೨ ಮತ್ತು ೩ನೇ ಜನವರಿ ೨೦೧೭
ವೇದಿಕೆಯಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು, ಶ್ರೀ.ಟಿ.ಎಸ್.ನಾಗಾಭರಣ, ಶ್ರೀಮತಿ ಗೌರಿ ಲಂಕೇಶ್, ಡಾ.ಬಿ.ಕೆ. ರವಿ, ಶ್ರೀ ಎಸ್. ನಾಗಣ್ಣ, ಶ್ರೀ ಸಂಗಮದೇವ ಐ.ಎಚ್., ಶ್ರೀ ರವೀಂದ್ರ ರೇಷ್ಮೆ, ಕುಲಸಚಿವರಾದ ಡಾ. ಪಾಂಡುರಂಗಬಾಬು ಮೊದಲಾದವರು.
ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು
ಪ್ರಸ್ತಾವ ಮಂಡಿಸುತ್ತಿರುವ ವಿಶ್ಪ್ರಾವವಿದ್ಧ್ಯಾಯಾಲಯದ ಪ್ಡಾರಾಧ್ಯಾಪಕರಾದ ಡಾ. ಎಂ. ಚಂದ್ರಪೂಜಾರಿ ಅವರು
೨ನೇ ದಿನದ ಚಿಂತನ ಮಂಥನದ ವೇದಿಕೆಯಲ್ಲಿ ಶ್ರೀ ವಿಠ್ಠಪ್ಪ ಗೋರಂಟ್ಲಿ, ಶ್ರೀ ಮಂಜುನಾಥ ಅದ್ದೆ, ಶ್ರೀ ಪ್ರಕಾಶ ದೇಶಪಾಂಡೆ, ಶ್ರೀ ಮಲ್ಲಿಕಾರ್ಜುನ ಸಿದ್ದಣ್ಣವರ, ಶ್ರೀ ಉದಯಶಂಕರ ಪುರಾಣಿಕ, ಪ್ರೊ. ರವೀಂದ್ರ ರೇಷ್ಮೆ, ಮಾನ್ಯಕುಲಪತಿಯವರು, ಶ್ರೀ ಟಿ.ಎಸ್. ನಾಗಾಭರಣ, ಡಾ. ವಸಂತಕುಮಾರ ಪೆರ್ಲ, ಶ್ರೀ ಕಾರ್ದಿ ಎಸ್. ಅಚ್ಚುತನ್, ಶ್ರೀ ಗೌರೀಶ್ ಅಕ್ಕಿ, ಶ್ರೀ ಸಿದ್ದಪ್ಪ ಕಾಳೂಜಿ, ಶ್ರೀ ಎಂ.ಟಿ. ಶಿವುಕುಮಾರ, ಡಾ.ಗಣೇಶ ಅಮೀನಗಡ, ಡಾ.ಎಚ್.ಜಿ. ಶೋಭಾ ಅವರು.
ಪತ್ರಿಕಾ ವರದಿ- 02.01.2017
ಮುಂದಿನ ಜನಾಂಗಕ್ಕೆ ದುಡಿದು ಗಳಿಸುವ ಪರಿಣತಿಯನ್ನು ದಾಟಿಸುವುದು ಹಾಗೂ ಒಟ್ಟಾಗಿ ಬದುಕಲು ಪೂರಕವಾಗುವ ಸಮಾನತೆಯ ಮೌಲ್ಯವನ್ನು ಕಟ್ಟಿಕೊಡುವುದು ಉನ್ನತ ಶಿಕ್ಷಣದ ಬಹುಮುಖ್ಯ ಉದ್ದೇಶಗಳಾಗಿವೆ ಎಂದು ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಂ. ಚಂದ್ರಪೂಜಾರಿ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಮಂಟಪ ಸಭಾಂಗಣದಲ್ಲಿ ೨ ಮತ್ತು ೩ನೇ ಜನವರಿ ೨೦೧೭ರಂದು ಏರ್ಪಡಿಸಿದ್ದ ಬೆಳ್ಳಿಹಬ್ಬ ಮಾಧ್ಯಮದವರೊಂದಿಗೆ ಚಿಂತನ ಮಂಥನ ೩ರ ಚಾಲನಾ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಸ್ತಾವದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಕ್ಷಿಪ್ತ ಚಿತ್ರಣ ಮತ್ತು ಕಾರ್ಯಕ್ರಮದ ಉದ್ದೇಶವನ್ನು ತಿಳಿಸುತ್ತ ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯ ಆರಂಭವಾಗಿ ೨೫ ವರ್ಷಗಳು ತುಂಬುತ್ತಿವೆ. ಈ ಅವಧಿಯಲ್ಲಿ ೧೫೦೦ ಸಂಶೋಧನೆ ಕಾರ್ಯಯೋಜನೆಗಳನ್ನು ಸಂಪೂರ್ಣಗೊಳಿಸಿ ಪುಸ್ತಕ ರೂಪದಲ್ಲಿ ಪ್ರಸಾರಾಂಗದಿಂದ ಪ್ರಕಟಿಸಿ ಜನತೆಗೆ ತಲುಪಿಸಲಾಗಿದೆ ಎಂದರು.
ನಂತರ ಸಂಸ್ಥೆಯ ಲಕ್ಷಣವನ್ನು ವಿವರಿಸುತ್ತ ಸಮಾಜದಲ್ಲಿ ಸಮಾನತೆ ಇಲ್ಲ. ಅರ್ಥವ್ಯವಸ್ಥೆಯಲ್ಲಿ ರಾಜಕೀಯದಲ್ಲಿ ಸಮಾನತೆಯಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯನ್ನು ತರಲು ಸಾಧ್ಯತೆಗಳಿವೆ. ಬೌದ್ಧಿಕ, ಸಾಂಸ್ಥಿಕ ಸ್ವರೂಪದಲ್ಲಿ, ಪಠ್ಯಗಳಲ್ಲಿ ಸಮಾನತೆ ಬೇಕು. ಈ ಸಾಧ್ಯತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಮಾತ್ರ ಇದೆ. ಇಲ್ಲಿ ಸಂಶೋಧನೆಗೆ ಅತ್ಯಂತ ಮುಕ್ತ ವಾತಾವರಣವಿದೆ ಎಂದು ವಿಶ್ವವಿದ್ಯಾಲಯದ ಸಂಕ್ಷಿಪ್ತ ಚಿತ್ರಣ ನೀಡಿದರು.
ನಂತರ ಮಾಧ್ಯದವರೊಂದಿಗೆ ಚಿಂತನ ಮಂಥನದ ಉದ್ದೇಶ ತಿಳಿಸುತ್ತ ಒಂದು ಸಂಸ್ಥೆಯ ಏಳು ಬೀಳುಗಳನ್ನು ಗುರುತಿಸಲು ಆ ಸಂಸ್ಥೆಯ ಉದ್ದೇಶಗಳೇ ಮಾನದಂಡಗಳು. ಮೇಲ್ಪದರದ ಭಿನ್ನತೆಗಳ ನೆಲೆಯಲ್ಲಿ ಮೌಲ್ಯಮಾಪನ ಮಾಡಿದರೆ ಕನ್ನಡ ವಿಶ್ವವಿದ್ಯಾಲಯದ ಸಾಧನೆಗಳು ಭಿನ್ನವಾಗಿ ಕಾಣುವುದಿಲ್ಲ. ಜ್ಞಾನಕ್ಕೆ ಸಂಬಂಧಪಟ್ಟ ಮೂಲಭೂತ ವಿಷಯದಲ್ಲಿ ಇತರೆ ವಿಶ್ವವಿದ್ಯಾಲಯಗಳಿಗೂ ಕನ್ನಡ ವಿಶ್ವವಿದ್ಯಾಲಯಕ್ಕೂ ಭಿನ್ನತೆ ಇದೆ. ಜ್ಞಾನದ ವ್ಯಾಖ್ಯಾನದಲ್ಲಿ ಇತರೆ ವಿಶ್ವವಿದ್ಯಾಲಯಗಳಿಗೂ ಕನ್ನಡ ವಿಶ್ವವಿದ್ಯಾಲಯಕ್ಕೂ ಭಾರಿ ದೊಡ್ಡ ವ್ಯತ್ಯಾಸವಿದೆ. ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ವಿಜ್ಞಾನದ ಜ್ಞಾನದ ವ್ಯಾಖ್ಯಾನವನ್ನು, ವಿಜ್ಞಾನದ ದೃಷ್ಟಿಕೋನವನ್ನು ಯಥಾರೂಪದಲ್ಲಿ ಅನುಸರಿಸುತ್ತಿವೆ. ಆದರೆ ವಿಜ್ಞಾನ ಪ್ರತಿಪಾದಿಸುವ ವಿಜ್ಞಾನದ ಏಕಸತ್ಯ ದೃಷ್ಟಿಕೋನವನ್ನು ಅದರ ಹಾದಿಯನ್ನು ಕುರಿತು ಕನ್ನಡ ವಿಶ್ವವಿದ್ಯಾಲಯದ ತಕರಾರಿದೆ. ಆದರೆ ಸತ್ಯದ ವಿರುದ್ಧ ಅಲ್ಲ. ಪ್ರತಿ ಸಂಸ್ಕೃತಿಗಳು ತನ್ನ ಸತ್ಯವನ್ನು ಕಟ್ಟಿಕೊಳ್ಳುತ್ತಿವೆ ಎಂದು ನುಡಿದರು.
ಏಕಸತ್ಯದ ಕಲ್ಪನೆ ಮಾಡುವ ಹಾನಿ(ಡ್ಯಾಮೇಜ್) ನಮಗೆ ಅರ್ಥವಾಗಬೇಕು. ಪಶ್ಚಿಮದಲ್ಲಿ ವಿಜ್ಞಾನ ತಂತ್ರಜ್ಞಾನದ ಅಳವಡಿಕೆಯಿಂದ ಸಮಾಜ ಆಧುನೀಕರಣಗೊಂಡಿತು ಎಂದು ವಿಜ್ಞಾನ ಹೇಳಿದ್ದರಿಂದ ನಾವೆಲ್ಲ ಆಧುನೀಕರಣದ ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕಾಯಿತು. ಅದೇ ರೀತಿ ಕೆಲವು ದೇಶಗಳಲ್ಲಿ ಜಾಗತೀಕರಣ ಉದಾರೀಕರಣ, ಖಾಸಗೀಕರಣ ಯಶಸ್ಸಾಯಿತು ಎಂದು, ಪ್ರಪಂಚ ವ್ಯಾಪ್ತಿ ಕೂಡ ಏಕಸತ್ಯದ ಹೆಸರಿನಲ್ಲಿ ಆ ಪ್ರಯೋಗಕ್ಕೆ ಬಲಿಯಾಗಬೇಕಾಯಿತು. ಪ್ರತಿ ಸಂಸ್ಕೃತಿಗೂ ತನ್ನದೇ ಆದ ಕೃಷಿ ಪದ್ಧತಿ, ವ್ಯಾಪಾರ, ಉದ್ದಿಮೆ, ಆರೋಗ್ಯ, ವಾಸ್ತುಶಿಲ್ಪಗಳಿವೆ. ಅದನ್ನು ಉಳಿಸಿ ಒಂದು ಬಹುತ್ವವನ್ನು ಸ್ಥಾಪಿಸುವ ಉದ್ದೇಶ ಕನ್ನಡ ವಿಶ್ವವಿದ್ಯಾಲಯಕ್ಕೆ ಇದೆ. ಇದೇ ಕನ್ನಡ ವಿಶ್ವವಿದ್ಯಾಲಯಕ್ಕೂ ಇತರೆ ವಿಶ್ವವಿದ್ಯಾಲಯಕ್ಕೂ ಇರುವ ಬಹು ದೊಡ್ಡ ಅಂತರ. ದುರದೃಷ್ಟ ಎಂದರೆ ಇಂದು ಬಹುತೇಕ ವಿಶ್ವವಿದ್ಯಾಲಯಗಳು ಆಧುನಿಕ ಕೌಶಲ್ಯ(sಞiಟಟ)ಗಳಿಗೆ ಪ್ರಾಮುಖ್ಯತೆ ಕೊಡುತ್ತಿರುವುದರಿಂದ ಪರಂಪರೆಯಿಂದ ಬಂದ ಕೌಶಲ್ಯಗಳು ಸಂಪೂರ್ಣವಾಗಿ ಮೂಲೆಗುಂಪಾಗುತ್ತಿವೆ. ಆದ್ದರಿಂದ ನಮ್ಮ ಪಠ್ಯಗಳಲ್ಲಿ ಬೌತಿಕ ಸ್ವರೂಪದಲ್ಲಿ ಸಾಂಸ್ಥಿಕ ಸ್ವರೂಪದಲ್ಲಿ ಪ್ರಜಾಪ್ರಭುತ್ವದ ಅಂಶಗಳು ಬೇಕು. ಪಠ್ಯದಲ್ಲಿ ಶೇ.೭೦%ರಷ್ಟು ಜನರ ಬದುಕು ಬೇಕು. ಅವರ ಸಂಸ್ಕೃತಿ ನಮ್ಮ ಪಠ್ಯದಲ್ಲಿ ಬೇಕು. ಆದರೆ ಇದಾಗುತ್ತಿಲ್ಲ. ಆದ್ದರಿಂದ ಸಮಾನತೆ ಇಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ ಬಹುತೇಕರು ಮಾನ ಸಮ್ಮಾನದಿಂದ ಬದುಕಲು ಕನ್ನಡ ವಿಶ್ವವಿದ್ಯಾಲಯ ಬಯಸುತ್ತದೆ ಎಂದು ತಿಳಿಸುತ್ತ, ಸಮಾಜದ ಕೆಳಸ್ಥರಕ್ಕೆ ಸೇರಿದ ದಲಿತರು, ಬುಡಕಟ್ಟು ಜನರು ಅಲ್ಪಸಂಖ್ಯಾತರು, ಮಹಿಳೆಯರು ಈ ಸಮುದಾಯಗಳ ಮೇಲೆ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನ ಸಂಶೋಧನೆ ಕೇಂದ್ರೀಕೃತವಾಗಿದೆ. ಇದಕ್ಕಾಗಿ ಬಹಳ ದೊಡ್ಡ ಮಾನವ ಸಂಪನ್ಮೂಲ ಬೇಕು ಮತ್ತು ಹಣಕಾಸು ಬೇಕು. ಇದನ್ನು ಕೊಡಬೇಕಾದವರಿಗೆ ನಮ್ಮ ದೃಷ್ಟಿಕೋನದ ಸ್ಪಷ್ಟತೆ ಇಲ್ಲ ಎಂದು ಪ್ರೊ. ಚಂದ್ರಪೂಜಾರಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ವಿಶ್ವವಿದ್ಯಾಲಯದ ಪರಿನಿಯಮದಂತೆ ಕನ್ನಡ ವಿಶ್ವವಿದ್ಯಾಲಯವು ವಿದ್ಯೆಯನ್ನು ಸೃಷ್ಟಿಸುವ ವಿಶ್ವವಿದ್ಯಾಲಯವಾಗಿದೆ. ಆದರೆ ಪದವಿ ನೀಡುವ ವಿಶ್ವವಿದ್ಯಾಲಯ ಅಲ್ಲ. ಇದೇರೀತಿ ಕಾರ್ಯನಿರ್ವಹಿಸುತ್ತ ಬರುತ್ತಿದೆ. ಪದವಿಗಳಿಗೆ ಬೇಕಾದಂತಹ ವಿದ್ಯೆಯನ್ನು ಸಂಶೋಧಿಸುವ, ಸಂಗ್ರಹಿಸುವ ಪರಿಷ್ಕರಿಸುವ, ದಾಖಲಿಸುವ ಕೆಲಸವನ್ನು ಪ್ರಮುಖವಾಗಿರಿಸಿಕೊಂಡು ಹುಟ್ಟಿದ ಕನ್ನಡ ವಿಶ್ವವಿದ್ಯಲಯಕ್ಕೆ ಕಾಲಕ್ಕೆ ಅನುಗುಣವಾಗಿ ಕೆಲವು ತಾಂತ್ರಿಕವಾದ ಬದಲಾವಣೆಗಳು ಅನಿವಾರ್ಯವಾಗಿ ಯುಜಿಸಿ ನಿಯಮಗಳಿಗೆ ಒಳಪಡಬೇಕಾಯಿತು. ಅವತ್ತಿನ ಕಾಲಕ್ಕೆ ಅನುಗುಣವಾಗಿ ಮಾನವ ಸಂಪನ್ಮೂಲ ಮತ್ತು ಕರ್ನಾಟಕದಲ್ಲಿ ಇರುವಂತಹ ವಿದ್ವತ್ ಪ್ರಪಂಚ ಕನ್ನಡ ವಿಶ್ವವಿದ್ಯಾಲಯವನ್ನು ಅಪ್ಪಿಕೊಂಡಿದ್ದರಿಂದ ಪ್ರಾರಂಭದಲ್ಲಿ ಸಂಶೋಧನೆ ಮತ್ತು ಸಾಹಿತ್ಯಕವಾದಂತಹ ಕೆಲಸಗಳನ್ನು ಬಹಳ ಗಂಭೀರವಾಗಿ ಅರ್ಥಪೂರ್ಣವಾಗಿ ಮಾಡಿದೆ. ನಂತರ ಕನ್ನಡ ವಿಶ್ವವಿದ್ಯಾಲಯದ ನಡಿಗೆಯ ಓಘ ಕಡಿಮೆಯಾಗಲು ಹಲವು ಕಾರಣಗಳಿವೆ. ೭೨ ಅಧ್ಯಾಪಕರ ಸಂಖ್ಯೆ(ನಿವೃತ್ತಿಗಳಿಂದ) ಕಡಿಮೆಯಾಗಿದೆ. ಕನ್ನಡ ನಾಡು ಮತ್ತು ಮಾಧ್ಯಮ ಬಯಸಿದಂತೆ ಕಾರ್ಯನಿರ್ವಹಿಸಲು ಒಳಸಂಕಟಗಳಿವೆ. ಈ ಒಳಸಂಕಟಗಳನ್ನು ಜಗತ್ತಿಗೆ ಬಿಂಬಿಸುವಂತಹ ಬಹಳ ದೊಡ್ಡ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ತಿಳಿಸಿದರು.
ಸರ್ಕಾರ ಕೊಡಮಾಡಿರುವ ಅನೇಕ ವಿದ್ವಾಂಸರ ಹೆಸರಿನ ಪೀಠಗಳು ಆರ್ಥಿಕವಾಗಿ ಸೊರಗುತ್ತಾ ಹೆಸರಿಗೆ ಮಾತ್ರ ಅಸ್ತಿತ್ವ ಉಳಿಸಿಕೊಂಡಿವೆ. ವಿಸ್ತರಣ ಕೇಂದ್ರಗಳು ಆರ್ಥಿಕ ಮುಗ್ಗಟ್ಟಿನಿಂದ ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ದೇವದುರ್ಗದಲ್ಲಿರುವ ಬುದ್ಧ ಅಧ್ಯಯನ ಕೇಂದ್ರಕ್ಕೆ ಜಿಲ್ಲಾಡಳಿತ ೫೦ ಎಕರೆ ಜಮೀನು ನೀಡಿದೆ. ಕುರುಬನಕಟ್ಟೆಯಲ್ಲಿ ಒಂದು ಮಠದಲ್ಲಿ ನಮ್ಮ ವಿಸ್ತರಣಾ ಕೇಂದ್ರ ಕಾರ್ಯನಿರ್ವಹಿಸುತ್ತಿರುವುದು ನಾಡು ತಲೆತಗ್ಗಿಸುವ ಕೆಲಸವಾದರೂ ಅನಿವಾರ್ಯವಾಗಿದೆ. ಡಾ. ರಾಜಕುಮಾರ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಮತ್ತು ವಿಸ್ತರಣಾ ಕೇಂದ್ರವನ್ನು ಪ್ರಾರಂಭಿಸಲು ಸರ್ಕಾರ ಬೆಂಗಳೂರಿನಲ್ಲಿ ೨ ಎಕರೆ ಜಮೀನನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಿದೆ. ತಳಸಮುದಾಯಗಳ ಸಾಂಸ್ಕೃತಿಕ ಅಧ್ಯಯನಕ್ಕಾಗಿ ಮತ್ತು ತಳಸಮುದಾಯದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಯೋಜನೆಗಳನ್ನು ರೂಪಿಸಿಕೊಳ್ಳಲು ಸರ್ಕಾರ ಮತ್ತಷ್ಟು ಜಾಗವನ್ನು ನೀಡಿದೆ. ಈ ಎಲ್ಲ ಭೌತಿಕವಾದ ಹಿನ್ನೆಲೆಯಲ್ಲಿ ಭೌದ್ಧಿಕ ಕಾರ್ಯ ನಿರ್ವಹಿಸಲು ಹಣಕಾಸಿನ ಮುಗ್ಗಟ್ಟಿದೆ. ಈ ಕುರಿತು ಮಾಧ್ಯಮಗಳು ನಾಡಿಗೆ ಜಗತ್ತಿಗೆ ತಿಳಿಸಬೇಕೆಂದು ಈ ಚಿಂತನ ಮಂಥನ ಏರ್ಪಡಿಸಲಾಗಿದೆ ಎಂದು ನುಡಿದರು.
ಕಳೆದ ೨೫ ವರ್ಷಗಳಲ್ಲಿ ವಿವಿಧ ಸರ್ಕಾರಗಳು ಸೇರಿದಂತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಒಟ್ಟು ೫೮ ಕೋಟಿ ಅನುದಾನವನ್ನು ಅಭಿವೃದ್ಧಿಗಾಗಿ ನೀಡಿವೆ ಎಂದು ವಿಷಾದಿಸಿದರು. ಈ ಸಣ್ಣ ಅನುದಾನದಲ್ಲಿ ಜಗತ್ತೇ ನೋಡಬಹುದಾದ ಭೌತಿಕ ಮತ್ತು ಬೌದ್ಧಿಕ ಕೆಲಸಗಳನ್ನು ಮಾಡಲಾಗಿದೆ. ಸಾಂಸ್ಕೃತಿಕ ಕುರುಹುಗಳನ್ನು ಮುಂದಿನ ಜನಾಂಗಕ್ಕೆ ಉಳಿಸುವ ರವಾನಿಸುವ, ದಾಖಲಿಸುವ ಕೆಲಸವನ್ನೂ ಮಾಡಲಾಗಿದೆ. ಈಗ ನಮಗೆ ಕೇವಲ ೨ ಕೋಟಿ ಮಾತ್ರ ಅಭಿವೃದ್ಧಿ ಅನುದಾನ ಮಂಜೂರು ಆಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಿಂದ ತಳಸ್ಥರದಿಂದ ಬರುವ ವಿದ್ಯಾರ್ಥಿಗಳಿಗೆ ಕನ್ನಡ ವಿಶ್ವವಿದ್ಯಾಲಯವೇ ಪ್ರತಿ ತಿಂಗಳು ೧೦ ಸಾವಿರ ರೂಪಾಯಿಗಳಂತೆ ಅಧ್ಯಯನಕ್ಕೆ ನೆರವು ನೀಡಿ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಜಗತ್ತೇ ಗಮನಿಸುವಂತೆ ಬುಡಕಟ್ಟುಗಳಿಗೆ ಸಂಬಂಧಿಸಿದಂತೆ ಕನ್ನಡ ವಿಶ್ವವಿದ್ಯಾಲಯ ಕೆಲಸ ಮಾಡಿದೆ. ನಮ್ಮ ಸಂಶೋಧನೆಯ ಫಲಿತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದರೂ ಅಧಿಕಾರಿಗಳು ಪರಿಗಣಿಸುವುದಿಲ್ಲ. ಇಲ್ಲಿ ಕನ್ನಡ ಭಾಷೆಯನ್ನು ಕಲಿಸುತ್ತಿಲ್ಲ. ಭಾಷೆಯ ಮೂಲಕ ಕರ್ನಾಟಕವನ್ನು ಜಗತ್ತನ್ನು ಪರಿಚಯಿಸುವ ಕೆಲಸ ಮಾಡಲಗುತ್ತಿದೆ. ಇದು ಅಧಿಕಾರಶಾಹಿಗೆ ತಿಳಿಯುತ್ತಿಲ್ಲ ಎಂದರು.
ಸಾಂಸ್ಕೃತಿಕ ರಾಜಕಾರಣಕ್ಕೆ ಸಂಬಂಧಪಟ್ಟ ಹಾಗೆ ವಿಶ್ವವಿದ್ಯಾಲಯ ಇಟ್ಟುಕೊಂಡಿರುವ ನಂಬಿಕೆ, ಭರವಸೆಗಳನ್ನು ಇಂದಿನ ರಾಜಕಾರಣಿಗಳಿಗೆ ಮುಟ್ಟಿಸುವ ಜವಾಬ್ದಾರಿಯ ಹಿನ್ನೆಲೆಯಲ್ಲಿ ಜನವರಿ ೬, ೭ರಂದು ರಾಜಕಾರಣಿಗಳೊಂದಿಗೆ ೪ನೇ ಚಿಂತನ ಮಂಥನ ಏರ್ಪಡಿಸಿದೆ ಎಂದು ತಿಳಿಸಿದರು. ಇವರೆಲ್ಲರೂ ಮತ್ತು ಮಾಧ್ಯಮದವರನ್ನು ಒಳಗೊಂಡಂತೆ ಒಂದು ನಿಯೋಗ ಕರೆದುಕೊಂಡು ಸರ್ಕಾರಕ್ಕೆ ಹೋಗಲಾಗುವುದು. ಈ ನಿಯೋಗದ ಮೂಲಕ ಕನ್ನಡ ವಿಶ್ವವಿದ್ಯಾಲಯ ಪಾರಂಪರಿಕ ವಿಶ್ವವಿದ್ಯಾಲಯ ಅಲ್ಲ ಎಂದು ಮನವರಿಕೆ ಮಾಡಿಕೊಡುವ ಉದ್ದೇಶವಿದೆ ಎಂದು ಸ್ಪಷ್ಟಪಡಿಸಿದರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ನಿರೂಪಿಸಿ, ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವೇದಿಕೆಯಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು, ಶ್ರೀ.ಟಿ.ಎಸ್.ನಾಗಾಭರಣ, ಶ್ರೀಮತಿ ಗೌರಿ ಲಂಕೇಶ್, ಡಾ.ಬಿ.ಕೆ. ರವಿ, ಶ್ರೀ ಎಸ್. ನಾಗಣ್ಣ, ಶ್ರೀ ಸಂಗಮದೇವ ಐ.ಎಚ್. ಮೊದಲಾದವರು ಉಪಸ್ಥಿತರಿದ್ದರು. ನಂತರ ೨ ಸಭಾಂಗಣದಲ್ಲಿ ಕನ್ನಡ ವಿಶ್ವವಿದ್ಯಾಲಯದ ಇದುವರೆಗಿನ ನಡೆ ಮತ್ತು ಮುಂದಿನ ನಡೆ ಕುರಿತು ಪರಾಮರ್ಶೆ, ಚರ್ಚೆಗಳು ನಡೆದವು. ಸಂಜೆ ಶ್ರೀ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.