ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವದ ವ್ಯಾಖ್ಯಾನದ ಅವಧಿ(ವ್ಯಾಲಿಡಿಟಿ) ಮುಗಿದಿದೆ. ಈ ವ್ಯಾಖ್ಯಾನವು ಭಾರತದ ಯಾವ ವಸ್ತು ಸ್ಥಿತಿಗೂ ಕೂದಲೆಳೆಯಷ್ಟು ಅನ್ವಯವಾಗುವುದಿಲ್ಲ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಬಿ.ಎಂ.ಪುಟ್ಟಯ್ಯ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ಘಟಕವು ೬೯ನೇ ಗಣರಾಜ್ಯೋತ್ಸವದ ಆಚರಣೆಯ ಪ್ರಯುಕ್ತ ೨೬ನೇ ಜನವರಿ ೨೦೧೮ರಂದು ಭುವನವಿಜಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಜಾಪ್ರಭುತ್ವದ ಸಮಕಾಲೀನ ಬಿಕ್ಕಟ್ಟುಗಳು ಕುರಿತು ವಿಶೇಷ ಉಪನ್ಯಾಸ ಮಂಡಿಸುತ್ತಿದ್ದರು.
ಭಾರತದಲ್ಲಿ ಪ್ರಜೆಗಳಿಲ್ಲ; ಇವರು ಜಾತಿ ಉಪಜಾತಿ ಕುಲಗಳಿಂದ ಆವರಿಸಿಕೊಂಡಿದ್ದಾರೆ. ಈ ಹಿಂದೆ ಆದಿವಾಸಿಗಳು ಭೂಮಾಲಿಕರ ಊಳಿಗಮಾನ್ಯದ ಬಂಡವಾಳಶಾಹಿಗಳ ಹಾಗೂ ಪುರುಷಾಧಿಪತ್ಯದ ವಿರುದ್ಧ ನಡೆಸಿರುವ ವೀರೋಚಿತ ಹೋರಾಟಗಳು, ಅಲ್ಲದೆ ವರ್ಣ ಜಾತಿ ವಿರುದ್ಧದ ಹೋರಾಟಗಳೆಲ್ಲ ಪ್ರಜಾಪ್ರಭುತ್ವಕ್ಕಾಗಿ. ಪ್ರಜಾಪ್ರಭುತ್ವವು ಸಮುದಾಯ, ವ್ಯಕ್ತಿಗತ, ಹೆಣ್ಣು ಗಂಡು ಸಂಬಂಧದ ನೆಲೆಯಲ್ಲಿ, ಸಾಮಾಜಿಕ ಆರ್ಥಿಕ, ರಾಜಕೀಯ, ಧಾರ್ಮಿಕ ಹಾಗೂ ಭಾಷಿಕ ನೆಲೆಯಲ್ಲಿ ಜಾರಿಗೊಂಡಿದ್ದರೆ ಮಾತ್ರ ನಿಜವಾದ ಪ್ರಜಾಪ್ರಭುತ್ವ ಆಗುತ್ತದೆ. ಮನು ಇಲ್ಲದಿದ್ದರೂ ಆತನ ಮೌಲ್ಯಗಳು ನಮ್ಮನ್ನು ಪ್ರಭಾವಿಸುವ ಮೂಲಕ ಬಿಕ್ಕಟ್ಟುಗಳು ಉಂಟಾಗುತ್ತಿವೆ. ಬೀದಿ ನಾಯಿಗಳು ಎಂಬ ವ್ಯಾಖ್ಯಾನವೇ ಪ್ರಜಾಪ್ರಭುತ್ವದ ಮೂಲಭೂತವಾದ ಬಿಕ್ಕಟ್ಟು ಎಂದು ಹೇಳಿದರು.
ಮಹಿಳೆಯರ ಮೇಲಿನ ಅತ್ಯಾಚಾರ, ದಬ್ಬಾಳಿಕೆಗಳು ಅಭಿವೃದ್ಧಿಯಾಗಿವೆ. ಅಭಿವೃದ್ಧಿ ತೆರೆದಿಡುವ ಮುಚ್ಚಿಡುವ ವೈರುಧ್ಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಎಲ್ಲ ಬಗೆಯ ಸಂಪತ್ತು ಅಧಿಕಾರ ಆಸ್ತಿ ಆರ್ಥಿಕತೆಯ ಕೇಂದ್ರೀಕರಣ ಮತ್ತೊಂದು ರೀತಿಯ ಬಿಕ್ಕಟ್ಟು ಆಗಿದೆ. ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ನಾಶ ಮಾಡಿ ಕೇಂದ್ರೀಕರಣಗೊಳಿಸಲಾಗುತ್ತಿದೆ. ಯುಜಿಸಿಯ ಅನುದಾನ, ಸಿಗುವ ಸೌಲಭ್ಯಗಳಿಗೆ ಕಡಿವಾಣ ಹಾಕುತ್ತಿರುವುದು ಸ್ವಾತಂತ್ರ್ಯದ ಹರಣವಾಗಿದೆ. ಎಲ್ಲರು ಸೇರಿ ದೇಶ ಕಟ್ಟಬೇಕು ಎಂಬುದು ಮೀಸಲಾತಿಯ ಕಲ್ಪನೆ ಎಂದು ಮೀಸಲಾತಿ ಹಾಗೂ ಕಲಂ ೩೭೧(ಜೆ) ಕುರಿತು ಹೊಸ ಹೊಳಹು ನೀಡಿದರು. ಸಮಾಜದ ಎಲ್ಲರೂ ಮುಖ್ಯವಾಹಿನಿಗೆ ಬರಬೇಕು. ವಿಜ್ಞಾನ ವೈದ್ಯಕೀಯ ಕ್ಷೇತ್ರಗಳನ್ನು ಸೇರಬೇಕು. ಇದು ನಿಜವಾದ ದೇಶ ಕಟ್ಟುವ ಕೆಲಸ. ಇಲ್ಲಿ ತಾತ್ವಿಕ ಬಿಕ್ಕಟ್ಟು ಇದೆ. ಪ್ರಜಾಪ್ರಭುತ್ವ ಸಾಮಾಜೀಕರಣಗೊಳ್ಳಲಿಲ್ಲ ಎಂದು ಪುಟ್ಟಯ್ಯ ಅವರು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಇಂದು ಬುದ್ಧಿಜೀವಿಗಳ ಮೌನ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಆತಂಕವಾಗಿದೆ. ಜಾಗತೀಕರಣ, ಖಾಸಗೀಕರಣಗಳ ಆಶಯ ಮಾರುಕಟ್ಟೆಯ ಸೃಷ್ಟಿ. ಭಾರತ ಮಾರುಕಟ್ಟೆ ಆಗುತ್ತದೆ ಇದು ಜಾಗತಿಕ ಬಿಕ್ಕಟ್ಟು. ಇದರೊಂದಿಗೆ ಏಕತೆಯ ಬಿಕ್ಕಟ್ಟನ್ನು, ಭಾಷಾ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಉದ್ಯಮಪತಿಗಳು ಸೃಷ್ಟಿಸುವ ಆರ್ಥಿಕ ಆಮಿಷಗಳಿಗೆ ನಾವು ಬಲಿಯಾಗುತ್ತಿದ್ದೇವೆ ಎಂದು ಜಿಯೋ ಸಿಮ್ ಉದಾಹರಿಸಿದರು. ಮಾರುಕಟ್ಟೆ ಸಂಸ್ಕೃತಿ ಜಗತ್ತನ್ನು ಯಾಮಾರಿಸುತ್ತಿರುವಾಗ ಸಮಾನತೆ, ಸಬಲೀಕರಣವನ್ನು ನಿಜವಾದ ಅರ್ಥದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳು ಸಂವಿಧಾನ ವಿರೋಧಿಯಾಗಿ ನೀಡುವ ಹೇಳಿಕೆಗಳು, ಮರ್ಯಾದೆ ಹತ್ಯೆಗಳಂತಹ ಬಿಕ್ಕಟ್ಟುಗಳು ಸಹಿಷ್ಣತೆಯ ಬಿಕ್ಕಟ್ಟುಗಳಂತಹ ಒಳಬಿಕ್ಕಟ್ಟು ಮತ್ತು ಹೊರಬಿಕ್ಕಟ್ಟುಗಳು ದೇಶವನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದೆ. ‘ಮನು’ ಅನ್ನು ಮನಸ್ಸಿನಿಂದ ನಾವೆಲ್ಲ ಕಿತ್ತುಹಾಕಬೇಕು. ಸಾಮಾಜಿಕ, ಸಾಂಸ್ಕೃತಿಕ ಅಪವ್ಯಾಖ್ಯಾನಗಳಿಗೆ ಉತ್ತರಿಸಲು ನಾವು ಸಿದ್ಧರಾಗಬೇಕು. ಮದವೇರಿದ ಆನೆಯನ್ನು ನಿಯಂತ್ರಿಸಲು ಸಂವಿಧಾನಬದ್ಧವಾದ ಮತ ಎಂಬ ಅಸ್ತ್ರವನ್ನು ಆನೆಯ ಪರವಾಗಿ ಬಳಸಬೇಕೆ ಅಥವಾ ನಾಯಿ ಪರವಾಗಿ ಬಳಸಬೇಕೆ ಎಂದು ವಿದ್ಯಾರ್ಥಿಗಳು ಯೋಚಿಸಬೇಕಾಗಿದೆ. ಕಾಲಕಾಲಕ್ಕೆ ಪ್ರಜಾಪ್ರಭುತ್ವಕ್ಕೆ ಎದುರಾಗುವ ಬಿಕ್ಕಟ್ಟುಗಳನ್ನು ಗ್ರಹಿಸಿ ಪರಿಹಾರ ಹುಡುಕುವ ದಿನ ಗಣರಾಜ್ಯದ ದಿನವಾಗಿದೆ ಎಂದು ನೆರೆದಿದ್ದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಯುಜಿಸಿ ಕೋರ್ಸ್ವರ್ಕ್ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಗಣರಾಜ್ಯದ ಸಂವಿಧಾನದ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶಿವಾನಂದ ವಿರಕ್ತಮಠ ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಡಾ. ವೀರೇಶ ಜಾನೇಕಲ್ ನಿರೂಪಿಸಿ, ವಂದಿಸಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಉಪನ್ಯಾಸಕ್ಕೂ ಮೊದಲು ಮಾನ್ಯಕುಲಪತಿಯವರು ೬೯ನೇ ಗಣರಾಜ್ಯದ ಅಂಗವಾಗಿ ದ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸಲ್ಲಿಸಿದರು. ವಿಶ್ವವಿದ್ಯಾಲಯದ ಸಮಸ್ತರು ಪಾಲ್ಗೊಂಡಿದ್ದರು.