ದಲಿತ ಅಧ್ಯಯನ ಪೀಠದಿಂದ ಸಂವಿಧಾನ ಮತ್ತು ಮಹಿಳೆ – ವಿಚಾರಸಂಕಿರಣ ೨೬-೨೭ ಡಿಸೆಂಬರ್ ೨೦೧೭ ಸಮಾರೋಪ ಸಮಾರಂಭ

ಮಹಿಳೆಯರು, ಅಲ್ಪಸಂಖ್ಯಾತರು, ಸಣ್ಣ ಸಂಖ್ಯೆಯಲ್ಲಿರುವ ಹಿಂದುಳಿದ ಜಾತಿಗಳು, ಬುಡಕಟ್ಟುಗಳು, ಸಂವಿಧಾನದ ಪರವಾಗಿ ಇದ್ದಾರೆ. ಶೇ.೩೦ರಷ್ಟು ಮೇಲ್ವರ್ಗದವರು, ಅಧಿಕಾರಸ್ಥರು, ಸಂವಿಧಾನ ನಿರ್ವಚಿಸುವ ಶಕ್ತಿಯುಳ್ಳವರು ಸಂವಿಧಾನವನ್ನು ವಿರೋಧಿಸುತ್ತಾರೆ. ಸಧ್ಯಕ್ಕೆ ಸಮಾಜದ ತಳಸ್ಥರಕ್ಕೆ ಸಂವಿಧಾನ ದೊಡ್ಡ ಆಧಾರಸ್ತಂಭವಾಗಿದೆ. ಮಹಿಳೆಯರನ್ನು ಬುಡಕಟ್ಟು ಮಹಿಳೆಯರು, ದಲಿತ ಮಹಿಳೆಯರು ಹೀಗೆ ಬಿಡಿ ಬಿಡಿಯಾಗಿ ನೋಡಬೇಕು. ತಳವರ್ಗಕ್ಕೆ ಸೇರಿದ ಮಹಿಳೆಯರಿಗೆ ಭದ್ರತೆಯಿಲ್ಲ. ಇದರ ಬಗ್ಗೆ ಎಲ್ಲಿಯೂ ಚರ್ಚೆ ನಡೆಯುತ್ತಿಲ್ಲ. ೨೦೦೦ದಿಂದ ಜಾರಿಗೆ ಬಂದ ಮಹಿಳೆಗೆ ತಂದೆಯ ಆಸ್ತಿಯಲ್ಲಿ ಸಮಭಾಗವು ೨೦೦೦ಕ್ಕಿಂತ ಹಿಂದಿನವರೆಗೆ ಅನ್ವಯವಾಗುವುದಿಲ್ಲ. ಇಲ್ಲಿಯೂ ಲಿಂಗ ತಾರತಮ್ಯ ಕೆಲಸ ಮಾಡುತ್ತಿದೆ. ಯಾವ ಪಕ್ಷಗಳಾಗಲಿ, ಪಕ್ಷಗಳ ತತ್ವಗಳಾಗಲಿ, ಮಹಿಳೆಗೆ ಸಮಾನ ಸ್ಥಾನ ನೀಡಿಲ್ಲ. ಈ ಕುರಿತು ಚರ್ಚೆಗಳು ನಡೆಯುವುದಿಲ್ಲ. ಸಂವಿಧಾನ ತನ್ನಷ್ಟಕ್ಕೆ ತಾನೇ ಚಲಿಸಿ ಮಹಿಳೆಯರನ್ನು ಉದ್ಧಾರ ಮಾಡುವುದಿಲ್ಲ. ಮಹಿಳೆ ಸ್ವತಃ ಸಂಘಟಿತಳಾಗಿ ಉದ್ಧಾರವಾಗಬೇಕು. ಆಸ್ತಿ, ಭೂಮಿ, ಆರ್ಥಿಕ ಪ್ರಶ್ನೆಗಳು, ಮಹಿಳೆಯನ್ನು ಈ ಸ್ಥಿತಿಗೆ ತಳ್ಳಿವೆ. ಮಹಿಳೆಯ ದುಡಿಮೆಗೆ ಆರ್ಥಿಕ ವ್ಯಾಖ್ಯಾನ ಇಲ್ಲ. ಆರ್ಥಿಕತೆಗೆ ಮಹಿಳೆಯ ಬಹಳ ದೊಡ್ಡ ಕೊಡುಗೆ ಇದೆ. ಮಹಿಳೆಯ ದುಡಿಮೆಯನ್ನು ಆರ್ಥಿಕ ಚಟುವಟಿಕೆಯೆಂದು ಪರಿಗಣಿಸಿಯೇ ಇಲ್ಲ. ಇವೆಲ್ಲವೂ ವಿವಾಹ ವಿಚ್ಛೇದನ ಬಿಗಿಗೊಳಿಸಲು ಕಾರಣವಾಗಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಮಹಿಳೆಯರಿಗೆ ರಾಜಕೀಯ ಶಿಕ್ಷಣದ ಕೊರತೆ ಇದೆ. ಸಂವಿಧಾನದ ಒಳ್ಳೆಯತನ ಅದನ್ನು ಕಾರ್ಯರೂಪಕ್ಕೆ ತರುವವರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪ್ರಾಧ್ಯಾಪಕರಾದ ಡಾ.ಎಂ.ಚಂದ್ರಪೂಜಾರಿ ಅವರು ಸಂವಿಧಾನ ಮತ್ತು ಮಹಿಳೆ ಕುರಿತು ಸಮಾರೋಪ ಭಾಷಣದಲ್ಲಿ ನುಡಿದರು.
ಕನ್ನಡ ವಿಶ್ವವಿದ್ಯಾಲಯ ದಲಿತ ಅಧ್ಯಯನ ಪೀಠವು ೨೬ರಿಂದ ೨೭ನೇ ಡಿಸೆಂಬರ್ ೨೦೧೭ರ ವರೆಗೆ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಸಂವಿಧಾನ ಮತ್ತು ಮಹಿಳೆ’ ವಿಷಯ ಕುರಿತು ೨ ದಿನಗಳ ವಿಚಾರಸಂಕಿರಣದಲ್ಲಿ ದಿನಾಂಕ ೨೭.೧೨.೨೦೧೭ರಂದು ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾರ್ಕ್ಸ್ ಮತ್ತು ಮಹಿಳೆ ಕುರಿತು ಮಾತನಾಡಿದ ಡಾ.ಜಿ. ರಾಮಕೃಷ್ಣ ಅವರು ಸಂವಿಧಾನ ಬದಲಾವಣೆ ಮಾಡಲು ಇಚ್ಛಿಸುವವರಿಗೆ ಬದಲಾವಣೆಗೂ ತಿದ್ದುಪಡಿಗೂ ಇರುವ ವ್ಯತ್ಯಾಸ ಗೊತ್ತಿಲ್ಲ. ಪ್ರಸ್ತುತ ನಾವು ಅರೆ ಊಳಿಗಮಾನ್ಯ ಹಾಗೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿದ್ದಿವೆ. ನಮ್ಮ ದೇಶದಲ್ಲಿ ಎಲ್ಲ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಉತ್ಪಾದನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯ ಮನೆಗೆಲಸದ ದುಡಿಮೆ ರಾಷ್ಟ್ರೀಯ ಉತ್ಪನ್ನಕ್ಕೆ ಸೇರುವುದಿಲ್ಲ. ಸೇರಿದರೆ ಮಾತ್ರ ಸಾಮಾಜಿಕ ಸಮಾನತೆ ಸಾಧ್ಯತೆ ವಿಶಿಷ್ಟವಾಗಿ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡುತ್ತ ಸಂವಿಧಾನ ಬದಲಿಸಬೇಕು ಎಂದು ಹೇಳುವವರೇ ತಮ್ಮ ಆಸ್ತಿಗೆ ಇದೇ ಸಂವಿಧಾನದಿಂದ ರಕ್ಷಣೆ ಪಡೆಯುತ್ತಾರೆ. ಪುರುಷನ ಚಹರೆಯಾಗಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ನಿಲ್ಲಬೇಕಾಗಿದೆ. ಚರಿತ್ರೆ ಬರೆಯುವ ಸಂದರ್ಭದಲ್ಲಿ ಮಹಿಳೆಯರನ್ನು ಕುರಿತು ಪೂರ್ವಗ್ರಹಗಳು ದಾಖಲಿಸಿದ ತಪ್ಪುಗಳನ್ನು ತಿದ್ದಿಕೊಳ್ಳುವ ಕಾಲದಲ್ಲಿ ನಾವಿದ್ದೇವೆ. ನಮ್ಮ ಮನಸ್ಸುಗಳು ಜಾತಿ ವರ್ಗಗಳಿಂದ ಕಟ್ಟಿಹಾಕಲ್ಪಟ್ಟಿವೆ. ಮಹಿಳೆಯರಿಗೆ ಇದರಿಂದ ಬಿಡಿಸಿಕೊಳ್ಳುವುದು ಇನ್ನು ಕಷ್ಟವಾಗಿದೆ. ಎಲ್ಲ ಕಾಲದೊಳಗೆ ಮಹಿಳೆಯರು ಬಯಸಿದ್ದೇನು? ಎಂಬುದಕ್ಕೆ ಇಂದಿಗೂ ಸ್ಪಷ್ಟತೆ ಸಿಗುತ್ತಿಲ್ಲ. ವ್ಯವಸ್ಥೆ ಬಯಸಿದ್ದನ್ನು ನಾವು ಒಪ್ಪಿಕೊಳ್ಳುತ್ತಿದ್ದೇವೆ. ಏಕಕಾಲದಲ್ಲಿ ಭಾರತವು, ಪುರಾಣ ಭಾರತ ಆಧುನಿಕ ಭಾರತವಾಗಿದೆ, ಅದರಲ್ಲಿ ನಾವು ಬದುಕುತ್ತಿದ್ದೇವೆ. ನಮ್ಮ ನಡಿಗೆಯನ್ನು ಸಂವಿಧಾನ ನಿಯಂತ್ರಿಸುತ್ತಿಲ್ಲ. ಪುರಾಣ ಭಾರತ ನಿಯಂತ್ರಿಸುತ್ತಿದೆ. ನಾವು ಸಂಕೀರ್ಣ ಸಂಕಟದ ಕಾಲದಲ್ಲಿದ್ದಿವೆ ಎಂದು ನುಡಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪ್ರಶ್ನೆಗಳನ್ನು ಕೇಳಿ ಚರ್ಚೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಸಂಶೋಧನಾ ವಿದ್ಯಾರ್ಥಿನಿ ಕೆ. ರೇಣುಕಾ ನಿರೂಪಿಸಿ, ಸ್ವಾಗತಿಸಿದರು. ಪೀಠದ ಸಂಚಾಲಕರಾದ ಡಾ. ಅಮರೇಶ ನುಗಡೋಣಿ ಅವರು ವಂದಿಸಿದರು.
ಸಮಾರೋಪಕ್ಕೂ ಮೊದಲು ಬುದ್ಧ ಮತ್ತು ಮಹಿಳೆ ಕುರಿತು ವೆಂಕಟಗಿರಿ ದಳವಾಯಿ ಅವರು, ಬಸವಣ್ಣ ಮತ್ತು ಮಹಿಳೆ ಕುರಿತು ಸಬಿತಾ ಬನ್ನಾಡಿ ಅವರು, ಗಾಂಧಿ ಮತ್ತು ಮಹಿಳೆ ಕುರಿತು ಎಂ.ಎಸ್. ಆಶಾದೇವಿ ಅವರು, ಅಂಬೇಡ್ಕರ್ ಮತ್ತು ಮಹಿಳೆ ಕುರಿತು ಎನ್. ಗಾಯತ್ರಿ ಅವರು ಪ್ರಬಂಧಗಳನ್ನು ಮಂಡಿಸಿದ್ದರು.

26023852_10208996861233790_3168502132949394737_o26172539_10208996861273791_1827047342255021213_o

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s