಲಯ ಅಲ್ಲ ಎಂದು ಮನವರಿಕೆ ಮಾಡಿಕೊಡುವ ಉದ್ದೇಶವಿದೆ ಎಂದು ಸ್ಪಷ್ಟಪಡಿಸಿದರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ನಿರೂಪಿಸಿ, ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವೇದಿಕೆಯಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು, ಶ್ರೀ.ಟಿ.ಎಸ್.ನಾಗಾಭರಣ, ಶ್ರೀಮತಿ ಗೌರಿ ಲಂಕೇಶ್, ಡಾ.ಬಿ.ಕೆ. ರವಿ, ಶ್ರೀ ಎಸ್. ನಾಗಣ್ಣ, ಶ್ರೀ ಸಂಗಮದೇವ ಐ.ಎಚ್. ಮೊದಲಾದವರು ಉಪಸ್ಥಿತರಿದ್ದರು. ನಂತರ ೨ ಸಭಾಂಗಣದಲ್ಲಿ ಕನ್ನಡ ವಿಶ್ವವಿದ್ಯಾಲಯದ ಇದುವರೆಗಿನ ನಡೆ ಮತ್ತು ಮುಂದಿನ ನಡೆ ಕುರಿತು ಪರಾಮರ್ಶೆ, ಚರ್ಚೆಗಳು ನಡೆದವು. ಸಂಜೆ ಶ್ರೀ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

 

 

ಪ್ರೊ. ಹನುಮಣ್ಣನಾಯಕ ದೊರೆ ಅವರ ನಿವೃತ್ತಿ – ಬೀಳ್ಕೊಡುಗೆ ಸಮಾರಂಭ

ಪ್ರೊ. ಹನುಮಣ್ಣನಾಯಕ ದೊರೆ
ಅವರ ನಿವೃತ್ತಿ – ಬೀಳ್ಕೊಡುಗೆ ಸಮಾರಂಭ03-1201-14

ವಿಶ್ವವಿದ್ಯಾಲಯದ ಆಸ್ತಿ ಎಂದರೆ ಪ್ರಾಧ್ಯಾಪಕರು. ಪ್ರಾಧ್ಯಾಪಕರು ನಿವೃತ್ತಿಯಾದರೆ ವಿಶ್ವವಿದ್ಯಾಲಯ ಬಡತನ ಅನುಭವಿಸಬೇಕಾಗುತ್ತದೆ. ಅಂದರೆ ಅವರ ವಿದ್ವತ್ತಿನಿಂದಾಗಿ ಸದಾ ವಿಶ್ವವಿದ್ಯಾಯದಲ್ಲಿರುತ್ತಾರೆ. ಮಾಸ್ತರಿಕೆ ಮಾಡುವುದು ಸುಲಭ. ತಾಯ್ತನ(ಭಾವನೆಯಿಂದ)ದಿಂದ ವಿದ್ಯಾರ್ಥಿ ಸಮುದಾಯವನ್ನು ಗೆಲ್ಲುವುದು ಬಹಳ ಪ್ರಯಾಸದ ಕೆಲಸ. ಕನ್ನಡ ವಿಶ್ವವಿದ್ಯಾಲಯ ಬೋಧಕರಿಗೆ ಮುಕ್ತ ವಾತಾವರಣ ಕಲ್ಪಿಸಿದೆ. ಕೆಲಸವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಶಿಕ್ಷಣ ದೊಡ್ಡ ಸಂಪತ್ತು, ವಿದ್ಯಾರ್ಥಿಗಳಿಗೆ ಶ್ರದ್ಧೆ ಮತ್ತು ಪರಿಶ್ರಮ ದೊಡ್ಡ ಆಸ್ತಿ ಎಂದು ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ನೆರೆದಿದ್ದ ಬೋಧಕರು, ಅಪಾರ ವಿದ್ಯಾರ್ಥಿವೃಂದ ಮತ್ತು ಬೋಧಕೇತರರನ್ನು ಉದ್ದೇಶಿಸಿ ನುಡಿದರು.
ದಿನಾಂಕ ೩೧.೧೨.೨೦೧೬ರಂದು ಸೇವೆಯಿಂದ ನಿವೃತ್ತರಾದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಹನುಮಣ್ಣನಾಯಕ ದೊರೆ ಅವರಿಗೆ ಪಂಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಲಿತಕಲಾ ನಿಕಾಯದ ಡೀನರಾದ ಡಾ. ಅಶೋಕಕುಮಾರ ರಂಜೇರೆ ಅವರು ಸಂಗೀತದ ಗಾರುಡಿಗರಾದ ದೊರೆ ಅವರು ೨ ದಶಕ ಸೇವೆ ಸಲ್ಲಿಸಿದ್ದಾರೆ. ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ ಸರ್ವತೋಮುಖವಾಗಿ ಶ್ರಮಿಸಿದ್ದಾರೆ. ಅನೇಕ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ಆಚೆಗೂ ತಮ್ಮನ್ನು ವಿಸ್ತರಿಸಿಕೊಂಡಿದ್ದಾರೆ ಎಂದು ಹೆಮ್ಮೆಯಿಂದ ತಿಳಿಸಿದರು.
ನಂತರ ಸಂಗೀತ ವಿಭಾಗದ ಅಧ್ಯಾಪಕ ಶ್ರೀ ತೇಜಸ್ವಿ ಹೆಗಡೆ, ಸಂಶೋಧನ ವಿದ್ಯಾರ್ಥಿನಿ ಶ್ರೀಮತಿ ಮಮತ, ಪದ್ಮವತಿ, ದುಷ್ಯಂತ, ವೀರೇಶಿ ಮೊದಲಾದವರು ಅನಿಸಿಕೆ ಹಂಚಿಕೊಂಡರು.
ಗೌರವ ಸನ್ಮಾನಗಳನ್ನು ಸ್ವೀಕರಿಸಿದ ದೊರೆ ಅವರು ವಿಶ್ವವಿದ್ಯಾಲಯದಲ್ಲಿ ತಮ್ಮ ಶೈಕ್ಷಣಿಕ ಪಯಣದ ಕುರಿತು ಮಾತನಾಡುತ್ತ, ಗುರುಗಳಾದ ಪಂಡಿತ ಬಸವರಾಜ ರಾಜಗುರುಗಳನ್ನು ನೆನೆಯುತ್ತ, ವಿಶ್ವವಿದ್ಯಾಯದಿಂದ ನಾನು ಬಹಳಷ್ಟು ಪಡೆದಿದ್ದೇನೆ. ಇದು ನನ್ನ ವಿದ್ವತ್ತಿನ ವಿಸ್ತಾರಕ್ಕೆ ಕಾರಣವಾಗಿದೆ. ಸಂತೋಷದಿಂದ ನಿರ್ಗಮಿಸುತ್ತಿದ್ದೇನೆ ಎನ್ನುತ್ತ ಪತ್ನಿ ಡಾ. ಕಲಾವತಿಯೊಂದಿಗೆ ಆದದ್ದೆಲ್ಲ ಒಳಿತೇ ಆಯಿತು ಎಂದು ಹಾಡಿದರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಕನ್ನಡ ವಿಶ್ವವಿದ್ಯಾಲಯದ ಹಾಡಿನ ಮೋಡಿಗಾರನಾದ ಡಾ. ಹನುಮಣ್ಣನಾಯಕ ದೊರೆ ಅವರು ಸಂಗೀತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಡೀನರಾಗಿ, ಸಂಗೀತ ವಿಭಾಗ ಕಟ್ಟಲು ಶ್ರಮಿಸಿದ್ದಾರೆ ಎಂದು ಸ್ವಾಗತಿಸಿದರು. ಉಪಕುಲಸಚಿವರಾದ ಡಾ.ಎ. ವೆಂಕಟೇಶ ಅವರು ನಿರೂಪಿಸಿದರು. ಸಹಾಯಕ ಕುಲಸಚಿವ ಶ್ರೀ ಗುರುಬಸಪ್ಪ ವಂದಿಸಿದರು. ಶೃತಿ ಪ್ರಾರ್ಥಿಸಿದರು.