ಬೆಳ್ಳಿಹಬ್ಬ ೨ನೇ ಹಂತದ ಚಿಂತನ ಮಂಥನ ಕಾರ‍್ಯಕ್ರಮ

02-7 ಗುಲ್ಬರ್ಗಾ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಎಂ. ಮಹೇಶ್ವರಯ್ಯ ಮಾತನಾಡುತ್ತಿರುವುದು

03-7ಆಶಯ ನುಡಿಯುತ್ತಿರುವ ಕನ್ನಡ ವಿಶ್ವವಿದ್ಯಾಲಯದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು

04-4ವೇದಿಕೆಯಲ್ಲಿ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು, ಶ್ರೀ ಹಂಸಲೇಖ ಅವರು, ಡಾ. ಹೇಮಪಟ್ಟಣಶೆಟ್ಟಿ ಅವರು, ಡಾ.ಎಚ್.ಎಂ.ಮಹೇಶ್ವರಯ್ಯ ಅವರು, ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರು, ಕುಲಪತಿಯವರು, ಡಾ. ಕಮಲಾ ಹಂಪನಾ ಅವರು, ಡಾ. ಪದ್ಮಾಶೇಖರ ಅವರು, ಶ್ರೀಮತಿ ಶಶಿಕಲಾ ವಸ್ತ್ರದ ಅವರು, ಡಾ. ವಸುಂಧರ ಭೂಪತಿ ಅವರು, ಡಾ.ಬಿ.ಟಿ. ಲಲಿತಾ ನಾಯಕ ಅವರು, ಡಾ.ಎಂ.ಸಿ. ಗಣೇಶ ಅವರು

06ಸಿಂಡಿಕೇಟ್ ಸಭಾಂಗಣದಲ್ಲಿ ಡಾ. ಕಮಲಾ ಹಂಪನಾ ಅವರ ಅಧ್ಯಕ್ಷತೆಯಲ್ಲಿ ಚಿಂತನ ಮಂಥನ ನಡೆಸುತ್ತಿರುವ ವಿದ್ವಾಂಸರು01-9

ಬೆಳ್ಳಿಹಬ್ಬ
೨ನೇ ಹಂತದ ಚಿಂತನ ಮಂಥನ ಕಾರ‍್ಯಕ್ರಮ
೧೬ ಮತ್ತು ೧೭ ಡಿಸೆಂಬರ್ ೨೦೧೬
ಪತ್ರಿಕಾ ವರದಿ- ೧೬.೧೨.೨೦೧೬

ನಿರ್ಲಕ್ಷಿತ ಮತ್ತು ಉಪೇಕ್ಷೆಗೆ ಒಳಪಟ್ಟ ಸಂಗತಿಗಳನ್ನು ಕನ್ನಡ ವಿಶ್ವವಿದ್ಯಾಲಯ ಸಂಶೋಧನೆಯ ಮೂಲಕ ಮುನ್ನೆಲೆಗೆ ತಂದಿದೆ ಎಂದು ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ.ಸಿ. ಗಣೇಶ ಅವರು ತಿಳಿಸಿದರು.
ಮಂಟಪ ಸಭಾಂಗಣದಲ್ಲಿ ೧೬ನೇ ಡಿಸೆಂಬರ್ ೨೦೧೬ರಂದು ಏರ್ಪಡಿಸಿದ್ದ ಯುಜಿಸಿ ಪ್ರಾಯೋಜಿತ ಕನ್ನಡ ವಿಶ್ವವಿದ್ಯಾಲಯ ಬೆಳ್ಳಿಹಬ್ಬ ೨ನೇ ಹಂತದ ಚಿಂತನ ಮಂಥನ ಕಾರ‍್ಯಕ್ರಮದಲ್ಲಿ ಅವರು ಕನ್ನಡ ವಿಶ್ವವಿದ್ಯಾಲಯದ ೨೫ ವರ್ಷಗಳ ಶೈಕ್ಷಣಿಕ ಸಾಧನೆಗಳನ್ನು ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಂತಿರುವ ಮಹಿಳಾ ಲೇಖಕಿಯರು ಮತ್ತು ವಿದ್ವಾಂಸರ ಎದುರು ಮಂಡಿಸಿದರು.
ಕನ್ನಡ ವಿಶ್ವವಿದ್ಯಾಲಯ ಅಲಕ್ಷಿತ ಸಂಗತಿಗಳನ್ನು ನಾಡಿನ ವರ್ತಮಾನದೊಂದಿಗೆ ಮುಖಾಮುಖಿಗೊಳಿಸಿ ಮುಖ್ಯವಾಹಿನಿಗೆ ತಂದಿದೆ. ಎಲ್ಲ ನೊಂದವರ ಮಹಿಳೆಯರ, ಅಲೆಮಾರಿಗಳ, ಶೋಷಿತರ, ಚಹರೆ ಇಲ್ಲದವರ, ಧ್ವನಿ ಇಲ್ಲದವರಿಗೆ ಕನ್ನಡ ವಿಶ್ವವಿದ್ಯಾಲಯ ವೇದಿಕೆಯಾಗಿದೆ. ವ್ಯಾಪಕವಾದ ನಾಡಿನ ಹೊಣೆಗಾರಿಕೆಯನ್ನು ಆತ್ಮಸಾಕ್ಷಿಯಂತೆ ತುಂಬಿಕೊಂಡು, ಈ ಬಗೆಯ ಬೌದ್ಧಿಕ ಒಳನೋಟದಲ್ಲಿ ವಿಶ್ವವಿದ್ಯಾಲಯದ ಎಲ್ಲ ಕುಲಪತಿಗಳು ಕಾರ್ಯನಿರ್ವಹಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯವು ಬೋಧನೆಯನ್ನು ಒಂದು ಸೃಜನಶೀಲ ಕ್ರಿಯೆ ಎಂದು ಭಾವಿಸಿದೆ ಎಂದು ಅವರು ವಿಶ್ವವಿದ್ಯಾಲಯದ ನಿಕಾಯಗಳ, ವಿಭಾಗಗಳ, ಪೀಠಗಳ, ದತ್ತಿನಿಧಿಗಳ ಮತ್ತು ವಿಸ್ತರಣಾ ಕೇಂದ್ರಗಳ ಸಾಧನೆ-ಸಂಶೋಧನೆಗಳ ಒಳನೋಟಗಳನ್ನು ನೀಡಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯವರಾದ ಡಾ.ಎಚ್.ಎಂ. ಮಹೇಶ್ವರಯ್ಯ ಅವರು ಆಹ್ವಾನಿತರ ಪ್ರತಿನಿಧಿಯಾಗಿ ಭಾರತೀಯ ಭಾಷಾ ವಿಶ್ವವಿದ್ಯಾಲಯಗಳ ಕಿರು ಇತಿಹಾಸವನ್ನು (ಪವರ್‌ಪಾಯಿಂಟ್ ಪ್ರೆಸೆಂಟೇಶನ್ ಮೂಲಕ) ಕಟ್ಟಿಕೊಡುತ್ತ, ಕನ್ನಡ ವಿಶ್ವವಿದ್ಯಾಲಯ ಬದುಕಿನ ಎಲ್ಲ ರಂಗಗಳಿಗೆ ಪ್ರವೇಶಿಸಿ ಅಧ್ಯಯನ ಮಾಡುವ ವ್ಯಾಪ್ತಿಯನ್ನು ಹೊಂದಿದೆ ಎಂದು ತಾವು ಭಾವಿಸಿರುವಾಗಿ ತಿಳಿಸಿದರು.
ನಂತರ ಜೆರುಸೆಲಂನಲ್ಲಿರುವ ಹಿಬ್ರು ವಿಶ್ವವಿದ್ಯಾಲಯ, ಪಂಜಾಬಿ ವಿಶ್ವವಿದ್ಯಾಲಯ, ತಮಿಳು ವಿಶ್ವವಿದ್ಯಾಲಯ, ತೆಲುಗು ವಿಶ್ವವಿದ್ಯಾಲಯಗಳು, ಮಲಯಾಳಂ ವಿಶ್ವವಿದ್ಯಾಲಯ, ದ್ರವಿಡಿಯನ್ ವಿಶ್ವವಿದ್ಯಾಲಯ, ಹಿಂದಿ ಭಾಷಾ ವಿಶ್ವವಿದ್ಯಾಲಯಗಳ ಕಾರ್ಯವ್ಯಾಪ್ತಿಯನ್ನು ಎಳೆಎಳೆಯಾಗಿ ವಿವರಿಸುತ್ತ, ಕನ್ನಡ ವಿಶ್ವವಿದ್ಯಾಲಯವು ಸಂಶೋಧನೆಗಳ ಜೊತೆಗೆ ಬೋಧನೆಯಲ್ಲಿ ಮುಖ್ಯವಾಗಿ ಪರಿಗಣಿಸಬೇಕು. ಜೊತೆಗೆ ಕನ್ನಡ ವಿಶ್ವವಿದ್ಯಾಲಯವು ಇತರೆ ಭಾಷಾ ವಿಶ್ವವಿದ್ಯಾಲಯಗಳಂತೆ ಭಾರತೀಯ ಭಾಷೆಗಳ ಅಧ್ಯಯನ ಕೇಂದ್ರ, ವಲಸೆ ಅಧ್ಯಯನ ಕೇಂದ್ರ, ಶಿಕ್ಷಣ ವಿಭಾಗ, ಶಿಕ್ಷಕರ ತರಬೇತಿ ಕೇಂದ್ರ, ಕಂಪ್ಯೂಟರ್ ಅನಿಮೇಶನ್ ಫಿಲಂ ಸ್ಟಡೀಸ್, ಪರಂಪರೆ ಮತ್ತು ಪ್ರವಾಸೋದ್ಯಮ, ಪರಿಸರ ಅಧ್ಯಯನ, ನಿಘಂಟು ಅಧ್ಯಯನ, ಕೊಳಲು-ಮೃದಂಗ(ವಾದ್ಯ ಪರಿಕರಗಳ ಅಧ್ಯಯನ), (ಗಿಡ)ಮೂಲಿಕಾ ಅಧ್ಯಯನ, ಇಂಗ್ಲಿಷ್ ವಿಭಾಗ(ಅಗತ್ಯವಾಗಿ), ಡಿಫೆನ್ಸ್ ಸ್ಟ್ರಾಟಜಿ ವಿಭಾಗಗಳನ್ನು ತೆರೆದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕು. ಪ್ರತಿ ವಿಭಾಗವೂ ಕಡ್ಡಾಯವಾಗಿ ಯುಜಿಸಿಯಿಂದ ಸ್ಯಾಪ್ ಯೋಜನೆಗಳನ್ನು ಪಡೆಯಬೇಕು ಎಂದು ಮಹೇಶ್ವರಯ್ಯ ಅವರು ಕನ್ನಡ ವಿಶ್ವವಿದ್ಯಾಲಯದ ಮುಂದಿನ ದಾರಿ ಕುರಿತು ಕಿರುನೋಟ ನೀಡಿದರು.
ಮುಂದುವರೆದು ವಿಶ್ವವಿದ್ಯಾಲಯಗಳು ಆರ್ಥಿಕವಾಗಿ ಸ್ವತಂತ್ರವಾಗಿರಬೇಕು. ಅದಕ್ಕಾಗಿ ಆದಾಯದ ಮೂಲಗಳನ್ನು ಕಂಡುಕೊಳ್ಳಲು ಪ್ರಬಲವಾಗಿ ಚಿಂತಿಸಬೇಕು. ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡಿರಬಾರದು. ಕನ್ನಡ ವಿಶ್ವವಿದ್ಯಾಲಯ ಜ್ಞಾನ ಸೃಷ್ಟಿಸುವಂತೆ ಬದುಕನ್ನು ಅನ್ನವನ್ನು ಸೃಷ್ಟಿಸುವಂತಾಗಬೇಕು ಎಂದು ತಿಳಿಸಿದರು.
ಆಶಯ ನುಡಿಯುತ್ತ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಅಪಾರವಾದ ಮಾನವ ಸಂಪನ್ಮೂಲದ ಕೊರತೆಯನ್ನು ಎದುರಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯವು ಕನ್ನಡದ ತೇರನ್ನು ಹೇಗೆ ಎಳೆಯಬೇಕು? ಎಂದು ಪ್ರಶ್ನಿಸಿದರು. ೨೫ ವರ್ಷಗಳ ಶೈಕ್ಷಣಿಕ ಸಾಧನೆಗಳ ವರದಿಯನ್ನು ನಾಡಿಗೆ ಸಲ್ಲಿಸುವ ಅಗತ್ಯ ಇರುವುದರಿಂದ ನಿಮ್ಮನ್ನು ಇಲ್ಲಿಗೆ ಬರಮಾಡಿಕೊಳ್ಳಲಾಗಿದೆ ಎಂದು ಚಿಂತಕರನ್ನು ಉದ್ದೇಶಿಸಿ ನುಡಿದರು. ನಿಮ್ಮ ಧ್ವನಿ ವಿಶ್ವವಿದ್ಯಾಲಯದ ಒಳಗಿರುವವರ ಧ್ವನಿ ಆಗಬಾರದು. ಕನ್ನಡ ವಿಶ್ವವಿದ್ಯಾಲಯ ಕನ್ನಡಿಗರ ಧ್ವನಿಯಾಗಬೇಕು ಎಂಬ ಕಾರಣವು ಹೌದು. ಕನ್ನಡದಂತಹ ಭಾಷೆಯ ಮೇಲೆ ಜಾಗತೀಕರಣದ ಹೊಡೆತ ಬೀಳುತ್ತಿರುವ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಹಾಗೆ ರಾಜಕಾರಣಿಗಳು ಅವತ್ತಿನ ಸಾಂಸ್ಕೃತಿಕವಾದಂತಹ ಪರಿಸರ ಏನನ್ನು ಹೇಗೆ ಅದು ಪರಿಭಾವಿಸಿತ್ತು ಮತ್ತು ಇವತ್ತಿನ ರಾಜಕಾರಣ ನಮ್ಮ ಕಣ್ಣೆದುರಿಗೆ ಇರುವ ಸಮಾಜ ಮತ್ತು ಇವತ್ತಿನ ವಿದ್ಯಮಾನಗಳು ಕನ್ನಡ ವಿಶ್ವವಿದ್ಯಾಲಯವನ್ನು ಹೇಗೆ ಕಾಣುತ್ತಾ ಇವೆ ಎಂಬುದನ್ನು ನಿಮ್ಮ ಗಮನಕ್ಕೆ ತರುವ ಸಲುವಾಗಿ ನಿಮ್ಮೆಲ್ಲರನ್ನು ಇಲ್ಲಿಗೆ ಬರಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕುಲಸಚಿವರಾದ ಡಾ. ಡಿ. ಪಾಂಡುರಂಗ ಬಾಬು ಅವರು ಎಲ್ಲರನ್ನು ಸ್ವಾಗತಿಸುತ್ತ, ಕನ್ನಡ ವಿಶ್ವವಿದ್ಯಾಲಯದ ಹಿಂದಿನ ನಡೆಯ ಆತ್ಮಾವಲೋಕನ ಮತ್ತು ಮುಂದಿನ ನಡೆ ಹೇಗಿರಬೇಕು ಎಂಬುದರ ಪರಾಮರ್ಶೆ ಇಂದು ನಡೆಯಲಿದೆ ಎಂದು ತಿಳಿಸಿದರು.
ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ. ಹನುಮಣ್ಣನಾಯಕ ದೊರೆ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕರುಣಾಳು ಬಾ ಬೆಳಕೆ, ಮಾತೆಂಬುದು ಜ್ಯೋತಿರ್ಲಿಂಗ ದೊಂದಿಗೆ ನಾಡಗೀತೆಯನ್ನು ಹಾಡಿ ಪ್ರಾರ್ಥಿಸಿದರು. ಡಾ. ಶಿವಾನಂದ ವಿರಕ್ತಮಠ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಅಶೋಕಕುಮಾರ ರಂಜೇರೆ ಅವರು ವಂದಿಸಿದರು. ವೇದಿಕೆಯಲ್ಲಿ ಡಾ. ಕಮಲಾ ಹಂಪನಾ, ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್, ಶ್ರೀ ಹಂಸಲೇಖ, ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪದ್ಮಾಶೇಖರ, ಡಾ. ಬಿ.ಟಿ. ಲಲಿತಾ ನಾಯಕ, ಡಾ. ವಸುಂಧರ ಭೂಪತಿ, ಡಾ. ಹೇಮಾ ಪಟ್ಟಣಶೆಟ್ಟಿ, ಶ್ರೀಮತಿ ಶಶಿಕಲಾ ವಸ್ತ್ರದ ಇವರು ಉಪಸ್ಥಿತರಿದ್ದರು. ಪ್ರತಿಯೊಬ್ಬ ಆಹ್ವಾನಿತರು ತಮ್ಮನ್ನು ತಾವು ಸಭೆಗೆ ಪರಿಚಯಿಸಿಕೊಂಡರು. ಚಿಂತನ ಮಂಥನದಲ್ಲಿ ಕರ್ನಾಟಕ ಲೇಖಕಿಯರ ಸಂಘದಿಂದ ೧೬ ಸದಸ್ಯರು, ಉತ್ತರ ಕರ್ನಾಟಕದ ಲೇಖಕಿಯರ ಸಂಘದಿಂದ ೨೦ ಸದಸ್ಯರು ಒಳಗೊಂಡಂತೆ ೧೦೦ಕ್ಕೂ ಹೆಚ್ಚು ವಿದ್ವಾಂಸರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ನಂತರ ೨ ಗುಂಪುಗಳಲ್ಲಿ ಮಹಿಳಾ ಲೇಖಕಿಯರು ಮತ್ತು ವಿದ್ವಾಂಸರು ಡಾ. ರಾಜಕುಮಾರ ಸಭಾಂಗಣ ಮತ್ತು ಸಿಂಡಿಕೇಟ್ ಸಭಾಂಗಣದಲ್ಲಿ ಕನ್ನಡ ವಿಶ್ವವಿದ್ಯಾಲಯದ ಇದುವರೆಗಿನ ನಡೆ ಮತ್ತು ಮುಂದಿನ ನಡೆಯನ್ನು ಕುರಿತು ಪರಾಮರ್ಶೆಯೊಂದಿಗೆ ಚರ್ಚಿಸಿದರು. ನಾಳೆಗೂ ಮುಂದುವರೆಯಲಿದೆ. ನಂತರ ಹೊನ್ನಾವರದ ಡಾ. ಅಶೋಕ ಹುಗ್ಗಣ್ಣವರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೆಳದಿಂಗಳಲ್ಲಿ ನಡೆಸಿಕೊಟ್ಟರು.

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s