ಪ್ರೊ. ಹನುಮಣ್ಣನಾಯಕ ದೊರೆ
ಅವರ ನಿವೃತ್ತಿ – ಬೀಳ್ಕೊಡುಗೆ ಸಮಾರಂಭ
ವಿಶ್ವವಿದ್ಯಾಲಯದ ಆಸ್ತಿ ಎಂದರೆ ಪ್ರಾಧ್ಯಾಪಕರು. ಪ್ರಾಧ್ಯಾಪಕರು ನಿವೃತ್ತಿಯಾದರೆ ವಿಶ್ವವಿದ್ಯಾಲಯ ಬಡತನ ಅನುಭವಿಸಬೇಕಾಗುತ್ತದೆ. ಅಂದರೆ ಅವರ ವಿದ್ವತ್ತಿನಿಂದಾಗಿ ಸದಾ ವಿಶ್ವವಿದ್ಯಾಯದಲ್ಲಿರುತ್ತಾರೆ. ಮಾಸ್ತರಿಕೆ ಮಾಡುವುದು ಸುಲಭ. ತಾಯ್ತನ(ಭಾವನೆಯಿಂದ)ದಿಂದ ವಿದ್ಯಾರ್ಥಿ ಸಮುದಾಯವನ್ನು ಗೆಲ್ಲುವುದು ಬಹಳ ಪ್ರಯಾಸದ ಕೆಲಸ. ಕನ್ನಡ ವಿಶ್ವವಿದ್ಯಾಲಯ ಬೋಧಕರಿಗೆ ಮುಕ್ತ ವಾತಾವರಣ ಕಲ್ಪಿಸಿದೆ. ಕೆಲಸವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಶಿಕ್ಷಣ ದೊಡ್ಡ ಸಂಪತ್ತು, ವಿದ್ಯಾರ್ಥಿಗಳಿಗೆ ಶ್ರದ್ಧೆ ಮತ್ತು ಪರಿಶ್ರಮ ದೊಡ್ಡ ಆಸ್ತಿ ಎಂದು ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ನೆರೆದಿದ್ದ ಬೋಧಕರು, ಅಪಾರ ವಿದ್ಯಾರ್ಥಿವೃಂದ ಮತ್ತು ಬೋಧಕೇತರರನ್ನು ಉದ್ದೇಶಿಸಿ ನುಡಿದರು.
ದಿನಾಂಕ ೩೧.೧೨.೨೦೧೬ರಂದು ಸೇವೆಯಿಂದ ನಿವೃತ್ತರಾದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಹನುಮಣ್ಣನಾಯಕ ದೊರೆ ಅವರಿಗೆ ಪಂಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಲಿತಕಲಾ ನಿಕಾಯದ ಡೀನರಾದ ಡಾ. ಅಶೋಕಕುಮಾರ ರಂಜೇರೆ ಅವರು ಸಂಗೀತದ ಗಾರುಡಿಗರಾದ ದೊರೆ ಅವರು ೨ ದಶಕ ಸೇವೆ ಸಲ್ಲಿಸಿದ್ದಾರೆ. ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ ಸರ್ವತೋಮುಖವಾಗಿ ಶ್ರಮಿಸಿದ್ದಾರೆ. ಅನೇಕ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ಆಚೆಗೂ ತಮ್ಮನ್ನು ವಿಸ್ತರಿಸಿಕೊಂಡಿದ್ದಾರೆ ಎಂದು ಹೆಮ್ಮೆಯಿಂದ ತಿಳಿಸಿದರು.
ನಂತರ ಸಂಗೀತ ವಿಭಾಗದ ಅಧ್ಯಾಪಕ ಶ್ರೀ ತೇಜಸ್ವಿ ಹೆಗಡೆ, ಸಂಶೋಧನ ವಿದ್ಯಾರ್ಥಿನಿ ಶ್ರೀಮತಿ ಮಮತ, ಪದ್ಮವತಿ, ದುಷ್ಯಂತ, ವೀರೇಶಿ ಮೊದಲಾದವರು ಅನಿಸಿಕೆ ಹಂಚಿಕೊಂಡರು.
ಗೌರವ ಸನ್ಮಾನಗಳನ್ನು ಸ್ವೀಕರಿಸಿದ ದೊರೆ ಅವರು ವಿಶ್ವವಿದ್ಯಾಲಯದಲ್ಲಿ ತಮ್ಮ ಶೈಕ್ಷಣಿಕ ಪಯಣದ ಕುರಿತು ಮಾತನಾಡುತ್ತ, ಗುರುಗಳಾದ ಪಂಡಿತ ಬಸವರಾಜ ರಾಜಗುರುಗಳನ್ನು ನೆನೆಯುತ್ತ, ವಿಶ್ವವಿದ್ಯಾಯದಿಂದ ನಾನು ಬಹಳಷ್ಟು ಪಡೆದಿದ್ದೇನೆ. ಇದು ನನ್ನ ವಿದ್ವತ್ತಿನ ವಿಸ್ತಾರಕ್ಕೆ ಕಾರಣವಾಗಿದೆ. ಸಂತೋಷದಿಂದ ನಿರ್ಗಮಿಸುತ್ತಿದ್ದೇನೆ ಎನ್ನುತ್ತ ಪತ್ನಿ ಡಾ. ಕಲಾವತಿಯೊಂದಿಗೆ ಆದದ್ದೆಲ್ಲ ಒಳಿತೇ ಆಯಿತು ಎಂದು ಹಾಡಿದರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಕನ್ನಡ ವಿಶ್ವವಿದ್ಯಾಲಯದ ಹಾಡಿನ ಮೋಡಿಗಾರನಾದ ಡಾ. ಹನುಮಣ್ಣನಾಯಕ ದೊರೆ ಅವರು ಸಂಗೀತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಡೀನರಾಗಿ, ಸಂಗೀತ ವಿಭಾಗ ಕಟ್ಟಲು ಶ್ರಮಿಸಿದ್ದಾರೆ ಎಂದು ಸ್ವಾಗತಿಸಿದರು. ಉಪಕುಲಸಚಿವರಾದ ಡಾ.ಎ. ವೆಂಕಟೇಶ ಅವರು ನಿರೂಪಿಸಿದರು. ಸಹಾಯಕ ಕುಲಸಚಿವ ಶ್ರೀ ಗುರುಬಸಪ್ಪ ವಂದಿಸಿದರು. ಶೃತಿ ಪ್ರಾರ್ಥಿಸಿದರು.