ತಿಂಗಳು: ಫೆಬ್ರವರಿ 2017

ಮಹಿಳಾ ರಾಜಕಾರಣಿಗಳ ಆತ್ಮಕಥನ-೧ ಮಹಿಳಾ ಅಧ್ಯಯನ ವಿಭಾಗ ಮತ್ತು ಮಹಿಳಾ ಅಧ್ಯಯನ ಕೇಂದ್ರ

ಪತ್ರಿಕಾ ವರದಿ

01-302-403-204-2

ಹೊರಗಿನ ಆಭರಣಗಳು ನಮಗೆ ಎಷ್ಟೇ ಇದ್ದರೂ ನಮ್ಮೊಳಗಿರುವ ತೇಜಸ್ಸು, ಅಂತಃಸತ್ವ, ಆತ್ಮವಿಶ್ವಾಸ, ಇಚ್ಛಾಶಕ್ತಿಗೆ ಧಕ್ಕೆ ಬರದಂತೆ ಮುಕ್ಕಾದಂತೆ ಜನಸೇವೆ ಮಾಡಿದರೆ ಯಶಸ್ಸು ನಮಗೆ ಖಂಡಿತ ಎಂದು ಹಿರಿಯ ಚಿಂತಕರಾದ ಶ್ರೀಮತಿ ಶಶಿಕಲಾ ವಸ್ತ್ರದ ಅವರು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ವಿಭಾಗ ಮತ್ತು ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ೨೭ರಿಂದ ೨೮ನೇ ಫೆಬ್ರವರಿ ೨೦೧೭ರ ವರೆಗೆ ಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ರಾಜಕಾರಣಿಗಳ ಆತ್ಮಕಥನ-೧ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣಿನ ಕೈ ಜಗತ್ತಿನ ತೊಟ್ಟಿಲನ್ನು ತೂಗಬಹುದು ಎಂಬ ಅರಿವಿದ್ದರೂ ಆ ಕೈ ಮನೆಯ ತೊಟ್ಟಿಲನ್ನಷ್ಟೇ ತೂಗುತ್ತಿರಲಿ ಎಂಬ ಶಪಥ ಪುರುಷೋತ್ತಮರದು. ಹೀಗಾಗಿ ಇಂದಿನ ವ್ಯವಸ್ಥೆಗೆ ಬಂದು ನಿಂತಿದ್ದೇವೆ. ಕುಟುಂಬ ಕೇಂದ್ರಿತ ಸ್ತ್ರೀಯ ಜವಾಬ್ದಾರಿಗಳು ಕುಟುಂಬಕ್ಕೆ ಸೀಮಿತವಿರಲಿ ಎಂದು ಅವರು. ಕುಟುಂಬದೊಂದಿಗೆ ರಾಜಕಾರಣವನ್ನೂ ನಾವು ಸಮರ್ಥವಾಗಿ ನಿಭಾಯಿಸಿ ತೋರಿಸುತ್ತೇವೆ ಎಂಬ ಹಠ, ಸಮಾನತೆಯ ಕೂಗು ನಮ್ಮ ಸ್ತ್ರೀಯರದ್ದು. ರಾಜಕಾರಣವನ್ನು ನಿಭಾಯಿಸಲು ಮಹಿಳೆಯರು ಕುಟುಂಬವನ್ನು ತೊರೆಯಬೇಕೆಂದಿಲ್ಲ. ಕುಟುಂಬವನ್ನು ಜವಾಬ್ದಾರಿಯಿಂದ ನೋಡಬಲ್ಲ ತಾಯಿ ಇಡೀ ಜಗತ್ತನ್ನು ನೋಡಬಲ್ಲಳು ಎಂದು ತಿಳಿಸಿದರು.
ಮುಂದುವರೆದು ಚರಿತ್ರೆಯಿಂದಲೂ ಮಹಿಳೆಯರು ಪುರುಷರಿಗೆ ಸಮಾನಳಾಗಿ ರಾಜ್ಯ ಕಟ್ಟಿದ್ದಾರೆ. ಸಮರ್ಥವಾಗಿ ಆಳಿದ್ದಾರೆ. ರಣರಂಗದಲ್ಲಿ ಸರಿಸಮವಾಗಿ ಯುದ್ಧ ಮಾಡಿದ್ದಾರೆ. ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಯುದ್ಧ ಮಾಡಿದ ವನಿತೆಯರಿದ್ದಾರೆ. ರಣರಂಗದಲ್ಲಿ, ಕುಟುಂಬ ವ್ಯವಸ್ಥೆಯಲ್ಲಿ ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ತಾಯಿ ಇದ್ದಾಳೆ. ಅಂತಹ ಮಹಿಳೆಯರಿಗೆ ನಿರೀಕ್ಷಿತ ಮಟ್ಟದಲ್ಲಿ ರಾಜಕೀಯ ರಂಗಕ್ಕೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ರಾಜಕೀಯೇತರ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸ್ವಾಗತವಿಲ್ಲ. ಯಾರೂ ಕೆಂಪು ಹಾಸು ಹಾಕಿಲ್ಲ. ಹೀಗೆ ಮಹಿಳೆಯರನ್ನು ಹಿಂದಿಕ್ಕುತ್ತ ಬಂದಿರುವ ದುರಂತ ಪರಿಸ್ಥಿತಿಯಲ್ಲಿ ಕೆಲವೇ ಮಹಿಳಾ ರಾಜಕಾರಣಿಗಳು ಹೇಗೆ ಮುಂದೆ ಬಂದರು ಎಂಬ ಕುತೂಹಲದ ಪ್ರಶ್ನೆಗಳಿವೆ. ತನ್ನ ಬದುಕಿನಲ್ಲಿ ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಗಟ್ಟಿಯಾಗಿದ್ದರೆ ಮಾತ್ರ ಬದುಕಲು ಸಾಧ್ಯ. ನಿರ್ಭಿಡೆ, ನಿರ್ಭೀತತನ, ಮಾತನಾಡುವಾಗ ಪ್ರಾಮಾಣಿಕತೆ ಇದ್ದರೆ ಜನ ನಂಬುತ್ತಾರೆ. ಅಲ್ಲಿ ನಮ್ಮ ಅಸ್ಮಿತೆ ಇರುತ್ತದೆ ಎಂದು ಶಶಿಕಲಾ ಅವರು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ರಾಜಕೀಯ ಕ್ಷೇತ್ರ ಮಹಿಳೆಯರಿಗೆ ಒಗ್ಗದು ಎಂದು ತಿಳಿದಿರುವ ಸಮಾಜದಲ್ಲಿ ರಾಜಕೀಯ ಪ್ರವೇಶಿಸಿದ ನಮ್ಮ ಮೊದಲ ತಲೆಮಾರಿನ ಮಹಿಳಾ ರಾಜಕಾರಣಿಗಳನ್ನು ಮಾತನಾಡಿಸಿದರೆ ಮುಂದಿನ ತಲೆಮಾರಿನ ಮಹಿಳಾ ರಾಜಕಾರಣಿಗಳಿಗೆ ದಾರಿ ತೋರಿಸಿದ ಹಾಗೆ ಆಗುತ್ತದೆ ಎಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜಕಾರಣ ಮಾಡುವ ಪುರುಷರ ಮಹಿಳೆಯಲ್ಲಿರುವ ಹೆಂಡತಿಯರ ಅನುಭವಗಳನ್ನೂ ಕೇಳಬೇಕಾಗಿದೆ. ಒಬ್ಬ ಪುರುಷನ ಯಶಸ್ಸಿಗೆ ಮಹಿಳೆ ಕಾರಣ ಎಂದು ಹೇಳುವ ಸಮಾಜದಲ್ಲಿ ಯಶಸ್ವಿ ರಾಜಕಾರಣಿಗಳಾಗಿ ಕರ್ನಾಟಕದ ಚರಿತ್ರೆಯಲ್ಲಿ ರಾಜಕಾರಣ ಮಾಡಿದ ಪುರುಷರ ಮನೆಯಲ್ಲಿರುವ ಮಹಿಳೆಯರು ಹೇಗೆ ತಮ್ಮ ಮನೆಯ ಪುರುಷರನ್ನು ನಿಭಾಯಿಸಿದರು ಎಂದು ತಿಳಿಯಬೇಕಾಗಿದೆ ಎಂದು ಕುಲಪತಿಗಳು ಹೇಳುತ್ತ ರಾಜಕೀಯ ಕ್ಷೇತ್ರ ಪುರುಷರದ್ದು ಎನ್ನುವ ಸ್ಪಷ್ಟವಾದ ನಂಬಿಕೆಯನ್ನು ಒಡೆದು ಪ್ರವೇಶ ಪಡೆಯುವುದು ಬಹಳ ಕಷ್ಟದ ಕೆಲಸವೇ ಸರಿ. ಬಲಿಷ್ಠ ಶಕ್ತಿಯನ್ನು ಬೆಂಬಲವಾಗಿಟ್ಟುಕೊಂಡು ರಾಜಕಾರಣಕ್ಕೆ ಬರುವಂತಹ ಮಹಿಳೆಯರ ಅನುಭವಗಳು ಬೇರೆ ರೀತಿ ಇರುತ್ತವೆ. ಇದಾವುದಿಲ್ಲದೇ ಸಂವಿಧಾನ ಕೊಟ್ಟ ಅವಕಾಶಗಳನ್ನು ಬಳಸಿಕೊಂಡು ರಾಜಕಾರಣಕ್ಕೆ ಬರುವ ಮಹಿಳೆಯರ ಅನುಭವಗಳು ಬೇರೆ ಆಗಿರುತ್ತದೆ. ಯಾವುದೇ ರಾಜಕೀಯ ಪಕ್ಷದ ಮಹಿಳಾ ರಾಜಕಾರಣಗಳು ಆಯ್ಕೆಯಾಗಿ ಬಂದಾಗ ಸರ್ಕಾರಗಳು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆಗಳನ್ನು ಬಿಟ್ಟು ಗೃಹಖಾತೆಯನ್ನು ಕೊಟ್ಟಿದ್ದು ಕಂಡಿಲ್ಲ. ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ನೀರಾವರಿ ಖಾತೆಯನ್ನು ಲೀಲಾವತಿದೇವಿ ಆರ್. ಪ್ರಸಾದ್ ಅವರಿಗೆ ವಹಿಸಲಾಗಿತ್ತು. ಪೂರ್ಣ ಪ್ರಮಾಣದಲ್ಲಿ ಮಹಿಳಾ ಶಕ್ತಿಯನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಸಮಾಜ ಮತ್ತು ಪಕ್ಷಗಳು ಅವಕಾಶ ಮಾಡಿಕೊಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರು ರಾಜಕೀಯ ಪ್ರವೇಶಿಸಿದಾಗ ಕುಟುಂಬದ ಒಳಗೆ ಮತ್ತು ಹೊರಗೆ ಅವರು ಎದುರಿಸಿದ ಬಿಕ್ಕಟ್ಟುಗಳು ಮತ್ತು ಸಮಸ್ಯೆಗಳನ್ನು ಮೊದಲ ತಲೆಮಾರಿನ ಮಹಿಳಾ ರಾಜಕಾರಣಿಗಳು ಪ್ರಾಮಾಣಿಕವಾಗಿ ತಮ್ಮ ಅನುಭವವನ್ನು ಬಿಚ್ಚಿಟ್ಟರೆ ಅದನ್ನು ಬರಹ, ಓದು ದಾಖಲೀಕರಣದ ಮೂಲಕ ಮುಂದಿನ ತಲೆಮಾರಿನ ಮಹಿಳೆಯರಿಗೆ ಇದೆಲ್ಲವನ್ನು ಮೀರಲು ಸಾಧ್ಯವಾಗುತ್ತದೆ. ಪಕ್ಷಾಧಾರಿತವಾಗಿ ಮಾತನಾಡುವ ರಾಜಕಾರಣಕ್ಕೆ ಮಹಿಳೆಯರು ಒಳಗಾಗಬೇಕೋ ಅಥವಾ ಬೌದ್ಧಿಕ ತಿಳುವಳಿಕೆಯ ಆಧಾರಿತವಾದ ಸ್ತ್ರೀ ಕೇಂದ್ರಿತ ನೆಲೆಯೊಳಗೆ ಮಹಿಳೆ ರಾಜಕಾರಣವನ್ನು ಆರಂಭಿಸಬೇಕೋ ಎಂಬ ಸಮಸ್ಯೆಗಳು ನಮ್ಮೆದುರಿಗೆ ಇವೆ ಎಂದು ತಿಳಿಸಿದರು.
ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು ಸಾಮಾಜಿಕ ನೆಲೆಯ ಯಜಮಾನಿಕೆ ಮತ್ತು ಆರ್ಥಿಕ ನೆಲೆಯ ಯಜಮಾನಿಕೆ ಈ ಎರಡರ ಸಹಯೋಗ ಇದ್ದರೆ ಮಾತ್ರ ರಾಜಕೀಯ ಅಧಿಕಾರ ದಕ್ಕಿಸಿಕೊಳ್ಳಲು ಸಾಧ್ಯವಿರುವ ಸಂದರ್ಭದಲ್ಲಿ ಸಾಮಾಜಿಕ ಮತ್ತು ಆರ್ಥಿಕ ನೆಲೆಗಳಿಂದ ವಂಚಿತರಾದ ತಳಸಮುದಾಯ ಅಥವಾ ಒಟ್ಟು ಮಹಿಳಾ ಸಮುದಾಯ ತಮ್ಮಷ್ಟಕ್ಕೆ ತಾವೇ ಅಧಿಕಾರ ಪಡೆಯುವುದು ಬಹಳ ತ್ರಾಸದಾಯಕ. ಇವರ ಇಕ್ಕಟ್ಟು ಮತ್ತು ಬಿಕ್ಕಟ್ಟುಗಳನ್ನು ಅವರ ಬಾಯಿಂದ ಕೇಳಬೇಕಾದ ಸಂದರ್ಭ ಇದು. ಇದಕ್ಕೆ ಒಂದು ಶೈಕ್ಷಣಿಕ ಚೌಕಟ್ಟು ಅಳವಡಿಸಿ ಈ ಕಾರ್ಯಕ್ರಮ ಆಯೋಜಿಸಿದರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನಕಾರರಿಗೆ ಇದು ಬಹಳ ಮುಖ್ಯವಾಗುತ್ತದೆ ಎನ್ನುತ್ತ ಸ್ವಾಗತಿಸಿದರು.
ವಿಭಾಗದ ಮುಖ್ಯಸ್ಥರು ಮತ್ತು ಕೇಂದ್ರದ ನಿರ್ದೇಶಕರಾದ ಡಾ. ಶೈಲಜಾ ಹಿರೇಮಠ ಅವರು ಪ್ರಾಸ್ತಾವಿಕ ನುಡಿಯುತ್ತ ಸಂವಿಧಾನದ ೩೨೫, ೩೨೬ ವಿಧಿಗಳು ಮಹಿಳೆ-ಪುರುಷರಿಗೆ ಸಮಾನ ರಾಜಕೀಯ ಅಧಿಕಾರ ನೀಡಿವೆ. ನಾಗಾಲ್ಯಾಂಡ್‌ನಲ್ಲಿ ಸ್ಥಳೀಯ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.೩೩% ಮೀಸಲಾತಿಯನ್ನು ನೀಡುವ ನಿರ್ಧಾರವನ್ನು ಇಡೀ ನಾಗಾಲ್ಯಾಂಡ್ ವಿರೋಧಿಸಿ ಹೊತ್ತಿ ಉರಿಯುತ್ತಿದೆ. ಆದರೆ ಬೇರೆ ರಾಜ್ಯಗಳಲ್ಲಿ ನೇರವಾಗಿ ಹೇಳದಿದ್ದರೂ ರಾಜಕೀಯ ಪಕ್ಷಗಳು ಮತ್ತು ಮುಖಂಡರು ನಾಗಾಲ್ಯಾಂಡ್ ಮನಸ್ಥಿತಿಯನ್ನು ಹೊಂದಿದ್ದಾರೆ. ದೇಶ-ವಿದೇಶಗಳಲ್ಲೂ ಮಹಿಳಾ ರಾಜಕಾರಣಿಗಳ ಕುರಿತು ಒಂದೇ ರೀತಿಯ ಧೋರಣೆ ಕಾಣಬರುತ್ತದೆ. ಮಹಿಳೆಯರನ್ನು ಮತಬ್ಯಾಂಕ್ ಆಗಿ ಪರಿಗಣಿಸಿಲ್ಲ ಎಂದರು.
ಕೇಂದ್ರದ ಡಾ. ಯರ್ರಿಸ್ವಾಮಿ ನಿರೂಪಿಸಿ, ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಂತರ ಗೋಷ್ಠಿಯಲ್ಲಿ ಮಾಜಿ ಸಚಿವೆಯರಾದ ಡಾ.ಬಿ.ಟಿ.ಲಲಿತಾನಾಯಕ ಮತ್ತು ಡಾ.ಲೀಲಾದೇವಿ ಆರ್.ಪ್ರಸಾದ್ ಅನುಭವಗಳನ್ನು ಹಂಚಿಕೊಂಡರು.

ತಾಯ್ನುಡಿಗಳ ಅಳಿವು ಉಳಿವು ವಿಶ್ವ ತಾಯ್ನುಡಿ ದಿನದ ಅಂಗವಾಗಿ ಉಪನ್ಯಾಸ- ಕನ್ನಡ ಭಾಷಾಧ್ಯಯನ ವಿಭಾಗ

ಪತ್ರಿಕಾ ವರದಿ

೨೧ನೇ ಶತಮಾನದಲ್ಲಿ ಸಮಾಸ ಪದಗಳಾದ ತಾಯ್ನುಡಿ ತಾಯಿನೆಲ ಹೊರಜಿಗಿತ ಮತ್ತು ಒಳಹಿಡಿತದ ಜಗ್ಗಾಟದಂತೆ ಕಾಣಿಸುತ್ತದೆ. ಯಾವುದೋ ಒಂದರಿಂದ ನಾವು ಹೊರಗಡೆ ಸಿಡಿದು ಹೋಗುತ್ತ ಇದ್ದೀವಿ ಎಂದು ಆದಾಗ ಮರಳಿ ಅದಕ್ಕೆ ಅಂಟಿಕೊಳ್ಳಬೇಕು ಅನ್ನುವ ಹಂಬಲ ಸಹ ಏಕಕಾಲದಲ್ಲಿ ಹುಟ್ಟಿಕೊಳ್ಳುತ್ತವೆ. ಈ ಕಳಚಿಕೊಳ್ಳುವಿಕೆ ಮತ್ತು ಅಂಟಿಕೊಳ್ಳುವಿಕೆ ಇದು ತಾಯ್ನುಡಿಗಳ ಮುಖ್ಯವಾದ ಬಿಕ್ಕಟ್ಟು ಎಂದು ಬೆಂಗಳೂರು ವಿಜಯಕರ್ನಾಟಕ ಸಹಾಯಕ ಸಂಪಾದಕರಾದ ಶ್ರೀ ಕೆ. ವೆಂಕಟೇಶ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಕನ್ನಡ ಭಾಷಾಧ್ಯಯನ ವಿಭಾಗವು ಮಂಟಪ ಸಭಾಂಗಣದಲ್ಲಿ ೨೧ನೇ ಫೆಬ್ರವರಿ ೨೦೧೭ರಂದು ವಿಶ್ವ ತಾಯ್ನುಡಿ ದಿನದ ಅಂಗವಾಗಿ ತಾಯ್ನುಡಿಗಳ ಅಳಿವು ಉಳಿವು ವಿಷಯ ಕುರಿತು ಉಪನ್ಯಾಸ ನೀಡುತ್ತ ಮಾತನಾಡಿದರು.
ಇಂಗ್ಲಿಷ್ ಭಾಷೆ ಸಿಂಹಿಣಿಯ ಹಾಲು. ಅದನ್ನು ಕುಡಿದರೆ ನೀವು ಗಟ್ಟಿಯಾಗುತ್ತೀರಿ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಮ್ಮ ಅನೇಕ ಸಂಕಥನಗಳನ್ನು ನೋಡಿದಾಗ ದಲಿತ ಚಿಂತಕರು ಹಾಗೂ ದಲಿತೇತರ ಚಿಂತಕರು ಇಂಗ್ಲಿಷ್ ಅನ್ನು ಜಾತಿಯ ಸಂಕಷ್ಟಗಳಿಂದ ಪೀಡನೆಗಳಿಂದ ಬಿಡುಗಡೆ ಗೊಳಿಸುವುದಕ್ಕೆ ಪರ್ಯಾಯವಾಗಿ ಸಮಾನವಾಗಿ ನೋಡುವ ಪರಿಪಾಠವಿದೆ. ವಾದ ವಿದೆ. ಇಂಗ್ಲಿಷ್ ಅನ್ನು ಅಭಿವೃದ್ಧಿಯ ಹರಿಕಾರ ಎಂದು ಭಾವಿಸಲಾಗಿದೆ. ಮಕ್ಕಳ ಶಿಕ್ಷಣದ ವಿಷಯದಲ್ಲಿ ತಂದೆ ತಾಯಿಗಳು ಕಟ್ಟಿಕೊಂಡಿರುವ ಕನಸಿನಲ್ಲಿ ಇಂಗ್ಲಿಷ್ ನಿರ್ಣಯಕವಾಗಿರುತ್ತದೆ. ಇಂಗ್ಲಿಷ್ ಕಲಿತರೆ ಎಲ್ಲವೂ ಸಿಗುತ್ತದೆ ಎಂದು ಭಾವಿಸಲಾಗಿದೆ. ಆದರೆ ೧೧ ಲಕ್ಷ ಇಂಜಿನಿಯರುಗಳು ತಾವು ಓದಿರುವುದಕ್ಕಿಂತ ಭಿನ್ನವಾದ ಉದ್ಯೋಗ ಮಾಡುತ್ತಿದ್ದಾರೆ. ಇಂತಹ ಸತ್ಯಾಸತ್ಯತೆಗಳ ಕುರಿತು ನಾವು ಪರೀಕ್ಷೆ ಮಾಡಿದ್ದೇವಾ ಎಂದು ತಾಯ್ನುಡಿಗಳ ಅಸ್ತಿತ್ವ ಮತ್ತು ವಿನಾಶದ ಪ್ರಶ್ನೆಗಳ ಸಂದರ್ಭದಲ್ಲಿ ಕೇಳಿಕೊಳ್ಳಬೇಕಾಗಿದೆ. ಮನೆಮಾತು ಅಥವಾ ತಾಯ್ನುಡಿಯಿಂದ ದೇಸೀ ಜ್ಞಾನ ಸಿಗುತ್ತದೆ. ನೆಲದೊಂದಿಗೆ ಆಳವಾದ ನಂಟನ್ನು ಉಂಟು ಮಾಡುತ್ತದೆ. ತುಂಬಾ ಪರಿಣಾಮಕಾರಿಯಾದ ಸಾಮಾಜೀಕರಣ ಆಗುತ್ತದೆ. ಸಾಂಸ್ಕೃತಿಕ ನೆನಪುಗಳು ಇರುತ್ತವೆ. ಆದರೆ ಪರಕೀಯ ನುಡಿಗಳಿಂದ ಇದು ಸಾಧ್ಯವಾಗುವುದಿಲ್ಲ ಎಂದು ಉಪನ್ಯಾಸದಲ್ಲಿ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಬಹುಭಾಷೆಯ ಮೂಲಕ ಸುಸ್ಥಿರ ಸಮಾಜ ಕಟ್ಟಬಹುದು ಎಂದು ಯುನೆಸ್ಕೋ ಹೊರಡಿಸಿರುವ ಘೋಷಣೆಯು ಜಾಗತಿಕ ಭಾಷಾರಾಜಕಾರಣದ ವ್ಯಾಖ್ಯಾನವಾಗಿದೆ. ಜಗತ್ತಿನಲ್ಲಿ ಇಂದು ತಂತ್ರ ಪ್ರಣೀತವಾದಂತಹ ರಾಜಕಾರಣ ಬಹಳ ದೊಡ್ಡ ಹುನ್ನಾರವನ್ನು ಹುಟ್ಟಿಸಿದೆ. ಭಾಷೆ, ಸಂಸ್ಕೃತಿ, ಸಮಾಜ, ಧರ್ಮ ಇವೆಲ್ಲವುಗಳ ಒಳಗೆ ಬಹಳ ಸೂಕ್ಷ್ಮವಾಗಿ ಸ್ಥಳೀಯ ಮತ್ತು ಹೊರಗಿನ ಅಹಂಕಾರಗಳು ಪ್ರವೇಶ ಮಾಡಿವೆ. ಹೀಗಾಗಿ ಬಹುಭಾಷೆಯ ಕಲಿಕೆಯ ಮೂಲಕ ಸುಸ್ಥಿರ ಸಮಾಜ ಅಂದರೆ ಬಹುಭಾಷೆಯಲ್ಲಿ ಯಾವ ಭಾಷೆ ಮೇಲಿರಬೇಕು, ಕೆಳಗಿರಬೇಕು ಎಂಬ ಪ್ರಶ್ನೆಗಳು ಕಾಡುತ್ತವೆ. ಬಹುಭಾಷೆ ಕಲಿಯಬೇಕಾದರೆ ಮೊದಲು ಕನ್ನಡ ಕಲಿಯಬೇಕೆ ಅಥವಾ ಇಂಗ್ಲಿಷ್ ಕಲಿಯಬೇಕೆ ಎಂಬ ಸಂದಿಗ್ಧ. ಹೀಗಾಗಿ ಬಹುಭಾಷೆ ಇಡೀ ಜಗತ್ತಿನ ಸಾಂಸ್ಕೃತಿಕ ಲೋಕವನ್ನು ಒಂದು ಚೌಕಟ್ಟಿಗೆ ಒಳಪಡಿಸುವಂತಹ ಬಹಳ ದೊಡ್ಡ ಅಪಾಯವನ್ನು ನಮ್ಮೆದುರಿಗೆ ಇಟ್ಟು ಅದು ಎಲ್ಲೋ ಒಂದು ಕಡೆಗೆ ಶಕ್ತಿರಾಜಕಾರಣದ ಜಾಗತಿಕ ಶಕ್ತಿರಾಜಕಾರಣದ ಅಸ್ತ್ರವನ್ನಾಗಿ ಭಾಷೆಯನ್ನು ಬಳಸಿಕೊಳ್ಳುತ್ತದೆ ಎಂಬುದು ನಿಚ್ಚಳವಾಗಿದೆ. ವಸಾಹತೋತ್ತರದ ನಂತರ ಅಭಿವೃದ್ಧಿಯ ಕಡೆಗೆ ಮುಖ ಮಾಡಿದ ಎಲ್ಲ ದೇಶಗಳಲ್ಲಿಯೂ ಭಾಷಾರಾಜಕಾರಣದ ಮೂಲಕ ಸಾಂಸ್ಕೃತಿಕ ಹಲ್ಲೆ ನಡೆಯುತ್ತಿರುವುದನ್ನು ನೋಡಬಹುದು. ಮಾಧ್ಯಮ ಭಾಷೆಯಾಗಿ, ಕಲಿಕೆಯ ಭಾಷೆಯಾಗಿ ಒಂದು ಪ್ರದೇಶದ ಭಾಷೆಯನ್ನು ಪಠ್ಯಕ್ಕೆ ಅಳವಡಿಸಿದ್ದರಿಂದ ಹಲವು ಕನ್ನಡ ಭಾಷೆಯ ಸೊಗಡುಗಳನ್ನು ಕಲಿಕೆಯ ಒಳಗೆ ಪ್ರವೇಶ ಮಾಡಲು ಇಂದಿನವರೆಗೂ ಮಡಿವಂತಿಕೆಯ ಮನಸ್ಸು ಬಿಡುತ್ತಿಲ್ಲ; ನಾವು ತೆರೆದುಕೊಂಡಿಲ್ಲ. ಇಂಗ್ಲಿಷ್ ಭಾಷೆಯನ್ನು ಓದುವುದು ತಪ್ಪಲ್ಲ. ಆದರೆ ನಮ್ಮ ಸಹಜತೆಯನ್ನು ಕಳೆದುಕೊಳ್ಳುವುದು ತಪ್ಪು ಎಂದು ಕುಲಪತಿಯವರು ನುಡಿದರು.
ಲಲಿತಕಲೆಗಳ ನಿಕಾಯದ ಡೀನರಾದ ಡಾ. ಅಶೋಕಕುಮಾರ ರಂಜೇರೆ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ವಿದ್ಯಾರ್ಥಿ ಡಾ. ಜೆ. ಕುಮಾರ ನಿರೂಪಿಸಿದರು. ಸಂಗೀತ ವಿದ್ಯಾರ್ಥಿ ಪ್ರಾರ್ಥಿಸಿದರು. ಡಾ. ಸಾಂಬಮೂರ್ತಿ ವಂದಿಸಿದರು. ಉಪನ್ಯಾಸದ ನಂತರ ಚರ್ಚೆಯಲ್ಲಿ ಡಾ. ಶಿವಾನಂದ ಎಸ್. ವಿರಕ್ತಮಠ, ಡಾ. ವೀರೇಶ ಬಡಿಗೇರ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು.

dsc00372-102-2001

ರಾಜ್ಯಮಟ್ಟದ ಜನಪರ ಶಿಲಾ ಶಿಲ್ಪಕಲಾ ಶಿಬಿರದ ಸಮಾರೋಪ (ಗಿರಿಜನ ಉಪಯೋಜನಡಿಯಲ್ಲಿ)

04-1

03

02

ಶಿಲ್ಪಕಲೆಗೆ ಬೌದ್ಧಿಕ ಕೌಶಲ್ಯದೊಂದಿಗೆ ದೈಹಿಕ ಕೌಶಲ್ಯವೂಬೇಕು ಎಂದು ನಾಡೋಜ ವಿ.ಟಿ. ಕಾಳೆ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯ ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ದಿನಾಂಕ ೨೮.೧.೨೦೧೭ರಂದು ಏರ್ಪಡಿಸಿದ್ದ ರಾಜ್ಯಮಟ್ಟದ ಜನಪರ ಶಿಲಾ ಶಿಲ್ಪಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಭಿರಾರ್ಥಿಗಳು ರಚಿಸಿದ ಶಿಲ್ಪಕೃತಿಗಳನ್ನು ಲೋಕಾರ್ಪಣೆ ಮಾಡಿ ಮಂಟಪ ಸಭಾಂಗಣದಲ್ಲಿ ಅವರು ಮಾತನಾಡಿದರು.
ಶಿಲ್ಪಕಲೆಯು ಸಾವಿರಾರು ವರ್ಷಗಳ ಚರಿತ್ರೆ ಹೊಂದಿದೆ. ನಾಗರಶೈಲಿ, ವೇಸರ ಶೈಲಿ, ದ್ರಾವಿಡ ಶೈಲಿಗಳ ವಾಸ್ತುಶಿಲ್ಪಕಲೆಯನ್ನು ಐಹೊಳೆ ಪಟ್ಟದಕಲ್ಲಿನಲ್ಲಿ ನೋಡಬಹುದು. ಆಗಿನ ಕಾಲದಲ್ಲಿ ಐಹೊಳೆಯು ಸಾಂಸ್ಕೃತಿಕ ವಿಶ್ವವಿದ್ಯಾಲಯವಾಗಿತ್ತು. ಶಿಲ್ಪಕಲೆಗೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳು ಅಲ್ಲಿ ನಡೆದಿರುವುದಕ್ಕೆ ಇಂದಿಗು ಸಾಕ್ಷಿಯಿದೆ. ಇದೆಲ್ಲ ರೋಮಾಂಚಕ ಕಲೆಯಾಗಿದೆ ಎಂದು ಚಾಲುಕ್ಯ ಶಿಲ್ಪ, ಹೊಯ್ಸಳ ಶಿಲ್ಪಗಳನ್ನು ಉದಾಹರಿಸಿದರು. ಶ್ರಮ, ಪ್ರಯತ್ನ ಮತ್ತು ದೈವಕೃಪೆಯಿಂದ ಉತ್ತಮ ಶಿಲ್ಪಕಲಾವಿದರಾಗಿ ಎಂದು ಹಾರೈಸಿದರು.
ಉಪಸ್ಥಿತರಿದ್ದ ಕನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅವರು ಕಲಾವಿದರ ಬದುಕು ಉಂಡದ್ದು ಹೊಟ್ಯಾಗ ಉಳಿದದ್ದು ಬುಟ್ಯಾಗ ಎಂಬಂತೆ ಇತ್ತು. ಕಲಾವಿದರು ನಿರಹಂಕಾರಿಗಳಾಗಿರಬೇಕು ಎಂದರು.
ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಗಿರಿಜನ ಉಪಯೋಜನೆಯಡಿಯಲ್ಲಿ ನಡೆದ ಶಿಬಿರದಲ್ಲಿ ಕಲೆಯಿಂದ ವಂಚಿತರಾದ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದಿದ್ದಾರೆ ಎಂದು ಸಂತಸಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಶಿಬಿರಾರ್ಥಿ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತ, ಶಿಲ್ಪಕಲೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಆಕರ ಸಾಮಗ್ರಿ ಒದಗಿಸಬೇಕೆನ್ನುವ ಉದ್ದೇಶದಿಂದ ಶಿಬಿರ ನಡೆಸಲಾಗಿದೆ. ಲಲಿತಕಲೆಗಳಲ್ಲಿ ಶಿಲ್ಪಕಲೆಯೂ ಒಂದು. ಬೌದ್ಧಿಕ ಸಾಮರ್ಥ್ಯ ಬೇಕೆಂದರೆ ಶಿಲ್ಪ ಕಲಾವಿದರು ಓದಬೇಕು. ಯಾರಿಗೆ ಸಾಮರ್ಥ್ಯ ಇದೆಯೋ ಅವರೆಲ್ಲ ಕೌಶಲ್ಯ ಪಡೆಯಬಹುದು. ಆಧುನಿಕ ಕಾಲಕ್ಕೆ ಅನುಗುಣವಾಗಿ ನಮ್ಮ ಯೋಚನೆಯನ್ನು ಬದಲಾಯಿಸಿಕೊಳ್ಳಬೇಕು. ಶಿಲ್ಪಕಲೆ ಕಲೆಯೂ ಹೌದು, ಶಾಸ್ತ್ರವೂ ಹೌದು. ಧಾರ್ಮಿಕತೆಯ ಪ್ರವೇಶದಿಂದ ಅದು ದೈವಿಕ ಸ್ವರೂಪ ಪಡೆಯುತ್ತದೆ. ಶಾಸ್ತ್ರದ ಹಿಂದೆ ಹೊರಟಾಗ ಗಣೇಶನ ವಿಗ್ರಹ ಒಂದೇ ಭಂಗಿಯ ವಿಗ್ರಹವಾಗುತ್ತದೆ. ವೈಚಾರಿಕವಾಗಿ ನೋಡಿದಾಗ ಒಂದೇ ಗಣೇಶನ ಅನೇಕ ಭಂಗಿಗಳನ್ನು ರಚಿಸಬಹುದು ಎಂದು ಶಿಬಿರಾರ್ಥಿಗಳನ್ನು ಕುರಿತು ಹೇಳಿದರು.
ಶಿಲ್ಪಕಲಾ ಅಕಾಡೆಮಿಯ ಕುಲಸಚಿವರಾದ ಇಂದ್ರಮ್ಮ ಹೆಚ್.ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಡಾ. ಸಿದ್ದಗಂಗಮ್ಮ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಸಹಾಯಕ ಕುಲಸಚಿವರಾದ ಶ್ರೀ ಹೆಚ್. ಶ್ರೀನಿವಾಸ ವಂದಿಸಿದರು. ಶ್ರೀಮತಿ ಆಶಾ ನಿರೂಪಿಸಿದರು. ಸಂಗೀತ ವಿದ್ಯಾರ್ಥಿನಿ ಶ್ರೀಮತಿ ಮಮತ ಮನ್ವಾಚಾರ್ ಪ್ರಾರ್ಥಿಸಿದರು. ದಿನಾಂಕ ೧೭ ರಿಂದ ೨೮ ಜನವರಿ ೨೦೧೭ರ ವರೆಗೆ ನಡೆದ ೧೨ ದಿನಗಳ ಶಿಲಾ ಶಿಲ್ಪಕಲಾ ಶಿಬಿರದಲ್ಲಿ ಸುರೇಶ -ಅರ್ಧನಾರೀಶ್ವರ, ವಸಂತ ಎಲ್. ತಳವಾರ-ಉಗ್ರ ನರಸಿಂಹ, ಕೇಶವ್-ಗರುಡ, ಮನುಚಕ್ರವರ್ತಿ-ಆಧುನಿಕ ಶಿಲ್ಪ, ಮೌನೇಶ ಎಚ್.ಬದನೂರು-ಆಂಜನೇಯ, ಉಮೇಶ ದಂಡಿನ-ಆನೇಸಾಲು, ರವಿದೇಸಾಯಿ-ಸಾಸಿವೆ ಗಣೇಶ, ಹನುಮಂತ ಎಲ್. ತಳವಾರ-ದ್ವಾರಪಾಲಕ, ಅನಿಲನಾಯಕ-ಹರಿಹರ, ಲೀಲಾವತಿ ಎಂ.ಎಸ್.-ಸರಸ್ವತಿ, ತೋಟಯ್ಯ-ಮರದಲ್ಲಿ ಹಕ್ಕಿಗೂಡು ಹಾಗೂ ಅಕಾಡೆಮಿಗಾಗಿ ಕವಡೆಕಲ್ಲು ಶಿಲ್ಪಕೃತಿಗಳನ್ನು ರಚಿಸಿದ್ದಾರೆ. ಶ್ರೀ ಮಹದೇವ ಆರ್. ಶಿಬಿರದ ನಿರ್ದೇಶಕರಾಗಿದ್ದರು. ಮಂಜುನಾಥ ಕಂಚುಗಾರ ಶಿಬಿರದ ಸಂಚಾಲಕರಾಗಿದ್ದರು

.