ಕನ್ನಡ ವಿಶ್ವವಿದ್ಯಾಲಯ, ಹಂಪಿ
ಯೋಗ ಅಧ್ಯಯನ ಕೇಂದ್ರ
ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂಗ್ಲೀಷ್ ಮೆಡಿಸಿನ್‌ನಿಂದ ವಾಸಿಯಾಗದ ಅನೇಕ ಸಮಸ್ಯೆಗಳು ಯೋಗದಿಂದ ಗುಣಮುಖವಾಗುತ್ತವೆ. ಆರೋಗ್ಯವನ್ನು ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಾಣಬಹುದು, ಉತ್ತಮವಾದ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಯೋಗದ ಮಹತ್ವ ಎಷ್ಟಿದೆ ಎಂದು ನಾವು ಅರಿತುಕೊಳ್ಳಬೇಕಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ದಿನಾಂಕ ೩ನೇ, ಸೆಪ್ಟೆಂಬರ್ ೨೦೧೯ರಂದು ಆಯೋಜಿಸಿದ್ದ ಯೋಗ ಅಧ್ಯಯನಕೇಂದ್ರದ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್‌ಕೋರ್ಸ್ ತರಗತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ನಮ್ಮ ಪೂರ್ವಿಕರು ಸದೃಢ ಆರೋಗ್ಯ ಹಾಗೂ ದೀರ್ಘಾಯಷ್ಯದಿಂದ ಜೀವನ ನಡೆಸಲಿಕ್ಕೆ ಪ್ರಮುಖವಾದ ಕಾರಣ ಅವರು ಪ್ರತಿನಿತ್ಯ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಅವರು ದಿನನಿತ್ಯ ಚೆನ್ನಾಗಿ ಊಟ, ಕೆಲಸ ಹಾಗೂ ನಿದ್ದೆ ಮಾಡುತ್ತಿದ್ದರಿಂದ ಅವರಿಗೆ ಉತ್ತಮವಾದ ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯವಾಗುತ್ತಿತ್ತು ಎಂದು ನುಡಿದರು.
ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಜೀವನಕ್ಕೆ ಒಗ್ಗಿಕೊಂಡು ನಾವು ನಮ್ಮ ಆರೋಗ್ಯದ ಕಡೆಗೆ ಗಮನ ಕೊಡದೆ, ಅನೇಕ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಂತಹ ಸಮಸ್ಯೆಗಳನ್ನು ನಾವು ಯೋಗ ತರಬೇತಿಯಿಂದ ಮಾತ್ರ ಸರಿಪಡಿಸಲು ಸಾಧ್ಯ ಎಂದು ಹೇಳಿದರು. ಮುಖ್ಯವಾಗಿ ನಮ್ಮ ಏಕಾಗ್ರತೆ ಮಾರ್ಗಧ್ಯಾನ, ಧ್ಯಾನದ ಮಾರ್ಗಯೋಗ, ಯೋಗದ ಅನೇಕ ಲಾಭಗಳನ್ನು ನಾವು ಪಡೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಡಿಪ್ಲೊಮಾ ಕೋರ್ಸುಗಳನ್ನು ಸಾಮಾನ್ಯ ಎಂದು ಭಾವಿಸದೆ, ಗಂಭೀರವಾಗಿ ಪರಿಗಣಿಸಬೇಕು. ಯೋಗದ ಮಹತ್ವ ಹಾಗೂ ಜ್ಞಾನವನ್ನು ಪಡೆದುಕೊಂಡು, ನಮ್ಮ ಜೀವನದಲ್ಲಿ ಅನೇಕ ರೀತಿಯ ಯಶಸ್ಸು ಕಾಣಲು ಸಾಧ್ಯ ಎಂದು ಸಲಹೆ ನೀಡಿದರು. ಇನ್ನು ಮುಂದಿನ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಯೋಗತೆರಪಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಡಾ.ಎ.ಸುಬ್ಬಣ್ಣರೈ, ಪತಂಜಲಿ ಯೋಗ ಸಮಿತಿಯ ರಾಜ್ಯ ಸಂಚಾಲಕರಾದ ಬಾಲಚಂದ್ರಶರ್ಮ, ಯೋಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಎಫ್.ಟಿ ಹಳ್ಳಿಕೇರಿ, ಚರಿತ್ರೆ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಚಿನ್ನಸ್ವಾಮಿ ಸೋಸಲೆ, ಪ್ರಾಧ್ಯಾಪಕರಾದ ಡಾ.ಮಾಧವ ಪೆರಾಜೆ, ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರ ವೈದ್ಯರಾದ ಸಂಪತ್‌ಕುಮಾರ್ ತಗ್ಗಿ, ವಿವಿಯ ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.