ಕನ್ನಡ ವಿಶ್ವವಿದ್ಯಾಲಯವು ೨೫ನೇ ನವೆಂಬರ್ ೨೦೧೫ರಂದು ಭುವನವಿಜಯ ಸಭಾಂಗಣದಲ್ಲಿ ಏರ್ಪಡಿಸಿದ್ದ ನಾಟಕ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ವೋಲೆ ಕಡತದ ಮೇಲೆ ನವೀನ ಮಾದರಿಯಲ್ಲಿ ಅನಿಸಿಕೆ ಬರೆದು ಸಹಿ ಹಾಕುವ ಮೂಲಕ ನಾಟಕ ವಿಭಾಗವನ್ನು ಪ್ರೊ.ಜಿ.ಕೆ.ಗೋವಿಂದರಾವ್ ಅವರು ಉದ್ಘಾಟಿಸಿ ಮಾತನಾಡಿದರು. ೨೪ ವರ್ಷ ತುಂಬಿ ೨೫ನೇ ಹರೆಯಕ್ಕೆ ವಿಶ್ವವಿದ್ಯಾಲಯ ಕಾಲಿಡುವ ಸಂದರ್ಭದಲ್ಲಿ ನಾಟಕ ವಿಭಾಗ ಆರಂಭವಾಗಿರುವುದಕ್ಕೆ ಕುಲಪತಿಯವರನ್ನು ಅಭಿನಂದಿಸಿದರು.
ಅತ್ಯಂತ ಸವಾಲಿನ ಮಾಧ್ಯಮ ನಾಟಕ ಜಗತ್ತು. ನಾಟಕದ ಬದುಕಿನ ಕೇಂದ್ರಕ್ಕೆ ಇಳಿದಾಗ ಸವಾಲುಗಳು ಅರಿವಿಗೆ ಬರುತ್ತವೆ. ಅಂಚಿನಲ್ಲಿ ಬದುಕುವವರಿಗೆ ಸವಾಲುಗಳು ಅನಾವರಣಗೊಳ್ಳುವುದಿಲ್ಲ. ಬದುಕಿನಲ್ಲಿ ನೇಪಥ್ಯ ಇಲ್ಲ. ನಾಟಕದಲ್ಲಿಯೂ ನೇಪಥ್ಯ ಇಲ್ಲ ಎಂದು ಚಿಂತಕರು ಮತ್ತು ರಂಗಭೂಮಿ, ಸಿನಿಮಾ ಕಲಾವಿದರಾದ ಪ್ರೊ.ಜಿ.ಕೆ.ಗೋವಿಂದರಾವ್ ಅವರು ನುಡಿದರು. ಅವರು ಮುಂದುವರೆದು, ಸಾಹಿತ್ಯ ಪ್ರಕಾರದಲ್ಲಿ ನಾಟಕ ಪ್ರಕಾರ ಅತ್ಯಂತ ಪ್ರಮುಖವಾದುದು. ಲೇಖಕ ಮತ್ತು ಓದುಗರ ನಡುವಿನ ಅನುಸಂಧಾನ ಒಂದು ಖಾಸಗಿಕ್ರಿಯೆ. ಆದರೆ ನಾಟಕಕ್ಕೆ ಬಹು ಆಯಾಮಗಳಿವೆ. ರಂಗದ ಮೇಲೆ ಅಭಿವ್ಯಕ್ತಿಗೊಂಡಾಗ ಮಾತ್ರ ನಾಟಕ ಮತ್ತು ಕೃತಿ ಪರಿಪೂರ್ಣವಾಗುತ್ತವೆ. ನಾಟಕವು ನಾಟಕಕಾರ, ರಂಗಭೂಮಿ, ಅಭಿವ್ಯಕ್ತಿಗೆ ಮಾತ್ರ ಸೀಮಿತಗೊಂಡಿಲ್ಲ. ಅದು ನಿರ್ದೇಶನ, ವಸ್ತ್ರಾಲಂಕಾರ, ಪ್ರಸಾದನ, ಸಂಗೀತ, ಧ್ವನಿ ಬೆಳಕಿನವರೆಗೂ ವಿಸ್ತಾರ ಪಡೆಯುತ್ತದೆ. ಆದರೆ ಇಲ್ಲಿ ಪ್ರೇಕ್ಷಕ ಅತ್ಯಂತ ಪ್ರಮುಖ ಅಂಗ. ನಾಟಕ ಓದುವುದಕ್ಕಿಂತ ತೀವ್ರ ಮತ್ತು ತೀಕ್ಷ್ಣವಾಗುವುದು ಪ್ರೇಕ್ಷಾಗೃಹದಲ್ಲಿ ಅಭಿವ್ಯಕ್ತಿಗೊಂಡಾಗ ಮಾತ್ರ ಎನ್ನುತ್ತ ರಂಗಭೂಮಿಗೂ, ಚಿತ್ರ ಜಗತ್ತಿಗೂ ಇರುವ ವ್ಯತ್ಯಾಸಗಳನ್ನು ತಿಳಿಸಿದರು.
ನಾಟಕೀಯ ಅನುಭವ ಎಂದರೇನು?) ಎಂಬ ಪ್ರಶ್ನೆಯನ್ನು ಎತ್ತಿದ ಅವರು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನನಗೆ ಸ್ವತಂತ್ರ ಸಿಕ್ಕಿದೆ. ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂಬುದೇ ನಾಟಕೀಯ ಕ್ಷಣಗಳು ಎಂದು ತಿಳಿಸುತ್ತ, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಅನಂತಮೂರ್ತಿಯವರ ಸಂಸ್ಕಾರ, ದೇವನೂರ ಮಹಾದೇವರ ಕುಸುಮಬಾಲೆ ಇವೆಲ್ಲ ಅದ್ಭುತವಾದ ಡ್ರಮಾಟಿಕ್ ಮೂವ್ಮೆಂಟ್ಸ್ಗಳು ಎಂದರು.
ವ್ಯಾಸನ ಮಹಾಭಾರತದಲ್ಲಿ ಕೃಷ್ಣ ಕರ್ಣರ ಭೇಟಿ ಕುಂತಿ ಕರ್ಣರ ಭೇಟಿಯ ಪ್ರಸಂಗಗಳಂತಹ ಅನೇಕ ಡ್ರೆಮಾಟಿಕ್ ಮೂವ್ಮೆಂಟ್ಸ್ಗಳು ಅನುಭವಕ್ಕೆ ಸಿಗುತ್ತವೆ. ಇಲ್ಲಿ ವ್ಯಾಸನ ಕಲ್ಪನೆಯ ಸ್ತರಗಳು(ಇಮ್ಯಾಜಿನೇಷನ್ ಲವೆಲ್ಸ್) ಅದ್ಭುತವಾಗಿವೆ ಎಂದು ನಾಟಕದ ಸಂವೇದನಾ ಶೀಲತೆಯನ್ನು ತಿಳಿಸುತ್ತ ಇಂತಹ ಕ್ಷಣಗಳು ನಾಟಕ ವಿಭಾಗಕ್ಕೆ ಮತ್ತೆ ಮತ್ತೆ ಸಿಗಲಿ ಎಂದು ಹಾರೈಸಿದರು.
ಬೆಂಗಳೂರಿನ ನಾಟಕಕಾರರು ಮತ್ತು ಖ್ಯಾತ ಸಾಹಿತಿಗಳಾದ ಡಾ. ರಾಜಪ್ಪ ದಳವಾಯಿ ಅವರು ವಿಶೇಷ ಉಪನ್ಯಾಸ ನೀಡುತ್ತ, ಕನ್ನಡ ವಿಶ್ವವಿದ್ಯಾಲಯವು ನಾಟಕ ವಿಭಾಗವನ್ನು ಆರಂಭಿಸುವ ಪೂರ್ವದಲ್ಲಿಯೂ ಕಲಿಕೆಯ ದೃಷ್ಟಿಯಿಂದ ನಾಟಕಗಳ ಕುರಿತು ರಚನಾತ್ಮಕ ಕೆಲಸಗಳನ್ನು ಮಾಡುತ್ತ ಬಂದಿದೆ. ರಂಗಭೂಮಿ ಕುರಿತು ನಾವು ಪಶ್ಚಿಮದಿಂದ ಕಲಿತು, ಕಲಿಸಿದವರಿಗೇ ಕಲಿಸುವಷ್ಟು ನಾವು ನಾಟಕದಲ್ಲಿ ಮುಂದುವರೆದಿದ್ದೇವೆ. ಆದಿಕವಿ ಪಂಪನು “ರಂಗಭೂಮಿ” ಪದವನ್ನು ಟಂಕಿಸಿದ್ದಾನೆ. ಅದು ಇಂದಿಗೂ ಜೀವಂತವಾಗಿದೆ. ರಂಗಕಲಾವಿದರ ಕುರಿತು ಮಾಹಿತಿ ಇಲ್ಲದಿರುವುದೇ ರಂಗಭೂಮಿಯ ಬಹುದೊಡ್ಡ ಕೊರತೆಯಾಗಿದೆ. ಇದರಿಂದ ಸಾಂಸ್ಕೃತಿಕ ಇತಿಹಾಸ ಪುನಾರಚನೆ ಮಾಡುವುದು ಬಹು ಕಷ್ಟದ ಕೆಲಸ ಎನ್ನುತ್ತ, ದಕ್ಷಿಣ ಮತ್ತು ಉತ್ತರದ ಭಿನ್ನತೆ ಒಡೆದು ಹಾಕಿ, ಬೆಸೆಯುವ ಕೆಲಸ ನಾಟಕ ವಿಭಾಗದಿಂದ ಆಗಬೇಕಿದೆ. ಆತ್ಮೀಯಶತೃ ಯಾರು? ಕಲ್ಪಿತ ಶತೃ ಯಾರು ಎಂದು ರಂಗಭೂಮಿ ತಿಳಿಸುತ್ತದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮರಿಯಮ್ಮನಹಳ್ಳಿಯ ರಂಗಕಲಾವಿದೆಯಾದ ಶ್ರೀಮತಿ ಕೆ. ನಾಗರತ್ನಮ್ಮ ಮಾತನಾಡುತ್ತ ಕಲಾವಿದರಿಗೆ ನಿವೃತ್ತಿಯೇ ಇಲ್ಲ. ರಂಗಭೂಮಿ ನನಗೆ ಎಲ್ಲ ಕೊಟ್ಟಿದೆ. ಮಹಿಳೆಯರು ನಾಟಕವನ್ನು ವೃತ್ತಿಯಾಗಿ ಅಲ್ಲದಿದ್ದರೂ, ಪ್ರವೃತ್ತಿಯಾಗಿ ಬೆಳೆಸಲಿ ಎನ್ನುತ್ತ, ಈ ಮುಪ್ಪಿನಲ್ಲಿಯೂ ತಾವು ನಾಟಕ ವಿಭಾಗದ ಸೇವೆಗೆ ಸಿದ್ಧವಿರುವುದಾಗಿ ಪ್ರೋತ್ಸಾಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ನಾಟಕ ಮತ್ತು ರಂಗಭೂಮಿ ಬದುಕಿನ ದಾರಿ ತೋರಿಸಬೇಕು. ಬದುಕುವ ದಾರಿಯನ್ನೂ ತೋರಿಸಬೇಕು. ಹಿರಿಯರ ತಲ್ಲಣ ಮತ್ತು ಕಿರಿಯರು ಹಾದಿ ತಪ್ಪುವುದನ್ನು ತಡೆಯಲು ನಾಟಕಗಳಿಂದ ಸಾಧ್ಯ.
ಉತ್ತರ ಕರ್ನಾಟಕ ಕಲಾವಿದರನ್ನು ಕೊಟ್ಟ ತವರು. ಇಲ್ಲಿಯ ಕಲಾವಿದರಿಗೆ ಆಧುನಿಕ ಲೋಕಕ್ಕೆ ಹೇಗೆ ತಮ್ಮನ್ನು ಸಿದ್ಧಗೊಳಿಸಿಕೊಳ್ಳಬೇಕು ಎಂಬ ಜ್ಞಾನದ ಕೊರತೆ ಇದೆ. ಏಕರೂಪ ಭಾಷೆ ಅಹಂಕಾರದಿಂದ ಬಳಲುತ್ತಿರುವ ಮಾಧ್ಯಮಕ್ಕೆ ಉತ್ತರ ಕರ್ನಾಟಕದ ಭಾಷೆ ಪರ್ಯಾಯವಾಗುವ ಶಕ್ತಿ ಹೊಂದಿದೆ ಎಂದರು. ನಾಟಕ ವಿಭಾಗದಲ್ಲಿ ನೇಪಥ್ಯದ ಹಿಂದೆ ಮಾಡುವ ಕೆಲಸಗಳಿಗೆ ಆದ್ಯತೆ ನೀಡಿ ತರಬೇತಿ ನೀಡಲಾಗುವುದು. ಪಿಎಚ್.ಡಿ.ಯ ಜೊತೆಗೆ ಈ ನೇಪಥ್ಯದ ಅಧ್ಯಯನದ ಕುರಿತು ಕೋರ್ಸುಗಳನ್ನು ಆರಂಭಿಸುವ ಇಂಗಿತವನ್ನು ಕುಲಪತಿಗಳು ವ್ಯಕ್ತಪಡಿಸಿದರು.
ನಾಟಕ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕಕುಮಾರ ರಂಜೇರೆ ಪ್ರಾಸ್ತಾವಿಕ ನುಡಿಯುತ್ತ ಮುಖ್ಯವಾಹಿನಿಯಿಂದ ದೂರ ಇರುವ ಪಾರಂಪರಿಕ ಜ್ಞಾನಗಳನ್ನು ನಾಟಕ ವಿಭಾಗದಿಂದ ಅಧ್ಯಯನ ಮಾಡುವ ಪ್ರಯತ್ನವಿದೆ ಎಂದರು.
ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಡಾ. ಶಿವಾನಂದ ವಿರಕ್ತಮಠ ನಿರೂಪಿಸಿ ವಂದಿಸಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥನೆ ಮತ್ತು ರಂಗಗೀತೆ ಹಾಡಿದರು.
ಉದ್ಘಾಟನೆಯ ನಂತರ ಪ್ರೊ.ಸುಧೀಂದ್ರ ಶರ್ಮಾ ನಿರ್ದೇಶನದ ಅಂಟಾನ್ ಚೆಕಾಫ್ ಕತೆಯ ರೂಪವಾದ ಪಂಥ ನಾಟಕದ ಏಕವ್ಯಕ್ತಿ ಪ್ರದರ್ಶನವನ್ನು ಶ್ರೀ ಚೆಸ್ವಾ ನೀಡಿದರು. ಶಂಕರ ಮೆಟ್ರಿ ನಿರ್ದೇಶಿಸಿದ ಲಂಕೇಶ್ ಅವರ ಕತೆಯಾಧರಿತ ಸಹಪಾಠಿ ನಾಟಕವನ್ನು ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸಂಜೆ ಸಂಗೀತ ವಿಭಾಗದ ಅಧ್ಯಾಪಕರು ಮತ್ತು ಸದಸ್ಯರಿಂದ ಸಂಗೀತ ದೌತಣವಿತ್ತು.