ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೫.೯.೨೦೧೭ರಂದು
ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣ: ಸಾಧ್ಯತೆ ಸವಾಲುಗಳು ವಿಚಾರಸಂಕಿರಣದ
ಪತ್ರಿಕಾ ವರದಿ
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೫.೯.೨೦೧೭ರಂದು
ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣ: ಸಾಧ್ಯತೆ ಸವಾಲುಗಳು ವಿಚಾರಸಂಕಿರಣದ
ಪತ್ರಿಕಾ ವರದಿ.
ಖಾಸಗಿ ಶಿಕ್ಷಣವು ರೋಗಗ್ರಸ್ತ ವೈರಲ್ ಆಗಿ ಬೆಳೆದಿದೆ. ಬ್ಯೂರೋಕ್ರಸಿಯ(ಅಧಿಕಾರಶಾಹಿ) ಖಾಸಗಿ ಪರವಾದ ಒಲವು, ಮೋಹ ಇದಕ್ಕೆ ಕಾರಣವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೫.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣ: ಸಾಧ್ಯತೆ ಸವಾಲುಗಳು ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಬಳಕೆಯಿಂದ ಹಿಡಿದು ಪಠ್ಯ ಬೋಧನೆ, ಸಂಶೋಧನಾ ಸೂಕ್ಷ್ಮತೆಯವರೆಗೆ ಅನೇಕ ಪಲ್ಲಟಗಳಾಗಿವೆ. ಆತಂಕಗಳ ಸೃಷ್ಟಿಯಾಗಿವೆ. ಪ್ರಾಥಮಿಕ ಶಿಕ್ಷಣ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದೆ. ಶಿಕ್ಷಣವು ಮೂಲಭೂತ ಹಕ್ಕಾಗಿದೆ. ಕಡ್ಡಾಯ ಶಿಕ್ಷಣವಾಗಿದೆ. ಉಚಿತ ಶಿಕ್ಷಣವಾಗಿದೆ. ಆದರೂ ಗುಣಾತ್ಮಕ ಶಿಕ್ಷಣದಲ್ಲಿ ಹಿಂದೆ ಉಳಿದಿರುವುದರಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಆಗ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಎಂದು ಹಬ್ಬಿಸಲಾಗುತ್ತದೆ. ಮುಚ್ಚಿದ ಮತ್ತು ವಿಲೀನಗೊಂಡ ಶಾಲೆಗಳ ಸ್ಥಳದಲ್ಲಿ ಖಾಸಗಿ ಶಾಲೆಗಳು ತಲೆಯೆತ್ತುತ್ತವೆ ಎಂದು ತಿಳಿಸಿದರು.
ಅಸಮಾನತೆ ತುಂಬಿರುವ ಪ್ರಾಥಮಿಕ ಶಿಕ್ಷಣದಲ್ಲಿ ಬದಲಾವಣೆ ಬೇಕು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಶಾಲೆಗಳಲ್ಲಿ ಮಕ್ಕಳು ಅತ್ಮಹತ್ಯೆ ಮಾಡಿಕೊಳ್ಳುವುದು ಕಂಡುಬರುತ್ತದೆ. ಅಂಕ ಗಳಿಕೆಯ ಸ್ಪರ್ಧೆಯಲ್ಲಿ ಆತ್ಮವಿಶ್ವಾಸವಿಲ್ಲದೇ ಮುಖಹೇಡಿಗಳಾಗಿ ಬದುಕು ಎದುರಿಸದೇ ಸಾವಿಗೆ ಮೊರೆ ಹೋಗುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳು ಬದುಕಿನ ಎಲ್ಲ ರೀತಿಯ ಸವಾಲುಗಳಿಗೆ ಮುಖಾಮುಖಿಯಾಗುತ್ತಾರೆ. ಅವರ ಗ್ರಹಣ ಶಕ್ತಿಯು ಉತ್ತಮವಾಗಿರುತ್ತದೆ. ಇಂದು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಳೆದು ಹೋಗುತ್ತಿರುವಾಗ ಉನ್ನತ ಶಿಕ್ಷಣದಲ್ಲಿ ಹೇಗೆ ಕಾಣಿಸುತ್ತದೆ ಎಂದು ಪ್ರಶ್ನಿಸುತ್ತ ಕುವೆಂಪು ಅವರು ಕುಲಪತಿಗಳಾಗಿದ್ದಾಗ ಹೇಳಿದ್ದ ಬೋಧನಾಂಗ, ಸಂಶೋಧನಾಂಗ, ಪ್ರಸಾರಾಂಗ ಈ ಮೂರರ ಬಹುದೊಡ್ಡ ಜವಾಬ್ದಾರಿ ಹೊತ್ತ ಕನ್ನಡ ವಿಶ್ವವಿದ್ಯಾಲಯವು ಬಹಳ ವಿಸ್ತಾರವಾದ ಮುನ್ನೋಟ ಹೊಂದಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕ್ಲಸ್ಟರ್ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ. ರವೀಂದ್ರ ರೇಷ್ಮೆ ಅವರು ವಿಷಯ ವಿಸ್ತರಣೆ ಮಾಡುತ್ತ ಕಾನ್ವೆಂಟ್‌ಗಳು ಶಿಕ್ಷಣವಲಯದಲ್ಲಿ ವಿಶೇಷ ಆಕರ್ಷಣೆಗಳಾಗಿವೆ. ಈ ಭಾವನೆ ಜನರ ಮನಸ್ಥಿತಿಯಿಂದ ದೂರವಾಗಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಳ್ಳದೇ ಇರುವುದರಿಂದ ಉನ್ನತ ಶಿಕ್ಷಣ ಈಗಿರುವ ಸ್ಥಿತಿಯನ್ನು ತಲುಪಿದೆ. ಉನ್ನತ ಶಿಕ್ಷಣ ಪರಿಷತ್ತಿಗೆ ಸದಸ್ಯರಾಗಲು ಕೇವಲ ಹಿರಿತನ ಮಾತ್ರ ಮಾನದಂಡವಾಗಬಾರದು. ವಿವಿಧ ತಲೆಮಾರುಗಳ ಅಧ್ಯಾಪಕರ ಆಶಯಗಳು ಅಲ್ಲಿ ಬಿಂಬಿತವಾಗಬೇಕು. ಜ್ಞಾನ ಆಯೋಗದಲ್ಲಿ ಶಿಕ್ಷಕರ ಪ್ರಾತಿನಿಧ್ಯಕ್ಕಿಂತ ಕಾರ್ಪೋರೇಟರ್‌ಗಳ ಪ್ರಾತಿನಿಧ್ಯ ಹೆಚ್ಚಿನ ಸಂಖ್ಯೆಯಲ್ಲಿದೆ. ಪ್ರಪಂಚದಲ್ಲಿ ಭಾರತ ಮೂರನೇ ಜ್ಞಾನಾಧಾರಿತ ಶಕ್ತಿಯಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಗೆಲುವು ಸಾಧಿಸುತ್ತಿದ್ದಾರೆ. ಇದನ್ನು ಅಮೇರಿಕಾದ ಮಾಜಿ ಅಧ್ಯಕ್ಷರಾದ ಒಬಾಮ ಅವರು ಗಮನಿಸಿದ್ದರು ಎಂದು ತಿಳಿಸಿದರು. ಈಗ ಚರ್ಚಿತವಾಗುತ್ತಿರುವ ಕಾಮನ್ ಯೂನಿವರ್ಸಿಟಿ ಆಕ್ಟ್‌ಗೆ ಸಾರ್ವಜನಿಕ ಅಭಿಪ್ರಾಯ ಕೇಳಬಹುದಾಗಿತ್ತು ಎಂದರು.
ರೇಷ್ಮೆಯವರು ಕನ್ನಡ ವಿಶ್ವವಿದ್ಯಾಲಯ ಕುರಿತು ಯಾಕೆ ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಗಳು ಕನ್ನಡ ವಿಶ್ವವಿದ್ಯಾಲಯವನ್ನು ತಮ್ಮ ತವರು ಮನೆ ಎಂದು ಭಾವಿಸುತ್ತಿಲ್ಲ? ಕನ್ನಡ ವಿಶ್ವವಿದ್ಯಾಲಯದ ಜೊತೆ ಯಾಕೆ ನಿರಂತರವಾದ ಸಂಪರ್ಕ ಸಾಧಿಸುತ್ತಿಲ್ಲ. ಯಾಕೆ ಸಾವಯವ ಸಂಬಂಧ ಇರಿಸಿಕೊಂಡಿಲ್ಲ. ಜಾನಪದ ವಿಶ್ವವಿದ್ಯಾಲಯ ಅಥವಾ ಸಂಗೀತ ವಿಶ್ವವಿದ್ಯಾಲಯವಾಗಲಿ ಕನ್ನಡ ವಿಶ್ವವಿದ್ಯಾಲಯವನ್ನು ಕನ್ನಡ ಭಾಷೆ ಮತ್ತು ಸಂಸ್ಕೃತಿ ವಿಶ್ವವಿದ್ಯಾಲಯ ಎಂದು ಪರಿಗಣಿಸಿ ಇಲ್ಲಿರುವ ವಿದ್ವಾಂಸರೊಂದಿಗೆ ಸಂಪರ್ಕ ಇರಿಸಿಕೊಂಡರೆ ಅದ್ಭುತ ಪವಾಡ ನಡೆಯುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಪ್ರಾಧ್ಯಾಪಕರು ಮತ್ತು ಚಿಂತಕರಾದ ಡಾ. ಪೃಥ್ವಿದತ್ತ ಚಂದ್ರ ಶೋಭಿ ಅವರು ವಿಷಯ ವಿಸ್ತರಣೆ ಮಾಡುತ್ತ ಇಂದು ಶಿಕ್ಷಣ ವಲಯದಲ್ಲಿ ಯಾವ ರೀತಿಯ ಜ್ಞಾನ ಉತ್ಪಾದಿಸಬೇಕು ಎಂಬ ಸವಾಲನ್ನು ಎದುರಿಸಬೇಕಾಗಿದೆ. ಸಮಾನತೆ ಸಭ್ಯತೆ, ಆದರ್ಶ ಸಮಾಜವನ್ನು ಶಿಕ್ಷಣದ ಮೂಲಕ ಸಾಕಾರಗೊಳಿಸುವುದು ಸಾಧ್ಯವಾಗುತ್ತಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಕಾಣುತ್ತಿರುವುದು ನೈತಿಕ ಅಧಃಪತನ ಮುಕ್ತ ಚಿಂತನೆ, ಸಮಾಜಮುಖಿ ಮನಸ್ಸನ್ನು ನಾವು ಕಳೆದುಕೊಂಡಿದ್ದೇವೆ. ಕರ್ನಾಟಕದ ವಿಶ್ವವಿದ್ಯಾಲಯಗಳು ಕಲಿಸುವ ಜ್ಞಾನಶಿಸ್ತುಗಳಿಗೂ ಜಾಗತಿಕವಾಗಿ ಕಲಿಸುವ ಜ್ಞಾನಶಿಸ್ತುಗಳಿಗೂ ಏನು ವ್ಯತ್ಯಾಸವಿದೆ ಎಂದು ಗಂಭೀರವಾಗಿ ಪ್ರಶ್ನೆ ಮಾಡಬೇಕಿದೆ, ಚರ್ಚಿಸಬೇಕಿದೆ. ವಿಶ್ವವಿದ್ಯಾಲಯಗಳಲ್ಲಿ ಹೊಸ ಜ್ಞಾನ ಸೃಷ್ಟಿಸುವ ಕೆಲಸ ಸಮರ್ಪಕವಾಗಿಲ್ಲ ಎಂದು ಹೇಳಿದರು.
ವಿಶ್ವವಿದ್ಯಾಲಯಗಳನ್ನು ಅಧ್ಯಾಪಕರು ತಮ್ಮ ಮುಷ್ಠಿಗೆ ವಾಪಾಸು ಪಡೆಯಬೇಕು. ವಿಶ್ವವಿದ್ಯಾಲಯಗಳು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಸೇರಿವೆ. ಕಲಿಸುವ, ಕಲಿಯುವ ಹೊಸ ಜ್ಞಾನ ಸೃಷ್ಟಿಸುವ ಕೆಲಸ ಆಗಬೇಕು. ಇದನ್ನು ನಾವೇ ಆರಂಭಿಸಬೇಕು ಎಂದು ಕರೆ ನೀಡಿದರು.
ಪ್ರಾಧ್ಯಾಪಕರಾದ ಡಾ.ಕೆ.ವೈ. ನಾರಾಯಣಸ್ವಾಮಿ ಅವರು ವಿಷಯ ವಿಸ್ತರಣೆ ಮಾಡುತ್ತ ಕರ್ನಾಟಕದಲ್ಲಿ ೪೧೨ ಕಾಲೇಜುಗಳಿವೆ. ಶೇ.೫೭ರಷ್ಟು ಹೆಣ್ಣುಮಕ್ಕಳು ಹಾಗೂ ಶೇ.೪೩ರಷ್ಟು ಗಂಡುಮಕ್ಕಳು ಕಲಿಯುತ್ತಿದ್ದಾರೆ. ಸಾಮಾನ್ಯ ವರ್ಗದಿಂದ ಶೇ.೬ರಷ್ಟು, ಹಿಂದುಳಿದ ವರ್ಗಗಳಿಂದ ಶೇ.೫೮ರಷ್ಟು, ಪರಿಶಿಷ್ಟ ಜಾತಿಯಿಂದ ಶೇ.೨೧ರಷ್ಟು, ಪರಿಶಿಷ್ಟ ಪಂಗಡದಿಂದ ಶೇ.೭ರಷ್ಟು, ಅಲ್ಪಸಂಖ್ಯಾತರಿಂದ ಶೇ.೭ರಷ್ಟು ಕಲಿಯುತ್ತಿದ್ದಾರೆ. ಈ ಅಂಕಿ ಅಂಶಗಳು ಪ್ರಗತಿಸೂಚಕವಾಗಿವೆ. ಆದರೆ ನಾವು ಅನುಸರಿಸುತ್ತಿರುವ ಮೌಲ್ಯಮಾಪನ ವಿಧಾನದಲ್ಲಿ ಸಮಸ್ಯೆಯಿದೆ. ಇದನ್ನು ಪರಿಹರಿಸದೇ ಉನ್ನತ ಶಿಕ್ಷಣದಲ್ಲಿ ಸುಧಾರಣೆ ಸಾಧ್ಯವಿಲ್ಲ. ಮೌಲ್ಯಮಾಪನ ವ್ಯವಸ್ಥೆ ಸುಧಾರಿಸಲು ಯಾವ ಸುತ್ತೋಲೆಗಳು ಬಂದಿಲ್ಲ. ಬರುಬರುತ್ತ ಮಾನವಿಕ ವಿಷಯಗಳನ್ನು ಓದುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದೊಂದು ಗಂಭೀರ ಸಮಸ್ಯೆಯಾಗಿದೆ ಎಂದು ಅಂಕಿ ಅಂಶಗಳನ್ನು ಮುಂದಿಟ್ಟರು.
ಅಧ್ಯಕ್ಷತೆ ವಹಿಸಿ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿ ಮಾತನಾಡುತ್ತ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ೬ ವಿಚಾರಸಂಕಿರಣಗಳ ಪ್ರಬಂಧ ಮಂಡನೆಗಳನ್ನು ಪುಸ್ತಕ ರೂಪದಲ್ಲಿ ಹೊರ ತರಲಾಗುವುದು ಎಂದು ತಿಳಿಸುತ್ತ ಹಿಂದುಳಿದ ಮತ್ತು ಬಹುಸಂಖ್ಯಾತ ಜನವರ್ಗಗಳು ಈ ಮುಖ್ಯವಾಹಿನಿಯೊಳಗೆ ಪ್ರವೇಶ ಮಾಡಿದಾಗ ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥೆಯನ್ನು ಶತಮಾನಗಳುದ್ದಕ್ಕೂ ಶಿಕ್ಷಣವನ್ನು ತಮ್ಮ ಸ್ವತ್ತನ್ನಾಗಿ ಮಾಡಿಕೊಂಡು ಬಂದಿರುವುದು ಉನ್ನತಶಿಕ್ಷಣದ ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ನಮ್ಮ ಓದುವ ಮತ್ತು ಓದಿಸುವ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕಿದೆ. ಏನನ್ನು ಓದಿಸಬೇಕು ಎಂದು ಆಲೋಚಿಸಬೇಕಾಗಿದೆ. ಅಧ್ಯಾಪಕರಿಗೆ ತರಗತಿಗಳಲ್ಲಿ ಪಾಠ ಮಾಡುವ ನಿರಾಳಸ್ಥಿತಿಯಿಲ್ಲ. ಇದಕ್ಕೆ ಮಾಹಿತಿ ತಂತ್ರಜ್ಞಾನದ ದುರುಪಯೋಗ ಮತ್ತು ಅದು ಸೃಷ್ಟಿಸುವ ಆತಂಕ ಕಾರಣವಾಗಿದೆ. ಆದ್ದರಿಂದ ಕ್ರಿಯಾಶೀಲ ವಿದ್ಯಾರ್ಥಿಗಳನ್ನು ರೂಪಿಸಲು ಅಧ್ಯಾಪಕರಿಗೆ ಸಾಧ್ಯವಾಗುತ್ತಿಲ್ಲ. ಈ ಸವಾಲುಗಳನ್ನು ಸಮುದಾಯದತ್ತವಾಗಿ ಹೇಗೆ ಎದುರಿಸಬೇಕು ಎಂಬುದು ಸವಾಲಾಗಿದೆ ಎಂದು ನುಡಿದರು.
ಡಾ.ಎ. ಸುಬ್ಬಣ್ಣ ರೈ ಅವರು ಸ್ವಾಗತಿಸಿದರು. ಡಾ. ಅಶೋಕಕುಮಾರ ರಂಜೇರೆ ಅವರು ಪ್ರಾಸ್ತಾವಿಕ ನುಡಿದರು. ಶ್ರೀ ಸೋಮೇಶ್ ಎಂ. ನಿರೂಪಿಸಿದರು. ಡಾ. ಕಲವೀರ ಮನ್ವಾಚಾರ ಅವರು ವಂದಿಸಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಚಾರಸಂಕಿರಣದಲ್ಲಿ ವಿಶ್ವವಿದ್ಯಾಲಯದ ಡೀನರು, ಆಹ್ವಾನಿತ ಗಣ್ಯರು, ಬೋಧಕ ವೃಂದ, ಆಡಳಿತ ವೃಂದ, ವಿದ್ಯಾರ್ಥಿಗಳು, ನಾಗರೀಕರು ಆಸಕ್ತಿಯಿಂದ ಭಾಗವಹಿಸಿದರು.
ಊಟದ ನಂತರ ಭುವನವಿಜಯದಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ನಾಡೋಜ ಬೆಳಗಲ್ಲು ವೀರಣ್ಣ ಅವರು ಉದ್ಘಾಟಿಸಿದರು. ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಿಂದ ತಾಳ ಮದ್ದಳೆ ಕಾರ್ಯಕ್ರಮ ನಡೆಯಿತು. ಹೊಸಪೇಟೆಯ ಭಾವೈಕ್ಯತಾ ವೇದಿಕೆಯವರು ಧನ್ವಂತರಿ ಚಿಕಿತ್ಸೆ ನಾಟಕವನ್ನು ಪ್ರದರ್ಶಿಸಿದರು.