ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫
ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ ವಿಚಾರಸಂಕಿರಣದ
ಉದ್ಘಾಟನೆಯ ಪತ್ರಿಕಾ ವರದಿ- ೧೩.೯.೨೦೧೭
ಇಂದಿನ ಮಾಹಿತಿ ಸ್ಪೋಟಕ ಯುಗದಲ್ಲಿ ಮಾಹಿತಿಗಳು ಸರಕಾಗಿವೆ. ಚಿಂತನೆ ಶೂನ್ಯವಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೩.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದ ವಿಶ್ವವಿದ್ಯಾಲಯ ಎಂದರೆ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಕಾಯ್ದೆಯನ್ನು ಮಾಡಬೇಕು. ಕರ್ನಾಟಕದ ಉಳಿದೆಲ್ಲ ವಿಶ್ವವಿದ್ಯಾಲಯಗಳ ಜೊತೆ ಸೇರಿಸಬಾರದು. ಸೇರಿಸಿದರೆ ಇದೊಂದು ಸಾಮಾನ್ಯ ವಿಶ್ವವಿದ್ಯಾಲಯವಾಗುತ್ತದೆ. ಇದಕ್ಕೆ ಸ್ವಾಯತ್ತತೆ ಬೇಕು. ಕನ್ನಡ ವಿಶ್ವವಿದ್ಯಾಲಯದ ತನ್ನ ಸಿದ್ಧಾಂತಗಳನ್ನು ಆಚರಣೆಗೆ ತರಲು ಮತ್ತು ಪ್ರಸಾರಾಂಗದ ಪ್ರಕಟಣೆಗಳ ಕುರಿತು ಜನಸಾಮಾನ್ಯರೊಂದಿಗೆ ಸಂವಾದದ ಅಗತ್ಯವಿದೆ. ಕನ್ನಡ ವಿಶ್ವವಿದ್ಯಾಲಯದ ಅದ್ಭುತ ಕೆಲಸಗಳು ಕರ್ನಾಟಕದ ಹೊರಗೆ ತಲುಪಿಲ್ಲ. ಹೊರ ಜಗತ್ತಿಗೆ ಪಂಪನ ಬಗ್ಗೆ ಗೊತ್ತಿಲ್ಲ. ಕನ್ನಡ ಶಾಸ್ತ್ರೀಯ ಜಾನಪದ ಪಠ್ಯಗಳನ್ನು ಜಗತ್ತಿಗೆ ಪರಿಚಯಿಸಬೇಕು. ಜೊತೆಗೆ ಕನ್ನಡ ವಿಶ್ವವಿದ್ಯಾಲಯದ ಪಿಎಚ್.ಡಿ ಪ್ರಬಂಧಗಳನ್ನು ಒಳಗೊಂಡು ಬಹು ಮಾಧ್ಯಮಗಳ ಮೂಲಕ ಪ್ರಕಟಿಸಬೇಕು. ಇದಕ್ಕೆ ಪ್ರತ್ಯೇಕ ವೆಬ್‌ಸೈಟ್‌ನ ಅಗತ್ಯವಿದೆ. ವಿಜ್ಞಾನದಲ್ಲಿ ವಿಶ್ವವಿದ್ಯಾಲಯಗಳು ಪ್ರವರ್ಧಮಾನಕ್ಕೆ ಬಂದಂತೆ ಮಾನವೀಕ ಮತ್ತು ಸಾಮಾಜಿಕ ವಿಷಯಗಳ ವಿಶ್ವವಿದ್ಯಾಲಯಗಳು ಪ್ರವರ್ಧಮಾನಕ್ಕೆ ಬರುತ್ತಿಲ್ಲ. ಈ ಕುರಿತು ಕನ್ನಡ ವಿಶ್ವವಿದ್ಯಾಲಯ ಚಿಂತನೆ ಮಾಡುತ್ತಿದೆ ಎಂದರು.
ವಿಶ್ರಾಂತ ಕುಲಪತಿ ಡಾ. ಎ. ಮುರಿಗೆಪ್ಪ ಅವರು ವಿಷಯ ವಿಸ್ತರಣೆ ಮಾಡುತ್ತ ಕನ್ನಡ ಅಳಿವಿನ ಅಂಚಿನಲ್ಲಿರುವ ಭಾಷೆ ಅಲ್ಲ, ಅಳಿವಿನಂಚಿನಲ್ಲಿರುವ ಉಪಭಾಷೆಗಳನ್ನು ದಾಖಲೀಕರಣ ಮಾಡಬೇಕು. ವಿಶ್ವವಿದ್ಯಾಲಯದ ಎಲ್ಲ ಕೆಲಸ ಕಾರ್ಯ ಚಟುವಟಿಕೆಗಳನ್ನು ವೆಬ್‌ಸೈಟ್‌ಗೆ ಹಾಕುವ ಮೂಲಕ ವಿಸ್ತಾರಗೊಳಿಸಬೇಕು ಎಂದು ತಿಳಿಸಿದರು.
ವಿಶ್ರಾಂತ ಕುಲಪತಿಯವರಾದ ಡಾ.ಕೆ.ವಿ.ನಾರಾಯಣ ಅವರು ಮಾತನಾಡುತ್ತ ೨೫ ವರ್ಷಗಳಲ್ಲಿ ಕನ್ನಡ ವಿಶ್ವವಿದ್ಯಾಲಯ ಅದ್ಭುತವಾಗಿ ಬೌದ್ದಿಕವಾಗಿ ಬೆಳೆದಿದೆ. ಆರಂಭದಲ್ಲಿ ಕರ್ನಾಟಕದ ಯಾವ ವಿಶ್ವವಿದ್ಯಾಲಯಗಳಿಗೂ ಇಲ್ಲದ ಸವಾಲುಗಳು ಕನ್ನಡ ವಿಶ್ವವಿದ್ಯಾಲಯಕ್ಕೆ ಇದ್ದವು. ಈಗ ಕನ್ನಡ ವಿಶ್ವವಿದ್ಯಾಲಯವನ್ನು ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರಿಸಲಾಗುತ್ತಿದೆ. ಇದರಿಂದ ಕನ್ನಡ ವಿಶ್ವವಿದ್ಯಾಲಯ ತನ್ನ ಚಹರೆ, ಪ್ರತ್ಯೇಕತೆ ಅನನ್ಯತೆಯನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಬೇಕಾಗುತ್ತದೆ. ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಇರುವ ಸದ್ಭಾವನೆಯನ್ನು ಪೋಷಿಸುವ ಗಟ್ಟಿಗೊಳಿಸುವ ಕೆಲಸ ಆಗಬೇಕಾಗಿದೆ. ಸದ್ಭಾವನೆಯನ್ನು ಸಾಮಾಜಿಕ ಸಮೀಕ್ಷೆಯಾಗಿ ಸಮಾಜಕ್ಕೆ ಉಪಯುಕ್ತವಾಗುವಂತೆ ಪರಿವರ್ತಿಸಿಕೊಳ್ಳಬೇಕು ಎಂದು ತಿಳಿಸುತ್ತ ಕನ್ನಡ ವಿಶ್ವವಿದ್ಯಾಲಯದಲ್ಲಿ ಇರುವ ಬಹಳ ದೊಡ್ಡ ದತ್ತಸಂಚಯವನ್ನು ಹೊರಜಗತ್ತಿಗೆ ಪರಿಚಯಿಸಬೇಕಾಗಿದೆ ಎಂದು ನುಡಿದರು.
ವಿಶ್ರಾಂತ ಕುಲಪತಿಯವರಾದ ಡಾ.ಹಿ.ಚಿ.ಬೋರಲಿಂಗಯ್ಯ ಅವರು ಮಾತನಾಡುತ್ತ ಅಧ್ಯಾಪಕರು ಹೊಸ ಕಾಲಕ್ಕೆ ಸಜ್ಜುಗೊಳ್ಳುವ ಮೂಲಕ ನಮ್ಮನ್ನು ನಾವು ಪರಿಶೀಲಿಸಿಕೊಳ್ಳಬೇಕಾಗಿದೆ. ಮಾನವೀಯ ಮೌಲ್ಯಗಳಿಗಿಂತ ಹಣವೇ ಪ್ರಧಾನವಾಗುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಸಂವರ್ಧನೆ ಮಾಡುವ ಕೆಲಸವಾಗಬೇಕು. ಸಾಹಿತ್ಯ ಹೊರತುಪಡಿಸಿ ಮಾನವಿಕಗಳ ಕಡೆ ಗಮನಹರಿಸಬೇಕು ಎಂದು ನುಡಿದರು.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ.ಸರಜೂ ಕಾಟ್ಕರ್ ಅವರು ಮಾತನಾಡುತ್ತ ಶಾಂತಿನಿಕೇತನದ ರೀತಿ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವ ಕನಸು ಕಂಬಾರರದಾಗಿತ್ತು. ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗಿರುವ ಪುಸ್ತಕಗಳಿಗೆ ಭವಿಷ್ಯದಲ್ಲಿ ಓದುಗರನ್ನು ತಯಾರು ಮಾಡಬೇಕಾಗಿದೆ. ಇಂಗ್ಲಿಷ್ ಹಿಂದಿ, ಸಂಸ್ಕೃತ, ಆಧುನಿಕ ಇತಿಹಾಸ ಕಲಿಸುವ ಕೆಲಸವಾಗಬೇಕಾಗಿದೆ. ಇಲ್ಲಿ ಆಕರಗಳು ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿ ಮಾತನಾಡುತ್ತ ಡಾ.ಚಂದ್ರಶೇಖರ ಕಂಬಾರ ಅವರು ಕುಲಪತಿಗಳಾಗಿದ್ದ ಸಂದರ್ಭದ ರಾಜಕೀಯ ಸಾಂಸ್ಕೃತಿಕ ಪರಿಸರಕ್ಕೂ ಇವತ್ತಿಗೂ ಬಹಳ ವ್ಯತ್ಯಾಸಗಳಿವೆ. ಎಲ್ಲ ವಿಶ್ವವಿದ್ಯಾಲಯಗಳ ಜೊತೆ ಕನ್ನಡ ವಿಶ್ವವಿದ್ಯಾಲಯವನ್ನು ಸೇರಿಸುತ್ತಿರುವ ಕಾಯ್ದೆಗೆ ಸಂಬಂಧಿಸಿದಂತೆ ವೇದಿಕೆಯಲ್ಲಿರುವ ಎಲ್ಲರೂ ಜವಾಬ್ದಾರಿ ಹೊರಬೇಕು ಎಂದು ಕೇಳಿಕೊಳ್ಳುತ್ತ, ಭವಿಷ್ಯದ ಕನ್ನಡ ವಿಶ್ವವಿದ್ಯಾಲಯದ ಕುರಿತು ನೀಡಿದ ಸಲಹೆಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು.
ವಿಶ್ವವಿದ್ಯಾಲಯದ ಡೀನರಾದ ಡಾ. ಎ. ಮೋಹನ್ ಕುಂಟಾರ ಅವರು ಸ್ವಾಗತಿಸಿದರು. ಡಾ.ಎಫ್.ಟಿ.ಹಳ್ಳಿಕೇರಿ ಅವರು ಪ್ರಾಸ್ತಾವಿಕ ನುಡಿದರು. ಡಾ. ರವೀಂದ್ರನಾಥ ಅವರು ನಿರೂಪಿಸಿದರು. ಡಾ. ವಿಠ್ಠಲರಾವ್ ಟಿ. ಗಾಯಕ್ವಾಡ್ ಅವರು ವಂದಿಸಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ನಂತರ ಭುವನವಿಜಯದಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿರಿಯ ಸಾಹಿತಿಗಳು ಮತ್ತು ಚಿಂತಕರಾದ ಡಾ.ಕಾಳೇಗೌಡ ನಾಗವಾರ ಅವರು ಉದ್ಘಾಟಿಸಿದರು. ಅನಂತರ ಮೈಸೂರಿನ ಜನಮನ ತಂಡದಿಂದ ಜನಪದ ಮತ್ತು ತತ್ವಪದಗಳ ಗಾಯನ ನಡೆಯಿತು. ಬೆಂಗಳೂರು ಕಲಾ ಗಂಗೋತ್ರಿ ತಂಡದಿಂದ ಮುಖ್ಯಮಂತ್ರಿ ನಾಟಕ ಪ್ರದರ್ಶನವಾಯಿತು.