ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫
ಸಾಮಾಜಿಕ, ರಾಜಕೀಯ ಕರ್ನಾಟಕ : ವರ್ತಮಾನ ಮತ್ತು ಭವಿಷ್ಯ ವಿಚಾರಸಂಕಿರಣದ
ಉದ್ಘಾಟನೆಯ ಪತ್ರಿಕಾ ವರದಿ- ೧೭.೯.೨೦೧೭
ವರ್ತಮಾನದ ಗರ್ಭದಿಂದಲೇ ಭವಿಷ್ಯತ್ತನ್ನು ಕಟ್ಟಿಕೊಳ್ಳಬಹುದು ಅದಕ್ಕಾಗಿ ನಮ್ಮೆಲ್ಲರ ದೃಷ್ಟಿಕೋನವನ್ನು ಒಟ್ಟಾಗಿಸಿ ಕೊಳ್ಳಬೇಕು ಎಂದು ಚಿಂತಕರು ಮತ್ತು ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಪಾಟೀಲ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೭.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾಜಿಕ, ರಾಜಕೀಯ ಕರ್ನಾಟಕ: ವರ್ತಮಾನ ಮತ್ತು ಭವಿಷ್ಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಸ್ಯೆಗಳು ಒಂದನ್ನೊಂದು ಅವಲಂಬಿಸಿರುವ ಪರಿಸ್ಥಿತಿಯಲ್ಲಿ ಬಿಡಿಬಿಡಿಯಾಗಿ ವಿಶ್ಲೇಷಣೆ ಮಾಡಲಾಗುವುದಿಲ್ಲ. ವೈಚಾರಿಕ ದೃಷ್ಟಿಕೋನದಿಂದ ನಿನ್ನೆಯ ವಿದ್ಯಮಾನಗಳನ್ನು ಗಮನಿಸಬೇಕು. ನಮ್ಮೊಂದಿಗೆ ಪ್ರಪಂಚದ ಅನೇಕ ರಾಷ್ಟ್ರಗಳು ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಪಡೆದವು. ಆದರೆ ಆ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಉಳಿದಿಲ್ಲ. ಭಾರತದಲ್ಲಿ ಮಾತ್ರ ಇವೆರಡೂ ಇದ್ದು ಚುನಾವಣೆಗೆ ಆಯ್ಕೆಗೆ ಅವಕಾಶವಿದೆ. ಇಂದು ಪರಿಸ್ಥಿತಿ ಬದಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಗೆಲುವು ಸಾಧಿಸಲು ಸುರಕ್ಷಿತ ಕ್ಷೇತ್ರವನ್ನು ಹುಡುಕಬೇಕಾಗಿದೆ. ಇದು ಪ್ರಜಾಪ್ರಭುತ್ವದ ಒಂದು ದೊಡ್ಡ ಸಾಧನೆಯಾಗಿದೆ. ಇಂದು ರಾಜಕೀಯವು ಪ್ರತಿ ಹಳ್ಳಿ ಹಳ್ಳಿಗಳ ಮನೆ ಮನೆಗಳಲ್ಲಿ, ಪಂಚಾಯತ್‌ಗಳಲ್ಲಿ, ಚಾವಡಿ ಕಟ್ಟೆಗಳಲ್ಲಿ ಚರ್ಚಿತವಾಗುತ್ತಿರುವುದು ಧನಾತ್ಮಕವಾದ ಬಹುದೊಡ್ಡ ಬೆಳವಣಿಗೆಯಾಗಿದೆ ಎಂದು ನುಡಿದರು.
ಕರ್ನಾಟಕದ ವರ್ತಮಾನ ಕುರಿತು ಮಾತನಾಡುತ್ತ ಎಲ್ಲ ರಾಜಕೀಯ ಪಕ್ಷಗಳಿಗ ಪ್ರಣಾಳಿಕೆ ಅಪ್ರಸ್ತುತವಾಗಿದೆ. ಅಧಿಕಾರ ಗ್ರಹಣವೇ ಮುಖ್ಯ ಪ್ರಣಾಳಿಕೆಯಾಗಿದೆ. ಕಟುವಾಸ್ತವದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜಕೀಯ, ಸಾಮಾಜಿಕ ದೃಷ್ಟಿಯಿಂದ ನಿರ್ಣಾಯಕವಾದ ಚುನಾವಣೆಯಾಗಿದೆ. ಕೋಮುವಾದಿ ಶಕ್ತಿಗಳು ಬೇಕೇ ಅಥವಾ ಜಾತ್ಯಾತೀತ ಶಕ್ತಿಗಳು ಬೇಕೆ ಎನ್ನುವ ಆಯ್ಕೆ ನಮ್ಮ ಮುಂದಿದಿದೆ. ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಬೇಕಾಗಿದೆ. ಜಾತ್ಯಾತೀತ ಮೌಲ್ಯಗಳಲ್ಲಿ ನಂಬಿಕೆ ಇರುವ ರಾಜಕಾರಣ ಕರ್ನಾಟಕಕ್ಕೆ ಬೇಕಾಗಿದೆ ಎಂದು ಕಳಕಳಿಯಿಂದ ನುಡಿದರು.
ಬಸವತತ್ತ್ವಗಳ ಸುತ್ತ ಬಲಾಢ್ಯ ಸಮುದಾಯಗಳು ಒಂದಾಗಿ ಸಾವಿರಾರು ವರ್ಷಗಳ ವೈದಿಕ ತತ್ವಗಳು ಬೇಡ ಎಂದು ಜನಾಭಿಪ್ರಾಯ ರೂಪಿಸುತ್ತಿರುವುದು ಹೊಸ ಬೆಳವಣಿಗೆಯ ಆರಂಭವಾಗಿದೆ. ಸೈದ್ಧಾಂತಿಕ ತಾತ್ವಿಕ ನೆಲೆಯೊಳಗೆ ಧ್ರುವೀಕರಣಗೊಂಡು ಸಾವಿರಾರು ವರ್ಷಗಳ ವೈದಿಕ ಸಂಸ್ಕೃತಿಗೆ ದೊಡ್ಡ ಹೊಡೆತ ಕೊಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ವರ್ತಮಾನಕ್ಕೆ ಗತಿ, ಲಯ ಕೊಡಲು ನಾವು ತಯಾರಾಗಬೇಕು ಎಂದು ಕರೆ ನೀಡಿದರು.
ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಇವರು ವಿಷಯ ಮಂಡನೆ ಮಾಡುತ್ತ ನಮ್ಮ ಸಾಮಾಜಿಕ ಬದುಕು ವರ್ಣ ವ್ಯವಸ್ಥೆಯ ಮೇಲೆ ನಿಂತಿದೆ. ಮಹಿಳೆಯರ ಅಸಮಾನತೆ, ದೇವದಾಸಿ ಪದ್ಧತಿ ಜೀವಾಂತವಾಗಿದೆ. ಕುಡಿತದಿಂದ ಕುಟುಂಬಗಳು ನಾಶವಾಗುತ್ತದೆ. ಮರ್ಯಾದ ಹತ್ಯೆಗಳಾಗುತ್ತಿವೆ. ಪರಿಸರ ತ್ವರಿತಗತಿಯಲ್ಲಿ ನಾಶವಾಗುತ್ತಿದೆ. ಅಂಧಶ್ರದ್ಧೆ ಇದೆ. ಈ ಹಿನ್ನೆಲೆಯಲ್ಲಿ ಮೌಢ್ಯ ನಿಷೇಧದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾದೇಶಿಕ ಇಲ್ಲವಾದರೆ ರಾಷ್ಟ್ರೀಯತೆಗೆ ಅರ್ಥವಿಲ್ಲ. ನಮಗೆ ಕನ್ನಡ ನುಡಿ ಇತ್ತು. ಕನ್ನಡ ನಾಡು ಇರಲಿಲ್ಲ. ಏಕೀಕರಣದಿಂದ ಭಾಷಿಕವಾಗಿ ಒಗ್ಗೂಡಿದೆವು. ಆದರೆ ಆಡಳಿತದಲ್ಲಿ, ಶಿಕ್ಷಣದಲ್ಲಿ ಕನ್ನಡ ತರುವ ಕನಸು ಸಂಪೂರ್ಣವಾಗಿ ನೆರವೇರಲಿಲ್ಲ ಎಂದು ತಿಳಿಸಿದರು.
ನಮ್ಮ ಭಾಗದವರನ್ನೆ ವಿಶ್ವವಿದ್ಯಾಲಯಗಳಿಗೆ ಕುಲಸಚಿವರು ಮತ್ತು ಕುಲಪತಿಗಳನ್ನಾಗಿ ನೇಮಕ ಮಾಡಬೇಕು. ನಿಗಮಗಳು ಮಂಡಳಿಗಳು, ಪ್ರಾಧಿಕಾರಗಳು, ಅಕಾಡೆಮಿಗಳಲ್ಲಿ ಸದಸ್ಯತ್ವ, ಅಧ್ಯಕ್ಷರ ಆಯ್ಕೆ ಸಾಂಸ್ಕೃತಿಕ ಮೀಸಲಾತಿ ಒಳಪಡುವ ವಿಚಾರವಾಗಿದೆ. ರಾಜ್ಯೋತ್ಸವ ಪ್ರಶಸ್ತಿ ವಿತರಣೆಯಲ್ಲೂ ಪ್ರಾದೇಶಿಕ ಅಸಮಾನತೆ ಇದೆ. ಈ ಎಲ್ಲದರಲ್ಲೂ ಸಾಂಸ್ಕೃತಿಕ ಮೀಸಲಾತಿಯ ಅಗತ್ಯವಿದೆ ಎಂದು ನುಡಿಯುತ್ತ ದಾಬೋಲ್‌ಕರ್, ಪಾನ್ಸ್‌ರೆ, ಎಂ.ಎಂ.ಕಲಬುರ್ಗಿ, ಶ್ರೀಮತಿ ಗೌರಿ ಲಂಕೇಶ್ ಇವರ ಕೊಲೆಗಳು, ಯಾರೂ ವಿಚಾರ ಮಾಡಬೇಡಿ ಎಂದು ಸಾರುತ್ತಿವೆ. ಜೀವ ಭಯದಿಂದ ಕರ್ನಾಟಕದಲ್ಲಿ ವಿಚಾರವಂತರು ಮಾತನಾಡದಿರುವ ಪರಿಸ್ಥಿತಿ ಬಂದಿದೆ. ಸಹಿಷ್ಣುತೆ ಕಡಿಮೆಯಾಗುತ್ತಿದೆ. ಬಂಡಾಯದ ಎಲ್ಲ ಬರಹಗಾರರು ಕ್ರಿಯಾಶೀಲರಾಗಿದ್ದಾರೆ. ಆದರೆ ಸಂಘಟಿತ ಧ್ವನಿ ಇತ್ತೀಚೆಗೆ ನಿಂತಿರುವ ದುಃಸ್ಥಿತಿ ಕಾಣುತ್ತಿದ್ದೇವೆ. ನಾವೆಲ್ಲ ಒಟ್ಟಾಗದಿದ್ದರೆ ಸರ್ವನಾಶ ಕಾದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ವಿಶ್ವವಿದ್ಯಾಲಯವನ್ನು ಕುರಿತು ಮಾತನಾಡುತ್ತ ನೀವೆಲ್ಲ ಒಗ್ಗೂಡಿ ಕನ್ನಡ ವಿಶ್ವವಿದ್ಯಾಲಯವನ್ನು ಇನ್ನಷ್ಟು ಘನತೆಗೆ ಒಯ್ಯಬೇಕು. ನಿಮ್ಮ ಸಂಶೋಧನೆಗಳು ನಿಮ್ಮ ವಿದ್ಯಾರ್ಥಿಗಳಿಗೆ ಮೊದಲು ಮುಟ್ಟಬೇಕು. ಕಲಿಸುತ್ತಲೇ ಸಂಶೋಧನೆ ಮಾಡಿ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ ಅವರು ವಿಷಯ ಮಂಡಿಸುತ್ತ ಅಂಬೇಡ್ಕರ್ ಅವರ ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ಪ್ರಜಾಪ್ರಭುತ್ವ ಇಂದಿನ ಕಾಲಘಟ್ಟಕ್ಕೆ ಅಂತಿಮವಾದ ಪರಿಹಾರವಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಮುಂದಿನ ದಿನಗಳಲ್ಲಿ ಪುನಃ ಆಗಮಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿ ಮಾತನಾಡುತ್ತ ಈ ದಿನ ಪೆರಿಯಾರ್ ಅವರ ೧೩೮ನೇ ಜನ್ಮದಿನವಾಗಿದೆ. ಈ ದಿನವನ್ನು ಮೌಢ್ಯ ವಿರೋಧಿ ದಿನಾಚರಣೆ ಎಂದು ವಿದ್ಯಾವಂತರು ಭಾವಿಸಿದರೆ ನಾವು ಪೆರಿಯಾರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಪೆರಿಯಾರ್ ಅವರ ವಿಚಾರದೊಳಗಿರುವ ಸಾಮಾಜಿಕ ರಾಜಕೀಯ ವಿದ್ಯಾಮಾನಗಳನ್ನು ನೆನಪು ಮಾಡಿಕೊಂಡು ಆ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಕಟ್ಟುವ ಇಚ್ಛಾಶಕ್ತಿ ನಮಗೆ ಬರಲಿ ಎಂದು ಬಯಸಿದರು.
ವೇದಿಕೆಯಲ್ಲಿ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಡಾ.ಮಂಜುನಾಥ ಬೇವಿನಕಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಡಾ.ಕೆ. ರಮೇಶ ನಿರೂಪಿಸಿ, ವಂದಿಸಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಚಾರಸಂಕಿರಣದಲ್ಲಿ ವಿಶ್ವವಿದ್ಯಾಲಯದ ಡೀನರು, ಆಹ್ವಾನಿತ ಗಣ್ಯರು, ಬೋಧಕ ವೃಂದ, ಆಡಳಿತ ವೃಂದ, ವಿದ್ಯಾರ್ಥಿಗಳು, ನಾಗರೀಕರು ಆಸಕ್ತಿಯಿಂದ ಭಾಗವಹಿಸಿದರು.
ಊಟದ ನಂತರ ಭುವನವಿಜಯದಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚಿಂತಕರಾದ ಡಾ.ಚಂದ್ರಶೇಖರ ಪಾಟೀಲ ಅವರು ಉದ್ಘಾಟಿಸಿದರು. ಮಳವಳ್ಳಿ ಮಹಾದೇವಸ್ವಾಮಿ ಮತ್ತು ತಂಡದವರಿಂದ ಮಂಟೇಸ್ವಾಮಿ ಕಥಾ ಭಾಗ ಕಾರ್ಯಕ್ರಮ ನಡೆಯಿತು. ಬಳ್ಳಾರಿ ಪತ್ರಕರ್ತರ ತಂಡದವರು ಅಭಿಮನ್ಯು ಕಾಳಗದ ದೊಡ್ಡಾಟವನ್ನು ಪ್ರದರ್ಶಿಸಿದರು.