ತಿಂಗಳು: ನವೆಂಬರ್ 2015

ಹೊಲಿಯ-ಗೊಲರ (ಕನ್ನಡ) ಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ – ಕಾರ್ಯಾಗಾರ

 

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ಭಾಷಾಧ್ಯಯನ ವಿಭಾಗ ಮತ್ತು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಆಯೋಜಿಸಿದ ಹೊಲಿಯ-ಗೊಲರ (ಕನ್ನಡ) ಭಾಷೆ : ರಾಷ್ಟ್ರೀಯ ವಿಚಾರ ಸಂಕಿರಣ-ಕಾರ್ಯಾಗಾರವು ಬುಡಕಟ್ಟು ಅಧ್ಯಯನ ವಿಭಾಗದ ಚಾವಡಿಯಲ್ಲಿ ೨೦೧೫ರ ನವಂಬರ್ ೨೬-೩೦ರವೆಗೆ ಹಮ್ಮಿಕೊಂಡಿರುವುದನ್ನು ದಿನಾಂಕ ೨೬.೧೧.೨೦೧೫ರ ಇಳಿಹೊತ್ತು ೩ ಗಂಟೆಗೆ ಹೊಲಿಯ-ಗೊಲರ (ಕನ್ನಡ) ಭಾಷೆ ಮಾತನಾಡುವುದರ ಮೂಲಕ ಮಧ್ಯಪ್ರದೇಶದ ಬಾಲಾಘಾಟ ಜಿಲ್ಲೆಯ ತಿರೊಡಿ ತಾಲೂಕಿನ ಕನ್ಹಡಗಾಂವ್ ಗ್ರಾಮದ ಗೊಲರ ಅಲೆಮಾರಿ ಬುಡಕಟ್ಟಿನ ಹಿರಿಯ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಭಿವರಾಬಾಯಿ ಗೇಂದಲಾಲ ಗರ್ದೇರ ಅವರು ವಿದ್ಯುಕ್ತವಾಗಿ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ನುಡಿಯಲ್ಲಿ ತಮ್ಮ ಮನೆಮಾತು ದಿನೆದಿನೇ ಮರೆಮಾಚುತ್ತಿದೆ. ಹೊಸ ತಲೆಮಾರಿನ ತಮ್ಮ ಜನ ಗೊಲರ(ಕನ್ನಡ) ಬದಲಾಗಿ ಹಿಂದಿ ಭಾಷೆಯಲ್ಲಿಯೇ ವ್ಯವಹರಿಸುತ್ತಿರುವುದಕ್ಕೆ ಆಂತಕ ವ್ಯಕ್ತಪಡಿಸಿದರು. ಭಾಷೆಯ ಉಳಿಯುವಿಕೆಗಾಗಿ ಚಿಂತಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅಭಿನಂದಿಸಿದರು.

ವಿಚಾರ ಸಂಕಿರಣ-ಕಾರ್ಯಾಗಾರದ ಆಶಯ ನುಡಿಗಳನ್ನು ಅಳಿವಿನಂಚಿನ ಹೊಲಿಯ(ಕನ್ನಡ) ಭಾಷೆ ಅಧ್ಯಯನದ ಹಿರಿಯ ಸಂಪನ್ಮೂಲ ವ್ಯಕ್ತಿಗಳು, ಹಿರಿಯ ಭಾಷಾ ತಜ್ಞರು ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ ಕೆ ಕೆಂಪೇಗೌಡ ಆಡಿದರು. ಅವರು ೨೦೧೫ರ ಸೆಪ್ಟೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದ ಬಾಲಾಘಾಟ, ಶಿವನಿ ಜಿಲ್ಲೆಗಳಲ್ಲಿಯ ಹೊಲರ ಮತ್ತು ಗೊಲರ ಸಮುದಾಯಗಳು ವಾಸವಾಗಿದ್ದ ನೆಲೆಗಳಲ್ಲಿ ಕೈಗೊಂಡ ಕ್ಷೇತ್ರಕಾರ್ಯದ ಅನುಭವಗಳನ್ನು ಒಗ್ಗೂಡಿಸಿಕೊಂಡು ತಮ್ಮ ಅನುಭವ ಹಂಚಿಕೊಂಡರು. ಹೊಲಿಯ-ಗೊಲರ (ಕನ್ನಡ) ಭಾಷೆ ಕನ್ನಡ ಭಾಷೆಯ ಒಂದು ರೂಪವೇ ಎಂಬುದರಲ್ಲಿ ಅನುಮಾನವಿಲ್ಲ. ಇದು ಅಳಿವಿನಂಚಿನಲ್ಲಿದೆ. ಇವರ ಭಾಷೆ ಉತ್ತರ ಕರ್ನಾಟಕದ ಭಾಷೆಗೆ ಹೆಚ್ಚು ಹೋಲಿಕೆಯಾಗುವುದು. ಈ ಭಾಷೆ ಮತ್ತು ಜನಸಂಸ್ಕೃತಿಯ ಮೂಲ ಮತ್ತು ಪ್ರಸಾರವನ್ನು ವೈಜ್ಞಾನಿಕವಾಗಿ ವಿಭಿನ್ನ ಶಿಸ್ತಿನ ತಜ್ಞರು ಅಧ್ಯಯನಿಸಲು ಮುಂದಾಗಬೇಕಾಗಿದೆ ಎಂದರು.

ವಿಚಾರ ಸಂಕಿರಣ-ಕಾರ್ಯಾಗಾರದ ಸಂಚಾಲಕರು ಮತ್ತು ಅಳಿವಿನಂಚಿನ ಹೊಲಿಯ(ಕನ್ನಡ) ಭಾಷೆ ಅಧ್ಯಯನದ ಪ್ರಧಾನ ಸಂಶೋಧಕರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ ಕೆ ಎಂ ಮೇತ್ರಿ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಅವರು ಭಾರತದ ಜನಗಣತಿ ೨೦೧೧ರ ಅಂಕಿಅಂಶಗಳ ಪ್ರಕಾರ ಸಹಸ್ರಾರು ಬುಡಕಟ್ಟು ಮೂಲ ನುಡಿಗಳು ಮರೆಮಾಚುತ್ತಿರುವುದನ್ನು ಮತ್ತು ನೂರಾರು ನುಡಿ/ಭಾಷೆಗಳು ಅಳಿವಿನಂಚಿನಲ್ಲಿರುವುದನ್ನು ಮನಗಾಣಲಾಗಿದೆ. ಬುಡಕಟ್ಟುಗಳ ಸಾಂಸ್ಕೃತಿಕ ಅನನ್ಯತೆಗಳಲ್ಲಿ ಭಾಷೆ ಪ್ರಧಾನವಾದುದು. ಬುಡಕಟ್ಟುಗಳಲ್ಲಿಯ ನುಡಿಗಳು ಮರೆತುಹೋದರೆ ಅದರೊಂದಿಗೆ ಬುಡಕಟ್ಟುಗಳ ಅಮೂಲ್ಯ ಪಾರಂಪರಿಕ ಜ್ಞಾನವೂ ಮರೆಮಾಚುತ್ತದೆ. ಇದನ್ನರಿತ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನವು ದೇಶದ ಹಲವಾರು ವಿಶ್ವವಿದ್ಯಾಲಯಗಳಿಂದ ಸಂಘ ಸಂಸ್ಥೆಗಳಿಂದ ಭಾಷಾ ತಜ್ಞರಿಂದ ಅಳಿವಿನಂಚಿನಲ್ಲಿರುವ ಭಾಷೆಗಳ ಕುರಿತು ವೈಜ್ಞಾನಿಕ ಅಧ್ಯಯನ ಮಾಡಿಸಲು ಮುಂದಾಯಿತು. ಈ ಪಟ್ಟಿಯಲ್ಲಿಯ ಹೊಲಿಯ ನುಡಿ/ಭಾಷೆಯ ಅಧ್ಯಯನದ ಜವಾಬ್ದಾರಿಯನ್ನು ನನಗೆ ೨೦೧೫ರ ಜನವರಿಯಲ್ಲಿ ವಹಿಸಿತು. ಈ ಅಧ್ಯಯನಕ್ಕೆ ಹಿರಿಯ ಭಾಷಾತಜ್ಞರಾದ ಮೈಸೂರಿನ ಡಾ ಕೆ ಕೆಂಪೇಗೌಡ ಮತ್ತು ಬೀದರ ಜಿಲ್ಲೆಯ ಭಾಷಿಕರಾದ ಡಾ ಶ್ರೀನಿವಾಸ ಜಿ ಬೇಂದ್ರೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸುತ್ತಲಿದ್ದಾರೆ.

ಹೊಲಿಯ ನುಡಿ ಮತ್ತು ಕನ್ನಡ ಭಿನ್ನವಲ್ಲ. ಕನ್ನಡ ಭಾಷೆಯ ಮೂಲಬೇರು ಹೊಲಿಯ ಮತ್ತು ಗೊಂಡಿಯಲ್ಲಿ ಅಡಗಿರುವುದೇ ಎಂಬುದನ್ನು ಚಿಂತಿಸಬೇಕಾಗಿದೆ. ಈ ಭಾಷೆಯ ಪಳುವಳಿಕೆಗಳು ಗೊಂಡ ಬುಡಕಟ್ಟಿನ ಬಾಹುಳ್ಯವುಳ್ಳ ಮಧ್ಯ ಭಾರತದ ಸಾತಪುಡ ಪರ್ವತ ಶ್ರೇಣಿಯ ನರ್(ಗಂಡು)+ಮಾದಾ (ಹೆಣ್ಣು)>ನರ್ಮದಾ, ವೇನ್(ಜನ)-ಪೇನ್(ದೈವ)ಗಂಗಾ ನದಿ ಜಲಾನಯನದಲ್ಲಿ ವಾಸವಾಗಿದ್ದ ಗೊಂಡ ಬುಡಕಟ್ಟಿನ ಹೊಲಿಯ-ಗೊಲರ (ಕೃಷಿಕ-ಪಶುಪಾಲಕ) ಸಮುದಾಯಗಳಲ್ಲಿ ಕಾಣಸಿಗುತ್ತವೆ. ಈ ಭಾಷೆಯು ಕನ್ನಡ ನಾಡಿನ ಗೋದಾವರಿ ಜಲಾನಯನದ ಬೀದರ ಜಿಲ್ಲೆಯ ಕನ್ನಡ ಭಾಷೆಗೆ ಹೆಚ್ಚು ಹೋಲುತ್ತದೆ.

ಹೊಲಿಯ ಸಮುದಾಯವು ಮಧ್ಯಪ್ರದೇಶದ ಬಾಲಾಘಾಟ, ಶಿವನಿ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರು ಹೊಲಿಯ (ಕನ್ನಡ) ಭಾಷೆಯಲ್ಲಿಯೇ ಮಾತನಾಡುತ್ತಾರೆ. ಈ ಭಾಷೆ ಈ ಪ್ರದೇಶದ ಗೊಲರ ಸಮುದಾಯದಲ್ಲಿಯೂ ಬಳಕೆಯಲ್ಲಿದೆ. ಇದಕ್ಕೆ ಅವರು ಗೊಲರ ಭಾಷೆ ಎಂದು ಕರೆಯುತ್ತಾರೆ. ಬಾಲಾಘಾಟ ಜಿಲ್ಲೆಯಲ್ಲಿ ಕನ್ಹಡ(ಕನ್ನಡ)ಗಾಂವ್, ಚಾಕಾ+ಯೇಟಿ(ಕುರಿ)>ಚಾಕಾಹೇಟಿ ಗ್ರಾಮಗಳಲ್ಲಿಯೂ ಗೊಲರ ಸಮುದಾಯದವರಿದ್ದಾರೆ. ಕುರಿಗಳ ತಂಗುವಿಕೆಯ ತಾಣಗಳಿಗೆ ಹಟ್ಟಿ ಎನ್ನುವರು. ಕರ್ನಾಟಕದಲ್ಲಿ ಪಶುಪಾಲಕರ ಸಹಸ್ರಾರು ಹಟ್ಟಿಗಳಿವೆ. ಅಲ್ಲಿಯ ಈ ಗ್ರಾಮಗಳಲ್ಲಿರುವ ಕನ್ಹಡ (ಕನ್ನಡ) ಮತ್ತು ಹೇಟಿ (ಹಟ್ಟಿ) ಪದಗಳು ಕನ್ನಡ ಭಾಷಿಗರಿಗೆ ಚಿಂತನಾರ್ಹವಾಗುವವು.

ಮಧ್ಯ ಪ್ರದೇಶದ ಹೊಲೆಯ ಮತ್ತು ಗೊಲರ ಸಮುದಾಯಗಳು ಕಳ್ಳುಬಳ್ಳಿಯವರು ಎಂಬುದಕ್ಕೆ ಐತಿಹ್ಯವೊಂದು ಹೀಗಿದೆ: ಪಶುಪಾಲಕ ಬುರ್ರ್ಯಾ ಕಾರ್ರ್ಯೋ ಇವರಿಗೆ ಗೊಲರ ಮತ್ತು ಹೊಲರ ಎಂಬ ಇಬ್ಬರು ಮಕ್ಕಳಿದ್ದರು. ಹಿರಿಯ ಮಗ ಗೊಲರ ಅನಾರೋಗ್ಯದಿಂದಿದ್ದಾಗ ಚಿಕ್ಕಮಗ ಹೊಲರನಿಗೆ ಪಶುಪಾಲನೆಗಾಗಿ ತಂದೆ ಕಾಡಿಗೆ ಕಳುಹಿಸುತ್ತಾನೆ. ತಂದೆಯ ಆದೇಶದ ಪ್ರಕಾರ ಹೊಲರ ಪಶುಪಾಲನೆಗೆ ಕಾಡಿಗೆ ಹೋಗುತ್ತಾನೆ. ಕಾಡಿನಲ್ಲಿ ಹಸಿವೆಯಾದಾಗ ಕುರಿಮರಿಯನ್ನು ಕೊಂದು ತಿಂದು ಸಾಯಂಕಾಲ ಪಶುಗಳೊಂದಿಗೆ ಹೊಲರ ಮನೆಗೆ ಮರಳುತ್ತಾನೆ. ಪಶುಗಳಲ್ಲಿ ಕುರಿಮರಿ ಕಾಣೆಯಾಗಿರುವುದನ್ನು ತಂದೆ ವಿಚಾರಿಸಿದ್ದಾಗ ಹೊಲರ ಸತ್ಯ ಸಂಗತಿಯನ್ನು ತಿಳಿಸುತ್ತಾನೆ. ತಂದೆ ಸಿಟ್ಟಿಗೆ ಬಂದು ನೀನು ಪಶುಪಾಲನೆಗೆ ಅರ್ಹನಲ್ಲ ಎಂದು ಪಶುಪಾಲನೆಯಿಂದ ಹೊರಹಾಕುತ್ತಾನೆ. ಪಶುಪಾಲನೆಯಿಂದ ಹೊರಹೋದ ಹೊಲರನ ಸಂತತಿಯೇ ಹೊಲೆಯ ಸಮುದಾಯವಾಯಿತು. ಪಶುಪಾಲನೆಯಲ್ಲಿಯೇ ಉಳಿದ ಗೊಲರನ ಸಂತತಿಯು ಗೊಲರ ಸಮುದಾಯವಾಯಿತು. ಈ ಐತಿಹ್ಯಕ್ಕೆ ಪುಷ್ಟಿ ನೀಡುವ ಅಂಶಗಳು ಈ ಎರಡೂ ಸಮುದಾಯಗಳಲ್ಲಿಯೂ ಇರುವವು. ಈ ಎರಡೂ ಸಮುದಾಯಗಳಲ್ಲಿ ಒಂದೇ ಭಾಷೆ, ಬೆಡಗು, ದೈವಗಳಿರುವವು. ಬೊಮಚೇರ, ದಶಮೇರ, ಗಡೇರ, ಪಿಲಗೇರ, ವಾತಗುನೇರ ಇತ್ಯಾದಿ ಬೆಡಗುಗಳಲ್ಲಿಯ ಅಂತ್ಯಪದಕ್ಕೆ ಗೊಂಡಿ ಭಾಷೆಯಲ್ಲಿ ಅರ್ಥಲಭ್ಯವಾಗುವುದು.  ಇವುಗಳಲ್ಲಿಯ ಅಂತ್ಯಪದ ’ಏರ’ ಗೊಂಡಿ ಪದವಾಗಿದ್ದು, ಇದರ ಅರ್ಥ ’ನೀರು’ ಎಂದಾಗುತ್ತದೆ. ಇವರಲ್ಲಿಯ ಹೊಲೆರಾಯ, ಬಡಾ(ದೊಡ್ಡ)ದೇವ, ದುಲ್ಹಾದೇವ, ಏಳುದೇವರು, ಬಾಗದೇವ, ಮಣಿಗಾರದೇವ, ನಾಗದೇವ, ಮಾತಾಮಾಯಾ, ಮಾವಲಿಮಾ ಇತ್ಯಾದಿಗಳು ಗೊಂಡರಲ್ಲಿಯೂ ಪೂಜ್ಯನೀಯವಾಗಿರುವವು. ಇಂದು ಹೊಲೆಯ, ಗೊಲರ ಮತ್ತು ಗೊಂಡ ಬುಡಕಟ್ಟುಗಳು ಸಮನಾಂತರದಲ್ಲಿ ಅಲ್ಲಿ ಗುರುತಿಸಿಕೊಳ್ಳುತ್ತಿವೆ. ಮೀಸಲಾತಿಯ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಹೊಲಿಯ ಜಾತಿ, ಗೊಲರ ಸಮುದಾಯ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಪಟ್ಟಿಯಲ್ಲಿ ಮತ್ತು ಗೊಂಡ ಸಮುದಾಯವು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿ ಮಧ್ಯ ಪ್ರದೇಶದಲ್ಲಿ ದಾಖಲಾಗಿವೆ.

ಮಧ್ಯ ಪ್ರದೇಶದಲ್ಲಿ ಹೊಲಿಯ ಮತ್ತು ಮಹರ್ ಸಮುದಾಯಗಳು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿವೆ. ಕರ್ನಾಟಕದಲ್ಲಿ ಹಲವೆಡೆ ಹಾಗನಿಸುತ್ತಿಲ್ಲ. ಮಧ್ಯ ಪ್ರದೇಶದಲ್ಲಿ ಗೊಲರ ಮತ್ತು ಯಾದವ ಸಮುದಾಯಗಳು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿವೆ. ಕರ್ನಾಟಕದ ಗೊಲ್ಲರಲ್ಲಿಯೂ ಹಲವಾರು ಪ್ರಬೇಧಗಳಿರುವವು. ಮಧ್ಯ ಪ್ರದೇಶದ ಈ ಸಮುದಾಯಗಳಲ್ಲಿಯ ಭಾಷೆ ಮತ್ತು ಸಂಸ್ಕೃತಿಯನ್ನು ಕರ್ನಾಟಕದ ಈ ಹಿನ್ನೆಲೆಯ ಸಮುದಾಯಗಳಲ್ಲಿ ಗುರುತಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಚರಿತ್ರೆಯ ಮೇಲೆ ಹೊಸ ಬೆಳಕು ಚಲ್ಲಲು ಹೊಲಿಯ-ಗೊಲರ(ಕನ್ನಡ) ಭಾಷೆ – ರಾಷ್ಟ್ರೀಯ ವಿಚಾರ ಸಂಕಿರಣ-ಕಾರ್ಯಾಗಾರ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಚಾವಡಿಯಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಮತ್ತು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದ ಸಹಯೋಗದಲ್ಲಿ ೨೦೧೫ರ ನವೆಂಬರ್ ೨೬ ರಿಂದ ೩೦ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ವಿಚಾರ ಸಂಕಿರಣದಲ್ಲಿ ಮಧ್ಯಪ್ರದೇಶ ರಾಜ್ಯದ ಹೊಲಿಯ ಸಮುದಾಯದ ೧೦ ಮತ್ತು ಗೊಲರ ಸಮುದಾಯದ ೧೦ ಹಾಗೂ ಗೊಂಡ ಬುಡಕಟ್ಟಿನ ೩ ಜನ ಭಾಷಿಕ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದಾರೆ. ಕರ್ನಾಟಕದ ದ್ರಾವಿಡ ಬುಡಕಟ್ಟುಗಳ ಭಾಷಿಕ ತಜ್ಞರು ಆಸಕ್ತಿಯಿಂದ ಭಾಗವಹಿಸುತ್ತಲಿದ್ದಾರೆ. ಈ ವಿಚಾರ ಸಂಕಿರಣ- ಕಾರ್ಯಾಗಾರದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು.

ವಿಚಾರ ಸಂಕಿರಣ-ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಧ್ಯಪ್ರದೇಶದ ಶಿವನಿ ಜಿಲ್ಲೆಯ ಮೊಹಬರ್ರಾ ಗ್ರಾಮದ ಹೊಲಿಯ ಸಮುದಾಯದ ಹೊಲಿಯ(ಕನ್ನಡ) ಭಾಷೆಯ ಹಿರಿಯ ಸಂಪನ್ಮೂಲ ವ್ಯಕ್ತಿ ಶ್ರೀ ಭಾದುಲಾಲ ಗಡೇರ ಅವರು ತಮ್ಮ ಅತಿಥಿ ಭಾಷಣದಲ್ಲಿ ಮಧ್ಯಪ್ರದೇಶದ ಹೊಲಿಯ ಸಮುದಾಯದ ಸಾಮಾಜಿಕ ಮತ್ತು ಭಾಷಿಕ ಪರಿಚಯವನ್ನು ನೀಡಿದರು. ಅಳಿವಿನಂಚಿನ ಹೊಲಿಯ(ಕನ್ನಡ) ಭಾಷೆಯ ಸಂರಕ್ಷಣೆಗೆ ಸಹಕರಿಸಲು ಎಲ್ಲರನ್ನು ವಿನಂತಿಕೊಂಡರು.

ವಿಚಾರ ಸಂಕಿರಣ-ಕಾರ್ಯಾಗಾರದ ಇನ್ನೊರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಧ್ಯ ಪ್ರದೇಶದ ಶಿವನಿ ಜಿಲ್ಲೆಯ ಸಿಂದ್ರಾದೇಹಿ ಗ್ರಾಮದ ಗೊಂಡ ಬುಡಕಟ್ಟಿನ ಹಿರಿಯ ಸಂಪನ್ಮೂಲ ವ್ಯಕ್ತಿ ಶ್ರೀ ಬಿಸನ್‌ಸಿಂಗ್ ಪರತೇತಿ ಅವರು ತಮ್ಮ ಅತಿಥಿ ಭಾಷಣದಲ್ಲಿ ಮಧ್ಯಪ್ರದೇಶದ ಹೊಲಿಯ ಸಮುದಾಯದ ಸಾಮಾಜಿಕ ಮತ್ತು ಭಾಷಿಕ ಪರಿಚಯವನ್ನು ಗೊಂಡ ಬುಡಕಟ್ಟಿನೊಂದಿಗೆ ತೌಲನಿಕವಾಗಿ ಮಾಡಿಕೊಟ್ಟರು. ಗೊಂಡ ಬುಡಕಟ್ಟಿನ ದೈವಗಳ, ನಂಬಿಕೆ ಆಚರಣೆಗಳ ಮತ್ತು ಗೊಂಡಿ ಭಾಷಿಕ ಬಾಂಧವ್ಯ ಹೊಲಿಯ ಮತ್ತು ಗೊಲರ ಸಮುದಾಯಗಳಲ್ಲಿ ಹಾಸುಹೊಕ್ಕಾಗಿದೆ. ಅಳಿವಿನಂಚಿನ ಹೊಲಿಯ(ಕನ್ನಡ) ಭಾಷೆಯ ಸಂರಕ್ಷಣೆಗೆ ಮತ್ತು ಹೊಲಿಯ ಮತ್ತು ಗೊಲರ ಸಮುದಾಯಗಳ ಅಭಿವೃದ್ದಿಗೆ ಸಹಕರಿಸಲು ಎಲ್ಲರನ್ನು ವಿನಂತಿಕೊಂಡರು.

ವಿಚಾರ ಸಂಕಿರಣ-ಕಾರ್ಯಾಗಾರದ ಅಧ್ಯಕ್ಷೀಯ ನುಡಿಗಳನ್ನು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಕನ್ನಡ ಭಾಷಾಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ ಡಿ ಪಾಂಡುರಂಗಬಾಬು ಅವರು ಆಡಿದರು. ಅವರು ಈ ವಿಚಾರ ಸಂಕಿರಣ-ಕಾರ್ಯಾಗಾರ ಮಧ್ಯಪ್ರದೇಶದ ಬುಡಕಟ್ಟು ಗಳಲ್ಲಿಯ ಕನ್ನಡ ಭಾಷಾಧ್ಯಯನಕ್ಕೆ ಅಮೂಲ್ಯವಾದುದು. ಇದರ ಲಾಭವನ್ನು ಪ್ರಧಾನವಾಗಿ ಬುಡಕಟ್ಟು ಅಧ್ಯಯನ ವಿಭಾಗ ಮತ್ತು ಕನ್ನಡ ಭಾಷಾಧ್ಯಯನ ವಿಭಾಗ ಹಾಗೂ ಕನ್ನಡ ವಿಶ್ವವಿದ್ಯಾಲಯದ ಎಲ್ಲ ಕನ್ನಡಪರ ಚಿಂತಕರು ಪಡೆದುಕೊಳ್ಳಲು ಮುಂದಾಗಬೇಕು ಎಂದರು.

ವಿಚಾರ ಸಂಕಿರಣ-ಕಾರ್ಯಾಗಾರದ ಆರಂಭದಲ್ಲಿ ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ ಪಿ ಮಹದೇವಯ್ಯ ಅವರು ಸಭಿಕರನ್ನು ಸ್ವಾಗತಿಸಿದರು. ಕೊನೆಯಲ್ಲಿ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ ಚಲುವರಾಜು ಅವರು ವಂದಿಸಿದರು. ಬುಡಕಟ್ಟು ಅಧ್ಯಯನ ವಿಭಾಗದ ಪಿಡಿಎಫ್ ಸಂಶೋಧನಾರ್ಥಿ ಡಾ ಮಲ್ಲಿಕಾರ್ಜುನ ಬಿ ಮಾನ್ಪಡೆ ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಸಂವಿಧಾನ ಸಮರ್ಪಣಾ ದಿನಾಚರಣೆ

 

ಕನ್ನಡ ವಿಶ್ವವಿದ್ಯಾಲಯ ಭುವನವಿಜಯ ಸಭಾಂಗಣದಲ್ಲಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೨೫ನೇ ಜನ್ಮದಿನಾಚರಣೆಯ ಸ್ಮರಣಾರ್ಥ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯ ಸಮಾರಂಭದಲ್ಲಿ ಭಾರತ ಸಂವಿಧಾನ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.

ಪರಮಶ್ರೇಷ್ಠ ಸಂವಿಧಾನದ ದುರ್ಬಳಕೆಯನ್ನು ತಡೆಯುವುದೇ ನಾವೆಲ್ಲ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಎಂದು ಕಾನೂನು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳು ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥರಾದ ಪ್ರೊ.ಜೆ.ಎಸ್.ಪಾಟೀಲ್ ಅವರು ನುಡಿದರು.

ಸರ್ಕಾರದ ರಚಿಸಿದ್ದ ನ್ಯಾಯಮೂರ್ತಿ ಎಮ್.ಎನ್.ವೆಂಕಟಾಚಲಯ್ಯ ಏಕವ್ಯಕ್ತಿ ಸಮಿತಿಯು ಇಡೀ ಸಂವಿಧಾನದ ಪುನರ್ ವಿಮರ್ಶೆಯ ವರದಿಯನ್ನು ಸಲ್ಲಿಸಿತು. ಅದನ್ನು ಹೋರಾಟದ ಮೂಲಕ ತಡೆಯಲಾಯಿತು. ಕಾರ್ಮಿಕರಿಗೆ ಸಂಬಂಧಿಸಿದ ೬೭ ಕಾನೂನುಗಳನ್ನು ಸರಳೀಕರಿಸಿ ಕೇವಲ ೫ ಕೋಡ್ ಮಾಡಲು ಹೊರಟಿದ್ದ ಹುನ್ನಾರವನ್ನು ದೇಶದ ೧೧ ಟ್ರೇಡ್ ಯೂನಿಯನ್‌ಗಳು ತಡೆದವು. ಆದರೆ ಇದಕ್ಕೆ ಇನ್ನೂ ಪೂರ್ಣವಾದ ಯಶಸ್ಸು ದೊರೆತಿಲ್ಲ ಎಂದ ಅವರು ಹೀಗೆ ತಿದ್ದುವ ನೆಪದಲ್ಲಿ ಸಂವಿಧಾನವನ್ನು ತಿರುಚುವ ಕೆಲಸದ ವಿರುದ್ಧ ಎಲ್ಲರೂ ದನಿ ಎತ್ತಬೇಕು ಎಂದರು.

ಸಂವಿಧಾನವನ್ನು ತಿದ್ದುಪಡಿ ಮಾಡುವ ಅವಕಾಶ ಕಲ್ಪಿಸಿರುವುದರಿಂದ ಒಟ್ಟು ೯೮ ಸಲ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸುತ್ತ, ಸರ್ಕಾರವು ರಾಜ್ಯನೀತಿ ನಿರ್ದೇಶಕ ತತ್ವದ ಅಡಿಯಲ್ಲಿ ಇದ್ದ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಪರಿವರ್ತಿಸಿದೆ. ಮಕ್ಕಳಿಗೆ ಶಿಕ್ಷಣ ಕೊಡುವುದು ಪಾಲಕರು ಮತ್ತು ಆಡಳಿತದ ಜವಾಬ್ದಾರಿ. ಆದರೆ ಸರ್ಕಾರ ಮಕ್ಕಳಿಗೆ ಮೂಲಭೂತ ಹಕ್ಕು ಎಂದು ನೀಡಿರುವುದು ಸಮಂಜಸವೇ? ಎಂದು ಪ್ರಶ್ನಿಸುತ್ತ, ಕಾನೂನಿನ ಮೂಲಕ ಸರ್ಕಾರಗಳು ನಿರ್ಧಾರ ಮಾಡಿದ ಹಾಗೆ ಪ್ರತಿಯೊಂದು ಮಗು ಶಿಕ್ಷಣ ಪಡೆಯುವ ಮೂಲಭೂತ ಹಕ್ಕನ್ನು ಹೊಂದಿರುತ್ತದೆ. ಈ ರೀತಿಯ ಭಾಷೆ ಉಪಯೋಗಿಸಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ವಿಷಾದಿಸಿದರು.

ಅಂಬೇಡ್ಕರ್ ರಚಿಸಿಕೊಟ್ಟ ಸಂವಿಧಾನದ ಕರಡಿನ ಕುರಿತು ೩ ವರ್ಷಗಳ ಕಾಲ ಸುದೀರ್ಘ ಚರ್ಚೆ ನಡೆಯಿತು. ಇದರ ನಡಾವಳಿಗಳು ಆರು ಸಂಪುಟಗಳಿಲ್ಲಿವೆ ಎಂದರು. ಕಠಿಣ ಪರಿಶ್ರಮಿಯಾದ ಅಂಬೇಡ್ಕರ್ ವರ್ಗೀಕರಣಗೊಂಡ ಸಮಾಜದ ಜಡತ್ವ ಹೋಗಲಾಡಿಸಲು, ಬಡತನ ದಾರಿದ್ರ್ಯ ಶೋಷಣೆಯ ಬೇರುಗಳನ್ನು ಹೊಸಕಿ ಹಾಕಲು ಚಿಂತಿಸಿದ್ದರು. ಅದಕ್ಕಾಗಿ ಸಂಸ್ಕೃತ ಭಾಷೆ ಕಲಿತು ವೇದ ಉಪನಿಷತ್ತುಗಳನ್ನು ಅಧ್ಯಯನ ಮಾಡಿದರು. ಅನ್‌ಹಿಲೇಷನ್ ಆಫ್ ಕಾಸ್ಟ್ ಪುಸ್ತಕ ಬರೆದರು. ಭಾರತದ ಸಂಕೀರ್ಣ ಸಮಾಜಕ್ಕೆ ಅನ್ವಯಿಸುವಂತಹ ಕಷ್ಟಕರವಾದ ಸಂವಿಧಾನ ರಚನೆಯ ಕೆಲಸವನ್ನು ಬಹಳ ಸಮರ್ಪಣೆಯ ಮನೋಭಾವದಿಂದ ಮುಗಿಸಿಕೊಟ್ಟರು ಎಂದು ಉಪನ್ಯಾಸದಲ್ಲಿ ತಿಳಿಸಿದರು. ಕೊನೆಗೆ ಒಂಚೂರು ಧೈರ್ಯ, ಒಂಚೂರು ಪ್ರಯತ್ನ ಮಾಡಿದರೆ ನಾವೆಲ್ಲ ದೇಶವನ್ನು ಸುಂದರಗೊಳಿಸಲು ಸಾಧ್ಯವಿದೆ ಎಂದು ಕಿವಿಮಾತು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದಲ್ಲಿ “ನಾಟಕದ ವಿಭಾಗ” ದ ಉದ್ಘಾಟನಾ ಸಮಾರಂಭ

070301

ಕನ್ನಡ ವಿಶ್ವವಿದ್ಯಾಲಯವು ೨೫ನೇ ನವೆಂಬರ್ ೨೦೧೫ರಂದು ಭುವನವಿಜಯ ಸಭಾಂಗಣದಲ್ಲಿ ಏರ್ಪಡಿಸಿದ್ದ ನಾಟಕ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ವೋಲೆ ಕಡತದ ಮೇಲೆ ನವೀನ ಮಾದರಿಯಲ್ಲಿ ಅನಿಸಿಕೆ ಬರೆದು ಸಹಿ ಹಾಕುವ ಮೂಲಕ ನಾಟಕ ವಿಭಾಗವನ್ನು ಪ್ರೊ.ಜಿ.ಕೆ.ಗೋವಿಂದರಾವ್ ಅವರು ಉದ್ಘಾಟಿಸಿ ಮಾತನಾಡಿದರು. ೨೪ ವರ್ಷ ತುಂಬಿ ೨೫ನೇ ಹರೆಯಕ್ಕೆ ವಿಶ್ವವಿದ್ಯಾಲಯ ಕಾಲಿಡುವ ಸಂದರ್ಭದಲ್ಲಿ ನಾಟಕ ವಿಭಾಗ ಆರಂಭವಾಗಿರುವುದಕ್ಕೆ ಕುಲಪತಿಯವರನ್ನು ಅಭಿನಂದಿಸಿದರು.

ಅತ್ಯಂತ ಸವಾಲಿನ ಮಾಧ್ಯಮ ನಾಟಕ ಜಗತ್ತು. ನಾಟಕದ ಬದುಕಿನ ಕೇಂದ್ರಕ್ಕೆ ಇಳಿದಾಗ ಸವಾಲುಗಳು ಅರಿವಿಗೆ ಬರುತ್ತವೆ. ಅಂಚಿನಲ್ಲಿ ಬದುಕುವವರಿಗೆ ಸವಾಲುಗಳು ಅನಾವರಣಗೊಳ್ಳುವುದಿಲ್ಲ. ಬದುಕಿನಲ್ಲಿ ನೇಪಥ್ಯ ಇಲ್ಲ. ನಾಟಕದಲ್ಲಿಯೂ ನೇಪಥ್ಯ ಇಲ್ಲ ಎಂದು ಚಿಂತಕರು ಮತ್ತು ರಂಗಭೂಮಿ, ಸಿನಿಮಾ ಕಲಾವಿದರಾದ ಪ್ರೊ.ಜಿ.ಕೆ.ಗೋವಿಂದರಾವ್ ಅವರು ನುಡಿದರು. ಅವರು ಮುಂದುವರೆದು, ಸಾಹಿತ್ಯ ಪ್ರಕಾರದಲ್ಲಿ ನಾಟಕ ಪ್ರಕಾರ ಅತ್ಯಂತ ಪ್ರಮುಖವಾದುದು. ಲೇಖಕ ಮತ್ತು ಓದುಗರ ನಡುವಿನ ಅನುಸಂಧಾನ ಒಂದು ಖಾಸಗಿಕ್ರಿಯೆ. ಆದರೆ ನಾಟಕಕ್ಕೆ ಬಹು ಆಯಾಮಗಳಿವೆ. ರಂಗದ ಮೇಲೆ ಅಭಿವ್ಯಕ್ತಿಗೊಂಡಾಗ ಮಾತ್ರ ನಾಟಕ ಮತ್ತು ಕೃತಿ ಪರಿಪೂರ್ಣವಾಗುತ್ತವೆ. ನಾಟಕವು ನಾಟಕಕಾರ, ರಂಗಭೂಮಿ, ಅಭಿವ್ಯಕ್ತಿಗೆ ಮಾತ್ರ ಸೀಮಿತಗೊಂಡಿಲ್ಲ. ಅದು ನಿರ್ದೇಶನ, ವಸ್ತ್ರಾಲಂಕಾರ, ಪ್ರಸಾದನ, ಸಂಗೀತ, ಧ್ವನಿ ಬೆಳಕಿನವರೆಗೂ ವಿಸ್ತಾರ ಪಡೆಯುತ್ತದೆ. ಆದರೆ ಇಲ್ಲಿ ಪ್ರೇಕ್ಷಕ ಅತ್ಯಂತ ಪ್ರಮುಖ ಅಂಗ. ನಾಟಕ ಓದುವುದಕ್ಕಿಂತ ತೀವ್ರ ಮತ್ತು ತೀಕ್ಷ್ಣವಾಗುವುದು ಪ್ರೇಕ್ಷಾಗೃಹದಲ್ಲಿ ಅಭಿವ್ಯಕ್ತಿಗೊಂಡಾಗ ಮಾತ್ರ ಎನ್ನುತ್ತ ರಂಗಭೂಮಿಗೂ, ಚಿತ್ರ ಜಗತ್ತಿಗೂ ಇರುವ ವ್ಯತ್ಯಾಸಗಳನ್ನು ತಿಳಿಸಿದರು.

ನಾಟಕೀಯ ಅನುಭವ ಎಂದರೇನು?) ಎಂಬ ಪ್ರಶ್ನೆಯನ್ನು ಎತ್ತಿದ ಅವರು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನನಗೆ ಸ್ವತಂತ್ರ ಸಿಕ್ಕಿದೆ. ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂಬುದೇ ನಾಟಕೀಯ ಕ್ಷಣಗಳು ಎಂದು ತಿಳಿಸುತ್ತ, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಅನಂತಮೂರ್ತಿಯವರ ಸಂಸ್ಕಾರ, ದೇವನೂರ ಮಹಾದೇವರ ಕುಸುಮಬಾಲೆ ಇವೆಲ್ಲ ಅದ್ಭುತವಾದ ಡ್ರಮಾಟಿಕ್ ಮೂವ್‌ಮೆಂಟ್ಸ್‌ಗಳು ಎಂದರು.

ವ್ಯಾಸನ ಮಹಾಭಾರತದಲ್ಲಿ ಕೃಷ್ಣ ಕರ್ಣರ ಭೇಟಿ ಕುಂತಿ ಕರ್ಣರ ಭೇಟಿಯ ಪ್ರಸಂಗಗಳಂತಹ ಅನೇಕ ಡ್ರೆಮಾಟಿಕ್ ಮೂವ್‌ಮೆಂಟ್ಸ್‌ಗಳು ಅನುಭವಕ್ಕೆ ಸಿಗುತ್ತವೆ. ಇಲ್ಲಿ ವ್ಯಾಸನ ಕಲ್ಪನೆಯ ಸ್ತರಗಳು(ಇಮ್ಯಾಜಿನೇಷನ್ ಲವೆಲ್ಸ್) ಅದ್ಭುತವಾಗಿವೆ ಎಂದು ನಾಟಕದ ಸಂವೇದನಾ ಶೀಲತೆಯನ್ನು ತಿಳಿಸುತ್ತ ಇಂತಹ ಕ್ಷಣಗಳು ನಾಟಕ ವಿಭಾಗಕ್ಕೆ ಮತ್ತೆ ಮತ್ತೆ ಸಿಗಲಿ ಎಂದು ಹಾರೈಸಿದರು.

ಬೆಂಗಳೂರಿನ ನಾಟಕಕಾರರು ಮತ್ತು ಖ್ಯಾತ ಸಾಹಿತಿಗಳಾದ ಡಾ. ರಾಜಪ್ಪ ದಳವಾಯಿ ಅವರು ವಿಶೇಷ ಉಪನ್ಯಾಸ ನೀಡುತ್ತ, ಕನ್ನಡ ವಿಶ್ವವಿದ್ಯಾಲಯವು ನಾಟಕ ವಿಭಾಗವನ್ನು ಆರಂಭಿಸುವ ಪೂರ್ವದಲ್ಲಿಯೂ ಕಲಿಕೆಯ ದೃಷ್ಟಿಯಿಂದ ನಾಟಕಗಳ ಕುರಿತು ರಚನಾತ್ಮಕ ಕೆಲಸಗಳನ್ನು ಮಾಡುತ್ತ ಬಂದಿದೆ. ರಂಗಭೂಮಿ ಕುರಿತು ನಾವು ಪಶ್ಚಿಮದಿಂದ ಕಲಿತು, ಕಲಿಸಿದವರಿಗೇ ಕಲಿಸುವಷ್ಟು ನಾವು ನಾಟಕದಲ್ಲಿ ಮುಂದುವರೆದಿದ್ದೇವೆ. ಆದಿಕವಿ ಪಂಪನು “ರಂಗಭೂಮಿ” ಪದವನ್ನು ಟಂಕಿಸಿದ್ದಾನೆ. ಅದು ಇಂದಿಗೂ ಜೀವಂತವಾಗಿದೆ. ರಂಗಕಲಾವಿದರ ಕುರಿತು ಮಾಹಿತಿ ಇಲ್ಲದಿರುವುದೇ ರಂಗಭೂಮಿಯ ಬಹುದೊಡ್ಡ ಕೊರತೆಯಾಗಿದೆ. ಇದರಿಂದ ಸಾಂಸ್ಕೃತಿಕ ಇತಿಹಾಸ ಪುನಾರಚನೆ ಮಾಡುವುದು ಬಹು ಕಷ್ಟದ ಕೆಲಸ ಎನ್ನುತ್ತ, ದಕ್ಷಿಣ ಮತ್ತು ಉತ್ತರದ ಭಿನ್ನತೆ ಒಡೆದು ಹಾಕಿ, ಬೆಸೆಯುವ ಕೆಲಸ ನಾಟಕ ವಿಭಾಗದಿಂದ ಆಗಬೇಕಿದೆ. ಆತ್ಮೀಯಶತೃ ಯಾರು? ಕಲ್ಪಿತ ಶತೃ ಯಾರು ಎಂದು ರಂಗಭೂಮಿ ತಿಳಿಸುತ್ತದೆ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮರಿಯಮ್ಮನಹಳ್ಳಿಯ ರಂಗಕಲಾವಿದೆಯಾದ ಶ್ರೀಮತಿ ಕೆ. ನಾಗರತ್ನಮ್ಮ ಮಾತನಾಡುತ್ತ ಕಲಾವಿದರಿಗೆ ನಿವೃತ್ತಿಯೇ ಇಲ್ಲ. ರಂಗಭೂಮಿ ನನಗೆ ಎಲ್ಲ ಕೊಟ್ಟಿದೆ. ಮಹಿಳೆಯರು ನಾಟಕವನ್ನು ವೃತ್ತಿಯಾಗಿ ಅಲ್ಲದಿದ್ದರೂ, ಪ್ರವೃತ್ತಿಯಾಗಿ ಬೆಳೆಸಲಿ ಎನ್ನುತ್ತ, ಈ ಮುಪ್ಪಿನಲ್ಲಿಯೂ ತಾವು ನಾಟಕ ವಿಭಾಗದ ಸೇವೆಗೆ ಸಿದ್ಧವಿರುವುದಾಗಿ ಪ್ರೋತ್ಸಾಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ನಾಟಕ ಮತ್ತು ರಂಗಭೂಮಿ ಬದುಕಿನ ದಾರಿ ತೋರಿಸಬೇಕು. ಬದುಕುವ ದಾರಿಯನ್ನೂ ತೋರಿಸಬೇಕು. ಹಿರಿಯರ ತಲ್ಲಣ ಮತ್ತು ಕಿರಿಯರು ಹಾದಿ ತಪ್ಪುವುದನ್ನು ತಡೆಯಲು ನಾಟಕಗಳಿಂದ ಸಾಧ್ಯ.

ಉತ್ತರ ಕರ್ನಾಟಕ ಕಲಾವಿದರನ್ನು ಕೊಟ್ಟ ತವರು. ಇಲ್ಲಿಯ ಕಲಾವಿದರಿಗೆ ಆಧುನಿಕ ಲೋಕಕ್ಕೆ ಹೇಗೆ ತಮ್ಮನ್ನು ಸಿದ್ಧಗೊಳಿಸಿಕೊಳ್ಳಬೇಕು ಎಂಬ ಜ್ಞಾನದ ಕೊರತೆ ಇದೆ. ಏಕರೂಪ ಭಾಷೆ ಅಹಂಕಾರದಿಂದ ಬಳಲುತ್ತಿರುವ ಮಾಧ್ಯಮಕ್ಕೆ ಉತ್ತರ ಕರ್ನಾಟಕದ ಭಾಷೆ ಪರ್ಯಾಯವಾಗುವ ಶಕ್ತಿ ಹೊಂದಿದೆ ಎಂದರು. ನಾಟಕ ವಿಭಾಗದಲ್ಲಿ ನೇಪಥ್ಯದ ಹಿಂದೆ ಮಾಡುವ ಕೆಲಸಗಳಿಗೆ ಆದ್ಯತೆ ನೀಡಿ ತರಬೇತಿ ನೀಡಲಾಗುವುದು. ಪಿಎಚ್.ಡಿ.ಯ ಜೊತೆಗೆ ಈ ನೇಪಥ್ಯದ ಅಧ್ಯಯನದ ಕುರಿತು ಕೋರ್ಸುಗಳನ್ನು ಆರಂಭಿಸುವ ಇಂಗಿತವನ್ನು ಕುಲಪತಿಗಳು ವ್ಯಕ್ತಪಡಿಸಿದರು.

ನಾಟಕ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕಕುಮಾರ ರಂಜೇರೆ ಪ್ರಾಸ್ತಾವಿಕ ನುಡಿಯುತ್ತ ಮುಖ್ಯವಾಹಿನಿಯಿಂದ ದೂರ ಇರುವ ಪಾರಂಪರಿಕ ಜ್ಞಾನಗಳನ್ನು ನಾಟಕ ವಿಭಾಗದಿಂದ ಅಧ್ಯಯನ ಮಾಡುವ ಪ್ರಯತ್ನವಿದೆ ಎಂದರು.

ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಡಾ. ಶಿವಾನಂದ ವಿರಕ್ತಮಠ ನಿರೂಪಿಸಿ ವಂದಿಸಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥನೆ ಮತ್ತು ರಂಗಗೀತೆ ಹಾಡಿದರು.

ಉದ್ಘಾಟನೆಯ ನಂತರ ಪ್ರೊ.ಸುಧೀಂದ್ರ ಶರ್ಮಾ ನಿರ್ದೇಶನದ ಅಂಟಾನ್ ಚೆಕಾಫ್ ಕತೆಯ ರೂಪವಾದ ಪಂಥ ನಾಟಕದ ಏಕವ್ಯಕ್ತಿ ಪ್ರದರ್ಶನವನ್ನು ಶ್ರೀ ಚೆಸ್ವಾ ನೀಡಿದರು. ಶಂಕರ ಮೆಟ್ರಿ ನಿರ್ದೇಶಿಸಿದ ಲಂಕೇಶ್ ಅವರ ಕತೆಯಾಧರಿತ ಸಹಪಾಠಿ ನಾಟಕವನ್ನು ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸಂಜೆ ಸಂಗೀತ ವಿಭಾಗದ ಅಧ್ಯಾಪಕರು ಮತ್ತು ಸದಸ್ಯರಿಂದ ಸಂಗೀತ ದೌತಣವಿತ್ತು.