ಕನ್ನಡ ವಿಶ್ವವಿದ್ಯಾಲಯ, ಹಂಪಿ ಜೈನ ಸಾಹಿತ್ಯ ಮತ್ತು ತತ್ವ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಅಭೇರಾಜ ಬಲ್ಡೋಟ ಜೈನ ಅಧ್ಯಯನ ಪೀಠ

 
ಜೈನ ಸಾಹಿತ್ಯದಲ್ಲಿ ಪರಿವರ್ತನೆಗೆ ದಾರಿಯಿದೆ : ಮಾನ್ಯ ಕುಲಪತಿಗಳು – ಡಾ.ಸ.ಚಿ.ರಮೇಶ

This slideshow requires JavaScript.

 
ಜೈನ ಸಾಹಿತ್ಯವು ದೇಶದ ಇತರ ಎಲ್ಲಾ ಸಾಹಿತ್ಯಗಳಿಗಿಂತ ಭಿನ್ನವಾದುದು. ಜೈನ ಸಾಹಿತ್ಯದಲ್ಲಿ ಹಿಂಸೆಗೆ ಅವಕಾಶವಿಲ್ಲ, ಬದಲಾಗಿ ಮನುಷ್ಯನ ಮನ ಪರಿವರ್ತನೆಗೆ ದಾರಿಯಿದೆ. ಹೀಗಾಗಿ ಚರಿತ್ರೆಯಲ್ಲಿ ಬಹಳಷ್ಟು ವ್ಯಕ್ತಿಗಳು ಮನ ಪರಿವರ್ತನೆಗೊಂಡಿರುವುದನ್ನು ಕಾಣಬಹುದು ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಸ.ಚಿ ರಮೇಶ ಅವರು ಹೇಳಿದರು. ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ಅಭೇರಾಜ್ ಬಲ್ಡೋಟ ಜೈನ ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಜೈನ ಸಾಹಿತ್ಯ ಮತ್ತು ತತ್ವ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಲಪತಿಗಳು ಮುಂದುವರೆದು ಮಾತನಾಡುತ್ತ ವರ್ಣ, ಜಾತಿ ಚೌಕಟ್ಟನ್ನು ಮೀರುವಂತಹ ಗುಣ ಜೈನ ಸಾಹಿತ್ಯದಲ್ಲಿದೆ. ಜಗತ್ತಿನಲ್ಲಿ ಉದಯಿಸಿದ ಜೈನ ಧರ್ಮದಲ್ಲಿ ಪ್ರಮುಖವಾಗಿ ಅಹಿಂಸೆ, ಮಾನವೀಯ ಮೌಲ್ಯಗಳು, ಮನುಷ್ಯ-ಮನುಷ್ಯ ನಡುವಿನ ಸಂಬಂಧಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಒಬ್ಬ ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಮಾಡುವ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಮಾನವಿಕ ಮೌಲ್ಯಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳು ಜೈನ ಸಾಹಿತ್ಯದಲ್ಲಿವೆ ಎಂದು ಹೇಳಿದರು. ವರ್ಣ ಶ್ರೇಣೀಕರಣ ಮತ್ತು ಜಾತಿ ಶ್ರೇಣೀಕರಣ ಚೌಕಟ್ಟನ್ನು ಮೀರುವ ಆಶಯವನ್ನು ಜೈನ ಧರ್ಮ ಹೊಂದಿದೆ. ಮಹಾತ್ಮ ಗಾಂಧೀಜಿ ಅವರು ಜೈನ ಧರ್ಮದ ಅಹಿಂಸಾ ತತ್ವದಿಂದ ಪ್ರಭಾವಗೊಂಡಿದ್ದರು. ಪ್ರಾಣಿ-ಪಕ್ಷಿ, ಕ್ರಿಮಿ-ಕೀಟಗಳನ್ನು ಒಟ್ಟಾಗಿ ಇಡೀ ಜೀವಕೋಟಿಯ ಬದಲಾವಣೆಯನ್ನು ಮತ್ತು ಪರಿವರ್ತನೆಯನ್ನು ಜೈನ ಸಾಹಿತ್ಯ ನಮಗೆ ಕೊಟ್ಟಿದೆ. ಆಸ್ತಿ, ಸಂಪತ್ತು, ಅಧಿಕಾರ ಮತ್ತು ದೇಹ ಸುಖ ಎಲ್ಲವನ್ನು ನಿರಾಕರಿಸುವುದು, ನೋವಾಗದಂತೆ ಯಾರಿಗೂ ಅಪಮಾನ, ಅನ್ಯಾಯ ಆಗದಂತೆ ಬದುಕುವುದನ್ನು ಜೈನ ಧರ್ಮ, ಜೈನ ಸಾಹಿತ್ಯ ತಿಳಿಸಿಕೊಡುತ್ತದೆ. ಈ ಹಿನ್ನೆಲೆಯಲ್ಲಿಯೇ ಗಾಂಧೀಜಿಯವರು ಅಹಿಂಸೆಯ ಮೂಲಕ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಎಲ್ಲಾ ಜೀವರಾಶಿಗಳು ಒಂದೇ! ಅವರ ಶ್ರಮ ಮತ್ತು ಸಾಧನೆಯಿಂದ ದೇವರಾಗಬಹುದು ಎಂಬುದನ್ನು ಜೈನ ಪರಂಪರೆಯಲ್ಲಿ ಗುರುತಿಸಬಹುದು. ಕನ್ನಡ ವಿಶ್ವವಿದ್ಯಾಲಯದಲ್ಲಿ ಬಹಳ ವರ್ಷಗಳ ಹಿಂದೆಯೇ ಅಭೇರಾಜ್ ಬಲ್ಡೋಟ ಜೈನ ಅಧ್ಯಯನ ಪೀಠವನ್ನು ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯದಿಂದ ೧೦೦ಕ್ಕೂ ಹೆಚ್ಚು ಜೈನ ಕೃತಿಗಳನ್ನು ಪ್ರಕಟಿಸಲಾಗಿದೆ. ಮುಂದಿನ ದಿನಗಳಲ್ಲಿ ಜೈನ ಸಾಹಿತ್ಯದ ಕುರಿತಂತೆ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಂಬೈ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಡಾ. ಬಿಪಿನ್ ದೋಷಿ ಅವರು ಮಾತನಾಡಿ ಕನ್ನಡ ಭಾಷೆಗೆ ಜೈನ ಸಾಹಿತ್ಯವು ಅಪಾರವಾದ ಕೊಡುಗೆಯನ್ನು ನೀಡಿದೆ. ಜೈನ ಸಾಹಿತ್ಯವು ಅಹಿಂಸೆ, ಸಮತಾಭಾವ, ಅಪರಿಗ್ರಹ ಸೇರಿದಂತೆ ಹಲವಾರುಉತ್ತಮ ಮೌಲ್ಯಗಳನ್ನು ಒಳಗೊಂಡಿದೆ. ದೇಶದಲ್ಲಿ ಇರುವಂತಹ ಸೀಮಿತ ಸಂಪನ್ಮೂಲಗಳನ್ನು ತುಂಬಾ ಎಚ್ಚರಿಕೆಯಿಂದ ಬಳಸುವಂತಹ ಅಂಶಗಳು ಈ ಸಾಹಿತ್ಯದಲ್ಲಿ ಕಾಣಬಹುದು ಎಂದರು.

ಗುಜರಾತಿ ಸಾಹಿತಿ ಪ್ರೊ. ಸೇಜಲ್ ಷಾ ಅವರು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ಕನ್ನಡ ಸಾಹಿತ್ಯದಲ್ಲಿ ಜೈನ ಸಾಹಿತ್ಯಕ್ಕೆ ವಿಶೇಷವಾದ ಮಹತ್ವವಿದೆ. ಕನ್ನಡದಲ್ಲಿ ಜೈನ ಪರಂಪರೆಗೆ ಸಂಬಂಧಪಟ್ಟಂತೆ ಸಾಕಷ್ಟು ವಿಚಾರಗಳು ಕನ್ನಡ ಭಾಷೆಯಲ್ಲಿ ಪ್ರಕಟವಾಗಿವೆ. ಪೊನ್ನನ ಶಾಂತಿನಾಥ ಪುರಾಣ, ರನ್ನನ ಅಜಿತನಾಥ ಪುರಾಣವನ್ನು ಪ್ರಸ್ತಾಪಿಸಿದರು. ಕೃತಕ ಬುದ್ಧಿಮತ್ತೆಯ ರೋಬೋಟ್‌ಗಳ ಸಂದರ್ಭದಲ್ಲಿ ಜೈನ ಸಾಹಿತ್ಯವು ಪ್ರೀತಿ, ವಿಶ್ವಾಸ, ಕರುಣೆಯಂತಹ ಹಲವಾರು ಅಂಶಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಹೇಳಿದರು.
ಹೊಸಪೇಟೆಯ ಎಂ.ಎಸ್.ಪಿಎಲ್. ಸಮೂಹ ಸಂಸ್ಥೆಗಳ ಸಿ.ಎಂ.ಡಿ. ಶ್ರೀ ನರೇಂದ್ರ ಕುಮಾರ್ ಬಲ್ಡೋಟ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವಲ್ಲಿ ಜೈನ ಸಾಹಿತ್ಯದ ಕೊಡುಗೆ ಅಪಾರ ಎಂದರು. ಜೈನ ಸಾಹಿತ್ಯವು ಶಾಂತಿ, ಮಾನವೀಯತೆಗೆ ಪ್ರಾಮುಖ್ಯತೆ ನೀಡಿದೆ. ವಿಶ್ವವಿದ್ಯಾಲಯದಲ್ಲಿ ಜೈನ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಲು ಕುಲಪತಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗದ ಡೀನರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಸ್ವಾಗತಿಸಿದರು. ಅಭೇರಾಜ್ ಬಲ್ಡೋಟ ಜೈನ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಲ್. ಶ್ರೀನಿವಾಸ ಅವರು ಪ್ರಾಸ್ತಾವಿಕ ನುಡಿಗಳಾನ್ನಾಡಿದರು. ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಜನಾರ್ಧನ ಅವರು ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್.ಪಿ.ಎಲ್.ನ ಶ್ರೀ ನಾಗರಾಜ್ ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s