ಬೇಕೋ ಬೇಡವೋ ಆದರೆ ಭಾರತ ದೇಶದಲ್ಲಿ ನಾವು ಜಾತಿಯೊಂದಿಗೆ ಹುಟ್ಟುತ್ತಿದ್ದೇವೆ. ಇದು ಈ ದೇಶದ ವಾಸ್ತವ ಎಂದು ಮಧ್ಯಪ್ರದೇಶದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಅಮರಕಂಟಕದ ಕುಲಪತಿಯವರಾದ ಡಾ.ತೇಜಸ್ವಿ ಕಟ್ಟಿಮನಿ ಅವರು ನುಡಿದರು.
ಅದ್ಭುತ ಓದುಗರು, ಅದ್ಭುತ ನೆನಪಿನ ಶಕ್ತಿ ಹಾಗೂ ಅತ್ಯದ್ಭುತ ಅಂಬೇಡ್ಕರ್ ಕುರಿತ ಅಧ್ಯಯನ ಹಾವನೂರ ಅವರದಾಗಿತ್ತು. ಅವರು ತಳವರ್ಗಗಳ ಆರ್ಥಿಕ ಸಾಮಾಜಿಕ ಧಾರ್ಮಿಕ ಸ್ಥಿತಿಗಳನ್ನು ಬಹಳ ಚನ್ನಾಗಿ ಅರ್ಥಮಾಡಿ ಕೊಂಡಿದ್ದರು. ನಾನು ಇಡೀ ಕರ್ನಾಟಕ ಹಿಂದುಳಿದ ವರ್ಗಗಳ ನಾಯಕ. ನಾನು ವಾಲ್ಮೀಕಿ ಸಮಾಜಕ್ಕೆ ಮಾತ್ರ ಸೀಮಿತ ಅಲ್ಲ ಎಂದು ಹೇಳಿಕೊಂಡಿದ್ದಾರೆ. ನಂತರ ಮುಂದಿನ ದಿನಗಳಲ್ಲಿ ಇದು ನನ್ನ ಭ್ರಮೆ ಆಗಿತ್ತು ಎಂದೂ ಸಹ ಹೇಳಿಕೊಂಡಿದ್ದಾರೆ ಎಂದು ಪ್ರೊ. ತೇಜಸ್ವಿ ತಿಳಿಸಿದರು. ಪೋಸ್ಟ್ ಹಾವನೂರ ರಿಪೋರ್ಟ್ (Post Havanoora Report)ಅನ್ನು ಎಲ್ಲರೂ ಅಧ್ಯಯನ ಮಾಡಬೇಕು. ಈ ವರದಿಯ ಅಧ್ಯಯನದಿಂದ ಅನೇಕರು ಉನ್ನತ ಹುದ್ದೆಗೆ ಹೋಗಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗವು ಈ ವರದಿಯನ್ನು ಕೈಗೆತ್ತಿಕೊಳ್ಳಬೇಕು. ಹಾವನೂರ ವರದಿಯನ್ನು ದೇಶ ವಿದೇಶಗಳಲ್ಲಿ ಅಧ್ಯಯನ ಮಾಡಿದ್ದಾರೆ. ವಾಲ್ಮೀಕಿ ಪೀಠವು ಈ ಅಧ್ಯಯನಗಳನ್ನು ಸಂಗ್ರಹಿಸಬೇಕು ಇದೆಲ್ಲ ಡಿಜಿಟಲೈಸೇಷನ್ ಆಗಬೇಕು. ಬುಡಕಟ್ಟಿನವರ ಜ್ಞಾನವನ್ನು ಪೀಠವು ದಾಖಲಿಸಬೇಕು. ಆಯಾ ಧರ್ಮದವರೆ ಆ ಧರ್ಮದ ಕುರಿತು ಮಾತನಾಡಬೇಕು ಎನ್ನುವ ದುರಂತವನ್ನು ತಪ್ಪಿಸಬೇಕು ಎಂದರು. ಇಡೀ ರಾಜ್ಯ ಕನ್ನಡ ನೆಲವನ್ನು ಹೊಸ ರೀತಿಯಲ್ಲಿ ವಿಚಾರ ಮಾಡುವ ಒತ್ತಡವನ್ನು ಹಾವನೂರ ವರದಿಯು ಕರ್ನಾಟಕದಲ್ಲಿ ತಂದಿತು ಎಂದು ತಮ್ಮ ಆಶಯ ನುಡಿಯ ಮುಕ್ತಾಯದಲ್ಲಿ ತಿಳಿಸಿದರು.
ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಕೆ.ಆರ್.ರಮೇಶ ಕುಮಾರ್ ಅವರು ಉದ್ಘಾಟನೆಯ ಮಾತಗಳನ್ನಾಡುತ್ತ ಹಾವನೂರ ಮತ್ತು ದೇವರಾಜ ಅರಸು ಇಬ್ಬರು ಸಂಕೇತಗಳು. ಯಾವ ಅಸಮಾಧಾನ ಆಕ್ರೋಶಗಳು ತುಂಬಿ ಹೊರಗೆ ಬರಲು ತವಕಿಸುತ್ತಿದ್ದವು ಅವು ವರದಿಯ ರೂಪದಲ್ಲಿ ಹೊರಬಂದವು. ಭದ್ರ ಬುನಾದಿಯ ಮೇಲೆ ಇದ್ದ ಅಸಮಾನತೆಯ ಗೋಡೆಗಳನ್ನು ಕೆಡವಿ ಕಟ್ಟುವ ಕೆಲಸಕ್ಕೆ ಹಾವನೂರ ಕೈ ಹಾಕುತ್ತಾರೆ. ಕಾಂಗ್ರೆಸ್ ವಿಭಜನೆ ಆದಾಗಲೇ ದೇವರಾಜು ಅರಸು ಮತ್ತು ಹಾವನೂರರ ಸಂಬಂಧ ಆರಂಭವಾಗಿತ್ತು ಎಂದು ತಿಳಿಸಿದರು.
ನೊಂದವರಿಗೆ ಶೋಷಿತರಿಗೆ ಸಂಘಟನೆ ಮಾಡುವುದು ಬಹಳ ಕಷ್ಟದ ಕೆಲಸ. ಪ್ರಜ್ಞೆ ಸ್ವಾಭಿಮಾನ ಇದ್ದವರಿಗೆ ಅಂಬೇಡ್ಕರ್ ಮತ್ತು ಹಾವನೂರ ಅವರನ್ನು ಮರೆಯಲು ಆಗುವುದಿಲ್ಲ. ಈ ವರದಿಯು ಹಿಂದುಳಿದವರಿಗೆ ಮಾತ್ರ ಅಲ್ಲ ಬೇರೆ ವರ್ಗದವರಿಗೂ ಸಹಾಯ ಮಾಡಿದೆ. ವರದಿಯ ನಂತರ ಹಿಂದುಳಿದವರು ಎಂದು ಹೇಳಿಕೊಳ್ಳುವವರ ಹೊಸಯುಗ ಆರಂಭವಾಯಿತು. ಜಾತಿ ಸಂಘಟನೆ ಮಾಡಿ ಸಾಧಕರನ್ನು ಜಾತಿಯ ಜೈಲಿನೊಳಗೆ ಹಾಕಿ ಬಂಧಿಸಿದ್ದೇವೆ ಎಂದು ಬಸವೇಶ್ವರ ಅಂಬೇಡ್ಕರ, ಟಿಪ್ಪು, ಹಾವನೂರ, ವಾಲ್ಮೀಕಿ ಮೊದಲಾದವರನ್ನು ಉದಾಹರಿಸಿದರು.
ವರದಿಗಳನ್ನು ವಿರೋಧಿಸಿದವರು ಯಾರೂ ಸರಿಯಾಗಿ ವರದಿಗಳನ್ನು ಓದಿರಲಿಲ್ಲ. ಅರಸು ಹಾವನೂರ ಅವರ ಶ್ರಮ ಶಾಸನಬದ್ಧವಾಗಿ ಅನುಷ್ಠಾನ ಆಗುತ್ತಿದೆ. ಆದರೆ ಮಾನಸಿಕವಾಗಿ ಪರಿವರ್ತನೆ ತರುವಲ್ಲಿ ಯಶಸ್ವಿಯಾಗಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.
ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಎಲ್.ಜಿ. ಹಾವನೂರ ಅವರ ಎಲ್ಲ ವರದಿಗಳನ್ನು ಕನ್ನಡ ವಿಶ್ವವಿದ್ಯಾಲಯ ಪ್ರಕಟಮಾಡುತ್ತದೆ ಎಂದು ವೇದಿಕೆಯಲ್ಲಿ ಹೇಳಿದರು. ಕನ್ನಡ ವಿಶ್ವವಿದ್ಯಾಲಯದ ಎಲ್ಲ ಕಾರ್ಯಕ್ರಮಗಳು ವಿದ್ಯಾರ್ಥಿ ಕೇಂದ್ರಿಕೃತವಾಗಿರುತ್ತವೆ. ನೋವು ಇಲ್ಲದ ಕನಸುಗಳು, ಇಲ್ಲದವರಿಗೆ ಬದುಕಿನ ಕನಸು ಕಾಣಲು ಹಾವನೂರ ಅವರ ಅಗತ್ಯ ಇದೆ. ಏಕೆಂದರೆ ವಿದ್ಯಾರ್ಥಿಗಳಿಗೆ ಚರಿತ್ರೆಯ ನೋವುಗಳು ತಾಕುತ್ತಿಲ್ಲ. ಕಾಲ ಬರೆಯುವ ಚರಿತ್ರೆಗೂ ವ್ಯಕ್ತಿಗಳು ಬರೆಯುವ ಚರಿತ್ರೆಗೂ ವ್ಯತ್ಯಾಸವಿದೆ. ಕಾಲಕ್ಕೆ ಪೂರ್ವಗ್ರಹಗಳಿಲ್ಲ. ಇದರ ಜೊತೆ ಹಾವನೂರ ಅವರು ಯಾವಾಗಲೂ ಇರುತ್ತಾರೆ. ವ್ಯಕ್ತಿಗಳು ಬರೆಯುವ ಚರಿತ್ರೆಗೆ ಪೂರ್ವಗ್ರಹಗಳು ಇರುತ್ತವೆ. ಇಂದು ವ್ಯಕ್ತಿಯನ್ನು ಜಾತಿ ಸಂಕೇತದಲ್ಲಿ ನೋಡಲಾಗುತ್ತದೆ. ಕನ್ನಡ ವಿಶ್ವವಿದ್ಯಾಲಯದ ಎಲ್ಲ ಪೀಠಗಳಿಗೆ ಬೇರೆ ಬೇರೆ ಸಮುದಾಯದವರನ್ನು ಸಂಚಾಲಕರನ್ನಾಗಿ ಮಾಡಿ ಜಾತಿಯ ವ್ಯವಸ್ಥೆಯಲ್ಲಿ ಸಣ್ಣ ಬಿರುಕು ತರಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದರು.
ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಪೀಠದ ಸಂಚಾಲಕರಾದ ಡಾ.ವೀರೇಶ ಬಡಿಗೇರ ಅವರು ಪೀಠದ ಕಾರ್ಯಕ್ರಮದ ಸ್ವರೂಪ ಮತ್ತು ವಿಚಾರಸಂಕಿರಣದ ಪ್ರಸ್ತುತತೆಯನ್ನು ಪ್ರಾಸ್ತಾವಿಕದಲ್ಲಿ ತಿಳಿಸಿದರು. ಕು. ಗೀತಾ ಬಡಿಗೇರ ನಿರೂಪಿಸಿದರು. ಡಾ.ತಾರಿಹಳ್ಳಿ ಹನುಮಂತಪ್ಪ ಅವರು ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಜಯನಗರ ಕ್ಷೇತ್ರದ ಶಾಸಕರಾದ ಶ್ರೀ ಬಿ.ಎಸ್. ಆನಂದಸಿಂಗ್ ಅವರು, ಸಿಂಡಿಕೇಟ್ ಸದಸ್ಯರಾದ ಅಲ್ಲಮಪ್ರಭು ಬೆಟ್ಟದೂರ ಅವರು, ಡೀನರು, ಅಧ್ಯಾಪಕರು, ವಿದ್ಯಾರ್ಥಿಗಳು, ನಾಗರೀಕರು ಉಪಸ್ಥಿತರಿದ್ದರು. ಎಲ್.ಜಿ.ಹಾವನೂರ ಅವರ ಭಾವಚಿತ್ರಕ್ಕೆ ಸನ್ಮಾನ್ಯ ಸಚಿವರು ಮತ್ತು ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಎಲ್.ಜಿ. ಹಾವನೂರ ವ್ಯಕ್ತಿ ಮತ್ತು ವ್ಯಕ್ತಿತ್ವ ಕುರಿತು ಶ್ರೀಮತಿ ರತ್ನ ಹಾವನೂರ, ಹಾವನೂರ ವರದಿ ಮತ್ತು ಅಂದಿನ ಕರ್ನಾಟಕದ ರಾಜಕಾರಣ ಕುರಿತು ಡಾ. ರಾಜಪ್ಪ ದಳವಾಯಿ, ಹಾವನೂರ ವರದಿ ಮತ್ತು ಸಾಮಾಜಿಕ ಆರ್ಥಿಕ ನೆಲೆಗಳು ಕುರಿತು ಡಾ.ಐ. ಹೊನ್ನೂರ ಅಲಿ, ಹಾವನೂರ ವರದಿ ಸಾಂಸ್ಕೃತಿಕ ನೆಲೆಗಳನ್ನು ಕುರಿತು ಪ್ರೊ. ಲಿಂಗರಾಜ ಕಮ್ಮಾರ ಅವರು ಗೋಷ್ಠಿಗಳಲ್ಲಿ ಪ್ರಬಂಧಗಳನ್ನು ಮಂಡಿಸಿದರು.