ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ : ಪ್ರೊ. ಡಿ.ಆರ್. ನಾಗರಾಜ್ ಅವರ ಸಮಗ್ರ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣ- ೧೬ ರಿಂದ ೧೭ನೇ ಫೆಬ್ರವರಿ ೨೦೧೮ ಉದ್ಘಾಟನಾ ಕಾರ್ಯಕ್ರಮ

ಕನ್ನಡ ಸಂಶೋಧನಾ ವಲಯ ನಿರಂತರವಾಗಿ ಡಿ.ಆರ್. ನಾಗರಾಜ್ ಅವರನ್ನು ಹುಡುಕಿಕೊಳ್ಳುತ್ತಿದೆ. ಪ್ರತಿ ಸಂಶೋಧಕ ಸಂಶೋಧಕಿಯರು ಡಿ.ಆರ್. ಅವರಿಗೆ ವಾಪಾಸ್ ಆಗುತ್ತಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ನಟರಾಜ ಹುಳಿಯಾರ್ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಮಂಟಪ ಸಭಾಂಗಣದಲ್ಲಿ ೧೬ರಿಂದ ೧೭ನೇ ಫೆಬ್ರವರಿ ೨೦೧೮ರ ವರೆಗೆ ಏರ್ಪಡಿಸಿದ್ದ ಪ್ರೊ.ಡಿ.ಆರ್. ನಾಗರಾಜ್ ಅವರ ಸಮಗ್ರ ಸಾಹಿತ್ಯ ಕುರಿತು ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಆಶಯ ನುಡಿದರು.
ಡಿ.ಆರ್. ಅವರು ನಿತ್ಯದ ಅಧಿಕಾರದ ರಾಜಕಾರಣ ಮತ್ತು ಚುನಾವಣಾ ರಾಜಕಾರಣದ ಕುರಿತು ಕನ್ನಡ ಪ್ರಭ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಆಳವಾದ ಸಂಶೋಧನೆ ಮಾಡಿದ ಲೇಖನಗಳನ್ನು ಬರೆದಿದ್ದರು. ಕನ್ನಡ ಸಾಹಿತ್ಯ ಕೇಂದ್ರದಿಂದ ಪ್ರವೇಶ ಪಡೆದು ಮುಖ್ಯವಾಗಿ ಎಲ್ಲ ವಲಯಗಳ ಕನ್ನಡ ಅನುಭವ ಕೇಂದ್ರದಿಂದ ಚಿಂತನೆಗಳನ್ನು ಆರಂಭಿಸುತ್ತಾರೆ. ಅನೇಕ ಸಂಸ್ಕೃತಿ ಚಿಂತಕರು ವಿವಿಧ ಜ್ಞಾನ, ಶಿಸ್ತುಗಳಿಂದ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಕ್ಕೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಡಿ.ಆರ್. ಅವರು ಅದನ್ನು ಪಲ್ಲಟಗೊಳಿಸಿ ಕನ್ನಡ ಸಾಹಿತ್ಯದ ಕೇಂದ್ರದಿಂದ, ಕನ್ನಡ ಅನುಭವ ಕೇಂದ್ರದಿಂದ, ಕನ್ನಡ ಚಳುವಳಿಗಳ ಕೇಂದ್ರದಿಂದ, ಕನ್ನಡದ ಸಾಂಸ್ಕೃತಿಕ ಚಳುವಳಿ ಕೇಂದ್ರದಿಂದ, ಕನ್ನಡದ ಜಾನಪದ ಕೃತಿಗಳ ಕೇಂದ್ರದಿಂದ ವಾಪಾಸು ಹೋಗಿ ಲೋಕದ ಮತ್ತು ನಾಗರೀಕತೆಯ ಕಥನವನ್ನು ಮಾಡುತ್ತಾರೆ. ಇದರಿಂದ ಕನ್ನಡದಲ್ಲಿ ಎಲ್ಲೂ ಕಾಣದ ಅದ್ಭುತವಾದ ಒಂದು ಅರ್ಪಣೆಯ ಮಾತನ್ನು ಡಿ.ಆರ್. ಅವರನ್ನು ಕುರಿತು ಖ್ಯಾತ ಚಿಂತಕ ಅಶೀಷ್‌ನಂದಿ ಹೇಳಿದ್ದಾರೆ ಎಂದು ಅವರ ಮಾತುಗಳನ್ನು ಭಾಷಣದಲ್ಲಿ ಉದ್ಘರಿಸಿದರು.
ಯಾವುದೇ ಕ್ಷೇತ್ರಗಳ ಶಿಸ್ತುಗಳನ್ನು ಅಧ್ಯಯನ ಮಾಡಿದರೂ ಅವುಗಳನ್ನು ಕಾವ್ಯದ ಹಾಗೆ ಓದದಿದ್ದರೆ ಅವುಗಳ ಸೂಕ್ಷ್ಮ ಅರ್ಥ ಆಗುವುದಿಲ್ಲ ಎಂದು ಡಿ.ಆರ್. ಅಂದೇ ಹೇಳಿದ್ದರು. ಸಾಹಿತ್ಯ ವಿಮರ್ಶೆ ಜ್ಞಾನದ ಯಾವುದೆ ಶಿಸ್ತನ್ನು ಒಳಗೊಳ್ಳಬಹುದು. ಸಂಶೋಧನೆಯಲ್ಲಿ ಭಾಷೆಯ ಸೂಕ್ಷ್ಮ ಅಭ್ಯಾಸ ನಡೆಯಬೇಕು ಎನ್ನುವುದು ಇವರಲ್ಲಿ ಪ್ರಧಾನವಾಗಿ ಕಾಣುತ್ತದೆ. ಕಾವ್ಯಗಳ ಮೂಲಕ ಒಟ್ಟು ಅಧಿಕಾರ ರಾಜಕಾರಣದ ಕೇಂದ್ರಗಳನ್ನು ಗುರುತಿಸಲು ಪ್ರಯತ್ನಿಸುತ್ತಾರೆ. ರಾಮಕೃಷ್ಣ ಹೆಗಡೆ ಅವರ ವಿಕೇಂದ್ರಿಕರಣ ಪರಿಕಲ್ಪನೆಯನ್ನು ಅದ್ಭುತವಾಗಿ ವಿಶ್ಲೇಷಣೆ ಮಾಡಿದ್ದಾರೆ. ಭಾರತೀಯ ನಾಸ್ತಿಕ ದರ್ಶನದ ಬರಹಗಳ ಕುರಿತು ಅವರ ಪುಟ್ಟ ಭಾಷಣ ಮುಂದೆ ಬಹುದೊಡ್ಡ ಸಿದ್ಧಾಂತವಾಯಿತು. ಯಾವುದನ್ನಾದರೂ ವಿವರಿಸಿಕೊಳ್ಳಬಲ್ಲ ಸಾಧ್ಯತೆಗಳನ್ನು ವಚನಕಾರರ ಗದ್ಯ ತೆರೆಯುತ್ತದೆ ಎನ್ನುವುದನ್ನು ಡಿ.ಆರ್. ಬಹುಶಿಸ್ತುಗಳ ಮೂಲಕ ಮುಂದೆ ಬೆಳೆಸಿಕೊಂಡು ಹೋದರು. ಅವರಿಗೆ ತಾನು ತುಳಿದ ದಾರಿಯನ್ನು ಮತ್ತೆ ಮರುಪರಿಶೀಲನೆ ಗೊಳಿಸಿಕೊಳ್ಳುವ ಹಂಬಲ ಪುಸ್ತಕ ಬರೆದ ಕ್ಷಣ ಉಂಟಾಗುತ್ತಿತ್ತು. ಇವರ ಕಥನ ಮುಗ್ಧವಾದ ಕಥನ ಅಲ್ಲ, ಅವರು ನಡೆಸುವ ಅಂತರಪಠ್ಯೀಯ ಕ್ರಮ ವಿಶಿಷ್ಟವಾದದ್ದು. ದಲಿತ ಕಾವ್ಯದಲ್ಲಿ ದಲಿತ ಲೋಕವೇ ಕಾಣೆ ಆಗಿದೆ ಎಂದು ಆರಂಭದಲ್ಲಿ ಡಿ.ಆರ್. ಪ್ರಶ್ನೆಯನ್ನು ಎತ್ತಿದ್ದರು. ಇದು ಓದನ್ನು ಬರವಣಿಗೆಯ ಗ್ರಹಿಕೆಯ ಕ್ರಮವನ್ನು ಪಲ್ಲಟಗೊಳಿಸಲು ಕಾರಣವಾಗುತ್ತದೆ ಎಂದು ಡಿ.ಆರ್. ಅವರ ಬರಹವನ್ನು ಕಟ್ಟಿಕೊಟ್ಟರು.
ಪೂರ್ವದಲ್ಲಿ ನಿಂತು ಪಶ್ಚಿಮದಲ್ಲಿ ಗ್ರಹಿಸಿದ ಭಾರತದ ಬಹುದೊಡ್ಡ ಚಿಂತಕ, ಕನ್ನಡ ಅನುಭವ ಲೋಕದಲ್ಲಿ ನಿಂತು ಪಶ್ಚಿಮವನ್ನು ಮುಖಾಮುಖಿಯಾದರು. ಸೃಜನಶೀಲ ವಿಮರ್ಶಾ ಪ್ರತಿಭೆ ಡಿ.ಆರ್. ಅವರು ಅಮೃತ ಮತ್ತು ಗರುಡ ಪುಸ್ತಕ ಬರೆದಿದ್ದರು. ಇವರ ಸಹಉದ್ಯೋಗಿಯಾದ ಡಾ. ಚಂದ್ರಶೇಖರ ಕಂಬಾರ ಅವರು ಈ ಪುಸ್ತಕಕ್ಕೆ ಬರೆದ ಬೆನ್ನುಡಿಯಲ್ಲಿ ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಡಿ.ಆರ್. ನಾಗರಾಜು ಅವರು ಏನು ಹೇಳಿದ್ದಾರೆ ಎಂಬುದನ್ನು ನೋಡಿಯೇ ಮುಂದಕ್ಕೆ ಹೋಗಬೇಕಾಗುತ್ತದೆ ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ಅದು ನಿಜವಾಯಿತು. ಕನ್ನಡ ಸಾಹಿತ್ಯ ಸಂಸ್ಕೃತಿ ನಿಗೂಢ ಕಾರಣಗಳಿಗಾಗಿ ಡಿ.ಆರ್. ಅವರ ಚಿಂತನೆಯನ್ನು ಸಮಗ್ರವಾಗಿ ಯೋಚಿಸಿಲ್ಲ. ಡಿ.ಆರ್. ಅವರು ಸಂಸ್ಕೃತಿ ಸಿದ್ಧಾಂತಿ, ನಾಗರೀಕತೆಯ ಕಥನಕಾರ, ಸಾಹಿತ್ಯ ಕಥನಕಾರ ಎಂದು ಡಿ.ಆರ್. ಅವರ ವ್ಯಕ್ತಿತ್ವವನ್ನು ಆಶಯ ಭಾಷಣದಲ್ಲಿ ಕಟ್ಟಿಕೊಟ್ಟರು.
ರಾಷ್ಟ್ರೀಯ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಜಿ.ಎನ್. ದೇವಿ ಅವರು ಡಿ.ಆರ್. ಜೊತೆಗಿನ ತಮ್ಮ ಒಡನಾಟದ ಕ್ಷಣಗಳನ್ನು ಹಂಚಿಕೊಳ್ಳುತ್ತ ಕಳೆದು ಹೋದದ್ದರ ನೆನಪು ಉಳಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ನಾನು ಬರೆದ ಪುಸ್ತಕದ ವಿಮರ್ಶೆ ಮಾಡುವ ಸಂದರ್ಭದಲ್ಲಿ ಡಿ.ಆರ್. ಅವರೊಂದಿಗೆ ಚರ್ಚಿಸುವಾಗ ಜೈನ, ಬುದ್ಧ, ಪಾಶ್ಚಾತ್ಯ, ಕನ್ನಡ, ದ್ರಾವಿಡ ಮೊದಲಾದ ಕಡೆಯಿಂದ ಡಿ.ಆರ್. ತರುತ್ತಿದ್ದ ಮಾಹಿತಿಗಳನ್ನು ಕಂಡು ನನಗೆ ಆಶ್ಚರ್ಯವಾಗುತ್ತಿತ್ತು. ಕಳೆದು ಹೋದ ಸ್ಮೃತಿಗಳನ್ನು ಪಡೆದುಕೊಳ್ಳುವುದು ಹೇಗೆ ಎನ್ನುವುದು ನಮ್ಮಿಬ್ಬರ ನಡುವಿನ ಆಕರ್ಷಣೆಯಾಗಿತ್ತು ಎಂದು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ರಾಷ್ಟ್ರೀಯ ವಿಚಾರಸಂಕಿರಣದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಕಾಮ್ರೇಡ್ ಡಿ.ಆರ್. ಅವರು ನಮ್ಮ ಚಿಂತನ ಕ್ರಮಗಳನ್ನು ಬದಲಿಸಿದರು. ವಸಹತುಶಾಹಿಗಳನ್ನು ಪ್ರತಿಭಟಿಸುವ ರೀತಿಯನ್ನು ತಮ್ಮ ಬರಹ ಹಾಗೂ ಚಿಂತನಾ ಕ್ರಮದ ಮೂಲಕ ಡಿ.ಆರ್. ಬಹಳ ಸ್ಪಷ್ಟವಾಗಿ ತೋರಿಸಿದ್ದಾರೆ. ಅವರು ಭಕ್ತಿಪಂಥವನ್ನು ನೋಡುವ ವಿಧಾನ ಅಚ್ಚರಿ ಹುಟ್ಟಿಸುತ್ತಿದೆ. ಜೊತೆಗೆ ನಮ್ಮ ಸ್ಥಳೀಯವಾದ ಜ್ಞಾನ ಪರಂಪರೆಯನ್ನು ಇಂದಿನ ಕಾಲಕ್ಕೆ ಹೇಗೆ ಮುಖಾಮುಖಿಯಾಗಿಸಬೇಕು ಎಂಬ ಚಿಂತನೆಗಳನ್ನು ಹೊಸದಾಗಿ ತೋರಿಸಿಕೊಟ್ಟಿದ್ದಾರೆ. ಮೌಖಿಕ ಸಾಮಗ್ರಿಯನ್ನು ಆಕರವಾಗಿಟ್ಟುಕೊಂಡು ಭಿನ್ನ ಧ್ವನಿಗಳನ್ನು ಹೇಗೆ ಗ್ರಹಿಸಿಕೊಳ್ಳಬೇಕು ಎಂದು ತಿಳಿಸಿಕೊಟ್ಟಿದ್ದಾರೆ ಎಂದು ನುಡಿದರು.
ವಿಚಾರ ಸಂಕಿರಣವನ್ನು ಆಯೋಜಿಸಿದ್ದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ವೆಂಕಟೇಶ ಇಂದ್ವಾಡಿ ಕ್ಲೀಷೆಗಳನ್ನು ಮುರಿಯಬೇಕು ಎನ್ನುವುದು ಡಿ.ಆರ್. ಅವರ ಆಶಯವಾಗಿತ್ತು. ಡಿ.ಆರ್. ಅವರು ಬಿಟ್ಟು ಹೋದ ಹೊಳಹುಗಳನ್ನು ವಿಸ್ತರಿಸುವ, ಅರ್ಥೈಸುವ ಹೊಣೆ ನಮ್ಮ ಮೇಲಿದೆ ಎಂದು ಪ್ರಾಸ್ತಾವಿಕದಲ್ಲಿ ನುಡಿದರು. ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸ್ವಾಗತಿಸಿ, ಗಣ್ಯರನ್ನು ಪರಿಚಯಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಅಮರೇಶ ನುಗಡೋಣಿ ಅವರು ವಂದಿಸಿದರು. ವಿಭಾಗದ ಪಿಡಿಎಫ್ ಆದ ಡಾ. ಗಾದೆಪ್ಪ ನಿರೂಪಿಸಿದರು. ಡಾ. ವಿ.ಬಿ. ತಾರಕೇಶ್ವರ ಅವರು ಜಿ.ಎನ್. ದೇವಿ ಅವರ ಇಂಗ್ಲಿಷ್ ಮಾತುಗಳನ್ನು ಕನ್ನಡದಲ್ಲಿ ಹೇಳಿದರು. ಪ್ರಬಂಧ ಮಂಡಿಸಲು ಆಗಮಿಸಿದ ಪ್ರೊ.ಬಿ.ಎಂ.ಪುಟ್ಟಯ್ಯ, ಪ್ರೊ. ಶಿವರಾಮಶೆಟ್ಟಿ, ಪ್ರೊ.ಎಂ.ಉಷಾ, ಪ್ರೊ. ಚಂದ್ರಶೇಖರ ನಂಗಲಿ ಈ ಸಾಲಿನ ಕೋರ್ಸ್‌ವರ್ಕ್ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರುಗಳು ಉಪಸ್ಥಿತರಿದ್ದರು.
ಮಧ್ಯಾಹ್ನ ಅಲ್ಲಮ ಕಾವ್ಯ, ಮಂಟೇಸ್ವಾಮಿ ಕಾವ್ಯಗಳ ಮೂಲಕ ಕನ್ನಡ ಕಾವ್ಯ ಮಿಮಾಂಸೆಯ ಸೃಷ್ಟಿ ಸಂವಾದವನ್ನು ಪ್ರೊ. ಚಂದ್ರಶೇಖರ ನಂಗಲಿ ನಡೆಸಿಕೊಟ್ಟರು. ಪ್ರೊ.ಟಿ.ಎಸ್. ಸತ್ಯನಾಥ, ಪ್ರೊ.ಎಂ.ಎಸ್. ಆಶಾದೇವಿ, ಪ್ರೊ. ಮಹೇಶ ಹರವೆ ಅವರು ೧ನೇ ಗೋಷ್ಠಿಯಲ್ಲಿ ಪ್ರಬಂಧಗಳನ್ನು ಮಂಡಿಸಿದರು.27973328_10209326115624944_7135268355002629467_n28061565_10209326129265285_4927980956834680696_o28164916_10209326115544942_8210421291443440325_o28234926_10209326115584943_5156297498441319283_o

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s