ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫
ಕರ್ನಾಟಕದ ಜ್ವಲಂತ ಸಮಸ್ಯೆಗಳು: ನೀರು, ಬರ ನಿರ್ವಹಣೆ ವಿಚಾರಸಂಕಿರಣದ
ಉದ್ಘಾಟನೆಯ ಪತ್ರಿಕಾ ವರದಿ- ೧೪.೯.೨೦೧೭
ನೀರಿನ ಬರಕ್ಕಿಂತ ಮಾನವೀಯತೆಯ ಬರ ಬಹಳ ಕ್ರೂರವಾದುದು ಎಂದು ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ದಿನೇಶ್ ಅಮೀನ ಮಟ್ಟು ಅವರು ಕಳಕಳಿಯಿಂದ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೪.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕದ ಜ್ವಲಂತ ಸಮಸ್ಯೆಗಳು: ನೀರು, ಬರ ನಿರ್ವಹಣೆ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೀರಿನ ಹಂಚಿಕೆಯಲ್ಲಿ ನ್ಯಾಯಾಲಯ ತಮಿಳುನಾಡಿನ ಪರವಾಗಿ ಯಾಕೆ ಇದೆ ಎಂದರೆ ಅಲ್ಲಿ ತಮಿಳು ಮೂಲದ ನ್ಯಾಯಧೀಶರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಾಧ್ಯಮದವರಿದ್ದಾರೆ. ಅವರಿಂದ ಒತ್ತಡ ಇದೆ. ಆದರೆ ಕರ್ನಾಟಕದಲ್ಲಿ ಈ ರೀತಿಯ ಒತ್ತಡ ಇಲ್ಲ. ರಾಜಕೀಯ ನಾಯಕತ್ವದ ಸಮಸ್ಯೆ, ಮಾಧ್ಯಮದ ಮೂಲಕ ಒತ್ತಡ ಹಾಕಲಾಗದ ಸಮಸ್ಯೆ ಇದೆ ಎಂದು ವಿವರಿಸಿದರು.
ರೈತರು ಕೃಷಿಯಲ್ಲಿ ನೀರಿನ ನಿರ್ವಹಣೆ ಮಾಡಲು ವೈಜ್ಞಾನಿಕ ಅರಿವು ಹೊಂದಬೇಕಿದೆ. ಅತಿ ನೀರಿನ ಬಳಕೆ, ಕೀಟನಾಶಕದ ಬಳಕೆ, ರಸಗೊಬ್ಬರದ ಬಳಕೆಯಿಂದ ಭೂಮಿ ಜೌಗು ಆಗಿ ಫಲವತ್ತತೆ ನಾಶವಾಗುತ್ತದೆ. ನೀರು, ಬರ, ಕೃಷಿ ನಡುವೆ ಪರಸ್ಪರ ಸಂಬಂಧ ಇದೆ. ನೀರು, ಬರ ನಿರ್ವಹಣೆಯಲ್ಲಿ ಪ್ರಭುತ್ವದೊಂದಿಗೆ ನಾಗರೀಕರ ಪಾತ್ರವೂ ಇದೆ. ನಾವೆಲ್ಲ ಆತ್ಮ ವಂಚಕರಾಗಿದ್ದೇವೆ. ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ರೈತರಿಂದ ಕಡಿಮೆ ಬೆಲೆಗೆ ವಸ್ತುಗಳನ್ನು ಪಡೆಯಲು ಯೋಚಿಸುವುದೇ ಅಮಾನವೀಯ ಅನಿಸುತ್ತದೆ. ಪ್ರತಿ ೨ ಗಂಟೆಗೊಮ್ಮೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಲೇವಾದೇವಿಗಾರರ ಒತ್ತಡದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ವಿಷಯದಲ್ಲಿ ರಾಜಕೀಯ ಸಲ್ಲದು. ಸಮೀಕ್ಷೆ ಪ್ರಕಾರ ರೈತನ ಮಾಸಿಕ ಆದಾಯ ೩,೦೮೦/- ರೂ. ಇದೆ. ಭೂ ಸ್ವಾದೀನ ತಡೆಯಲು ಸಾಧ್ಯವಾಗುತ್ತಿಲ್ಲ. ಭೂಸುಧಾರಣಾ ಕಾಯಿದೆ ರೈತರಿಗೆ ಅನುಕೂಲವಾಗಿಲ್ಲ. ರೈತರ ಸಾಲಮನ್ನಾ ಅನಿವಾರ್ಯವಾಗಿದ್ದು, ಸಾಲ ಮನ್ನಾ ರಾಜಕೀಯಕರಣಗೊಂಡಿದೆ ಎಂದು ಸಾಲಮನ್ನಾ ಕುರಿತು ಅಂಕಿ ಅಂಶಗಳನ್ನು ಒದಗಿಸಿದರು.
ಕೃಷಿಯನ್ನು ಲಾಭದಾಯಕವಾಗಿ ಮಾಡುವ ತನಕ ರೈತ ಸಂಬಂಧಿ ಸಮಸ್ಯೆಗಳು ತಪ್ಪುವುದಿಲ್ಲ ಎಂದು ತಿಳಿಸುತ್ತ, ನಗರಗಳಲ್ಲಿ ಶೌಚಕ್ಕೆ ನೀರನ್ನು ಕಡಿಮೆ ಬಳಸುವ ತಾಂತ್ರಿಕತೆಯನ್ನು ಕಂಡುಕೊಳ್ಳಬೇಕು. ಆಗ ನಗರಗಳಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಟಿ.ಆರ್. ಚಂದ್ರಶೇಖರಯ್ಯ ಅವರು ವಿಷಯ ವಿಸ್ತರಣೆ ಮಾಡುತ್ತ ವಚನಕಾರರು ನೀರನ್ನು ಪರಿಭಾವಿಸಿರುವ ರೀತಿ ಇಂದಿಗೂ ಪ್ರಸ್ತುತವಾಗಿದೆ. ನೀರಿಗೆ ಸೂತಕ ಮೈಲಿಗೆ ಇಲ್ಲ. ನೀರು ತಾರತಮ್ಯ ಮಾಡುವುದಿಲ್ಲ. ಬರ, ನೀರು, ನಿರ್ವಹಣೆ, ಜಾಗತಿಕ ಮಟ್ಟದ ಸಮಸ್ಯೆಯಾಗಿದೆ. ಬರ ಸಮಾಜದಲ್ಲಿ ಎಲ್ಲರಿಗೂ ಸಮಸ್ಯೆ ತರುವುದಿಲ್ಲ. ವಾಣಿಜ್ಯ ಉದ್ಯಿಮೆಗಳು, ನೌಕರಶಾಹಿ, ರಾಜಕಾರಣಿಗಳು, ಬರದ ಲಾಭ ಪಡೆಯುತ್ತಾರೆ. ರೈತರು ವಿಕಲಚೇತನರು ಅಂಚಿನಲ್ಲಿರುವವರು ತೊಂದರೆ ಅನುಭವಿಸುತ್ತಾರೆ. ಹಸಿವಿನ ಬಗ್ಗೆ ಪಿಎಚ್.ಡಿ. ಅಧ್ಯಯನ ಮಾಡುವವರ ಸಂಖ್ಯೆ ಅತ್ಯಂತ ಕಡಿಮೆ. ಹಸಿವಿನಿಂದ ಸಾಯುವುದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗಿಲ್ಲ. ಬರದ ಸಮಸ್ಯೆಯು ಆಹಾರದ ಉತ್ಪಾದನೆಯ ಕೊರತೆಯಿಂದ ಬರುವುದಿಲ್ಲ. ಬರ ದೈವದ ಶಾಪವಲ್ಲ. ಸಮಾಜ, ಪ್ರತಿ ವ್ಯಕ್ತಿಗೆ ಬರದ ನಿರ್ವಹಣೆ ಕುರಿತು ಹೊಣೆಗಾರಿಕೆ ಇದೆ. ಅಂಬೇಡ್ಕರ್ ಹೇಳಿದಂತೆ ನಮಗೆ ಸಾಮಾಜಿಕ ಹಕ್ಕು ಬೇಕು. ರಾಜಕೀಯ ಸ್ವಾತಂತ್ರ್ಯ ಅಲ್ಲ ಎಂದು ನುಡಿದರು.
ಪ್ರಾಧ್ಯಾಪಕರಾದ ಡಾ. ಸಿ.ಜಿ. ಲಕ್ಷ್ಮಿಪತಿ ಅವರು ವಿಷಯ ವಿಸ್ತರಣೆ ಮಾಡುತ್ತ ಸೈದ್ಧಾಂತಿಕ ವಿಚಾರಗಳಿಗೆ ನಡೆಯುವ ಕೊಲೆಗಳು, ನಿರಾಶ್ರಿತ ಮಹಿಳೆಯರ ಸಮಸ್ಯೆ, ಕಾಣೆಯಾಗುವ ಮಹಿಳೆಯರ ಸಮಸ್ಯೆ, ಮಾರಾಟವಾಗುವ ಮಹಿಳೆಯರ ಸಮಸ್ಯೆ ಇವೆಲ್ಲ ನಾಗರಿಕ ಸಮಾಜದ ಜ್ವಲಂತ ಸಮಸ್ಯೆಗಳಾಗಿವೆ ಎಂದರು.
ಸಾಮಾಜಿಕ ಕಾರ್ಯಕರ್ತರಾದ ಶ್ರೀ ಜನಾರ್ದನ ಕೆಸರಗದ್ದೆ ಅವರು ವಿಷಯ ವಿಸ್ತರಣೆ ಮಾಡುತ್ತ ಲೆಟ್ ಅಜ್ ನಾಟ್ ಡಿಸ್ಟರ್ಬ್ ವಾಟರ್ ಸಿನೆಮಾ ಕುರಿತು ನೀರಿನ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡುತ್ತ ೩೦ ವರ್ಷಗಳ ಹಿಂದೆ ನೀರಿನ ಸಮಸ್ಯೆ ಇರಲಿಲ್ಲ. ಇಂದು ನೀರಿನ ನಿರ್ವಹಣೆ ಮತ್ತು ಹಂಚಿಕೆ ಸಮರ್ಪಕವಾಗಿಲ್ಲ. ಜಲ ಸಂರಕ್ಷಣೆ, ಜಲ ಮರುಪೂರಣ, ಯಾವ ಕಾಲದಲ್ಲಿ ಎಂತಹ ಬೆಳೆ ಬೆಳೆಯಬೇಕು ಎಂಬ ಬಗ್ಗೆ ತಿಳುವಳಿಕೆಯ ಕೊರತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿ ಮಾತನಾಡುತ್ತ ನಾವು ಗ್ರಾಮ ಸಂಸ್ಕೃತಿಯನ್ನು ಮರಳಿ ತರಬೇಕು. ಗ್ರಾಮ ಸಂಸ್ಕೃತಿಯಲ್ಲಿ ನೀರಿನ ಬಳಕೆಯಲ್ಲಿ ಮಿತವ್ಯಯವಿತ್ತು. ನೀರನ್ನು ದುಂದುಬಳಕೆ ಮಾಡುತ್ತಿರಲಿಲ್ಲ. ನಾವಿಂದು ನೀರಿನ ನಿರ್ವಹಣೆಯಲ್ಲಿ ಜೀವನ ಕ್ರಮ ಬದಲಾಯಿಸಿಕೊಳ್ಳಬೇಕಾಗಿದೆ. ಬಂಡವಾಳಶಾಹಿ ಸೃಷ್ಟಿಸಿದ ಭ್ರಮೆಗಳಿಗೆ ನಾವು ಮಾರುಹೋಗಿದ್ದೇವೆ ಎಂದು ನುಡಿದರು.
ವೇದಿಕೆಯಲ್ಲಿ ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು ಉಪಸ್ಥಿತರಿದ್ದರು. ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರು ಸ್ವಾಗತಿಸಿದರು. ಡಾ.ರಮೇಶನಾಯಕ ಅವರು ಪ್ರಾಸ್ತಾವಿಕ ನುಡಿದರು. ಡಾ.ಎಸ್.ವೈ. ಸೋಮಶೇಖರ ಅವರು ನಿರೂಪಿಸಿದರು. ಡಾ. ವಿಠ್ಠಲರಾವ್ ಟಿ. ಗಾಯಕ್ವಾಡ್ ಅವರು ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಚಾರಸಂಕಿರಣದಲ್ಲಿ ವಿಶ್ವವಿದ್ಯಾಲಯದ ಡೀನರು, ಆಹ್ವಾನಿತ ಗಣ್ಯರು, ಬೋಧಕ ವೃಂದ, ಆಡಳಿತ ವೃಂದ, ವಿದ್ಯಾರ್ಥಿಗಳು, ನಾಗರೀಕರು ಆಸಕ್ತಿಯಿಂದ ಭಾಗವಹಿಸಿದರು.
ನಂತರ ಭುವನವಿಜಯದಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿರಿಯ ರಂಗಭೂಮಿ ಕಲಾವಿದರಾದ ಶ್ರೀಮತಿ ಸುಭದ್ರಮ್ಮ ಮನ್ಸೂರ್ ಅವರು ಉದ್ಘಾಟಿಸಿದರು. ಅನಂತರ ಶ್ರೀ ಬಸವರಾಜ ಸಿಗ್ಗಾಂವ ಮತ್ತು ತಂಡದವರಿಂದ ತತ್ತ್ವಪದಗಳ ಹಾಡುಗಾರಿಕೆ ನಡೆಯಿತು. ಬೆಂಗಳೂರು ಏಷಿಯನ್ ಥಿಯೇಟರ್ ತಂಡದಿಂದ ವರಾಹ ಪುರಾಣ ನಾಟಕ ಪ್ರದರ್ಶನವಾಯಿತು.
ದಿನಾಂಕ 14.9.2017ರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಿರುವ ನಾಡೋಜ ಶ್ರೀಮತಿ ಸುಭದ್ರಮ್ಮ ಮನ್ಸೂರ್ ಅವರು, ಶ್ರೀ ಬಸವರಾಜ ಸಿಗ್ಗಾಂವ ಮತ್ತು ತಂಡದಿಂದ ತತ್ತ್ವಪದಗಳ ಹಾಡುಗಾರಿಕೆ, ಹಾಗೂ ಬೆಂಗಳೂರು ಏಷಿಯನ್ ಥಿಯೇಟರ್ ಅವರಿಂದ ವರಾಹ ಪುರಾಣ ನಾಟಕ ಪ್ರದರ್ಶನ