ಸಂಕುಚಿತ ದೃಷ್ಟಿಕೋನ ಕಳೆದುಕೊಂಡು ಬಹುತ್ವವನ್ನು ತುಂಬಿಕೊಳ್ಳುವ ವೇದಿಕೆ ಇದಾಗಿದೆ. ಭೌತಿಕ ಸೌಲಭ್ಯಗಳೊಂದಿಗೆ ಬೌದ್ಧಿಕ ಆಹಾರವನ್ನು ಕೊಡುವ ಕಾಳಜಿ ಕನ್ನಡ ವಿಶ್ವವಿದ್ಯಾಲಯ ತೋರಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಸಬೀಹಾ ಅವರು ಪದವಿ ಪೂರ್ವ ಶಿಕ್ಷಣ ಕಲಿಯುತ್ತಿರುವ ಶಿಬಿರದ ೫೦೦ ಬಾಲಕಿಯರನ್ನು ಕುರಿತು ಹೇಳಿದರು.
ಕನ್ನಡ ವಿಶ್ವವಿದ್ಯಾಲಯ, ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಮತ್ತು ದುದ್ದುಪೂಡಿ ಬಾಲಕಿಯರ ಪದವಿಪೂರ್ವ ಕಾಲೇಜು ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ ೨೧.೧೨.೨೦೧೭ರಿಂದ ೨೭.೧೨.೨೦೧೭ರ ವರೆಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಬಾಲಕಿಯರ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಮಂಟಪ ಸಭಾಂಗಣದಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಉದ್ಘಾಟನಾ ಭಾಷಣ ಮಾಡಿದರು.
ನಿಮ್ಮ ಸಾಮರ್ಥ್ಯ ಆಸಕ್ತಿಗಳೊಂದಿಗೆ ಅವಕಾಶಗಳನ್ನು ಸದ್ಭಳಿಕೆ ಮಾಡಿಕೊಳ್ಳಲು ೭ ದಿನಗಳ ಶಿಬಿರ ಬಂಗಾರದ ದಿನಗಳಾಗಿ ಮುಂದೆ ನಿಮ್ಮ ಬದುಕಿನಲ್ಲಿ ಅವಿಸ್ಮರಣೀಯವಾಗಲಿದೆ ಎಂದು ಹೇಳಿದರು. ಎನ್.ಎಸ್.ಎಸ್.ಗಾಗಿ ಅವಿರತವಾಗಿ ದುಡಿದ ದಿಲ್‌ಶಾದ್ ಅವರನ್ನು ಸ್ಮರಿಸಿದರು.
ಗೌರವ ಅತಿಥಿಗಳಾಗಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಬೌದ್ಧಿಕ, ಶೈಕ್ಷಣಿಕ ಅನುಸಂಧಾನದ ವಿಶೇಷ ಶಿಬಿರವಾಗಿ ನಿಮ್ಮ ಬದುಕಿನಲ್ಲಿ ಪರಿಣಮಿಸಲಿದೆ. ನಿರ್ಭಯ ಪ್ರಕರಣದಿಂದ ಇತ್ತೀಚಿನ ದಾನಮ್ಮ ಪ್ರಕರಣಗಳ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಿಮ್ಮಲ್ಲಿ ಪ್ರಶ್ನೆಗಳು ಏಳಬೇಕು. ಶಿಬಿರವು ನಿಮಗೆ ಬೌದ್ಧಿಕ ಕಸುವನ್ನು ಕೊಡಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ ಎನ್ನುವ ಮಾತುಗಳಿಂದ ಬುದ್ಧಿ ದೇಹದ ಯಾವ ಭಾಗದಲ್ಲಿ ಇರುತ್ತದೆ ಎಂದು ವೈಜ್ಞಾನಿಕವಾಗಿ ಗೊತ್ತಾಗಬೇಕಿದೆ. ಸಣ್ಣ ತರ್ಕದ ಮೂಲಕ ವ್ಯವಸ್ಥೆಯ ಸುಳ್ಳುಗಳನ್ನು ಪ್ರಶ್ನಿಸುವ ವೈಚಾರಿಕ ಜ್ಞಾನವನ್ನು ವಿದ್ಯಾರ್ಥಿನಿಯರು ಹೊಂದಬೇಕು. ನಮಗೂ ಅವಕಾಶ ಕೊಡಿ ಎಂದು ಹಿಂದೆ ಕೇಳುತ್ತಿದ್ದೇವು. ಆದರೆ ಈಗ ಅವಕಾಶಗಳು ನಮ್ಮ ಕೈಯಲ್ಲಿವೆ. ಬಳಸಿಕೊಳ್ಳಬೇಕಷ್ಟೆ ಎಂದು ಹೇಳಿದರು.
೧೦ ವರ್ಷಗಳ ಹಿಂದೆ ಹೊತ್ತು ಮುಳುಗೊದರೊಳಗೆ ಬಂದು ಬಿಡಿ ಮನಿಗೆ ಎಂದು ಹಿರಿಯರು ಹೆಣ್ಣುಮಕ್ಕಳಿಗೆ ಹೇಳುತ್ತಿದ್ದರು. ಇವತ್ತು ಹಗಲಿನಲ್ಲಿ ಒಬ್ಬೊಬ್ಬರೇ ಅಡ್ಡಾಡಬ್ಯಾಡ್ರಿ ನಾಕು ಮಂದಿಗೂಡ ಓಡಾಡ್ರಿ ಎಂದು ಹೇಳುವ ಸಂಕಟದ ದಿನಗಳಲ್ಲಿ ನಾವಿದ್ದೇವೆ. ವಾಸ್ತವ ಎಂದರೆ ನಮ್ಮತನ ಉಳಿಸಿಕೊಂಡು ಬದುಕಲಾರದ ಸಂಕಷ್ಟದ ಸ್ಥಿತಿಯಲ್ಲಿದ್ದೇವೆ. ನಮ್ಮ ಬದುಕನ್ನು ಒಂದು ಕಡೆ ಆಧುನಿಕತೆ ನಿರ್ದೇಶಿಸಿದರೆ ಇನ್ನೊಂದು ಕಡೆ ಮೌಢ್ಯತೆ ನಮ್ಮನ್ನು ನಿರ್ದೇಶಿಸುತ್ತದೆ. ಅಭಿಪ್ರಾಯ ವ್ಯಕ್ತಪಡಿಸಲಾಗದ ಸಮಾಜದೊಳಗೆ, ಸಾಮಾಜಿಕ ಶಿಕ್ಷಣ ಪಡೆದು ಮುಂದುವರೆಯುತ್ತಿದ್ದೇವೆ. ಆಧುನಿಕ ಶಿಕ್ಷಣ ನಮ್ಮನ್ನು ಕೈ ಹಿಡಿಯಲಾರದ ಹೊತ್ತಿನಲ್ಲಿ ನಾವಿದ್ದೇವೆ ಎಂದು ಸಂಕಟದಿಂದ ನುಡಿದರು.
ವಿದ್ಯೆ, ಹುದ್ದೆ, ಅಪಮಾನಿಸುತ್ತ ಸಂವಿಧಾನದ ಹಕ್ಕು ಸ್ವಾತಂತ್ರ್ಯ ಹಕ್ಕು ಸೌಲಭ್ಯಗಳನ್ನು ಅನುಭವಿಸಲಾಗದ ಇಕ್ಕಟ್ಟಿನಲ್ಲಿ ನಾವಿದ್ದೇವೆ. ನಾವೆಲ್ಲ ಮಹಿಳೆಯರು ಒಂದೆ ಎಂದು ಹೇಳುವಾಗ ಅಸಹಿಷ್ಣುತೆ ಯಾಕೆ ಹುಟ್ಟುತ್ತದೆ? ಸಹಿಸುವ ಗುಣ ಬರಲಾರದೆ ಒಂದಾಗಲು ಸಾಧ್ಯವಿಲ್ಲ. ಸಹನೆ ಎನ್.ಎಸ್.ಎಸ್.ನ ಧ್ಯೇಯ ವಾಕ್ಯವಾಗಿದೆ. ಹುಟ್ಟುವಾಗಲೇ ಸಮಾಜ ನಮಗೆ ಕಸಪೊರಕೆಯನ್ನು ಕೊಟ್ಟಿದೆ. ಲೇಖನಿ ಕೊಟ್ಟಿಲ್ಲ. ಚರಿತ್ರೆಯ ವಾಸ್ತವವನ್ನು ನಾವು ನಿಮಗೆ ಹೇಳಿಕೊಡಲೇ ಬೇಕಾಗಿದೆ. ಮಿಥ್ಯಗಳನ್ನು ಒಡೆಯುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಮಾಡುತ್ತಿದೆ. ನೀವೆಲ್ಲ ಈ ಶಿಬಿರದಿಂದ ಹೋಗುವಾಗ ಜವಾಬ್ದಾರಿಯುತ ನಾಗರೀಕರಾಗಿ ಬೌದ್ಧಿಕತೆಯನ್ನು ಪಡೆದುಕೊಂಡು ಹೋಗಬೇಕು ಎಂದು ತಿಳಿಸಿದರು.
ಭಾಷೆಯನ್ನು ಬಣ್ಣ, ಲಿಂಗ ಆಳುತ್ತಿದೆ. ಮಾರುಕಟ್ಟೆ, ಸಂಪ್ರದಾಯಗಳೊಂದಿಗೆ ಪೈಪೋಟಿ ಮಾಡಿ ಆಧುನಿಕ ಬಿಕ್ಕಟ್ಟು ಪರಂಪರೆಯ ಬಿಕ್ಕಟ್ಟುಗಳು ಎರಡು ಸೇರಿ ನಮ್ಮನ್ನು ಉಸಿರು ಕಟ್ಟಿಸುತ್ತಿವೆ. ವಿದ್ಯಾರ್ಥಿನಿಯರಾದ ನೀವು ಸಣ್ಣ ತರ್ಕದ ಬೀಜ ಬಿತ್ತಿಕೊಳ್ಳಬೇಕು. ಬಂಡವಾಳಶಾಹಿಗಳು ನಮ್ಮ ಒಳಗಿನ ಅಂತಃಸತ್ವವನ್ನು ಕಳೆಯುವ ಕೆಲಸವನ್ನು ಮಾಡುತ್ತಿವೆ. ಆದ್ದರಿಂದ ನೀವು ಜ್ಞಾನಮುಖಿಯಾಗಿ ಹೊರಡಬೇಕು. ಆ ಮೂಲಕ ಜಗತ್ತನ್ನು ಅನುಸಂಧಾನ ಮಾಡಬೇಕು ಎಂದು ಪದವಿಪೂರ್ವ ಬಾಲಕಿಯರಿಗೆ ತಿಳುವಳಿಕೆ ನೀಡಿದರು.
ವೇದಿಕೆಯಲ್ಲಿ ದುದ್ದುಪೂಡಿ ಮಹಿಳಾ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಆರ್. ಪಂಪಾಪತಿ ಪಾಟೀಲ್ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಕನ್ನಡ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಡಾ.ಶಿವಾನಂದ ವಿರಕ್ತಮಠ ಅವರು ಸ್ವಾಗತಿಸಿದರು. ಸಂಯೋಜನಾಧಿಕಾರಿಗಳಾದ ಕಲಬುರಗಿ ವಿಭಾಗ ಪದವಿಪೂರ್ವ ಶಿಕ್ಷಣ ಇಲಾಖೆಯ ಡಾ.ಎಸ್.ಶಿವರಾಜ್ ಪ್ರಾಸ್ತಾವಿಕ ನುಡಿದರು. ಗೌರವ ಅತಿಥಿಗಳಾದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀ ಆರ್.ಸಿ. ಪಾಟೀಲ್ ವಂದಿಸಿದರು. ಪಿಡಿಎಫ್ ವಿದ್ಯಾರ್ಥಿ ಡಾ.ವೀರೇಶ ಜಾನೇಕಲ್ ನಿರೂಪಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಬಿರದ ಶಾಂತಿಪ್ರಿಯ ಮತ್ತು ತಂಡದವರು ಮಹಿಳಾ ಗೀತೆ ಮತ್ತು ಎನ್‌ಎಸ್‌ಎಸ್ ಗೀತೆ ಹಾಡಿದರು. ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭೂಮಿಗೌಡ ಅವರು, ಪದವಿ ಪೂರ್ವ ಶಿಕ್ಷಣದ ಅಧ್ಯಾಪಕರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲ ಗಣ್ಯರು ತಮ್ಮ ಮಾತುಗಳಲ್ಲಿ, ಅನೇಕ ಆತಂಕಗಳ ನಡೆಯುವ ಅಧ್ಯಾಪಕರ ಮೇಲೆ, ಸಂಘಟನಾಕಾರರ ಮೇಲೆ ವಿಶ್ವಾಸವಿಟ್ಟು ೭ ದಿನಗಳ ಶಿಬಿರಕ್ಕೆ ಬಾಲಕಿಯರನ್ನು ಕಳುಹಿಸಿದ ಪೋಷಕರು ಮತ್ತು ತಂದೆತಾಯಿಗಳನ್ನು ಸ್ಮರಿಸಿದರು.