ತಿಂಗಳು: ಡಿಸೆಂಬರ್ 2016

ಕುವೆಂಪು ಚಿಂತನೆಗಳ ಪ್ರಸ್ತುತತೆ

ಕುವೆಂಪು ಚಿಂತನೆಗಳ ಪ್ರಸ್ತುತತೆ
ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ

ಪತ್ರಿಕಾ ವರದಿ- ೨೯.೧೦.೨೦೧೬02-10ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು

01-11
ಡಾ. ವಿಠಲರಾವ್ ಟಿ. ಗಾಯಕ್ವಾಡ್ ಅವರು ವಿಶೇಷ ಉಪನ್ಯಾಸವನ್ನು ನೀಡಿದರು.

ವರ್ಣಾಶ್ರಮವನ್ನು ತಿದ್ದುವುದಲ್ಲ ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು ಎಂಬುದು ಕುವೆಂಪು ಅವರ ವಿಶ್ವಮಾನವ ಸಂದೇಶದ ಆಶಯವಾಗಿದೆ ಎಂದು ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ವಿಠಲರಾವ್ ಟಿ. ಗಾಯಕ್ವಾಡ್ ಅವರು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆಯನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುವ ಪ್ರಯುಕ್ತ ವಿದ್ಯಾರ್ಥಿ ಕ್ಷೇಮಪಾಲನಾ ಘಟಕವು ಕುವೆಂಪು ಚಿಂತನೆಗಳ ಪ್ರಸ್ತುತತೆ ವಿಷಯವನ್ನು ಕುರಿತಂತೆ ಪಂಪ ಸಭಾಂಗಣದಲ್ಲಿ ೨೯-೧೨-೨೦೧೬ರಂದು ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.
ಅವರು ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಅವಲೋಕಿಸುತ್ತಾ ಕುವೆಂಪು ಚಿಂತನೆಗಳ ಬಹು ಆಯಾಮಗಳನ್ನು ಪರಿಚಯಿಸಿದರು. ಅವರ ದರ್ಶನ ಮೀಮಾಂಸೆಯ ವೈಶಿಷ್ಟ್ಯವನ್ನು ತಿಳಿಸಿದರು. ಕುವೆಂಪು ಹೃದಯ ಸಂಸ್ಥಾನದ ಕನ್ನಡಿ ಎಂದು ಹೇಳುವ ಮೂಲಕ ಅವರ ವೈಚಾರಿಕತೆ, ಚಿಂತನೆ, ವೈಜ್ಞಾನಿಕತೆ, ಅನುಭಾವ ಮತ್ತು ಆಧ್ಯಾತ್ಮ ಜೀವನದ ತತ್ವಗಳನ್ನು ವಿಶ್ವಮಾನವರೆಲ್ಲಾ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿಯವರು ಮಾತನಾಡುತ್ತಾ ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಕೃತಿಯನ್ನು ಯುವ ಜನತೆ ಓದಿ ಮನನ ಮಾಡಿಕೊಳ್ಳುವುದರ ಮೂಲಕ ಕುವೆಂಪು ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಪಂಪ ಮತ್ತು ಕುವೆಂಪು ಹೇಳಿದ ಮಾನವ ಕುಲಂ ತಾನೊಂದೆ ವಲಂ ಎಂಬ ನುಡಿಯನ್ನು ನೆನಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಘಟಕದ ಸಂಯೋಜನಾಧಿಕಾರಿಗಳಾದ ಡಾ. ಶಿವಾನಂದ ಎಸ್. ವಿರಕ್ತಮಠ ಅವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಆಡಳಿತ ಸಿಬ್ಬಂದಿಗಳು ಭಾಗವಹಿಸಿದ್ದರು. ಸಂಶೋಧನಾ ವಿದ್ಯಾರ್ಥಿನಿಯಾದ ಸಂಧ್ಯಾ ಹೆಚ್.ಎಸ್ ಇವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ತಾಯಶ್ರೀ ಎನ್. ಮತ್ತು ಶಿಲ್ಪ ವಿ. ಪ್ರಾರ್ಥಿಸಿದರು.

 

 

ಬೆಳ್ಳಿಹಬ್ಬ ೨ನೇ ಹಂತದ ಚಿಂತನ ಮಂಥನ ಕಾರ‍್ಯಕ್ರಮ

02-7 ಗುಲ್ಬರ್ಗಾ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಎಂ. ಮಹೇಶ್ವರಯ್ಯ ಮಾತನಾಡುತ್ತಿರುವುದು

03-7ಆಶಯ ನುಡಿಯುತ್ತಿರುವ ಕನ್ನಡ ವಿಶ್ವವಿದ್ಯಾಲಯದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು

04-4ವೇದಿಕೆಯಲ್ಲಿ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು, ಶ್ರೀ ಹಂಸಲೇಖ ಅವರು, ಡಾ. ಹೇಮಪಟ್ಟಣಶೆಟ್ಟಿ ಅವರು, ಡಾ.ಎಚ್.ಎಂ.ಮಹೇಶ್ವರಯ್ಯ ಅವರು, ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರು, ಕುಲಪತಿಯವರು, ಡಾ. ಕಮಲಾ ಹಂಪನಾ ಅವರು, ಡಾ. ಪದ್ಮಾಶೇಖರ ಅವರು, ಶ್ರೀಮತಿ ಶಶಿಕಲಾ ವಸ್ತ್ರದ ಅವರು, ಡಾ. ವಸುಂಧರ ಭೂಪತಿ ಅವರು, ಡಾ.ಬಿ.ಟಿ. ಲಲಿತಾ ನಾಯಕ ಅವರು, ಡಾ.ಎಂ.ಸಿ. ಗಣೇಶ ಅವರು

06ಸಿಂಡಿಕೇಟ್ ಸಭಾಂಗಣದಲ್ಲಿ ಡಾ. ಕಮಲಾ ಹಂಪನಾ ಅವರ ಅಧ್ಯಕ್ಷತೆಯಲ್ಲಿ ಚಿಂತನ ಮಂಥನ ನಡೆಸುತ್ತಿರುವ ವಿದ್ವಾಂಸರು01-9

ಬೆಳ್ಳಿಹಬ್ಬ
೨ನೇ ಹಂತದ ಚಿಂತನ ಮಂಥನ ಕಾರ‍್ಯಕ್ರಮ
೧೬ ಮತ್ತು ೧೭ ಡಿಸೆಂಬರ್ ೨೦೧೬
ಪತ್ರಿಕಾ ವರದಿ- ೧೬.೧೨.೨೦೧೬

ನಿರ್ಲಕ್ಷಿತ ಮತ್ತು ಉಪೇಕ್ಷೆಗೆ ಒಳಪಟ್ಟ ಸಂಗತಿಗಳನ್ನು ಕನ್ನಡ ವಿಶ್ವವಿದ್ಯಾಲಯ ಸಂಶೋಧನೆಯ ಮೂಲಕ ಮುನ್ನೆಲೆಗೆ ತಂದಿದೆ ಎಂದು ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ.ಸಿ. ಗಣೇಶ ಅವರು ತಿಳಿಸಿದರು.
ಮಂಟಪ ಸಭಾಂಗಣದಲ್ಲಿ ೧೬ನೇ ಡಿಸೆಂಬರ್ ೨೦೧೬ರಂದು ಏರ್ಪಡಿಸಿದ್ದ ಯುಜಿಸಿ ಪ್ರಾಯೋಜಿತ ಕನ್ನಡ ವಿಶ್ವವಿದ್ಯಾಲಯ ಬೆಳ್ಳಿಹಬ್ಬ ೨ನೇ ಹಂತದ ಚಿಂತನ ಮಂಥನ ಕಾರ‍್ಯಕ್ರಮದಲ್ಲಿ ಅವರು ಕನ್ನಡ ವಿಶ್ವವಿದ್ಯಾಲಯದ ೨೫ ವರ್ಷಗಳ ಶೈಕ್ಷಣಿಕ ಸಾಧನೆಗಳನ್ನು ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಂತಿರುವ ಮಹಿಳಾ ಲೇಖಕಿಯರು ಮತ್ತು ವಿದ್ವಾಂಸರ ಎದುರು ಮಂಡಿಸಿದರು.
ಕನ್ನಡ ವಿಶ್ವವಿದ್ಯಾಲಯ ಅಲಕ್ಷಿತ ಸಂಗತಿಗಳನ್ನು ನಾಡಿನ ವರ್ತಮಾನದೊಂದಿಗೆ ಮುಖಾಮುಖಿಗೊಳಿಸಿ ಮುಖ್ಯವಾಹಿನಿಗೆ ತಂದಿದೆ. ಎಲ್ಲ ನೊಂದವರ ಮಹಿಳೆಯರ, ಅಲೆಮಾರಿಗಳ, ಶೋಷಿತರ, ಚಹರೆ ಇಲ್ಲದವರ, ಧ್ವನಿ ಇಲ್ಲದವರಿಗೆ ಕನ್ನಡ ವಿಶ್ವವಿದ್ಯಾಲಯ ವೇದಿಕೆಯಾಗಿದೆ. ವ್ಯಾಪಕವಾದ ನಾಡಿನ ಹೊಣೆಗಾರಿಕೆಯನ್ನು ಆತ್ಮಸಾಕ್ಷಿಯಂತೆ ತುಂಬಿಕೊಂಡು, ಈ ಬಗೆಯ ಬೌದ್ಧಿಕ ಒಳನೋಟದಲ್ಲಿ ವಿಶ್ವವಿದ್ಯಾಲಯದ ಎಲ್ಲ ಕುಲಪತಿಗಳು ಕಾರ್ಯನಿರ್ವಹಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯವು ಬೋಧನೆಯನ್ನು ಒಂದು ಸೃಜನಶೀಲ ಕ್ರಿಯೆ ಎಂದು ಭಾವಿಸಿದೆ ಎಂದು ಅವರು ವಿಶ್ವವಿದ್ಯಾಲಯದ ನಿಕಾಯಗಳ, ವಿಭಾಗಗಳ, ಪೀಠಗಳ, ದತ್ತಿನಿಧಿಗಳ ಮತ್ತು ವಿಸ್ತರಣಾ ಕೇಂದ್ರಗಳ ಸಾಧನೆ-ಸಂಶೋಧನೆಗಳ ಒಳನೋಟಗಳನ್ನು ನೀಡಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯವರಾದ ಡಾ.ಎಚ್.ಎಂ. ಮಹೇಶ್ವರಯ್ಯ ಅವರು ಆಹ್ವಾನಿತರ ಪ್ರತಿನಿಧಿಯಾಗಿ ಭಾರತೀಯ ಭಾಷಾ ವಿಶ್ವವಿದ್ಯಾಲಯಗಳ ಕಿರು ಇತಿಹಾಸವನ್ನು (ಪವರ್‌ಪಾಯಿಂಟ್ ಪ್ರೆಸೆಂಟೇಶನ್ ಮೂಲಕ) ಕಟ್ಟಿಕೊಡುತ್ತ, ಕನ್ನಡ ವಿಶ್ವವಿದ್ಯಾಲಯ ಬದುಕಿನ ಎಲ್ಲ ರಂಗಗಳಿಗೆ ಪ್ರವೇಶಿಸಿ ಅಧ್ಯಯನ ಮಾಡುವ ವ್ಯಾಪ್ತಿಯನ್ನು ಹೊಂದಿದೆ ಎಂದು ತಾವು ಭಾವಿಸಿರುವಾಗಿ ತಿಳಿಸಿದರು.
ನಂತರ ಜೆರುಸೆಲಂನಲ್ಲಿರುವ ಹಿಬ್ರು ವಿಶ್ವವಿದ್ಯಾಲಯ, ಪಂಜಾಬಿ ವಿಶ್ವವಿದ್ಯಾಲಯ, ತಮಿಳು ವಿಶ್ವವಿದ್ಯಾಲಯ, ತೆಲುಗು ವಿಶ್ವವಿದ್ಯಾಲಯಗಳು, ಮಲಯಾಳಂ ವಿಶ್ವವಿದ್ಯಾಲಯ, ದ್ರವಿಡಿಯನ್ ವಿಶ್ವವಿದ್ಯಾಲಯ, ಹಿಂದಿ ಭಾಷಾ ವಿಶ್ವವಿದ್ಯಾಲಯಗಳ ಕಾರ್ಯವ್ಯಾಪ್ತಿಯನ್ನು ಎಳೆಎಳೆಯಾಗಿ ವಿವರಿಸುತ್ತ, ಕನ್ನಡ ವಿಶ್ವವಿದ್ಯಾಲಯವು ಸಂಶೋಧನೆಗಳ ಜೊತೆಗೆ ಬೋಧನೆಯಲ್ಲಿ ಮುಖ್ಯವಾಗಿ ಪರಿಗಣಿಸಬೇಕು. ಜೊತೆಗೆ ಕನ್ನಡ ವಿಶ್ವವಿದ್ಯಾಲಯವು ಇತರೆ ಭಾಷಾ ವಿಶ್ವವಿದ್ಯಾಲಯಗಳಂತೆ ಭಾರತೀಯ ಭಾಷೆಗಳ ಅಧ್ಯಯನ ಕೇಂದ್ರ, ವಲಸೆ ಅಧ್ಯಯನ ಕೇಂದ್ರ, ಶಿಕ್ಷಣ ವಿಭಾಗ, ಶಿಕ್ಷಕರ ತರಬೇತಿ ಕೇಂದ್ರ, ಕಂಪ್ಯೂಟರ್ ಅನಿಮೇಶನ್ ಫಿಲಂ ಸ್ಟಡೀಸ್, ಪರಂಪರೆ ಮತ್ತು ಪ್ರವಾಸೋದ್ಯಮ, ಪರಿಸರ ಅಧ್ಯಯನ, ನಿಘಂಟು ಅಧ್ಯಯನ, ಕೊಳಲು-ಮೃದಂಗ(ವಾದ್ಯ ಪರಿಕರಗಳ ಅಧ್ಯಯನ), (ಗಿಡ)ಮೂಲಿಕಾ ಅಧ್ಯಯನ, ಇಂಗ್ಲಿಷ್ ವಿಭಾಗ(ಅಗತ್ಯವಾಗಿ), ಡಿಫೆನ್ಸ್ ಸ್ಟ್ರಾಟಜಿ ವಿಭಾಗಗಳನ್ನು ತೆರೆದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕು. ಪ್ರತಿ ವಿಭಾಗವೂ ಕಡ್ಡಾಯವಾಗಿ ಯುಜಿಸಿಯಿಂದ ಸ್ಯಾಪ್ ಯೋಜನೆಗಳನ್ನು ಪಡೆಯಬೇಕು ಎಂದು ಮಹೇಶ್ವರಯ್ಯ ಅವರು ಕನ್ನಡ ವಿಶ್ವವಿದ್ಯಾಲಯದ ಮುಂದಿನ ದಾರಿ ಕುರಿತು ಕಿರುನೋಟ ನೀಡಿದರು.
ಮುಂದುವರೆದು ವಿಶ್ವವಿದ್ಯಾಲಯಗಳು ಆರ್ಥಿಕವಾಗಿ ಸ್ವತಂತ್ರವಾಗಿರಬೇಕು. ಅದಕ್ಕಾಗಿ ಆದಾಯದ ಮೂಲಗಳನ್ನು ಕಂಡುಕೊಳ್ಳಲು ಪ್ರಬಲವಾಗಿ ಚಿಂತಿಸಬೇಕು. ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡಿರಬಾರದು. ಕನ್ನಡ ವಿಶ್ವವಿದ್ಯಾಲಯ ಜ್ಞಾನ ಸೃಷ್ಟಿಸುವಂತೆ ಬದುಕನ್ನು ಅನ್ನವನ್ನು ಸೃಷ್ಟಿಸುವಂತಾಗಬೇಕು ಎಂದು ತಿಳಿಸಿದರು.
ಆಶಯ ನುಡಿಯುತ್ತ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಅಪಾರವಾದ ಮಾನವ ಸಂಪನ್ಮೂಲದ ಕೊರತೆಯನ್ನು ಎದುರಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯವು ಕನ್ನಡದ ತೇರನ್ನು ಹೇಗೆ ಎಳೆಯಬೇಕು? ಎಂದು ಪ್ರಶ್ನಿಸಿದರು. ೨೫ ವರ್ಷಗಳ ಶೈಕ್ಷಣಿಕ ಸಾಧನೆಗಳ ವರದಿಯನ್ನು ನಾಡಿಗೆ ಸಲ್ಲಿಸುವ ಅಗತ್ಯ ಇರುವುದರಿಂದ ನಿಮ್ಮನ್ನು ಇಲ್ಲಿಗೆ ಬರಮಾಡಿಕೊಳ್ಳಲಾಗಿದೆ ಎಂದು ಚಿಂತಕರನ್ನು ಉದ್ದೇಶಿಸಿ ನುಡಿದರು. ನಿಮ್ಮ ಧ್ವನಿ ವಿಶ್ವವಿದ್ಯಾಲಯದ ಒಳಗಿರುವವರ ಧ್ವನಿ ಆಗಬಾರದು. ಕನ್ನಡ ವಿಶ್ವವಿದ್ಯಾಲಯ ಕನ್ನಡಿಗರ ಧ್ವನಿಯಾಗಬೇಕು ಎಂಬ ಕಾರಣವು ಹೌದು. ಕನ್ನಡದಂತಹ ಭಾಷೆಯ ಮೇಲೆ ಜಾಗತೀಕರಣದ ಹೊಡೆತ ಬೀಳುತ್ತಿರುವ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಹಾಗೆ ರಾಜಕಾರಣಿಗಳು ಅವತ್ತಿನ ಸಾಂಸ್ಕೃತಿಕವಾದಂತಹ ಪರಿಸರ ಏನನ್ನು ಹೇಗೆ ಅದು ಪರಿಭಾವಿಸಿತ್ತು ಮತ್ತು ಇವತ್ತಿನ ರಾಜಕಾರಣ ನಮ್ಮ ಕಣ್ಣೆದುರಿಗೆ ಇರುವ ಸಮಾಜ ಮತ್ತು ಇವತ್ತಿನ ವಿದ್ಯಮಾನಗಳು ಕನ್ನಡ ವಿಶ್ವವಿದ್ಯಾಲಯವನ್ನು ಹೇಗೆ ಕಾಣುತ್ತಾ ಇವೆ ಎಂಬುದನ್ನು ನಿಮ್ಮ ಗಮನಕ್ಕೆ ತರುವ ಸಲುವಾಗಿ ನಿಮ್ಮೆಲ್ಲರನ್ನು ಇಲ್ಲಿಗೆ ಬರಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕುಲಸಚಿವರಾದ ಡಾ. ಡಿ. ಪಾಂಡುರಂಗ ಬಾಬು ಅವರು ಎಲ್ಲರನ್ನು ಸ್ವಾಗತಿಸುತ್ತ, ಕನ್ನಡ ವಿಶ್ವವಿದ್ಯಾಲಯದ ಹಿಂದಿನ ನಡೆಯ ಆತ್ಮಾವಲೋಕನ ಮತ್ತು ಮುಂದಿನ ನಡೆ ಹೇಗಿರಬೇಕು ಎಂಬುದರ ಪರಾಮರ್ಶೆ ಇಂದು ನಡೆಯಲಿದೆ ಎಂದು ತಿಳಿಸಿದರು.
ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ. ಹನುಮಣ್ಣನಾಯಕ ದೊರೆ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕರುಣಾಳು ಬಾ ಬೆಳಕೆ, ಮಾತೆಂಬುದು ಜ್ಯೋತಿರ್ಲಿಂಗ ದೊಂದಿಗೆ ನಾಡಗೀತೆಯನ್ನು ಹಾಡಿ ಪ್ರಾರ್ಥಿಸಿದರು. ಡಾ. ಶಿವಾನಂದ ವಿರಕ್ತಮಠ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಅಶೋಕಕುಮಾರ ರಂಜೇರೆ ಅವರು ವಂದಿಸಿದರು. ವೇದಿಕೆಯಲ್ಲಿ ಡಾ. ಕಮಲಾ ಹಂಪನಾ, ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್, ಶ್ರೀ ಹಂಸಲೇಖ, ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪದ್ಮಾಶೇಖರ, ಡಾ. ಬಿ.ಟಿ. ಲಲಿತಾ ನಾಯಕ, ಡಾ. ವಸುಂಧರ ಭೂಪತಿ, ಡಾ. ಹೇಮಾ ಪಟ್ಟಣಶೆಟ್ಟಿ, ಶ್ರೀಮತಿ ಶಶಿಕಲಾ ವಸ್ತ್ರದ ಇವರು ಉಪಸ್ಥಿತರಿದ್ದರು. ಪ್ರತಿಯೊಬ್ಬ ಆಹ್ವಾನಿತರು ತಮ್ಮನ್ನು ತಾವು ಸಭೆಗೆ ಪರಿಚಯಿಸಿಕೊಂಡರು. ಚಿಂತನ ಮಂಥನದಲ್ಲಿ ಕರ್ನಾಟಕ ಲೇಖಕಿಯರ ಸಂಘದಿಂದ ೧೬ ಸದಸ್ಯರು, ಉತ್ತರ ಕರ್ನಾಟಕದ ಲೇಖಕಿಯರ ಸಂಘದಿಂದ ೨೦ ಸದಸ್ಯರು ಒಳಗೊಂಡಂತೆ ೧೦೦ಕ್ಕೂ ಹೆಚ್ಚು ವಿದ್ವಾಂಸರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ನಂತರ ೨ ಗುಂಪುಗಳಲ್ಲಿ ಮಹಿಳಾ ಲೇಖಕಿಯರು ಮತ್ತು ವಿದ್ವಾಂಸರು ಡಾ. ರಾಜಕುಮಾರ ಸಭಾಂಗಣ ಮತ್ತು ಸಿಂಡಿಕೇಟ್ ಸಭಾಂಗಣದಲ್ಲಿ ಕನ್ನಡ ವಿಶ್ವವಿದ್ಯಾಲಯದ ಇದುವರೆಗಿನ ನಡೆ ಮತ್ತು ಮುಂದಿನ ನಡೆಯನ್ನು ಕುರಿತು ಪರಾಮರ್ಶೆಯೊಂದಿಗೆ ಚರ್ಚಿಸಿದರು. ನಾಳೆಗೂ ಮುಂದುವರೆಯಲಿದೆ. ನಂತರ ಹೊನ್ನಾವರದ ಡಾ. ಅಶೋಕ ಹುಗ್ಗಣ್ಣವರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೆಳದಿಂಗಳಲ್ಲಿ ನಡೆಸಿಕೊಟ್ಟರು.

 

ಪ್ರಾಕೃತ-ಕನ್ನಡ : ಪರಂಪರೆ ಮತ್ತು ಪ್ರಭಾವ ಅಂತಾರಾಷ್ಟ್ರೀಯ ವಿಚಾರಸಂಕಿರಣದ ಉದ್ಘಾಟನೆ

ಪ್ರಾಕೃತ-ಕನ್ನಡ : ಪರಂಪರೆ ಮತ್ತು ಪ್ರಭಾವ
ಅಂತಾರಾಷ್ಟ್ರೀಯ ವಿಚಾರಸಂಕಿರಣದ ಉದ್ಘಾಟನೆಯ ಪತ್ರಿಕಾ ವರದಿ- ೦೮.೧೨.೨೦೧೬

01-6ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ಡಾ. ಕ್ರಿಸ್ಟೀನ್ ಚೋಝನಾಕಿ ಅವರು ಉದ್ಘಾಟಿಸಿದರು. ಅವರೊಂದಿಗೆ ವೇದಿಕಯಲ್ಲಿ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು (ಎಡಭಾಗದಿಂದ) ಡಾ. ಸಿ. ಮಹದೇವ ಅವರು, ಡಾ. ಪದ್ಮಪ್ರಸಾದ್ ಅವರು, ಡಾ. ಹಂಪ ನಾಗರಾಜಯ್ಯ ಅವರು ಹಾಗೂ ಕುಲಸಚಿವರಾದ ಡಾ.ಡಿ.ಪಾಂಡುರಂಬಾಬು ಅವರು

02-5                  ಚೋಝನಾಕಿ ಅವರ ಉದ್ಘಾಟನಾ ಭಾಷಣ
04-2ವೇದಿಕೆಯಲ್ಲಿ ಗಣ್ಯರು05-1ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು03-6ಶಿಖರೋಪಾನ್ಯಾಸ ನೀಡುತ್ತಿರುವ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು

ಪ್ರಾಕೃತ ಕಾವ್ಯಗಳು ಬಹಳ ಶ್ರೀಮಂತವಾಗಿದ್ದು ಭಾರತದ ಸಾಂಸ್ಕೃತಿಕ ಚರಿತ್ರೆಯ ಅನೇಕ ಅಂಶಗಳನ್ನು ದಾಖಲಿಸುತ್ತವೆ. ಕ್ರಿ.ಶ.೭೮೩ರಲ್ಲಿ ರಚಿಸಿದ ತನ್ನ ಕುವಲಯಮಾಲಾ ಕಾವ್ಯದಲ್ಲಿ ಕವಿ ಉದ್ಯೋತನಸೂರಿಯು ಕರ್ನಾಟಕದ ಹಲವು ಪ್ರದೇಶಗಳ ಹೆಸರನ್ನು ಉಲ್ಲೇಖಿಸಿದ್ದಾನೆ. ಜೊತೆಗೆ ಕನ್ನಡದ ಕೆಲವು ಶಬ್ದಗಳನ್ನು ಬಳಸಿದ್ದಾನೆ. ಅವನು ಬಳಸಿದ ಚಂಪೂ ಶೈಲಿ ಅನಂತರದಲ್ಲಿ ಕನ್ನಡದ ಕಾವ್ಯಶೈಲಿಯಾಯಿತು. ಭಾರತೀಯ ನೆಲದಲ್ಲಿ ಕಾಣುವ ಹಲವು ಗಿಡ ಪುಷ್ಪಗಳ ಹೆಸರನ್ನು ಅವನು ಬಳಸುತ್ತಾನೆ ಎಂದು ಫ್ರಾನ್ಸ್‌ನ ಲ್ಯೋನ್ ವಿಶ್ವವಿದ್ಯಾಲಯದ ಭಾರತೀಯ ಸಂಸ್ಕೃತಿ ಮತ್ತು ನಾಗರೀಕತೆ ಅಧ್ಯಯನ ವಿಭಾಗದ ಪ್ರಾಧ್ಯಾಪಕಿಯಾದ ಡಾ. ಕ್ರಿಸ್ಟೀನ್ ಚೋಝನಾಕಿ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರವು ೮ ಮತ್ತು ೯ ಡಿಸೆಂಬರ್ ೨೦೧೬ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಾಕೃತ-ಕನ್ನಡ : ಪರಂಪರೆ ಮತ್ತು ಪ್ರಭಾವ ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಶಿಖರೋಪಾನ್ಯಾಸ ನೀಡುತ್ತ ಸಂಸ್ಕೃತ ಮತ್ತು ಪ್ರಾಕೃತದ ನಡುವೆ ನಿಕಟವಾದ ಹೊಕ್ಕಳಬಳ್ಳಿ ಸಂಬಂಧವಿದೆ. ಸಂಸ್ಕೃತಕ್ಕಿಂತಲೂ ಕನ್ನಡಕ್ಕೆ ಸತ್ವ, ರೂಪ, ಚೈತನ್ಯ, ತೇಜಸ್ಸು, ಓಜಸ್ಸು, ಹೊಸ ವಿಚಾರಧಾರೆಗಳನ್ನು ತುಂಬಿರುವುದು ಪ್ರಾಕೃತ. ಮೊದಲು ಕನ್ನಡ ವ್ಯವಹಾರಿಕ ಮತ್ತು ಮಾತನಾಡುವ ಭಾಷೆಯಾಗಿತ್ತು. ಕನ್ನಡಕ್ಕೆ ಲಿಪಿಯನ್ನು ಕೊಟ್ಟಿದ್ದು ಮೊದಲು ಪ್ರಾಕೃತ. ಕನ್ನಡ ಅಕ್ಷರಗಳಿಗೆ ಬಳಸುವ ಮಹಾಪ್ರಾಣ, ತದ್ಭವಗಳು ಬಂದಿರುವುದು ಪ್ರಾಕೃತದಿಂದ. ಕನ್ನಡ ಲಿಪಿಯ ವಿಕಾಸದ ಮಜಲುಗಳನ್ನು ಗುರುತಿಸಲು ಬ್ರಾಹ್ಮೀಯೇ(ಬ್ರಾಹ್ಮಿ ಲಿಪಿ) ಬೇರು. ಪ್ರಾಕೃತದಿಂದ ಛಂದಸ್ಸು, ರಗಳೆಯ ಸ್ವಾರಸ್ಯ ಪಡೆಯಲಾಗಿದೆ. ರಗಳೆಗೆ ಪ್ರಾಕೃತ ತಾಯಿ ಬೇರು. ಗದ್ಯ ಪದ್ಯ ಮಿಶ್ರಿತ ಚಂಪೂರೂಪ ಪ್ರಾಕೃತದಿಂದ ಬಂದಿದೆ. ಪ್ರಾಕೃತದ ಮೂಲಕ ಕನ್ನಡಕ್ಕೆ ಕಥೆಗಳು ಬಂದಿವೆ. ವಡ್ಡಾರಾಧನೆಯ ಮೊದಲನೆಯ ಕಥೆ ಸುಕುಮಾರಸ್ವಾಮಿ. ಹೀಗೆ ಕಥೆಗಳ ಕಣಜವೇ ಪ್ರಾಕೃತದಿಂದ ಕೊಡುಗೆಯಾಗಿ ಬಂದಿದೆ. ಮೊಟ್ಟಮೊದಲು ಕಥೆಗಳನ್ನು ವಿಂಗಡಣೆ ಮಾಡಿದ ಕೀರ್ತಿ ಪ್ರಾಕೃತಕ್ಕಿದೆ. ಉದಾಹರಣೆಗೆ ರಾಯಕಃ(ರಾಜರಿಗೆ ಸಂಬಂಧಿಸಿದ ಕಥೆಗಳು), ಇತ್ತಿಕಃ(ಸ್ತ್ರೀಯರಿಗೆ ಸಂಬಂಧಿಸಿದ ಕಥೆಗಳು), ಚೋರಕಃ(ಕಳ್ಳರಿಗೆ ಸಂಬಂಧಿಸಿದ ಕಥೆಗಳು).
ಪ್ರತ್ಯಯಗಳನ್ನು ಪ್ರಾಕೃತದಿಂದ ಪಡೆದು ಕನ್ನಡದ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದೇವೆ. ಅಜೀವಕರು ಚಾರ್ವಕರ ಬಗ್ಗೆ ಮಾಹಿತಿ ಪಡೆಯಬೇಕೆಂದರೆ ಜೈನ ಪ್ರಾಕೃತ ಮತ್ತು ಪಾಳಿಯಿಂದ ಮಾತ್ರ ಸಾಧ್ಯ. ಭಾಷಾ ರಾಜಕಾರಣದಿಂದ ಪ್ರಾಕೃತಕ್ಕೆ ಸಲ್ಲಬೇಕಾದ ಸ್ಥಾನ ದೊರೆಯಲಿಲ್ಲ. ಆದರೂ ತನ್ನ ಅಪಾರವಾದ ಜ್ಞಾನ ಸಂಪತ್ತಿನ ಬಲದಿಂದ ತಾನು ನಿಂತಿದೆ. ಭಾರತದಲ್ಲಿ ಸಿಗುವ ದೊರೆಯುವ ಎಲ್ಲ ಶಾಸನಗಳು ಪ್ರಾಕೃತದಲ್ಲಿವೆ. ಕನಗನಹಳ್ಳಿಯಲ್ಲಿ ದೊರೆತ ಪ್ರಾಕೃತ ಶಾಸನದಲ್ಲಿ ಅಶೋಕನಿಗೆ ಸಂಬಂಧಪಟ್ಟಂತೆ ಮಾಹಿತಿಗಳಿದ್ದು ಅಶೋಕನ ಚಿತ್ರ ಹಾಗೂ ರಾಣಿಯರ ಚಿತ್ರಗಳು ಕಾಣಿಸುತ್ತವೆ. ಒಂದು ಭಾಷೆ ಹೊಸತನಕ್ಕೆ ತೆರೆದುಕೊಳ್ಳಲು ಅನುವಾದದಿಂದ ಬಲವನ್ನು ಪಡೆದು ಪುಷ್ಠಿಗೊಳ್ಳಬೇಕು. ಕನ್ನಡ ಮತ್ತು ಪ್ರಾಕೃತ, ಕನ್ನಡ ಮತ್ತು ಸಂಸ್ಕೃತ ಈ ಶಬ್ದಗಳನ್ನು ಪೋಣಿಸಿಕೊಂಡು ವ್ಯಾಖ್ಯಾನಗಳನ್ನು ಬರೆಯುವುದಕ್ಕೆ ಮಣಿ ಪ್ರವಾಳಶೈಲಿ ಎನ್ನುವರು. ಕನ್ನಡದಲ್ಲಿ ಅಗಳ ಮೊದಲಾದವರು ಈ ಶೈಲಿಯನ್ನು ಬಳಸಿದ್ದಾರೆ. ಕನ್ನಡಕ್ಕೆ ಹೊಸ ವಿಸ್ತಾರ ತಂದುಕೊಡುವಲ್ಲಿ ಉದ್ಯೋತನಸೂರಿಯ ಕುವಲಯಮಾಲಾ ಬಿಟ್ಟರೆ ಸ್ವಯಂಭೂದೇವನ ಕಾವ್ಯ ಪೌಮಚಾರ್ಯ. ಪ್ರಾಕೃತ ಮತ್ತು ಕನ್ನಡ ಪರಸ್ಪರ ಉಭಯಮುಖಿ ಸಂಚಾರದಿಂದ ಕೂಡಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡುತ್ತ ಜನಾಂಗೀಯ ಶ್ರೇಷ್ಠತೆಯ ಅಹಂಕಾರ ಮತ್ತು ಧಾರ್ಮಿಕ ಪ್ರಭುತ್ವದ ಸರ್ವಾಧಿಕಾರತನ ಮತ್ತು ರಾಜಪ್ರಭುತ್ವದ ಅವಿವೇಕಗಳು ಸೇರಿಕೊಂಡು ಸಂಸ್ಕೃತವನ್ನು ಹೇಗೆ ದೇವಭಾಷೆ ಎಂದು ಕರೆದರು ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ಚರಿತ್ರೆ ಇದಕ್ಕೆ ಉತ್ತರ ಇಟ್ಟಿದ್ದರೂ ನಂಬುವ ಸ್ಥಿತಿಯಲ್ಲಿ ನಾವಿಲ್ಲ. ಇಂದು ಭಾಷಾ ರಾಜಕಾರಣ ಮತ್ತು ವಿದ್ವತ್ತಿನ ಪ್ರದರ್ಶನದಲ್ಲಿ ಸಾಮಾನ್ಯ ಜನ ಕಾಣೆಯಾಗುತ್ತಿದ್ದಾರೆ. ರಾಜಪ್ರಭುತ್ವ, ಧರ್ಮಪ್ರಭುತ್ವ, ಭಾಷಾಪ್ರಭುತ್ವ ಇವೆಲ್ಲವುಗಳನ್ನು ಎದುರಿಸಿದ ಪ್ರತಿರೋಧಿಸಿದ ಸಣ್ಣ ಸಣ್ಣ ಪ್ರಯತ್ನಗಳು ಎಲ್ಲ ಕಾಲದಲ್ಲಿ ಇದ್ದವು ಎಂಬುದಕ್ಕೆ ಬಹಳಷ್ಟು ಉದಾಹರಣೆಗಳಿವೆ ಎಂದು ತಿಳಿಸಿದರು.
ಭಾಷಾಪ್ರಭುತ್ವದ ಗಡಿ ದಾಟಿಸಿದ ರಾಜನೆಂದರೆ ಅಶೋಕ ಚಕ್ರವರ್ತಿ. ತನ್ನ ಧರ್ಮಪ್ರಚಾರಕ್ಕಾಗಿ ಪಾಲಿ ಭಾಷೆಯನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಪ್ರಚುರ ಪಡಿಸಿದನು. ಅಶೋಕನ ಮೂಲಕ ಎಲ್ಲ ಸ್ಥಳಿಯ ಭಾಷೆಗಳೊಂದಿಗೆ ಪ್ರಾಕೃತ ಅನುಸಂಧಾನ ನಡೆಸಿತು. ವೈದಿಕ ಧರ್ಮ ತನ್ನ ದಾಖಲೀಕರಣಕ್ಕೆ ಸಂಸ್ಕೃತ ಬಳಿಸಿಕೊಂಡಂತೆ ಜೈನ, ಬೌದ್ಧ ಧರ್ಮಗಳು ಪಾಲಿ ಪ್ರಾಕೃತ ಭಾಷೆಯನ್ನು ತಮ್ಮ ಧರ್ಮ ಪ್ರಚಾರಕ್ಕಾಗಿ ಹಾಗೂ ನೆಲದ ಸಂಸ್ಕೃತಿಯ ದಾಖಲೀಕರಣಕ್ಕಾಗಿ ಈ ಭಾಷೆಯನ್ನು ದುಡಿಸಿಕೊಂಡಿವೆ ಎಂದು ಹೇಳಿದರು. ಇಲ್ಲಿ ಮಂಡನೆಯಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದಾಗಿ ತಿಳಿಸಿದರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಗೌರವಾನ್ವಿತ ಯೋಜನಾ ನಿರ್ದೇಶಕರಾದ ಡಾ. ಎಸ್. ಪಿ. ಪದ್ಮಪ್ರಸಾದ್ ಅವರು ಗಣ್ಯರನ್ನು ಪರಿಚಯಿಸಿ ಪ್ರಾಸ್ತಾವಿಕ ನುಡಿಯುತ್ತ ಪ್ರಥಮ ಬಾರಿಗೆ ಇಂತಹ ಅಪರೂಪವಾದ ವಿಚಾರಸಂಕಿರಣ ನಡೆಯುತ್ತಿರುವುದು ಚರಿತ್ರಾರ್ಹವಾಗಿದೆ ಎಂದರು. ಡಾ. ಹನುಮಣ್ಣನಾಯಕ ದೊರೆ ಅವರ ನೇತೃತ್ವದಲ್ಲಿ ಕರುಣಾಳು ಬಾ ಬೆಳಕೆ, ಮಾತೆಂಬುದು ಜ್ಯೋತಿರ್ಲಿಂಗ ಹಾಗೂ ನಾಡಗೀತೆಯ ಮೂಲಕ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ. ಶಿವಾನಂದ ವಿರಕ್ತಮಠ ನಿರೂಪಿಸಿದರು. ವಿಚಾರಸಂಕಿರಣದ ಸಂಯೋಜನಾಧಿಕಾರಿಯಾದ ಡಾ. ಸಿ. ಮಹದೇವ ಅವರು ವಂದಿಸಿದರು.
ನಂತರ ಪ್ರಾಕೃತ ಕಥಸಾಹಿತ್ಯ ಮತ್ತು ಭಾರತೀಯ ಸಾಂಸ್ಕೃತಿಕ ಪರಂಪರೆ ಹಾಗೂ ಪ್ರಾಕೃತ ಮತ್ತು ಕೆಲವು ಭಾರತೀಯ ಭಾಷೆಗಳ ಅಂತರ್‌ಸಂಬಂಧ ಕುರಿತು ಪ್ರಬಂಧಗಳು ಮಂಡನೆಯಾದವು.
ಸಂಜೆ ಹಾಸನದ ಅಂಬಳೆ ರಾಜೇಶ್ವರಿ ಮತ್ತು ತಂಡದವರು ಪ್ರಾಕೃತ ಜೈನ ಕಾವ್ಯಗಳಲ್ಲಿ ಸರಸ್ವತಿಯ ಕಲ್ಪನೆ ಕುರಿತು ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು.

 

 

 

ಪ್ರಾಕೃತ-ಕನ್ನಡ : ಪರಂಪರೆ ಮತ್ತು ಪ್ರಭಾವ

೮, ೯ ಮತ್ತು ೧೦ನೇ ಡಿಸೆಂಬರ್ ೨೦೧೬
ಅಂತಾರಾಷ್ಟ್ರೀಯ ವಿಚಾರಸಂಕಿರಣದ ಪತ್ರಿಕಾ ವರದಿ- ೧೦.೧೨.೨೦೧೬

02-2

ಗೋಷ್ಠಿ ಎರಡರಲ್ಲಿ ಪ್ರಬಂಧಕಾರರು

01-4

ಗೋಷ್ಠಿ ಒಂದರಲ್ಲಿ ಹಂಪಿ ಪರಿಸರದ ಜಿನಾಲಯಗಳನ್ನು ಕುರಿತು ಅಕ್ತರ್‌ಖಾನಮ್ ಹೆಚ್.ಎಸ್. ಪ್ರಬಂಧ ಮಂಡಿಸುತ್ತಿದ್ದಾರೆ.

ಕನ್ನಡ ವಿಶ್ವವಿದ್ಯಾಲಯ ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರವು ೮, ೯ ಮತ್ತು ೧೦ನೇ ಡಿಸೆಂಬರ್ ೨೦೧೬ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಾಕೃತ-ಕನ್ನಡ : ಪರಂಪರೆ ಮತ್ತು ಪ್ರಭಾವ ಅಂತಾರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಏಕಕಾಲದಲ್ಲಿ ೨ ವಿಶೇಷ ಗೋಷ್ಠಿಗಳು ನಡೆದವು. ೨ ಗೋಷ್ಠಿಗಳಲ್ಲಿ ಉದಯೋನ್ಮುಖ ಸಂಶೋಧಕರು ಪ್ರಬಂಧಗಳನ್ನು ಮಂಡಿಸಿದರು.
ಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ೧ನೇ ಗೋಷ್ಠಿಯು ಡಾ. ಕಮಲಾ ಹಂಪನಾ ಅವರ ಉಪಸ್ಥಿತಿಯಲ್ಲಿ ಭಾಷಾಂತರ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಠಲರಾವ್ ಗಾಯಕ್ವಾಡ್ ಅವರು ಅಧ್ಯಕ್ಷತೆಯಲ್ಲಿ ನಡೆಯಿತು. ಡಾ. ಬಿ.ಜಿ.ಚನ್ನಪ್ಪ ಅವರು ಕರ್ನಾಟಕ ಮತ್ತು ಪ್ರಾಕೃತ ಸಂಬಂಧ: ಭಾಷೆಗೆ ಸಂಬಂಧಿಸಿದಂತೆ ಕುರಿತು, ರವೀಂದ್ರ ಬೆಟಗೇರಿ ಅವರು ಪ್ರಾಕೃತ ಮತ್ತು ಕನ್ನಡದಲ್ಲಿ ಸಂಸ್ಕೃತ ಪದಗಳ ದ್ವನಿ ಬದಲಾವಣೆಯ ಸ್ವರೂಪ ಕುರಿತು, ಗಂಗಪ್ಪ ಎ. ಅವರು ಕನ್ನಡ ಜೈನ ಸಾಹಿತ್ಯದ ಮೇಲೆ ಪ್ರಾಕೃತದ ಪ್ರಭಾವ ಕುರಿತು, ಗಾದೆಪ್ಪ ಅವರು ಜೈನ ಪ್ರಾಕೃತದ ಸಾಹಿತ್ಯ ಕುರಿತು, ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಜೈನ ಸಾಹಿತ್ಯದಲ್ಲಿ ರಂಗಭೂಮಿಯ ಸಂಬಂಧಗಳು ಹಾಗೂ ಎಸ್.ಎಸ್. ವೀರೇಶ ಉತ್ತಂಗಿ ಅವರು ಹಂಪಿ ಮತ್ತು ಜೈನ ಧರ್ಮ ಕುರಿತು ಪ್ರಬಂಧಗಳನ್ನು ಮಂಡಿಸಿದರು. ಡಾ. ಗಾದೆಪ್ಪ ಅವರು ಗೋಷ್ಠಿಯನ್ನು ನಿರ್ವಹಿಸಿದರು.
ಚರಿತ್ರೆಯ ಹಿನ್ನೆಲೆಯಲ್ಲಿ ೨ನೇ ಗೋಷ್ಠಿಯು ಡಾ. ಹಂಪ ನಾಗರಾಜಯ್ಯ ಅವರ ಉಪಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ದೇವರಕೊಂಡಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಕ್ತರ್‌ಖಾನಮ್ ಹೆಚ್.ಎಸ್. ಅವರು ಹಂಪಿ ಪರಿಸರದ ಜಿನಾಲಯಗಳನ್ನು ಕುರಿತು, ಲತಾ ಬಿ.ಕೆ. ಮತ್ತು ಮಂಜಣ್ಣ ಪಿ.ಬಿ. ಅವರು ಹೊಳಲ್ಕೆರೆ ಪಟ್ಟಣದ ಜೈನ ಶಾಸನ ಮತ್ತು ಶಿಲ್ಪಗಳು ಕುರಿತು, ಡಾ.ಎಸ್.ವೈ. ಸೋಮಶೇಖರ್ ಅವರು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಜಿನಾಲಯಗಳ ಪರಿವರ್ತನೆ ಕುರಿತು, ಗೀತಾ ಪೋಲಿಸ್ ಪಾಟೀಲ ಅವರು ಕೊಪ್ಪಳ ಜಿಲ್ಲೆಯ ಜೈನ ಕೇಂದ್ರಗಳ ಕುರಿತು, ಲೋಕಣ್ಣ ಭಜಂತ್ರಿ ಅವರು ಲೋಕಾಪುರ ಗ್ರಾಮದಲ್ಲಿ ಪರಿವರ್ತನೆಗೊಂಡ ಜೈನ ಬಸದಿ ಕುರಿತು, ರಂಜಿತ ಆರ್. ಅವರು ಮಲಸಿಂಗೇನಹಳ್ಳಿ ಪಾರ್ಶ್ವನಾಥ ಕುರಿತು, ಅಶ್ವಿನಿ ಬಸಪ್ಪ ಕರೀಕಟ್ಟಿ ಅವರು ಬೆಳಗಾವಿ ತಾಲ್ಲೂಕಿನ ಜಿನಾಲಯಗಳನ್ನು ಕುರಿತು ಪ್ರಬಂಧಗಳನ್ನು ಮಂಡಿಸಿದರು. ಕರ್ನಾಟಕದಲ್ಲಿ ಜೈನ ವಾಸ್ತುಕಲೆಯ ವೈಶಿಷ್ಟ್ಯಗಳು ಕುರಿತು ಡಾ. ಅಪ್ಪಣ್ಣ ಎನ್. ಹಂಜೆ ಅವರು, ಪ್ರಾಚೀನ ಜೈನ ಕೇಂದ್ರ: ಸಂಕೀಘಟ್ಟ ಕುರಿತು ರೇವಣಸಿದ್ದಯ್ಯ ಕೆ. ಅವರು, ಕರ್ನಾಟಕದಲ್ಲಿ ಜೈನ ಚಿತ್ರಕಲೆ ಕುರಿತು ಡಾ. ಎಚ್.ಎನ್. ಕೃಷ್ಣೇಗೌಡ ಅವರು, ರಾಯಚೂರು ಜಿಲ್ಲೆಯ ಶಾಸನ ಉಲ್ಲೇಖಿತ ಜೈನ ಬಸದಿಗಳು ಕುರಿತು ಡಾ. ಸುಜಾತ ಅವರು, ಹೂವಿನ ಹಡಗಲಿ ತಾಲೂಕಿನ ಜಿನಾಲಯಗಳು ಕುರಿತು ಡಾ. ಎ. ನಾಗವೇಣಿ ಅವರು ಮತ್ತು ಯಳವಟ್ಟಿಯ ಅಪ್ರಕಟಿತ ಶಾಸನ ಕುರಿತು ಡಾ. ಚಾರುಲತ ಬಿ.ಟಿ. ಅವರು ಪ್ರಬಂಧಗಳನ್ನು ಮಂಡಿಸಿದರು. ಡಾ. ಸಿ. ಮಹದೇವ ಅವರು ನಿರೂಪಿಸಿದರು.
ಎರಡು ಗೋಷ್ಠಿಗಳಲ್ಲಿ ಉಪಸ್ಥಿತರಿದ್ದ ಡಾ. ಹಂಪ ನಾಗರಾಜಯ್ಯ, ಡಾ. ಕಮಲಾ ಹಂಪನಾ, ಡಾ.ಕ್ರಿಸ್ಟೀನ್ ಚೋಝನಾಕಿ, ಡಾ. ವಿಠಲರಾವ್ ಗಾಯಕ್ವಾಡ್, ಡಾ. ದೇವರಕೊಂಡಾರೆಡ್ಡಿ ಸಂಶೋಧಕರು ಅತ್ಯುತ್ತಮ ಪ್ರಬಂಧಗಳನ್ನು ಮಂಡಿಸಿದ್ದಾರೆ. ಆದರೆ ಇನ್ನೂ ಆಳವಾದ ಅಧ್ಯಯನ ನಡೆಸಿ ಪ್ರಬಂಧಗಳನ್ನು ಮಂಡಿಸಬಹುದಾಗಿತ್ತು ಎಂದು ಪ್ರೋತ್ಸಾಹಿಸಿದರು. ಡಾ. ಪದ್ಮಪ್ರಸಾದ್ ಅವರು ಸಂಶೋಧಕರು ಸುಲಭವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಕ್ಲಿಷ್ಟಕರವಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಶ್ರಮವಹಿಸಿ ಆಳವಾದ ಅಧ್ಯಯನ ಮಾಡಿದರೆ ಎತ್ತರಕ್ಕೆ ಏರಲು ಸಾಧ್ಯವಾಗುತ್ತದೆ ಎಂದು ನುಡಿದರು.
ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಹಾಗೂ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು, ಡಾ. ಅಶೋಕಕುಮಾರ ರಂಜೇರೆ, ಡಾ. ಪಿ. ಮಹಾದೇವಯ್ಯ ಮೊದಲಾದವರು ಉಪಸ್ಥಿತರಿದ್ದರು.

 

 

ಪ್ರಾಕೃತ-ಕನ್ನಡ : ಪರಂಪರೆ ಮತ್ತು ಪ್ರಭಾವ

೮ ಮತ್ತು ೯ ಡಿಸೆಂಬರ್ ೨೦೧೬
ಪತ್ರಿಕಾ ವರದಿ- ೦೯.೧೨.೨೦೧೬

 

dsc05897-1

ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು

dsc05855-1

ನಾಡೋಜ ಡಾ. ಹಂಪನಾ ಮಾತನಾಡುತ್ತಿರುವುದು

ನಾಡೋಜ ಶಬ್ದ ಪ್ರಾಕೃತದಿಂದ ಬಂದಿದೆ. ಸಂಸ್ಕೃತದಿಂದ ಉಪಾಧ್ಯಾಯ ಶಬ್ದವು ಪ್ರಾಕೃತಕ್ಕೆ ಹೋಗಿ ಓಜ್ಯಾ ಆಗಿದೆ. ಇದನ್ನು ಕನ್ನಡವು ಜೀರ್ಣಿಸಿಕೊಂಡಿತು. ಹೀಗೆ ಹರಡಿಕೊಳ್ಳುವ ಬೆರತುಕೊಳ್ಳುವ ಗುಣ ಪ್ರಾಕೃತದಲ್ಲಿದೆ. ಜನ ಬಯಸಿದ ಜನ ಪ್ರೀತಿಸುವ ಪ್ರಾಕೃತ ಎಂದು ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರವು ೮ ಮತ್ತು ೯ ಡಿಸೆಂಬರ್ ೨೦೧೬ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಾಕೃತ-ಕನ್ನಡ : ಪರಂಪರೆ ಮತ್ತು ಪ್ರಭಾವ ಅಂತಾರಾಷ್ಟ್ರೀಯ ವಿಚಾರಸಂಕಿರಣ ತಿರುಳಿನೊಂದಿಗೆ ಅರಿವಿನ ವಿಸ್ತಾರದಲ್ಲಿ ಮಾತನಾಡುತ್ತಿದ್ದರು.
ಶೃಂಗಾರ ರಸ ತುಂಬಿತುಳುಕುತ್ತಿರುವುದು ಪ್ರಾಕೃತ ಕಾವ್ಯಗಳಲ್ಲಿ. ಪ್ರಾಕೃತದಲ್ಲಿರುವ ಮರಣ ಮೀಮಾಂಸೆ ಆರಾಧನಾ ಗ್ರಂಥದಲ್ಲಿ ಮರಣದ ವಿಚಾರ ಸತ್ವ ರೂಪಗಳನ್ನು ಮರಣದ ವರ್ಗೀಕರಣಗಳನ್ನು ಕುರಿತು ಚರ್ಚಿಸಲಾಗಿದೆ. ಕನ್ನಡ ಶಾಸನ ಪ್ರಪಂಚದಲ್ಲಿ, ಕರ್ನಾಟಕದ ಚರಿತ್ರೆಯಲ್ಲಿ, ಇಡೀ ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಶ್ರೇಷ್ಠವಾದ ಪಂಡಿತಪಂಡಿತ(ಪಣ್-ಹಣ್ಣು, ಮಾಗಿದ ಹಣ್ಣು) ಮರಣವನ್ನು ಪಡೆದ ಒಬ್ಬಳೇ ಮಹಿಳೆ ಎಂದರೆ ಶಾಂತಲಾದೇವಿ ತಾಯಿ ಮಾಚಿಕಬ್ಬೆ. ಜೈನರು ಪ್ರಾಕೃತವನ್ನು ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಧರ್ಮದ ವಿಚಾರದಲ್ಲಿ ಅತ್ಯಂತ ಹೆಚ್ಚು ಧಾರ್ಮಿಕ ಕೊಡುಗೆ ನೀಡಿದವರು ಜೈನ ಮಹಿಳೆಯರು. ಲಿಪಿಕಾರರಿಂದ ಗ್ರಂಥಗಳನ್ನು ಪ್ರತಿಮಾಡಿಸಿ ಮುನಿಗಳಿಗೆ ಶಾಸ್ತ್ರದಾನ ಕೊಡುವುದು ವಿಶಿಷ್ಟವಾಗಿತ್ತು. ಇದು ವಿದ್ಯೆಯ ಪ್ರಸರಣಕ್ಕೆ ಕಾರಣವಾಯಿತು. ೫ನೇ ಶತಮಾನದಲ್ಲಿ ಬನವಾಸಿಯ ಕದಂಬರು ಭಾರತದಲ್ಲಿ ಪ್ರಪ್ರಥಮವಾಗಿ ಪದ್ಮಾವತಿ ದೇವಿಗೆ ದೇವಾಲಯವನ್ನು ಕಟ್ಟಿಸಿಕೊಟ್ಟಿದ್ದಾರೆ ಎಂದು ಉತ್ಖನನದಿಂದ ತಿಳಿದುಬಂದಿದೆ ಎಂದು ಹಂಪನಾ ಅವರು ತಿಳಿಸಿದರು.
ತಿರುಳಿನೊಂದಿಗೆ ಅರಿವಿನ ವಿಸ್ತಾರ ಮಾಡುತ್ತ ಡಾ. ಜಯಕುಮಾರ ಉಪಾಧ್ಯೆ ಅವರು ಸಂಸ್ಕೃತ ಮತ್ತು ಪ್ರಾಕೃತ ಒಡಹುಟ್ಟಿದವರು. ಸಂಸ್ಕೃತದಲ್ಲಿ ಸುಗಂಧವಿರುವುದಕ್ಕೆ ಪ್ರಾಕೃತ ಕಾರಣ. ಈ ವರೆಗೂ ಸಂಸ್ಕೃತ ಸಾಹಿತ್ಯಕ್ಕೆ ಪ್ರಾಕೃತ ಟೀಕೆ ಬಂದಿರುವುದು ಎಲ್ಲೂ ಇಲ್ಲ. ಮೂಲ ಪ್ರಾಕೃತಕ್ಕೆ ಟೀಕಾ ಸಾಹಿತ್ಯ ಬಂದಿರುವುದು ಇನ್ನುಳಿದ ಭಾಷೆಯಲ್ಲಿ. ಇದು ಪ್ರಾಕೃತದ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡುತ್ತ ಇಂದು ಭಾರತದ ಸಂದರ್ಭದಲ್ಲಿ ಧಾರ್ಮಿಕ ಕಾರಣಕ್ಕಾಗಿ ಇಂದು ಜೈನ ಧರ್ಮವನ್ನು ಜಾತಿಯಾಗಿ ಪರಿಭಾವಿಸಲಾಗಿದೆ. ಆದರೆ ಆ ಹೊತ್ತಿನೊಳಗೆ ಜೈನ ಜಾತಿ ಆಗಿರಲಿಲ್ಲ. ಧರ್ಮವಾಗಿತ್ತು. ಬೌದ್ಧ ಮತ್ತು ಜೈನ ಧರ್ಮಗಳು ಜೊತೆ ಜೊತೆಯಾಗಿ ಲೋಕನೀತಿಯನ್ನು ಲೋಕಸಂಹಿತೆಯನ್ನು ತನ್ನದೇ ಆದ ಭಾಷಾ ರಾಜಕಾರಣದ ಮೂಲಕ ವೈದಿಕ ಭಾಷೆಗೆ ಪರ್ಯಾಯವಾದ ಒಂದು ಸಾಮಾಜಿಕವಾದ, ಧಾರ್ಮಿಕವಾದ ಬಹಳ ದೊಡ್ಡ ಪೆಟ್ಟನ್ನು ಕೊಡುವ ಕೆಲಸ ಮಾಡಿದೆ. ಅದನ್ನು ನಾವು ಆಧುನಿಕ ಕಣ್ಣಿನಿಂದ ನೋಡುವ ಅಗತ್ಯವಿದೆ. ಧಾರ್ಮಿಕ ಪರಿಭಾಷೆ ಹೊರತು ಪಡಿಸಿದ ಹಾಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ಪರಿಭಾಷೆಯೊಳಗೆ ಪ್ರಾಕೃತ ಗ್ರಂಥಗಳನ್ನು ನೋಡುವ ಅಗತ್ಯವಿದೆ. ಎಲ್ಲ ಧರ್ಮಗಳು ಅಹಿಂಸೆಯನ್ನು ಪ್ರತಿಪಾದಿಸಿವೆ. ಜೈನ, ಬೌದ್ಧ ಧರ್ಮಗಳು ಜನಸಾಮಾನ್ಯರನ್ನು ಕುರಿತು ಮಾತಾಡುವುದು ಅಂದು ಅಗತ್ಯವಾಗಿತ್ತು. ಜೈನ ಧರ್ಮದ ಕಾವ್ಯಗಳು ಕೇವಲ ಕಾವ್ಯಗಳಲ್ಲ. ಸಾಮಾಜ ಶಾಸ್ತ್ರೀಯವಾಗಿ, ವೈಜ್ಞಾನಿಕವಾಗಿ ಅಧ್ಯಯನ ಮಾಡಿದರೆ ಹೊಸ ಹೊಸ ವಿಚಾರಗಳು ದೊರೆಯುತ್ತವೆ ಎಂದು ನುಡಿದರು.
ಡಾ. ವಿಠಲರಾವ್ ಗಾಯಕ್ವಾಡ್ ಅವರು ಸ್ವಾಗತಿಸಿದರು. ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ಗೌರವ ಯೋಜನಾ ನಿರ್ದೇಶಕರು ವಂದಿಸಿದರು. ಡಾ. ಕೇಶವಮೂರ್ತಿ ನಿರೂಪಿಸಿದರು. ಶ್ರೀಮತಿ ಲೀಲಾಲೋಚನ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಡಾ. ಕಮಲಾ ಹಂಪನಾ, ಡಾ. ಕ್ರಿಸ್ಟೀನ್ ಚೋಝನಾಕಿ ಹಾಗೂ ಪ್ರಬಂಧಗಳನ್ನು ಮಂಡಿಸಿದ ಎಲ್ಲ ವಿದ್ವಾಂಸರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

ವಿಶೇಷ ಉಪನ್ಯಾಸ : ನೋಟು ರದ್ದತಿ ಮತ್ತು ಕಪ್ಪು ಹಣ

ಪತ್ರಿಕಾ ವರದಿ- ೭.೧೨.೨೦೧೬dsc04928dsc04918ವಿಶೇಷ ಉಪನ್ಯಾಸ ನೀಡುತ್ತಿರುವ ಡಾ. ಎಂ. ಚಂದ್ರಪೂಜಾರಿ ಅವರು

ನೋಟು ರದ್ದತಿಯಿಂದ ಹೊಸ ಕಪ್ಪು ಹಣ ಸೃಷ್ಟಿಯಾಗುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಇದು ಬಹಳ ಮುಖ್ಯವಾದ ಸಂಗತಿ ಎಂದು ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ. ಚಂದ್ರಪೂಜಾರಿ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿ ಅಧ್ಯಯನ ವಿಭಾಗ ತನ್ನ ವಿಭಾಗದಲ್ಲಿ ೭ನೇ ಡಿಸೆಂಬರ್ ೨೦೧೬ರಂದು ಏರ್ಪಡಿಸಿದ್ದ ನೋಟುರದ್ದತಿ ಮತ್ತು ಕಪ್ಪುಹಣ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ನೋಟು ರದ್ದತಿಗೆ ಕಾರಣವೇನೆಂದರೆ ಕಪ್ಪು ಹಣ ತಡೆಯುವುದು, ಭಯೋತ್ಪಾದನೆ ಕಡಿಮೆ ಮಾಡುವುದು, ಖೋಟಾನೋಟಿನ ಸಮಸ್ಯೆ ತಡೆಯುವುದು. ಇವೆಲ್ಲ ನೋಟಿನ ರದ್ದತಿಗೆ ತತ್‌ಕ್ಷಣದ ಕಾರಣಗಳು. ಅಲ್ಲದೆ ಅಸಮಾನತೆಯ ನಿವಾರಣೆ ಮತ್ತು ನಗದು ರಹಿತ ಸಮಾಜದ ನಿರ್ಮಾಣ ಇವು ನೋಟು ರದ್ದತಿಗೆ ದೂರಗಾಮಿ ಉದ್ದೇಶಗಳಾಗಿದ್ದವು. ತೆರಿಗೆಯಿಂದ ವಂಚಿಸಲ್ಪಟ್ಟ, ಸರ್ಕಾರದ ಗಮನಕ್ಕೆ ಬಾರದ ಎಲ್ಲ ಆದಾಯಗಳು ಕಪ್ಪು ಹಣ ಆಗುತ್ತದೆ. ಕಪ್ಪು ಹಣಕ್ಕೆ ಕಾನೂನು ಬಾಹಿರ ಮತ್ತು ಕಾನೂನು ಸಮ್ಮತವಾದ ಎರಡು ಮೂಲಗಳಿವೆ. ಅಚ್ಚರಿಯೆಂದರೆ ಕಾನೂನು ಸಮ್ಮತ ಮೂಲದಿಂದ ಶೇ.೮೦.ರಷ್ಟು ಕಪ್ಪುಹಣ ಸೃಷ್ಟಿಯಾಗುತ್ತದೆ. ಲಂಚ, ಹಫ್ತಾ ವಸೂಲಿ, ಡ್ರಗ್ ಮಾಫಿಯ, ಕಿಡ್ನಾಪಿಂಗ್ ಇವೆಲ್ಲ ಕಾನೂನುಬಾಹಿರ ಕಪ್ಪು ಹಣ ಸೃಷ್ಟಿಯಾಗುವ ಮೂಲಗಳು.
ನಾವು ಖರೀಸಿದ ನಂತರ ರಸೀದಿ ಅಥವಾ ಬಿಲ್ಲನ್ನು ಪಡೆಯದಿರುವುದರಿಂದ ಪರೋಕ್ಷವಾಗಿ ಕಪ್ಪುಹಣ ಸೃಷ್ಟಿಯಾಗಲು ಕಾರಣರಾಗುತ್ತೇವೆ. ಯಾವುದೇ ವೈದ್ಯರು ಹಣ ಪಡೆದಿರುವುದಕ್ಕೆ ರಸೀದಿ ಕೊಡುವುದಿಲ್ಲ. ಆದಾಯ ರಫ್ತು ವ್ಯವಹಾರದಲ್ಲಿರುವವರು ರಿಯಲ್ ಎಸ್ಟೇಟ್ ವ್ಯವಹಾರ ಇವೆಲ್ಲ ನ್ಯಾಯಸಮ್ಮತವಾಗಿ ಕಪ್ಪು ಹಣ ಸೃಷ್ಟಿಸುವ ಮೂಲಗಳಾಗಿವೆ.
ನೋಟು ರದ್ದತಿಯಿಂದ ಸ್ವಲ್ಪ ಹಣ ಬಂದಿರಬಹುದು ಆದರೆ ಹಣ ಸಂಗ್ರಹಿಸಿದವರು ಬಡ ಸಂಬಂಧಿಕರನ್ನು ಸಂಪರ್ಕಿಸಿ ಅವರ ಮೂಲಕ ಖಾತೆ ತೆಗೆಸಿ ತಮ್ಮ ಹಣವನ್ನು ಬಿಳಿ ಮಾಡಿಕೊಂಡಿದ್ದಾರೆ. ನಂತರ ಇದಕ್ಕಾಗಿಯೇ ಏಜೆನ್ಸಿಗಳು ಹುಟ್ಟಿದವು. ನೋಟು ರದ್ದತಿ ವಿಫಲವಾಗಲು ಜನ ಹೀಗೆ ಬೇರೆ ಬೇರೆ ದಾರಿ ಕಂಡುಕೊಂಡರು. ಆದರೆ ಹೊಸ ಕಪ್ಪು ಹಣ ಸೃಷ್ಟಿಯಾಗುವುದನ್ನು ತಡೆಯಲಾಗಲಿಲ್ಲ. ನೋಟು ರದ್ದತಿ ಕ್ರಮವು ಕಪ್ಪು ಹಣ ಸೃಷ್ಟಿಯಾಗುವ ಮೂಲದ ಮೇಲೆ ದಾಳಿ ಮಾಡುತ್ತಿಲ್ಲ ಎಂದು ತಿಳಿಸಿದರು.
ಆದ್ದರಿಂದ ನಾವೆಲ್ಲ ಬಿಲ್ ಪಡೆದು ವ್ಯವಹಾರ ಮಾಡಬೇಕು. ಎಲ್ಲ ವ್ಯವಹಾರಗಳು ನೋಂದಣಿಯಾಗಬೇಕು. ಎಲ್ಲರಲ್ಲೂ ಬಹಳ ಮುಖ್ಯವಾಗಿ ಪಾನ್ ಸಂಖ್ಯೆ ಇರಬೇಕು. ಎಲ್ಲರೂ ಆದಾಯ ತೆರಿಗೆಗೆ ಒಳಪಡಬೇಕು. ಇದೆಲ್ಲ ಪಾರದರ್ಶಕವಾಗಿ ಆನ್‌ಲೈನ್‌ನಲ್ಲಿ ನಡೆಯಬೇಕು. ಈ ಎಲ್ಲ ಕ್ರಮಗಳು ಗಂಭೀರವಾಗಿ ಜಾರಿಯಾದರೆ ಕಪ್ಪು ಹಣದ ಸೃಷ್ಟಿಯನ್ನು ತಡೆಯಬಹುದು. ಆದರೆ ಅಧಿಕಾರ ನಿಂತಿರುವುದೇ ಕಪ್ಪು ಹಣದ ಮೇಲೆ. ಇದು ನಮ್ಮ ಅತ್ಯಂತ ಶೋಚನೀಯ ಸಂಗತಿ ಎಂದು ಡಾ. ಎಂ. ಚಂದ್ರಪೂಜಾರಿ ಅವರು ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.
ಸಂಚಾಲಕರಾದ ಡಾ. ಸಿದ್ದಗಂಗಮ್ಮ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಎಲ್ಲ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ನಂತರ ಸಂವಾದದಲ್ಲಿ ಭಾಗಿಯಾದರು.

 

 

ಡಾ|| ಬಿ.ಆರ್. ಅಂಬೇಡ್ಕರ್ ಅವರ ೬೦ನೇ ಪರಿನಿರ್ವಾಣ ದಿನದ ಅಂಗವಾಗಿ ವಿಶೇಷ ಉಪನ್ಯಾಸ : ಅಂಬೇಡ್ಕರ್ ಕನಸಿನ ರಾಷ್ಟ್ರೀಯತೆ

0401

ಪತ್ರಿಕಾ ವರದಿ- ೬.೧೨.೨೦೧೬

ಪರಿನಿಬ್ಬಾಣ ಬುದ್ಧನಲ್ಲಿ ಲೀನವಾಗುವ ಪ್ರಕ್ರಿಯೆ. ಅಂಬೇಡ್ಕರ್ ಅವರ ಪರಿನಿಬ್ಬಾಣದ ದಿನ ಎಲ್ಲ ದಮನಿತರ ಪಾಲಿಗೆ ಎಚ್ಚೆತ್ತ ದಿನ ಎಂದು ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ.ಸಿ. ಗಣೇಶ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಕ್ಷೇಮಪಾಲನಾ ಘಟಕವು ಪಂಪ ಸಭಾಂಗಣದಲ್ಲಿ ೬ನೇ ಡಿಸೆಂಬರ್ ೨೦೧೬ರಂದು ಏರ್ಪಡಿಸಿದ್ದ ಡಾ|| ಬಿ.ಆರ್. ಅಂಬೇಡ್ಕರ್ ಅವರ ೬೦ನೇ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ಕನಸಿನ ರಾಷ್ಟ್ರೀಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನವನ್ನು ಸಮರ್ಪಿಸುವ ಸಂದರ್ಭದಲ್ಲಿ ಯಾವ ಸಮಾಜದಲ್ಲಿ ಭ್ರಾತೃತ್ವ, ಸಮಾನತೆ ಇರುವುದಿಲ್ಲವೋ ಯಾವ ದೇಶದಲ್ಲಿ ಸಮಾಜದಲ್ಲಿ ಮಾನವ ಸಮೂಹಗಳಲ್ಲಿ ಸಮಾನತೆ ಇರುವುದಿಲ್ಲವೋ ಅಲ್ಲಿ ರಾಷ್ಟ್ರ ಎನ್ನುವುದು ಕೇವಲ ಕಲ್ಪಿತ ಎಂದು ಆತಂಕದಿಂದ ನುಡಿದಿದ್ದರು. ಈ ದೇಶದಲ್ಲಿ ಸಮಾನತೆಯಿಲ್ಲ ಭ್ರಾತೃತ್ವವಿಲ್ಲ, ಸಾಮಾಜಿಕ ನ್ಯಾಯವಿಲ್ಲ ಇಂತಹ ಸಂದರ್ಭದಲ್ಲಿ ಈ ದೇಶದ ರಾಜಕೀಯ ಸ್ವಾತಂತ್ರ್ಯವನ್ನು ಯಾರಿಗೆ ಅರ್ಪಿಸಬೇಕು ಎಂದು ಅಂಬೇಡ್ಕರ್ ಅವರು ಕೇಳಿದ್ದರು. ಇನ್ನುಮುಂದೆ ಸ್ವತಂತ್ರ ಪಡೆದ ಈ ದೇಶದಲ್ಲಿ ಸಂವಿಧಾನ ಇದ್ದಾಗಲೂ ಕೂಡ ಈ ದೇಶ ಸರ್ವಾಧಿಕಾರಿಗಳ ವಶವಾಗುತ್ತದೆ ಎಂದು ಸ್ಪಷ್ಟವಾಗಿ ನುಡಿದು ಎಚ್ಚರಿಸಿದ್ದರು. ಮತೀಯ ಧಾರ್ಮಿಕ ವ್ಯವಸ್ಥೆ, ಜಾತಿ ಜನಾಂಗೀಯ ಭೇದ, ವರ್ಗಭೇದ, ಲಿಂಗಭೇದ ಇಂತಹ ಅಸಮಾನತೆಗಳಿಂದ ತುಂಬಿರುವ ಈ ದೇಶದಲ್ಲಿ ಒಂದು ಅಖಂಡ ರಾಷ್ಟ್ರೀಯತೆ ಹುಡುಕುವುದು ಕೇವಲ ಆದರ್ಶ. ಈ ದೇಶಕ್ಕೆ ರಾಜಕೀಯ ಸ್ವತಂತ್ರ ಬಂದರೆ ಅದನ್ನು ಹಂಚಿಕೊಳ್ಳುವವರು ಯಾರು ಎಂದರೆ ಬಲಿಷ್ಠ ಜಾತಿಗಳವರು. ಇದು ನನ್ನ ಆದರ್ಶದ ಸಂವಿಧಾನ ಅಲ್ಲ ಎಂದೂ ಆತಂಕ ಪಟ್ಟಿದ್ದರು ಎಂದು ಉಪನ್ಯಾಸದಲ್ಲಿ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಪ್ರಜಾಪ್ರಭುತ್ವ ಬದುಕಿನ ಕ್ರಮ ಎಂದು ಅಂಬೇಡ್ಕರ್ ಹೇಳಿದ್ದಾರೆ. ಸಂಕಟ ಅನುಭವಿಸಿದವರು ಮಾತ್ರ ನಿಷ್ಠೂರವಾಗಿ ಮಾತನಾಡಲು ಸಾಧ್ಯ ಎಂಬುದಕ್ಕೆ ಅಂಬೇಡ್ಕರ್ ಅವರು ಸಾಕ್ಷಿ. ಎಲ್ಲೋ ಒಂದು ಕಡೆಗೆ ಗಾಂಧಿಯವರನ್ನು ಅಂಬೇಡ್ಕರ್ ಅವರು ನಿರಂತರವಾಗಿ ಕಾಡಿದ್ದಾರೆ ಎಂದು ತಿಳಿಸುತ್ತ, ರಾಷ್ಟ್ರೀಯತೆ ವ್ಯಾಖ್ಯಾನವನ್ನು ಮತ್ತೆ ಮತ್ತೆ ಮುರಿದು ಕಟ್ಟಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಕ್ಷೇಮಪಾಲನಾಧಿಕಾರಿ ಡಾ. ಎಸ್. ಶಿವಾನಂದ ವಿರಕ್ತಮಠ ಪ್ರಾಸ್ತಾವಿಕ ನುಡಿದರು. ಸಂಗೀತ ವಿದ್ಯಾರ್ಥಿಗಳು ಡಾ. ಹನುಮಣ್ಣನಾಯಕ ದೊರೆ ಅವರ ನೇತೃತ್ವದಲ್ಲಿ ಬುದ್ಧಂ ಶರಣಂ ಗಚ್ಛಾಮಿ ಎಂದು ಹಾಡಿದರು. ಡಾ. ವೀರೇಶ ಜಾನೇಕಲ್ ನಿರೂಪಿಸಿ, ವಂದಿಸಿದರು.

ಡಾ|| ಬಿ.ಆರ್. ಅಂಬೇಡ್ಕರ್ ಅವರ ೬೦ನೇ ಪರಿನಿರ್ವಾಣ ದಿನದ ಅಂಗವಾಗಿ ವಿಶೇಷ ಉಪನ್ಯಾಸ : ಅಂಬೇಡ್ಕರ್ ಕನಸಿನ ರಾಷ್ಟ್ರೀಯತೆ

01-204
ಪತ್ರಿಕಾ ವರದಿ- ೬.೧೨.೨೦೧೬

ಪರಿನಿಬ್ಬಾಣ ಬುದ್ಧನಲ್ಲಿ ಲೀನವಾಗುವ ಪ್ರಕ್ರಿಯೆ. ಅಂಬೇಡ್ಕರ್ ಅವರ ಪರಿನಿಬ್ಬಾಣದ ದಿನ ಎಲ್ಲ ದಮನಿತರ ಪಾಲಿಗೆ ಎಚ್ಚೆತ್ತ ದಿನ ಎಂದು ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ.ಸಿ. ಗಣೇಶ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಕ್ಷೇಮಪಾಲನಾ ಘಟಕವು ಪಂಪ ಸಭಾಂಗಣದಲ್ಲಿ ೬ನೇ ಡಿಸೆಂಬರ್ ೨೦೧೬ರಂದು ಏರ್ಪಡಿಸಿದ್ದ ಡಾ|| ಬಿ.ಆರ್. ಅಂಬೇಡ್ಕರ್ ಅವರ ೬೦ನೇ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ಕನಸಿನ ರಾಷ್ಟ್ರೀಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನವನ್ನು ಸಮರ್ಪಿಸುವ ಸಂದರ್ಭದಲ್ಲಿ ಯಾವ ಸಮಾಜದಲ್ಲಿ ಭ್ರಾತೃತ್ವ, ಸಮಾನತೆ ಇರುವುದಿಲ್ಲವೋ ಯಾವ ದೇಶದಲ್ಲಿ ಸಮಾಜದಲ್ಲಿ ಮಾನವ ಸಮೂಹಗಳಲ್ಲಿ ಸಮಾನತೆ ಇರುವುದಿಲ್ಲವೋ ಅಲ್ಲಿ ರಾಷ್ಟ್ರ ಎನ್ನುವುದು ಕೇವಲ ಕಲ್ಪಿತ ಎಂದು ಆತಂಕದಿಂದ ನುಡಿದಿದ್ದರು. ಈ ದೇಶದಲ್ಲಿ ಸಮಾನತೆಯಿಲ್ಲ ಭ್ರಾತೃತ್ವವಿಲ್ಲ, ಸಾಮಾಜಿಕ ನ್ಯಾಯವಿಲ್ಲ ಇಂತಹ ಸಂದರ್ಭದಲ್ಲಿ ಈ ದೇಶದ ರಾಜಕೀಯ ಸ್ವಾತಂತ್ರ್ಯವನ್ನು ಯಾರಿಗೆ ಅರ್ಪಿಸಬೇಕು ಎಂದು ಅಂಬೇಡ್ಕರ್ ಅವರು ಕೇಳಿದ್ದರು. ಇನ್ನುಮುಂದೆ ಸ್ವತಂತ್ರ ಪಡೆದ ಈ ದೇಶದಲ್ಲಿ ಸಂವಿಧಾನ ಇದ್ದಾಗಲೂ ಕೂಡ ಈ ದೇಶ ಸರ್ವಾಧಿಕಾರಿಗಳ ವಶವಾಗುತ್ತದೆ ಎಂದು ಸ್ಪಷ್ಟವಾಗಿ ನುಡಿದು ಎಚ್ಚರಿಸಿದ್ದರು. ಮತೀಯ ಧಾರ್ಮಿಕ ವ್ಯವಸ್ಥೆ, ಜಾತಿ ಜನಾಂಗೀಯ ಭೇದ, ವರ್ಗಭೇದ, ಲಿಂಗಭೇದ ಇಂತಹ ಅಸಮಾನತೆಗಳಿಂದ ತುಂಬಿರುವ ಈ ದೇಶದಲ್ಲಿ ಒಂದು ಅಖಂಡ ರಾಷ್ಟ್ರೀಯತೆ ಹುಡುಕುವುದು ಕೇವಲ ಆದರ್ಶ. ಈ ದೇಶಕ್ಕೆ ರಾಜಕೀಯ ಸ್ವತಂತ್ರ ಬಂದರೆ ಅದನ್ನು ಹಂಚಿಕೊಳ್ಳುವವರು ಯಾರು ಎಂದರೆ ಬಲಿಷ್ಠ ಜಾತಿಗಳವರು. ಇದು ನನ್ನ ಆದರ್ಶದ ಸಂವಿಧಾನ ಅಲ್ಲ ಎಂದೂ ಆತಂಕ ಪಟ್ಟಿದ್ದರು ಎಂದು ಉಪನ್ಯಾಸದಲ್ಲಿ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಪ್ರಜಾಪ್ರಭುತ್ವ ಬದುಕಿನ ಕ್ರಮ ಎಂದು ಅಂಬೇಡ್ಕರ್ ಹೇಳಿದ್ದಾರೆ. ಸಂಕಟ ಅನುಭವಿಸಿದವರು ಮಾತ್ರ ನಿಷ್ಠೂರವಾಗಿ ಮಾತನಾಡಲು ಸಾಧ್ಯ ಎಂಬುದಕ್ಕೆ ಅಂಬೇಡ್ಕರ್ ಅವರು ಸಾಕ್ಷಿ. ಎಲ್ಲೋ ಒಂದು ಕಡೆಗೆ ಗಾಂಧಿಯವರನ್ನು ಅಂಬೇಡ್ಕರ್ ಅವರು ನಿರಂತರವಾಗಿ ಕಾಡಿದ್ದಾರೆ ಎಂದು ತಿಳಿಸುತ್ತ, ರಾಷ್ಟ್ರೀಯತೆ ವ್ಯಾಖ್ಯಾನವನ್ನು ಮತ್ತೆ ಮತ್ತೆ ಮುರಿದು ಕಟ್ಟಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಕ್ಷೇಮಪಾಲನಾಧಿಕಾರಿ ಡಾ. ಎಸ್. ಶಿವಾನಂದ ವಿರಕ್ತಮಠ ಪ್ರಾಸ್ತಾವಿಕ ನುಡಿದರು. ಸಂಗೀತ ವಿದ್ಯಾರ್ಥಿಗಳು ಡಾ. ಹನುಮಣ್ಣನಾಯಕ ದೊರೆ ಅವರ ನೇತೃತ್ವದಲ್ಲಿ ಬುದ್ಧಂ ಶರಣಂ ಗಚ್ಛಾಮಿ ಎಂದು ಹಾಡಿದರು. ಡಾ. ವೀರೇಶ ಜಾನೇಕಲ್ ನಿರೂಪಿಸಿ, ವಂದಿಸಿದರು.

‘ಕನ್ನಡ-ಪ್ರಾಕೃತ: ಪರಂಪರೆ ಮತ್ತು ಪ್ರಭಾವ’ : ಕನ್ನಡ ವಿ.ವಿ. : ಅಂತಾರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ

photo

ಡಾ. ಕ್ರಿಸ್ಟೀನ್ ಚೋಝನಾಕಿ
ಸಮ್ಮೇಳನದ ಉದ್ಘಾಟಕರು

ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಕನ್ನಡ ವಿಶ್ವವಿದ್ಯಾಲಯ ಇದೇ ವರ್ಷದ ಡಿಸೆಂಬರ್ ೮ ಮತ್ತು ೯ರಂದು ವಿಶಿಷ್ಟವಾದ ಅಂತಾರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಈ ವರ್ಷ ತಾನೇ ಕನ್ನಡ ವಿ.ವಿ.ಯಲ್ಲಿ ಆರಂಭವಾಗಿರುವ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರ’ದ ವತಿಯಿಂದ ಏರ್ಪಾಟಾಗುತ್ತಿದೆ. ‘ಕನ್ನಡ-ಪ್ರಾಕೃತ: ಪರಂಪರೆ ಮತ್ತು ಪ್ರಭಾವ’ ಎಂಬುದು ವಿಚಾರಸಂಕಿರಣದ ಪ್ರಧಾನ ಆಶಯ. ಪ್ರಾಕೃತಕ್ಕೂ ಕರ್ನಾಟಕಕ್ಕೂ ಇರುವ ಸಂಬಂಧ ಹಾಗೂ ಭಾರತೀಯ ಚಿಂತನೆಯನ್ನು ವಿವಿಧ ಭಾರತೀಯ ಭಾಷೆಗಳನ್ನು ಪ್ರಭಾವಿಸುವ ರೀತಿಯನ್ನು ಅರ್ಥಮಾಡಿಕೊಳ್ಳುವುದು ಈ ಸಂಕಿರಣದ ಮುಖ್ಯ ಉದ್ದೇಶ. ಫ್ರಾನ್ಸ್‌ನಿಂದ ಬರಲಿರುವ ಡಾ.(ಶ್ರೀಮತಿ) ಕ್ರಿಸ್ಟೀನ್ ಚೋಝನಾಕಿ ಅವರು ಸಮ್ಮೇಳವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ವಿದ್ವಾಂಸ ಡಾ. ಹಂಪ ನಾಗರಾಜಯ್ಯ ಸಮ್ಮೇಳನದ ಶಿಖರೋಪನ್ಯಾಸ(ಏeಥಿಟಿoಣe ಚಿಜಜಡಿess) ಮಾಡುವರಲ್ಲದೆ ವಿಶೇಷ ಉಪನ್ಯಾಸವೊಂದನ್ನು ನೀಡಲಿದ್ದಾರೆ. ದೆಹಲಿ, ಜೈಪುರ, ಉದಯಪುರ, ಸೊಲ್ಲಾಪುರ ಹಾಗೂ ಕೊಲ್ಲಾಪುರಗಳಿಂದ, ಧಾರವಾಡ, ಮೈಸೂರು, ಬೆಂಗಳೂರುಗಳಿಂದ ಬರಲಿರುವ ಒಟ್ಟು ೨೬ ಮಂದಿ ವಿದ್ವಾಂಸರು ಇಲ್ಲಿ ವಿವಿಧ ವಿಷಯಗಳ ಬಗ್ಗೆ ಪ್ರಬಂಧ ಮಂಡಿಸಲಿದ್ದಾರೆ. ಈ ವಿಷಯದ ಬಗ್ಗ ಕರ್ನಾಟಕದಲ್ಲಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಇಷ್ಟು ದೊಡ್ಡ ಪ್ರಮಾಣದ ವಿಚಾರಸಂಕಿರಣವೊಂದು ಏರ್ಪಡುತ್ತಿರುವುದು ಇದೇ ಮೊದಲ ಬಾರಿ. ದಲಿತ ಲೇಖಕ, ಮಾಜಿ ಶಾಸಕ, ಶ್ರವಣಬೆಳಗೊಳ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯನವರು ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿರುತ್ತಾರೆ.
ಡಾ. ಕ್ರಿಸ್ಟೀನ್ ಚೋಝನಾಕಿ
ಈ ವಿಚಾರಸಂಕಿರಣದ ಉದ್ಘಾಟಕಿಯಾಗಿರುವ ಡಾ. ಕ್ರಿಸ್ಟೀನ್ ಚೋಝನಾಕಿ ಅವರು ಫ್ರಾನ್ಸ್‌ನ ಲ್ಯೋನ್ ನಗರದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿ ಮತ್ತು ನಾಗರೀಕತೆಯ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆಯಾಗಿದ್ದಾರೆ. ಪ್ರಾಕೃತದ ಪ್ರಸಿದ್ಧ ಕೃತಿಯಾದ ಕುವಲಯಮಾಲಾವನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಸಂಸ್ಕೃತ ಹಾಗೂ ಪ್ರಾಕೃತ ಕಾವ್ಯಗಳಲ್ಲಿನ ಜೈನ ಯಾತ್ರಾಸ್ಥಳಗಳ ಮೇಲೆ ಪಿಎಚ್.ಡಿ. ಮಹಾಪ್ರಬಂಧ ರಚಿಸಿದ್ದಾರೆ. ಆಫ್ರಿಕನ ಭಾಷೆಗಳು, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳನ್ನು ಕುರಿತೂ ಅಭ್ಯಾಸ ಮಾಡಿರುವ ಡಾ. ಕ್ರಿಸ್ಟೀನ್ ಅವರು ಭಾರತ ಹಾಗೂ ಕರ್ನಾಟಕದ ಬಗ್ಗೆ ಅಭಿಮಾನ ಹೊಂದಿರುವವರು. ನವದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯ ಸಂದರ್ಶಕ ಪ್ರಾಧ್ಯಾಪಕಿಯೂ ಹೌದು. ಆದರೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಇವರು ಉಪನ್ಯಾಸ ನೀಡಲು ಇದೀಗ ಬರುತ್ತಿದ್ದಾರೆ.

ಇವರದಲ್ಲದೆ ಈ ವಿಚಾರಸಂಕಿರಣದಲ್ಲಿ ಉಪನ್ಯಾಸ ನೀಡಲು ಬರಲಿರುವ ಇತರ ವಿದ್ವಾಂಸರೂ ಸಹ ಜೈನಶಾಸ್ತ್ರ, ಪ್ರಾಕೃತ, ಸಂಸ್ಕೃತ, ತತ್ತ್ವಶಾಸ್ತ್ರಗಳಂಥ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೇ. ಧಾರವಾಡದ ಡಾ. ಚಂದ್ರಮೌಳಿ ನಾಯ್ಕರ್ ಅವರು ಯೋಗ, ಸಂಸ್ಕೃತ ಹಾಗೂ ಪ್ರಾಕೃತಗಳ ಪರಿಶ್ರಮ ಹೊಂದಿರುವವರು. ಇಂಗ್ಲಿಷ್‌ನಲ್ಲಿ ನೂರಾರು ಲೇಖನ ಹಾಗೂ ಗ್ರಂಥಗಳನ್ನು ಬರೆದವರು. ನವದೆಹಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠವೆಂಬ ಡೀಮ್ಡ್ ವಿಶ್ವವಿದ್ಯಾಲಯದಿಂದ ಬರಲಿರುವ ಮೂವರು ವಿದ್ವಾಂಸರೂ ಸಹ ಜೈನಶಾಸ್ತ್ರ, ಪ್ರಾಕೃತ ಗ್ರಂಥ ಸಂಪಾದನೆ ಮತ್ತು ಪ್ರಾಕೃತ ವಾಙ್ಮಯ ಕುರಿತು ಆಳವಾದ ತಿಳಿವಳಿಕೆ ಹೊಂದಿರುವವರು. ಮೈಸೂರಿನ ನಿವೃತ್ತ ಪ್ರೊ. ಡಾ.ಆರ‍್ವಿಯಸ್ ಸುಂದರಂ ಅವರು ಅಮೇರಿಕೆಯ ಪೆನ್ಸಿಲ್ವೇನಿಯಾ ವಿ.ವಿ.ಯಲ್ಲಿ ಐದು ವರ್ಷಗಳ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ಅಲ್ಲಿ ಕನ್ನಡ ಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ನಡೆಸಿ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವವರು. ಹೀಗೆಯೇ ಇತರರೂ ಸಹ.
ಪ್ರಕೃತ ವಿಚಾರಸಂಕಿರಣದಲ್ಲಿ ಉದ್ಘಾಟನೆ ಸಮಾರೋಪಗಳಲ್ಲದೆ ಎರಡು ದಿನಗಳ ಅವಧಿಯಲ್ಲಿ ಆರು ಗೋಷ್ಠಿಗಳು ನಡೆಯುತ್ತಿವೆ. ‘ಭಾರತೀಯ ಚಿಂತನ ಪರಂಪರೆ ಮತ್ತು ಪ್ರಾಕೃತ ವಾಙ್ಮಯ’ ಎಂಬ ಮೊದ ಗೋಷ್ಠಿಯಲ್ಲಿ ಪ್ರಾಕೃತ ವಾಙ್ಮಯ ಎಂಬ ಮೊದಲ ಗೋಷ್ಠಿಯಲ್ಲಿ ಪ್ರಾಕೃತ ವಾಙ್ಮಯದಲ್ಲಿ ನಿರೂಪಿತವಾಗಿರುವ ಜೀವನ ಮೌಲ್ಯಗಳು, ದರ್ಶನ ಹಾಗೂ ರಾಜನೀತಿಯನ್ನು ಕುರಿತ ಉಪನ್ಯಾಸಗಳಿರುತ್ತವೆ. ಮೇಲುಕೋಟೆಯ ಡಾ. ಲಕ್ಷ್ಮೀತಾತಾಚಾರ‍್ಯ, ಶ್ರೀರಾಮಶರ್ಮ ಹಾಗೂ ದೆಹಲಿಯ ಡಾ. ಕಲ್ಪನಾ ಜೈನ್ ಉಪನ್ಯಾಸ ನೀಡುತ್ತಾರೆ.
ಪ್ರಾಕೃತ ಕಥಾ ಸಾಹಿತ್ಯ ಮತ್ತು ಭಾರತೀಯ ಸಾಂಸ್ಕೃತಿಕ ಪರಂಪರೆ ಎಂಬ ಎರಡನೇ ಗೋಷ್ಠಿಯಲ್ಲಿ ಪ್ರಾಕೃತದಲ್ಲಿ ಶ್ರೀರಾಮ ಚರಿತೆಗಳು, ಪ್ರಾಕೃತದಲ್ಲಿ ಚರಿತೆ ಗ್ರಂಥಗಳು ಹಾಗೂ ಪ್ರಾಕೃತದಲ್ಲಿ ಸಟ್ಟಕ ಸಾಹಿತ್ಯ ಕುರಿತ ಉಪನ್ಯಾಸಗಳು ನಡೆಯುತ್ತಿವೆ. ಕೊಲ್ಲಾಪುರದ ಡಾ. ಸುಷ್ಮಾ ಜಿ. ರೋಟಿ, ಸೊಲ್ಲಾಪುರದ ಡಾ. ಮಹಾವೀರಶಾಸ್ತ್ರಿ ಹಾಗೂ ಧಾರವಾಡದ ಪ್ರೊ. ಚಂದ್ರಮೌಳಿ ನಾಯ್ಕರ್ ಅವರು ಪ್ರಬಂಧ ಮಂಡಿಸುವರು.
ಪ್ರಾಕೃತ ಮತ್ತು ಕೆಲವು ಭಾರತೀಯ ಭಾಷೆಗಳ ಅಂತರ್‌ಸಂಬಂಧ ಎಂಬುದು ಮೂರನೇ ಗೋಷ್ಠಿಯ ವಿಷಯ. ಈ ಗೋಷ್ಠಿಯಲ್ಲಿ ತೆಲುಗು, ಮರಾಠಿ, ಕನ್ನಡ ಹಾಗೂ ಸಂಸ್ಕೃತ ಭಾಷೆಗಳಿಗೂ ಪ್ರಾಕೃತಕ್ಕೂ ಇರುವ ಅಂತರ್‌ಸಂಬಂಧವನ್ನು ಕುರಿತು ಡಾ. ಆರ‍್ವಿಯಸ್ ಸುಂದರಂ, ಪ್ರೊ.ಶುಭಚಂದ್ರ, ಡಾ.ಎನ್.ಸುರೇಶ್‌ಕುಮಾರ್ ಹಾಗೂ ಸಾಂಗ್ಲಿಯ ಪ್ರೊ. ಕೆ. ವೈ. ಆಪ್ಟೆ ಪ್ರಬಂಧ ಮಂಡಿಸುವರು.
ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಅಂದರೆ ನಾಲ್ಕನೇ ಗೋಷ್ಠಿಯಲ್ಲಿ ಕನ್ನಡಿಗರೇ ಆದ ದೆಹಲಿಯಲ್ಲಿ ಪ್ರಾಕೃತದ ಪ್ರೊಫೆಸರ್ ಆಗಿರುವ ಡಾ. ಜೈಕುಮಾರ ಉಪಾಧ್ಯೆ ಅವರು ಅಧ್ಯಕ್ಷತೆ ವಹಿಸುವುದಲ್ಲದೆ ಪ್ರಾಕೃತ ಕಾವ್ಯಗಳ ಸ್ವರೂಪ ಮತ್ತು ವ್ಯಾಪ್ತಿ ಕುರಿತು ಮಾತನಾಡುವರು. ಇದೇ ಗೋಷ್ಠಿಯಲ್ಲಿ ಉದಯಪುರದ ಡಾ.ಜಿನೇಂದ್ರಕುಮಾರ ಜೈನ್ ಅವರು ಪ್ರಾಕೃತದಲ್ಲಿ ಮುಕ್ತಕ ಸಾಹಿತ್ಯ ಪರಂಪರೆಯ ಸಮೀಕ್ಷೆ ಕುರಿತು ಮೈಸೂರಿನ ಪ್ರೊ.ಎನ್. ದೇವೇಂದ್ರಕುಮಾರ್ ಅವರು ‘ಕನ್ನಡ ಸಾಹಿತ್ಯಕ್ಕೆ ಪ್ರಾಕೃತದ ಕೊಡುಗೆ’ ಕುರಿತು ಮಾತನಾಡುವರು.
ಮುಂದಿನ ಗೋಷ್ಠಿಯಲ್ಲಿ ‘ಪ್ರಾಕೃತ ಹಸ್ತಪ್ರತಿಗಳ ಸಂಪಾದನೆ ಮತ್ತು ಅಧ್ಯಯನದ ಇತಿಹಾಸ’ ಕುರಿತು ವಿಚಾರ ವಿಮರ್ಶೆ ನಡೆಯುತ್ತದೆ. ಡಾ. ಕಮಲಾಹಂಪನಾ ಇದರ ಅಧ್ಯಕ್ಷತೆ ವಹಿಸುವುದಲ್ಲದೆ ‘ಪ್ರಾಕೃತ ಸಾಹಿತ್ಯಕ್ಕೆ ಕನ್ನಡ ಟೀಕಾಕಾರರ ಕೊಡುಗೆ’ ಕುರಿತು ಮಾತನಾಡುವರು. ಜೈಪುರದ ಡಾ. ಆನಂದಕುಮಾರ್ ಅವರು ‘ಪ್ರಾಕೃತ ಹಸ್ತಪ್ರತಿಗಳ ವೈಜ್ಞಾನಿಕ ಅಧ್ಯಯನದ ಇತಿಹಾಸ’ ಕುರಿತು ಪ್ರಬಂಧ ಮಂಡಿಸುವರು.
ವಿಚಾರಸಂಕಿರಣದ ಕೊನೆಯ ಗೋಷ್ಠಿಯು ‘ಭಾರತೀಯ ಚಿಂತನೆಗೆ ಪ್ರಾಕೃತದ ಕೊಡುಗೆ’ ಕುರಿತು ನಡೆಯುತ್ತದೆ. ಜೈಪುರದ ಡಾ. ಶ್ರೀಯಾಂಶ ಶಿಂಘೈ ಅವರು ಈ ಗೊಷ್ಠಿಯ ಅಧ್ಯಕ್ಷತೆ ವಹಿಸುವುರಲ್ಲದೆ ‘ಪಂಚಾಸ್ತಿಕಾಯ’ ಗ್ರಂಥದ ದಾರ್ಶನಿಕ ಪರಿಶೀಲನೆ ನಡೆಸುವರು. ನವದೆಹಲಿಯ ಡಾ. ವೀರಸಾಗರ ಜೈನ್ ಅವರು ‘ಕಾಷಾಯ ಪಾಹುಡ’ ಗ್ರಂಥದ ದಾರ್ಶನಿಕತೆ ಕುರಿತು, ಚೆನ್ನೈನ ಡಾ. ದಿಲೀಪ್ ಧೀಂಗ್ ಅವರು ‘ಮೂಲಾಚಾರ’ ಗ್ರಂಥ ಕುರಿತು ಮಾತನಾಡುವರು.
ಹೀಗೆ ವಿಶಿಷ್ಟ ವಿಷಯಗಳನ್ನು ಕುರಿತು ನಡೆಯುವ ಈ ಚಿಂತನೆಯ ಕಾರ್ಯಕ್ರಮದಲ್ಲಿ ಮೊದಲ ದಿನ(೮.೧೨.೨೦೧೬) ಕೊನೆಯ ಭಾಗದಲ್ಲಿ ಡಾ. ಹಂಪನಾ ಅವರ ಒಂದು ವಿಶೇಷ ಉಪನ್ಯಾಸವೂ ಇರುತ್ತದೆ. ಅವರ ನಂತರ ಸಂಜೆ ೬ಕ್ಕೆ ಹಾಸನದ ‘ಭಾರತೀಯ ಸಂಗೀತ ನೃತ್ಯ ಕಲಾಶಾಲೆ’ ಯ ತಂಡದವರಿಂದ ಅದ್ಭುತವಾದ ನೃತ್ಯ ಕಾರ್ಯಕ್ರಮವಿರುತ್ತದೆ. ‘ಕರುಣಾಳು ಬಾ ಬೆಳಕೆ’ ಹಾಗೂ ‘ಜೈನ ಸಾಹಿತ್ಯದಲ್ಲಿ ಸರಸ್ವತಿಯ ಕಲ್ಪನೆ’ ಎಂಬ ನೃತ್ಯ ರೂಪಕಗಳು ಒಂದು ಘಂಟೆ ಅವಧಿಯಾಗಿದ್ದು ಅದ್ಭುತ ಕಲಾಲೋಕಕ್ಕೆ ಪ್ರೇಕ್ಷಕರನ್ನು ಕೊಂಡೊಯ್ಯಲಿವೆ.
ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಮೊದಲ ಬಾರಿಗೆ ಇಂಥದೊಂದು ಅಂತಾರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವು ಕ್ಲಿಷ್ಟ ವಿಷಯಗಳ ಕುರಿತು ನಡೆಯಲಿದೆ. ಜ್ಞಾನಾಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಲು ಮಾಧ್ಯಮಗಳಲ್ಲಿ ಪ್ರಚಾರ ಒದಗಿಸಬೇಕೆಂದು ನಾವು ಸಂಘಟಕರು ಆಶಿಸುತ್ತೇವೆ.

ಡಾ. ಎಸ್.ಪಿ. ಪದ್ಮಪ್ರಸಾದ್
ಗೌರವ ಯೋಜನಾ ನಿರ್ದೇಶಕರು
ಮೊ: ೯೪೪೮೭೬೮೫೬೭

ಬೆಳ್ಳಿಹಬ್ಬ : ಚಿಂತನ ಮಂಥನ

ಬೆಳ್ಳಿಹಬ್ಬ : ಚಿಂತನ ಮಂಥನ03-102-2011
ನವೆಂಬರ್ ೨೯, ೩೦, ೨೦೧೬
ಪತ್ರಿಕಾ ವರದಿ- ೨೯.೧೧.೨೦೧೬

ಪ್ರಪಂಚದಲ್ಲಿ ನಾಲ್ಕು ಸಾವಿರ ಭಾಷೆಗಳು ಮಾತ್ರ ಉಳಿದಿವೆ. ಆದರೆ ಕನ್ನಡ ಭಾಷೆ ಮಾತ್ರ ಜೀವಂತವಾಗಿದೆ. ಕನ್ನಡವನ್ನು ತೆಲುಗು, ತಮಿಳು, ಮಲೆಯಾಳಂ ಭಾಷೆಗಳು ಸುತ್ತುವರಿದಿವೆ. ಭಾಷಾ ಶಾಸ್ತ್ರಜ್ಞರು ಕನ್ನಡ ಭಾಷೆ ಸಾಯುವುದಿಲ್ಲ ಎಂದಿದ್ದಾರೆ. ಆದ್ದರಿಂದ ಕನ್ನಡ ಭಾಷೆ ಅಳಿದುಹೋಗುವ ಭಾಷೆಯಲ್ಲ ಎಂದು ಡಾ. ಪಾಟೀಲ ಪುಟ್ಟಪ್ಪ ಅವರು ತಿಳಿಸಿದರು.
ನವೆಂಬರ್ ೨೯ರಿಂದ ೨ ದಿನಗಳವರೆಗೆ ಕನ್ನಡ ವಿಶ್ವವಿದ್ಯಾಲಯ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೆಳ್ಳಿಹಬ್ಬ: ಚಿಂತನ ಮಂಥನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪುಟ್ಟಪ್ಪ ಅವರು ಮಾತನಾಡಿದರು.
ಕರ್ನಾಟಕದಲ್ಲಿರುವ ಬೇರೆ ಬೇರೆ ವಿಶ್ವವಿದ್ಯಾಲಯಗಳು ಸಾಯುವ ಸ್ಥಿತಿಗೆ ಬಂದರೂ ಕನ್ನಡ ವಿಶ್ವವಿದ್ಯಾಲಯ ಅಂತಹ ಸ್ಥಿತಿಗೆ ಹೋಗುವುದಿಲ್ಲ ಎಂದು ಅದಮ್ಯ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕನ್ನಡದ ಬಗ್ಗೆ ಅಪನಂಬಿಕೆ ಸಲ್ಲದು ಎಂದು ಎಚ್ಚರಿಸಿದರು.
ನಂತರ ಪ್ರೊ. ರಹಮತ್ ತರೀಕೆರೆ ಅವರು ಮಾತನಾಡುತ್ತ ಕನ್ನಡ ವಿಶ್ವವಿದ್ಯಾಲಯದ ೧೬ ವಿಭಾಗಗಳು ೧೦ ಪೀಠಗಳು ಮತ್ತು ದತ್ತಿನಿಧಿಗಳು, ೬೫ರಿಂದ ೭೦ ಅಧ್ಯಾಪಕರ ಒಟ್ಟಾರೆ ೨೫ ವರ್ಷಗಳ ಸಾಧನೆಗಳನ್ನು ಕಟ್ಟಿಕೊಡುತ್ತ, ಕನ್ನಡ ಮಾಧ್ಯಮದಲ್ಲಿ ಕನ್ನಡದ ಮೂಲಕ ಚಿಂತನೆ ನಡೆಸುತ್ತಿರುವ ಕನ್ನಡ ವಿಶ್ವವಿದ್ಯಾಲಯವು ಮುಂದಿನ ಹೆಜ್ಜೆ ಇಡಲು ಹೊಸ ನೋಟ ಕಾಣಲು ಇಲ್ಲಿ ಚಿಂತಕರೆಲ್ಲರು ಸೇರಿದ್ದಾರೆ. ಸಂಘರ್ಷ ಮತ್ತು ಸಮನ್ವಯತೆಯ ಮೂಲಕ ಕನ್ನಡ ವಿಶ್ವವಿದ್ಯಾಲಯ ತನ್ನತನ ಹುಡುಕುತ್ತದೆ. ಕನ್ನಡದ ಸಾಮರ್ಥ್ಯ ವಿಸ್ತರಿಸುವುದು, ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಕನ್ನಡದ ತಿಳುವಳಿಕೆ ಸೃಷ್ಟಿಸುವುದು, ಪ್ರಸರಿಸುವುದು ಅದಕ್ಕಾಗಿ ಒಳಗಿನ ಮತ್ತು ಹೊರಗಿನ ವಿದ್ವಾಂಸರನ್ನು ಕೊಂಡಿಯಾಗಿಸಿಕೊಂಡು ಕಾರ್ಯನಿರ್ವಹಿಸಲಾಗಿದೆ. ಅಧಿಕಾರಸ್ಥ ಮತ್ತು ಅಕ್ಷರಸ್ಥ ನೆಲೆಗಳ ಮೂಲಕ ಜ್ಞಾನ ಸೃಷ್ಟಿಸಲಾಗಿದೆ. ಈ ಮೂಲಕ ಬಹುತ್ವದ ಶೋಧ, ಪರಂಪರೆಯ ಅನುಸಂಧಾನ, ವರ್ತಮಾನದ ಗ್ರಹಿಕೆಗಳ ಮೂಲಕ ಮುಂದಿನ ದಾರಿಯನ್ನು ಕಂಡುಕೊಳ್ಳುತ್ತಿದೆ. ಈ ರೀತಿಯಾಗಿ ಕನ್ನಡ ವಿಶ್ವವಿದ್ಯಾಲಯದ ರೂಪುಗೊಳ್ಳಲು ವಚನಕಾರರು, ಕುವೆಂಪು ಅವರು, ಆದಿಕವಿ ಪಂಪ, ಕೇಶಿರಾಜ ಇವರು ತಮ್ಮ ಚಿಂತನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಹಲವು ಬಗೆಯ ತಾಂತ್ರಿಕತೆಯ(ಟೂಲ್ಸ್) ಮೂಲಕ ಅಂದರೆ ಸಮೀಕ್ಷೆ, ಆಕರಗಳ ಸಂಗ್ರಹ, ವಿಶ್ಲೇಷಣೆ ವ್ಯಾಖ್ಯಾನ, ತಿಳುವಳಿಕೆಯ ಪ್ರಸರಣಕ್ಕೆ ಬೋಧನೆ(ಅಂದರೆ ತರಗತಿಗಳು, ಪದವಿಗಳು, ಡಿ.ಲಿಟ್. ನಾಡೋಜ), ಪ್ರಕಟಣೆಗಳು ವಿಚಾರಸಂಕಿರಣ-ಕಾರ್ಯಾಗಾರಗಳು, ಪೀಠಗಳು, ದೂರಶಿಕ್ಷಣ ನಿರ್ದೇಶನಾಲಯ, ವಿಸ್ತರಣಾ ಕೇಂದ್ರ, ಮಾನ್ಯತಾ ಕೇಂದ್ರಗಳ ಮೂಲಕ ಅಲ್ಲದೇ ಸುಮಾರು ೨೦೦೦ ವಿದ್ವಾಂಸರ ವಿದ್ವತ್ತನ್ನು ಒಳಗು ಮಾಡಿಕೊಂಡು ಬಹುತ್ವವನ್ನು ಪ್ರತಿನಿಧಿಸುವ ವಿಶ್ವವಿದ್ಯಾಲಯವಾಗಿದೆ. ಕೆಳಸ್ಥರದ ಸಂಸ್ಕೃತಿಗೆ ಸಂಬಂಧಿಸಿದಂತೆ, ಅಂಚಿನ ಹಾಗೂ ನಿರ್ಲಕ್ಷಿತ ಸಮುದಾಯಗಳ ಕುರಿತು ಹೆಚ್ಚು ಹೆಚ್ಚು ಸಂಶೋಧನೆಗಳನ್ನು ನಡೆಸಿದೆ. ಈ ರೀತಿ ನಡೆದು ಬರುತ್ತಿರುವ ಕನ್ನಡ ವಿಶ್ವವಿದ್ಯಾಲಯ ನ್ಯಾಕ್ ನಿಂದ ಉತ್ತಮ ಶ್ರೇಣಿ ಪಡೆದಿದೆ. ವಿಶ್ವವಿದ್ಯಾಲಯಕ್ಕೆ ಆದಾಯದ ಮೂಲಗಳು ಇರುವುದಿಲ್ಲ. ಇಂದು ವಿದ್ಯೆಯು ಮಾರಾಟದ ಸರಕಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಬಿಕ್ಕಟ್ಟಿನಲ್ಲಿದೆ ಎಂದು ನುಡಿದರು.
ಚಿಂತನ ಮಂಥನ ಕಾರ್ಯಕ್ರಮಕ್ಕೆ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಎಲ್ಲ ವಿದ್ವಾಂಸರನ್ನು ಚಿಂತಕರನ್ನು ಸ್ವಾಗತಿಸಿದರು. ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ನಾಡಗೀತೆಯೊಂದಿಗೆ ಪ್ರಾರ್ಥಿಸಿದರು. ವೇದಿಕೆಯಲ್ಲಿ ಡಾ. ಕಮಲಾ ಹಂಪನಾ, ಡಾ. ಹಂಪ ನಾಗರಾಜಯ್ಯ, ಡಾ. ಎ. ಮುರಿಗೆಪ್ಪ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಹಿ.ಚಿ.ಬೋರಲಿಂಗಯ್ಯ, ಡಾ. ತಾಳ್ತಜೆ ವಸಂತಕುಮಾರ, ಡಾ. ಕಾಳೇಗೌಡ ನಾಗವಾರ ಮೊದಲಾದ ವಿದ್ವಾಂಸರು ಉಪಸ್ಥಿತರಿದ್ದರು.
ನಂತರ ಕನ್ನಡ ವಿಶ್ವವಿದ್ಯಾಲಯದ ಇದುವರೆಗಿನ ನಡೆ ಮತ್ತು ಮುಂದಿನ ನಡೆ ಕುರಿತು ನಡೆದ ಪರಾಮರ್ಶೆ ಮತ್ತು ಚರ್ಚೆಯಲ್ಲಿ ಡಾ. ರಾಜಕುಮಾರ್ ಸಭಾಂಗಣ ಮತ್ತು ಸಿಂಡಿಕೇಟ್ ಸಭಾಂಗಣದಲ್ಲಿ ಎರಡು ಗುಂಪುಗಳಲ್ಲಿ ಆಹ್ವಾನ ಚಿಂತಕರು ಮತ್ತು ವಿಶ್ವವಿದ್ಯಾಲಯದ ಅಧ್ಯಾಪಕರು ಪಾಲ್ಗೊಂಡರು.
ಸಂಜೆ ಡಾ. ಬಾನಂದೂರ ಕೆಂಪಯ್ಯ ಮತ್ತು ಶ್ರೀ ಜನಾರ್ಧನ ಹಾಗೂ ಡಾ. ಹನುಮಣ್ಣನಾಯಕ ದೊರೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.