ತಿಂಗಳು: ಜುಲೈ 2017

ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಪರಿಶಿಷ್ಟ ಪಂಗಡಗಳ ಸಮಗ್ರ ಅಧ್ಯಯನ ಕೇಂದ್ರ : ಅಂಬೇಡ್ಕರ್ ಅವರನ್ನು ಓದುವುದು ಹೇಗೆ? ಶಿಬಿರ

ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ
ಪರಿಶಿಷ್ಟ ಪಂಗಡಗಳ ಸಮಗ್ರ ಅಧ್ಯಯನ ಕೇಂದ್ರ
ಅಂಬೇಡ್ಕರ್ ಅವರನ್ನು ಓದುವುದು ಹೇಗೆ? ಶಿಬಿರ

ಅಂಬೇಡ್ಕರ್ ಅವರು ದೇಶದ ೨೦ನೇ ಶತಮಾನದ ಶ್ರೇಷ್ಠ ಮುಕ್ತ ಚಿಂತಕರು ಎಂದು ಚಿಂತಕರಾದ ಪ್ರೊ.ಸಿದ್ಧಲಿಂಗಯ್ಯ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ಪರಿಶಿಷ್ಟ ಪಂಗಡಗಳ ಸಮಗ್ರ ಅಧ್ಯಯನ ಕೇಂದ್ರವು ೧೭ ರಿಂದ ೧೮ ಜೂನ್ ೨೦೧೭ರ ವರೆಗೆ ಏರ್ಪಡಿಸಿದ್ದ ಅಂಬೇಡ್ಕರ್ ಅವರನ್ನು ಓದುವುದು ಹೇಗೆ? ಅಧ್ಯಯನ ಶಿಬಿರವನ್ನು ಭುವನವಿಜಯ ಸಭಾಂಗಣದಲ್ಲಿ ಅರಳಿಗಿಡಕ್ಕೆ (ಕುಂಡದಲ್ಲಿ) ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಬದುಕಿದ್ದಾಗ ಅವರಿಗೆ ಮಾನ್ಯತೆ ಗೌರವ ದೊರೆಯಲಿಲ್ಲ. ಉನ್ನತ ಸ್ಥಾನದಲ್ಲಿದ್ದರೂ ಅವರಿಗೆ ಸಾಮಾನ್ಯ ನಾಗರೀಕನಿಗೆ ಸಿಗುವ ಗೌರವ ದೊರೆಯಲಿಲ್ಲ. ಮಾಧ್ಯಮಗಳು ಅವರನ್ನು ದೇಶ ವಿರೋಧಿ ಎಂದು ಬಿಂಬಿಸಿದ್ದವು. ಮಾಧ್ಯಮಗಳು ನನಗೆ ಅನ್ಯಾಯ ಮಾಡಿವೆ ಎಂದು ಸ್ವತಃ ಅಂಬೇಡ್ಕರ್ ನೋವಿನಿಂದ ಹೇಳಿಕೊಂಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷವನ್ನು ಹಾಗೂ ಮಹಾತ್ಮಗಾಂಧಿಯನ್ನು ವಿರೋಧ ಮಾಡಿದ್ದು ಇದಕ್ಕೆ ಕಾರಣವಾಗಿತ್ತು. ಬ್ರಿಟೀಷ್ ವೈಸ್‌ರಾಯ್ ಮೌಂಟ್ ಬ್ಯಾಟನ್ ಅವರನ್ನು ದೇವಾಲಯದ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು. ಆದರೆ ಅಂಬೇಡ್ಕರ್‌ಗೆ ದೇವಾಲಯ ಪ್ರವೇಶಿಸಲು ಬಿಡಲಿಲ್ಲ. ಮನುಸ್ಮೃತಿ ದಹನದ ಸಂದರ್ಭದಲ್ಲಿ ಬಹಳ ಕಿರುಕುಳ ಅನುಭವಿಸಿದರು. ನೊಂದು ಮಾನಸಿಕ ಹಿಂಸೆ ಅನುಭವಿಸಿದರು. ಆದರೆ ಅವರು ದ್ವೇಷ ಬೆಳೆಸಿಕೊಳ್ಳಲಿಲ್ಲ. ದೇಶದ ಹಿತ ಆಯ್ಕೆ ಮಾಡಿಕೊಂಡು ಕಾನೂನಾತ್ಮಕವಾಗಿ ಹೋರಾಡಿದರು ಎಂದು ತಿಳಿಸುತ್ತ ಕಾಳಾರಾಮನ ದೇವಾಲಯಕ್ಕೆ ಅಂಬೇಡ್ಕರ್ ಪ್ರವೇಶಿಸಲು ಹೋದಾಗ ಬೀಗ ಹಾಕಿ ಅವರ ಮೇಲೆ ಹಲ್ಲೆ ಮಾಡಿದರು. ಇತ್ತೀಚೆಗೆ ಈ ದೇವಾಲಯದ ಪುರೋಹಿತರ ಮೊಮ್ಮಕ್ಕಳು ಪತ್ರಿಕಾಗೋಷ್ಠಿ ಕರೆದು ಆಗ ನಮ್ಮ ಹಿರಿಯರು ಅಂಬೇಡ್ಕರ್ ಅವರೊಂದಿಗೆ ವರ್ತಿಸಿದ ರೀತಿಗೆ ನಾವು ಕ್ಷಮೆ ಕೋರುತ್ತೇವೆ ಎಂದು ಕೇಳಿದ ಘಟನೆ ವಿವರಿಸಿದರು.
ಅಂಬೇಡ್ಕರ್ ಅವರನ್ನು ದಲಿತರ ನಾಯಕ, ಸಂವಿಧಾನ ಪಿತೃ ಎಂಬುದಕ್ಕಷ್ಟೇ ಸೀಮಿತಗೊಳಿಸಬಾರದು. ಶೋಷಿತರ ನಾಯಕ, ರಾಷ್ಟ್ರನಾಯಕ ಎಂದು ಬಿಂಬಿಸಬೇಕಾಗಿದೆ. ಕಾರ್ಮಿಕರಿಗೆ, ರೈತವರ್ಗಕ್ಕೆ, ಕೂಲಿಕಾರರಿಗೆ, ಮಹಿಳೆಯರಿಗಾಗಿ ಅವರು ನೀಡಿದ ಕೊಡುಗೆಯನ್ನು ಚರ್ಚಿಸಬೇಕಾಗಿದೆ. ಸಮಗ್ರಶೋಷಿತರು ಅವರ ಕೊಡುಗೆಯನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸುತ್ತ, ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಭಾರತವನ್ನು ಒಳಗೊಂಡು ಅಂಬೇಡ್ಕರ್ ಅವರನ್ನು ಕುರಿತು ಧೋರಣೆ ಬದಲಾಗಿರುವುದನ್ನು ಗೌರವಿಸುವುದನ್ನು ಕಾಣುತ್ತಿದ್ದೇವೆ. ಎಡಪಂಥೀಯರು, ಬಲಪಂಥಿಯರು ಎಲ್ಲರಿಗೂ ಅಂಬೇಡ್ಕರ್ ಬೇಕಾದ ವ್ಯಕ್ತಿ ಆಗಿದ್ದಾರೆ. ಇದು ಸಕಾರಾತ್ಮಕ ವಿಚಾರ ಎಂದು ಸಂತಸಪಟ್ಟರು.
ಔಟ್‌ಲುಕ್ ಮತ್ತು ಬಿಬಿಸಿ ನಡೆಸಿದ ಸಮೀಕ್ಷೆಯಲ್ಲಿ ಮಹಾತ್ಮಗಾಂಧಿ ನಂತರ ಶ್ರೇಷ್ಠ ವ್ಯಕ್ತಿ ಎಂದರೆ ಜವಹರ್‌ಲಾಲ್ ನೆಹರು ಅವರಿಗೆ ೮೦೦೦ ಮತ ಬಂದರೆ, ನಂತರ ಇಂದಿರಾಗಾಂಧಿ ಅವರಿಗೆ ೧೯,೦೦೦ ಮತ ಬಂದಿತ್ತು. ಆದರೆ ಅಂಬೇಡ್ಕರ್ ಅವರಿಗೆ ೧೯,೯೦೦೦ ಮತ ಬಂದಿದ್ದವು ಎಂದು ತಿಳಿಸಿದರು.
ಅಂಬೇಡ್ಕರ್ ಬಗ್ಗೆ ಉತ್ಪ್ರೇಕ್ಷೆಗಳನ್ನು, ಐತಿಹ್ಯಗಳನ್ನು ನಂಬಬೇಡಿ. ಅವರ ಬಗ್ಗೆ ತಿಳಿಯಲು ಅಧಿಕೃತವಾಗಿ ಬರೆದ ಪುಸ್ತಕಗಳನ್ನು ಓದುವುದೇ ಸೂಕ್ತ. ಅಂಬೇಡ್ಕರ್ ಅವರ ಸಮೀಪವರ್ತಿಗಳಾದ ನಾನಕ್‌ಚಂದ್ ರತ್ತು, ಶಂಕರಾನಂದ ಶಾಸ್ತ್ರಿ, ಭಗವಾನ್ ದಾಸ್ ಬರೆದ ಪುಸ್ತಕಗಳನ್ನು ಓದಿ ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳಿ ಅಲ್ಲದೆ ಅಮೆರಿಕ ಮಹಿಳೆ ಏಲಿಯೆಟ್ ಜೆಲೆನಿಯೋಲ್ ಹಾಗೂ ಜರ್ಮನಿ ಮಹಿಳೆ ಜೈಲ್ ಹೋಂಮೇಟ್ ಅಂಬೇಡ್ಕರ್ ಕುರಿತು ಬರೆದ ಪುಸ್ತಕಗಳನ್ನು ಓದಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
೧೯೩೫ರಲ್ಲಿ ಅಂಬೇಡ್ಕರ್ ಹಿಂದುವಾಗಿ ಹುಟ್ಟಿದ್ದೇನೆ. ಆದರೆ ಹಿಂದುವಾಗಿ ಸಾಯಲಾರೆ ಎಂದು ಹೇಳಿದ್ದರು. ಆದರೆ ತಕ್ಷಣ ಮತಾಂತರ ಹೊಂದಲಿಲ್ಲ. ಬದಲಾವಣೆಗಾಗಿ ಕಾದರು. ಕ್ರಿಶ್ಚಿಯನ್ ಧರ್ಮದಲ್ಲಿ ಪೋಪ್ ಇರುವಂತೆ ಹಿಂದುಧರ್ಮಕ್ಕೆ ಒಬ್ಬನೇ ಜಗದ್ಗುರು ಇರಬೇಕು. ಹಾಗೆಯೇ ಒಂದೇ ಧರ್ಮ ಗ್ರಂಥ ಇರಬೇಕು. ಅರ್ಚಕ ವೃತ್ತಿ ಅನುವಂಶಿಯವಾಗಿರಬಾರದು ತರಬೇತಿ ಪಡೆದ ಯಾರೇ ಆದರೂ ಅರ್ಚಕ ವೃತ್ತಿ ಮಾಡಬಹುದು ಎಂದೆಲ್ಲ ವೈಚಾರಿಕವಾಗಿ ಚಿಂತನೆ ಮಾಡಿ ಫಲ ಕಾಣದೆ ೨೧ ವರ್ಷಗಳ ನಂತರ ನಿರಾಶರಾಗಿ ಅವರು ಮತಾಂತರಗೊಂಡರು. ಸಾಮಾಜಿಕ ಬದಲಾವಣೆಗೆ ದಲಿತರಿಗಿಂತ ದಲಿತೇತರ ಯುವಕರು ಹೆಚ್ಚು ಚಿಂತನೆ ಮಾಡಬೇಕಿದೆ ಎಂದು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಕಟಣೆಗಳ ಕುರಿತು ಮಾತನಾಡುತ್ತ, ಪುಸ್ತಕ ಮೇಳಗಳಲ್ಲಿ ಕನ್ನಡ ವಿಶ್ವವಿದ್ಯಾಲಯದ ಪುಸ್ತಕಗಳು ಬಹಳ ಬೇಗ ಮಾರಾಟವಾಗಿ ಬೇಡಿಕೆ ಹೆಚ್ಚುತ್ತಿರುತ್ತದೆ. ಇದನ್ನು ನಾನು ಗಮನಿಸಿದ್ದೇನೆ. ಪುಸ್ತಕಗಳಲ್ಲಿ ಹೊಸನೋಟ, ಸಮಗ್ರ ಮಾಹಿತಿ ಇರುವುದೇ ಕಾರಣ ಎಂದು ತಿಳಿಸುತ್ತ, ಇಂದು ಇಡೀ ಜಗತ್ತು ಅಂಬೇಡ್ಕರ್ ಕುರಿತು ಕುತೂಹಲ ತೋರುತ್ತಿದ್ದರೆ ಅಂಬೇಡ್ಕರ್ ಅವರ ವಿದ್ವತ್ತು, ಅಧ್ಯಯನ ಶೀಲತೆ, ಪುಸ್ತಕ ಪ್ರೇಮ ಕಾರಣ. ಏಷ್ಯಾದಲ್ಲೇ ದೊಡ್ಡ ಖಾಸಗಿ ಗ್ರಂಥಾಲಯ ಹೊಂದಿದ್ದ ಇವರು ದಿನಕ್ಕೆ ೧೮ ಗಂಟೆ ವ್ಯಾಸಂಗ ಮಾಡುತ್ತಿದ್ದರು. ವಿದ್ಯಾರ್ಥಿಗಳು ಕಲಿಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡುತ್ತ ಯಾವ ಹಿಂದು ಧರ್ಮವನ್ನು ಅಂಬೇಡ್ಕರ್ ವಿರೋಧ ಮಾಡುತ್ತಿದ್ದರು, ಯಾವ ಹಿಂದುಧರ್ಮದ ಸಂವಿಧಾನ ಎಂದು ಮನಸ್ಮೃತಿಯನ್ನು ಇವತ್ತಿಗೂ ಆಚರಿಸುತ್ತ ಬದುಕುತ್ತಿದ್ದೇವೋ ಅಂತಹ ಮನುಸ್ಮೃತಿಯನ್ನು ಸುಟ್ಟು ಹಾಕಿದ ಅಂಬೇಡ್ಕರ್ ಘಟನೆಯನ್ನು ದೃಶ್ಯಮಾಧ್ಯಮಗಳ ಮೂಲಕ ಅಂಬೇಡ್ಕರ್ ಮನುಸ್ಮೃತಿಯನ್ನು ಸುಡಲೇ ಇಲ್ಲ ಎಂದು ಹೇಳುತ್ತ ಅಂಬೇಡ್ಕರ್ ಮನುಸ್ಮೃತಿಯನ್ನು ಒಪ್ಪಿಕೊಂಡಿದ್ದರು. ಆದ್ದರಿಂದ ಸಂವಿಧಾನದ ರಚನೆಯ ಸಂದರ್ಭದಲ್ಲಿ ಮನುಸ್ಮೃತಿಯಲ್ಲಿರುವ ಸಂಗತಿಗಳನ್ನು ಒದಿದ ಅಂಬೇಡ್ಕರ್ ಸಂವಿಧಾನ ರಚನೆಗೆ ಬಳಸಿಕೊಂಡರು ಎಂದು ಮತೀಯವಾದಿಗಳು ಅಬ್ಬರದಿಂದ ಹೇಳುತ್ತಿರುವುದಕ್ಕೆ ನಾವು ಧ್ವನಿಯೆತ್ತಬೇಕು. ಅಂಬೇಡ್ಕರ್ ಅವರನ್ನು ಬ್ರಿಟೀಷ್ ಆಡಳಿತದ ಪರ ಹಿಂಸಾವಾದಿ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದ ಮತೀಯವಾದಿಗಳು ಇಂದು ಅಂಬೇಡ್ಕರ್ ಅವರನ್ನು ದೇಶಭಕ್ತ ಎಂದು ಹೇಳುತ್ತಿದ್ದಾರೆ. ಮುಂಚೂಣಿಯಲ್ಲಿರುವ ಯಾವ ಮಹಿಳಾ ಚಳುವಳಿಗಾರರು ಅಂಬೇಡ್ಕರ್ ಹೆಸರನ್ನು ಯಾಕೆ ಹೇಳಲಿಲ್ಲ ಎಂದರೆ ಜಾತಿಗಳು ನಮ್ಮನ್ನು ಅಷ್ಟೇ ಸಾಂಸ್ಕೃತಿಕವಾಗಿ ಕಟ್ಟಿಹಾಕಿವೆ. ಜಾತಿ ಕಾರಣದಿಂದ ನಾವು ಅಂಬೇಡ್ಕರ್ ಅವರ ವೈಚಾರಿಕ ಸಂಗತಿಗಳಿಗೆ ಮುಖಾಮುಖಿಯಾಗಲು ಸಾಧ್ಯವಾಗಿಲ್ಲ ಎಂದು ನುಡಿದರು.
ಪೀಠದ ಸಂಚಾಲಕರಾದ ಡಾ.ಎ.ಎಸ್.ಪ್ರಭಾಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಶಿಬಿರದ ನಿರ್ದೇಶಕರಾದ ಪ್ರೊ. ರಮೇಶ ಅವರು ಆಶಯ ನುಡಿದರು. ಪ್ರೊ. ಜಿ. ಪ್ರಶಾಂತ ನಾಯಕ್ ಅವರು ವಂದಿಸಿದರು. ಹನಸೋಗೆ ಸೋಮಶೇಖರ್ ಮತ್ತು ತಂಡದವರಿಂದ ಹೋರಾಟದ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಆರಂಭ ನೀಡಿದರು. ಡಾ. ಅರುಣ್ ಜೋಳದ ಕೂಡ್ಲಿಗಿ ನಿರೂಪಿಸಿದರು.