ಪ್ರೊ. ಡಿ.ಆರ್. ನಾಗರಾಜ್ ಅವರ ಸಮಗ್ರ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣ- ೧೬ ರಿಂದ ೧೭ನೇ ಫೆಬ್ರವರಿ ೨೦೧೮ ಸಮಾರೋಪ ಸಮಾರಂಭ

ನಮ್ಮ ಧರ್ಮ, ಸಂಸ್ಕೃತಿ ಧಾರೆ, ಪಠ್ಯಗಳನ್ನು ಪುನರ್‌ರಚಿಸಿಕೊಳ್ಳಬೇಕು ಪುನರ್ ವ್ಯಾಖ್ಯಾನ ಮಾಡಬೇಕು ಎಂಬುದು ಡಿ.ಆರ್. ನಾಗರಾಜ ಅವರ ಎಲ್ಲ ಬರಹಗಳಲ್ಲಿಯೂ ಕಂಡುಬರುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರಾಜೇಂದ್ರ ಚೆನ್ನಿ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಮಂಟಪ ಸಭಾಂಗಣದಲ್ಲಿ ೧೬ರಿಂದ ೧೭ನೇ ಫೆಬ್ರವರಿ ೨೦೧೮ರ ವರೆಗೆ ಏರ್ಪಡಿಸಿದ್ದ ಪ್ರೊ.ಡಿ.ಆರ್. ನಾಗರಾಜ್ ಅವರ ಸಮಗ್ರ ಸಾಹಿತ್ಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡುತ್ತಿದ್ದರು.
ಯಾವ ಜ್ಞಾನ ಪದ್ಧತಿಗಳನ್ನು ಪ್ರಧಾನ ಧಾರೆಗಳು ಹತ್ತಿಕ್ಕಿಬಿಡುತ್ತವೋ ಅವುಗಳಿಗೆ ಯಾವುದೇ ರೀತಿಯ ಪ್ರತಿನಿಧೀಕರಣ ಇಲ್ಲದ ಹಾಗೆ ಕೆಲಸ ಮಾಡುತ್ತವೋ ಅಂತಹ ಜ್ಞಾನಪರಂಪರೆಗಳಲ್ಲಿ ಬಂಡಾಯಕ್ಕೆ ಅನುವು ಮಾಡುವಂತಹ ಒಂದು ಜಾಗವನ್ನು ನಾನು ನಿರ್ಮಾಣ ಮಾಡಿರಬಹುದೆಂದು ಮಿಶಲ್ ಫೂಕೋ ಹೇಳಿದ್ದಾರೆ. ಡಿ.ಆರ್. ನಾಗರಾಜ್ ಅವರು ಸಹ ಬಹುಶಃ ಇದೇ ಉತ್ತರ ಕೊಡುತ್ತಿದ್ದರು. ಡಿ.ಆರ್. ಅವರು ಜ್ಞಾನ ಪರಂರಂಪರೆಗಳು ಹತ್ತಿಕ್ಕಲಾಗದ ತಿಳಿವಿನ ಅರಿವಿನ ಬಗೆಗಳಿಗೆ ಅನುವು ಮಾಡಿಕೊಡುವ ಕೆಲಸವನ್ನು ಮಾಡಿದ್ದಾರೆ ಎನ್ನುವುದು ಬಹಳ ಮುಖ್ಯವಾಗಿ ಕಾಣುತ್ತದೆ. ಅವರಿಗೆ ಬರಹ ಕ್ರಿಯೆ ಆಗಿತ್ತು. ಪಠ್ಯಗಳನ್ನು ಇಷ್ಟು ಸಮಗ್ರವಾಗಿ ನಿರ್ಮಿಸುವಂತಹ ಒಂದು ವೈಭವ ನಮ್ಮ ತಲೆಮಾರಿಗೆ ಎಂದೂ ಸಿಗಲೇಇಲ್ಲ ಅಂತಹ ವೈಚಾರಿಕ ವಿರಾಮವೂ ಸಿಗಲಿಲ್ಲ. ಅವರ ಬರಹ ಮತ್ತು ವೃತ್ತಿಯನ್ನು ಇತಿಹಾಸದ ಮೂಲಕ ನೋಡುವ ಅಗತ್ಯವಿದೆ. ಆಗ ಅವರ ಬರಹ ಯಾಕೆ ಮುಖ್ಯವಾಗುತ್ತದೆ ಎಂದು ಅರ್ಥವಾಗುತ್ತದೆ. ಪಶ್ಚಿಮ ಕೇಂದ್ರಿತವಾದ ಹಣೆಚೀಟಿಗಳ ಮೂಲಕ ಯಾಕೆ ಡಿ.ಆರ್. ಚಿಂತನೆಗಳನ್ನು ಗ್ರಹಿಸಲು ಪ್ರಯತ್ನಿಸುತ್ತೇವೆ? ಯಾಕೆ ಅವರ ಬರಹಗಳನ್ನು ಮಾರ್ಕ್ಸಿಸ್ಟ್ ಎಂದು ಕರೆಯುತ್ತೇವೆ? ಎಂದು ಸಣ್ಣ ಅಸಮಾಧಾನವನ್ನು ರಾಜೇಂದ್ರ ಚೆನ್ನಿ ವ್ಯಕ್ತಪಡಿಸಿದರು.
ಡಿ.ಆರ್. ಯಾವ ಕೃತಿಯಲ್ಲಿ ಶುದ್ಧ ಮಾರ್ಕ್ಸ್‌ವಾದಿಯಾಗಿ ಬರೆದಿದ್ದಾರೆ? ಎಂದು ಪ್ರಶ್ನಿಸುತ್ತ ಅವರನ್ನು ಪೋಸ್ಟ್ ಕಲೋನಿಯಲ್ ಹಾಗೂ ಪೋಸ್ಟ್ ಮಾರ್ಡನಿಸ್ಟ್ ಎನ್ನುವುದು ಶುದ್ಧ ತಪ್ಪು. ಹಾಗೆ ಕರೆದರೆ ಅವರನ್ನು ಈ ನೆಲೆಯಲ್ಲಿ ವಿವರಿಸಬೇಕಾಗುತ್ತದೆ. ಮತ್ತು ಹಾಗೆ ಕರೆದರೆ ಡಿ.ಆರ್. ಅವರಿಗೆ ಸ್ವಂತ ವ್ಯಕ್ತಿತ್ವ ಇಲ್ಲ ಎಂದು ವಿವರಿಸಬೇಕಾಗುತ್ತದೆ. ಧರ್ಮ, ಸಂಸ್ಕೃತಿ, ಪುರಾಣ ಎಂಬ ಏಕಾಕೃತಿಗಳನ್ನು ಬಹಳ ಶಕ್ತಿಶಾಲಿಯಾಗಿ ಒಡೆಯುವ ಆರಂಭ ಮಾಡಿದ್ದ ಕುವೆಂಪು ಅವರು, ಪುರಾಣಗಳ ಸಾಂಸ್ಕೃತಿಕ ಒಡೆತನ ಮತ್ತು ವ್ಯಾಖ್ಯಾನಗಳ ಒಡೆತನ ಯಾರದ್ದು ಎಂದು ಪ್ರಶ್ನಿಸಲು ಆರಂಭಿಸಿದ್ದರು. ಇದು ಭಾರತದಲ್ಲಿ ಬಹುದೊಡ್ಡ ಸಂಚಲನ ತಂದಿತು. ಕುವೆಂಪು ಅವರ ವೈಚಾರಿಕತೆ ಸೃಷ್ಟಿಶೀಲ ಬರಹದ ಮುಂದುವರಿಕೆಯಾಗಿ ಡಿ.ಆರ್. ಅವರನ್ನು ಕನ್ನಡದ ಸಂದರ್ಭದಲ್ಲಿ ನೋಡಬೇಕಾಗುತ್ತದೆ. ಹತ್ತಿಕ್ಕಲಾದಂತಹ ದಮನಿತ ಎಂದು ಕರೆಯುವ ಸಮುದಾಯಗಳಲ್ಲಿರುವ ಅದ್ಭುತವಾದ ಚಾರಿತ್ರಿಕ ಶಕ್ತಿಗಳಿಗೆ ಬಿಡುಗಡೆ, ಅಭಿವ್ಯಕ್ತಿ ಸ್ವಾತಂತ್ರ್ಯ ಕೊಡಬೇಕು. ಆಗ ಚರಿತ್ರೆ ಬದಲಾಗುತ್ತದೆ ಎಂದು ಡಿ.ಆರ್. ಹೇಳಿದ್ದಾರೆ. ಈ ಚಾರಿತ್ರಿಕ ಶಕ್ತಿಗಳು ಸಮಾನತೆಯ ಕಡೆ ಚಲಿಸಲಿಲ್ಲ. ಬದಲಾಗಿ ಪ್ರಸ್ತುತ ಸಂದರ್ಭದಲ್ಲಿ ಚಾರಿತ್ರಿಕ ಶಕ್ತಿಗಳು ಹಿಂದುತ್ವವಾದಿ ಶಕ್ತಿಗಳು ಬಳಸುವ ಆಯುಧಗಳಾಗಿವೆ. ಇದಕ್ಕೆ ಕಾರಣ ದಲಿತ ರಾಜಕೀಯ ವಿಸ್ಮೃತಿಗೆ ಒಳಗಾಗಿದೆ. ಸ್ಮೃತಿಗಳನ್ನು ಕಳೆದುಕೊಂಡಿರುವುದರಿಂದ ಜಾತಿ ವಿನಾಶ ಆಗಲಿಲ್ಲ ಎಂದು ಡಿ.ಆರ್. ಹೇಳಿದ್ದಾರೆ. ಪ್ರಜಾಪ್ರಭುತ್ವ ಅಲ್ಲದ ಶಕ್ತಿಗಳಿಗೆ ನಾವು ಯಾಕೆ ದುಡಿಯುತ್ತಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು ಎಂದು ಪ್ರೊ.ಚೆನ್ನಿ ಅವರು ಹೇಳಿದರು.
ಬಂಡವಾಳಶಾಹಿಯ ಹೊಸ ಸ್ವರೂಪಗಳು ಇಂದು ಕಂಡುಬಂದಿವೆ. ಬಹಳ ಭಿನ್ನವಾಗಿ ಛದ್ಮವೇಷದಲ್ಲೂ ಬರುವಂತಹ, ಕಣ್ಣಿಗೆ ಕಾಣದಂತಹ, ನಮ್ಮನ್ನು ಸಮಗ್ರವಾಗಿ ನಿಯಂತ್ರಿಸುವಂತಹ ಅಂತರಾಷ್ಟ್ರೀಯ ಬಂಡವಾಳ ಚರಿತ್ರೆಯ ಶಕ್ತಿಯಾಗಿ ಬಂಡವಾಳಶಾಹಿಯು ಚಾಲನೆಯಾಗಿದೆ. ಹಿಂದೆಯೇ ಡಿ.ಆರ್. ಇದನ್ನು ಮುನ್ಸೂಚನೆಯಾಗಿ ನೋಡಿದ್ದರು. ಆದರೆ ನಮಗೆ ಇಂದು ಇದು ವಾಸ್ತವಾಗಿದೆ ಎಂದು ಪ್ರಸ್ತುತ ಪರಿಸ್ಥಿತಿಯನ್ನು ಪ್ರೊ.ಚೆನ್ನಿ ಅವರು ಬಿಚ್ಚಿಟ್ಟರು.
ಡಾ. ವೆಂಕಟೇಶ ಇಂದ್ವಾಡಿ ಅವರು ಸಂಪಾದಿಸಿದ ಎ.ಕೆ. ರಾಮಾನುಜನ್ ಸಮಗ್ರ ಸಾಹಿತ್ಯ ಪುಸ್ತಕವನ್ನು ಪ್ರೊ. ಚೆನ್ನಿ ಅವರು ತಮ್ಮ ಭಾಷಣಕ್ಕು ಮೊದಲು ಬಿಡುಗಡೆ ಮಾಡಿದರು. ಬಿಡುಗಡೆಯ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ.ವೆಂಕಟೇಶ ಇಂದ್ವಾಡಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಡೀನರಾದ ಡಾ.ಮೋಹನ ಕುಂಟಾರ ಉಪಸ್ಥಿತರಿದ್ದರು.
ಈ ಸಮಾರಂಭವನ್ನು ಸಂಶೋಧನಾ ವಿದ್ಯಾರ್ಥಿನಿ ಅರ್ಚನಾ ಸ್ವಾಗತಿಸಿ, ನಿರೂಪಿಸಿದರು.

27867726_10209326141145582_2486712530696161222_n28061565_10209326129265285_4927980956834680696_o28161969_10209326147345737_318636151550671351_o

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s