ಬಾಲ್ಯವಿವಾಹ, ವಿಧವೆಯರ ಸಮಸ್ಯೆ, ವರದಕ್ಷಿಣೆ ಸಮಸ್ಯೆ ಹಾಗೂ ೩ ಸಲ ಹೇಳುವ ತಲಾಖ್ ಇವೆಲ್ಲ ಸಮಾಜದ ಮಗ್ಗುಲ ಮುಳ್ಳುಗಳಾಗಿ ಪರಿಣಮಿಸಿವೆ ಎಂದು ಖ್ಯಾತ ಚಿಂತಕರಾದ ಡಾ.ಸಿ. ವೀರಣ್ಣ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯ ದಲಿತ ಅಧ್ಯಯನ ಪೀಠವು ೨೬ರಿಂದ ೨೭ನೇ ಡಿಸೆಂಬರ್ ೨೦೧೭ರ ವರೆಗೆ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಸಂವಿಧಾನ ಮತ್ತು ಮಹಿಳೆ’ ವಿಷಯ ಕುರಿತು ೨ ದಿನಗಳ ವಿಚಾರಸಂಕಿರಣಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನ ಮಹಿಳೆಗೆ ಎಲ್ಲ ಕೊಟ್ಟಿದೆ, ಇನ್ನೇನೂ ಹೊಸದಾಗಿ ಕೊಡಬೇಕಾಗಿಲ್ಲ. ಎಲ್ಲ ರೀತಿಯ ಸ್ವಾತಂತ್ರ್ಯದಿಂದ ಮಹಿಳೆ ಬದುಕುತ್ತಿದ್ದಾಳೆ ಎಂದು ಇಂದು ಭಾವಿಸಲಾಗಿದೆ. ರೂಢಿಮೂಲವಾಗಿ ಬಂದಿರುವ ತಿಳವಳಿಕೆ ಬಿಟ್ಟು ಮಹಿಳೆಯರನ್ನು ಹೊಸ ದೃಷ್ಟಿಕೋನದಿಂದ ನೋಡುವ ಮನಃಸ್ಥಿತಿ ಬರುವುದು ಕಷ್ಟದಾಯಕವಾಗಿದೆ. ಸಮಾನತೆ, ಸ್ವಾತಂತ್ರ್ಯದ ಘೋಷಣೆಯಿಂದ ಎಲ್ಲ ದಕ್ಕುವುದಿಲ್ಲ. ಧರ್ಮ ನಮ್ಮನ್ನು ಆಳುವ ಪ್ರಭುವಾಗಿ ನಿರ್ದೇಶಿಸಬಾರದು. ಅಂಬೇಡ್ಕರ್ ಹೇಳಿದಂತೆ ಧರ್ಮ ಮನುಷ್ಯ ಸೃಷ್ಟಿಯ ಒಂದು ಭಾಗ ಮಾತ್ರವಾಗಿದೆ. ೪ ಗೋಡೆಗಳ ನಡುವೆ ಇರಬೇಕೆ ವಿನಃ ಸಮಾಜದ ಸ್ವಾಸ್ಥ್ಯವನ್ನು ಕಲಕಬಾರದು ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಮನುಷ್ಯರನ್ನು ಮಾನವೀಯತೆಯಿಂದ ಕಾಣದಿದ್ದರೆ ಅದಕ್ಕೆ ಪಾರ್ಶ್ವವಾಯ ಬಡಿದಿದೆ ಎಂದೇ ಅರ್ಥ. ಯಾವ ಸಮಾಜವೂ ಮಹಿಳೆಗೆ ಸಂಪೂರ್ಣವಾಗಿ ಸ್ವಾತಂತ್ರ್ಯ ಕೊಟ್ಟಿಲ್ಲ. ಬ್ರಿಟಿಷರಿಂದ ಮಹಿಳೆಯರಲ್ಲದೇ ಶೂದ್ರರಿಗೂ ಶಿಕ್ಷಣದ ಅವಕಾಶ ದೊರೆಯಿತು. ನನ್ನ ಅಸ್ತಿತ್ವ ನಾನು ನೋಡಿಕೊಳ್ಳುತ್ತೇನೆ ಎಂದು ಹೆಣ್ಣು ತಾನಾಗಿಯೇ ಕೊಡವಿಕೊಂಡು ಎದ್ದುನಿಲ್ಲಬೇಕು. ಹಾಗೆಯೇ ನಮ್ಮ ಮನಸಿನ ಆಲೋಚನೆಗಳು ಹೊಸದಾಗಿ ಸೃಷ್ಟಿಯಾಗಬೇಕು. ಆಲೋಚನ ವಿಧಾನಗಳಲ್ಲಿ ಸಾಂಸ್ಕೃತಿಕ ಕ್ರಾಂತಿ ಆಗಬೇಕು. ಅನಿಷ್ಟ ಸಂಪ್ರದಾಯಗಳನ್ನು ನಮ್ಮ ರಕ್ತದಿಂದಲೇ ಓಡಿಸುವ ಕೆಲಸವಾಗಬೇಕು. ಆದರೆ ವ್ಯವಸ್ಥೆಯಲ್ಲಿ ಅಸ್ಪೃಶ್ಯತೆಯನ್ನು ಪೋಷಿಸಲು ನೀರೆರೆಯಲಾಗುತ್ತಿದೆ ಎಂದು ನೊಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡಿ ಸಂವಿಧಾನ ಬದಲಿಸುವ ಪ್ರಜಾಪ್ರಭುತ್ವ ವಿರೋಧಿ ಮಾತುಗಳು ಇಂದು ಕೇಳಿಬರುತ್ತಿವೆ. ಸಂವಿಧಾನದ ಕರ್ತೃವನ್ನು ಅಪಮಾನಿಸುವ ಕೆಲಸವಾಗುತ್ತಿದೆ. ನಮ್ಮಲ್ಲಿ ಜಾತ್ಯಾತೀತರ ದೊಡ್ಡ ಪರಂಪರೆಯಿದೆ. ಜಾತ್ಯಾತೀತ ಬೀಜ ಬಿತ್ತಿ ನೀರೆರೆದ ದೊಡ್ಡ ಶಕ್ತಿಗಳು ಚರಿತ್ರೆಯಲ್ಲಿವೆ. ಬದಾಮಿಯ ಗುಹೆಗಳು ಧರ್ಮ ಸಮನ್ವಯತೆಯನ್ನು ಸಾರುತ್ತಿವೆ. ಪಂಪ, ಬುದ್ಧ, ಬಸವ, ಗಾಂಧಿ, ಕುವೆಂಪು, ಬೇಂದ್ರೆ ಸಾಹಿತ್ಯದ ಮೂಲಕ ಜಾತ್ಯಾತೀತ ಬೀಜವನ್ನು ಬಿತ್ತಿದ್ದಿದ್ದಾರೆ. ಜಾತಿ ಹೆಸರಿನಲ್ಲಿರುವ ಸಾಂಸ್ಕೃತಿಕ ನಾಯಕರೆಲ್ಲರೂ ಜಾತ್ಯಾತೀತರಾಗಿದ್ದಾರೆ. ಇವರೆಲ್ಲರೂ ವೈಚಾರಿಕತೆಯನ್ನು ಕಟ್ಟಿಕೊಟ್ಟಿದ್ದಾರೆ. ಇವರೆಲ್ಲ ನಮಗೆ ಅವ್ವ, ಅಪ್ಪ ಆಗಿ ಮಾರ್ಗದರ್ಶಕರಾಗುತ್ತಾರೆ. ನಾವು ಐಕ್ಯತೆಯ ಮರವನ್ನು ಸಂವಿಧಾನದ ಎದುರಿಗಿಟ್ಟುಕೊಂಡು ಕಾಪಾಡಬೇಕಿದೆ. ಕಾಲದ ಸಾಮಾಜಿಕ ಸತ್ಯಗಳನ್ನು ಹೇಗೆ ಹೇಳಬೇಕೆಂಬ ಆತಂಕವಿದೆ. ಜಾತ್ಯಾತೀತೆಯ ಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕಾಗಿದೆ. ಎಲ್ಲ ಕಾಲದಲ್ಲಿಯೂ ಶೂದ್ರರ ಮೇಲೆ ಬೌದ್ಧಿಕ ಸವಾರಿ ನಡೆಯುತ್ತಲೇ ಇದೆ. ನಾವೆಲ್ಲರೂ ಕಳೆದುಹೋಗದಿರಲು ಅಂಬೇಡ್ಕರ್ ಗಾಂಧಿ, ಬುದ್ಧ, ಬಸವ ಮೊದಲಾದವರು ಕಾರಣರಾಗಿದ್ದಾರೆ ಎಂದು ಕುಲಪತಿಯವರು ತಿಳಿಸಿದರು.
ಧರ್ಮವನ್ನು ಕಾಪಾಡುವವರು ಮಹಿಳೆಯರು ಆಗಿದ್ದಾರೆ. ಆದರೆ ಅದೇ ಧರ್ಮ ಮಹಿಳೆಯರನ್ನು ಕೊಲ್ಲುತ್ತಿದೆ ಎಂದು ನಮಗೆ ಏಕೆ ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಮೌಖಿಕ ಪರಂಪರೆಯಲ್ಲಿರುವ ಸಾಂಸ್ಕೃತಿಕ ಪರಂಪರೆ ಮಹಿಳೆಯರನ್ನು ನಿಯಂತ್ರಿಸುತ್ತದೆ.(ಉದಾಃ ಎಷ್ಟು ಕಲಿತರೂ ಹೆಣ್ಣು ಪಾತ್ರೆ ತೊಳೆಯುವುದು ತಪ್ಪಂಗಿಲ್ಲ) ಆದ್ದರಿಂದ ಅಧಿಕಾರದ ಕುದುರೆ ಸವಾರಿ ಮಾಡಲು ಮಹಿಳೆಯರು ಮೂಲಭೂತ ಅಕ್ಷರಜ್ಞಾನ ಹೊಂದಬೇಕು. ಮಹಿಳೆಯರ ಬಿಡುಗಡೆ ಮಹಿಳೆಯರಿಂದಲೇ ಆಗಬೇಕು ಎಂದು ರಮಾಬಾಯಿ, ಕಸ್ತೂರಬಾ, ಸಾವಿತ್ರಿಬಾಯಿ ಪುಲೆ ಇವರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸ್ವಾಗತಿಸಿ, ಪರಿಚಯಿಸಿದರು. ಪೀಠದ ಸಂಚಾಲಕರಾದ ಡಾ.ಅಮರೇಶ ನುಗಡೋಣಿ ಅವರು ಪ್ರಾಸ್ತಾವಿಕ ನುಡಿದರು. ಸಂಶೋಧನ ವಿದ್ಯಾರ್ಥಿನಿ ಅರ್ಚನ ನಿರೂಪಿಸಿ, ವಂದಿಸಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆರಂಭದಲ್ಲಿ ವೇದಿಕೆಯ ಮೇಲಿದ್ದ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ೪೦೦ ಬಾಲಕಿಯರು ಸಂಶೋಧನಾ ವಿದ್ಯಾರ್ಥಿಗಳು, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಅಲ್ಲಮಪ್ರಭು ಬೆಟ್ಟದೂರ ಅವರು, ಡೀನರು, ಬೋಧಕರು, ಆಡಳಿತ ವರ್ಗದವರು ಉಪಸ್ಥಿತರಿದ್ದರು.
ಉದ್ಘಾಟನೆಯ ನಂತರ ಎಚ್.ಎಸ್.ಅನುಪಮಾ, ಸಾವಿತ್ರಿಬಾಯಿ ಫುಲೆ ಅವರನ್ನು, ಎಚ್.ಟಿ.ಪೋತೆ ಅವರು ರಮಾಬಾಯಿ ಅವರನ್ನು, ಟಿ.ಸಿ.ಪೂರ್ಣಿಮಾ ಅವರು ಕಸ್ತೂರಿಬಾ ಅವರನ್ನು ಕುರಿತು ಗೋಷ್ಠಿಯಲ್ಲಿ ಪ್ರಬಂಧಗಳನ್ನು ಮಂಡಿಸಿದರು