ಪ್ರಾಕೃತ-ಕನ್ನಡ : ಪರಂಪರೆ ಮತ್ತು ಪ್ರಭಾವ ಅಂತಾರಾಷ್ಟ್ರೀಯ ವಿಚಾರಸಂಕಿರಣದ ಉದ್ಘಾಟನೆ

ಪ್ರಾಕೃತ-ಕನ್ನಡ : ಪರಂಪರೆ ಮತ್ತು ಪ್ರಭಾವ
ಅಂತಾರಾಷ್ಟ್ರೀಯ ವಿಚಾರಸಂಕಿರಣದ ಉದ್ಘಾಟನೆಯ ಪತ್ರಿಕಾ ವರದಿ- ೦೮.೧೨.೨೦೧೬

01-6ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ಡಾ. ಕ್ರಿಸ್ಟೀನ್ ಚೋಝನಾಕಿ ಅವರು ಉದ್ಘಾಟಿಸಿದರು. ಅವರೊಂದಿಗೆ ವೇದಿಕಯಲ್ಲಿ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು (ಎಡಭಾಗದಿಂದ) ಡಾ. ಸಿ. ಮಹದೇವ ಅವರು, ಡಾ. ಪದ್ಮಪ್ರಸಾದ್ ಅವರು, ಡಾ. ಹಂಪ ನಾಗರಾಜಯ್ಯ ಅವರು ಹಾಗೂ ಕುಲಸಚಿವರಾದ ಡಾ.ಡಿ.ಪಾಂಡುರಂಬಾಬು ಅವರು

02-5                  ಚೋಝನಾಕಿ ಅವರ ಉದ್ಘಾಟನಾ ಭಾಷಣ
04-2ವೇದಿಕೆಯಲ್ಲಿ ಗಣ್ಯರು05-1ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು03-6ಶಿಖರೋಪಾನ್ಯಾಸ ನೀಡುತ್ತಿರುವ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು

ಪ್ರಾಕೃತ ಕಾವ್ಯಗಳು ಬಹಳ ಶ್ರೀಮಂತವಾಗಿದ್ದು ಭಾರತದ ಸಾಂಸ್ಕೃತಿಕ ಚರಿತ್ರೆಯ ಅನೇಕ ಅಂಶಗಳನ್ನು ದಾಖಲಿಸುತ್ತವೆ. ಕ್ರಿ.ಶ.೭೮೩ರಲ್ಲಿ ರಚಿಸಿದ ತನ್ನ ಕುವಲಯಮಾಲಾ ಕಾವ್ಯದಲ್ಲಿ ಕವಿ ಉದ್ಯೋತನಸೂರಿಯು ಕರ್ನಾಟಕದ ಹಲವು ಪ್ರದೇಶಗಳ ಹೆಸರನ್ನು ಉಲ್ಲೇಖಿಸಿದ್ದಾನೆ. ಜೊತೆಗೆ ಕನ್ನಡದ ಕೆಲವು ಶಬ್ದಗಳನ್ನು ಬಳಸಿದ್ದಾನೆ. ಅವನು ಬಳಸಿದ ಚಂಪೂ ಶೈಲಿ ಅನಂತರದಲ್ಲಿ ಕನ್ನಡದ ಕಾವ್ಯಶೈಲಿಯಾಯಿತು. ಭಾರತೀಯ ನೆಲದಲ್ಲಿ ಕಾಣುವ ಹಲವು ಗಿಡ ಪುಷ್ಪಗಳ ಹೆಸರನ್ನು ಅವನು ಬಳಸುತ್ತಾನೆ ಎಂದು ಫ್ರಾನ್ಸ್‌ನ ಲ್ಯೋನ್ ವಿಶ್ವವಿದ್ಯಾಲಯದ ಭಾರತೀಯ ಸಂಸ್ಕೃತಿ ಮತ್ತು ನಾಗರೀಕತೆ ಅಧ್ಯಯನ ವಿಭಾಗದ ಪ್ರಾಧ್ಯಾಪಕಿಯಾದ ಡಾ. ಕ್ರಿಸ್ಟೀನ್ ಚೋಝನಾಕಿ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರವು ೮ ಮತ್ತು ೯ ಡಿಸೆಂಬರ್ ೨೦೧೬ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಾಕೃತ-ಕನ್ನಡ : ಪರಂಪರೆ ಮತ್ತು ಪ್ರಭಾವ ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಶಿಖರೋಪಾನ್ಯಾಸ ನೀಡುತ್ತ ಸಂಸ್ಕೃತ ಮತ್ತು ಪ್ರಾಕೃತದ ನಡುವೆ ನಿಕಟವಾದ ಹೊಕ್ಕಳಬಳ್ಳಿ ಸಂಬಂಧವಿದೆ. ಸಂಸ್ಕೃತಕ್ಕಿಂತಲೂ ಕನ್ನಡಕ್ಕೆ ಸತ್ವ, ರೂಪ, ಚೈತನ್ಯ, ತೇಜಸ್ಸು, ಓಜಸ್ಸು, ಹೊಸ ವಿಚಾರಧಾರೆಗಳನ್ನು ತುಂಬಿರುವುದು ಪ್ರಾಕೃತ. ಮೊದಲು ಕನ್ನಡ ವ್ಯವಹಾರಿಕ ಮತ್ತು ಮಾತನಾಡುವ ಭಾಷೆಯಾಗಿತ್ತು. ಕನ್ನಡಕ್ಕೆ ಲಿಪಿಯನ್ನು ಕೊಟ್ಟಿದ್ದು ಮೊದಲು ಪ್ರಾಕೃತ. ಕನ್ನಡ ಅಕ್ಷರಗಳಿಗೆ ಬಳಸುವ ಮಹಾಪ್ರಾಣ, ತದ್ಭವಗಳು ಬಂದಿರುವುದು ಪ್ರಾಕೃತದಿಂದ. ಕನ್ನಡ ಲಿಪಿಯ ವಿಕಾಸದ ಮಜಲುಗಳನ್ನು ಗುರುತಿಸಲು ಬ್ರಾಹ್ಮೀಯೇ(ಬ್ರಾಹ್ಮಿ ಲಿಪಿ) ಬೇರು. ಪ್ರಾಕೃತದಿಂದ ಛಂದಸ್ಸು, ರಗಳೆಯ ಸ್ವಾರಸ್ಯ ಪಡೆಯಲಾಗಿದೆ. ರಗಳೆಗೆ ಪ್ರಾಕೃತ ತಾಯಿ ಬೇರು. ಗದ್ಯ ಪದ್ಯ ಮಿಶ್ರಿತ ಚಂಪೂರೂಪ ಪ್ರಾಕೃತದಿಂದ ಬಂದಿದೆ. ಪ್ರಾಕೃತದ ಮೂಲಕ ಕನ್ನಡಕ್ಕೆ ಕಥೆಗಳು ಬಂದಿವೆ. ವಡ್ಡಾರಾಧನೆಯ ಮೊದಲನೆಯ ಕಥೆ ಸುಕುಮಾರಸ್ವಾಮಿ. ಹೀಗೆ ಕಥೆಗಳ ಕಣಜವೇ ಪ್ರಾಕೃತದಿಂದ ಕೊಡುಗೆಯಾಗಿ ಬಂದಿದೆ. ಮೊಟ್ಟಮೊದಲು ಕಥೆಗಳನ್ನು ವಿಂಗಡಣೆ ಮಾಡಿದ ಕೀರ್ತಿ ಪ್ರಾಕೃತಕ್ಕಿದೆ. ಉದಾಹರಣೆಗೆ ರಾಯಕಃ(ರಾಜರಿಗೆ ಸಂಬಂಧಿಸಿದ ಕಥೆಗಳು), ಇತ್ತಿಕಃ(ಸ್ತ್ರೀಯರಿಗೆ ಸಂಬಂಧಿಸಿದ ಕಥೆಗಳು), ಚೋರಕಃ(ಕಳ್ಳರಿಗೆ ಸಂಬಂಧಿಸಿದ ಕಥೆಗಳು).
ಪ್ರತ್ಯಯಗಳನ್ನು ಪ್ರಾಕೃತದಿಂದ ಪಡೆದು ಕನ್ನಡದ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದೇವೆ. ಅಜೀವಕರು ಚಾರ್ವಕರ ಬಗ್ಗೆ ಮಾಹಿತಿ ಪಡೆಯಬೇಕೆಂದರೆ ಜೈನ ಪ್ರಾಕೃತ ಮತ್ತು ಪಾಳಿಯಿಂದ ಮಾತ್ರ ಸಾಧ್ಯ. ಭಾಷಾ ರಾಜಕಾರಣದಿಂದ ಪ್ರಾಕೃತಕ್ಕೆ ಸಲ್ಲಬೇಕಾದ ಸ್ಥಾನ ದೊರೆಯಲಿಲ್ಲ. ಆದರೂ ತನ್ನ ಅಪಾರವಾದ ಜ್ಞಾನ ಸಂಪತ್ತಿನ ಬಲದಿಂದ ತಾನು ನಿಂತಿದೆ. ಭಾರತದಲ್ಲಿ ಸಿಗುವ ದೊರೆಯುವ ಎಲ್ಲ ಶಾಸನಗಳು ಪ್ರಾಕೃತದಲ್ಲಿವೆ. ಕನಗನಹಳ್ಳಿಯಲ್ಲಿ ದೊರೆತ ಪ್ರಾಕೃತ ಶಾಸನದಲ್ಲಿ ಅಶೋಕನಿಗೆ ಸಂಬಂಧಪಟ್ಟಂತೆ ಮಾಹಿತಿಗಳಿದ್ದು ಅಶೋಕನ ಚಿತ್ರ ಹಾಗೂ ರಾಣಿಯರ ಚಿತ್ರಗಳು ಕಾಣಿಸುತ್ತವೆ. ಒಂದು ಭಾಷೆ ಹೊಸತನಕ್ಕೆ ತೆರೆದುಕೊಳ್ಳಲು ಅನುವಾದದಿಂದ ಬಲವನ್ನು ಪಡೆದು ಪುಷ್ಠಿಗೊಳ್ಳಬೇಕು. ಕನ್ನಡ ಮತ್ತು ಪ್ರಾಕೃತ, ಕನ್ನಡ ಮತ್ತು ಸಂಸ್ಕೃತ ಈ ಶಬ್ದಗಳನ್ನು ಪೋಣಿಸಿಕೊಂಡು ವ್ಯಾಖ್ಯಾನಗಳನ್ನು ಬರೆಯುವುದಕ್ಕೆ ಮಣಿ ಪ್ರವಾಳಶೈಲಿ ಎನ್ನುವರು. ಕನ್ನಡದಲ್ಲಿ ಅಗಳ ಮೊದಲಾದವರು ಈ ಶೈಲಿಯನ್ನು ಬಳಸಿದ್ದಾರೆ. ಕನ್ನಡಕ್ಕೆ ಹೊಸ ವಿಸ್ತಾರ ತಂದುಕೊಡುವಲ್ಲಿ ಉದ್ಯೋತನಸೂರಿಯ ಕುವಲಯಮಾಲಾ ಬಿಟ್ಟರೆ ಸ್ವಯಂಭೂದೇವನ ಕಾವ್ಯ ಪೌಮಚಾರ್ಯ. ಪ್ರಾಕೃತ ಮತ್ತು ಕನ್ನಡ ಪರಸ್ಪರ ಉಭಯಮುಖಿ ಸಂಚಾರದಿಂದ ಕೂಡಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡುತ್ತ ಜನಾಂಗೀಯ ಶ್ರೇಷ್ಠತೆಯ ಅಹಂಕಾರ ಮತ್ತು ಧಾರ್ಮಿಕ ಪ್ರಭುತ್ವದ ಸರ್ವಾಧಿಕಾರತನ ಮತ್ತು ರಾಜಪ್ರಭುತ್ವದ ಅವಿವೇಕಗಳು ಸೇರಿಕೊಂಡು ಸಂಸ್ಕೃತವನ್ನು ಹೇಗೆ ದೇವಭಾಷೆ ಎಂದು ಕರೆದರು ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ಚರಿತ್ರೆ ಇದಕ್ಕೆ ಉತ್ತರ ಇಟ್ಟಿದ್ದರೂ ನಂಬುವ ಸ್ಥಿತಿಯಲ್ಲಿ ನಾವಿಲ್ಲ. ಇಂದು ಭಾಷಾ ರಾಜಕಾರಣ ಮತ್ತು ವಿದ್ವತ್ತಿನ ಪ್ರದರ್ಶನದಲ್ಲಿ ಸಾಮಾನ್ಯ ಜನ ಕಾಣೆಯಾಗುತ್ತಿದ್ದಾರೆ. ರಾಜಪ್ರಭುತ್ವ, ಧರ್ಮಪ್ರಭುತ್ವ, ಭಾಷಾಪ್ರಭುತ್ವ ಇವೆಲ್ಲವುಗಳನ್ನು ಎದುರಿಸಿದ ಪ್ರತಿರೋಧಿಸಿದ ಸಣ್ಣ ಸಣ್ಣ ಪ್ರಯತ್ನಗಳು ಎಲ್ಲ ಕಾಲದಲ್ಲಿ ಇದ್ದವು ಎಂಬುದಕ್ಕೆ ಬಹಳಷ್ಟು ಉದಾಹರಣೆಗಳಿವೆ ಎಂದು ತಿಳಿಸಿದರು.
ಭಾಷಾಪ್ರಭುತ್ವದ ಗಡಿ ದಾಟಿಸಿದ ರಾಜನೆಂದರೆ ಅಶೋಕ ಚಕ್ರವರ್ತಿ. ತನ್ನ ಧರ್ಮಪ್ರಚಾರಕ್ಕಾಗಿ ಪಾಲಿ ಭಾಷೆಯನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಪ್ರಚುರ ಪಡಿಸಿದನು. ಅಶೋಕನ ಮೂಲಕ ಎಲ್ಲ ಸ್ಥಳಿಯ ಭಾಷೆಗಳೊಂದಿಗೆ ಪ್ರಾಕೃತ ಅನುಸಂಧಾನ ನಡೆಸಿತು. ವೈದಿಕ ಧರ್ಮ ತನ್ನ ದಾಖಲೀಕರಣಕ್ಕೆ ಸಂಸ್ಕೃತ ಬಳಿಸಿಕೊಂಡಂತೆ ಜೈನ, ಬೌದ್ಧ ಧರ್ಮಗಳು ಪಾಲಿ ಪ್ರಾಕೃತ ಭಾಷೆಯನ್ನು ತಮ್ಮ ಧರ್ಮ ಪ್ರಚಾರಕ್ಕಾಗಿ ಹಾಗೂ ನೆಲದ ಸಂಸ್ಕೃತಿಯ ದಾಖಲೀಕರಣಕ್ಕಾಗಿ ಈ ಭಾಷೆಯನ್ನು ದುಡಿಸಿಕೊಂಡಿವೆ ಎಂದು ಹೇಳಿದರು. ಇಲ್ಲಿ ಮಂಡನೆಯಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದಾಗಿ ತಿಳಿಸಿದರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಗೌರವಾನ್ವಿತ ಯೋಜನಾ ನಿರ್ದೇಶಕರಾದ ಡಾ. ಎಸ್. ಪಿ. ಪದ್ಮಪ್ರಸಾದ್ ಅವರು ಗಣ್ಯರನ್ನು ಪರಿಚಯಿಸಿ ಪ್ರಾಸ್ತಾವಿಕ ನುಡಿಯುತ್ತ ಪ್ರಥಮ ಬಾರಿಗೆ ಇಂತಹ ಅಪರೂಪವಾದ ವಿಚಾರಸಂಕಿರಣ ನಡೆಯುತ್ತಿರುವುದು ಚರಿತ್ರಾರ್ಹವಾಗಿದೆ ಎಂದರು. ಡಾ. ಹನುಮಣ್ಣನಾಯಕ ದೊರೆ ಅವರ ನೇತೃತ್ವದಲ್ಲಿ ಕರುಣಾಳು ಬಾ ಬೆಳಕೆ, ಮಾತೆಂಬುದು ಜ್ಯೋತಿರ್ಲಿಂಗ ಹಾಗೂ ನಾಡಗೀತೆಯ ಮೂಲಕ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ. ಶಿವಾನಂದ ವಿರಕ್ತಮಠ ನಿರೂಪಿಸಿದರು. ವಿಚಾರಸಂಕಿರಣದ ಸಂಯೋಜನಾಧಿಕಾರಿಯಾದ ಡಾ. ಸಿ. ಮಹದೇವ ಅವರು ವಂದಿಸಿದರು.
ನಂತರ ಪ್ರಾಕೃತ ಕಥಸಾಹಿತ್ಯ ಮತ್ತು ಭಾರತೀಯ ಸಾಂಸ್ಕೃತಿಕ ಪರಂಪರೆ ಹಾಗೂ ಪ್ರಾಕೃತ ಮತ್ತು ಕೆಲವು ಭಾರತೀಯ ಭಾಷೆಗಳ ಅಂತರ್‌ಸಂಬಂಧ ಕುರಿತು ಪ್ರಬಂಧಗಳು ಮಂಡನೆಯಾದವು.
ಸಂಜೆ ಹಾಸನದ ಅಂಬಳೆ ರಾಜೇಶ್ವರಿ ಮತ್ತು ತಂಡದವರು ಪ್ರಾಕೃತ ಜೈನ ಕಾವ್ಯಗಳಲ್ಲಿ ಸರಸ್ವತಿಯ ಕಲ್ಪನೆ ಕುರಿತು ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು.

 

 

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s