ಬೆಳ್ಳಿಹಬ್ಬ : ಚಿಂತನ ಮಂಥನ
ನವೆಂಬರ್ ೨೯, ೩೦, ೨೦೧೬
ಪತ್ರಿಕಾ ವರದಿ- ೨೯.೧೧.೨೦೧೬
ಪ್ರಪಂಚದಲ್ಲಿ ನಾಲ್ಕು ಸಾವಿರ ಭಾಷೆಗಳು ಮಾತ್ರ ಉಳಿದಿವೆ. ಆದರೆ ಕನ್ನಡ ಭಾಷೆ ಮಾತ್ರ ಜೀವಂತವಾಗಿದೆ. ಕನ್ನಡವನ್ನು ತೆಲುಗು, ತಮಿಳು, ಮಲೆಯಾಳಂ ಭಾಷೆಗಳು ಸುತ್ತುವರಿದಿವೆ. ಭಾಷಾ ಶಾಸ್ತ್ರಜ್ಞರು ಕನ್ನಡ ಭಾಷೆ ಸಾಯುವುದಿಲ್ಲ ಎಂದಿದ್ದಾರೆ. ಆದ್ದರಿಂದ ಕನ್ನಡ ಭಾಷೆ ಅಳಿದುಹೋಗುವ ಭಾಷೆಯಲ್ಲ ಎಂದು ಡಾ. ಪಾಟೀಲ ಪುಟ್ಟಪ್ಪ ಅವರು ತಿಳಿಸಿದರು.
ನವೆಂಬರ್ ೨೯ರಿಂದ ೨ ದಿನಗಳವರೆಗೆ ಕನ್ನಡ ವಿಶ್ವವಿದ್ಯಾಲಯ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೆಳ್ಳಿಹಬ್ಬ: ಚಿಂತನ ಮಂಥನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪುಟ್ಟಪ್ಪ ಅವರು ಮಾತನಾಡಿದರು.
ಕರ್ನಾಟಕದಲ್ಲಿರುವ ಬೇರೆ ಬೇರೆ ವಿಶ್ವವಿದ್ಯಾಲಯಗಳು ಸಾಯುವ ಸ್ಥಿತಿಗೆ ಬಂದರೂ ಕನ್ನಡ ವಿಶ್ವವಿದ್ಯಾಲಯ ಅಂತಹ ಸ್ಥಿತಿಗೆ ಹೋಗುವುದಿಲ್ಲ ಎಂದು ಅದಮ್ಯ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕನ್ನಡದ ಬಗ್ಗೆ ಅಪನಂಬಿಕೆ ಸಲ್ಲದು ಎಂದು ಎಚ್ಚರಿಸಿದರು.
ನಂತರ ಪ್ರೊ. ರಹಮತ್ ತರೀಕೆರೆ ಅವರು ಮಾತನಾಡುತ್ತ ಕನ್ನಡ ವಿಶ್ವವಿದ್ಯಾಲಯದ ೧೬ ವಿಭಾಗಗಳು ೧೦ ಪೀಠಗಳು ಮತ್ತು ದತ್ತಿನಿಧಿಗಳು, ೬೫ರಿಂದ ೭೦ ಅಧ್ಯಾಪಕರ ಒಟ್ಟಾರೆ ೨೫ ವರ್ಷಗಳ ಸಾಧನೆಗಳನ್ನು ಕಟ್ಟಿಕೊಡುತ್ತ, ಕನ್ನಡ ಮಾಧ್ಯಮದಲ್ಲಿ ಕನ್ನಡದ ಮೂಲಕ ಚಿಂತನೆ ನಡೆಸುತ್ತಿರುವ ಕನ್ನಡ ವಿಶ್ವವಿದ್ಯಾಲಯವು ಮುಂದಿನ ಹೆಜ್ಜೆ ಇಡಲು ಹೊಸ ನೋಟ ಕಾಣಲು ಇಲ್ಲಿ ಚಿಂತಕರೆಲ್ಲರು ಸೇರಿದ್ದಾರೆ. ಸಂಘರ್ಷ ಮತ್ತು ಸಮನ್ವಯತೆಯ ಮೂಲಕ ಕನ್ನಡ ವಿಶ್ವವಿದ್ಯಾಲಯ ತನ್ನತನ ಹುಡುಕುತ್ತದೆ. ಕನ್ನಡದ ಸಾಮರ್ಥ್ಯ ವಿಸ್ತರಿಸುವುದು, ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಕನ್ನಡದ ತಿಳುವಳಿಕೆ ಸೃಷ್ಟಿಸುವುದು, ಪ್ರಸರಿಸುವುದು ಅದಕ್ಕಾಗಿ ಒಳಗಿನ ಮತ್ತು ಹೊರಗಿನ ವಿದ್ವಾಂಸರನ್ನು ಕೊಂಡಿಯಾಗಿಸಿಕೊಂಡು ಕಾರ್ಯನಿರ್ವಹಿಸಲಾಗಿದೆ. ಅಧಿಕಾರಸ್ಥ ಮತ್ತು ಅಕ್ಷರಸ್ಥ ನೆಲೆಗಳ ಮೂಲಕ ಜ್ಞಾನ ಸೃಷ್ಟಿಸಲಾಗಿದೆ. ಈ ಮೂಲಕ ಬಹುತ್ವದ ಶೋಧ, ಪರಂಪರೆಯ ಅನುಸಂಧಾನ, ವರ್ತಮಾನದ ಗ್ರಹಿಕೆಗಳ ಮೂಲಕ ಮುಂದಿನ ದಾರಿಯನ್ನು ಕಂಡುಕೊಳ್ಳುತ್ತಿದೆ. ಈ ರೀತಿಯಾಗಿ ಕನ್ನಡ ವಿಶ್ವವಿದ್ಯಾಲಯದ ರೂಪುಗೊಳ್ಳಲು ವಚನಕಾರರು, ಕುವೆಂಪು ಅವರು, ಆದಿಕವಿ ಪಂಪ, ಕೇಶಿರಾಜ ಇವರು ತಮ್ಮ ಚಿಂತನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಹಲವು ಬಗೆಯ ತಾಂತ್ರಿಕತೆಯ(ಟೂಲ್ಸ್) ಮೂಲಕ ಅಂದರೆ ಸಮೀಕ್ಷೆ, ಆಕರಗಳ ಸಂಗ್ರಹ, ವಿಶ್ಲೇಷಣೆ ವ್ಯಾಖ್ಯಾನ, ತಿಳುವಳಿಕೆಯ ಪ್ರಸರಣಕ್ಕೆ ಬೋಧನೆ(ಅಂದರೆ ತರಗತಿಗಳು, ಪದವಿಗಳು, ಡಿ.ಲಿಟ್. ನಾಡೋಜ), ಪ್ರಕಟಣೆಗಳು ವಿಚಾರಸಂಕಿರಣ-ಕಾರ್ಯಾಗಾರಗಳು, ಪೀಠಗಳು, ದೂರಶಿಕ್ಷಣ ನಿರ್ದೇಶನಾಲಯ, ವಿಸ್ತರಣಾ ಕೇಂದ್ರ, ಮಾನ್ಯತಾ ಕೇಂದ್ರಗಳ ಮೂಲಕ ಅಲ್ಲದೇ ಸುಮಾರು ೨೦೦೦ ವಿದ್ವಾಂಸರ ವಿದ್ವತ್ತನ್ನು ಒಳಗು ಮಾಡಿಕೊಂಡು ಬಹುತ್ವವನ್ನು ಪ್ರತಿನಿಧಿಸುವ ವಿಶ್ವವಿದ್ಯಾಲಯವಾಗಿದೆ. ಕೆಳಸ್ಥರದ ಸಂಸ್ಕೃತಿಗೆ ಸಂಬಂಧಿಸಿದಂತೆ, ಅಂಚಿನ ಹಾಗೂ ನಿರ್ಲಕ್ಷಿತ ಸಮುದಾಯಗಳ ಕುರಿತು ಹೆಚ್ಚು ಹೆಚ್ಚು ಸಂಶೋಧನೆಗಳನ್ನು ನಡೆಸಿದೆ. ಈ ರೀತಿ ನಡೆದು ಬರುತ್ತಿರುವ ಕನ್ನಡ ವಿಶ್ವವಿದ್ಯಾಲಯ ನ್ಯಾಕ್ ನಿಂದ ಉತ್ತಮ ಶ್ರೇಣಿ ಪಡೆದಿದೆ. ವಿಶ್ವವಿದ್ಯಾಲಯಕ್ಕೆ ಆದಾಯದ ಮೂಲಗಳು ಇರುವುದಿಲ್ಲ. ಇಂದು ವಿದ್ಯೆಯು ಮಾರಾಟದ ಸರಕಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಬಿಕ್ಕಟ್ಟಿನಲ್ಲಿದೆ ಎಂದು ನುಡಿದರು.
ಚಿಂತನ ಮಂಥನ ಕಾರ್ಯಕ್ರಮಕ್ಕೆ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಎಲ್ಲ ವಿದ್ವಾಂಸರನ್ನು ಚಿಂತಕರನ್ನು ಸ್ವಾಗತಿಸಿದರು. ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ನಾಡಗೀತೆಯೊಂದಿಗೆ ಪ್ರಾರ್ಥಿಸಿದರು. ವೇದಿಕೆಯಲ್ಲಿ ಡಾ. ಕಮಲಾ ಹಂಪನಾ, ಡಾ. ಹಂಪ ನಾಗರಾಜಯ್ಯ, ಡಾ. ಎ. ಮುರಿಗೆಪ್ಪ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಹಿ.ಚಿ.ಬೋರಲಿಂಗಯ್ಯ, ಡಾ. ತಾಳ್ತಜೆ ವಸಂತಕುಮಾರ, ಡಾ. ಕಾಳೇಗೌಡ ನಾಗವಾರ ಮೊದಲಾದ ವಿದ್ವಾಂಸರು ಉಪಸ್ಥಿತರಿದ್ದರು.
ನಂತರ ಕನ್ನಡ ವಿಶ್ವವಿದ್ಯಾಲಯದ ಇದುವರೆಗಿನ ನಡೆ ಮತ್ತು ಮುಂದಿನ ನಡೆ ಕುರಿತು ನಡೆದ ಪರಾಮರ್ಶೆ ಮತ್ತು ಚರ್ಚೆಯಲ್ಲಿ ಡಾ. ರಾಜಕುಮಾರ್ ಸಭಾಂಗಣ ಮತ್ತು ಸಿಂಡಿಕೇಟ್ ಸಭಾಂಗಣದಲ್ಲಿ ಎರಡು ಗುಂಪುಗಳಲ್ಲಿ ಆಹ್ವಾನ ಚಿಂತಕರು ಮತ್ತು ವಿಶ್ವವಿದ್ಯಾಲಯದ ಅಧ್ಯಾಪಕರು ಪಾಲ್ಗೊಂಡರು.
ಸಂಜೆ ಡಾ. ಬಾನಂದೂರ ಕೆಂಪಯ್ಯ ಮತ್ತು ಶ್ರೀ ಜನಾರ್ಧನ ಹಾಗೂ ಡಾ. ಹನುಮಣ್ಣನಾಯಕ ದೊರೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.