‘ಕನ್ನಡ-ಪ್ರಾಕೃತ: ಪರಂಪರೆ ಮತ್ತು ಪ್ರಭಾವ’ : ಕನ್ನಡ ವಿ.ವಿ. : ಅಂತಾರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ

photo

ಡಾ. ಕ್ರಿಸ್ಟೀನ್ ಚೋಝನಾಕಿ
ಸಮ್ಮೇಳನದ ಉದ್ಘಾಟಕರು

ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಕನ್ನಡ ವಿಶ್ವವಿದ್ಯಾಲಯ ಇದೇ ವರ್ಷದ ಡಿಸೆಂಬರ್ ೮ ಮತ್ತು ೯ರಂದು ವಿಶಿಷ್ಟವಾದ ಅಂತಾರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಈ ವರ್ಷ ತಾನೇ ಕನ್ನಡ ವಿ.ವಿ.ಯಲ್ಲಿ ಆರಂಭವಾಗಿರುವ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರ’ದ ವತಿಯಿಂದ ಏರ್ಪಾಟಾಗುತ್ತಿದೆ. ‘ಕನ್ನಡ-ಪ್ರಾಕೃತ: ಪರಂಪರೆ ಮತ್ತು ಪ್ರಭಾವ’ ಎಂಬುದು ವಿಚಾರಸಂಕಿರಣದ ಪ್ರಧಾನ ಆಶಯ. ಪ್ರಾಕೃತಕ್ಕೂ ಕರ್ನಾಟಕಕ್ಕೂ ಇರುವ ಸಂಬಂಧ ಹಾಗೂ ಭಾರತೀಯ ಚಿಂತನೆಯನ್ನು ವಿವಿಧ ಭಾರತೀಯ ಭಾಷೆಗಳನ್ನು ಪ್ರಭಾವಿಸುವ ರೀತಿಯನ್ನು ಅರ್ಥಮಾಡಿಕೊಳ್ಳುವುದು ಈ ಸಂಕಿರಣದ ಮುಖ್ಯ ಉದ್ದೇಶ. ಫ್ರಾನ್ಸ್‌ನಿಂದ ಬರಲಿರುವ ಡಾ.(ಶ್ರೀಮತಿ) ಕ್ರಿಸ್ಟೀನ್ ಚೋಝನಾಕಿ ಅವರು ಸಮ್ಮೇಳವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ವಿದ್ವಾಂಸ ಡಾ. ಹಂಪ ನಾಗರಾಜಯ್ಯ ಸಮ್ಮೇಳನದ ಶಿಖರೋಪನ್ಯಾಸ(ಏeಥಿಟಿoಣe ಚಿಜಜಡಿess) ಮಾಡುವರಲ್ಲದೆ ವಿಶೇಷ ಉಪನ್ಯಾಸವೊಂದನ್ನು ನೀಡಲಿದ್ದಾರೆ. ದೆಹಲಿ, ಜೈಪುರ, ಉದಯಪುರ, ಸೊಲ್ಲಾಪುರ ಹಾಗೂ ಕೊಲ್ಲಾಪುರಗಳಿಂದ, ಧಾರವಾಡ, ಮೈಸೂರು, ಬೆಂಗಳೂರುಗಳಿಂದ ಬರಲಿರುವ ಒಟ್ಟು ೨೬ ಮಂದಿ ವಿದ್ವಾಂಸರು ಇಲ್ಲಿ ವಿವಿಧ ವಿಷಯಗಳ ಬಗ್ಗೆ ಪ್ರಬಂಧ ಮಂಡಿಸಲಿದ್ದಾರೆ. ಈ ವಿಷಯದ ಬಗ್ಗ ಕರ್ನಾಟಕದಲ್ಲಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಇಷ್ಟು ದೊಡ್ಡ ಪ್ರಮಾಣದ ವಿಚಾರಸಂಕಿರಣವೊಂದು ಏರ್ಪಡುತ್ತಿರುವುದು ಇದೇ ಮೊದಲ ಬಾರಿ. ದಲಿತ ಲೇಖಕ, ಮಾಜಿ ಶಾಸಕ, ಶ್ರವಣಬೆಳಗೊಳ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯನವರು ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿರುತ್ತಾರೆ.
ಡಾ. ಕ್ರಿಸ್ಟೀನ್ ಚೋಝನಾಕಿ
ಈ ವಿಚಾರಸಂಕಿರಣದ ಉದ್ಘಾಟಕಿಯಾಗಿರುವ ಡಾ. ಕ್ರಿಸ್ಟೀನ್ ಚೋಝನಾಕಿ ಅವರು ಫ್ರಾನ್ಸ್‌ನ ಲ್ಯೋನ್ ನಗರದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿ ಮತ್ತು ನಾಗರೀಕತೆಯ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆಯಾಗಿದ್ದಾರೆ. ಪ್ರಾಕೃತದ ಪ್ರಸಿದ್ಧ ಕೃತಿಯಾದ ಕುವಲಯಮಾಲಾವನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಸಂಸ್ಕೃತ ಹಾಗೂ ಪ್ರಾಕೃತ ಕಾವ್ಯಗಳಲ್ಲಿನ ಜೈನ ಯಾತ್ರಾಸ್ಥಳಗಳ ಮೇಲೆ ಪಿಎಚ್.ಡಿ. ಮಹಾಪ್ರಬಂಧ ರಚಿಸಿದ್ದಾರೆ. ಆಫ್ರಿಕನ ಭಾಷೆಗಳು, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳನ್ನು ಕುರಿತೂ ಅಭ್ಯಾಸ ಮಾಡಿರುವ ಡಾ. ಕ್ರಿಸ್ಟೀನ್ ಅವರು ಭಾರತ ಹಾಗೂ ಕರ್ನಾಟಕದ ಬಗ್ಗೆ ಅಭಿಮಾನ ಹೊಂದಿರುವವರು. ನವದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯ ಸಂದರ್ಶಕ ಪ್ರಾಧ್ಯಾಪಕಿಯೂ ಹೌದು. ಆದರೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಇವರು ಉಪನ್ಯಾಸ ನೀಡಲು ಇದೀಗ ಬರುತ್ತಿದ್ದಾರೆ.

ಇವರದಲ್ಲದೆ ಈ ವಿಚಾರಸಂಕಿರಣದಲ್ಲಿ ಉಪನ್ಯಾಸ ನೀಡಲು ಬರಲಿರುವ ಇತರ ವಿದ್ವಾಂಸರೂ ಸಹ ಜೈನಶಾಸ್ತ್ರ, ಪ್ರಾಕೃತ, ಸಂಸ್ಕೃತ, ತತ್ತ್ವಶಾಸ್ತ್ರಗಳಂಥ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೇ. ಧಾರವಾಡದ ಡಾ. ಚಂದ್ರಮೌಳಿ ನಾಯ್ಕರ್ ಅವರು ಯೋಗ, ಸಂಸ್ಕೃತ ಹಾಗೂ ಪ್ರಾಕೃತಗಳ ಪರಿಶ್ರಮ ಹೊಂದಿರುವವರು. ಇಂಗ್ಲಿಷ್‌ನಲ್ಲಿ ನೂರಾರು ಲೇಖನ ಹಾಗೂ ಗ್ರಂಥಗಳನ್ನು ಬರೆದವರು. ನವದೆಹಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠವೆಂಬ ಡೀಮ್ಡ್ ವಿಶ್ವವಿದ್ಯಾಲಯದಿಂದ ಬರಲಿರುವ ಮೂವರು ವಿದ್ವಾಂಸರೂ ಸಹ ಜೈನಶಾಸ್ತ್ರ, ಪ್ರಾಕೃತ ಗ್ರಂಥ ಸಂಪಾದನೆ ಮತ್ತು ಪ್ರಾಕೃತ ವಾಙ್ಮಯ ಕುರಿತು ಆಳವಾದ ತಿಳಿವಳಿಕೆ ಹೊಂದಿರುವವರು. ಮೈಸೂರಿನ ನಿವೃತ್ತ ಪ್ರೊ. ಡಾ.ಆರ‍್ವಿಯಸ್ ಸುಂದರಂ ಅವರು ಅಮೇರಿಕೆಯ ಪೆನ್ಸಿಲ್ವೇನಿಯಾ ವಿ.ವಿ.ಯಲ್ಲಿ ಐದು ವರ್ಷಗಳ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ಅಲ್ಲಿ ಕನ್ನಡ ಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ನಡೆಸಿ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವವರು. ಹೀಗೆಯೇ ಇತರರೂ ಸಹ.
ಪ್ರಕೃತ ವಿಚಾರಸಂಕಿರಣದಲ್ಲಿ ಉದ್ಘಾಟನೆ ಸಮಾರೋಪಗಳಲ್ಲದೆ ಎರಡು ದಿನಗಳ ಅವಧಿಯಲ್ಲಿ ಆರು ಗೋಷ್ಠಿಗಳು ನಡೆಯುತ್ತಿವೆ. ‘ಭಾರತೀಯ ಚಿಂತನ ಪರಂಪರೆ ಮತ್ತು ಪ್ರಾಕೃತ ವಾಙ್ಮಯ’ ಎಂಬ ಮೊದ ಗೋಷ್ಠಿಯಲ್ಲಿ ಪ್ರಾಕೃತ ವಾಙ್ಮಯ ಎಂಬ ಮೊದಲ ಗೋಷ್ಠಿಯಲ್ಲಿ ಪ್ರಾಕೃತ ವಾಙ್ಮಯದಲ್ಲಿ ನಿರೂಪಿತವಾಗಿರುವ ಜೀವನ ಮೌಲ್ಯಗಳು, ದರ್ಶನ ಹಾಗೂ ರಾಜನೀತಿಯನ್ನು ಕುರಿತ ಉಪನ್ಯಾಸಗಳಿರುತ್ತವೆ. ಮೇಲುಕೋಟೆಯ ಡಾ. ಲಕ್ಷ್ಮೀತಾತಾಚಾರ‍್ಯ, ಶ್ರೀರಾಮಶರ್ಮ ಹಾಗೂ ದೆಹಲಿಯ ಡಾ. ಕಲ್ಪನಾ ಜೈನ್ ಉಪನ್ಯಾಸ ನೀಡುತ್ತಾರೆ.
ಪ್ರಾಕೃತ ಕಥಾ ಸಾಹಿತ್ಯ ಮತ್ತು ಭಾರತೀಯ ಸಾಂಸ್ಕೃತಿಕ ಪರಂಪರೆ ಎಂಬ ಎರಡನೇ ಗೋಷ್ಠಿಯಲ್ಲಿ ಪ್ರಾಕೃತದಲ್ಲಿ ಶ್ರೀರಾಮ ಚರಿತೆಗಳು, ಪ್ರಾಕೃತದಲ್ಲಿ ಚರಿತೆ ಗ್ರಂಥಗಳು ಹಾಗೂ ಪ್ರಾಕೃತದಲ್ಲಿ ಸಟ್ಟಕ ಸಾಹಿತ್ಯ ಕುರಿತ ಉಪನ್ಯಾಸಗಳು ನಡೆಯುತ್ತಿವೆ. ಕೊಲ್ಲಾಪುರದ ಡಾ. ಸುಷ್ಮಾ ಜಿ. ರೋಟಿ, ಸೊಲ್ಲಾಪುರದ ಡಾ. ಮಹಾವೀರಶಾಸ್ತ್ರಿ ಹಾಗೂ ಧಾರವಾಡದ ಪ್ರೊ. ಚಂದ್ರಮೌಳಿ ನಾಯ್ಕರ್ ಅವರು ಪ್ರಬಂಧ ಮಂಡಿಸುವರು.
ಪ್ರಾಕೃತ ಮತ್ತು ಕೆಲವು ಭಾರತೀಯ ಭಾಷೆಗಳ ಅಂತರ್‌ಸಂಬಂಧ ಎಂಬುದು ಮೂರನೇ ಗೋಷ್ಠಿಯ ವಿಷಯ. ಈ ಗೋಷ್ಠಿಯಲ್ಲಿ ತೆಲುಗು, ಮರಾಠಿ, ಕನ್ನಡ ಹಾಗೂ ಸಂಸ್ಕೃತ ಭಾಷೆಗಳಿಗೂ ಪ್ರಾಕೃತಕ್ಕೂ ಇರುವ ಅಂತರ್‌ಸಂಬಂಧವನ್ನು ಕುರಿತು ಡಾ. ಆರ‍್ವಿಯಸ್ ಸುಂದರಂ, ಪ್ರೊ.ಶುಭಚಂದ್ರ, ಡಾ.ಎನ್.ಸುರೇಶ್‌ಕುಮಾರ್ ಹಾಗೂ ಸಾಂಗ್ಲಿಯ ಪ್ರೊ. ಕೆ. ವೈ. ಆಪ್ಟೆ ಪ್ರಬಂಧ ಮಂಡಿಸುವರು.
ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಅಂದರೆ ನಾಲ್ಕನೇ ಗೋಷ್ಠಿಯಲ್ಲಿ ಕನ್ನಡಿಗರೇ ಆದ ದೆಹಲಿಯಲ್ಲಿ ಪ್ರಾಕೃತದ ಪ್ರೊಫೆಸರ್ ಆಗಿರುವ ಡಾ. ಜೈಕುಮಾರ ಉಪಾಧ್ಯೆ ಅವರು ಅಧ್ಯಕ್ಷತೆ ವಹಿಸುವುದಲ್ಲದೆ ಪ್ರಾಕೃತ ಕಾವ್ಯಗಳ ಸ್ವರೂಪ ಮತ್ತು ವ್ಯಾಪ್ತಿ ಕುರಿತು ಮಾತನಾಡುವರು. ಇದೇ ಗೋಷ್ಠಿಯಲ್ಲಿ ಉದಯಪುರದ ಡಾ.ಜಿನೇಂದ್ರಕುಮಾರ ಜೈನ್ ಅವರು ಪ್ರಾಕೃತದಲ್ಲಿ ಮುಕ್ತಕ ಸಾಹಿತ್ಯ ಪರಂಪರೆಯ ಸಮೀಕ್ಷೆ ಕುರಿತು ಮೈಸೂರಿನ ಪ್ರೊ.ಎನ್. ದೇವೇಂದ್ರಕುಮಾರ್ ಅವರು ‘ಕನ್ನಡ ಸಾಹಿತ್ಯಕ್ಕೆ ಪ್ರಾಕೃತದ ಕೊಡುಗೆ’ ಕುರಿತು ಮಾತನಾಡುವರು.
ಮುಂದಿನ ಗೋಷ್ಠಿಯಲ್ಲಿ ‘ಪ್ರಾಕೃತ ಹಸ್ತಪ್ರತಿಗಳ ಸಂಪಾದನೆ ಮತ್ತು ಅಧ್ಯಯನದ ಇತಿಹಾಸ’ ಕುರಿತು ವಿಚಾರ ವಿಮರ್ಶೆ ನಡೆಯುತ್ತದೆ. ಡಾ. ಕಮಲಾಹಂಪನಾ ಇದರ ಅಧ್ಯಕ್ಷತೆ ವಹಿಸುವುದಲ್ಲದೆ ‘ಪ್ರಾಕೃತ ಸಾಹಿತ್ಯಕ್ಕೆ ಕನ್ನಡ ಟೀಕಾಕಾರರ ಕೊಡುಗೆ’ ಕುರಿತು ಮಾತನಾಡುವರು. ಜೈಪುರದ ಡಾ. ಆನಂದಕುಮಾರ್ ಅವರು ‘ಪ್ರಾಕೃತ ಹಸ್ತಪ್ರತಿಗಳ ವೈಜ್ಞಾನಿಕ ಅಧ್ಯಯನದ ಇತಿಹಾಸ’ ಕುರಿತು ಪ್ರಬಂಧ ಮಂಡಿಸುವರು.
ವಿಚಾರಸಂಕಿರಣದ ಕೊನೆಯ ಗೋಷ್ಠಿಯು ‘ಭಾರತೀಯ ಚಿಂತನೆಗೆ ಪ್ರಾಕೃತದ ಕೊಡುಗೆ’ ಕುರಿತು ನಡೆಯುತ್ತದೆ. ಜೈಪುರದ ಡಾ. ಶ್ರೀಯಾಂಶ ಶಿಂಘೈ ಅವರು ಈ ಗೊಷ್ಠಿಯ ಅಧ್ಯಕ್ಷತೆ ವಹಿಸುವುರಲ್ಲದೆ ‘ಪಂಚಾಸ್ತಿಕಾಯ’ ಗ್ರಂಥದ ದಾರ್ಶನಿಕ ಪರಿಶೀಲನೆ ನಡೆಸುವರು. ನವದೆಹಲಿಯ ಡಾ. ವೀರಸಾಗರ ಜೈನ್ ಅವರು ‘ಕಾಷಾಯ ಪಾಹುಡ’ ಗ್ರಂಥದ ದಾರ್ಶನಿಕತೆ ಕುರಿತು, ಚೆನ್ನೈನ ಡಾ. ದಿಲೀಪ್ ಧೀಂಗ್ ಅವರು ‘ಮೂಲಾಚಾರ’ ಗ್ರಂಥ ಕುರಿತು ಮಾತನಾಡುವರು.
ಹೀಗೆ ವಿಶಿಷ್ಟ ವಿಷಯಗಳನ್ನು ಕುರಿತು ನಡೆಯುವ ಈ ಚಿಂತನೆಯ ಕಾರ್ಯಕ್ರಮದಲ್ಲಿ ಮೊದಲ ದಿನ(೮.೧೨.೨೦೧೬) ಕೊನೆಯ ಭಾಗದಲ್ಲಿ ಡಾ. ಹಂಪನಾ ಅವರ ಒಂದು ವಿಶೇಷ ಉಪನ್ಯಾಸವೂ ಇರುತ್ತದೆ. ಅವರ ನಂತರ ಸಂಜೆ ೬ಕ್ಕೆ ಹಾಸನದ ‘ಭಾರತೀಯ ಸಂಗೀತ ನೃತ್ಯ ಕಲಾಶಾಲೆ’ ಯ ತಂಡದವರಿಂದ ಅದ್ಭುತವಾದ ನೃತ್ಯ ಕಾರ್ಯಕ್ರಮವಿರುತ್ತದೆ. ‘ಕರುಣಾಳು ಬಾ ಬೆಳಕೆ’ ಹಾಗೂ ‘ಜೈನ ಸಾಹಿತ್ಯದಲ್ಲಿ ಸರಸ್ವತಿಯ ಕಲ್ಪನೆ’ ಎಂಬ ನೃತ್ಯ ರೂಪಕಗಳು ಒಂದು ಘಂಟೆ ಅವಧಿಯಾಗಿದ್ದು ಅದ್ಭುತ ಕಲಾಲೋಕಕ್ಕೆ ಪ್ರೇಕ್ಷಕರನ್ನು ಕೊಂಡೊಯ್ಯಲಿವೆ.
ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಮೊದಲ ಬಾರಿಗೆ ಇಂಥದೊಂದು ಅಂತಾರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವು ಕ್ಲಿಷ್ಟ ವಿಷಯಗಳ ಕುರಿತು ನಡೆಯಲಿದೆ. ಜ್ಞಾನಾಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಲು ಮಾಧ್ಯಮಗಳಲ್ಲಿ ಪ್ರಚಾರ ಒದಗಿಸಬೇಕೆಂದು ನಾವು ಸಂಘಟಕರು ಆಶಿಸುತ್ತೇವೆ.

ಡಾ. ಎಸ್.ಪಿ. ಪದ್ಮಪ್ರಸಾದ್
ಗೌರವ ಯೋಜನಾ ನಿರ್ದೇಶಕರು
ಮೊ: ೯೪೪೮೭೬೮೫೬೭

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s