ಕನಕದಾಸರ ಚಿಂತನೆ ಮತ್ತು ಬದುಕು ಒಂದೆ : ಡಾ.ಸ.ಚಿ.ರಮೇಶ, ಮಾನ್ಯ ಕುಲಪತಿಯವರು
ಜಯಂತಿಗಳು ಅರ್ಥಪೂರ್ಣವಾಗಬೇಕಾದರೆ ಇಂಥಹ ಮಹನಿಯರ ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಇಂತಹ ಆಚರಣೆಗಳಿಗೆ ಅರ್ಥಬರುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಅಭಿಪ್ರಾಯಪಟ್ಟರು.
ಹಾಲುಮತ ಅಧ್ಯಯನ ಪೀಠದ ವತಿಯಿಂದ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ಕನಕದಾಸರ ಕೀರ್ತನೆಗಳು ಮತ್ತು ಸಮಕಾಲೀನತೆ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕನಕದಾಸ ವರ್ಣ, ಜಾತಿ, ಭೇದ ಮೀರಿರುವ ಮಹಾನ್ ಚಿಂತಕ. ಕನಕದಾಸರ ಬದುಕು ಮತ್ತು ಚಿಂತನೆ ಎರಡು ಬೇರೆ ಆಗಿರಲಿಲ್ಲ. ಅವರು ಚಿಂತಿಸಿದಂತೆ ಬದುಕಿದರು. ಕನಕದಾಸರು ಸಾಹಿತಿ, ತತ್ವಜ್ಞಾನಿ, ದಾರ್ಶನಿಕರು ಮಾತ್ರವಾಗದೆ ಅವರೊಬ್ಬ ವಿಜ್ಞಾನಿಯೂ ಆಗಿದ್ದರು. ರಾಮಧಾನ್ಯ ಚರಿತೆಯಲ್ಲಿ ಬರುವ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಅವರ ವೈಜ್ಞಾನಿಕತೆಯನ್ನು ಗುರುತಿಸಬಹುದು. ಆಹಾರವೇ ಹೇಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ಆ ಕಾಲದಲ್ಲಿಯೇ ತಿಳಿಸಿದ್ದರು. ಆಹಾರ ಅದೊಂದು ಪರಿಸರಕ್ಕೆ ಸಂಬಂಧಪಟ್ಟ ಪ್ರಾಕೃತಿಕವಾದದ್ದು. ಕಾಲಚಕ್ರ ಇವತ್ತು ರಾಗಿಯನ್ನು ನಾವು ಹುಡುಕಿಕೊಂಡು ತಿನ್ನುವ ಸಮಯ ಬಂದಿದೆ. ಕಾಲ ಎಲ್ಲವನ್ನು ನಿರ್ಣಯಿಸುತ್ತದೆ ಎಂದು ಹೇಳಿದರು. ಮುಂದುವರೆದು ಮಾನ್ಯ ಕುಲಪತಿಯವರು ಮಾತನಾಡುತ್ತಾ ಸಾಹಿತ್ಯ ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು ಕನಕನನ್ನು ಸ್ಥಳೀಯ ಸಾಹಿತ್ಯ ಮತ್ತು ಸ್ಥಳೀಯ ಸಂಸ್ಕೃತಿಯ ಪ್ರತಿನಿಧಿ ಎಂಬಂತೆ ವಿವರಿಸಿದರು. ಸಂಗೀತದ ತಿಳುವಳಿಕೆಯವರು ಕನಕನನ್ನು ಸಂಗೀತಗಾರ ಎಂದರು. ಭಕ್ತಿ ಸಾಹಿತ್ಯದ ಚಿಂತಕರು ಕನಕನನ್ನು ಸಂತನೆಂದು ಪರಿಗಣಿಸಿದರು. ಭಾಷಾಶಾಸ್ತ್ರಜ್ಞರು ಕನಕನ ಭಾಷಾ ಕೌಶಲ್ಯವನ್ನು ದಲಿತ ಬಂಡಾಯದ ಸಾಹಿತ್ಯ ಚಿಂತಕರು ಕನಕನನ್ನು ಕೆಳಜಾತಿ, ಕೆಳವರ್ಗಗಳ ಸಾಂಸ್ಕೃತಿಕ ಪ್ರತಿನಿಧಿ ಎಂದು ವಿವರಿಸಿದರು. ಯಜಮಾನ ಸಂಸ್ಕೃತಿಯ ವಿರೋಧವನ್ನು ಇವರು ಕನಕನ ಮೂಲಕ ಕಟ್ಟಿಕೊಂಡರು. ಜನ ಸಂಸ್ಕೃತಿಯ ನೇತಾರ ಎಂದು ತಿಳಿದರು. ಹೋರಾಟಗಾರರು ಕನಕನನ್ನು ಜಾತಿ ಮತ್ತು ವರ್ಗ ಹೋರಾಟದ ನಾಯಕನಂತೆ ವಿವರಿಸಿದರು. ಬಹುಶಃ ನಮ್ಮ ಕವಿಗಳ ದೊಡ್ಡ ಪರಂಪರೆಯಲ್ಲಿ ಬಸವಣ್ಣನ ನಂತರ ನಮ್ಮ ನಾಡನ್ನು ಹಲವು ಮುಖಗಳಲ್ಲಿ ಕನಕದಾಸ ಬಹಳ ದಟ್ಟವಾಗಿ ಆವರಿಸಿದ್ದಾನೆ. ಕನಕದಾಸರು ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದ್ದಾರೆ, ಇಂದಿಗೆ ಸುಮಾರು ೬೦ ವರ್ಷಗಳ ಹಿಂದೆಯೇ ಕನ್ನಡ ಸಿನಿಮ ರಂಗ ಕನಕನನ್ನು ಚಿತ್ರ ರಂಗದಲ್ಲಿ ಅನಾವರಣ ಮಾಡಿದೆ ಎಂಬುದು ಕನ್ನಡ ಚಿತ್ರ ರಂಗದ ಹೆಚ್ಚುಗಾರಿಕೆ ಎಂದು ನಾನು ಭಾವಿಸಿದ್ದೇನೆ. ಕನಕದಾಸನ ಕೆಲವು ಕೃತಿಗಳು ಸಂಸ್ಕೃತ, ಹಿಂದಿ, ತೆಲುಗು ಮತ್ತು ಇಂಗ್ಲೀಷ್ ಭಾಷೆಗೆ ಅನುವಾದ ಆಗಿವೆ. ಕನಕದಾಸರು ಕಷ್ಟಗಳನ್ನು ಅಪಮಾನಗಳನ್ನು ಅನುಭವಿಸಿದ್ದರು. ಕನಕನ ಹೊಟ್ಟೆಯೊಳಗೆ ಹಸಿವಿತ್ತು, ಅವನ ಹೃದಯದೊಳಗೆ ಕನಿಕರವಿತ್ತು, ಕನಕದಾಸ ಕನ್ನಡ ಅರಿವಿನ ಹರಿಕಾರ ಎಂದು ಮಾನ್ಯ ಕುಲಪತಿಯವರು ತಿಳಿಸಿದರು.
ಕನಕದಾಸರು ಕನ್ನಡ ಅರಿವಿನ ಹರಿಕಾರನಾಗಿ ಕಾರ್ಯನಿರ್ವಹಿಸಿದರು. ಬಸವಣ್ಣನವರು ಮತ್ತು ಕನಕದಾಸರು ಸಮಾನವಾದ ಮನಸ್ಥಿತಿಯವರು. ಇವರು ತಮ್ಮ ಅನುಭವದಿಂದ ಸಾಹಿತ್ಯ ರಚನೆ ಮಾಡಿದ್ದಾರೆ. ಈ ವಿದ್ವಾಂಸರ ಚಿಂತನೆ ಮತ್ತು ಬದುಕು ಒಂದೇ ಆಗಿತ್ತು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕನಕದಾಸ, ಬಸವಣ್ಣ, ಅಂಬೇಡ್ಕರ್‌ರು ಮಾರ್ಗದರ್ಶಕರಾಗಿರಬೇಕೆಂದು ತಿಳಿಸಿದರು.
ಸಿಂದಗಿಯ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಚನ್ನಪ್ಪಕಟ್ಟಿ ಅವರು ಕನಕದಾಸರ ಕೀರ್ತನೆಗಳು ಮತ್ತು ಸಮಕಾಲೀನತೆ ಎಂಬ ವಿಶೇಷ ಉಪನ್ಯಾಸವನ್ನು ಉದ್ದೇಶಿಸಿ ಮಾತನಾಡುತ್ತ ಕನಕದಾಸರ ಸಾಹಿತ್ಯವನ್ನು ಎರಡು ರೀತಿಯಲ್ಲಿ ಓದಲು ಸಾಧ್ಯ. ಮೊದಲನೆಯದು ಯಾವುದೇ ಪೂರ್ವ ನಿರ್ಧರಿತ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ಓದುವುದು. ಎರಡನೆಯದು ನಿರೀಕ್ಷೆಯನ್ನು ಇಟ್ಟುಕೊಂಡು ಕನಕರ ಕೀರ್ತನೆಗಳನ್ನು ಓದುವುದು. ದಾಸ ಪರಂಪರೆಯಲ್ಲಿ ೨೫೦ ದಾಸರು ಸಿಗುತ್ತಾರೆ. ಅದರಲ್ಲಿ ಕನಕದಾಸರು ಮತ್ತು ಹೆಳವನಕಟ್ಟಿ ಗಿರಿಯಮ್ಮ ವಿಶಿಷ್ಟವಾಗಿ ನಿಲ್ಲುತ್ತಾರೆ. ಕನಕದಾಸರು ದಾಸ ಪರಂಪರೆಯಲ್ಲಿದ್ದುಕೊಂಡೇ ಹೊರಗುಳಿದ ವ್ಯಕ್ತಿ. ಅವರು ಆತ್ಮೋದ್ಧಾರದ ಜೊತೆಗೆ ಜಗತ್ತಿನ ಉದ್ಧಾರಕ್ಕಾಗಿಯೂ ಶ್ರಮಿಸಿದವರು. ಲಿಂಗಾಧಾರಿತ ಶ್ರೇಷ್ಠತೆಯ ವ್ಯಸನವನ್ನು ತಮ್ಮ ಕೀರ್ತನೆಗಳಲ್ಲಿ ಖಂಡಿಸಿದ್ದಾರೆ. ಇಡೀ ವಿಶ್ವದಲ್ಲಿ ಒಬ್ಬರು ಇನ್ನೊಬ್ಬರಿಗೆ ಪೂರಕವಾಗಿ ಬದುಕುವ ಕ್ರಮ ಇದೆ. ಇಲ್ಲಿ ಯಾರೂ ಅನಾಥರಲ್ಲ. ಪರಸ್ಪರ ಸಂಬಂಧ ಇರುವುದನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಇಂದು ಇಡೀ ವ್ಯವಸ್ಥೆಯೇ ಗಳಿಕೆಯ ಹಿಂದೆ ಬಿದ್ದಿದ್ದು, ಗಳಿಸುವ ವ್ಯಾಮೋಹ ತುಂಬಾ ಇದೆ. ಬಂದದ್ದನ್ನು ಹಂಚಿಕೊಂಡು ಬದುಕುವ ಪರಿಯನ್ನು ಕನಕದಾಸರು ತಮಗೆ ದೊರೆತ ನಿಧಿಯನ್ನು ಹಂಚುವ ಮೂಲಕ ಸಾಮಾಜಿಕ ಕಳಕಳಿಯನ್ನು ತೋರಿಸಿದರು ಎಂದು ಹೇಳಿದರು.
ಭಕ್ತಿ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಕನಕದಾಸರ ಕೀರ್ತನೆಗಳು ಜೀವಂತವಾಗಿರುತ್ತವೆ ಹಾಗೂ ಪ್ರಸ್ತುತವಾಗಿರುತ್ತವೆ. ಭಕ್ತಿಯುಗಕ್ಕೆ ದಾಸ ಸಾಹಿತ್ಯದ ಕೊಡುಗೆ ಅಪಾರವಾದುದು. ದಾಸ ಸಾಹಿತ್ಯದಲ್ಲಿನ ಸಾರ್ವತ್ರಿಕತೆ ಮತ್ತು ಸಕಾಲಿಕತೆ ಎನ್ನುವುದು ಅವರವರ ಭಾವಕ್ಕೆ ಬಿಟ್ಟದ್ದು. ದಾಸ್ಯಭಾವ, ಸಖ್ಯಭಾವ, ವಾತ್ಸಲ್ಯಭಾವ, ಮಧುರಭಾವ, ಧನ್ಯತಾಭಾವ ಈ ರೀತಿಯ ಪಂಚ ವಿಧದ ಭಕ್ತಿಯ ಮೂಲಕ ಕನಕದಾಸರ ಕೀರ್ತನೆಗಳು ಪ್ರಸ್ತುತವಾಗಿವೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಅವರು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮವನ್ನು ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಸ್ವಾಗಿತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರಾರ್ಥಿಸಿದರು. ಸಂಶೋಧನಾ ವಿದ್ಯಾರ್ಥಿ ಸಾಗರ ಜಿ.ಸಿ. ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹೊಸಪೇಟೆ ಮತ್ತು ಕಮಲಾಪುರದ ನಾಗರಿಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.