ಹೊಲಿಯ-ಗೊಲರ (ಕನ್ನಡ) ಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ – ಕಾರ್ಯಾಗಾರ

 

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ಭಾಷಾಧ್ಯಯನ ವಿಭಾಗ ಮತ್ತು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಆಯೋಜಿಸಿದ ಹೊಲಿಯ-ಗೊಲರ (ಕನ್ನಡ) ಭಾಷೆ : ರಾಷ್ಟ್ರೀಯ ವಿಚಾರ ಸಂಕಿರಣ-ಕಾರ್ಯಾಗಾರವು ಬುಡಕಟ್ಟು ಅಧ್ಯಯನ ವಿಭಾಗದ ಚಾವಡಿಯಲ್ಲಿ ೨೦೧೫ರ ನವಂಬರ್ ೨೬-೩೦ರವೆಗೆ ಹಮ್ಮಿಕೊಂಡಿರುವುದನ್ನು ದಿನಾಂಕ ೨೬.೧೧.೨೦೧೫ರ ಇಳಿಹೊತ್ತು ೩ ಗಂಟೆಗೆ ಹೊಲಿಯ-ಗೊಲರ (ಕನ್ನಡ) ಭಾಷೆ ಮಾತನಾಡುವುದರ ಮೂಲಕ ಮಧ್ಯಪ್ರದೇಶದ ಬಾಲಾಘಾಟ ಜಿಲ್ಲೆಯ ತಿರೊಡಿ ತಾಲೂಕಿನ ಕನ್ಹಡಗಾಂವ್ ಗ್ರಾಮದ ಗೊಲರ ಅಲೆಮಾರಿ ಬುಡಕಟ್ಟಿನ ಹಿರಿಯ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಭಿವರಾಬಾಯಿ ಗೇಂದಲಾಲ ಗರ್ದೇರ ಅವರು ವಿದ್ಯುಕ್ತವಾಗಿ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ನುಡಿಯಲ್ಲಿ ತಮ್ಮ ಮನೆಮಾತು ದಿನೆದಿನೇ ಮರೆಮಾಚುತ್ತಿದೆ. ಹೊಸ ತಲೆಮಾರಿನ ತಮ್ಮ ಜನ ಗೊಲರ(ಕನ್ನಡ) ಬದಲಾಗಿ ಹಿಂದಿ ಭಾಷೆಯಲ್ಲಿಯೇ ವ್ಯವಹರಿಸುತ್ತಿರುವುದಕ್ಕೆ ಆಂತಕ ವ್ಯಕ್ತಪಡಿಸಿದರು. ಭಾಷೆಯ ಉಳಿಯುವಿಕೆಗಾಗಿ ಚಿಂತಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅಭಿನಂದಿಸಿದರು.

ವಿಚಾರ ಸಂಕಿರಣ-ಕಾರ್ಯಾಗಾರದ ಆಶಯ ನುಡಿಗಳನ್ನು ಅಳಿವಿನಂಚಿನ ಹೊಲಿಯ(ಕನ್ನಡ) ಭಾಷೆ ಅಧ್ಯಯನದ ಹಿರಿಯ ಸಂಪನ್ಮೂಲ ವ್ಯಕ್ತಿಗಳು, ಹಿರಿಯ ಭಾಷಾ ತಜ್ಞರು ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ ಕೆ ಕೆಂಪೇಗೌಡ ಆಡಿದರು. ಅವರು ೨೦೧೫ರ ಸೆಪ್ಟೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದ ಬಾಲಾಘಾಟ, ಶಿವನಿ ಜಿಲ್ಲೆಗಳಲ್ಲಿಯ ಹೊಲರ ಮತ್ತು ಗೊಲರ ಸಮುದಾಯಗಳು ವಾಸವಾಗಿದ್ದ ನೆಲೆಗಳಲ್ಲಿ ಕೈಗೊಂಡ ಕ್ಷೇತ್ರಕಾರ್ಯದ ಅನುಭವಗಳನ್ನು ಒಗ್ಗೂಡಿಸಿಕೊಂಡು ತಮ್ಮ ಅನುಭವ ಹಂಚಿಕೊಂಡರು. ಹೊಲಿಯ-ಗೊಲರ (ಕನ್ನಡ) ಭಾಷೆ ಕನ್ನಡ ಭಾಷೆಯ ಒಂದು ರೂಪವೇ ಎಂಬುದರಲ್ಲಿ ಅನುಮಾನವಿಲ್ಲ. ಇದು ಅಳಿವಿನಂಚಿನಲ್ಲಿದೆ. ಇವರ ಭಾಷೆ ಉತ್ತರ ಕರ್ನಾಟಕದ ಭಾಷೆಗೆ ಹೆಚ್ಚು ಹೋಲಿಕೆಯಾಗುವುದು. ಈ ಭಾಷೆ ಮತ್ತು ಜನಸಂಸ್ಕೃತಿಯ ಮೂಲ ಮತ್ತು ಪ್ರಸಾರವನ್ನು ವೈಜ್ಞಾನಿಕವಾಗಿ ವಿಭಿನ್ನ ಶಿಸ್ತಿನ ತಜ್ಞರು ಅಧ್ಯಯನಿಸಲು ಮುಂದಾಗಬೇಕಾಗಿದೆ ಎಂದರು.

ವಿಚಾರ ಸಂಕಿರಣ-ಕಾರ್ಯಾಗಾರದ ಸಂಚಾಲಕರು ಮತ್ತು ಅಳಿವಿನಂಚಿನ ಹೊಲಿಯ(ಕನ್ನಡ) ಭಾಷೆ ಅಧ್ಯಯನದ ಪ್ರಧಾನ ಸಂಶೋಧಕರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ ಕೆ ಎಂ ಮೇತ್ರಿ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಅವರು ಭಾರತದ ಜನಗಣತಿ ೨೦೧೧ರ ಅಂಕಿಅಂಶಗಳ ಪ್ರಕಾರ ಸಹಸ್ರಾರು ಬುಡಕಟ್ಟು ಮೂಲ ನುಡಿಗಳು ಮರೆಮಾಚುತ್ತಿರುವುದನ್ನು ಮತ್ತು ನೂರಾರು ನುಡಿ/ಭಾಷೆಗಳು ಅಳಿವಿನಂಚಿನಲ್ಲಿರುವುದನ್ನು ಮನಗಾಣಲಾಗಿದೆ. ಬುಡಕಟ್ಟುಗಳ ಸಾಂಸ್ಕೃತಿಕ ಅನನ್ಯತೆಗಳಲ್ಲಿ ಭಾಷೆ ಪ್ರಧಾನವಾದುದು. ಬುಡಕಟ್ಟುಗಳಲ್ಲಿಯ ನುಡಿಗಳು ಮರೆತುಹೋದರೆ ಅದರೊಂದಿಗೆ ಬುಡಕಟ್ಟುಗಳ ಅಮೂಲ್ಯ ಪಾರಂಪರಿಕ ಜ್ಞಾನವೂ ಮರೆಮಾಚುತ್ತದೆ. ಇದನ್ನರಿತ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನವು ದೇಶದ ಹಲವಾರು ವಿಶ್ವವಿದ್ಯಾಲಯಗಳಿಂದ ಸಂಘ ಸಂಸ್ಥೆಗಳಿಂದ ಭಾಷಾ ತಜ್ಞರಿಂದ ಅಳಿವಿನಂಚಿನಲ್ಲಿರುವ ಭಾಷೆಗಳ ಕುರಿತು ವೈಜ್ಞಾನಿಕ ಅಧ್ಯಯನ ಮಾಡಿಸಲು ಮುಂದಾಯಿತು. ಈ ಪಟ್ಟಿಯಲ್ಲಿಯ ಹೊಲಿಯ ನುಡಿ/ಭಾಷೆಯ ಅಧ್ಯಯನದ ಜವಾಬ್ದಾರಿಯನ್ನು ನನಗೆ ೨೦೧೫ರ ಜನವರಿಯಲ್ಲಿ ವಹಿಸಿತು. ಈ ಅಧ್ಯಯನಕ್ಕೆ ಹಿರಿಯ ಭಾಷಾತಜ್ಞರಾದ ಮೈಸೂರಿನ ಡಾ ಕೆ ಕೆಂಪೇಗೌಡ ಮತ್ತು ಬೀದರ ಜಿಲ್ಲೆಯ ಭಾಷಿಕರಾದ ಡಾ ಶ್ರೀನಿವಾಸ ಜಿ ಬೇಂದ್ರೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸುತ್ತಲಿದ್ದಾರೆ.

ಹೊಲಿಯ ನುಡಿ ಮತ್ತು ಕನ್ನಡ ಭಿನ್ನವಲ್ಲ. ಕನ್ನಡ ಭಾಷೆಯ ಮೂಲಬೇರು ಹೊಲಿಯ ಮತ್ತು ಗೊಂಡಿಯಲ್ಲಿ ಅಡಗಿರುವುದೇ ಎಂಬುದನ್ನು ಚಿಂತಿಸಬೇಕಾಗಿದೆ. ಈ ಭಾಷೆಯ ಪಳುವಳಿಕೆಗಳು ಗೊಂಡ ಬುಡಕಟ್ಟಿನ ಬಾಹುಳ್ಯವುಳ್ಳ ಮಧ್ಯ ಭಾರತದ ಸಾತಪುಡ ಪರ್ವತ ಶ್ರೇಣಿಯ ನರ್(ಗಂಡು)+ಮಾದಾ (ಹೆಣ್ಣು)>ನರ್ಮದಾ, ವೇನ್(ಜನ)-ಪೇನ್(ದೈವ)ಗಂಗಾ ನದಿ ಜಲಾನಯನದಲ್ಲಿ ವಾಸವಾಗಿದ್ದ ಗೊಂಡ ಬುಡಕಟ್ಟಿನ ಹೊಲಿಯ-ಗೊಲರ (ಕೃಷಿಕ-ಪಶುಪಾಲಕ) ಸಮುದಾಯಗಳಲ್ಲಿ ಕಾಣಸಿಗುತ್ತವೆ. ಈ ಭಾಷೆಯು ಕನ್ನಡ ನಾಡಿನ ಗೋದಾವರಿ ಜಲಾನಯನದ ಬೀದರ ಜಿಲ್ಲೆಯ ಕನ್ನಡ ಭಾಷೆಗೆ ಹೆಚ್ಚು ಹೋಲುತ್ತದೆ.

ಹೊಲಿಯ ಸಮುದಾಯವು ಮಧ್ಯಪ್ರದೇಶದ ಬಾಲಾಘಾಟ, ಶಿವನಿ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರು ಹೊಲಿಯ (ಕನ್ನಡ) ಭಾಷೆಯಲ್ಲಿಯೇ ಮಾತನಾಡುತ್ತಾರೆ. ಈ ಭಾಷೆ ಈ ಪ್ರದೇಶದ ಗೊಲರ ಸಮುದಾಯದಲ್ಲಿಯೂ ಬಳಕೆಯಲ್ಲಿದೆ. ಇದಕ್ಕೆ ಅವರು ಗೊಲರ ಭಾಷೆ ಎಂದು ಕರೆಯುತ್ತಾರೆ. ಬಾಲಾಘಾಟ ಜಿಲ್ಲೆಯಲ್ಲಿ ಕನ್ಹಡ(ಕನ್ನಡ)ಗಾಂವ್, ಚಾಕಾ+ಯೇಟಿ(ಕುರಿ)>ಚಾಕಾಹೇಟಿ ಗ್ರಾಮಗಳಲ್ಲಿಯೂ ಗೊಲರ ಸಮುದಾಯದವರಿದ್ದಾರೆ. ಕುರಿಗಳ ತಂಗುವಿಕೆಯ ತಾಣಗಳಿಗೆ ಹಟ್ಟಿ ಎನ್ನುವರು. ಕರ್ನಾಟಕದಲ್ಲಿ ಪಶುಪಾಲಕರ ಸಹಸ್ರಾರು ಹಟ್ಟಿಗಳಿವೆ. ಅಲ್ಲಿಯ ಈ ಗ್ರಾಮಗಳಲ್ಲಿರುವ ಕನ್ಹಡ (ಕನ್ನಡ) ಮತ್ತು ಹೇಟಿ (ಹಟ್ಟಿ) ಪದಗಳು ಕನ್ನಡ ಭಾಷಿಗರಿಗೆ ಚಿಂತನಾರ್ಹವಾಗುವವು.

ಮಧ್ಯ ಪ್ರದೇಶದ ಹೊಲೆಯ ಮತ್ತು ಗೊಲರ ಸಮುದಾಯಗಳು ಕಳ್ಳುಬಳ್ಳಿಯವರು ಎಂಬುದಕ್ಕೆ ಐತಿಹ್ಯವೊಂದು ಹೀಗಿದೆ: ಪಶುಪಾಲಕ ಬುರ್ರ್ಯಾ ಕಾರ್ರ್ಯೋ ಇವರಿಗೆ ಗೊಲರ ಮತ್ತು ಹೊಲರ ಎಂಬ ಇಬ್ಬರು ಮಕ್ಕಳಿದ್ದರು. ಹಿರಿಯ ಮಗ ಗೊಲರ ಅನಾರೋಗ್ಯದಿಂದಿದ್ದಾಗ ಚಿಕ್ಕಮಗ ಹೊಲರನಿಗೆ ಪಶುಪಾಲನೆಗಾಗಿ ತಂದೆ ಕಾಡಿಗೆ ಕಳುಹಿಸುತ್ತಾನೆ. ತಂದೆಯ ಆದೇಶದ ಪ್ರಕಾರ ಹೊಲರ ಪಶುಪಾಲನೆಗೆ ಕಾಡಿಗೆ ಹೋಗುತ್ತಾನೆ. ಕಾಡಿನಲ್ಲಿ ಹಸಿವೆಯಾದಾಗ ಕುರಿಮರಿಯನ್ನು ಕೊಂದು ತಿಂದು ಸಾಯಂಕಾಲ ಪಶುಗಳೊಂದಿಗೆ ಹೊಲರ ಮನೆಗೆ ಮರಳುತ್ತಾನೆ. ಪಶುಗಳಲ್ಲಿ ಕುರಿಮರಿ ಕಾಣೆಯಾಗಿರುವುದನ್ನು ತಂದೆ ವಿಚಾರಿಸಿದ್ದಾಗ ಹೊಲರ ಸತ್ಯ ಸಂಗತಿಯನ್ನು ತಿಳಿಸುತ್ತಾನೆ. ತಂದೆ ಸಿಟ್ಟಿಗೆ ಬಂದು ನೀನು ಪಶುಪಾಲನೆಗೆ ಅರ್ಹನಲ್ಲ ಎಂದು ಪಶುಪಾಲನೆಯಿಂದ ಹೊರಹಾಕುತ್ತಾನೆ. ಪಶುಪಾಲನೆಯಿಂದ ಹೊರಹೋದ ಹೊಲರನ ಸಂತತಿಯೇ ಹೊಲೆಯ ಸಮುದಾಯವಾಯಿತು. ಪಶುಪಾಲನೆಯಲ್ಲಿಯೇ ಉಳಿದ ಗೊಲರನ ಸಂತತಿಯು ಗೊಲರ ಸಮುದಾಯವಾಯಿತು. ಈ ಐತಿಹ್ಯಕ್ಕೆ ಪುಷ್ಟಿ ನೀಡುವ ಅಂಶಗಳು ಈ ಎರಡೂ ಸಮುದಾಯಗಳಲ್ಲಿಯೂ ಇರುವವು. ಈ ಎರಡೂ ಸಮುದಾಯಗಳಲ್ಲಿ ಒಂದೇ ಭಾಷೆ, ಬೆಡಗು, ದೈವಗಳಿರುವವು. ಬೊಮಚೇರ, ದಶಮೇರ, ಗಡೇರ, ಪಿಲಗೇರ, ವಾತಗುನೇರ ಇತ್ಯಾದಿ ಬೆಡಗುಗಳಲ್ಲಿಯ ಅಂತ್ಯಪದಕ್ಕೆ ಗೊಂಡಿ ಭಾಷೆಯಲ್ಲಿ ಅರ್ಥಲಭ್ಯವಾಗುವುದು.  ಇವುಗಳಲ್ಲಿಯ ಅಂತ್ಯಪದ ’ಏರ’ ಗೊಂಡಿ ಪದವಾಗಿದ್ದು, ಇದರ ಅರ್ಥ ’ನೀರು’ ಎಂದಾಗುತ್ತದೆ. ಇವರಲ್ಲಿಯ ಹೊಲೆರಾಯ, ಬಡಾ(ದೊಡ್ಡ)ದೇವ, ದುಲ್ಹಾದೇವ, ಏಳುದೇವರು, ಬಾಗದೇವ, ಮಣಿಗಾರದೇವ, ನಾಗದೇವ, ಮಾತಾಮಾಯಾ, ಮಾವಲಿಮಾ ಇತ್ಯಾದಿಗಳು ಗೊಂಡರಲ್ಲಿಯೂ ಪೂಜ್ಯನೀಯವಾಗಿರುವವು. ಇಂದು ಹೊಲೆಯ, ಗೊಲರ ಮತ್ತು ಗೊಂಡ ಬುಡಕಟ್ಟುಗಳು ಸಮನಾಂತರದಲ್ಲಿ ಅಲ್ಲಿ ಗುರುತಿಸಿಕೊಳ್ಳುತ್ತಿವೆ. ಮೀಸಲಾತಿಯ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಹೊಲಿಯ ಜಾತಿ, ಗೊಲರ ಸಮುದಾಯ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಪಟ್ಟಿಯಲ್ಲಿ ಮತ್ತು ಗೊಂಡ ಸಮುದಾಯವು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿ ಮಧ್ಯ ಪ್ರದೇಶದಲ್ಲಿ ದಾಖಲಾಗಿವೆ.

ಮಧ್ಯ ಪ್ರದೇಶದಲ್ಲಿ ಹೊಲಿಯ ಮತ್ತು ಮಹರ್ ಸಮುದಾಯಗಳು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿವೆ. ಕರ್ನಾಟಕದಲ್ಲಿ ಹಲವೆಡೆ ಹಾಗನಿಸುತ್ತಿಲ್ಲ. ಮಧ್ಯ ಪ್ರದೇಶದಲ್ಲಿ ಗೊಲರ ಮತ್ತು ಯಾದವ ಸಮುದಾಯಗಳು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿವೆ. ಕರ್ನಾಟಕದ ಗೊಲ್ಲರಲ್ಲಿಯೂ ಹಲವಾರು ಪ್ರಬೇಧಗಳಿರುವವು. ಮಧ್ಯ ಪ್ರದೇಶದ ಈ ಸಮುದಾಯಗಳಲ್ಲಿಯ ಭಾಷೆ ಮತ್ತು ಸಂಸ್ಕೃತಿಯನ್ನು ಕರ್ನಾಟಕದ ಈ ಹಿನ್ನೆಲೆಯ ಸಮುದಾಯಗಳಲ್ಲಿ ಗುರುತಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಚರಿತ್ರೆಯ ಮೇಲೆ ಹೊಸ ಬೆಳಕು ಚಲ್ಲಲು ಹೊಲಿಯ-ಗೊಲರ(ಕನ್ನಡ) ಭಾಷೆ – ರಾಷ್ಟ್ರೀಯ ವಿಚಾರ ಸಂಕಿರಣ-ಕಾರ್ಯಾಗಾರ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಚಾವಡಿಯಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಮತ್ತು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದ ಸಹಯೋಗದಲ್ಲಿ ೨೦೧೫ರ ನವೆಂಬರ್ ೨೬ ರಿಂದ ೩೦ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ವಿಚಾರ ಸಂಕಿರಣದಲ್ಲಿ ಮಧ್ಯಪ್ರದೇಶ ರಾಜ್ಯದ ಹೊಲಿಯ ಸಮುದಾಯದ ೧೦ ಮತ್ತು ಗೊಲರ ಸಮುದಾಯದ ೧೦ ಹಾಗೂ ಗೊಂಡ ಬುಡಕಟ್ಟಿನ ೩ ಜನ ಭಾಷಿಕ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದಾರೆ. ಕರ್ನಾಟಕದ ದ್ರಾವಿಡ ಬುಡಕಟ್ಟುಗಳ ಭಾಷಿಕ ತಜ್ಞರು ಆಸಕ್ತಿಯಿಂದ ಭಾಗವಹಿಸುತ್ತಲಿದ್ದಾರೆ. ಈ ವಿಚಾರ ಸಂಕಿರಣ- ಕಾರ್ಯಾಗಾರದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು.

ವಿಚಾರ ಸಂಕಿರಣ-ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಧ್ಯಪ್ರದೇಶದ ಶಿವನಿ ಜಿಲ್ಲೆಯ ಮೊಹಬರ್ರಾ ಗ್ರಾಮದ ಹೊಲಿಯ ಸಮುದಾಯದ ಹೊಲಿಯ(ಕನ್ನಡ) ಭಾಷೆಯ ಹಿರಿಯ ಸಂಪನ್ಮೂಲ ವ್ಯಕ್ತಿ ಶ್ರೀ ಭಾದುಲಾಲ ಗಡೇರ ಅವರು ತಮ್ಮ ಅತಿಥಿ ಭಾಷಣದಲ್ಲಿ ಮಧ್ಯಪ್ರದೇಶದ ಹೊಲಿಯ ಸಮುದಾಯದ ಸಾಮಾಜಿಕ ಮತ್ತು ಭಾಷಿಕ ಪರಿಚಯವನ್ನು ನೀಡಿದರು. ಅಳಿವಿನಂಚಿನ ಹೊಲಿಯ(ಕನ್ನಡ) ಭಾಷೆಯ ಸಂರಕ್ಷಣೆಗೆ ಸಹಕರಿಸಲು ಎಲ್ಲರನ್ನು ವಿನಂತಿಕೊಂಡರು.

ವಿಚಾರ ಸಂಕಿರಣ-ಕಾರ್ಯಾಗಾರದ ಇನ್ನೊರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಧ್ಯ ಪ್ರದೇಶದ ಶಿವನಿ ಜಿಲ್ಲೆಯ ಸಿಂದ್ರಾದೇಹಿ ಗ್ರಾಮದ ಗೊಂಡ ಬುಡಕಟ್ಟಿನ ಹಿರಿಯ ಸಂಪನ್ಮೂಲ ವ್ಯಕ್ತಿ ಶ್ರೀ ಬಿಸನ್‌ಸಿಂಗ್ ಪರತೇತಿ ಅವರು ತಮ್ಮ ಅತಿಥಿ ಭಾಷಣದಲ್ಲಿ ಮಧ್ಯಪ್ರದೇಶದ ಹೊಲಿಯ ಸಮುದಾಯದ ಸಾಮಾಜಿಕ ಮತ್ತು ಭಾಷಿಕ ಪರಿಚಯವನ್ನು ಗೊಂಡ ಬುಡಕಟ್ಟಿನೊಂದಿಗೆ ತೌಲನಿಕವಾಗಿ ಮಾಡಿಕೊಟ್ಟರು. ಗೊಂಡ ಬುಡಕಟ್ಟಿನ ದೈವಗಳ, ನಂಬಿಕೆ ಆಚರಣೆಗಳ ಮತ್ತು ಗೊಂಡಿ ಭಾಷಿಕ ಬಾಂಧವ್ಯ ಹೊಲಿಯ ಮತ್ತು ಗೊಲರ ಸಮುದಾಯಗಳಲ್ಲಿ ಹಾಸುಹೊಕ್ಕಾಗಿದೆ. ಅಳಿವಿನಂಚಿನ ಹೊಲಿಯ(ಕನ್ನಡ) ಭಾಷೆಯ ಸಂರಕ್ಷಣೆಗೆ ಮತ್ತು ಹೊಲಿಯ ಮತ್ತು ಗೊಲರ ಸಮುದಾಯಗಳ ಅಭಿವೃದ್ದಿಗೆ ಸಹಕರಿಸಲು ಎಲ್ಲರನ್ನು ವಿನಂತಿಕೊಂಡರು.

ವಿಚಾರ ಸಂಕಿರಣ-ಕಾರ್ಯಾಗಾರದ ಅಧ್ಯಕ್ಷೀಯ ನುಡಿಗಳನ್ನು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಕನ್ನಡ ಭಾಷಾಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ ಡಿ ಪಾಂಡುರಂಗಬಾಬು ಅವರು ಆಡಿದರು. ಅವರು ಈ ವಿಚಾರ ಸಂಕಿರಣ-ಕಾರ್ಯಾಗಾರ ಮಧ್ಯಪ್ರದೇಶದ ಬುಡಕಟ್ಟು ಗಳಲ್ಲಿಯ ಕನ್ನಡ ಭಾಷಾಧ್ಯಯನಕ್ಕೆ ಅಮೂಲ್ಯವಾದುದು. ಇದರ ಲಾಭವನ್ನು ಪ್ರಧಾನವಾಗಿ ಬುಡಕಟ್ಟು ಅಧ್ಯಯನ ವಿಭಾಗ ಮತ್ತು ಕನ್ನಡ ಭಾಷಾಧ್ಯಯನ ವಿಭಾಗ ಹಾಗೂ ಕನ್ನಡ ವಿಶ್ವವಿದ್ಯಾಲಯದ ಎಲ್ಲ ಕನ್ನಡಪರ ಚಿಂತಕರು ಪಡೆದುಕೊಳ್ಳಲು ಮುಂದಾಗಬೇಕು ಎಂದರು.

ವಿಚಾರ ಸಂಕಿರಣ-ಕಾರ್ಯಾಗಾರದ ಆರಂಭದಲ್ಲಿ ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ ಪಿ ಮಹದೇವಯ್ಯ ಅವರು ಸಭಿಕರನ್ನು ಸ್ವಾಗತಿಸಿದರು. ಕೊನೆಯಲ್ಲಿ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ ಚಲುವರಾಜು ಅವರು ವಂದಿಸಿದರು. ಬುಡಕಟ್ಟು ಅಧ್ಯಯನ ವಿಭಾಗದ ಪಿಡಿಎಫ್ ಸಂಶೋಧನಾರ್ಥಿ ಡಾ ಮಲ್ಲಿಕಾರ್ಜುನ ಬಿ ಮಾನ್ಪಡೆ ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s