ತಿಂಗಳು: ನವೆಂಬರ್ 2016

ಬೆಳ್ಳಿಹಬ್ಬ : ಚಿಂತನ ಮಂಥನ : ಪತ್ರಿಕಾ ವರದಿ- ೩೦.೧೧.೨೦೧೬

dsc0452102-3

ಕರ್ನಾಟಕದ ನೆಲ ಜಲ ಗಡಿಯಂತಹ ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಭುತ್ವವು ಕನ್ನಡ ವಿಶ್ವವಿದ್ಯಾಲಯವನ್ನು ಪರಿಗಣಿಸುತ್ತಿಲ್ಲ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ವ್ಯಥೆಯಿಂದ ನುಡಿದರು.
ಬೆಳ್ಳಿಹಬ್ಬ ಚಿಂತನ ಮಂಥನದ ೨ನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಟಪ ಸಭಾಂಗಣದಲ್ಲಿ ಚಿಂತಕರನ್ನು ಉದ್ದೇಶಿಸಿ ಅವರು ಕನ್ನಡ ವಿಶ್ವವಿದ್ಯಾಲಯದ ಆಡಳಿತಾತ್ಮಕ ಬಿಕ್ಕಟ್ಟುಗಳನ್ನು ಕುರಿತು ಮಾತನಾಡುತ್ತಿದ್ದರು.
ವಿಶ್ವವಿದ್ಯಾಲಯ ಪ್ರತಿವರ್ಷ ಒಬ್ಬ ವಿದ್ಯಾರ್ಥಿಗೆ ೧,೨೦,೦೦೦ ಸಾವಿರ ರೂ.ಗಳನ್ನು ಅಧ್ಯಯನಕ್ಕೆ ಒದಗಿಸಬೇಕಾಗಿದೆ. ವಿಶ್ವವಿದ್ಯಾಲಯ ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡಿದೆ. (ಅವಲಂಬಿಸಿದೆ). ವಿಶ್ವವಿದ್ಯಾಲಯದ ಆರಂಭದಲ್ಲಿ ಬರುತ್ತಿದ್ದ ೫೮ ಕೋಟಿ ಅನುದಾನವನ್ನೇ ಈಗಲೂ ಸರ್ಕಾರ ಮುಂದುವರಿಸಿಕೊಂಡು ಬರುತ್ತಿದೆ. ಈ ಮೊತ್ತ ಯಾತಕ್ಕೂ ಸಾಲದು ಎಂದು ಸರ್ಕಾರಕ್ಕೆ ಹಲವು ಬಾರಿ ಮನವರಿಕೆ ಮಾಡಿಕೊಟ್ಟರೂ ಪ್ರಯೋಜವಾಗಿಲ್ಲ. ಸರ್ಕಾರಿ ಅಧಿಕಾರಿಗಳು ವಿಶ್ವವಿದ್ಯಾಲಯವನ್ನು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಗುಂಪಿಗೆ ಸೇರಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯವೇ ರೂಪಿಸಿಕೊಂಡಿರುವ ಪರಿನಿಯಮಗಳ ಅನ್ವಯ, ಸ್ವಾಯತ್ತವಾಗಿ ಕಾರ್ಯನಿರ್ವಹಿಸುವ ಮುಕ್ತ ವಾತಾವರಣ ಸಿಗುತ್ತಿಲ್ಲ. ಇದಕ್ಕೆ ಆಡಳಿತಶಾಹಿಯ ಧೋರಣೆ ಪ್ರಮುಖ ಕಾರಣವಾಗಿದೆ. ರಾಜಕೀಯ ಸಾಮಾಜಿಕ ಬಿಕ್ಕಟ್ಟುಗಳು ವಿಶ್ವವಿದ್ಯಾಲಯ ಮೇಲೆ ಪರಿಣಾಮ ಬೀರುತ್ತಿವೆ. ಅಪಾರವಾದ ಮಾನವ ಸಂಪನ್ಮೂಲದ ಕೊರತೆಯಿಂದ ವಿಶ್ವವಿದ್ಯಾಲಯದ ಮೇಲೆ ನಲುಗುತ್ತಿದೆ. ಇದರಿಂದ ಬಯಸಿದ ಸಂಶೋಧನೆಗಳ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ವಿಶ್ವವಿದ್ಯಾಲಯಕ್ಕೆ ಒಟ್ಟಾರೆ ೫೦೦ ಅಧ್ಯಾಪಕರ ನೇಮಕಾತಿ ಅತ್ಯಗತ್ಯವಿದೆ ಎಂದು ಕುಲಪತಿಯವರು ಸಂಕಟಗಳನ್ನು ಬಿಚ್ಚಿಟ್ಟರು.
ಪ್ರಸಾರಾಂಗ ಸೊರಗುತ್ತಿದೆ. ಪ್ರಕಟಣೆಗೆ ಹಣವಿಲ್ಲ. ಈ ಸಾಲಿನಲ್ಲಿ ಸರ್ಕಾರ ೨ ೧/೨ ಕೋಟಿ ಅಭಿವೃದ್ಧಿ ಅನುದಾನ ನೀಡಿದೆ. ಇದರಲ್ಲಿ ವಿಶ್ವವಿದ್ಯಾಲಯದ ಆಶಯ ಈಡೇರಿಸಲು ಸಾಧ್ಯವಿಲ್ಲ. ಸರ್ಕಾರವು ವಿಶ್ವವಿದ್ಯಾಲಯದ ಬುದ್ಧಿಜೀವಿಗಳನ್ನು, ತಜ್ಞರನ್ನು ಬಳಸಿಕೊಳ್ಳಬೇಕು. ಸರ್ಕಾರ ತನ್ನ ಪ್ರತಿವರ್ಷದ ಆಯ-ವ್ಯಯದಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ೧೦೦ ಕೋಟಿಯನ್ನು ಎತ್ತಿಡಬೇಕು. ಇದಾಗುತ್ತಿಲ್ಲ. ನಮ್ಮ ಮನೆಯಲ್ಲಿ ನಾವು ಭಿಕ್ಷೆ ಬೇಡುವುದು ಬಹಳ ನೋವಿನ ಸಂಗತಿ ಎಂದು ನುಡಿಯುತ್ತಾ, ಹಂಪಾ(ಹಂಪನಾಗರಾಜಯ್ಯ) ಚಂಪಾ(ಚಂದ್ರಶೇಖರ ಪಾಟೀಲ) ಸೇರಿ ರಂಪ ಮಾಡಿ ಸರ್ಕಾರದ ಕಣ್ಣು ತೆರೆಸಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ಯುಜಿಸಿಯ ೬ ಕೋಟಿ ಅನುದಾನ ಹಿಂತಿರುಗುವ ಸ್ಥಿತಿ ಇದೆ. ಏಕೆಂದರೆ ಕಾರ್ಯನಿರ್ವಹಿಸಿ ನಂತರ ಬಳಕೆ ಪ್ರಮಾಣ ಪತ್ರ ಸಲ್ಲಿಸಿ ಹಣ ಪಡೆಯಬೇಕಾಗಿರುತ್ತದೆ. ಅದಕ್ಕೆ ನಮ್ಮಲ್ಲಿ ಹಣವಿಲ್ಲ. ಅನಿವಾರ್ಯವಾಗಿ ನಾವೆಲ್ಲರೂ ಇಲ್ಲಿ ಸೇರಬೇಕಾಗಿದೆ ಎಂದು ವಿದ್ವಾಂಸರನ್ನು ಉದ್ದೇಶಿಸಿ ನುಡಿದರು.
ನಂತರ ಮಾತನಾಡಿದ ಚಂಪಾ ಅವರು ಒಂದು ಕಾಲದಲ್ಲಿ ಉನ್ನತ ಶಿಕ್ಷಣ ಸ್ವಾಯತ್ತ ವ್ಯಕ್ತಿತ್ವ ಪಡೆದುಕೊಂಡಿತ್ತು. ಜನತೆಗೆ ವಿಶ್ವವಿದ್ಯಾಲಯದಿಂದ ಬಹಳ ನಿರೀಕ್ಷೆಗಳಿದ್ದವು. ಅದಕ್ಕೆ ಹೇಳಿ ಮಾಡಿಸಿದಂತೆ ಸಂಕಲ್ಪ ರೂಪದ ರಾಜಕಾರಣಿಗಳಿದ್ದರು. ಇಂದು ಆಡಳಿತಶಾಹಿಗೆ ಸ್ವತಂತ್ರ್ಯ ವ್ಯಕ್ತಿತ್ವ ಇಲ್ಲ. ಇದೊಂದು ತಟಸ್ಥ ಯಂತ್ರ. ಇದರ ಚಾಲಕರು ಉನ್ನತ ಶಿಕ್ಷಣವನ್ನು ಮಬ್ಬುಗೊಳಿಸುತ್ತಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಸಂಕಷ್ಟ, ಬಿಕ್ಕಟ್ಟು, ಆತಂಕಗಳನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸಿ ನಿಯೋಗದ ಮೂಲಕ ಲಿಖಿತರೂಪದಲ್ಲಿ ಆಡಳಿತಕ್ಕೆ ತಿಳಿಸೋಣ. ನಾವೆಲ್ಲ ನಿಮ್ಮೊಂದಿಗೆದ್ದೇವೆ ಎಂದು ಮನ್ಯ ಕುಲಪತಿಯವರಿಗೆ ತಿಳಿಸಿದರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಸ್ವಾಗತಿಸಿದರು. ಡಾ. ಶಿವಾನಂದ ವಿರಕ್ತಮಠ ನಿರೂಪಿಸಿದರು. ಡಾ. ಹನುಮಣ್ಣನಾಯಕ ದೊರೆ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರಾರ್ಥಿಸಿದರು. ವೇದಿಕೆಯಲ್ಲಿ ಹಂಪ ನಾಗರಾಜಯ್ಯ ಉಪಸ್ಥಿತರಿದ್ದರು.
ನಂತರ ೨ ಗುಂಪುಗಳಲ್ಲಿ ಪುನಃ ಚರ್ಚೆ ಆರಂಭವಾಯಿತು.