ತಿಂಗಳು: ನವೆಂಬರ್ 2017

ಕನ್ನಡ ವಿಶ್ವವಿದ್ಯಾಲಯದ ಸ್ವಾಯತ್ತತೆ ಉಳಿಸಿ ಹೋರಾಟ

ಕನ್ನಡ ವಿಶ್ವವಿದ್ಯಾಲಯ, ಹಂಪಿ

ಕನ್ನಡ ವಿಶ್ವವಿದ್ಯಾಲಯದ ಸ್ವಾಯತ್ತತೆ ಉಳಿಸಿ ಹೋರಾಟ ಸಮಿತಿ, ವಿದ್ಯಾರಣ್ಯ

ಇದೇ ತಿಂಗಳ ಎರಡನೇ ವಾರದಲ್ಲಿ ಆರಂಭವಾಗಲಿರುವ ಬೆಳಗಾವಿಯ ವಿಧಾನಮಂಡಲಗಳ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ-೨೦೧೭ ಅಂಗೀಕಾರಕ್ಕೆ ಬರಲಿದೆ. ಇದರಲ್ಲಿ ಕರ್ನಾಟಕ ಎಲ್ಲ ವಿಶ್ವವಿದ್ಯಾಲಯಗಳ ಜತೆ ಕನ್ನಡ ವಿಶ್ವವಿದ್ಯಾಲಯವನ್ನೂ ಸೇರಿಸಲಾಗಿದೆ. ಈ ವಿಧೇಯಕ ಅಂಗೀಕಾರವಾದರೆ, ಇದರಿಂದ ನಾಡಿನ ಬಹುಜನರ ಅಪೇಕ್ಷೆಯಂತೆ, ಕರ್ನಾಟಕದ ಭಾಷೆ ಸಾಹಿತ್ಯ ಚರಿತ್ರೆ ಸಂಸ್ಕೃತಿಗಳ ಅಧ್ಯಯನಕ್ಕಾಗಿ ಸ್ಥಾಪಿತವಾಗಿರುವ ಸಾಂಸ್ಕೃತಿಕ ಮಹತ್ವವುಳ್ಳ ಕನ್ನಡ ವಿಶ್ವವಿದ್ಯಾಲಯಕ್ಕೆ, ಅದು ಈವರೆಗೆ ಪಡೆದುಕೊಂಡಿದ್ದ ವಿಶಿಷ್ಟ ಸ್ಥಾನಮಾನ ಮತ್ತು ಸ್ವಾಯತ್ತತೆಗಳು ಕೊನೆಗೊಳ್ಳುತ್ತವೆ. ಕನ್ನಡ ವಿಶ್ವವಿದ್ಯಾಲಯವು ಬೆಳ್ಳಿಹಬ್ಬ ಆಚರಿಸುತ್ತಿರುವ ಈ ಹೊತ್ತಿನಲ್ಲಿ ಇದೊಂದು ಆಘಾತಕರ ಸಂಗತಿಯಾಗಲಿದೆ. ಈ ಹಿಂದೆ ನಾಡಿನ ಹಿರಿಯ ಲೇಖಕರು ಚಿಂತಕರು, ಮಾನ್ಯ ಕುಲಪತಿಯವರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಈ ಹಿಂದೆ ಇದ್ದಂತೆ ಕನ್ನಡ ವಿಶ್ವವಿದ್ಯಾಲಯದ ವಿಶಿಷ್ಟತೆಯನ್ನು ರಕ್ಷಿಸಬೇಕೆಂದೂ, ಅದನ್ನು ಉದ್ದೇಶಿತ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕದಲ್ಲಿ ಸೇರಿಸಬಾರದೆಂದೂ ಮನವಿ ಮಾಡಲಾಗಿತ್ತು. ಈ ಬೇಡಿಕೆಯನ್ನು ಮುಖ್ಯಮಂತ್ರಿಗಳು ಒಪ್ಪಿದ್ದರು. ಈ ಬಗ್ಗೆ ಮಾನ್ಯ ಶಿಕ್ಷಣ ಮಂತ್ರಿಗಳಿಗೂ ಮನವರಿಕೆ ಮಾಡಲು ಯತ್ನಿಸಲಾಗಿದೆ. ಆದರೂ ಉದ್ದೇಶಿತ ತಿದ್ದುಪಡಿ ವಿಧೇಯಕದಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ಸೇರಿಸಲಾಗಿದೆ. ಈ ಹಠಮಾರಿತನ ಆಘಾತಕಾರಿಯಾಗಿದೆ. ಕನ್ನಡ ವಿಶ್ವವಿದ್ಯಾಲಯದ ವಿಶಿಷ್ಟ ಸ್ಥಾನಮಾನವನ್ನು ಹೀಗೆ ಕೊನೆಗೊಳಿಸುವ ಮುನ್ನ ಈ ಹಿಂದೆ ಕೆಲಸ ಮಾಡಿದ ವಿಶ್ರಾಂತ ಕುಲಪತಿಗಳನ್ನಾಗಲಿ, ಕನ್ನಡ ನಾಡಿನ ಹಿರಿಯ ಚಿಂತಕರನ್ನಾಗಲಿ, ವಿಶ್ವವಿದ್ಯಾಲಯವನ್ನಾಗಲಿ ಸಂಪರ್ಕಿಸಿಲ್ಲ. ಅವರ ಅಭಿಪ್ರಾಯ ಪಡೆದಿರುವುದಿಲ್ಲ. ಈ ತಿದ್ದುಪಡಿಯಾದಲ್ಲಿ, ಮುಂಬರುವ ದಿನಗಳಲ್ಲಿ ರಾಜಕೀಯ ಮುಖಂಡರ ಹಾಗೂ ಅಧಿಕಾರಶಾಹಿಗಳ ಮರ್ಜಿಗೆ ಅನುಗುಣವಾಗಿ ಸಂಶೋಧನೆ ಮಾಡುವ ದುಃಸ್ಥಿತಿ ನಿರ್ಮಾಣವಾಗುತ್ತದೆ. ಇದೊಂದು ಕನ್ನಡ ವಿರೋಧಿ ನಿಲುವಾಗಿದೆ. ದಯವಿಟ್ಟು ಕರಾವಿ ವಿಧೇಯಕದಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ಸೇರಿಸಬಾರದು; ತಿದ್ದುಪಡಿ ವಿಧೇಯಕದಿಂದ ಅದನ್ನು ಕೈಬಿಡಬೇಕು. ಹಿಂದಿನಂತೆ ಅದಕ್ಕಿದ್ದ ವಿಶಿಷ್ಟ ಸ್ಥಾನಮಾನವನ್ನು ಮುಂದುವರೆಸಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಕೋರುತ್ತೇವೆ. ತಪ್ಪಿದಲ್ಲಿ ಈ ಹಿಂದೆ ಕನ್ನಡ ವಿಶ್ವವಿದ್ಯಾಲಯದ ಭೂಮಿಯನ್ನು ರಕ್ಷಿಸಿಕೊಳ್ಳಲು ಮಾಡಿದ ಹೋರಾಟವನ್ನು ಮಾಡುವುದು ಅನಿವಾರ್ಯವಾಗುವುದು. ಈ ಹಿನ್ನೆಲೆಯಲ್ಲಿ ಕನ್ನಡ ವಿವಿ ಸ್ವಾಯತ್ತತೆ ಉಳಿಸಿ ಹೋರಾಟ ಸಮಿತಿಯು ಮುಖ್ಯಮಂತ್ರಿಯವರಿಗೆ ಅರ್ಪಿಸಲಿರುವ ಮನವಿಯನ್ನು ಮಾನ್ಯ ಕುಲಪತಿಯವರಿಗೆ ನೀಡಿತು. ಮನವಿ ಅರ್ಪಿಸಿದ ಬಳಿಕ ಸಾಂಕೇತಿಕವಾಗಿ ಧರಣಿಯನ್ನು ಮಾಡಿತು.

23116806_10208665614912839_939513798942763598_o23004850_10208665614952840_2275166299687449175_o

 

ಕನಕದಾಸ ಜಯಂತಿ ಪ್ರಯುಕ್ತ  ಕನಕದಾಸರ ಮುಂಡಿಗೆಗಳು- ವಿಶೇಷ ಉಪನ್ಯಾಸ ಹಾಗೂ ಕೀರ್ತನೆಗಳ ಗಾಯನ

ಕನಕದಾಸ ಜಯಂತಿ ಪ್ರಯುಕ್ತ
ಕನಕದಾಸರ ಮುಂಡಿಗೆಗಳು- ವಿಶೇಷ ಉಪನ್ಯಾಸ ಹಾಗೂ
ಕೀರ್ತನೆಗಳ ಗಾಯನ

ಮಾನವತ್ವದ ಮುಂದೆ ದೈವತ್ವ ಏನೂ ಅಲ್ಲ ಎಂದು ಕನಕದಾಸರು ಹೇಳಿದ್ದಾರೆ. ಜನಸಾಮಾನ್ಯರಿಗೆ ತತ್ವ ಬೋಧಿಸಲು ಕನಕದಾಸರು ಮುಂಡಿಗೆಗಳನ್ನು ಬಳಸಿದ್ದಾರೆ ಎಂದು ಗದಗಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಸಿದ್ಧಣ್ಣ ಎಫ್. ಜಕಬಾಳ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಹಾಲುಮತ ಅಧ್ಯಯನ ಪೀಠವು ದಿನಾಂಕ ೬.೧೧.೨೦೧೭ರಂದು ಭುವನವಿಜಯ ಸಭಾಂಗಣದಲ್ಲಿ ಕನಕದಾಸರ ೫೦೦ನೇ ಜಯಂತಿಯ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಹಾಗೂ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ಕನಕದಾಸರ ಮುಂಡಿಗೆಗಳು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಸಂಗ್ರಹವಾಗಿರುವ ೫೦ ಮುಂಡಿಗೆಗಳಲ್ಲಿ ಪೌರಾಣಿಕ ಮುಂಡಿಗೆಗಳು ನಿಗೂಢ ಮುಂಡಿಗೆಗಳು, ಅನುಭಾವ ಮುಂಡಿಗೆಗಳು ಇವೆ. ವಚನ ಸಾಹಿತ್ಯದಲ್ಲಿರುವ ಬೆಡಗಿನ ರೀತಿ ದಾಸ ಸಾಹಿತ್ಯದಲ್ಲಿ ಮುಂಡಿಗೆಗಳಿವೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಗಟು, ಬೆಡಗು ಇವುಗಳ ಮುಂದಿನ ರೂಪ ಮುಂಡಿಗೆ. ಪದವೊಂದೇ ಇದ್ದರೂ ಬೇರೆ ಬೇರೆ ಅರ್ಥ ಕೊಡುವುದೇ ಬೆಡಗು, ಮುಂಡಿಗೆ. ಮುಳ್ಳ ಮೊನಿ ಮೇಲೆ ಮೂರು ತೆರಿಕಟ್ಟಿ ಎರಡು ತುಂಬಲೇ ಇಲ್ಲ ಒಂದು ತುಂಬೇ ಇಲ್ಲ ಎಂದು ನಿಗೂಢ ಮುಂಡಿಗೆಗೆ ಉದಾಹರಣೆ ನೀಡಿದರು. ಶಿವ ಎಂಬ ಪದಕ್ಕೆ ಸಮುದ್ರ, ನೀರು, ಪರ್ವತ, ಬ್ರಹ್ಮ ಹಾಗೂ ಹರಿ ಪದಕ್ಕೆ ಇಂದ್ರ, ಸೂರ್ಯ, ನಾರಾಯಣ, ಸಿಂಹ, ವಾನರ ಎಂಬ ಅರ್ಥಗಳಿವೆ. ಅಲ್ಲದೆ ಸವಾಲು ಜವಾಬು, ಡೊಳ್ಳಿನ ಹಾಡುಗಳಲ್ಲಿ ಮುಂಡಿಗೆಗಳು ಸಿಗುತ್ತವೆ. ಮುಂಡಿಗೆಯ ಪಲ್ಲವಿಗಳ ಅರ್ಥ ಸ್ಪಷ್ಟವಾದರೆ ಮುಂದಿನ ಸಾಲುಗಳ ಅರ್ಥ ತಿಳಿಯುತ್ತದೆ. ದಶಾವತಾರಗಳ ಬಗ್ಗೆ ಸ್ಪಷ್ಟತೆ ಇದ್ದರೆ ಪೌರಾಣಿಕ ಮುಂಡಿಗೆಗಳು ಅರ್ಥವಾಗುತ್ತವೆ ಭವ, ಭಯ, ವಿನಾಶ ಭೋ- ಇದು ಒಗಟಿನ ರೂಪದ ಮುಂಡಿಗೆಯಾಗಿದೆ ಎಂದು ತಿಳಿಸುತ್ತ, ಜಾನಪದರು ದೃಶ್ಯವನ್ನು ಕಟ್ಟಿ ಕೊಡುವುದರಲ್ಲಿ ನಿಸ್ಸೀಮರು. ಜನಸಾಮಾನ್ಯರಲ್ಲಿ ಬೆಳೆದ ಕನಕದಾಸರು ಹರಿಭಕ್ತಿಸಾರ, ನಳಚರಿತ್ರೆ, ಮೋಹನ ತರಂಗಿಣ, ರಾಮಧಾನ್ಯ ಚರಿತೆ ಅಲ್ಲದೆ ಮುಂಡಿಗೆಗಳನ್ನು ರಚಿಸಿ ಪಂಡಿತಕವಿ, ದಾರ್ಶನಿಕ ಕವಿ, ಜನಪದ ಕವಿಯಾಗಿ, ದಾಸರೊಳಗೆ ದಾಸರಾಗಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಮಾತನಾಡಿ ಸಮಾನತೆಯ ಪ್ರತಿಪಾದಕರಾದ ಕನಕದಾಸರು ಯಾವುದೇ ಸಮುದಾಯಕ್ಕೆ ಸೇರಿಲ್ಲದ, ಜಾತ್ಯಾತೀತರು. ಇವರನ್ನು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಲಾಗಿದೆ. ಇದು ಕನಕದಾಸರ ಆಶಯಗಳಿಗೆ ವಿರುದ್ಧವಾಗಿದ್ದು ಆತಂಕಕಾರಿಯಾಗಿದೆ. ಬದಲಾಗಿ ಅವರನ್ನು ಸಾಮಾಜೀಕರಣ ಗೊಳಿಸಬೇಕು. ಕೊಡುಕೊಳ್ಳುವಿಕೆ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಕನಕದಾಸರು ತಮ್ಮ ಪ್ರತಿರೋಧಗಳನ್ನು ನಿಗೂಢವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಒಳ ಒತ್ತಡಗಳಿಂದ ಪ್ರತಿಮೆ ಮತ್ತು ಸಾಂಕೇತಿಕವಾಗಿ ಮಾತಾಡಲು ಪ್ರಯತ್ನಿಸಿದ್ದಾರೆ. ಆ ಕಾಲದಲ್ಲಿ ಇಂತಹ ಬಿಕ್ಕಟ್ಟುಗಳು ಯಾಕೆ ಹುಟ್ಟಿದವು ಎಂದು ಈಗ ಹೊಸ ಓದಿನ ಮೂಲಕ ನೋಡಬೇಕಾಗಿದೆ.
ಇಂದಿಗೂ ಮುಂಡಿಗೆಯ ಭಾಷೆಯಲ್ಲಿ ಜಾತಿ ವ್ಯವಸ್ಥೆ ಬಲಿಷ್ಠವಾಗಿ ಛಾಸಿಗೊಳಿಸುತ್ತಿದೆ. ಇದನ್ನು ಕಾಲದ ಸತ್ಯ ಮತ್ತು ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಿಕೊಳ್ಳಬೇಕಾದ ತುರ್ತು ಇದೆ. ಬಾಗಿಲನು ತೆರೆದು ಸೇವೆಯನು ಕೊಡುಹರಿಯೇ ಎನ್ನುವ ಕೀರ್ತನೆಯು ವ್ಯಕ್ತಪಡಿಸುವ ಆರ್ದ್ರತೆ ಇಂತಹ ನೋವನ್ನು ಅನುಭವಿಸಿದವರಿಗೆ ಮಾತ್ರ ಕನಕದಾಸ ಅರ್ಥವಾಗುತ್ತಾನೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಗತಿಗಳಿಗೆ ಕನಕದಾಸರು ಕೈ ಹಾಕಿದಾಗ ವೈದಿಕಶಾಹಿಯು ಬೆಚ್ಚಿಬಿದ್ದಿತು. ಆಗ ಕನಕರಿಗೆ ತೊಂದರೆಗಳು ಶುರು ಆದವು ಎಂದು ಕೀರ್ತನೆಗಳಿಂದ ತಿಳಿಯುತ್ತದೆ. ಇಂದು ಜಾತಿ ವ್ಯವಸ್ಥೆ ಮುಂದುವರೆಸುವ ಸಲುವಾಗಿ ಮಾನವೀಯತೆಯನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಇದರ ಹಿಂದಿನ ಮರ್ಮ ಅರ್ಥಮಾಡಿಕೊಳ್ಳಬೇಕು. ಜ್ಯಾತಿವ್ಯವಸ್ಥೆಯ ಅಹಂಕಾರಗಳು ಇಂದಿಗೂ ನಿರಸನ ಆಗಿಲ್ಲ. ಕನಕದಾಸರಾದಿಯಾಗಿ ಎಲ್ಲ ಸಮಾಜ ಸುಧಾರಕರಿಗೆ ಇರುವ ಕಾಳಜಿ ನಮಗೂ ಇದ್ದರೆ ಈ ಜ್ಯಾತಿವ್ಯವಸ್ಥೆ ನಾಶವಾಗುತ್ತಿತ್ತು ಎಂದು ಹೇಳಿದರು.
ಇಡೀ ಚರಿತ್ರೆಯನ್ನು ಸೂಕ್ಷ್ಮವಾಗಿ ನೋಡಿದರೆ ಎಲ್ಲಿಯೂ ಪುರೋಹಿತ ಶಕ್ತಿಯನ್ನು ಕೊಲ್ಲುವ ಉದಾಹರಣೆಗಳಿಲ್ಲ. ಪುರಾಣಗಳನ್ನು ವೈಚಾರಿಕ ಪ್ರಜ್ಞೆಯಿಂದ ಓದುವ ಪ್ರಯತ್ನ ಮಾಡಿದರೆ ಅಲ್ಲಿ ಇರುವ ಜ್ಯಾತಿಸಂಘರ್ಷ ಮೇಲು, ಕೀಳು, ಅಸಮಾನತೆಗಳು ತಿಳಿಯುತ್ತವೆ. ಪುರಾಣಗಳನ್ನು ಮರುಪ್ರಶ್ನಿಸಬೇಕು. ಸಂವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕನಕದಾಸರು, ಶರಣರು, ಸರ್ವಜ್ಞರು ಇದ್ದಾರೆ. ಅದನ್ನು ನೋಡುವ ಬಗೆ ನಮಗೆ ಗೊತ್ತಾಗುತ್ತಿಲ್ಲ ಎಂದು ಕುಲಪತಿಯವರು ನುಡಿದರು.
ನಂತರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನುದಾನದಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ೧೬ ಪುಸ್ತಕಗಳ ೫೦ ಕಟ್ಟುಗಳನ್ನು ಸಂಶೋಧನಾ ವಿದ್ಯಾರ್ಥಿಗಳಾದ ಗೀತಾಬಾಯಿ ಬಡಿಗೇರ, ಶಿಲ್ಪ, ನಾಗಪ್ಪ, ನವೀನಕುಮಾರ ಇವರಿಗೆ ವೇದಿಕೆಯಲ್ಲಿ ಸಾಂಕೇತಿಕವಾಗಿ ವಿತರಿಸಿದರು. ವೈಚಾರಿಕ ತಿಳುವಳಿಕೆಯಿಂದ ಜಗತ್ತನ್ನು ನೋಡುವ ಶಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕಾಲಕ್ಕನುಗುಣವಾಗಿ ಶೈಕ್ಷಣಿಕ ಬೆಳವಣಿಗೆಗೆ ಕೊಡುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸರ್ವಸಿದ್ಧತೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಐ.ಎ.ಎಸ್. ಮತ್ತು ಕೆ.ಎ.ಎಸ್. ಅಧಿಕಾರಿಗಳಾಗಿ ಬರುವಂತಾಗಬೇಕು. ಕನಕರ ಸಾಮಾಜಿಕ ನ್ಯಾಯ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಲಿ ಎಂದು ಆಶಯ ವ್ಯಕ್ತಪಡಿಸಿದರು.
ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದು ಡಾ.ಜಕಬಾಳ ಅವರನ್ನು ಪರಿಚಯಿಸಿದರು. ಶ್ವೇತಾ ನಿರೂಪಿಸಿದರು. ಬಾಣದ ಮಂಜುನಾಥ ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಗಾಯನ ಮಾಡಿದರು. ವೇದಿಕೆಯ ಮೇಲಿದ್ದ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಹೊಸಪೇಟೆಯ ಹಾಲುಮತ ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು, ನಾಗರಿಕರು, ವಿಶ್ವವಿದ್ಯಾಲಯದ ಡೀನರು, ಅಧ್ಯಾಪಕರು, ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

 

23270262_10208688266559116_4460216275506151016_o23334181_10208688266519115_377252903545077209_o23215700_10208688267559141_7341773265081814545_o