ಹೊರ ರಾಜ್ಯದವರ ಬದಲು ನೆರೆ ರಾಜ್ಯದವರು ಅಂದರೆ ಹೃದಯಕ್ಕೆ ಹತ್ತಿರ : ಡಾ.ಸ.ಚಿ.ರಮೇಶ, ಮಾನ್ಯ ಕುಲಪತಿಯವರು
ಹೊರ ರಾಜ್ಯದವರು ಎಂದರೆ ದೂರವಾಗುತ್ತಾರೆ. ನೆರೆ ರಾಜ್ಯದವರೆಂದರೆ ಹೃದಯಕ್ಕೆ ಹತ್ತಿರವಾಗುತ್ತಾರೆಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಹೇಳಿದರು. ಕನ್ನಡ ಭಾಷೆಯ ಮೇಲಿನ ಕಾಳಜಿ ಮತ್ತು ಪ್ರೀತಿಗೋಸ್ಕರ ಕನ್ನಡ ಕೆಲಸದಲ್ಲಿ ತೊಡಗಿಕೊಂಡಿರುವ ನೆರೆಯ ರಾಜ್ಯಗಳಿಗೆ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಸುಮಾರು ೭ ಲಕ್ಷ ಮೌಲ್ಯದ ಪುಸ್ತಕಗಳನ್ನು ನೆರೆಯ ರಾಜ್ಯಗಳಲ್ಲಿರುವ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಿಗೆ ನೀಡಲಾಗಿದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಂದಿನ ದಿನಗಳಲ್ಲಿ ಈ ನೆರೆ ರಾಜ್ಯಗಳ ವಿಶ್ವವಿದ್ಯಾಲಯಗಳ ಎಲ್ಲ ಕನ್ನಡ ವಿಭಾಗಗಳ ಮುಖ್ಯಸ್ಥರ ಸಭೆಯನ್ನು ಕರೆಯಲಾಗುವುದು. ಆ ಮೂಲಕ ವಿಭಾಗಗಳ ಸಂಬಂಧವನ್ನು ಬೆಳೆಸುವ ಕಾರ್ಯ ಮಾಡುತ್ತದೆ. ಹೊರರಾಜ್ಯದ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿ ನಮ್ಮ ಕನ್ನಡಿಗರೇ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕುಲಪತಿಗಳಾದ ಡಾ. ಸ.ಚಿ.ರಮೇಶ ಅವರು ತಿಳಿಸಿದರು.
ಮದ್ರಾಸ್ ವಿಶ್ವವಿದ್ಯಾಲಯ ವಿದ್ವತ್ ಪರಂಪರೆಯಾಗಿದ್ದು, ತಮಿಳು ಭಾಷಿಕರು ಕನ್ನಡ ಕಲಿತು ಕನ್ನಡ ಭಾಷೆಯನ್ನು ಬೋಧಿಸಲು ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪ್ರಥಮವಾಗಿ ಕನ್ನಡ ಎಂ.ಎ. ಪದವಿ ಪಡೆದ ವಿದ್ಯಾರ್ಥಿಯಾಗಿದ್ದವರು ಕನ್ನಡದ ಖ್ಯಾತ ಸಂಶೋಧಕ, ಭಾಷಾವಿಜ್ಞಾನಿ, ಶಾಸನತಜ್ಞ ಹಾಗೂ ಗ್ರಂಥಸಂಪಾದಕರಾದ ಶ್ರೀ ಆರ್. ನರಸಿಂಹಾಚಾರ್ ಎಂದು ಮದ್ರಾಸ್ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ತಮಿಳ್ ಸೆಲ್ವಿ ತಮ್ಮ ವಿಶೇಷ ಉಪನ್ಯಾಸದಲ್ಲಿ ಹೇಳಿದರು. ಕನ್ನಡ ಹಸ್ತಪ್ರತಿ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನ್ಯ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ಅವರು ಉಪಸ್ಥಿತರಿದ್ದರು. ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್.ಎಸ್.ಅಂಗಡಿ ಅವರು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ.ಎಸ್.ಆರ್.ಚನ್ನವೀರಪ್ಪ, ವಂದನಾರ್ಪಣೆಯನ್ನು ನೆರವೇರಿಸಿದರು. ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.