ಕನ್ನಡ ವಿಶ್ವವಿದ್ಯಾಲಯ, ಹಂಪಿ
ಕನ್ನಡ ವಿಶ್ವವಿದ್ಯಾಲಯದ ಸ್ವಾಯತ್ತತೆ ಉಳಿಸಿ ಹೋರಾಟ ಸಮಿತಿ, ವಿದ್ಯಾರಣ್ಯ
ಇದೇ ತಿಂಗಳ ಎರಡನೇ ವಾರದಲ್ಲಿ ಆರಂಭವಾಗಲಿರುವ ಬೆಳಗಾವಿಯ ವಿಧಾನಮಂಡಲಗಳ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ-೨೦೧೭ ಅಂಗೀಕಾರಕ್ಕೆ ಬರಲಿದೆ. ಇದರಲ್ಲಿ ಕರ್ನಾಟಕ ಎಲ್ಲ ವಿಶ್ವವಿದ್ಯಾಲಯಗಳ ಜತೆ ಕನ್ನಡ ವಿಶ್ವವಿದ್ಯಾಲಯವನ್ನೂ ಸೇರಿಸಲಾಗಿದೆ. ಈ ವಿಧೇಯಕ ಅಂಗೀಕಾರವಾದರೆ, ಇದರಿಂದ ನಾಡಿನ ಬಹುಜನರ ಅಪೇಕ್ಷೆಯಂತೆ, ಕರ್ನಾಟಕದ ಭಾಷೆ ಸಾಹಿತ್ಯ ಚರಿತ್ರೆ ಸಂಸ್ಕೃತಿಗಳ ಅಧ್ಯಯನಕ್ಕಾಗಿ ಸ್ಥಾಪಿತವಾಗಿರುವ ಸಾಂಸ್ಕೃತಿಕ ಮಹತ್ವವುಳ್ಳ ಕನ್ನಡ ವಿಶ್ವವಿದ್ಯಾಲಯಕ್ಕೆ, ಅದು ಈವರೆಗೆ ಪಡೆದುಕೊಂಡಿದ್ದ ವಿಶಿಷ್ಟ ಸ್ಥಾನಮಾನ ಮತ್ತು ಸ್ವಾಯತ್ತತೆಗಳು ಕೊನೆಗೊಳ್ಳುತ್ತವೆ. ಕನ್ನಡ ವಿಶ್ವವಿದ್ಯಾಲಯವು ಬೆಳ್ಳಿಹಬ್ಬ ಆಚರಿಸುತ್ತಿರುವ ಈ ಹೊತ್ತಿನಲ್ಲಿ ಇದೊಂದು ಆಘಾತಕರ ಸಂಗತಿಯಾಗಲಿದೆ. ಈ ಹಿಂದೆ ನಾಡಿನ ಹಿರಿಯ ಲೇಖಕರು ಚಿಂತಕರು, ಮಾನ್ಯ ಕುಲಪತಿಯವರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಈ ಹಿಂದೆ ಇದ್ದಂತೆ ಕನ್ನಡ ವಿಶ್ವವಿದ್ಯಾಲಯದ ವಿಶಿಷ್ಟತೆಯನ್ನು ರಕ್ಷಿಸಬೇಕೆಂದೂ, ಅದನ್ನು ಉದ್ದೇಶಿತ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕದಲ್ಲಿ ಸೇರಿಸಬಾರದೆಂದೂ ಮನವಿ ಮಾಡಲಾಗಿತ್ತು. ಈ ಬೇಡಿಕೆಯನ್ನು ಮುಖ್ಯಮಂತ್ರಿಗಳು ಒಪ್ಪಿದ್ದರು. ಈ ಬಗ್ಗೆ ಮಾನ್ಯ ಶಿಕ್ಷಣ ಮಂತ್ರಿಗಳಿಗೂ ಮನವರಿಕೆ ಮಾಡಲು ಯತ್ನಿಸಲಾಗಿದೆ. ಆದರೂ ಉದ್ದೇಶಿತ ತಿದ್ದುಪಡಿ ವಿಧೇಯಕದಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ಸೇರಿಸಲಾಗಿದೆ. ಈ ಹಠಮಾರಿತನ ಆಘಾತಕಾರಿಯಾಗಿದೆ. ಕನ್ನಡ ವಿಶ್ವವಿದ್ಯಾಲಯದ ವಿಶಿಷ್ಟ ಸ್ಥಾನಮಾನವನ್ನು ಹೀಗೆ ಕೊನೆಗೊಳಿಸುವ ಮುನ್ನ ಈ ಹಿಂದೆ ಕೆಲಸ ಮಾಡಿದ ವಿಶ್ರಾಂತ ಕುಲಪತಿಗಳನ್ನಾಗಲಿ, ಕನ್ನಡ ನಾಡಿನ ಹಿರಿಯ ಚಿಂತಕರನ್ನಾಗಲಿ, ವಿಶ್ವವಿದ್ಯಾಲಯವನ್ನಾಗಲಿ ಸಂಪರ್ಕಿಸಿಲ್ಲ. ಅವರ ಅಭಿಪ್ರಾಯ ಪಡೆದಿರುವುದಿಲ್ಲ. ಈ ತಿದ್ದುಪಡಿಯಾದಲ್ಲಿ, ಮುಂಬರುವ ದಿನಗಳಲ್ಲಿ ರಾಜಕೀಯ ಮುಖಂಡರ ಹಾಗೂ ಅಧಿಕಾರಶಾಹಿಗಳ ಮರ್ಜಿಗೆ ಅನುಗುಣವಾಗಿ ಸಂಶೋಧನೆ ಮಾಡುವ ದುಃಸ್ಥಿತಿ ನಿರ್ಮಾಣವಾಗುತ್ತದೆ. ಇದೊಂದು ಕನ್ನಡ ವಿರೋಧಿ ನಿಲುವಾಗಿದೆ. ದಯವಿಟ್ಟು ಕರಾವಿ ವಿಧೇಯಕದಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ಸೇರಿಸಬಾರದು; ತಿದ್ದುಪಡಿ ವಿಧೇಯಕದಿಂದ ಅದನ್ನು ಕೈಬಿಡಬೇಕು. ಹಿಂದಿನಂತೆ ಅದಕ್ಕಿದ್ದ ವಿಶಿಷ್ಟ ಸ್ಥಾನಮಾನವನ್ನು ಮುಂದುವರೆಸಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಕೋರುತ್ತೇವೆ. ತಪ್ಪಿದಲ್ಲಿ ಈ ಹಿಂದೆ ಕನ್ನಡ ವಿಶ್ವವಿದ್ಯಾಲಯದ ಭೂಮಿಯನ್ನು ರಕ್ಷಿಸಿಕೊಳ್ಳಲು ಮಾಡಿದ ಹೋರಾಟವನ್ನು ಮಾಡುವುದು ಅನಿವಾರ್ಯವಾಗುವುದು. ಈ ಹಿನ್ನೆಲೆಯಲ್ಲಿ ಕನ್ನಡ ವಿವಿ ಸ್ವಾಯತ್ತತೆ ಉಳಿಸಿ ಹೋರಾಟ ಸಮಿತಿಯು ಮುಖ್ಯಮಂತ್ರಿಯವರಿಗೆ ಅರ್ಪಿಸಲಿರುವ ಮನವಿಯನ್ನು ಮಾನ್ಯ ಕುಲಪತಿಯವರಿಗೆ ನೀಡಿತು. ಮನವಿ ಅರ್ಪಿಸಿದ ಬಳಿಕ ಸಾಂಕೇತಿಕವಾಗಿ ಧರಣಿಯನ್ನು ಮಾಡಿತು.