ತಿಂಗಳು: ಜನವರಿ 2016

ಪ್ರೌಢಶಾಲಾ ಶಿಕ್ಷಕರ ವಿಜ್ಞಾನ ಕಮ್ಮಟದ ಉದ್ಘಾಟನೆ

020301ಮೆಡಿಕಲ್, ಇಂಜಿನಿಯರಿಂಗ್ ಕ್ಷೇತ್ರ ಹೊರತುಪಡಿಸಿ ಅಧ್ಯಯನಕ್ಕೆ ವಿಜ್ಞಾನದಲ್ಲಿ ಅನೇಕ ವಿಷಯಗಳಿವೆ. ನಾವೆಲ್ಲ ಗಮನಹರಿಸಬೇಕಾಗಿದೆ ಎಂದು ಕಲಬುರಗಿಯ ಖ್ಯಾತವೈದ್ಯ ವಿಜ್ಞಾನಿಯಾದ ನಾಡೋಜ ಡಾ. ಪಿ.ಎಸ್.ಶಂಕರ್ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ವಿಜ್ಞಾನಗಳ ನಿಕಾಯವು ಬಳ್ಳಾರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ೧೮ ಜನವರಿ ೨೦೧೬ರಿಂದ ೨೦ ಜನವರಿ ೨೦೧೬ರ ವರೆಗೆ ಭುವನವಿಜಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರೌಢಶಾಲಾ ಶಿಕ್ಷಕರ ವಿಜ್ಞಾನ ಕಮ್ಮಟವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶಿಕ್ಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಕರು ಜೀವನ ಪೂರ್ತಿ ವಿದ್ಯಾರ್ಥಿಗಳೇ. ಪಠ್ಯಕ್ರಮದಲ್ಲಿರುವ ವಿಜ್ಞಾನವನ್ನು ವಿದ್ಯಾರ್ಥಿಗಳ ಜೀವನಕ್ಕೆ ಅನುಕೂಲವಾಗುವ ಹಾಗೆ ಅನುಭವದ ಹಿನ್ನೆಲೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಕಲಿಸಬೇಕು ಎಂಬ ಹಿನ್ನೆಲೆಯಲ್ಲಿ ವಿಜ್ಞಾನ ಶಿಕ್ಷಕರಿಗಾಗಿ ಈ ಕಮ್ಮಟ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಇಂದು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಯುವ ಉತ್ಸಾಹ ಕಡಿಮೆಯಾಗುತ್ತಿದೆ. ಅವರು ಕೇವಲ ಪ್ರಶ್ನೆ ಉತ್ತರಗಳ ನೋಟ್ಸ್ ಮೇಲೆ ಅವಲಂಬಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ವಿಜ್ಞಾನದ ಕೆಲವು ಪಾರಿಭಾಷಿಕ ಪದಗಳನ್ನು ಕಲಿಸಲು ಶಿಕ್ಷಕರಿಗೆ ನಿಜವಾಗಿಯೂ ಕಷ್ಟವಾಗುತ್ತದೆ. ಆದ್ದರಿಂದ ಏಕರೂಪದ ಅರ್ಥ ಹೊಂದಿರುವಂತಹ ವಿಜ್ಞಾನದ ಪಾರಿಭಾಷಿಕ ಪದಕೋಶವನ್ನು ಕನ್ನಡ ವಿಶ್ವವಿದ್ಯಾಲಯ ವಿಜ್ಞಾನಗಳ ನಿಕಾಯದ ಮೂಲಕ ಹೊರ ತರುವಂತೆ ಮಾನ್ಯಕುಲಪತಿಯವರಿಗೆ ಮನವಿ ಮಾಡಿದರು. ಈ ಹಿಂದೆ ಸಂಶೋಧನೆ ಮಾಡಿದ ಪಾಶ್ಚಾತ್ಯ ವಿಜ್ಞಾನಿಗಳು ತಮ್ಮ ಶೋಧಗಳಿಗೆ ಮಾತೃ ಭಾಷೆಯಲ್ಲಿ ವಿವರಣೆ ನೀಡಿದ್ದಾರೆ. ನಮ್ಮಲ್ಲಿಯು ವಿಜ್ಞಾನವನ್ನು ಕನ್ನಡದಲ್ಲೇ ಕಲಿಸುವ ಸರಳವಾದ ಕ್ರಮ ಬೇಕಾಗಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿಯವರು ತಳಮಟ್ಟದಿಂದಲೇ ವೈಜ್ಞಾನಿಕವಾದಂತಹ ಆಲೋಚನೆಗಳ ದೃಷ್ಟಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಶಿಕ್ಷಕರಿಗಾಗಿ ಈ ಶಿಬಿರವನ್ನು ಏರ್ಪಡಿಸಲಾಗಿದೆ. ಜೊತೆಗೆ ವಿಜ್ಞಾನ ಬೋಧಿಸುವ ಶಿಕ್ಷಕರು ಬರಹಗಾರರೂ ಆಗಬೇಕೆಂಬ ಆಶಯವಿದೆ. ಪ್ರಸ್ತುತದಲ್ಲಿ ಸಮಾಜ ಮತ್ತು ಪಾಲಕರು ಮಕ್ಕಳಿಂದ ಏನು ಬಯಸುತ್ತಿದ್ದಾರೆ ಎಂಬುದಕಷ್ಟೇ ಸಂಕುಚಿತವಾಗಿ ಶಿಕ್ಷಣ ಕ್ಷೇತ್ರ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಕಲಿಸುವ ಕಲಿಯುವ ಕಡೆಯಲ್ಲಿ ವ್ಯಾಪಾರಿ ಮನೋಭಾವ ಇದೆ. ಮಕ್ಕಳ ಮನಃಸ್ಥಿತಿಯನ್ನು ಅರಿತುಕೊಂಡು ಮಕ್ಕಳ ಭಾಷೆಯಲ್ಲಿ ಶಿಕ್ಷಕರು ವಿಜ್ಞಾನ ಬೋಧಿಸಿದರೆ ಕುತೂಹಲ ಬೆಳೆಯಲು ಸಾಧ್ಯವಾಗುತ್ತದೆ. ವಿಜ್ಞಾನದಲ್ಲಿರುವ ಭಾಷಿಕ ಸಮಸ್ಯೆಯನ್ನು ನಿವಾರಿಸಿದರೆ, ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಗರಿಗೆದರಬಹುದು. ಸ್ಥಳೀಯ ಭಾಷೆಯಲ್ಲಿ ಮಕ್ಕಳಿಗೆ ಜ್ಞಾನದ ಅರಿವುಕೊಟ್ಟರೆ ಮಕ್ಕಳಿಗೆ ತಾನೇ ತಾನಾಗಿ ಪಠ್ಯಕ್ರಮ ಅರ್ಥವಾಗುತ್ತದೆ. ಮಕ್ಕಳಲ್ಲಿ ತಾವು ವಿಜ್ಞಾನಿಯಾಗಬೇಕು ಎಂಬ ಭಾವನೆ ಮೂಡಲು ಸಾಧ್ಯವಾಗುತ್ತದೆ ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿ ಹಾಗೂ ಕಮ್ಮಟದ ನಿರ್ದೇಶಕರಾದ ಡಾ. ಸುರೇಶ ಕುಲಕರ್ಣಿ ಅವರು ಪ್ರಾಸ್ತಾವಿಕ ನುಡಿಯುತ್ತ ವಿಜ್ಞಾನದಲ್ಲಿ ಪ್ರಶ್ನೋತ್ತರ ಬಿಟ್ಟು ಮಕ್ಕಳಿಗೆ ನಾವೇನು ಕಲಿಸುತ್ತಿಲ್ಲ. ವಿಜ್ಞಾನ ಎಂದರೆ ಪರಸ್ಪರ ಮಾತಾಡಬೇಕು. ಮಕ್ಕಳ ಪ್ರಶ್ನೆಗೆ ಶಿಕ್ಷಕರಲ್ಲಿ ಉತ್ತರ ಇದ್ದರೆ ಮಾತ್ರ ಸಂವಹನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಿಜ್ಞಾನಗಳ ನಿಕಾಯದ ಸಂಯೋಜನಾಧಿಕಾರಿಯಾದ ಡಾ. ಎಂ. ಉಷಾ ಅವರು ಎಲ್ಲರನ್ನು ಸ್ವಾಗತಿಸುತ್ತ, ವಿಜ್ಞಾನದ ಬಗ್ಗೆ ಓದು ಕಡಿಮೆಯಾಗುತ್ತಿದೆ. ಬಹುಶಃ ಭಾಷಿಕ ಸಮಸ್ಯೆ ಹಾಗೂ ಸಾಮಾಜಿಕ ಸಮಸ್ಯೆಗಳಿರಬಹುದು. ಇನ್ನೊಂದು ಕಡೆ ನಗರ ಪ್ರದೇಶದಲ್ಲಿ ತಾಂತ್ರಿಕತೆಯನ್ನೇ ವಿಜ್ಞಾನ ಎಂದು ಭಾವಿಸುತ್ತಿರುವುದು ಕಾರಣವಾಗಿರಬಹುದು. ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಹೊರಗೆ ಇರುವ ವಿಜ್ಞಾನಾಸಕ್ತರನ್ನು ಹಾಗು ಪಠ್ಯಕ್ರಮವನ್ನು ಆಧರಿಸಿ ಈ ಕಮ್ಮಟ ನಡೆಸಲಾಗುತ್ತಿದೆ ಎಂದರು.
ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಶೋಧನಾ ವಿದ್ಯಾಥಿಯಾದ ನರಸಿಂಹಮೂರ್ತಿ ನಿರೂಪಿಸಿ, ವಂದಿಸಿದರು. ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಹಾಗೂ ಸಸ್ಯ ವಿಜ್ಞಾನ ತಜ್ಞರಾದ ಡಾ. ಸಿ.ಡಿ.ಪಾಟೀಲ, ಗಣಿತ ಮತ್ತು ಭೌತವಿಜ್ಞಾನ ತಜ್ಞರಾದ ಶ್ರೀ ವಿಶ್ವನಾಥ ನಾಗಠಾಣ, ಆಯುರ್ವೇದ ವೈದ್ಯ ತಜ್ಞರಾದ ಡಾ. ಚಂದ್ರು ಹಾಗೂ ಡೀನರು ಉಪಸ್ಥಿತರಿದ್ದರು. ೭೫ ಶಿಕ್ಷಕರು ಕಮ್ಮಟಾರ್ಥಿಗಳಾಗಿ ಭಾಗವಹಿಸಿದ್ದರು.

ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯ ಸಪ್ತಾಹ

0203
ಭಾರತೀಯರು ಉದ್ಧಾರವಾಗಬೇಕಾದರೆ ದೌರ್ಬಲ್ಯವನ್ನು ಕಿತ್ತೊಗೆಯಬೇಕೆಂದು ವಿವೇಕಾನಂದರು ಹೇಳಿದ್ದಾರೆ ಎಂದು ಪ್ರಾಧ್ಯಾಪಕರಾದ ಡಾ. ಸಾಂಬಮೂರ್ತಿ ಅವರು ತಿಳಿಸಿದರು.
ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ೧೨.೧.೨೦೧೬ರಿಂದ ೧೯.೧.೨೦೧೬ರ ವರೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯ ಸಪ್ತಾಹದಲ್ಲಿ ಪಂಪಸಭಾಂಗಣದ ವೇದಿಕೆಯಲ್ಲಿ ಅವರು ವಿಶೇಷೋಪನ್ಯಾಸ ನೀಡುತ್ತಿದ್ದರು.
ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭ್ರಾತೃತ್ವ ಬಿಂಬಿಸಿದ ವಿವೇಕಾನಂದ ಅವರನ್ನು ಒಬ್ಬ ಸಂತನಾಗಿ, ದಾರ್ಶನಿಕನಾಗಿ ರೂಪಿಸಿತು. ವಿಶ್ವಸಂಸ್ಥೆಯು ಇವರ ಜನ್ಮ ದಿನವನ್ನೇ ಯುವ ದಿನಾಚರಣೆಯಾಗಿ ಆಚರಿಸಲು ನಿರ್ಣಯ ತೆಗೆದುಕೊಂಡಿತು. ಆಧುನಿಕ ಭಾರತವು ವಿವೇಕಾನಂದರಿಗೆ ಋಣಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕುತೂಹಲ ಮತ್ತು ಪ್ರಶ್ನೆ ಮಾಡುವ ವಿಶಿಷ್ಟಗುಣ ಸ್ವಭಾವ ಹೊಂದಿದ್ದ ವಿವೇಕಾನಂದರು ಯಾವುದನ್ನೂ ಪರೀಕ್ಷಿಸದೆ ಸುಲಭವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ಭಾರತದ ಧಾರ್ಮಿಕ ಶಕ್ತಿಯ ಬಗ್ಗೆ ಅರಿವು ಹೊಂದಿದ್ದ ವಿವೇಕಾನಂದರು ಭಾರತದ ಗುಲಾಮತನದ ಬಗ್ಗೆ ಆಳವಾಗಿ ಚಿಂತನೆ ನಡೆಸಿದರು. ಸನ್ಯಾಸ ದೀಕ್ಷೆಯ ನಂತರ ಪರಿವ್ರಾಜಕನಾಗಿ ಭಾರತವನ್ನು ಅನೇಕ ಸಲ ಪ್ರದಕ್ಷಿಣೆ ಮಾಡಿದರು. ಜನರ ಅಜ್ಞಾನ, ದಾಸ್ಯ, ದೀನತೆ, ಬಡತನ ಕಂಡು ಸಂಕಟಪಟ್ಟರು. ಇವಕ್ಕೆಲ್ಲ ಪರಿಹಾರ ಕಾಣಲು ಕನ್ಯಾಕುಮಾರಿಯ ಶಿಲೆಯ ಮೇಲೆ ಧ್ಯಾನಾಸಕ್ತರಾದರು ಎಂದು ಇವರ ಕುರಿತು ಉಪನ್ಯಾಸದಲ್ಲಿ ತಿಳಿಸಿದರು.
ಯುವ ಶಕ್ತಿಯ ಸಾಮರ್ಥ್ಯದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ವಿವೇಕಾನಂದರು ಯುವಶಕ್ತಿಯು ಎಚ್ಚರವಾಗಲು ಕರೆ ನೀಡಿದರು. ಯುವಜನತೆ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಸಾಮರ್ಥ್ಯ ಸಂಪಾದಿಸಬೇಕೆಂದರು. ನಿಮ್ಮ ನಡುವೆ ಇರುವ ಜ್ಞಾನವನ್ನು ಹುಡುಕಿ ಅನಾವರಣಗೊಳಿಸಿ, ಉನ್ನತವಾದ ನೈತಿಕತೆ ಜೊತೆಗೆ ಆತ್ಮಶ್ರದ್ಧೆ ಹೊಂದಿರಿ ಅಂಧಶ್ರದ್ಧೆ ಬೇಡ ಎಂದು ಯುವ ಜನತೆಗೆ ಹೇಳುತ್ತ, ಭಾರತ ರಾಷ್ಟ್ರ ಕಟ್ಟಲು ವಿವೇಕಿಗಳಿಂದ ಮಾತ್ರ ಸಾಧ್ಯ ಎಂದಿದ್ದಾರೆ ಎಂದು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸಪ್ತಾಹದಲ್ಲಿ ಪ್ರತಿದಿನವೂ ವಿಶೇಷ ಉಪನ್ಯಾಸಗಳಿರುತ್ತವೆ. ಸಾಮಾನ್ಯವಾಗಿ ವಿವೇಕಾನಂದರನ್ನು ಬ್ರಹ್ಮಚರ್ಯ, ಆಧ್ಯಾತ್ಮ, ಚಿಕಾಗೋ ಭಾಷಣದ ಮೂಲಕ ಮಾತ್ರ ಕಟ್ಟಿಕೊಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಜಾತಿ, ಸಾಮಾಜಿಕ ಅಸಮಾನತೆಗಳ ಮೂಲಕ ಅವರ ಚಿಂತನೆಗಳನ್ನು ಮರುಪರಿಶೀಲನೆ ಮಾಡಲು ಈ ಸಪ್ತಾಹದಲ್ಲಿ ಪ್ರಯತ್ನಿಸಬಹುದಾಗಿದೆ ಎಂದು ನುಡಿದರು.
ವಿದ್ಯಾರ್ಥಿ ಕ್ಷೇಮಪಾಲನ ಘಟಕದಿಂದ ಏರ್ಪಡಿಸಿದ್ದ ಸಪ್ತಾಹದ ವಿಶೇಷೋಪನ್ಯಾಸದಲ್ಲಿ ವಿದ್ಯಾರ್ಥಿನಿ ಅನಸೂಯ ಪ್ರಾರ್ಥಿಸಿದರು. ವೀರೇಶ ಜಾನೇಕಲ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಸಂಶೋಧನ ಸಮಾವೇಶ

0103

ಶಂಬಾಜೋಶಿಯವರು ಬ್ರಾಹ್ಮಣರಾದರೂ ಜಾತಿಗಡಿಗಳನ್ನು ಮೀರಿ ಚಿಂತಿಸಬಲ್ಲವರಾಗಿದ್ದರು. ಅವರಿಗೆ ಇತರೆ ಸಿದ್ಧಾಂತಗಳ ಕುರಿತು ಮಡಿವಂತಿಕೆಯಿರಲಿಲ್ಲ. ಅವರು ಏಂಗೇಲ್ಸ್, ಹೆಗೆಲ್‌ರಿಂದ ಋಗ್ವೇದಶಾಸ್ತ್ರಗಳವರೆಗೂ ಓದುತ್ತಿದ್ದರು. ಓದುವುದಕ್ಕಾಗಿ ಮಾತ್ರ ಅವರು ಓದಲಿಲ್ಲ. ಅವರಿಗೆ ಇರುವ ಕುತೂಹಲ ಮನೋಭಾವ ಅಧ್ಯಯನಕಾರರಿಗೆ ಬರಬೇಕು ಎಂದು ಡಾ. ಬಂಜಗೆರೆ ಜಯಪ್ರಕಾಶ ಅವರು ಯುವಸಂಶೋಧಕರನ್ನು ಉದ್ದೇಶಿಸಿ ಮಾತನಾಡಿದರು.

ಕನ್ನಡ ವಿಶ್ವವಿದ್ಯಾಲಯ ಅಧ್ಯಯನಾಂಗ ಮತ್ತು ಶಂಬಾಜೋಶಿ ಅಧ್ಯಯನ ಪೀಠದ ಸಹಯೋಗದಲ್ಲಿ ೦೪ನೇ ಜನವರಿ ೨೦೧೬ರಂದು ಭುವನವಿಜಯ ಸಭಾಂಗಣದಲ್ಲಿ ಏರ್ಪಡಿಸಿದ್ದ(ಯುಜಿಸಿ ಕೋರ್ಸ್‌ವರ್ಕ್‌ನ ಮುಕ್ತಾಯ ಸಮಾರಂಭ) ಮುಕ್ತಾಯ ಸಮಾರಂಭದಲ್ಲಿ ಶಂಬಾಸಂಸ್ಕೃತಿ ಚಿಂತನೆ: ಸಮಕಾಲೀನ ಸಂದರ್ಭ ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ನೀಡುತ್ತ ಮಾತನಾಡಿದರು.

ಶಂಬಾ ಅವರ ಅಧ್ಯಯನಕ್ಕೆ ಮರಾಠಿ ಸಾಹಿತ್ಯದ ಓದಿನ ಹಿನ್ನೆಲೆ ಇತ್ತು ಎಂಬುದಕ್ಕೆ ಮಹಾರಾಷ್ಟ್ರದ ಚಿಂತಕರಾದ ಭಂಡಾರಕರ್, ಸೂಕ್ತಾಂಕರ್, ಇರಾವತಿಕರ‍್ವೆ, ವಿ.ಕ.ರಾಜೇವಾಡೆ, ಡಾಂಗೆ, ಸಾಂಕಾಲಿಯ, ರಾಮಚಂದ್ರ ಚಿಂತಾಮಣಿ ಢೇರೆ ಮೊದಲಾದವರ ಚಿಂತನೆಗಳನ್ನು ಉಲ್ಲೇಖಿಸಿದರು. ಭಾಷೆ ಸಾಹಿತ್ಯ ಸಂಸ್ಕೃತ ಇತಿಹಾಸ ಒಂದಾಗಿ ಸಾಗುತ್ತಿದ್ದ ಸಂಸ್ಕೃತಿಯ ಅಧ್ಯಯನಗಳು ಆಧುನಿಕ ಕಾಲಘಟ್ಟಕ್ಕೆ ಬಂದಂತೆಲ್ಲ ಕವಲುಗಳಾದವು. ಪ್ರತಿ ಕ್ಷೇತ್ರದಲ್ಲು ಸೂಕ್ಷ್ಮ ಅಧ್ಯಯನಗಳ ಅಗತ್ಯವಿದೆ. ಆದರೆ ಅವುಗಳ ನಡುವೆ ಇರುವ ಅಂತರ್‌ಸಂಬಂಧ, ಪರಸ್ಪರ ಕೊಡು-ಕೊಳೆ ಕೆಲವರನ್ನು ಹೊರತುಪಡಿಸಿ ಎಲ್ಲೋ ಗೈರು ಹಾಜರಾಗಿದೆ ಎಂದರು. ಪಂಚಮಸಾಲಿ, ಪಂಚಮಕಾರಗಳು ಕುರಿತು ಗಂಭೀರ ಅಧ್ಯಯನಗಳ ಬಗ್ಗೆ ಯಾರು ಯೋಚಿಸಲಿಲ್ಲ. ಇವು ಅಧ್ಯಯನಕ್ಕೆ ಬೇಕಾದಂತಹ ಹುಡುಕಾಟದ ಜಾಗಗಳು. ಕೆಲವರು ಸಬಾಲ್ಟರನ್ ಹಿನ್ನೆಲೆಯಲ್ಲಿ ಪಂಥಗಳನ್ನು ಕುರಿತು ಅಧ್ಯಯನ ಮಾಡುತ್ತಾರೆ. ಸಮಾಜಶಾಸ್ತ್ರ ಇತಿಹಾಸವನ್ನು ಓದುವುದರಿಂದ ಆಳವಾದ ಗ್ರಹಿಕೆಗಳನ್ನು ಪಡೆಯಬಹುದು. ಶಂಬಾ ಅವರೇ ತಿಳಿಸಿರುವಂತೆ ಕರ್ನಾಟಕ ಸಂಸ್ಕೃತಿ ಆರಂಭವಾಗಿರುವ ವಿಧಾನವನ್ನು ತಿಳಿಯಬೇಕಾದರೆ ಕಡೆಯಪಕ್ಷ ಹತ್ತು, ಹನ್ನೊಂದನೆಯ ಶತಮಾನದ ಇತಿಹಾಸ, ಸಂಶೋಧಕರಾದ ನಿಮಗೆ ಗೊತ್ತಿರಬೇಕು ಎಂದು ತಿಳಿಸಿದರು.

ಗುಣಮಟ್ಟದ ಸಂಶೋಧನೆಗಳನ್ನು ಕುರಿತು ಬಂಜಗೆರೆ ಅವರು ಮಾತನಾಡುತ್ತ ತೀವ್ರವಾಗಿ, ಆಳವಾಗಿ ಅಧ್ಯಯನ ಮಾಡುವ ವಿದ್ವಾಂಸರ ಕೊರತೆ ಇರುವುದು ಕಾಣಿಸುತ್ತದೆ. ಒಂದೊ, ಎರಡೊ ಗುಣಮಟ್ಟದ ಸಂಶೋಧನೆಗಳು ದೊರೆತರೂ ಹೊಸ ಸಂಶೋಧಕರಿಂದ ಕೊಡುಗೆ ಗೌಣವಾಗಿದೆ. ಇದಕ್ಕೆ ಕಾರಣಗಳನ್ನು ಸಂಯುಕ್ತವಾಗಿ ನಾವೆಲ್ಲ ಆಲೋಚಿಸಬೇಕಾದ ಅಗತ್ಯವಿದೆ. ನನಗೆ ಕಂಡುಬರುವ ಹಾಗೆ ಮುಖ್ಯ ಸಮಸ್ಯೆ ಎಂದರೆ ಇಲ್ಲಿರುವ ಸಂಶೋಧಕ ವಿದ್ವಾಂಸರು ಸಾಮಾನ್ಯವಾಗಿ ಜಾತಿ ಆಧಾರಿತವಾಗಿರುವ ಪಂಗಡೀಕರಣದಲ್ಲಿ ಸಮರ್ಥನೆ ಅಥವಾ ವಿಮರ್ಶೆಯಲ್ಲಿ ತೊಡಗಿರುವುದೇ ಬಹಳ ದೊಡ್ಡ ಆತಂಕ ಇರಬಹುದು. ಮಹಾರಾಷ್ಟ್ರದಲ್ಲಿ ಈ ಸನ್ನಿವೇಶ ಇಲ್ಲ. ಕರ್ನಾಟಕದಲ್ಲಿ ಮಾತ್ರ ಅದು ಯಾಕೋ ಶುದ್ಧ ಅಧ್ಯಯನವಾಗಿ ಅಥವಾ ಪೂರ್ತಿ ನಿಸ್ಪಕ್ಷಪಾತವಾಗಿರುವ ವಿಶ್ಲೇಷಣೆಯಾಗಿ ಬೆಳೆಯುವುದಕ್ಕಿಂತ ಹೆಚ್ಚಾಗಿ ಸಮರ್ಥನೆಗಳು ಮತ್ತು ಖಂಡನೆಗಳ ಧಾಟಿಯಲ್ಲಿ ಬೆಳೆದಿರುವುದನ್ನು ನಾವು ಗಮನಿಸಬಹುದು ಎಂದು ತಿಳಿಸಿದರು.

ನಂತರ ಪಶುಪಾಲಕ ದೇವತೆಗಳು ಮತ್ತು ಮಂಟೇಲಿಂಗಸ್ವಾಮಿ ಕುರಿತು ಮಾತನಾಡುತ್ತ ಸಂಶೋಧಕರು ಆಕರಗಳ ಬಗ್ಗೆ ಸ್ಪಷ್ಟತೆ ಹೊಂದಿರಬೇಕು. ಶಿಷ್ಟ ಆಕರಗಳು ಬಹಳ ಸಲ (ಮಿಸ್‌ಲೀಡ್) ಮಾಡುತ್ತವೆ. ನನಗೆ ಗೊತ್ತಿರುವ ಹಾಗೆ ಜನಸಾಮಾನ್ಯರಲ್ಲಿ ಪ್ರಚಲಿತವಾಗಿರುವ ಮಾತುಗಳಲ್ಲಿರುವ ಸತ್ಯವನ್ನು ಸಂಶೋಧಕರು ಹೊರಗೆಳೆಯಬೇಕು. ಗಮನಿಸದೇಬಿಟ್ಟ ಸಣ್ಣ ಪುಟ್ಟ ವಿವರಗಳು ಅಧ್ಯಯನವನ್ನು ಬಲಪಡಿಸಲು ಸಮರ್ಥನೆ ಸಹಾಯ ನೀಡುತ್ತವೆ ಎನ್ನುವ ಮಾರ್ಗವನ್ನು ಡಾ. ಶಂಬಾ ಅವರು ಹಾಕಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿಯವರು ನಮ್ಮ ಸಂಶೋಧನೆ ಏಕತ್ವದ ಮೂಲಕ ಬಹುತ್ವವನ್ನು ನಾಶಗೊಳಿಸದೇ ಇರುವಂತಹ ಇಂದಿನ ಸಂಕ್ರಮಣ ಕಾಲದ ತೊಡಕುಗಳನ್ನು ಬಗೆಹರಿಸಿಕೊಳ್ಳಲು ನಾವು ಎಂತಹ ಹಾದಿಗಳನ್ನು ಕಂಡುಕೊಳ್ಳಬೇಕು ಎಂಬುದಕ್ಕೆ ವಿಶೇಷ ಉಪನ್ಯಾಸ ಸಾಕ್ಷಿಯಾಗಿದೆ. ಅಸತ್ಯ(ಮಿಥ್)ಗಳನ್ನು ಒಡೆಯುವ ಮೂಲಕ ಹೊಸ ಸತ್ಯ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ನಂತರ ನಡೆದ ಸಂವಾದದಲ್ಲಿ ಡಾ. ಮೋಹನಕುಂಟಾರ, ಡಾ. ವೀರೇಶ ಬಡಿಗೇರ, ಡಾ. ವಾಸುದೇವ ಬಡಿಗೇರ, ಡಾ.ಚಿನ್ನಸ್ವಾಮಿ ಸೋಸಲೆ, ಡಾ. ಶಿವಾನಂದ ವಿರಕ್ತಮಠ ಮೊದಲಾದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸ್ವಾಗತಿಸುತ್ತ ಇತ್ತೀಚಿನ ವರ್ಷಗಳಲ್ಲಿ ಉದ್ಯೋಗ ಮೂಲ ಅರ್ಹತೆಯ ಅಗತ್ಯವಾಗುತ್ತದೆ. ಅಧ್ಯಯನಕಾರರು ಮತ್ತು ಅಧ್ಯಾಪಕರ ಮೇಲೆ ಯುಜಿಸಿ ನಿಯಮಗಳ ಚೌಕಟ್ಟಿನ ಒತ್ತಡಗಳಿವೆ. ಕನ್ನಡ ವಿಶ್ವವಿದ್ಯಾಲಯವು ಯುಜಿಸಿ ಕೋರ್ಸ್‌ವರ್ಕ್‌ಗಿಂತ ಮೊದಲೇ ಅಂದರೆ ೨೦ ವರ್ಷಗಳಿಂದ ಸಂಶೋಧನೆಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಈ ರೀತಿ ವಿಶೇಷ ಉಪನ್ಯಾಸಗಳ ಮೂಲಕ ಸಂಶೋಧಕರಿಗೆ ಕನ್ನಡ ವಿಶ್ವವಿದ್ಯಾಲಯದ ಚಿಂತನಾ ಕ್ರಮದ ಕುರಿತು ತಿಳಿಸಲಾಗುತ್ತಿತ್ತು ಎಂದು ನುಡಿದರು.

ಅಧ್ಯಯನಾಂಗದ ನಿರ್ದೇಶಕರಾದ ಡಾ. ಕೆ. ರವೀಂದ್ರನಾಥ ಅವರು ೬.೧.೧೯೯೬ರಿಂದ ಶಂಬಾ ಅಧ್ಯಯನ ವೇದಿಕೆಯಾಗಿ ಆರಂಭವಾಗಿ ನಂತರ ಅಧ್ಯಯನ ಪೀಠವಾಗಿ ಪರಿವರ್ತನೆಯಾಗಿದೆ. ಶಂಬಾ ಅವರ ಜನ್ಮದಿನವಾದ ಜನವರಿ ೪ ಅನ್ನು ಕನ್ನಡ ವಿಶ್ವವಿದ್ಯಾಲಯ ಸಂಶೋಧಕರ ಸಮಾವೇಶವಾಗಿ ಆಚರಿಸುತ್ತದೆ ಎಂದು ಪ್ರಾಸ್ತವಿಕದಲ್ಲಿ ನುಡಿದರು. ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಂ. ಉಷಾ ಅವರು ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಶೋಧನಾ ವಿದ್ಯಾರ್ಥಿ ಕುಮಾರಸ್ವಾಮಿ ಬೆಜ್ಜಿಹಳ್ಳಿ ಬಂಜಗೆರೆ ಅವರನ್ನು ಪರಿಚಯಿಸಿ ನಿರೂಪಿಸಿದರು.