೮ ಮತ್ತು ೯ ಡಿಸೆಂಬರ್ ೨೦೧೬
ಪತ್ರಿಕಾ ವರದಿ- ೦೯.೧೨.೨೦೧೬
ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು
ನಾಡೋಜ ಡಾ. ಹಂಪನಾ ಮಾತನಾಡುತ್ತಿರುವುದು
ನಾಡೋಜ ಶಬ್ದ ಪ್ರಾಕೃತದಿಂದ ಬಂದಿದೆ. ಸಂಸ್ಕೃತದಿಂದ ಉಪಾಧ್ಯಾಯ ಶಬ್ದವು ಪ್ರಾಕೃತಕ್ಕೆ ಹೋಗಿ ಓಜ್ಯಾ ಆಗಿದೆ. ಇದನ್ನು ಕನ್ನಡವು ಜೀರ್ಣಿಸಿಕೊಂಡಿತು. ಹೀಗೆ ಹರಡಿಕೊಳ್ಳುವ ಬೆರತುಕೊಳ್ಳುವ ಗುಣ ಪ್ರಾಕೃತದಲ್ಲಿದೆ. ಜನ ಬಯಸಿದ ಜನ ಪ್ರೀತಿಸುವ ಪ್ರಾಕೃತ ಎಂದು ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರವು ೮ ಮತ್ತು ೯ ಡಿಸೆಂಬರ್ ೨೦೧೬ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಾಕೃತ-ಕನ್ನಡ : ಪರಂಪರೆ ಮತ್ತು ಪ್ರಭಾವ ಅಂತಾರಾಷ್ಟ್ರೀಯ ವಿಚಾರಸಂಕಿರಣ ತಿರುಳಿನೊಂದಿಗೆ ಅರಿವಿನ ವಿಸ್ತಾರದಲ್ಲಿ ಮಾತನಾಡುತ್ತಿದ್ದರು.
ಶೃಂಗಾರ ರಸ ತುಂಬಿತುಳುಕುತ್ತಿರುವುದು ಪ್ರಾಕೃತ ಕಾವ್ಯಗಳಲ್ಲಿ. ಪ್ರಾಕೃತದಲ್ಲಿರುವ ಮರಣ ಮೀಮಾಂಸೆ ಆರಾಧನಾ ಗ್ರಂಥದಲ್ಲಿ ಮರಣದ ವಿಚಾರ ಸತ್ವ ರೂಪಗಳನ್ನು ಮರಣದ ವರ್ಗೀಕರಣಗಳನ್ನು ಕುರಿತು ಚರ್ಚಿಸಲಾಗಿದೆ. ಕನ್ನಡ ಶಾಸನ ಪ್ರಪಂಚದಲ್ಲಿ, ಕರ್ನಾಟಕದ ಚರಿತ್ರೆಯಲ್ಲಿ, ಇಡೀ ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಶ್ರೇಷ್ಠವಾದ ಪಂಡಿತಪಂಡಿತ(ಪಣ್-ಹಣ್ಣು, ಮಾಗಿದ ಹಣ್ಣು) ಮರಣವನ್ನು ಪಡೆದ ಒಬ್ಬಳೇ ಮಹಿಳೆ ಎಂದರೆ ಶಾಂತಲಾದೇವಿ ತಾಯಿ ಮಾಚಿಕಬ್ಬೆ. ಜೈನರು ಪ್ರಾಕೃತವನ್ನು ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಧರ್ಮದ ವಿಚಾರದಲ್ಲಿ ಅತ್ಯಂತ ಹೆಚ್ಚು ಧಾರ್ಮಿಕ ಕೊಡುಗೆ ನೀಡಿದವರು ಜೈನ ಮಹಿಳೆಯರು. ಲಿಪಿಕಾರರಿಂದ ಗ್ರಂಥಗಳನ್ನು ಪ್ರತಿಮಾಡಿಸಿ ಮುನಿಗಳಿಗೆ ಶಾಸ್ತ್ರದಾನ ಕೊಡುವುದು ವಿಶಿಷ್ಟವಾಗಿತ್ತು. ಇದು ವಿದ್ಯೆಯ ಪ್ರಸರಣಕ್ಕೆ ಕಾರಣವಾಯಿತು. ೫ನೇ ಶತಮಾನದಲ್ಲಿ ಬನವಾಸಿಯ ಕದಂಬರು ಭಾರತದಲ್ಲಿ ಪ್ರಪ್ರಥಮವಾಗಿ ಪದ್ಮಾವತಿ ದೇವಿಗೆ ದೇವಾಲಯವನ್ನು ಕಟ್ಟಿಸಿಕೊಟ್ಟಿದ್ದಾರೆ ಎಂದು ಉತ್ಖನನದಿಂದ ತಿಳಿದುಬಂದಿದೆ ಎಂದು ಹಂಪನಾ ಅವರು ತಿಳಿಸಿದರು.
ತಿರುಳಿನೊಂದಿಗೆ ಅರಿವಿನ ವಿಸ್ತಾರ ಮಾಡುತ್ತ ಡಾ. ಜಯಕುಮಾರ ಉಪಾಧ್ಯೆ ಅವರು ಸಂಸ್ಕೃತ ಮತ್ತು ಪ್ರಾಕೃತ ಒಡಹುಟ್ಟಿದವರು. ಸಂಸ್ಕೃತದಲ್ಲಿ ಸುಗಂಧವಿರುವುದಕ್ಕೆ ಪ್ರಾಕೃತ ಕಾರಣ. ಈ ವರೆಗೂ ಸಂಸ್ಕೃತ ಸಾಹಿತ್ಯಕ್ಕೆ ಪ್ರಾಕೃತ ಟೀಕೆ ಬಂದಿರುವುದು ಎಲ್ಲೂ ಇಲ್ಲ. ಮೂಲ ಪ್ರಾಕೃತಕ್ಕೆ ಟೀಕಾ ಸಾಹಿತ್ಯ ಬಂದಿರುವುದು ಇನ್ನುಳಿದ ಭಾಷೆಯಲ್ಲಿ. ಇದು ಪ್ರಾಕೃತದ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡುತ್ತ ಇಂದು ಭಾರತದ ಸಂದರ್ಭದಲ್ಲಿ ಧಾರ್ಮಿಕ ಕಾರಣಕ್ಕಾಗಿ ಇಂದು ಜೈನ ಧರ್ಮವನ್ನು ಜಾತಿಯಾಗಿ ಪರಿಭಾವಿಸಲಾಗಿದೆ. ಆದರೆ ಆ ಹೊತ್ತಿನೊಳಗೆ ಜೈನ ಜಾತಿ ಆಗಿರಲಿಲ್ಲ. ಧರ್ಮವಾಗಿತ್ತು. ಬೌದ್ಧ ಮತ್ತು ಜೈನ ಧರ್ಮಗಳು ಜೊತೆ ಜೊತೆಯಾಗಿ ಲೋಕನೀತಿಯನ್ನು ಲೋಕಸಂಹಿತೆಯನ್ನು ತನ್ನದೇ ಆದ ಭಾಷಾ ರಾಜಕಾರಣದ ಮೂಲಕ ವೈದಿಕ ಭಾಷೆಗೆ ಪರ್ಯಾಯವಾದ ಒಂದು ಸಾಮಾಜಿಕವಾದ, ಧಾರ್ಮಿಕವಾದ ಬಹಳ ದೊಡ್ಡ ಪೆಟ್ಟನ್ನು ಕೊಡುವ ಕೆಲಸ ಮಾಡಿದೆ. ಅದನ್ನು ನಾವು ಆಧುನಿಕ ಕಣ್ಣಿನಿಂದ ನೋಡುವ ಅಗತ್ಯವಿದೆ. ಧಾರ್ಮಿಕ ಪರಿಭಾಷೆ ಹೊರತು ಪಡಿಸಿದ ಹಾಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ಪರಿಭಾಷೆಯೊಳಗೆ ಪ್ರಾಕೃತ ಗ್ರಂಥಗಳನ್ನು ನೋಡುವ ಅಗತ್ಯವಿದೆ. ಎಲ್ಲ ಧರ್ಮಗಳು ಅಹಿಂಸೆಯನ್ನು ಪ್ರತಿಪಾದಿಸಿವೆ. ಜೈನ, ಬೌದ್ಧ ಧರ್ಮಗಳು ಜನಸಾಮಾನ್ಯರನ್ನು ಕುರಿತು ಮಾತಾಡುವುದು ಅಂದು ಅಗತ್ಯವಾಗಿತ್ತು. ಜೈನ ಧರ್ಮದ ಕಾವ್ಯಗಳು ಕೇವಲ ಕಾವ್ಯಗಳಲ್ಲ. ಸಾಮಾಜ ಶಾಸ್ತ್ರೀಯವಾಗಿ, ವೈಜ್ಞಾನಿಕವಾಗಿ ಅಧ್ಯಯನ ಮಾಡಿದರೆ ಹೊಸ ಹೊಸ ವಿಚಾರಗಳು ದೊರೆಯುತ್ತವೆ ಎಂದು ನುಡಿದರು.
ಡಾ. ವಿಠಲರಾವ್ ಗಾಯಕ್ವಾಡ್ ಅವರು ಸ್ವಾಗತಿಸಿದರು. ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ಗೌರವ ಯೋಜನಾ ನಿರ್ದೇಶಕರು ವಂದಿಸಿದರು. ಡಾ. ಕೇಶವಮೂರ್ತಿ ನಿರೂಪಿಸಿದರು. ಶ್ರೀಮತಿ ಲೀಲಾಲೋಚನ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಡಾ. ಕಮಲಾ ಹಂಪನಾ, ಡಾ. ಕ್ರಿಸ್ಟೀನ್ ಚೋಝನಾಕಿ ಹಾಗೂ ಪ್ರಬಂಧಗಳನ್ನು ಮಂಡಿಸಿದ ಎಲ್ಲ ವಿದ್ವಾಂಸರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.