ಗುರು ಎಂಬುವನು ದೇವರಗಿಂತ ದೊಡ್ಡವನು. ಕೆಲವೊಮ್ಮೆ ದೇವರು ನಮ್ಮನ್ನು ಕೈ ಹಿಡಿಯದಿದ್ದರೂ ಸಹ ಗುರು ಕಲಿಸಿದ ವಿದ್ಯೆ ಮಾತ್ರ ನಮ್ಮನ್ನು ಕೈ ಬಿಡುವುದುದಿಲ್ಲ. ಗುರು ಆದವನು ಸದಾ ವಿದ್ಯಾರ್ಥಿಗಳ ಬೆನ್ನ ಹಿಂದೆ ನಿಂತು ಮಾರ್ಗದರ್ಶನ ಮಾಡುತ್ತಾ ಸಾರ್ಥಕತೆ ಮೆರೆಯುತ್ತಾರೆ. ಆದರೆ ಅಂತಹ ನಿಸ್ವಾರ್ಥ ಸೇವೆ ಸಲ್ಲಿಸುವ ಗುರುಗಳಿಗೆ ವಿದ್ಯಾರ್ಥಿಗಳು ಅವರ ಓದು ಮತ್ತು ಸಾಧನೆಯಿಂದ ಮಾತ್ರ ಕೃತಜ್ಞತೆಗಳನ್ನು ಸಲ್ಲಿಸಲು ಸಾಧ್ಯ. ಅದಕ್ಕಾಗಿ ವಿದ್ಯಾರ್ಥಿಗಳು ಸಾಧನೆ ಹಾದಿಯಲ್ಲಿ ಸಾಗಬೇಕು. ವಿದ್ಯಾರ್ಥಿಗಳು ಕಾಲಹರಣ ಮಾಡದೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಸ. ಚಿ. ರಮೇಶ್ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಎಂ.ಎ.ಪಿಎಚ್.ಡಿ ಕನ್ನಡ ಸಾಹಿತ್ಯ ಸಂಯೋಜಿತ ಪದವಿಗೆ ಪ್ರವೇಶ ಪಡೆದ ೨೦೨೧ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಸಸಿಗೆ ನೀರೆರೆಯವ ಮೂಲಕ ಉದ್ಘಾಟಿಸಿ ಅಧ್ಯಕ್ಷಿಯ ಮಾತುಗಳನ್ನಾಡಿದ ಕುಲಪತಿಗಳಾದ ಡಾ. ಸ. ಚಿ ರಮೇಶ್ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಹೊಸ ಹೊಸ ವಿಭಿನ್ನ ಆಚಾರ, ವಿಚಾರ, ಚಿಂತನೆಗಳಿರುತ್ತವೆ. ಆದರೆ ಅವು ಮುಖ್ಯಭೂಮಿಕೆಗೆ ಬರಬೇಕಾದರೆ ಶಿಕ್ಷಣ ಅನಿವಾರ್ಯ. ಅಂತಹ ಮೌಲ್ಯಯುತ ಶಿಕ್ಷಣವನ್ನು ಬೌದ್ಧಿಕ ಜ್ಞಾನವನ್ನ ವಿಶ್ವವಿದ್ಯಾಲಯ ಪ್ರಾರಂಭದಿಂದಲೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧಾರೆ ಎರೆಯತ್ತಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಬೌದ್ಧಿಕ ಜ್ಞಾನ ಸಂಪತ್ತನ್ನು ಸದುಪಯೋಗಪಡಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು. ಹಿರಿಯ ವಿದ್ಯಾರ್ಥಿಗಳು ಹೊಸ ಕಿರಿಯ ವಿದ್ಯಾರ್ಥಿಗಳ ಸ್ವಾಗತ ಮಾಡಲು ನಡೆಸಿದ ತಯಾರಿ, ಅಲಂಕಾರ, ಅಚ್ಚು ಕಟ್ಟಿನ ನಿರ್ವಹಣೆ ತಮ್ಮ ಬಾಲ್ಯದ ಕಾಲೇಜು ಬದುಕಿನ ನೆನಪುಗಳು ಮರುಕಳಿಸುವಂತಿತ್ತು ಎಂದು ಸಂತಸಪಟ್ಟರು. ಹಾಗೆಯೇ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳು ನಾವು ಹಿಂದೆ ಕಲಿಸಿದ ವಿದ್ಯಾರ್ಥಿಗಳ ವಿದ್ಯಾರ್ಥಿಗಳೇ ಹೆಚ್ಚಾಗಿದ್ದು ಒಂದು ತರಹ ಅಜ್ಜ ತನ್ನ ಮೊಮ್ಮಕ್ಕಳ್ಳನ್ನು ಹೆಗಲ ಮೇಲೆ ಕೂರಿಸಿಕೊಂಡು ಜಗತ್ತು ತೋರಿಸುವ ಹಾಗೇ ನಾವು ಇಂದು ನಮ್ಮ ಹಳೆಯ ಶಿಷ್ಯರ ಶಿಷ್ಯರನ್ನು ಕಲಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇನ್ನು ಕಾರ್ಯಕ್ರಮ ಮುಖ್ಯ ಅತಿಥಿಗಳಾದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ಅವರು ಮಾತನಾಡಿ ಬೇರೆ ಬೇರೆ ವಿಶ್ವವಿದ್ಯಾಲಯಗಳಿಗಿಂತ ನಮ್ಮ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಅಧ್ಯಯನ ಮಾಡಲು ಅನುಕೂಲವಾಗುವಂತ ವಾತಾವರಣ ನಮ್ಮ ವಿಶ್ವವಿದ್ಯಾಲಯದಲ್ಲಿದೆ. ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನವನ್ನೂ ವೃದ್ಧಿಸಲು ಏಳು ನಿಕಾಯದ ಬೋಧಕರಿಂದ ವಸ್ತು ವಿಷಯವನ್ನು, ಬೋಧಿಸಲಾಗುತ್ತದೆ ಇದರಿಂದ ವಿದ್ಯಾರ್ಥಿಗಳು ಸಂಶೋಧನೆ ಹಾದಿಯಲ್ಲಿ ಸಾಗಲು ಅನುಕೂಲವಾಗತ್ತವೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯ ಭಾಷಾ ನಿಕಾಯದ ಡೀನ್‌ಗಳಾದ ಡಾ. ವೀರೇಶ ಬಡಿಗೇರ ಅವರು ಮಾತನಾಡಿ ಕನ್ನಡ ವಿಶ್ವವಿದ್ಯಾಲಯಕ್ಕೆ ಡಾ. ಚಂದ್ರಶೇಖರ್ ಕಂಬಾರ ಅವರು ಸಾಂಸ್ಕೃತಿಕ ಮತ್ತು ಬೌದ್ಧಿಕ ಜ್ಞಾನದ ಜೀವಂತಿಕೆಯನ್ನು ತುಂಬಿದ ಪ್ರತಿಫಲವಾಗಿ ಇಂದು ನಾವು ಸಾಂಸ್ಕೃತಿಕವಾಗಿ ಬೆರೆಯುತ್ತಿದ್ದೆವೆ. ಆದರೆ ಇಂದಿನ ಸಾಹಿತ್ಯ ಸಂಶೋಧನಾ ವಿದ್ಯಾರ್ಥಿಗಳು ಆತ್ಮ ವಿಶ್ವಾಸವಿಲ್ಲದ ಅಕ್ಷರಸ್ಥರಾಗುತ್ತಿದ್ದಾರೆ ಎಂಬ ಕಂಬಾರ ಅವರ ಮಾತನ್ನು ಒತ್ತಿ ಹೇಳಿ ವಿದ್ಯಾರ್ಥಿಗಳು ಕೇವಲ ಅಕ್ಷರ ಜ್ಞಾನದ ಜೊತೆಗೆ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಸಂಶೋಧನೆ ಎಂದರೆ ಕೇವಲ ಪ್ರಬಂಧ ಮಂಡಿಸಿ, ಪುಸ್ತಕ ರೂಪದಲ್ಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸುವ ಬದಲು ಸಾಹಿತ್ಯ ಸಂಶೋಧನೆಯ ನಿಜವಾದ ಆಶಯವನ್ನು ಅರಿತು ಸಮಾಜಕ್ಕೆ ಅರ್ಥೈಸುವುದೆ ನಿಜವಾದ ಸಂಶೋಧನೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಎಂ.ಎ. ಪಿಎಚ್.ಡಿ ಕನ್ನಡ ಸಾಹಿತ್ಯ ಸಂಯೋಜಿತ ಪದವಿಯ ಸಂಚಾಲಕರಾದ ಡಾ. ಅಮರೇಶ ನುಗಡೋಣಿ ಅವರು ಮಾತನಾಡಿ ಕನ್ನಡ ವಿಶ್ವವಿದ್ಯಾಲಯವು ಪ್ರಾರಂಭದ ಸ್ಥಾಪನಾದಿನಗಳಿಂದಲೂ ಕಾಡಿನಂತಿದ್ದ ಈ ಪಾಳು ಭೂಮಿಯಲ್ಲಿ ತಾತ್ವಿಕ ಸಂಶೋಧನೆಯ ಶಿಕ್ಷಣ ಕ್ರಾಂತಿಯನ್ನು ಮಾಡುತ್ತಿದೆ. ಇಂತಹ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ, ಕಲಿಸುತ್ತಿರುವ ನಾವೆಲ್ಲಾ ಧನ್ಯರು. ವಿಶ್ವವಿದ್ಯಾಲಯ ನಾಡು ನುಡಿ ಸಾಹಿತ್ಯ ಸಂಸ್ಕೃತಿಗೆ ತನ್ನದೆ ವಿಶೇಷ ಕೊಡುತ್ತಿರುವುದನ್ನು ಹೆಮ್ಮೆಯಿಂದ ಹೇಳಬೇಕು ಎಂದು ಹೇಳಿದರು. ಹಾಗೂ ವಿದ್ಯಾರ್ಥಿಗಳು ಕೇವಲ ಪದವಿ ಮತ್ತು ಅಂಕಗಳಿಗಿಂತ ಜ್ಞಾನದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಂ. ಎ ಕನ್ನಡ ಸಾಹಿತ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಅಕ್ಷತಾ ಹಾಗೂ ಮಂಜುನಾಥ ಅನಿಸಿಕೆ ಹೇಳಿದರು. ಇನ್ನು ಪಂಪಾಪತಿ ಅವರು ಗಣ್ಯರನ್ನು ಸ್ವಾಗತಿಸಿದರು, ವಿದ್ಯಾರ್ಥಿನಿ ಮಂಜುಳಾ ಎಂ ಅವರು ಕಾರ್ಯಕ್ರಮನ್ನು ವಂದಿಸಿದರು. ವಿದ್ಯಾರ್ಥಿನಿ ಬಾಣದ ಲಕ್ಷ್ಮಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಧಿತರಿದ್ದರು.