ತಿಂಗಳು: ಫೆಬ್ರವರಿ 2018

ಪ್ರೊ. ಡಿ.ಆರ್. ನಾಗರಾಜ್ ಅವರ ಸಮಗ್ರ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣ- ೧೬ ರಿಂದ ೧೭ನೇ ಫೆಬ್ರವರಿ ೨೦೧೮ ಸಮಾರೋಪ ಸಮಾರಂಭ

ನಮ್ಮ ಧರ್ಮ, ಸಂಸ್ಕೃತಿ ಧಾರೆ, ಪಠ್ಯಗಳನ್ನು ಪುನರ್‌ರಚಿಸಿಕೊಳ್ಳಬೇಕು ಪುನರ್ ವ್ಯಾಖ್ಯಾನ ಮಾಡಬೇಕು ಎಂಬುದು ಡಿ.ಆರ್. ನಾಗರಾಜ ಅವರ ಎಲ್ಲ ಬರಹಗಳಲ್ಲಿಯೂ ಕಂಡುಬರುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರಾಜೇಂದ್ರ ಚೆನ್ನಿ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಮಂಟಪ ಸಭಾಂಗಣದಲ್ಲಿ ೧೬ರಿಂದ ೧೭ನೇ ಫೆಬ್ರವರಿ ೨೦೧೮ರ ವರೆಗೆ ಏರ್ಪಡಿಸಿದ್ದ ಪ್ರೊ.ಡಿ.ಆರ್. ನಾಗರಾಜ್ ಅವರ ಸಮಗ್ರ ಸಾಹಿತ್ಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡುತ್ತಿದ್ದರು.
ಯಾವ ಜ್ಞಾನ ಪದ್ಧತಿಗಳನ್ನು ಪ್ರಧಾನ ಧಾರೆಗಳು ಹತ್ತಿಕ್ಕಿಬಿಡುತ್ತವೋ ಅವುಗಳಿಗೆ ಯಾವುದೇ ರೀತಿಯ ಪ್ರತಿನಿಧೀಕರಣ ಇಲ್ಲದ ಹಾಗೆ ಕೆಲಸ ಮಾಡುತ್ತವೋ ಅಂತಹ ಜ್ಞಾನಪರಂಪರೆಗಳಲ್ಲಿ ಬಂಡಾಯಕ್ಕೆ ಅನುವು ಮಾಡುವಂತಹ ಒಂದು ಜಾಗವನ್ನು ನಾನು ನಿರ್ಮಾಣ ಮಾಡಿರಬಹುದೆಂದು ಮಿಶಲ್ ಫೂಕೋ ಹೇಳಿದ್ದಾರೆ. ಡಿ.ಆರ್. ನಾಗರಾಜ್ ಅವರು ಸಹ ಬಹುಶಃ ಇದೇ ಉತ್ತರ ಕೊಡುತ್ತಿದ್ದರು. ಡಿ.ಆರ್. ಅವರು ಜ್ಞಾನ ಪರಂರಂಪರೆಗಳು ಹತ್ತಿಕ್ಕಲಾಗದ ತಿಳಿವಿನ ಅರಿವಿನ ಬಗೆಗಳಿಗೆ ಅನುವು ಮಾಡಿಕೊಡುವ ಕೆಲಸವನ್ನು ಮಾಡಿದ್ದಾರೆ ಎನ್ನುವುದು ಬಹಳ ಮುಖ್ಯವಾಗಿ ಕಾಣುತ್ತದೆ. ಅವರಿಗೆ ಬರಹ ಕ್ರಿಯೆ ಆಗಿತ್ತು. ಪಠ್ಯಗಳನ್ನು ಇಷ್ಟು ಸಮಗ್ರವಾಗಿ ನಿರ್ಮಿಸುವಂತಹ ಒಂದು ವೈಭವ ನಮ್ಮ ತಲೆಮಾರಿಗೆ ಎಂದೂ ಸಿಗಲೇಇಲ್ಲ ಅಂತಹ ವೈಚಾರಿಕ ವಿರಾಮವೂ ಸಿಗಲಿಲ್ಲ. ಅವರ ಬರಹ ಮತ್ತು ವೃತ್ತಿಯನ್ನು ಇತಿಹಾಸದ ಮೂಲಕ ನೋಡುವ ಅಗತ್ಯವಿದೆ. ಆಗ ಅವರ ಬರಹ ಯಾಕೆ ಮುಖ್ಯವಾಗುತ್ತದೆ ಎಂದು ಅರ್ಥವಾಗುತ್ತದೆ. ಪಶ್ಚಿಮ ಕೇಂದ್ರಿತವಾದ ಹಣೆಚೀಟಿಗಳ ಮೂಲಕ ಯಾಕೆ ಡಿ.ಆರ್. ಚಿಂತನೆಗಳನ್ನು ಗ್ರಹಿಸಲು ಪ್ರಯತ್ನಿಸುತ್ತೇವೆ? ಯಾಕೆ ಅವರ ಬರಹಗಳನ್ನು ಮಾರ್ಕ್ಸಿಸ್ಟ್ ಎಂದು ಕರೆಯುತ್ತೇವೆ? ಎಂದು ಸಣ್ಣ ಅಸಮಾಧಾನವನ್ನು ರಾಜೇಂದ್ರ ಚೆನ್ನಿ ವ್ಯಕ್ತಪಡಿಸಿದರು.
ಡಿ.ಆರ್. ಯಾವ ಕೃತಿಯಲ್ಲಿ ಶುದ್ಧ ಮಾರ್ಕ್ಸ್‌ವಾದಿಯಾಗಿ ಬರೆದಿದ್ದಾರೆ? ಎಂದು ಪ್ರಶ್ನಿಸುತ್ತ ಅವರನ್ನು ಪೋಸ್ಟ್ ಕಲೋನಿಯಲ್ ಹಾಗೂ ಪೋಸ್ಟ್ ಮಾರ್ಡನಿಸ್ಟ್ ಎನ್ನುವುದು ಶುದ್ಧ ತಪ್ಪು. ಹಾಗೆ ಕರೆದರೆ ಅವರನ್ನು ಈ ನೆಲೆಯಲ್ಲಿ ವಿವರಿಸಬೇಕಾಗುತ್ತದೆ. ಮತ್ತು ಹಾಗೆ ಕರೆದರೆ ಡಿ.ಆರ್. ಅವರಿಗೆ ಸ್ವಂತ ವ್ಯಕ್ತಿತ್ವ ಇಲ್ಲ ಎಂದು ವಿವರಿಸಬೇಕಾಗುತ್ತದೆ. ಧರ್ಮ, ಸಂಸ್ಕೃತಿ, ಪುರಾಣ ಎಂಬ ಏಕಾಕೃತಿಗಳನ್ನು ಬಹಳ ಶಕ್ತಿಶಾಲಿಯಾಗಿ ಒಡೆಯುವ ಆರಂಭ ಮಾಡಿದ್ದ ಕುವೆಂಪು ಅವರು, ಪುರಾಣಗಳ ಸಾಂಸ್ಕೃತಿಕ ಒಡೆತನ ಮತ್ತು ವ್ಯಾಖ್ಯಾನಗಳ ಒಡೆತನ ಯಾರದ್ದು ಎಂದು ಪ್ರಶ್ನಿಸಲು ಆರಂಭಿಸಿದ್ದರು. ಇದು ಭಾರತದಲ್ಲಿ ಬಹುದೊಡ್ಡ ಸಂಚಲನ ತಂದಿತು. ಕುವೆಂಪು ಅವರ ವೈಚಾರಿಕತೆ ಸೃಷ್ಟಿಶೀಲ ಬರಹದ ಮುಂದುವರಿಕೆಯಾಗಿ ಡಿ.ಆರ್. ಅವರನ್ನು ಕನ್ನಡದ ಸಂದರ್ಭದಲ್ಲಿ ನೋಡಬೇಕಾಗುತ್ತದೆ. ಹತ್ತಿಕ್ಕಲಾದಂತಹ ದಮನಿತ ಎಂದು ಕರೆಯುವ ಸಮುದಾಯಗಳಲ್ಲಿರುವ ಅದ್ಭುತವಾದ ಚಾರಿತ್ರಿಕ ಶಕ್ತಿಗಳಿಗೆ ಬಿಡುಗಡೆ, ಅಭಿವ್ಯಕ್ತಿ ಸ್ವಾತಂತ್ರ್ಯ ಕೊಡಬೇಕು. ಆಗ ಚರಿತ್ರೆ ಬದಲಾಗುತ್ತದೆ ಎಂದು ಡಿ.ಆರ್. ಹೇಳಿದ್ದಾರೆ. ಈ ಚಾರಿತ್ರಿಕ ಶಕ್ತಿಗಳು ಸಮಾನತೆಯ ಕಡೆ ಚಲಿಸಲಿಲ್ಲ. ಬದಲಾಗಿ ಪ್ರಸ್ತುತ ಸಂದರ್ಭದಲ್ಲಿ ಚಾರಿತ್ರಿಕ ಶಕ್ತಿಗಳು ಹಿಂದುತ್ವವಾದಿ ಶಕ್ತಿಗಳು ಬಳಸುವ ಆಯುಧಗಳಾಗಿವೆ. ಇದಕ್ಕೆ ಕಾರಣ ದಲಿತ ರಾಜಕೀಯ ವಿಸ್ಮೃತಿಗೆ ಒಳಗಾಗಿದೆ. ಸ್ಮೃತಿಗಳನ್ನು ಕಳೆದುಕೊಂಡಿರುವುದರಿಂದ ಜಾತಿ ವಿನಾಶ ಆಗಲಿಲ್ಲ ಎಂದು ಡಿ.ಆರ್. ಹೇಳಿದ್ದಾರೆ. ಪ್ರಜಾಪ್ರಭುತ್ವ ಅಲ್ಲದ ಶಕ್ತಿಗಳಿಗೆ ನಾವು ಯಾಕೆ ದುಡಿಯುತ್ತಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು ಎಂದು ಪ್ರೊ.ಚೆನ್ನಿ ಅವರು ಹೇಳಿದರು.
ಬಂಡವಾಳಶಾಹಿಯ ಹೊಸ ಸ್ವರೂಪಗಳು ಇಂದು ಕಂಡುಬಂದಿವೆ. ಬಹಳ ಭಿನ್ನವಾಗಿ ಛದ್ಮವೇಷದಲ್ಲೂ ಬರುವಂತಹ, ಕಣ್ಣಿಗೆ ಕಾಣದಂತಹ, ನಮ್ಮನ್ನು ಸಮಗ್ರವಾಗಿ ನಿಯಂತ್ರಿಸುವಂತಹ ಅಂತರಾಷ್ಟ್ರೀಯ ಬಂಡವಾಳ ಚರಿತ್ರೆಯ ಶಕ್ತಿಯಾಗಿ ಬಂಡವಾಳಶಾಹಿಯು ಚಾಲನೆಯಾಗಿದೆ. ಹಿಂದೆಯೇ ಡಿ.ಆರ್. ಇದನ್ನು ಮುನ್ಸೂಚನೆಯಾಗಿ ನೋಡಿದ್ದರು. ಆದರೆ ನಮಗೆ ಇಂದು ಇದು ವಾಸ್ತವಾಗಿದೆ ಎಂದು ಪ್ರಸ್ತುತ ಪರಿಸ್ಥಿತಿಯನ್ನು ಪ್ರೊ.ಚೆನ್ನಿ ಅವರು ಬಿಚ್ಚಿಟ್ಟರು.
ಡಾ. ವೆಂಕಟೇಶ ಇಂದ್ವಾಡಿ ಅವರು ಸಂಪಾದಿಸಿದ ಎ.ಕೆ. ರಾಮಾನುಜನ್ ಸಮಗ್ರ ಸಾಹಿತ್ಯ ಪುಸ್ತಕವನ್ನು ಪ್ರೊ. ಚೆನ್ನಿ ಅವರು ತಮ್ಮ ಭಾಷಣಕ್ಕು ಮೊದಲು ಬಿಡುಗಡೆ ಮಾಡಿದರು. ಬಿಡುಗಡೆಯ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ.ವೆಂಕಟೇಶ ಇಂದ್ವಾಡಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಡೀನರಾದ ಡಾ.ಮೋಹನ ಕುಂಟಾರ ಉಪಸ್ಥಿತರಿದ್ದರು.
ಈ ಸಮಾರಂಭವನ್ನು ಸಂಶೋಧನಾ ವಿದ್ಯಾರ್ಥಿನಿ ಅರ್ಚನಾ ಸ್ವಾಗತಿಸಿ, ನಿರೂಪಿಸಿದರು.

27867726_10209326141145582_2486712530696161222_n28061565_10209326129265285_4927980956834680696_o28161969_10209326147345737_318636151550671351_o

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ : ಪ್ರೊ. ಡಿ.ಆರ್. ನಾಗರಾಜ್ ಅವರ ಸಮಗ್ರ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣ- ೧೬ ರಿಂದ ೧೭ನೇ ಫೆಬ್ರವರಿ ೨೦೧೮ ಉದ್ಘಾಟನಾ ಕಾರ್ಯಕ್ರಮ

ಕನ್ನಡ ಸಂಶೋಧನಾ ವಲಯ ನಿರಂತರವಾಗಿ ಡಿ.ಆರ್. ನಾಗರಾಜ್ ಅವರನ್ನು ಹುಡುಕಿಕೊಳ್ಳುತ್ತಿದೆ. ಪ್ರತಿ ಸಂಶೋಧಕ ಸಂಶೋಧಕಿಯರು ಡಿ.ಆರ್. ಅವರಿಗೆ ವಾಪಾಸ್ ಆಗುತ್ತಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ನಟರಾಜ ಹುಳಿಯಾರ್ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಮಂಟಪ ಸಭಾಂಗಣದಲ್ಲಿ ೧೬ರಿಂದ ೧೭ನೇ ಫೆಬ್ರವರಿ ೨೦೧೮ರ ವರೆಗೆ ಏರ್ಪಡಿಸಿದ್ದ ಪ್ರೊ.ಡಿ.ಆರ್. ನಾಗರಾಜ್ ಅವರ ಸಮಗ್ರ ಸಾಹಿತ್ಯ ಕುರಿತು ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಆಶಯ ನುಡಿದರು.
ಡಿ.ಆರ್. ಅವರು ನಿತ್ಯದ ಅಧಿಕಾರದ ರಾಜಕಾರಣ ಮತ್ತು ಚುನಾವಣಾ ರಾಜಕಾರಣದ ಕುರಿತು ಕನ್ನಡ ಪ್ರಭ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಆಳವಾದ ಸಂಶೋಧನೆ ಮಾಡಿದ ಲೇಖನಗಳನ್ನು ಬರೆದಿದ್ದರು. ಕನ್ನಡ ಸಾಹಿತ್ಯ ಕೇಂದ್ರದಿಂದ ಪ್ರವೇಶ ಪಡೆದು ಮುಖ್ಯವಾಗಿ ಎಲ್ಲ ವಲಯಗಳ ಕನ್ನಡ ಅನುಭವ ಕೇಂದ್ರದಿಂದ ಚಿಂತನೆಗಳನ್ನು ಆರಂಭಿಸುತ್ತಾರೆ. ಅನೇಕ ಸಂಸ್ಕೃತಿ ಚಿಂತಕರು ವಿವಿಧ ಜ್ಞಾನ, ಶಿಸ್ತುಗಳಿಂದ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಕ್ಕೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಡಿ.ಆರ್. ಅವರು ಅದನ್ನು ಪಲ್ಲಟಗೊಳಿಸಿ ಕನ್ನಡ ಸಾಹಿತ್ಯದ ಕೇಂದ್ರದಿಂದ, ಕನ್ನಡ ಅನುಭವ ಕೇಂದ್ರದಿಂದ, ಕನ್ನಡ ಚಳುವಳಿಗಳ ಕೇಂದ್ರದಿಂದ, ಕನ್ನಡದ ಸಾಂಸ್ಕೃತಿಕ ಚಳುವಳಿ ಕೇಂದ್ರದಿಂದ, ಕನ್ನಡದ ಜಾನಪದ ಕೃತಿಗಳ ಕೇಂದ್ರದಿಂದ ವಾಪಾಸು ಹೋಗಿ ಲೋಕದ ಮತ್ತು ನಾಗರೀಕತೆಯ ಕಥನವನ್ನು ಮಾಡುತ್ತಾರೆ. ಇದರಿಂದ ಕನ್ನಡದಲ್ಲಿ ಎಲ್ಲೂ ಕಾಣದ ಅದ್ಭುತವಾದ ಒಂದು ಅರ್ಪಣೆಯ ಮಾತನ್ನು ಡಿ.ಆರ್. ಅವರನ್ನು ಕುರಿತು ಖ್ಯಾತ ಚಿಂತಕ ಅಶೀಷ್‌ನಂದಿ ಹೇಳಿದ್ದಾರೆ ಎಂದು ಅವರ ಮಾತುಗಳನ್ನು ಭಾಷಣದಲ್ಲಿ ಉದ್ಘರಿಸಿದರು.
ಯಾವುದೇ ಕ್ಷೇತ್ರಗಳ ಶಿಸ್ತುಗಳನ್ನು ಅಧ್ಯಯನ ಮಾಡಿದರೂ ಅವುಗಳನ್ನು ಕಾವ್ಯದ ಹಾಗೆ ಓದದಿದ್ದರೆ ಅವುಗಳ ಸೂಕ್ಷ್ಮ ಅರ್ಥ ಆಗುವುದಿಲ್ಲ ಎಂದು ಡಿ.ಆರ್. ಅಂದೇ ಹೇಳಿದ್ದರು. ಸಾಹಿತ್ಯ ವಿಮರ್ಶೆ ಜ್ಞಾನದ ಯಾವುದೆ ಶಿಸ್ತನ್ನು ಒಳಗೊಳ್ಳಬಹುದು. ಸಂಶೋಧನೆಯಲ್ಲಿ ಭಾಷೆಯ ಸೂಕ್ಷ್ಮ ಅಭ್ಯಾಸ ನಡೆಯಬೇಕು ಎನ್ನುವುದು ಇವರಲ್ಲಿ ಪ್ರಧಾನವಾಗಿ ಕಾಣುತ್ತದೆ. ಕಾವ್ಯಗಳ ಮೂಲಕ ಒಟ್ಟು ಅಧಿಕಾರ ರಾಜಕಾರಣದ ಕೇಂದ್ರಗಳನ್ನು ಗುರುತಿಸಲು ಪ್ರಯತ್ನಿಸುತ್ತಾರೆ. ರಾಮಕೃಷ್ಣ ಹೆಗಡೆ ಅವರ ವಿಕೇಂದ್ರಿಕರಣ ಪರಿಕಲ್ಪನೆಯನ್ನು ಅದ್ಭುತವಾಗಿ ವಿಶ್ಲೇಷಣೆ ಮಾಡಿದ್ದಾರೆ. ಭಾರತೀಯ ನಾಸ್ತಿಕ ದರ್ಶನದ ಬರಹಗಳ ಕುರಿತು ಅವರ ಪುಟ್ಟ ಭಾಷಣ ಮುಂದೆ ಬಹುದೊಡ್ಡ ಸಿದ್ಧಾಂತವಾಯಿತು. ಯಾವುದನ್ನಾದರೂ ವಿವರಿಸಿಕೊಳ್ಳಬಲ್ಲ ಸಾಧ್ಯತೆಗಳನ್ನು ವಚನಕಾರರ ಗದ್ಯ ತೆರೆಯುತ್ತದೆ ಎನ್ನುವುದನ್ನು ಡಿ.ಆರ್. ಬಹುಶಿಸ್ತುಗಳ ಮೂಲಕ ಮುಂದೆ ಬೆಳೆಸಿಕೊಂಡು ಹೋದರು. ಅವರಿಗೆ ತಾನು ತುಳಿದ ದಾರಿಯನ್ನು ಮತ್ತೆ ಮರುಪರಿಶೀಲನೆ ಗೊಳಿಸಿಕೊಳ್ಳುವ ಹಂಬಲ ಪುಸ್ತಕ ಬರೆದ ಕ್ಷಣ ಉಂಟಾಗುತ್ತಿತ್ತು. ಇವರ ಕಥನ ಮುಗ್ಧವಾದ ಕಥನ ಅಲ್ಲ, ಅವರು ನಡೆಸುವ ಅಂತರಪಠ್ಯೀಯ ಕ್ರಮ ವಿಶಿಷ್ಟವಾದದ್ದು. ದಲಿತ ಕಾವ್ಯದಲ್ಲಿ ದಲಿತ ಲೋಕವೇ ಕಾಣೆ ಆಗಿದೆ ಎಂದು ಆರಂಭದಲ್ಲಿ ಡಿ.ಆರ್. ಪ್ರಶ್ನೆಯನ್ನು ಎತ್ತಿದ್ದರು. ಇದು ಓದನ್ನು ಬರವಣಿಗೆಯ ಗ್ರಹಿಕೆಯ ಕ್ರಮವನ್ನು ಪಲ್ಲಟಗೊಳಿಸಲು ಕಾರಣವಾಗುತ್ತದೆ ಎಂದು ಡಿ.ಆರ್. ಅವರ ಬರಹವನ್ನು ಕಟ್ಟಿಕೊಟ್ಟರು.
ಪೂರ್ವದಲ್ಲಿ ನಿಂತು ಪಶ್ಚಿಮದಲ್ಲಿ ಗ್ರಹಿಸಿದ ಭಾರತದ ಬಹುದೊಡ್ಡ ಚಿಂತಕ, ಕನ್ನಡ ಅನುಭವ ಲೋಕದಲ್ಲಿ ನಿಂತು ಪಶ್ಚಿಮವನ್ನು ಮುಖಾಮುಖಿಯಾದರು. ಸೃಜನಶೀಲ ವಿಮರ್ಶಾ ಪ್ರತಿಭೆ ಡಿ.ಆರ್. ಅವರು ಅಮೃತ ಮತ್ತು ಗರುಡ ಪುಸ್ತಕ ಬರೆದಿದ್ದರು. ಇವರ ಸಹಉದ್ಯೋಗಿಯಾದ ಡಾ. ಚಂದ್ರಶೇಖರ ಕಂಬಾರ ಅವರು ಈ ಪುಸ್ತಕಕ್ಕೆ ಬರೆದ ಬೆನ್ನುಡಿಯಲ್ಲಿ ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಡಿ.ಆರ್. ನಾಗರಾಜು ಅವರು ಏನು ಹೇಳಿದ್ದಾರೆ ಎಂಬುದನ್ನು ನೋಡಿಯೇ ಮುಂದಕ್ಕೆ ಹೋಗಬೇಕಾಗುತ್ತದೆ ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ಅದು ನಿಜವಾಯಿತು. ಕನ್ನಡ ಸಾಹಿತ್ಯ ಸಂಸ್ಕೃತಿ ನಿಗೂಢ ಕಾರಣಗಳಿಗಾಗಿ ಡಿ.ಆರ್. ಅವರ ಚಿಂತನೆಯನ್ನು ಸಮಗ್ರವಾಗಿ ಯೋಚಿಸಿಲ್ಲ. ಡಿ.ಆರ್. ಅವರು ಸಂಸ್ಕೃತಿ ಸಿದ್ಧಾಂತಿ, ನಾಗರೀಕತೆಯ ಕಥನಕಾರ, ಸಾಹಿತ್ಯ ಕಥನಕಾರ ಎಂದು ಡಿ.ಆರ್. ಅವರ ವ್ಯಕ್ತಿತ್ವವನ್ನು ಆಶಯ ಭಾಷಣದಲ್ಲಿ ಕಟ್ಟಿಕೊಟ್ಟರು.
ರಾಷ್ಟ್ರೀಯ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಜಿ.ಎನ್. ದೇವಿ ಅವರು ಡಿ.ಆರ್. ಜೊತೆಗಿನ ತಮ್ಮ ಒಡನಾಟದ ಕ್ಷಣಗಳನ್ನು ಹಂಚಿಕೊಳ್ಳುತ್ತ ಕಳೆದು ಹೋದದ್ದರ ನೆನಪು ಉಳಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ನಾನು ಬರೆದ ಪುಸ್ತಕದ ವಿಮರ್ಶೆ ಮಾಡುವ ಸಂದರ್ಭದಲ್ಲಿ ಡಿ.ಆರ್. ಅವರೊಂದಿಗೆ ಚರ್ಚಿಸುವಾಗ ಜೈನ, ಬುದ್ಧ, ಪಾಶ್ಚಾತ್ಯ, ಕನ್ನಡ, ದ್ರಾವಿಡ ಮೊದಲಾದ ಕಡೆಯಿಂದ ಡಿ.ಆರ್. ತರುತ್ತಿದ್ದ ಮಾಹಿತಿಗಳನ್ನು ಕಂಡು ನನಗೆ ಆಶ್ಚರ್ಯವಾಗುತ್ತಿತ್ತು. ಕಳೆದು ಹೋದ ಸ್ಮೃತಿಗಳನ್ನು ಪಡೆದುಕೊಳ್ಳುವುದು ಹೇಗೆ ಎನ್ನುವುದು ನಮ್ಮಿಬ್ಬರ ನಡುವಿನ ಆಕರ್ಷಣೆಯಾಗಿತ್ತು ಎಂದು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ರಾಷ್ಟ್ರೀಯ ವಿಚಾರಸಂಕಿರಣದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಕಾಮ್ರೇಡ್ ಡಿ.ಆರ್. ಅವರು ನಮ್ಮ ಚಿಂತನ ಕ್ರಮಗಳನ್ನು ಬದಲಿಸಿದರು. ವಸಹತುಶಾಹಿಗಳನ್ನು ಪ್ರತಿಭಟಿಸುವ ರೀತಿಯನ್ನು ತಮ್ಮ ಬರಹ ಹಾಗೂ ಚಿಂತನಾ ಕ್ರಮದ ಮೂಲಕ ಡಿ.ಆರ್. ಬಹಳ ಸ್ಪಷ್ಟವಾಗಿ ತೋರಿಸಿದ್ದಾರೆ. ಅವರು ಭಕ್ತಿಪಂಥವನ್ನು ನೋಡುವ ವಿಧಾನ ಅಚ್ಚರಿ ಹುಟ್ಟಿಸುತ್ತಿದೆ. ಜೊತೆಗೆ ನಮ್ಮ ಸ್ಥಳೀಯವಾದ ಜ್ಞಾನ ಪರಂಪರೆಯನ್ನು ಇಂದಿನ ಕಾಲಕ್ಕೆ ಹೇಗೆ ಮುಖಾಮುಖಿಯಾಗಿಸಬೇಕು ಎಂಬ ಚಿಂತನೆಗಳನ್ನು ಹೊಸದಾಗಿ ತೋರಿಸಿಕೊಟ್ಟಿದ್ದಾರೆ. ಮೌಖಿಕ ಸಾಮಗ್ರಿಯನ್ನು ಆಕರವಾಗಿಟ್ಟುಕೊಂಡು ಭಿನ್ನ ಧ್ವನಿಗಳನ್ನು ಹೇಗೆ ಗ್ರಹಿಸಿಕೊಳ್ಳಬೇಕು ಎಂದು ತಿಳಿಸಿಕೊಟ್ಟಿದ್ದಾರೆ ಎಂದು ನುಡಿದರು.
ವಿಚಾರ ಸಂಕಿರಣವನ್ನು ಆಯೋಜಿಸಿದ್ದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ವೆಂಕಟೇಶ ಇಂದ್ವಾಡಿ ಕ್ಲೀಷೆಗಳನ್ನು ಮುರಿಯಬೇಕು ಎನ್ನುವುದು ಡಿ.ಆರ್. ಅವರ ಆಶಯವಾಗಿತ್ತು. ಡಿ.ಆರ್. ಅವರು ಬಿಟ್ಟು ಹೋದ ಹೊಳಹುಗಳನ್ನು ವಿಸ್ತರಿಸುವ, ಅರ್ಥೈಸುವ ಹೊಣೆ ನಮ್ಮ ಮೇಲಿದೆ ಎಂದು ಪ್ರಾಸ್ತಾವಿಕದಲ್ಲಿ ನುಡಿದರು. ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸ್ವಾಗತಿಸಿ, ಗಣ್ಯರನ್ನು ಪರಿಚಯಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಅಮರೇಶ ನುಗಡೋಣಿ ಅವರು ವಂದಿಸಿದರು. ವಿಭಾಗದ ಪಿಡಿಎಫ್ ಆದ ಡಾ. ಗಾದೆಪ್ಪ ನಿರೂಪಿಸಿದರು. ಡಾ. ವಿ.ಬಿ. ತಾರಕೇಶ್ವರ ಅವರು ಜಿ.ಎನ್. ದೇವಿ ಅವರ ಇಂಗ್ಲಿಷ್ ಮಾತುಗಳನ್ನು ಕನ್ನಡದಲ್ಲಿ ಹೇಳಿದರು. ಪ್ರಬಂಧ ಮಂಡಿಸಲು ಆಗಮಿಸಿದ ಪ್ರೊ.ಬಿ.ಎಂ.ಪುಟ್ಟಯ್ಯ, ಪ್ರೊ. ಶಿವರಾಮಶೆಟ್ಟಿ, ಪ್ರೊ.ಎಂ.ಉಷಾ, ಪ್ರೊ. ಚಂದ್ರಶೇಖರ ನಂಗಲಿ ಈ ಸಾಲಿನ ಕೋರ್ಸ್‌ವರ್ಕ್ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರುಗಳು ಉಪಸ್ಥಿತರಿದ್ದರು.
ಮಧ್ಯಾಹ್ನ ಅಲ್ಲಮ ಕಾವ್ಯ, ಮಂಟೇಸ್ವಾಮಿ ಕಾವ್ಯಗಳ ಮೂಲಕ ಕನ್ನಡ ಕಾವ್ಯ ಮಿಮಾಂಸೆಯ ಸೃಷ್ಟಿ ಸಂವಾದವನ್ನು ಪ್ರೊ. ಚಂದ್ರಶೇಖರ ನಂಗಲಿ ನಡೆಸಿಕೊಟ್ಟರು. ಪ್ರೊ.ಟಿ.ಎಸ್. ಸತ್ಯನಾಥ, ಪ್ರೊ.ಎಂ.ಎಸ್. ಆಶಾದೇವಿ, ಪ್ರೊ. ಮಹೇಶ ಹರವೆ ಅವರು ೧ನೇ ಗೋಷ್ಠಿಯಲ್ಲಿ ಪ್ರಬಂಧಗಳನ್ನು ಮಂಡಿಸಿದರು.27973328_10209326115624944_7135268355002629467_n28061565_10209326129265285_4927980956834680696_o28164916_10209326115544942_8210421291443440325_o28234926_10209326115584943_5156297498441319283_o

ಹಾಲುಮತ ಅಧ್ಯಯನ ಪೀಠ -ದಶಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭ

ಸಮುದಾಯಗಳನ್ನು ಉದಾತ್ತೀಕರಿಸಲು ಸಕಾರಾತ್ಮಕವಾಗಿ ಚಿಂತಿಸಬೇಕು ಎಂದು ಬೀಳಗಿಯ ಹಿರಿಯ ಜಾನಪದ ವಿದ್ವಾಂಸರಾದ ಡಾ. ಶ್ರೀರಾಮ ಇಟ್ಟಣ್ಣವರ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಹಾಲುಮತ ಅಧ್ಯಯನ ಪೀಠವು ಮಂಟಪ ಸಭಾಂಗಣದಲ್ಲಿ ೩೧ನೇ ಜನವರಿ ೨೦೧೮ರಂದು ಏರ್ಪಡಿಸಿದ್ದ ದಶಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡುತ್ತಿದ್ದರು.
ಎಲ್ಲ ಸಮುದಾಯಗಳ ಬಗ್ಗೆ ಎಲ್ಲರೂ ಯೋಚಿಸದಿದ್ದರೆ ಸಂಕುಚಿತರಾಗುತ್ತೇವೆ. ಹಲವು ಧರ್ಮ, ಜಾತಿಗಳಿದ್ದರೂ ಬಹುತ್ವದ ಬಗ್ಗೆ ಯೋಚಿಸುತ್ತ ಏಕರಸವಾಗಿ ಒಗ್ಗೂಡಬೇಕು. ರಾಜಕೀಯ ಸಂಕಲ್ಪವಿಲ್ಲದೆ ಏನನ್ನೂ ಸಾಧಿಸಲು ಆಗುವುದಿಲ್ಲ. ರಾಜಕೀಯ ಶಕ್ತಿಯು ತಳಸಮುದಾಯಗಳ ಕುರಿತು ಯೋಚಿಸಬೇಕು ಎಂದು ಹೇಳಿದರು.
ದಶಮಾನೋತ್ಸವ ಸಮಾರಂಭದಲ್ಲಿ ಹಾಲುಮತ ಕುಲವೃತ್ತಿಗಳ ಕುರಿತು ಪುಸ್ತಕಗಳು ಬಿಡುಗಡೆಯಾದಷ್ಟು ಬೇರೆ ಕಡೆ ಪ್ರಕಟವಾಗಿಲ್ಲ. ಸಂಸ್ಕೃತಿಗಳ ಬಗ್ಗೆ ತೌಲನಿಕವಾಗಿ ಅಧ್ಯಯನ ನಡೆಸಬೇಕು. ಕುರಿಗಾರರ ಅನುಭವಗಳು ಬಹಳ ಮುಖ್ಯವಾಗುತ್ತದೆ. ಕುಲವೃತ್ತಿಯೊಂದಿಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕುರಿಗಾರರಿಗೆ ಪರಂಪರಾಗತವಾಗಿ ಬಂದ ಕುರಿಗಾರಿಕೆಯ ವೈದ್ಯಜ್ಞಾನ ದಾಖಲಾಗಬೇಕು. ಇಂದು ಆಧುನಿಕ ಮನಸ್ಸುಗಳು ಕುರಿ ಉದ್ಯಮದ ಕುರಿತು ಆಸಕ್ತವಾಗಿಲ್ಲ. ಸ್ವಾವಲಂಬನೆ ಮತ್ತು ಗಳಿಕೆಗೆ ಅವಕಾಶಗಳಿರುವ ಕುರಿ ಉದ್ಯಮದಲ್ಲಿ ಪಾಲ್ಗೊಳ್ಳುವಂತೆ ಯುವಕರ ಮನಸ್ಸನ್ನು ಸೆಳೆಯಲು ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಇಟ್ಟಣ್ಣವರ ತಿಳಿಸಿದರು.
ಲಲಿತಕಲೆಗಳ ನಿಕಾಯದ ಡೀನರಾದ ಡಾ. ಅಶೋಕಕುಮಾರ ರಂಜೇರೆ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಇಂದು ಕುಲವೃತ್ತಿಗಳು ಅಪಮಾನದ ಕೀಳರಿಮೆಯ ಸಂಕೇತಗಳಾಗಿವೆ. ಆದ್ದರಿಂದ ಕುಲವೃತ್ತಿಗಳು ಹಿಂದಕ್ಕೆ ಸರಿದಿವೆ. ವೃತ್ತಿಗಳಲ್ಲಿ ಪರಂಪರೆಯಿಂದ ಬಂದ ಜ್ಞಾನ ಇದೆ. ದೇಸಿ ಜ್ಞಾನವನ್ನು ಶಿಕ್ಷಣದ ಒಂದು ಭಾಗವಾಗಿ ನಾವು ಪರಿಗಣಿಸಿಲ್ಲ. ಬಹುಶಃ ಈ ಕಾರಣದಿಂದ ಕುಲವೃತ್ತಿಗಳಿಂದ ಆಧುನಿಕರು ವಿಮುಖರಾಗಿದ್ದಾರೆ. ಜಾಗತೀಕರಣ ಸಂದರ್ಭದಲ್ಲಿ ತಮ್ಮದೇ ಆದ ಮಾನದಂಡಗಳನ್ನಿಟ್ಟು ಕುಲವೃತ್ತಿಗಳನ್ನು ಹಿಂದಕ್ಕೆ ತಳ್ಳಲಾಗುತ್ತದೆ. ಕುಲವೃತ್ತಿಗಳಿಗೆ ಅಕಾಡೆಮಿಕ್ ಮತ್ತು ಪ್ರಾಯೋಗಿಕ ಹಂತಗಳಲ್ಲಿ ಸ್ಥಾನ ಮಾನ ದೊರೆಯಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಭಾರತದಲ್ಲಿ ಬಹಳಷ್ಟು ಜನರಿಗೆ ಉದ್ಯೋಗಗಳಿಲ್ಲ. ಹಾಗೆಯೇ ಕೆಲವು ವೃತ್ತಿಗಳಿಗೆ ಅವಕಾಶಗಳಿಲ್ಲ. ವಿಜ್ಞಾನ ವೇಗದಲ್ಲಿದೆ. ನಮ್ಮನ್ನು ತಂತ್ರಜ್ಞಾನಕ್ಕೆ ತೊಡಗಿಸಿಕೊಳ್ಳಬೇಕಾಗಿದೆ. ದುಡಿಮೆ ಶ್ರಮ ಉತ್ಪಾದನೆ ಹಂಚಿಕೆಗಳಿಗೆ ಬದಲಾಗಿ ಹೂಡಿಕೆ ಬಂಡವಾಳ ವಾಣಿಜ್ಯ ವ್ಯವಹಾರಗಳ ಕುರಿತು ಮಾತುಗಳು ಕೇಳಿಬರುತ್ತಿವೆ. ಇದು ಅತ್ಯಂತ ಸಂಕ್ರಮಣದ ಸ್ಥಿತಿಯಾಗಿದೆ ಎಂದು ಹೇಳಿದರು.
ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ.ಎಸ್.ಎಸ್.ಅಂಗಡಿ ವಂದಿಸಿದರು. ವಿದ್ಯಾರ್ಥಿ ಬಾಣದ ಮಂಜುನಾಥ ನಿರೂಪಿಸಿದರು. ಹಾಲುಮತ ಪೀಠದ ಆರಂಭದ ದಿನಗಳಲ್ಲಿ ೫ ಲಕ್ಷ ರೂಪಾಯಿಗಳು ದೇಣಿಗೆ ನೀಡಿ ಪೀಠದ ಪೋಷಣೆಗೆ ಕಾರಣರಾದ ಹೊಸಪೇಟೆ ಉದ್ಯಮಿಗಳಾದ ಶ್ರೀ ದೀಪಕ್‌ಕುಮಾರ ಸಿಂಗ್ ಅವರನ್ನು ಮತ್ತು ಹಾಲುಮತ ಹಾಡುಗಾರ ಚಿಕ್ಕಣ್ಣ ಎಣ್ಣೆಕಟ್ಟಿ ಅವರನ್ನು ಕುಲಪತಿಯವರು ವೇದಿಕೆಯಲ್ಲಿ ಗೌರವಿಸಿದರು.

ಹಾಲುಮತ ಅಧ್ಯಯನ ಪೀಠದ ದಶಮಾನೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ

27072990_10209205036998054_4213196803269031970_n27173803_10209205037198059_9198822223453269572_o (1)27173621_10209205037078056_9165710287806439338_o27540587_10209205005757273_8049426111062318621_n27624652_10209205036998054_4213196803269031970_o27368536_10209205005717272_3554337575931047865_oಕನಕದಾಸರ ಒಂದೊಂದು ಕೀರ್ತನೆಗಳು ಪದವಿ ಪಡೆಯುವಂತಿವೆ. ವಿಶ್ವವಿದ್ಯಾಲಯಗಳಲ್ಲಿರುವ ಕನಕದಾಸ ಅಧ್ಯಯನ ಪೀಠಗಳ ಮೂಲಕ ಈ ಕೆಲಸ ಆಗುತ್ತಿದೆ ಎಂದು ಕರ್ನಾಟಕ ಸರ್ಕಾರದ ಮಾನ್ಯ ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ಎಚ್.ಎಂ. ರೇವಣ್ಣ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಹಾಲುಮತ ಅಧ್ಯಯನ ಪೀಠವು ಮಂಟಪ ಸಭಾಂಗಣದಲ್ಲಿ ೩೦ರಿಂದ ೩೧ನೇ ಜನವರಿ ೨೦೧೮ರ ವರೆಗೆ ಏರ್ಪಡಿಸಿದ್ದ ದಶಮಾನೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕುರುಬರ ಸಾಂಸ್ಕೃತಿಕ ಪರಿಷತ್ತಿನ ಮೂಲಕ ಭಾರತದ ೧೪ ಭಾಷೆಗೆ ಕನಕದಾಸರ ಚರಿತ್ರೆಯನ್ನು ಭಾಷಾಂತರಿಸಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ಸಮುದಾಯದ ಸಾಧಕರ ಕುರಿತು ೧೫ ಸಂಪುಟಗಳನ್ನು ಹೊರತರುವ ಪ್ರಯತ್ನ ನಡೆದಿದೆ. ಕನಕದಾಸರು ಇಂದಿಗೂ ಪ್ರಸ್ತುತರಾಗಿದ್ದಾರೆ. ರಾಜ್ಯದ ಕುರಿಗಾರರ ಹಿತದೃಷ್ಟಿಯಿಂದ ಸರ್ಕಾರವು ಕುರಿ ಮಹಾಮಂಡಳಿ ರಚಿಸಿದೆ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಕಂಬಳಿ ಕೊಡಿಸುವ ಯೋಜನೆಯನ್ನು ಬಜೆಟ್‌ನಲ್ಲಿದೆ. ಸಮುದಾಯದ ೯ ಅಭ್ಯರ್ಥಿಗಳು, ಐಎಎಸ್, ಐಪಿಎಸ್ ೪೩ ಅಭ್ಯರ್ಥಿಗಳು ಕೆಎಎಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಹಿಂದುಳಿದ ಸಮುದಾಯಗಳ ವಸತಿ ನಿಲಯಗಳಿಗಾಗಿ ೩೫ ಕೋಟಿ ಅನುದಾನ ನೀಡಲಾಗಿದೆ ಎಂದು ಉದ್ಘಾಟನಾ ಭಾಷಣದಲ್ಲಿ ಸಚಿವರು ಹೇಳಿದರು.
ಹಾಲುಮತ ಪೀಠದ ದಶಮಾನೋತ್ಸವದ ಪ್ರಯುಕ್ತ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಎ. ಮುರಿಗೆಪ್ಪನವರು ಪೀಠವು ಹಾಲುಮತಕ್ಕೆ ಸಂಬಂಧಿಸಿದ ಇತಿಹಾಸ ಆಚರಣೆ, ಬದುಕು ಸಂಸ್ಕೃತಿಯನ್ನು ಕನ್ನಡಿಗರಿಗೆ ಕೃತಿಗಳ ಮೂಲಕ ಪರಿಚಯಿಸಿದೆ. ಪೀಠವು ಭೂತಕಾಲ ಮತ್ತು ವರ್ತಮಾನ ಕಾಲವಲ್ಲದೆ ಭವಿಷ್ಯತ್ತನ್ನು ನೋಡಬೇಕಾಗಿದೆ. ಇತರೆ ಸಮುದಾಯಗಳು ತಮ್ಮದೇ ಸಂಸ್ಥೆಗಳನ್ನು ನಡೆಸಿಕೊಂಡುಬರುತ್ತಿರುವಂತೆ ಹಾಲುಮತ ಸಮುದಾಯವು ಸಮುದಾಯದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ತನ್ನದೇ ಆದ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಬೇಕು. ಬೇರೆ ಬೇರೆ ಭಾಷೆಗಳಿಗೆ ಕೃತಿಗಳನ್ನು ಭಾಷಾಂತರ ಮಾಡುವ ಮೂಲಕ ಕನ್ನಡದ ಕುರುಬರ ಸಂಸ್ಕೃತಿಯನ್ನು ಪಸರಿಸುವ ಸಾಧ್ಯತೆಗಳಾಗಬೇಕು ಎಂದು ನುಡಿದರು.
‘ಹಾಲುತೆನೆ’ ದಶಮಾನೋತ್ಸವ ನೆನಪಿನ ಸಂಪುಟವನ್ನು ಬಿಡುಗಡೆ ಮಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ ಕಾಂತರಾಜು ಅವರು ಹಾಲುಮತ ಸಮಾಜವು ಹಿಂದುಳಿದ ವರ್ಗಗಗಳಲ್ಲಿ ಒಂದಾಗಿರುವ ಕಾರಣಕ್ಕೆ ಮುಖ್ಯವಾಗಿರುತ್ತದೆ. ಅಧ್ಯಯನ ಪೀಠಗಳು ನಮ್ಮ ಸಮಾಜದ ಮುಂದೆ ಚರಿತ್ರೆಯನ್ನು ಕಟ್ಟಿಕೊಡುತ್ತ ಭವಿಷ್ಯದ ಬಗ್ಗೆ ಎಚ್ಚರಿಕೆ ಕೊಡುತ್ತವೆ. ಸೌಮ್ಯ ಸ್ವಭಾವದಿಂದ ಕುಲಕಸುಬುಗಳನ್ನು ನಂಬಿಕೊಂಡು ಬಂದ ಸಮುದಾಯಗಳು ಸಮಾಜಕ್ಕೆ ಅಗತ್ಯ ಸೇವೆ ಮಾಡಿಕೊಂಡು ಸಮಾಜದ ಆರೋಗ್ಯವನ್ನು ಕಾಪಾಡಿಕೊಂಡು ಬಂದಿವೆ. ಈ ಸಮುದಾಯಗಳನ್ನು ಸರ್ಕಾರ ಸಮಾಜ ಕಾಪಾಡಬೇಕಾಗಿದೆ. ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಂವಿಧಾನದಲ್ಲಿರುವ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ಹೇಳಿದರು.
ಪ್ರಸಿದ್ಧ ಕವಿಗಳಾದ ಡಾ.ಸಿದ್ಧಲಿಂಗಯ್ಯ ಅವರು ಕುಲವೃತ್ತಿಗಳು: ಪರಂಪರೆ ಮತ್ತು ಆಧುನಿಕತೆ ಕುರಿತ ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿ ವಿದ್ವಾಂಸರ ವಿಶ್ವವಿದ್ಯಾಲಯವಾಗಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರವು ಸಕಾಲಕ್ಕೆ ಅನುದಾನಗಳನ್ನು ಬಿಡುಗಡೆ ಮಾಡಿ ವಿಶ್ವವಿದ್ಯಾಲಯವನ್ನು ಬೆಳೆಸಬೇಕು. ಕರ್ನಾಟಕದ ಮೂಲಪುರುಷರು ಯಾರು ಎಂದು ತಿಳಿಯಲು ಹಾಲುಮತ ಸಮುದಾಯದ ಅಧ್ಯಯನ ಮಾಡಬೇಕು. ಕುರುಬ ಜನಾಂಗದ ಜಾನಪದ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಹಾಲುಮತ ಜಾತಿ ಅಲ್ಲ, ಕನ್ನಡ ಸಂಸ್ಕೃತಿಯ ಮೇಲಿನ ಪ್ರೀತಿ ಆಗಿದೆ. ಸುಧಾರಿಸಿದ ಕಂಬಳಿಗಳನ್ನು ಪಂಚತಾರ ಹೊಟೇಲ್‌ಗಳು ಬಳಕೆ ಮಾಡಬೇಕು. ಕಂಬಳಿಗಳಿಗೆ ಮಾನ್ಯತೆ ಸಿಕ್ಕರೆ ಆರ್ಥಿಕ ಸಬಲೀಕರಣ ಆಗುತ್ತದೆ ಎಂದು ನುಡಿದರು.
ಮಾಜಿ ಸಂಸದರಾದ ಶ್ರೀ ಕೆ. ವಿರೂಪಾಕ್ಷಪ್ಪ ಅವರು ಛಾಯಾಚಿತ್ರಗಳ ಆಲ್ಬಂ ಅನ್ನು ಬಿಡುಗಡೆ ಮಾಡಿ ಹಾಗೂ ಛಾಯಾಚಿತ್ರಗಳ ಪ್ರದರ್ಶನದ ಉದ್ಘಾಟನೆಯನ್ನು ಮಾಡಿ ನಾವು ಈ ದೇಶದ ಮೂಲ ಜನಾಂಗವು ಹೌದು, ಬುಡಕಟ್ಟು ಜನಾಂಗವು ಹೌದು. ಸರ್ಕಾರವು ಕುರಿ ಸಾಕಾಣಿಕೆಗೆ ಸರಿಯಾದ ಅನುದಾನ ಒದಗಿಸಬೇಕು ಎಂದು ಕೇಳಿದರು.
ದಶಮಾನೋತ್ಸವ ಸಮಾರಂಭದ ಉದ್ಘಾಟನೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಎಲ್ಲ ತಳಸಮುದಾಯಗಳ ಬಗ್ಗೆ ಕಾಳಜಿ ವಹಿಸುವ ಮತ್ತು ಅಧ್ಯಯನ ಮಾಡುವ ಅಗತ್ಯವಿದೆ. ಯಾವ ಕಾರಣಕ್ಕಾಗಿ ಈ ದೇಶದಲ್ಲಿ ವೃತ್ತಿಗಳು ಜಾತಿಗಳಾದವೋ ತಿಳಿಯದು. ವೃತ್ತಿ ಮೂಲದಲ್ಲಿ ಒಂದಾಗಿದ್ದ ಸಮುದಾಯಗಳನ್ನು ಒಡೆದಿಟ್ಟ ವ್ಯವಸ್ಥೆಯ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ಅದಕ್ಕಾಗಿ ಆಯಾ ಸಮುದಾಯಗಳು ತಮ್ಮ ಸಮುದಾಯಗಳ ಅಥವಾ ವಿಸ್ಮೃತಿಗೆ ಒಳಗಾದ ಇವತ್ತಿನ ಜನಾಂಗಕ್ಕೆ, ಸಮುದಾಯಗಳ ಸಾಂಸ್ಕೃತಿಕವಾದ ತಿಳುವಳಿಕೆಯನ್ನು ನೀಡುವ ಮೂಲಕ ಸಮಕಾಲೀನ ಸಂದರ್ಭದ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಎಚ್ಚರಕೊಡುವ ಪ್ರಯತ್ನದ ಭಾಗವಾಗಿ ಪೀಠಗಳು ಕಾರ್ಯನಿರ್ವಹಿಸುತ್ತಿವೆ. ಅಳಿಸಲಾಗದ ಲಿಪಿಯನ್ನು ಯಾವ ಸಮುದಾಯಗಳು ಇಂದಿನವರೆಗೂ ಮೌಖಿಕ ಪರಂಪರೆಯೊಳಗೆ ಇಟ್ಟುಕೊಂಡು ಬಂದಿವೆಯೋ ಆ ಮೌಖಿಕ ಪರಂಪರೆಯ ದಾಖಲೆ ಮಾಡುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ತನ್ನ ಎಲ್ಲ ಪೀಠಗಳ ಮೂಲಕ ಮಾಡುತ್ತಿದೆ. ಅದರಲ್ಲೂ ಹಾಲುಮತ ಪೀಠ ತಳಸಮುದಾಯಗಳಲ್ಲಿ ವಿಶಿಷ್ಟವಾದಂತಹ ಎಲ್ಲ ರೀತಿಯ ಕಲೆ ಸಂಸ್ಕೃತಿಯನ್ನು ಶೋಧಿಸುವಂತಹ ಕೆಲಸದ ಜೊತೆಗೆ ಬಹುದೊಡ್ಡ ಕನ್ನಡದ ಆಶಯಕ್ಕೆ ಹೇಗೆ ಬೆಸೆಯುತ್ತದೆ ಎನ್ನುವ ಗಂಭೀರ ಚಿಂತನೆ ಪೀಠದ್ದಾಗಿದೆ. ಹೆಣ್ಣು ಗಂಡು ಎಂದು ವ್ಯತ್ಯಾಸವಿಲ್ಲದ ಕಲೆಯನ್ನು ಬೆಳೆಸಿ ಉಳಿಸುತ್ತಿರುವವರು ದುಡಿಯುವ ವರ್ಗದವರು. ಈ ಕಲೆಯನ್ನು ಮಾರುಕಟ್ಟೆ ಸಂಸ್ಕೃತಿ ಹೇಗೆ ಬದಲಿಸಿಕೊಳ್ಳುತ್ತದೆ ಎಂಬುದನ್ನು ನೋಡಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಸಮುದಾಯದವರು ಕನ್ನಡ ವಿಶ್ವವಿದ್ಯಾಲಯದಲ್ಲಿ ವಿಶ್ವಕರ್ಮ ಸಮುದಾಯದ ಅಧ್ಯಯನ ಕೇಂದ್ರವನ್ನು ಸ್ಥಾಪನೆ ಮಾಡಬೇಕು ಎಂಬ ಕೋರಿಕೆಯ ಪ್ರಸ್ತಾವನೆಯನ್ನು ಸನ್ಮಾನ್ಯ ಸಚಿವರಾದ ಶ್ರೀ ಎಚ್.ಎಂ. ರೇವಣ್ಣ ಅವರು ವೇದಿಕೆಯಲ್ಲಿ ಸ್ವೀಕರಿಸಿದರು.
ವೇದಿಕೆಯಲ್ಲಿದ್ದ ಎಲ್ಲ ಗಣ್ಯರನ್ನು ಮಾನ್ಯಕುಲಪತಿಯವರು ಹಾಗೂ ಕುಲಸಚಿವರು ಕಂಬಳಿ ಹೊದಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು.
ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಪ್ರಾಸ್ತಾವಿಕ ನುಡಿದರು. ಡಾ.ಕೆ. ರವೀಂದ್ರನಾಥ ನಿರೂಪಿಸಿದರು. ಡಾ.ಶಿವಾನಂದ ಎಸ್. ವಿರಕ್ತಮಠ ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉದ್ಘಾಟನೆಗೆ ಮೊದಲು ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಆಡಳಿತ ಕಟ್ಟಡದಿಂದ ಸಚಿವರು, ಗಣ್ಯರು, ಕುಲಪತಿಯವರು, ಕುಲಸಚಿವರು, ಅಧಿಕಾರಿಗಳು, ಬೋಧಕರು, ವಿದ್ಯಾರ್ಥಿಗಳು, ಹಾಲುಮತ ಬಾಂಧವರು ಡೊಳ್ಳು ಕುಣಿತ, ಛತ್ರಿ ಚಾಮರಗಳ ಮೂಲಕ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಆಗಮಿಸಿದರು.
ವೇದಿಕೆಯಲ್ಲಿ ವಿಶೇಷ ಆಹ್ವಾನಿತರಾದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಜಿ.ಕೃಷ್ಣ, ಕೃಷಿ ರಫ್ತು ನಿಗಮದ ಉಪಾಧ್ಯಕ್ಷರಾದ ಶ್ರೀ ಹಾಲಪ್ಪ ಗಾದಿಗನೂರು, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರಾದ ಮಾಜಿ ಅಧ್ಯಕ್ಷರಾದ ಶ್ರೀ ಎಲ್. ಸಿದ್ದನಗೌಡ, ಶ್ರೀ ಅಯ್ಯಾಳಿ ತಿಮ್ಮಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಸಣ್ಣಕ್ಕಿ, ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಶ್ರೀ ಕೆ. ಎರೇಗೌಡ, ಹೊಸಪೇಟೆಯ ಹಾಲುಮತ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀ ಎಚ್. ನಂಜುಂಡಪ್ಪ ಹಾಗೂ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು. ನಂತರ ಮಲಪನಗುಡಿ ಪ್ರಕಾಶ ತಂಡದವರಿಂದ ಡೊಳ್ಳು ಕುಣಿತ ಹಾಗೂ ಕಾಲಜ್ಞಾನಿ ಕನಕ ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

69ನೇ ಗಣರಾಜ್ಯೋತ್ಸವ ಹಾಗೂ ವಿಶೇಷ ಉಪನ್ಯಾಸ

 

ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವದ ವ್ಯಾಖ್ಯಾನದ ಅವಧಿ(ವ್ಯಾಲಿಡಿಟಿ) ಮುಗಿದಿದೆ. ಈ ವ್ಯಾಖ್ಯಾನವು ಭಾರತದ ಯಾವ ವಸ್ತು ಸ್ಥಿತಿಗೂ ಕೂದಲೆಳೆಯಷ್ಟು ಅನ್ವಯವಾಗುವುದಿಲ್ಲ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಬಿ.ಎಂ.ಪುಟ್ಟಯ್ಯ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ಘಟಕವು ೬೯ನೇ ಗಣರಾಜ್ಯೋತ್ಸವದ ಆಚರಣೆಯ ಪ್ರಯುಕ್ತ ೨೬ನೇ ಜನವರಿ ೨೦೧೮ರಂದು ಭುವನವಿಜಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಜಾಪ್ರಭುತ್ವದ ಸಮಕಾಲೀನ ಬಿಕ್ಕಟ್ಟುಗಳು ಕುರಿತು ವಿಶೇಷ ಉಪನ್ಯಾಸ ಮಂಡಿಸುತ್ತಿದ್ದರು.
ಭಾರತದಲ್ಲಿ ಪ್ರಜೆಗಳಿಲ್ಲ; ಇವರು ಜಾತಿ ಉಪಜಾತಿ ಕುಲಗಳಿಂದ ಆವರಿಸಿಕೊಂಡಿದ್ದಾರೆ. ಈ ಹಿಂದೆ ಆದಿವಾಸಿಗಳು ಭೂಮಾಲಿಕರ ಊಳಿಗಮಾನ್ಯದ ಬಂಡವಾಳಶಾಹಿಗಳ ಹಾಗೂ ಪುರುಷಾಧಿಪತ್ಯದ ವಿರುದ್ಧ ನಡೆಸಿರುವ ವೀರೋಚಿತ ಹೋರಾಟಗಳು, ಅಲ್ಲದೆ ವರ್ಣ ಜಾತಿ ವಿರುದ್ಧದ ಹೋರಾಟಗಳೆಲ್ಲ ಪ್ರಜಾಪ್ರಭುತ್ವಕ್ಕಾಗಿ. ಪ್ರಜಾಪ್ರಭುತ್ವವು ಸಮುದಾಯ, ವ್ಯಕ್ತಿಗತ, ಹೆಣ್ಣು ಗಂಡು ಸಂಬಂಧದ ನೆಲೆಯಲ್ಲಿ, ಸಾಮಾಜಿಕ ಆರ್ಥಿಕ, ರಾಜಕೀಯ, ಧಾರ್ಮಿಕ ಹಾಗೂ ಭಾಷಿಕ ನೆಲೆಯಲ್ಲಿ ಜಾರಿಗೊಂಡಿದ್ದರೆ ಮಾತ್ರ ನಿಜವಾದ ಪ್ರಜಾಪ್ರಭುತ್ವ ಆಗುತ್ತದೆ. ಮನು ಇಲ್ಲದಿದ್ದರೂ ಆತನ ಮೌಲ್ಯಗಳು ನಮ್ಮನ್ನು ಪ್ರಭಾವಿಸುವ ಮೂಲಕ ಬಿಕ್ಕಟ್ಟುಗಳು ಉಂಟಾಗುತ್ತಿವೆ. ಬೀದಿ ನಾಯಿಗಳು ಎಂಬ ವ್ಯಾಖ್ಯಾನವೇ ಪ್ರಜಾಪ್ರಭುತ್ವದ ಮೂಲಭೂತವಾದ ಬಿಕ್ಕಟ್ಟು ಎಂದು ಹೇಳಿದರು.
ಮಹಿಳೆಯರ ಮೇಲಿನ ಅತ್ಯಾಚಾರ, ದಬ್ಬಾಳಿಕೆಗಳು ಅಭಿವೃದ್ಧಿಯಾಗಿವೆ. ಅಭಿವೃದ್ಧಿ ತೆರೆದಿಡುವ ಮುಚ್ಚಿಡುವ ವೈರುಧ್ಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಎಲ್ಲ ಬಗೆಯ ಸಂಪತ್ತು ಅಧಿಕಾರ ಆಸ್ತಿ ಆರ್ಥಿಕತೆಯ ಕೇಂದ್ರೀಕರಣ ಮತ್ತೊಂದು ರೀತಿಯ ಬಿಕ್ಕಟ್ಟು ಆಗಿದೆ. ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ನಾಶ ಮಾಡಿ ಕೇಂದ್ರೀಕರಣಗೊಳಿಸಲಾಗುತ್ತಿದೆ. ಯುಜಿಸಿಯ ಅನುದಾನ, ಸಿಗುವ ಸೌಲಭ್ಯಗಳಿಗೆ ಕಡಿವಾಣ ಹಾಕುತ್ತಿರುವುದು ಸ್ವಾತಂತ್ರ್ಯದ ಹರಣವಾಗಿದೆ. ಎಲ್ಲರು ಸೇರಿ ದೇಶ ಕಟ್ಟಬೇಕು ಎಂಬುದು ಮೀಸಲಾತಿಯ ಕಲ್ಪನೆ ಎಂದು ಮೀಸಲಾತಿ ಹಾಗೂ ಕಲಂ ೩೭೧(ಜೆ) ಕುರಿತು ಹೊಸ ಹೊಳಹು ನೀಡಿದರು. ಸಮಾಜದ ಎಲ್ಲರೂ ಮುಖ್ಯವಾಹಿನಿಗೆ ಬರಬೇಕು. ವಿಜ್ಞಾನ ವೈದ್ಯಕೀಯ ಕ್ಷೇತ್ರಗಳನ್ನು ಸೇರಬೇಕು. ಇದು ನಿಜವಾದ ದೇಶ ಕಟ್ಟುವ ಕೆಲಸ. ಇಲ್ಲಿ ತಾತ್ವಿಕ ಬಿಕ್ಕಟ್ಟು ಇದೆ. ಪ್ರಜಾಪ್ರಭುತ್ವ ಸಾಮಾಜೀಕರಣಗೊಳ್ಳಲಿಲ್ಲ ಎಂದು ಪುಟ್ಟಯ್ಯ ಅವರು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಇಂದು ಬುದ್ಧಿಜೀವಿಗಳ ಮೌನ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಆತಂಕವಾಗಿದೆ. ಜಾಗತೀಕರಣ, ಖಾಸಗೀಕರಣಗಳ ಆಶಯ ಮಾರುಕಟ್ಟೆಯ ಸೃಷ್ಟಿ. ಭಾರತ ಮಾರುಕಟ್ಟೆ ಆಗುತ್ತದೆ ಇದು ಜಾಗತಿಕ ಬಿಕ್ಕಟ್ಟು. ಇದರೊಂದಿಗೆ ಏಕತೆಯ ಬಿಕ್ಕಟ್ಟನ್ನು, ಭಾಷಾ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಉದ್ಯಮಪತಿಗಳು ಸೃಷ್ಟಿಸುವ ಆರ್ಥಿಕ ಆಮಿಷಗಳಿಗೆ ನಾವು ಬಲಿಯಾಗುತ್ತಿದ್ದೇವೆ ಎಂದು ಜಿಯೋ ಸಿಮ್ ಉದಾಹರಿಸಿದರು. ಮಾರುಕಟ್ಟೆ ಸಂಸ್ಕೃತಿ ಜಗತ್ತನ್ನು ಯಾಮಾರಿಸುತ್ತಿರುವಾಗ ಸಮಾನತೆ, ಸಬಲೀಕರಣವನ್ನು ನಿಜವಾದ ಅರ್ಥದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳು ಸಂವಿಧಾನ ವಿರೋಧಿಯಾಗಿ ನೀಡುವ ಹೇಳಿಕೆಗಳು, ಮರ್ಯಾದೆ ಹತ್ಯೆಗಳಂತಹ ಬಿಕ್ಕಟ್ಟುಗಳು ಸಹಿಷ್ಣತೆಯ ಬಿಕ್ಕಟ್ಟುಗಳಂತಹ ಒಳಬಿಕ್ಕಟ್ಟು ಮತ್ತು ಹೊರಬಿಕ್ಕಟ್ಟುಗಳು ದೇಶವನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದೆ. ‘ಮನು’ ಅನ್ನು ಮನಸ್ಸಿನಿಂದ ನಾವೆಲ್ಲ ಕಿತ್ತುಹಾಕಬೇಕು. ಸಾಮಾಜಿಕ, ಸಾಂಸ್ಕೃತಿಕ ಅಪವ್ಯಾಖ್ಯಾನಗಳಿಗೆ ಉತ್ತರಿಸಲು ನಾವು ಸಿದ್ಧರಾಗಬೇಕು. ಮದವೇರಿದ ಆನೆಯನ್ನು ನಿಯಂತ್ರಿಸಲು ಸಂವಿಧಾನಬದ್ಧವಾದ ಮತ ಎಂಬ ಅಸ್ತ್ರವನ್ನು ಆನೆಯ ಪರವಾಗಿ ಬಳಸಬೇಕೆ ಅಥವಾ ನಾಯಿ ಪರವಾಗಿ ಬಳಸಬೇಕೆ ಎಂದು ವಿದ್ಯಾರ್ಥಿಗಳು ಯೋಚಿಸಬೇಕಾಗಿದೆ. ಕಾಲಕಾಲಕ್ಕೆ ಪ್ರಜಾಪ್ರಭುತ್ವಕ್ಕೆ ಎದುರಾಗುವ ಬಿಕ್ಕಟ್ಟುಗಳನ್ನು ಗ್ರಹಿಸಿ ಪರಿಹಾರ ಹುಡುಕುವ ದಿನ ಗಣರಾಜ್ಯದ ದಿನವಾಗಿದೆ ಎಂದು ನೆರೆದಿದ್ದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಯುಜಿಸಿ ಕೋರ್ಸ್‌ವರ್ಕ್‌ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಗಣರಾಜ್ಯದ ಸಂವಿಧಾನದ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶಿವಾನಂದ ವಿರಕ್ತಮಠ ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಡಾ. ವೀರೇಶ ಜಾನೇಕಲ್ ನಿರೂಪಿಸಿ, ವಂದಿಸಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಉಪನ್ಯಾಸಕ್ಕೂ ಮೊದಲು ಮಾನ್ಯಕುಲಪತಿಯವರು ೬೯ನೇ ಗಣರಾಜ್ಯದ ಅಂಗವಾಗಿ ದ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸಲ್ಲಿಸಿದರು. ವಿಶ್ವವಿದ್ಯಾಲಯದ ಸಮಸ್ತರು ಪಾಲ್ಗೊಂಡಿದ್ದರು.

27021715_10209177004617262_7463584937549878274_o27073213_10209177004577261_5513344158591808923_n

ಅಧ್ಯಯನಾಂಗ ಮತ್ತು ಡಾ.ಶಂಬಾಜೋಶಿ ಅಧ್ಯಯನ ಪೀಠ (ಶಂಬಾಜೋಶಿ ಜನ್ಮದ ದಿನದ ಅಂಗವಾಗಿ ಹಾಗೂ ಯುಜಿಸಿ ಪಿಎಚ್.ಡಿ. ಕೋಸ್‌ವರ್ಕ್)  ಸಂಶೋಧನಾ ಸಮಾವೇಶ : ೪-೯ ಜನವರಿ ೨೦೧೮ ಉದ್ಘಾಟನಾ ಸಮಾರಂಭ

26232696_10209041025857878_4331202981176382405_o (1)26197748_10209041027497919_2907164639747659712_o26198279_10209041027297914_7687262500779093069_o26232214_10209041025777876_1618158813190079492_o (1)26232349_10209041025817877_6623765345386939356_oನಿಜವಾದ ಸಂಶೋಧನೆಯನ್ನು ಸ್ವಲ್ಪವಾದರೂ ಅರ್ಥಪೂರ್ಣವಾಗಿ ಹೇಳುತ್ತಿರುವುದು ಕನ್ನಡ ವಿಶ್ವವಿದ್ಯಾಲಯ ಮಾತ್ರ ಎಂದು ನಾನು ನಿರ್ಭಿಡೆಯಿಂದ ಹೇಳುತ್ತೇನೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಡಾ.ಎಸ್.ಚಂದ್ರಶೇಖರ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗ ಹಾಗೂ ಡಾ.ಶಂಬಾಜೋಶಿ ಅಧ್ಯಯನ ಪೀಠದ ಆಶ್ರಯದಲ್ಲಿ ಯುಜಿಸಿ ಪಿಎಚ್.ಡಿ. ಕೋಸ್‌ವರ್ಕ್ ಹಾಗೂ ಶಂಬಾಜೋಶಿ ಜನ್ಮದ ದಿನದ ಅಂಗವಾಗಿ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಮಂಟಪ ಸಭಾಂಗಣದಲ್ಲಿ ೪ನೇ ಜನವರಿ ೨೦೧೮ರಂದು ಏರ್ಪಡಿಸಿದ್ದ ಸಂಶೋಧನಾ ಸಮಾವೇಶವನ್ನು ಅವರು ಉದ್ಘಾಟಿಸಿ ಸಮಾಜ ವಿಜ್ಞಾನಗಳ ಅಧ್ಯಯನಗಳಲ್ಲಿ ಇತ್ತೀಚಿನ ಸಂಶೋಧನಾ ವಿಧಾನಗಳು ಕುರಿತು ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದರು.
ವಿಜ್ಞಾನದ ಚೌಕಟ್ಟಿನಲ್ಲಿ ಸಮಾಜವನ್ನು ಅಧ್ಯಯನ ಮಾಡುವ ಶಿಸ್ತುಗಳಿಗೆ ಸಮಾಜ ವಿಜ್ಞಾನಗಳು ಎನ್ನಲಾಗುವುದು. ಬಾಲಗಂಗಾಧರ ತಿಲಕ್, ಗಾಂಧೀಜಿಯವರು ವಿಭಿನ್ನ ನೆಲೆಗಳಲ್ಲಿ ನಿಂತು ಸಮಾಜವನ್ನು ರಾಷ್ಟ್ರೀಯತೆಯನ್ನು ಪರಿಭಾವಿಸಿದ್ದಾರೆ. ಬಹುಶಿಸ್ತೀಯವಾಗಿ ಸಂಶೋಧನೆ ಮಾಡಿದವರಲ್ಲಿ ಶಂಬಾಜೋಶಿಯವರು ಮೊದಲಿಗರು. ಇವರು ಶೂದ್ರರರನ್ನು ಕುರಿತು ವಿಶೇಷವಾಗಿ ಸಂಶೋಧನೆ ಮಾಡಿದ್ದಾರೆ. ಬಹಳ ಮುಖ್ಯವಾಗಿ ಸಬಾಲ್ಟ್ರನ್ ಚರಿತ್ರೆಕಾರರಾಗಿ ಹೊರಹೊಮ್ಮಿದ್ದಾರೆ. ಭಾರತದ ಸಮಾಜವಿಜ್ಞಾನಗಳ ದಿಕ್ಕುಗಳನ್ನು ಬದಲಾಯಿಸಲು, ತಪ್ಪಿಸಲು ಸಾಮಾಜಿಕ ಜಾಲತಾಣಗಳು ಪ್ರಯತ್ನಿಸುತ್ತಿವೆ. ಇದು ಸಂಶೋಧನೆಯ ಮೇಲೆ ಪ್ರಭಾವ ಬೀರುತ್ತದೆ. ಸಮಾಜ ವಿಜ್ಞಾನಗಳ ಕುರಿತು ಮಾತನಾಡುವಾಗ ಮೂಲಭೂತವಾಗಿ ಎಲ್ಲ ಶಿಸ್ತುಗಳ ಕುರಿತು ಜ್ಞಾನವನ್ನು ಹೊಂದಿರಬೇಕಾಗುತ್ತದೆ. ಯಾವುದೇ ಅಧ್ಯಯನ ಶಿಸ್ತು, ಸ್ವಾಯತ್ತವಾಗಿ ಇರಲು ಸಾಧ್ಯವಿಲ್ಲ. ಹಾಗಾಗಿ ಅಂತರ್‌ಶಿಸ್ತೀಯ ಅಧ್ಯಯನ ಬಹುಶಿಸ್ತೀಯ ಅಧ್ಯಯನ ಅತ್ಯಂತ ಅಗತ್ಯವಾಗಿದೆ. ನಿರಂತರತೆಯು ಸಂಶೋಧನೆಯ ಜೀವಾಳವಾಗಿದೆ. ವಿದ್ಯಾರ್ಥಿಗಳಿಗೆ ಸಂವಾದ ಚರ್ಚೆಗಳು ಬಹಳ ಅಗತ್ಯ. ಪ್ರಚಲಿತದಲ್ಲಿ ಅಭಿಪ್ರಾಯವನ್ನು ಪ್ರಶ್ನಿಸುವುದು ಕುಕೃತ್ಯ ಎಂಬ ಮನೋಭಾವ ಬೆಳೆಯುತ್ತಿದೆ. ಸಮಾಜದ ಅಡಿಪಾಯವಾದ ಬಹುತ್ವವನ್ನು ಗಟ್ಟಿಗೊಳಿಸುವ ಬಹುದೊಡ್ಡ ಹೊಣೆಗಾರಿಕೆ ಸಮಾಜವಿಜ್ಞಾನಿಗಳ ಮೇಲಿದೆ ಎಂದು ತಿಳಿಸಿದರು.
ಸಂಸ್ಕೃತಿ ಚಿಂತಕರಾದ ಡಾ. ನಟರಾಜ ಬೂದಾಳ ಅವರು ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನಗಳಲ್ಲಿ ಇತ್ತೀಚಿನ ಸಂಶೋಧನಾ ವಿಧಾನಗಳನ್ನು ಕುರಿತು ವಿಶೇಷ ಉಪನ್ಯಾಸ ನೀಡುತ್ತ ಕನ್ನಡದ ಅಸ್ಮಿತೆ, ಚಹರೆಗಳನ್ನು ಸೋಸಿಕೊಟ್ಟವರು ಕಡವಶಂಭುಶರಣ ಮತ್ತು ಶಂಬಾ ಅವರು. ಈ ಶತಮಾನದ ಬಹಳ ದೊಡ್ಡ ಆಕರ್ಷಣೆ ಎಂದರೆ ಶಂಬಾ ಅವರು. ಇತಿಹಾಸ ಮತ್ತ ಪುರಾಣದ ನಡುವೆ ಶಂಬಾ ಅವರಿಗೆ ಗೆರೆಗಳಿರಲಿಲ್ಲ. ಕನ್ನಡ ಅಸ್ಮಿತೆಯ ದ್ರಾವಿಡ ಚಹರೆಗಳನ್ನು ತಮಿಳುನಾಡಿನಿಂದ ಹೊರತುಪಡಿಸಿ ಕನ್ನಡದ ಚಹರೆಗಳನ್ನು ಶಂಬಾ ಗುರುತಿಸಿಕೊಟ್ಟಿದ್ದಾರೆ. ಸಾಮ್ರಾಜ್ಯಶಾಹಿಯು ಹುಡುಕಿ ಹುಡುಕಿ ಈ ಚಹರೆಗಳ ಮೇಲೆ ದಾಳಿ ಮಾಡುತ್ತಿದೆ. ಉತ್ತರದ ಮೂಲಕ ಭಾರತವನ್ನು ವ್ಯಾಖ್ಯಾನಿಸುವುದನ್ನು ಶಂಬಾ ಪಲ್ಲಟಿಸಿದರು. ಉತ್ತರದ ತಿರಸ್ಕಾರ ದಕ್ಷಿಣದ ಸ್ವೀಕಾರ ಇವರ ಪ್ರಮುಖ ಆಸಕ್ತಿ. ಹೊಸ ಓದಿನ ಸಾಧ್ಯತೆಗಳನ್ನು ಒದಗಿಸಿಕೊಡಬಲ್ಲಂತಹ ಹರಹು ಶಂಬಾ ಅವರಿಗೆ ಇತ್ತು. ನಮ್ಮ ಓದನ್ನು ನಿಯಂತ್ರಿಸುತ್ತಿರುವ ಗುಲಾಮಗಿರಿಯಿಂದ ಹೊರಬರುವುದು ಅಗತ್ಯವಾಗಿದೆ. ಜನಸಾಮಾನ್ಯರನ್ನು ಕುರಿತು ಸಂಶೋಧಕರು ಸಂಶೋಧನೆಗಳನ್ನು ಕೈಗೆತ್ತಿಕೊಳ್ಳಬೇಕು. ಓದು ಸ್ವತಂತ್ರವಾದದ್ದಲ್ಲ; ಕಾಲ ದೇಶ ಆವರಣಬದ್ಧವಾದದ್ದು. ಮಹಿಳೆ ತನ್ನನ್ನು ತಾನು ಕಂಡುಕೊಳ್ಳುವ ಓದನ್ನು ನಡೆಸಿಕೊಳ್ಳಬೇಕು. ಇಲ್ಲಿಯವರೆಗೆ ನಾವು ನಡೆಸಿರುವ ಅವನ ಓದನ್ನು ಪಲ್ಲಟಿಸಬೇಕಾಗಿದೆ. ರಾಷ್ಟ್ರೀಯವಾದ ದ್ವೈತ ಅದ್ವೈತ ಪೊಳ್ಳುಗಳನ್ನು ತಿರಸ್ಕರಿಸಿ, ಯಾರು ಅಮುಖ್ಯರಲ್ಲ ಎಂದು ನಡೆಸುವ ಓದು ನಮಗೆ ಹೆಚ್ಚಿನ ವಿಸ್ತಾರ ಸ್ವಾತಂತ್ರ್ಯ ಕೊಡಬಲ್ಲದು ಎಂದು ಸಂಶೋಧಕರನ್ನು ಕುರಿತು ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅಮರೇಶ ನುಗಡೋಣಿ ಅವರು ಸಾಹಿತ್ಯ ಸಂಶೋಧನೆ ಕುರಿತು ವಿಶೇಷ ಉಪನ್ಯಾಸ ನೀಡುತ್ತ ಸಂಶೋಧನ ವಿದ್ಯಾರ್ಥಿಗಳಿಗೆ ವೈಧಾನಿಕತೆ ಕಲಿಸುವುದು ಬಹಳ ಕಷ್ಟಕರವಾದ ಸಂಗತಿ. ಇರುವ ಓದು ಬಿಟ್ಟು ಹೊಸ ಓದು ಕಂಡುಕೊಳ್ಳುವುದು ಸುಲಭವೇ ಎಂದು ಪ್ರಶ್ನಿಸುತ್ತ ಇರುವ ಓದು ತಿಳಿದರೆ ಹೊಸ ಓದಿಗೆ ಪಲ್ಲಟವಾಗಲು ಸಾಧ್ಯವಾಗುತ್ತದೆ. ಇದೊಂದು ನಮ್ಮ ಮುಂದಿರುವ ದೊಡ್ಡ ಸವಾಲು. ದೇಸಿ ಓದನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುವುದು ಎಂದು ಹೇಳಿದರು.
ಅಧ್ಯಯನಾಂಗದ ನಿರ್ದೇಶಕರು ಹಾಗೂ ಪ್ರಾಧ್ಯಾಪಕರಾದ ಡಾ.ಶಿವಾನಂದ ವಿರಕ್ತಮಠ ಅವರು ಸ್ತ್ರೀವಾದಿ ಸಂಶೋಧನೆ ಕುರಿತು ವಿಶೇಷ ಉಪನ್ಯಾಸ ನೀಡುತ್ತ ಶ್ರಮದ ವಿಭಜನೆ ಮಹಿಳೆಯರಿಗೆ ಸೇವಾವಲಯವಾದರೆ ಪುರುಷರಿಗೆ ಉತ್ಪಾದನೆ, ಗಳಿಕೆಯ ವಲಯವಾಗಿ ನೆಲೆಗೊಂಡು ಮಹಿಳೆ ಗೃಹಬಂಧಿಯಾಗುತ್ತಾಳೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡುತ್ತ ಸಂಶೋಧಕರನ್ನು ರೂಪಿಸುವುದು ಕನ್ನಡ ವಿಶ್ವವಿದ್ಯಾಲಯದ ದೊಡ್ಡ ಹೊಣೆಗಾರಿಕೆಯಾಗಿದೆ. ಅಲ್ಪ ವಿರಾಮದಿಂದ ಪೂರ್ಣವಿರಾಮದಡೆಗೆ ನಡೆಯುವ ಒಂದು ಪಯಣ ಸಂಶೋಧನೆಯಾಗಿದೆ ಎಂದು ಡಾ.ಎಂ.ಎಂ.ಕಲಬುರ್ಗಿ ಅವರು ಹೇಳಿದ್ದನ್ನು ಉಲ್ಲೇಖಿಸುತ್ತ, ಸಂಶೋಧನೆಗೆ ಸಂಬಂಧಿಸಿದಂತೆ ತಾಳ್ಮೆ ಶ್ರದ್ಧೆ, ಪರಿಶ್ರಮ, ಓದುವ ಹಂಬಲ ಇಲ್ಲದಿದ್ದರೆ ಸಂಶೋಧಕರಾಗಲು ಸಾಧ್ಯವಿಲ್ಲ. ಪೂರ್ವಗ್ರಹಗಳನ್ನು ಬದಿಗಿಟ್ಟು ಹೊಸ ಸಂಶೋಧನೆಗಳಿಗೆ ನೀವು ತೆರೆದುಕೊಳ್ಳಿ. ಹತ್ತು ಪುಸ್ತಕ ಓದಿ ೧೧ನೇ ಪುಸ್ತಕ ಬರೆಯುವುದು ಸಂಶೋಧನೆಯಾಗುವುದಿಲ್ಲ. ಚರಿತ್ರೆ ಪಲ್ಲಟಿಸಿದ ದೊಡ್ಡ ಪರಂಪರೆ ನಮ್ಮಲ್ಲಿದೆ. ಆತ್ಮವಿಶ್ವಾಸದಿಂದ ಗ್ರಂಥಾಲಯವನ್ನು ಅನುಸಂಧಾನ ಮಾಡಿರಿ. ಇವತ್ತಿನ ಸಾಮಾಜಿಕ ಸಾಂಸ್ಕೃತಿಕ ರಾಜಕೀಯ, ವಿದ್ಯಮಾನಗಳನ್ನು ಗಮನಿಸುತ್ತಲೇ ನೀವು ನಿಮ್ಮ ಪೂರ್ವಗ್ರಹಗಳನ್ನು ಬದಿಗಿಟ್ಟು ಹೊಸ ಸಂಶೋಧನೆಗಾಗಿ ನಿಮ್ಮನ್ನು ನೀವು ತೆರೆದುಕೊಳ್ಳುವ ಅಗತ್ಯವಿದೆ ಎಂದು ಯುವ ಸಂಶೋಧಕರನ್ನು ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಉಪಸ್ಥಿತರಿದ್ದರು. ಪೀಠದ ಸಂಚಾಲಕರಾದ ಡಾ.ಶೈಲಜ ಇಂ. ಹಿರೇಮಠ ಅವರು ಪ್ರಾಸ್ತಾವಿಕ ನುಡಿದು, ಸ್ವಾಗತಿಸಿ ಶಂಬಾಜೋಶಿ ಅವರನ್ನು ಸಂಶೋಧಕರಿಗೆ ಪರಿಚಯಿಸಿದರು. ಡಾ.ಯರ್ರಿಸ್ವಾಮಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ. ಎಸ್. ಚಂದ್ರಶೇಖರ ಅವರು ಶಂಬಾಜೋಶಿಯವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಸಮಾವೇಶದ ಉದ್ಘಾಟನೆಗೆ ಚಾಲನೆ ನೀಡಿದರು. ಸಮಾವೇಶದಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಆಗಮಿಸಿದ ೩೨೦ ಸಂಶೋಧಕರು ಉಪಸ್ಥಿತರಿದ್ದರು.

ದಲಿತ ಅಧ್ಯಯನ ಪೀಠದಿಂದ ಸಂವಿಧಾನ ಮತ್ತು ಮಹಿಳೆ – ವಿಚಾರಸಂಕಿರಣ ೨೬-೨೭ ಡಿಸೆಂಬರ್ ೨೦೧೭ ಸಮಾರೋಪ ಸಮಾರಂಭ

ಮಹಿಳೆಯರು, ಅಲ್ಪಸಂಖ್ಯಾತರು, ಸಣ್ಣ ಸಂಖ್ಯೆಯಲ್ಲಿರುವ ಹಿಂದುಳಿದ ಜಾತಿಗಳು, ಬುಡಕಟ್ಟುಗಳು, ಸಂವಿಧಾನದ ಪರವಾಗಿ ಇದ್ದಾರೆ. ಶೇ.೩೦ರಷ್ಟು ಮೇಲ್ವರ್ಗದವರು, ಅಧಿಕಾರಸ್ಥರು, ಸಂವಿಧಾನ ನಿರ್ವಚಿಸುವ ಶಕ್ತಿಯುಳ್ಳವರು ಸಂವಿಧಾನವನ್ನು ವಿರೋಧಿಸುತ್ತಾರೆ. ಸಧ್ಯಕ್ಕೆ ಸಮಾಜದ ತಳಸ್ಥರಕ್ಕೆ ಸಂವಿಧಾನ ದೊಡ್ಡ ಆಧಾರಸ್ತಂಭವಾಗಿದೆ. ಮಹಿಳೆಯರನ್ನು ಬುಡಕಟ್ಟು ಮಹಿಳೆಯರು, ದಲಿತ ಮಹಿಳೆಯರು ಹೀಗೆ ಬಿಡಿ ಬಿಡಿಯಾಗಿ ನೋಡಬೇಕು. ತಳವರ್ಗಕ್ಕೆ ಸೇರಿದ ಮಹಿಳೆಯರಿಗೆ ಭದ್ರತೆಯಿಲ್ಲ. ಇದರ ಬಗ್ಗೆ ಎಲ್ಲಿಯೂ ಚರ್ಚೆ ನಡೆಯುತ್ತಿಲ್ಲ. ೨೦೦೦ದಿಂದ ಜಾರಿಗೆ ಬಂದ ಮಹಿಳೆಗೆ ತಂದೆಯ ಆಸ್ತಿಯಲ್ಲಿ ಸಮಭಾಗವು ೨೦೦೦ಕ್ಕಿಂತ ಹಿಂದಿನವರೆಗೆ ಅನ್ವಯವಾಗುವುದಿಲ್ಲ. ಇಲ್ಲಿಯೂ ಲಿಂಗ ತಾರತಮ್ಯ ಕೆಲಸ ಮಾಡುತ್ತಿದೆ. ಯಾವ ಪಕ್ಷಗಳಾಗಲಿ, ಪಕ್ಷಗಳ ತತ್ವಗಳಾಗಲಿ, ಮಹಿಳೆಗೆ ಸಮಾನ ಸ್ಥಾನ ನೀಡಿಲ್ಲ. ಈ ಕುರಿತು ಚರ್ಚೆಗಳು ನಡೆಯುವುದಿಲ್ಲ. ಸಂವಿಧಾನ ತನ್ನಷ್ಟಕ್ಕೆ ತಾನೇ ಚಲಿಸಿ ಮಹಿಳೆಯರನ್ನು ಉದ್ಧಾರ ಮಾಡುವುದಿಲ್ಲ. ಮಹಿಳೆ ಸ್ವತಃ ಸಂಘಟಿತಳಾಗಿ ಉದ್ಧಾರವಾಗಬೇಕು. ಆಸ್ತಿ, ಭೂಮಿ, ಆರ್ಥಿಕ ಪ್ರಶ್ನೆಗಳು, ಮಹಿಳೆಯನ್ನು ಈ ಸ್ಥಿತಿಗೆ ತಳ್ಳಿವೆ. ಮಹಿಳೆಯ ದುಡಿಮೆಗೆ ಆರ್ಥಿಕ ವ್ಯಾಖ್ಯಾನ ಇಲ್ಲ. ಆರ್ಥಿಕತೆಗೆ ಮಹಿಳೆಯ ಬಹಳ ದೊಡ್ಡ ಕೊಡುಗೆ ಇದೆ. ಮಹಿಳೆಯ ದುಡಿಮೆಯನ್ನು ಆರ್ಥಿಕ ಚಟುವಟಿಕೆಯೆಂದು ಪರಿಗಣಿಸಿಯೇ ಇಲ್ಲ. ಇವೆಲ್ಲವೂ ವಿವಾಹ ವಿಚ್ಛೇದನ ಬಿಗಿಗೊಳಿಸಲು ಕಾರಣವಾಗಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಮಹಿಳೆಯರಿಗೆ ರಾಜಕೀಯ ಶಿಕ್ಷಣದ ಕೊರತೆ ಇದೆ. ಸಂವಿಧಾನದ ಒಳ್ಳೆಯತನ ಅದನ್ನು ಕಾರ್ಯರೂಪಕ್ಕೆ ತರುವವರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪ್ರಾಧ್ಯಾಪಕರಾದ ಡಾ.ಎಂ.ಚಂದ್ರಪೂಜಾರಿ ಅವರು ಸಂವಿಧಾನ ಮತ್ತು ಮಹಿಳೆ ಕುರಿತು ಸಮಾರೋಪ ಭಾಷಣದಲ್ಲಿ ನುಡಿದರು.
ಕನ್ನಡ ವಿಶ್ವವಿದ್ಯಾಲಯ ದಲಿತ ಅಧ್ಯಯನ ಪೀಠವು ೨೬ರಿಂದ ೨೭ನೇ ಡಿಸೆಂಬರ್ ೨೦೧೭ರ ವರೆಗೆ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಸಂವಿಧಾನ ಮತ್ತು ಮಹಿಳೆ’ ವಿಷಯ ಕುರಿತು ೨ ದಿನಗಳ ವಿಚಾರಸಂಕಿರಣದಲ್ಲಿ ದಿನಾಂಕ ೨೭.೧೨.೨೦೧೭ರಂದು ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾರ್ಕ್ಸ್ ಮತ್ತು ಮಹಿಳೆ ಕುರಿತು ಮಾತನಾಡಿದ ಡಾ.ಜಿ. ರಾಮಕೃಷ್ಣ ಅವರು ಸಂವಿಧಾನ ಬದಲಾವಣೆ ಮಾಡಲು ಇಚ್ಛಿಸುವವರಿಗೆ ಬದಲಾವಣೆಗೂ ತಿದ್ದುಪಡಿಗೂ ಇರುವ ವ್ಯತ್ಯಾಸ ಗೊತ್ತಿಲ್ಲ. ಪ್ರಸ್ತುತ ನಾವು ಅರೆ ಊಳಿಗಮಾನ್ಯ ಹಾಗೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿದ್ದಿವೆ. ನಮ್ಮ ದೇಶದಲ್ಲಿ ಎಲ್ಲ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಉತ್ಪಾದನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯ ಮನೆಗೆಲಸದ ದುಡಿಮೆ ರಾಷ್ಟ್ರೀಯ ಉತ್ಪನ್ನಕ್ಕೆ ಸೇರುವುದಿಲ್ಲ. ಸೇರಿದರೆ ಮಾತ್ರ ಸಾಮಾಜಿಕ ಸಮಾನತೆ ಸಾಧ್ಯತೆ ವಿಶಿಷ್ಟವಾಗಿ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡುತ್ತ ಸಂವಿಧಾನ ಬದಲಿಸಬೇಕು ಎಂದು ಹೇಳುವವರೇ ತಮ್ಮ ಆಸ್ತಿಗೆ ಇದೇ ಸಂವಿಧಾನದಿಂದ ರಕ್ಷಣೆ ಪಡೆಯುತ್ತಾರೆ. ಪುರುಷನ ಚಹರೆಯಾಗಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ನಿಲ್ಲಬೇಕಾಗಿದೆ. ಚರಿತ್ರೆ ಬರೆಯುವ ಸಂದರ್ಭದಲ್ಲಿ ಮಹಿಳೆಯರನ್ನು ಕುರಿತು ಪೂರ್ವಗ್ರಹಗಳು ದಾಖಲಿಸಿದ ತಪ್ಪುಗಳನ್ನು ತಿದ್ದಿಕೊಳ್ಳುವ ಕಾಲದಲ್ಲಿ ನಾವಿದ್ದೇವೆ. ನಮ್ಮ ಮನಸ್ಸುಗಳು ಜಾತಿ ವರ್ಗಗಳಿಂದ ಕಟ್ಟಿಹಾಕಲ್ಪಟ್ಟಿವೆ. ಮಹಿಳೆಯರಿಗೆ ಇದರಿಂದ ಬಿಡಿಸಿಕೊಳ್ಳುವುದು ಇನ್ನು ಕಷ್ಟವಾಗಿದೆ. ಎಲ್ಲ ಕಾಲದೊಳಗೆ ಮಹಿಳೆಯರು ಬಯಸಿದ್ದೇನು? ಎಂಬುದಕ್ಕೆ ಇಂದಿಗೂ ಸ್ಪಷ್ಟತೆ ಸಿಗುತ್ತಿಲ್ಲ. ವ್ಯವಸ್ಥೆ ಬಯಸಿದ್ದನ್ನು ನಾವು ಒಪ್ಪಿಕೊಳ್ಳುತ್ತಿದ್ದೇವೆ. ಏಕಕಾಲದಲ್ಲಿ ಭಾರತವು, ಪುರಾಣ ಭಾರತ ಆಧುನಿಕ ಭಾರತವಾಗಿದೆ, ಅದರಲ್ಲಿ ನಾವು ಬದುಕುತ್ತಿದ್ದೇವೆ. ನಮ್ಮ ನಡಿಗೆಯನ್ನು ಸಂವಿಧಾನ ನಿಯಂತ್ರಿಸುತ್ತಿಲ್ಲ. ಪುರಾಣ ಭಾರತ ನಿಯಂತ್ರಿಸುತ್ತಿದೆ. ನಾವು ಸಂಕೀರ್ಣ ಸಂಕಟದ ಕಾಲದಲ್ಲಿದ್ದಿವೆ ಎಂದು ನುಡಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪ್ರಶ್ನೆಗಳನ್ನು ಕೇಳಿ ಚರ್ಚೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಸಂಶೋಧನಾ ವಿದ್ಯಾರ್ಥಿನಿ ಕೆ. ರೇಣುಕಾ ನಿರೂಪಿಸಿ, ಸ್ವಾಗತಿಸಿದರು. ಪೀಠದ ಸಂಚಾಲಕರಾದ ಡಾ. ಅಮರೇಶ ನುಗಡೋಣಿ ಅವರು ವಂದಿಸಿದರು.
ಸಮಾರೋಪಕ್ಕೂ ಮೊದಲು ಬುದ್ಧ ಮತ್ತು ಮಹಿಳೆ ಕುರಿತು ವೆಂಕಟಗಿರಿ ದಳವಾಯಿ ಅವರು, ಬಸವಣ್ಣ ಮತ್ತು ಮಹಿಳೆ ಕುರಿತು ಸಬಿತಾ ಬನ್ನಾಡಿ ಅವರು, ಗಾಂಧಿ ಮತ್ತು ಮಹಿಳೆ ಕುರಿತು ಎಂ.ಎಸ್. ಆಶಾದೇವಿ ಅವರು, ಅಂಬೇಡ್ಕರ್ ಮತ್ತು ಮಹಿಳೆ ಕುರಿತು ಎನ್. ಗಾಯತ್ರಿ ಅವರು ಪ್ರಬಂಧಗಳನ್ನು ಮಂಡಿಸಿದ್ದರು.

26023852_10208996861233790_3168502132949394737_o26172539_10208996861273791_1827047342255021213_o

ದಲಿತ ಅಧ್ಯಯನ ಪೀಠದಿಂದ ಸಂವಿಧಾನ ಮತ್ತು ಮಹಿಳೆ – ವಿಚಾರಸಂಕಿರಣ ೨೬-೨೭ ಡಿಸೆಂಬರ್ ೨೦೧೭ ಉದ್ಘಾಟನೆ

ಬಾಲ್ಯವಿವಾಹ, ವಿಧವೆಯರ ಸಮಸ್ಯೆ, ವರದಕ್ಷಿಣೆ ಸಮಸ್ಯೆ ಹಾಗೂ ೩ ಸಲ ಹೇಳುವ ತಲಾಖ್ ಇವೆಲ್ಲ ಸಮಾಜದ ಮಗ್ಗುಲ ಮುಳ್ಳುಗಳಾಗಿ ಪರಿಣಮಿಸಿವೆ ಎಂದು ಖ್ಯಾತ ಚಿಂತಕರಾದ ಡಾ.ಸಿ. ವೀರಣ್ಣ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯ ದಲಿತ ಅಧ್ಯಯನ ಪೀಠವು ೨೬ರಿಂದ ೨೭ನೇ ಡಿಸೆಂಬರ್ ೨೦೧೭ರ ವರೆಗೆ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಸಂವಿಧಾನ ಮತ್ತು ಮಹಿಳೆ’ ವಿಷಯ ಕುರಿತು ೨ ದಿನಗಳ ವಿಚಾರಸಂಕಿರಣಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನ ಮಹಿಳೆಗೆ ಎಲ್ಲ ಕೊಟ್ಟಿದೆ, ಇನ್ನೇನೂ ಹೊಸದಾಗಿ ಕೊಡಬೇಕಾಗಿಲ್ಲ. ಎಲ್ಲ ರೀತಿಯ ಸ್ವಾತಂತ್ರ್ಯದಿಂದ ಮಹಿಳೆ ಬದುಕುತ್ತಿದ್ದಾಳೆ ಎಂದು ಇಂದು ಭಾವಿಸಲಾಗಿದೆ. ರೂಢಿಮೂಲವಾಗಿ ಬಂದಿರುವ ತಿಳವಳಿಕೆ ಬಿಟ್ಟು ಮಹಿಳೆಯರನ್ನು ಹೊಸ ದೃಷ್ಟಿಕೋನದಿಂದ ನೋಡುವ ಮನಃಸ್ಥಿತಿ ಬರುವುದು ಕಷ್ಟದಾಯಕವಾಗಿದೆ. ಸಮಾನತೆ, ಸ್ವಾತಂತ್ರ್ಯದ ಘೋಷಣೆಯಿಂದ ಎಲ್ಲ ದಕ್ಕುವುದಿಲ್ಲ. ಧರ್ಮ ನಮ್ಮನ್ನು ಆಳುವ ಪ್ರಭುವಾಗಿ ನಿರ್ದೇಶಿಸಬಾರದು. ಅಂಬೇಡ್ಕರ್ ಹೇಳಿದಂತೆ ಧರ್ಮ ಮನುಷ್ಯ ಸೃಷ್ಟಿಯ ಒಂದು ಭಾಗ ಮಾತ್ರವಾಗಿದೆ. ೪ ಗೋಡೆಗಳ ನಡುವೆ ಇರಬೇಕೆ ವಿನಃ ಸಮಾಜದ ಸ್ವಾಸ್ಥ್ಯವನ್ನು ಕಲಕಬಾರದು ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಮನುಷ್ಯರನ್ನು ಮಾನವೀಯತೆಯಿಂದ ಕಾಣದಿದ್ದರೆ ಅದಕ್ಕೆ ಪಾರ್ಶ್ವವಾಯ ಬಡಿದಿದೆ ಎಂದೇ ಅರ್ಥ. ಯಾವ ಸಮಾಜವೂ ಮಹಿಳೆಗೆ ಸಂಪೂರ್ಣವಾಗಿ ಸ್ವಾತಂತ್ರ್ಯ ಕೊಟ್ಟಿಲ್ಲ. ಬ್ರಿಟಿಷರಿಂದ ಮಹಿಳೆಯರಲ್ಲದೇ ಶೂದ್ರರಿಗೂ ಶಿಕ್ಷಣದ ಅವಕಾಶ ದೊರೆಯಿತು. ನನ್ನ ಅಸ್ತಿತ್ವ ನಾನು ನೋಡಿಕೊಳ್ಳುತ್ತೇನೆ ಎಂದು ಹೆಣ್ಣು ತಾನಾಗಿಯೇ ಕೊಡವಿಕೊಂಡು ಎದ್ದುನಿಲ್ಲಬೇಕು. ಹಾಗೆಯೇ ನಮ್ಮ ಮನಸಿನ ಆಲೋಚನೆಗಳು ಹೊಸದಾಗಿ ಸೃಷ್ಟಿಯಾಗಬೇಕು. ಆಲೋಚನ ವಿಧಾನಗಳಲ್ಲಿ ಸಾಂಸ್ಕೃತಿಕ ಕ್ರಾಂತಿ ಆಗಬೇಕು. ಅನಿಷ್ಟ ಸಂಪ್ರದಾಯಗಳನ್ನು ನಮ್ಮ ರಕ್ತದಿಂದಲೇ ಓಡಿಸುವ ಕೆಲಸವಾಗಬೇಕು. ಆದರೆ ವ್ಯವಸ್ಥೆಯಲ್ಲಿ ಅಸ್ಪೃಶ್ಯತೆಯನ್ನು ಪೋಷಿಸಲು ನೀರೆರೆಯಲಾಗುತ್ತಿದೆ ಎಂದು ನೊಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡಿ ಸಂವಿಧಾನ ಬದಲಿಸುವ ಪ್ರಜಾಪ್ರಭುತ್ವ ವಿರೋಧಿ ಮಾತುಗಳು ಇಂದು ಕೇಳಿಬರುತ್ತಿವೆ. ಸಂವಿಧಾನದ ಕರ್ತೃವನ್ನು ಅಪಮಾನಿಸುವ ಕೆಲಸವಾಗುತ್ತಿದೆ. ನಮ್ಮಲ್ಲಿ ಜಾತ್ಯಾತೀತರ ದೊಡ್ಡ ಪರಂಪರೆಯಿದೆ. ಜಾತ್ಯಾತೀತ ಬೀಜ ಬಿತ್ತಿ ನೀರೆರೆದ ದೊಡ್ಡ ಶಕ್ತಿಗಳು ಚರಿತ್ರೆಯಲ್ಲಿವೆ. ಬದಾಮಿಯ ಗುಹೆಗಳು ಧರ್ಮ ಸಮನ್ವಯತೆಯನ್ನು ಸಾರುತ್ತಿವೆ. ಪಂಪ, ಬುದ್ಧ, ಬಸವ, ಗಾಂಧಿ, ಕುವೆಂಪು, ಬೇಂದ್ರೆ ಸಾಹಿತ್ಯದ ಮೂಲಕ ಜಾತ್ಯಾತೀತ ಬೀಜವನ್ನು ಬಿತ್ತಿದ್ದಿದ್ದಾರೆ. ಜಾತಿ ಹೆಸರಿನಲ್ಲಿರುವ ಸಾಂಸ್ಕೃತಿಕ ನಾಯಕರೆಲ್ಲರೂ ಜಾತ್ಯಾತೀತರಾಗಿದ್ದಾರೆ. ಇವರೆಲ್ಲರೂ ವೈಚಾರಿಕತೆಯನ್ನು ಕಟ್ಟಿಕೊಟ್ಟಿದ್ದಾರೆ. ಇವರೆಲ್ಲ ನಮಗೆ ಅವ್ವ, ಅಪ್ಪ ಆಗಿ ಮಾರ್ಗದರ್ಶಕರಾಗುತ್ತಾರೆ. ನಾವು ಐಕ್ಯತೆಯ ಮರವನ್ನು ಸಂವಿಧಾನದ ಎದುರಿಗಿಟ್ಟುಕೊಂಡು ಕಾಪಾಡಬೇಕಿದೆ. ಕಾಲದ ಸಾಮಾಜಿಕ ಸತ್ಯಗಳನ್ನು ಹೇಗೆ ಹೇಳಬೇಕೆಂಬ ಆತಂಕವಿದೆ. ಜಾತ್ಯಾತೀತೆಯ ಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕಾಗಿದೆ. ಎಲ್ಲ ಕಾಲದಲ್ಲಿಯೂ ಶೂದ್ರರ ಮೇಲೆ ಬೌದ್ಧಿಕ ಸವಾರಿ ನಡೆಯುತ್ತಲೇ ಇದೆ. ನಾವೆಲ್ಲರೂ ಕಳೆದುಹೋಗದಿರಲು ಅಂಬೇಡ್ಕರ್ ಗಾಂಧಿ, ಬುದ್ಧ, ಬಸವ ಮೊದಲಾದವರು ಕಾರಣರಾಗಿದ್ದಾರೆ ಎಂದು ಕುಲಪತಿಯವರು ತಿಳಿಸಿದರು.
ಧರ್ಮವನ್ನು ಕಾಪಾಡುವವರು ಮಹಿಳೆಯರು ಆಗಿದ್ದಾರೆ. ಆದರೆ ಅದೇ ಧರ್ಮ ಮಹಿಳೆಯರನ್ನು ಕೊಲ್ಲುತ್ತಿದೆ ಎಂದು ನಮಗೆ ಏಕೆ ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಮೌಖಿಕ ಪರಂಪರೆಯಲ್ಲಿರುವ ಸಾಂಸ್ಕೃತಿಕ ಪರಂಪರೆ ಮಹಿಳೆಯರನ್ನು ನಿಯಂತ್ರಿಸುತ್ತದೆ.(ಉದಾಃ ಎಷ್ಟು ಕಲಿತರೂ ಹೆಣ್ಣು ಪಾತ್ರೆ ತೊಳೆಯುವುದು ತಪ್ಪಂಗಿಲ್ಲ) ಆದ್ದರಿಂದ ಅಧಿಕಾರದ ಕುದುರೆ ಸವಾರಿ ಮಾಡಲು ಮಹಿಳೆಯರು ಮೂಲಭೂತ ಅಕ್ಷರಜ್ಞಾನ ಹೊಂದಬೇಕು. ಮಹಿಳೆಯರ ಬಿಡುಗಡೆ ಮಹಿಳೆಯರಿಂದಲೇ ಆಗಬೇಕು ಎಂದು ರಮಾಬಾಯಿ, ಕಸ್ತೂರಬಾ, ಸಾವಿತ್ರಿಬಾಯಿ ಪುಲೆ ಇವರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸ್ವಾಗತಿಸಿ, ಪರಿಚಯಿಸಿದರು. ಪೀಠದ ಸಂಚಾಲಕರಾದ ಡಾ.ಅಮರೇಶ ನುಗಡೋಣಿ ಅವರು ಪ್ರಾಸ್ತಾವಿಕ ನುಡಿದರು. ಸಂಶೋಧನ ವಿದ್ಯಾರ್ಥಿನಿ ಅರ್ಚನ ನಿರೂಪಿಸಿ, ವಂದಿಸಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆರಂಭದಲ್ಲಿ ವೇದಿಕೆಯ ಮೇಲಿದ್ದ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ೪೦೦ ಬಾಲಕಿಯರು ಸಂಶೋಧನಾ ವಿದ್ಯಾರ್ಥಿಗಳು, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಅಲ್ಲಮಪ್ರಭು ಬೆಟ್ಟದೂರ ಅವರು, ಡೀನರು, ಬೋಧಕರು, ಆಡಳಿತ ವರ್ಗದವರು ಉಪಸ್ಥಿತರಿದ್ದರು.
ಉದ್ಘಾಟನೆಯ ನಂತರ ಎಚ್.ಎಸ್.ಅನುಪಮಾ, ಸಾವಿತ್ರಿಬಾಯಿ ಫುಲೆ ಅವರನ್ನು, ಎಚ್.ಟಿ.ಪೋತೆ ಅವರು ರಮಾಬಾಯಿ ಅವರನ್ನು, ಟಿ.ಸಿ.ಪೂರ್ಣಿಮಾ ಅವರು ಕಸ್ತೂರಿಬಾ ಅವರನ್ನು ಕುರಿತು ಗೋಷ್ಠಿಯಲ್ಲಿ ಪ್ರಬಂಧಗಳನ್ನು ಮಂಡಿಸಿದರು

26060293_10208984789332000_2298794822815507092_o26114345_10208984790252023_7013010542400795504_o26116205_10208984791012042_1763684746491753900_o

ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೆ  ಶಿಬಿರ : ೨೧-೨೭ ಡಿಸೆಂಬರ್ ೨೦೧೭ ಉದ್ಘಾಟನೆ 

ಸಂಕುಚಿತ ದೃಷ್ಟಿಕೋನ ಕಳೆದುಕೊಂಡು ಬಹುತ್ವವನ್ನು ತುಂಬಿಕೊಳ್ಳುವ ವೇದಿಕೆ ಇದಾಗಿದೆ. ಭೌತಿಕ ಸೌಲಭ್ಯಗಳೊಂದಿಗೆ ಬೌದ್ಧಿಕ ಆಹಾರವನ್ನು ಕೊಡುವ ಕಾಳಜಿ ಕನ್ನಡ ವಿಶ್ವವಿದ್ಯಾಲಯ ತೋರಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಸಬೀಹಾ ಅವರು ಪದವಿ ಪೂರ್ವ ಶಿಕ್ಷಣ ಕಲಿಯುತ್ತಿರುವ ಶಿಬಿರದ ೫೦೦ ಬಾಲಕಿಯರನ್ನು ಕುರಿತು ಹೇಳಿದರು.
ಕನ್ನಡ ವಿಶ್ವವಿದ್ಯಾಲಯ, ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಮತ್ತು ದುದ್ದುಪೂಡಿ ಬಾಲಕಿಯರ ಪದವಿಪೂರ್ವ ಕಾಲೇಜು ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ ೨೧.೧೨.೨೦೧೭ರಿಂದ ೨೭.೧೨.೨೦೧೭ರ ವರೆಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಬಾಲಕಿಯರ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಮಂಟಪ ಸಭಾಂಗಣದಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಉದ್ಘಾಟನಾ ಭಾಷಣ ಮಾಡಿದರು.
ನಿಮ್ಮ ಸಾಮರ್ಥ್ಯ ಆಸಕ್ತಿಗಳೊಂದಿಗೆ ಅವಕಾಶಗಳನ್ನು ಸದ್ಭಳಿಕೆ ಮಾಡಿಕೊಳ್ಳಲು ೭ ದಿನಗಳ ಶಿಬಿರ ಬಂಗಾರದ ದಿನಗಳಾಗಿ ಮುಂದೆ ನಿಮ್ಮ ಬದುಕಿನಲ್ಲಿ ಅವಿಸ್ಮರಣೀಯವಾಗಲಿದೆ ಎಂದು ಹೇಳಿದರು. ಎನ್.ಎಸ್.ಎಸ್.ಗಾಗಿ ಅವಿರತವಾಗಿ ದುಡಿದ ದಿಲ್‌ಶಾದ್ ಅವರನ್ನು ಸ್ಮರಿಸಿದರು.
ಗೌರವ ಅತಿಥಿಗಳಾಗಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಬೌದ್ಧಿಕ, ಶೈಕ್ಷಣಿಕ ಅನುಸಂಧಾನದ ವಿಶೇಷ ಶಿಬಿರವಾಗಿ ನಿಮ್ಮ ಬದುಕಿನಲ್ಲಿ ಪರಿಣಮಿಸಲಿದೆ. ನಿರ್ಭಯ ಪ್ರಕರಣದಿಂದ ಇತ್ತೀಚಿನ ದಾನಮ್ಮ ಪ್ರಕರಣಗಳ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಿಮ್ಮಲ್ಲಿ ಪ್ರಶ್ನೆಗಳು ಏಳಬೇಕು. ಶಿಬಿರವು ನಿಮಗೆ ಬೌದ್ಧಿಕ ಕಸುವನ್ನು ಕೊಡಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ ಎನ್ನುವ ಮಾತುಗಳಿಂದ ಬುದ್ಧಿ ದೇಹದ ಯಾವ ಭಾಗದಲ್ಲಿ ಇರುತ್ತದೆ ಎಂದು ವೈಜ್ಞಾನಿಕವಾಗಿ ಗೊತ್ತಾಗಬೇಕಿದೆ. ಸಣ್ಣ ತರ್ಕದ ಮೂಲಕ ವ್ಯವಸ್ಥೆಯ ಸುಳ್ಳುಗಳನ್ನು ಪ್ರಶ್ನಿಸುವ ವೈಚಾರಿಕ ಜ್ಞಾನವನ್ನು ವಿದ್ಯಾರ್ಥಿನಿಯರು ಹೊಂದಬೇಕು. ನಮಗೂ ಅವಕಾಶ ಕೊಡಿ ಎಂದು ಹಿಂದೆ ಕೇಳುತ್ತಿದ್ದೇವು. ಆದರೆ ಈಗ ಅವಕಾಶಗಳು ನಮ್ಮ ಕೈಯಲ್ಲಿವೆ. ಬಳಸಿಕೊಳ್ಳಬೇಕಷ್ಟೆ ಎಂದು ಹೇಳಿದರು.
೧೦ ವರ್ಷಗಳ ಹಿಂದೆ ಹೊತ್ತು ಮುಳುಗೊದರೊಳಗೆ ಬಂದು ಬಿಡಿ ಮನಿಗೆ ಎಂದು ಹಿರಿಯರು ಹೆಣ್ಣುಮಕ್ಕಳಿಗೆ ಹೇಳುತ್ತಿದ್ದರು. ಇವತ್ತು ಹಗಲಿನಲ್ಲಿ ಒಬ್ಬೊಬ್ಬರೇ ಅಡ್ಡಾಡಬ್ಯಾಡ್ರಿ ನಾಕು ಮಂದಿಗೂಡ ಓಡಾಡ್ರಿ ಎಂದು ಹೇಳುವ ಸಂಕಟದ ದಿನಗಳಲ್ಲಿ ನಾವಿದ್ದೇವೆ. ವಾಸ್ತವ ಎಂದರೆ ನಮ್ಮತನ ಉಳಿಸಿಕೊಂಡು ಬದುಕಲಾರದ ಸಂಕಷ್ಟದ ಸ್ಥಿತಿಯಲ್ಲಿದ್ದೇವೆ. ನಮ್ಮ ಬದುಕನ್ನು ಒಂದು ಕಡೆ ಆಧುನಿಕತೆ ನಿರ್ದೇಶಿಸಿದರೆ ಇನ್ನೊಂದು ಕಡೆ ಮೌಢ್ಯತೆ ನಮ್ಮನ್ನು ನಿರ್ದೇಶಿಸುತ್ತದೆ. ಅಭಿಪ್ರಾಯ ವ್ಯಕ್ತಪಡಿಸಲಾಗದ ಸಮಾಜದೊಳಗೆ, ಸಾಮಾಜಿಕ ಶಿಕ್ಷಣ ಪಡೆದು ಮುಂದುವರೆಯುತ್ತಿದ್ದೇವೆ. ಆಧುನಿಕ ಶಿಕ್ಷಣ ನಮ್ಮನ್ನು ಕೈ ಹಿಡಿಯಲಾರದ ಹೊತ್ತಿನಲ್ಲಿ ನಾವಿದ್ದೇವೆ ಎಂದು ಸಂಕಟದಿಂದ ನುಡಿದರು.
ವಿದ್ಯೆ, ಹುದ್ದೆ, ಅಪಮಾನಿಸುತ್ತ ಸಂವಿಧಾನದ ಹಕ್ಕು ಸ್ವಾತಂತ್ರ್ಯ ಹಕ್ಕು ಸೌಲಭ್ಯಗಳನ್ನು ಅನುಭವಿಸಲಾಗದ ಇಕ್ಕಟ್ಟಿನಲ್ಲಿ ನಾವಿದ್ದೇವೆ. ನಾವೆಲ್ಲ ಮಹಿಳೆಯರು ಒಂದೆ ಎಂದು ಹೇಳುವಾಗ ಅಸಹಿಷ್ಣುತೆ ಯಾಕೆ ಹುಟ್ಟುತ್ತದೆ? ಸಹಿಸುವ ಗುಣ ಬರಲಾರದೆ ಒಂದಾಗಲು ಸಾಧ್ಯವಿಲ್ಲ. ಸಹನೆ ಎನ್.ಎಸ್.ಎಸ್.ನ ಧ್ಯೇಯ ವಾಕ್ಯವಾಗಿದೆ. ಹುಟ್ಟುವಾಗಲೇ ಸಮಾಜ ನಮಗೆ ಕಸಪೊರಕೆಯನ್ನು ಕೊಟ್ಟಿದೆ. ಲೇಖನಿ ಕೊಟ್ಟಿಲ್ಲ. ಚರಿತ್ರೆಯ ವಾಸ್ತವವನ್ನು ನಾವು ನಿಮಗೆ ಹೇಳಿಕೊಡಲೇ ಬೇಕಾಗಿದೆ. ಮಿಥ್ಯಗಳನ್ನು ಒಡೆಯುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಮಾಡುತ್ತಿದೆ. ನೀವೆಲ್ಲ ಈ ಶಿಬಿರದಿಂದ ಹೋಗುವಾಗ ಜವಾಬ್ದಾರಿಯುತ ನಾಗರೀಕರಾಗಿ ಬೌದ್ಧಿಕತೆಯನ್ನು ಪಡೆದುಕೊಂಡು ಹೋಗಬೇಕು ಎಂದು ತಿಳಿಸಿದರು.
ಭಾಷೆಯನ್ನು ಬಣ್ಣ, ಲಿಂಗ ಆಳುತ್ತಿದೆ. ಮಾರುಕಟ್ಟೆ, ಸಂಪ್ರದಾಯಗಳೊಂದಿಗೆ ಪೈಪೋಟಿ ಮಾಡಿ ಆಧುನಿಕ ಬಿಕ್ಕಟ್ಟು ಪರಂಪರೆಯ ಬಿಕ್ಕಟ್ಟುಗಳು ಎರಡು ಸೇರಿ ನಮ್ಮನ್ನು ಉಸಿರು ಕಟ್ಟಿಸುತ್ತಿವೆ. ವಿದ್ಯಾರ್ಥಿನಿಯರಾದ ನೀವು ಸಣ್ಣ ತರ್ಕದ ಬೀಜ ಬಿತ್ತಿಕೊಳ್ಳಬೇಕು. ಬಂಡವಾಳಶಾಹಿಗಳು ನಮ್ಮ ಒಳಗಿನ ಅಂತಃಸತ್ವವನ್ನು ಕಳೆಯುವ ಕೆಲಸವನ್ನು ಮಾಡುತ್ತಿವೆ. ಆದ್ದರಿಂದ ನೀವು ಜ್ಞಾನಮುಖಿಯಾಗಿ ಹೊರಡಬೇಕು. ಆ ಮೂಲಕ ಜಗತ್ತನ್ನು ಅನುಸಂಧಾನ ಮಾಡಬೇಕು ಎಂದು ಪದವಿಪೂರ್ವ ಬಾಲಕಿಯರಿಗೆ ತಿಳುವಳಿಕೆ ನೀಡಿದರು.
ವೇದಿಕೆಯಲ್ಲಿ ದುದ್ದುಪೂಡಿ ಮಹಿಳಾ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಆರ್. ಪಂಪಾಪತಿ ಪಾಟೀಲ್ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಕನ್ನಡ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಡಾ.ಶಿವಾನಂದ ವಿರಕ್ತಮಠ ಅವರು ಸ್ವಾಗತಿಸಿದರು. ಸಂಯೋಜನಾಧಿಕಾರಿಗಳಾದ ಕಲಬುರಗಿ ವಿಭಾಗ ಪದವಿಪೂರ್ವ ಶಿಕ್ಷಣ ಇಲಾಖೆಯ ಡಾ.ಎಸ್.ಶಿವರಾಜ್ ಪ್ರಾಸ್ತಾವಿಕ ನುಡಿದರು. ಗೌರವ ಅತಿಥಿಗಳಾದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀ ಆರ್.ಸಿ. ಪಾಟೀಲ್ ವಂದಿಸಿದರು. ಪಿಡಿಎಫ್ ವಿದ್ಯಾರ್ಥಿ ಡಾ.ವೀರೇಶ ಜಾನೇಕಲ್ ನಿರೂಪಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಬಿರದ ಶಾಂತಿಪ್ರಿಯ ಮತ್ತು ತಂಡದವರು ಮಹಿಳಾ ಗೀತೆ ಮತ್ತು ಎನ್‌ಎಸ್‌ಎಸ್ ಗೀತೆ ಹಾಡಿದರು. ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭೂಮಿಗೌಡ ಅವರು, ಪದವಿ ಪೂರ್ವ ಶಿಕ್ಷಣದ ಅಧ್ಯಾಪಕರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲ ಗಣ್ಯರು ತಮ್ಮ ಮಾತುಗಳಲ್ಲಿ, ಅನೇಕ ಆತಂಕಗಳ ನಡೆಯುವ ಅಧ್ಯಾಪಕರ ಮೇಲೆ, ಸಂಘಟನಾಕಾರರ ಮೇಲೆ ವಿಶ್ವಾಸವಿಟ್ಟು ೭ ದಿನಗಳ ಶಿಬಿರಕ್ಕೆ ಬಾಲಕಿಯರನ್ನು ಕಳುಹಿಸಿದ ಪೋಷಕರು ಮತ್ತು ತಂದೆತಾಯಿಗಳನ್ನು ಸ್ಮರಿಸಿದರು.

 

ವಾಲ್ಮೀಕಿ ಅಧ್ಯಯನ ಪೀಠ ಎಲ್.ಜಿ. ಹಾವನೂರ ವರದಿ ಮತ್ತು ಪ್ರಸ್ತುತ ಕರ್ನಾಟಕ ವಿಚಾರಸಂಕಿರಣದ ಉದ್ಘಾಟನೆ

ಬೇಕೋ ಬೇಡವೋ ಆದರೆ ಭಾರತ ದೇಶದಲ್ಲಿ ನಾವು ಜಾತಿಯೊಂದಿಗೆ ಹುಟ್ಟುತ್ತಿದ್ದೇವೆ. ಇದು ಈ ದೇಶದ ವಾಸ್ತವ ಎಂದು ಮಧ್ಯಪ್ರದೇಶದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಅಮರಕಂಟಕದ ಕುಲಪತಿಯವರಾದ ಡಾ.ತೇಜಸ್ವಿ ಕಟ್ಟಿಮನಿ ಅವರು ನುಡಿದರು.
ಅದ್ಭುತ ಓದುಗರು, ಅದ್ಭುತ ನೆನಪಿನ ಶಕ್ತಿ ಹಾಗೂ ಅತ್ಯದ್ಭುತ ಅಂಬೇಡ್ಕರ್ ಕುರಿತ ಅಧ್ಯಯನ ಹಾವನೂರ ಅವರದಾಗಿತ್ತು. ಅವರು ತಳವರ್ಗಗಳ ಆರ್ಥಿಕ ಸಾಮಾಜಿಕ ಧಾರ್ಮಿಕ ಸ್ಥಿತಿಗಳನ್ನು ಬಹಳ ಚನ್ನಾಗಿ ಅರ್ಥಮಾಡಿ ಕೊಂಡಿದ್ದರು. ನಾನು ಇಡೀ ಕರ್ನಾಟಕ ಹಿಂದುಳಿದ ವರ್ಗಗಳ ನಾಯಕ. ನಾನು ವಾಲ್ಮೀಕಿ ಸಮಾಜಕ್ಕೆ ಮಾತ್ರ ಸೀಮಿತ ಅಲ್ಲ ಎಂದು ಹೇಳಿಕೊಂಡಿದ್ದಾರೆ. ನಂತರ ಮುಂದಿನ ದಿನಗಳಲ್ಲಿ ಇದು ನನ್ನ ಭ್ರಮೆ ಆಗಿತ್ತು ಎಂದೂ ಸಹ ಹೇಳಿಕೊಂಡಿದ್ದಾರೆ ಎಂದು ಪ್ರೊ. ತೇಜಸ್ವಿ ತಿಳಿಸಿದರು. ಪೋಸ್ಟ್ ಹಾವನೂರ ರಿಪೋರ್ಟ್ (Post Havanoora Report)ಅನ್ನು ಎಲ್ಲರೂ ಅಧ್ಯಯನ ಮಾಡಬೇಕು. ಈ ವರದಿಯ ಅಧ್ಯಯನದಿಂದ ಅನೇಕರು ಉನ್ನತ ಹುದ್ದೆಗೆ ಹೋಗಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗವು ಈ ವರದಿಯನ್ನು ಕೈಗೆತ್ತಿಕೊಳ್ಳಬೇಕು. ಹಾವನೂರ ವರದಿಯನ್ನು ದೇಶ ವಿದೇಶಗಳಲ್ಲಿ ಅಧ್ಯಯನ ಮಾಡಿದ್ದಾರೆ. ವಾಲ್ಮೀಕಿ ಪೀಠವು ಈ ಅಧ್ಯಯನಗಳನ್ನು ಸಂಗ್ರಹಿಸಬೇಕು ಇದೆಲ್ಲ ಡಿಜಿಟಲೈಸೇಷನ್ ಆಗಬೇಕು. ಬುಡಕಟ್ಟಿನವರ ಜ್ಞಾನವನ್ನು ಪೀಠವು ದಾಖಲಿಸಬೇಕು. ಆಯಾ ಧರ್ಮದವರೆ ಆ ಧರ್ಮದ ಕುರಿತು ಮಾತನಾಡಬೇಕು ಎನ್ನುವ ದುರಂತವನ್ನು ತಪ್ಪಿಸಬೇಕು ಎಂದರು. ಇಡೀ ರಾಜ್ಯ ಕನ್ನಡ ನೆಲವನ್ನು ಹೊಸ ರೀತಿಯಲ್ಲಿ ವಿಚಾರ ಮಾಡುವ ಒತ್ತಡವನ್ನು ಹಾವನೂರ ವರದಿಯು ಕರ್ನಾಟಕದಲ್ಲಿ ತಂದಿತು ಎಂದು ತಮ್ಮ ಆಶಯ ನುಡಿಯ ಮುಕ್ತಾಯದಲ್ಲಿ ತಿಳಿಸಿದರು.
ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಕೆ.ಆರ್.ರಮೇಶ ಕುಮಾರ್ ಅವರು ಉದ್ಘಾಟನೆಯ ಮಾತಗಳನ್ನಾಡುತ್ತ ಹಾವನೂರ ಮತ್ತು ದೇವರಾಜ ಅರಸು ಇಬ್ಬರು ಸಂಕೇತಗಳು. ಯಾವ ಅಸಮಾಧಾನ ಆಕ್ರೋಶಗಳು ತುಂಬಿ ಹೊರಗೆ ಬರಲು ತವಕಿಸುತ್ತಿದ್ದವು ಅವು ವರದಿಯ ರೂಪದಲ್ಲಿ ಹೊರಬಂದವು. ಭದ್ರ ಬುನಾದಿಯ ಮೇಲೆ ಇದ್ದ ಅಸಮಾನತೆಯ ಗೋಡೆಗಳನ್ನು ಕೆಡವಿ ಕಟ್ಟುವ ಕೆಲಸಕ್ಕೆ ಹಾವನೂರ ಕೈ ಹಾಕುತ್ತಾರೆ. ಕಾಂಗ್ರೆಸ್ ವಿಭಜನೆ ಆದಾಗಲೇ ದೇವರಾಜು ಅರಸು ಮತ್ತು ಹಾವನೂರರ ಸಂಬಂಧ ಆರಂಭವಾಗಿತ್ತು ಎಂದು ತಿಳಿಸಿದರು.
ನೊಂದವರಿಗೆ ಶೋಷಿತರಿಗೆ ಸಂಘಟನೆ ಮಾಡುವುದು ಬಹಳ ಕಷ್ಟದ ಕೆಲಸ. ಪ್ರಜ್ಞೆ ಸ್ವಾಭಿಮಾನ ಇದ್ದವರಿಗೆ ಅಂಬೇಡ್ಕರ್ ಮತ್ತು ಹಾವನೂರ ಅವರನ್ನು ಮರೆಯಲು ಆಗುವುದಿಲ್ಲ. ಈ ವರದಿಯು ಹಿಂದುಳಿದವರಿಗೆ ಮಾತ್ರ ಅಲ್ಲ ಬೇರೆ ವರ್ಗದವರಿಗೂ ಸಹಾಯ ಮಾಡಿದೆ. ವರದಿಯ ನಂತರ ಹಿಂದುಳಿದವರು ಎಂದು ಹೇಳಿಕೊಳ್ಳುವವರ ಹೊಸಯುಗ ಆರಂಭವಾಯಿತು. ಜಾತಿ ಸಂಘಟನೆ ಮಾಡಿ ಸಾಧಕರನ್ನು ಜಾತಿಯ ಜೈಲಿನೊಳಗೆ ಹಾಕಿ ಬಂಧಿಸಿದ್ದೇವೆ ಎಂದು ಬಸವೇಶ್ವರ ಅಂಬೇಡ್ಕರ, ಟಿಪ್ಪು, ಹಾವನೂರ, ವಾಲ್ಮೀಕಿ ಮೊದಲಾದವರನ್ನು ಉದಾಹರಿಸಿದರು.
ವರದಿಗಳನ್ನು ವಿರೋಧಿಸಿದವರು ಯಾರೂ ಸರಿಯಾಗಿ ವರದಿಗಳನ್ನು ಓದಿರಲಿಲ್ಲ. ಅರಸು ಹಾವನೂರ ಅವರ ಶ್ರಮ ಶಾಸನಬದ್ಧವಾಗಿ ಅನುಷ್ಠಾನ ಆಗುತ್ತಿದೆ. ಆದರೆ ಮಾನಸಿಕವಾಗಿ ಪರಿವರ್ತನೆ ತರುವಲ್ಲಿ ಯಶಸ್ವಿಯಾಗಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.
ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಎಲ್.ಜಿ. ಹಾವನೂರ ಅವರ ಎಲ್ಲ ವರದಿಗಳನ್ನು ಕನ್ನಡ ವಿಶ್ವವಿದ್ಯಾಲಯ ಪ್ರಕಟಮಾಡುತ್ತದೆ ಎಂದು ವೇದಿಕೆಯಲ್ಲಿ ಹೇಳಿದರು. ಕನ್ನಡ ವಿಶ್ವವಿದ್ಯಾಲಯದ ಎಲ್ಲ ಕಾರ್ಯಕ್ರಮಗಳು ವಿದ್ಯಾರ್ಥಿ ಕೇಂದ್ರಿಕೃತವಾಗಿರುತ್ತವೆ. ನೋವು ಇಲ್ಲದ ಕನಸುಗಳು, ಇಲ್ಲದವರಿಗೆ ಬದುಕಿನ ಕನಸು ಕಾಣಲು ಹಾವನೂರ ಅವರ ಅಗತ್ಯ ಇದೆ. ಏಕೆಂದರೆ ವಿದ್ಯಾರ್ಥಿಗಳಿಗೆ ಚರಿತ್ರೆಯ ನೋವುಗಳು ತಾಕುತ್ತಿಲ್ಲ. ಕಾಲ ಬರೆಯುವ ಚರಿತ್ರೆಗೂ ವ್ಯಕ್ತಿಗಳು ಬರೆಯುವ ಚರಿತ್ರೆಗೂ ವ್ಯತ್ಯಾಸವಿದೆ. ಕಾಲಕ್ಕೆ ಪೂರ್ವಗ್ರಹಗಳಿಲ್ಲ. ಇದರ ಜೊತೆ ಹಾವನೂರ ಅವರು ಯಾವಾಗಲೂ ಇರುತ್ತಾರೆ. ವ್ಯಕ್ತಿಗಳು ಬರೆಯುವ ಚರಿತ್ರೆಗೆ ಪೂರ್ವಗ್ರಹಗಳು ಇರುತ್ತವೆ. ಇಂದು ವ್ಯಕ್ತಿಯನ್ನು ಜಾತಿ ಸಂಕೇತದಲ್ಲಿ ನೋಡಲಾಗುತ್ತದೆ. ಕನ್ನಡ ವಿಶ್ವವಿದ್ಯಾಲಯದ ಎಲ್ಲ ಪೀಠಗಳಿಗೆ ಬೇರೆ ಬೇರೆ ಸಮುದಾಯದವರನ್ನು ಸಂಚಾಲಕರನ್ನಾಗಿ ಮಾಡಿ ಜಾತಿಯ ವ್ಯವಸ್ಥೆಯಲ್ಲಿ ಸಣ್ಣ ಬಿರುಕು ತರಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದರು.
ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಪೀಠದ ಸಂಚಾಲಕರಾದ ಡಾ.ವೀರೇಶ ಬಡಿಗೇರ ಅವರು ಪೀಠದ ಕಾರ್ಯಕ್ರಮದ ಸ್ವರೂಪ ಮತ್ತು ವಿಚಾರಸಂಕಿರಣದ ಪ್ರಸ್ತುತತೆಯನ್ನು ಪ್ರಾಸ್ತಾವಿಕದಲ್ಲಿ ತಿಳಿಸಿದರು. ಕು. ಗೀತಾ ಬಡಿಗೇರ ನಿರೂಪಿಸಿದರು. ಡಾ.ತಾರಿಹಳ್ಳಿ ಹನುಮಂತಪ್ಪ ಅವರು ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಜಯನಗರ ಕ್ಷೇತ್ರದ ಶಾಸಕರಾದ ಶ್ರೀ ಬಿ.ಎಸ್. ಆನಂದಸಿಂಗ್ ಅವರು, ಸಿಂಡಿಕೇಟ್ ಸದಸ್ಯರಾದ ಅಲ್ಲಮಪ್ರಭು ಬೆಟ್ಟದೂರ ಅವರು, ಡೀನರು, ಅಧ್ಯಾಪಕರು, ವಿದ್ಯಾರ್ಥಿಗಳು, ನಾಗರೀಕರು ಉಪಸ್ಥಿತರಿದ್ದರು. ಎಲ್.ಜಿ.ಹಾವನೂರ ಅವರ ಭಾವಚಿತ್ರಕ್ಕೆ ಸನ್ಮಾನ್ಯ ಸಚಿವರು ಮತ್ತು ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಎಲ್.ಜಿ. ಹಾವನೂರ ವ್ಯಕ್ತಿ ಮತ್ತು ವ್ಯಕ್ತಿತ್ವ ಕುರಿತು ಶ್ರೀಮತಿ ರತ್ನ ಹಾವನೂರ, ಹಾವನೂರ ವರದಿ ಮತ್ತು ಅಂದಿನ ಕರ್ನಾಟಕದ ರಾಜಕಾರಣ ಕುರಿತು ಡಾ. ರಾಜಪ್ಪ ದಳವಾಯಿ, ಹಾವನೂರ ವರದಿ ಮತ್ತು ಸಾಮಾಜಿಕ ಆರ್ಥಿಕ ನೆಲೆಗಳು ಕುರಿತು ಡಾ.ಐ. ಹೊನ್ನೂರ ಅಲಿ, ಹಾವನೂರ ವರದಿ ಸಾಂಸ್ಕೃತಿಕ ನೆಲೆಗಳನ್ನು ಕುರಿತು ಪ್ರೊ. ಲಿಂಗರಾಜ ಕಮ್ಮಾರ ಅವರು ಗೋಷ್ಠಿಗಳಲ್ಲಿ ಪ್ರಬಂಧಗಳನ್ನು ಮಂಡಿಸಿದರು.

23926546_10208805106600044_5958137571641576077_o24068463_10208805107760073_536206367166110041_o

24173053_10208805109040105_7808188759227952137_o24059467_10208805110960153_5855101250598979061_o