ಕನ್ನಡ ವಿಶ್ವವಿದ್ಯಾಲಯ ಕನಕದಾಸ ಜಯಂತಿ ಪ್ರಯುಕ್ತ  ಕನಕದಾಸರ ಮುಂಡಿಗೆಗಳು- ವಿಶೇಷ ಉಪನ್ಯಾಸ ಹಾಗೂ

ಕನ್ನಡ ವಿಶ್ವವಿದ್ಯಾಲಯ
ಕನಕದಾಸ ಜಯಂತಿ ಪ್ರಯುಕ್ತ
ಕನಕದಾಸರ ಮುಂಡಿಗೆಗಳು- ವಿಶೇಷ ಉಪನ್ಯಾಸ ಹಾಗೂ
ಕೀರ್ತನೆಗಳ ಗಾಯನ

ಮಾನವತ್ವದ ಮುಂದೆ ದೈವತ್ವ ಏನೂ ಅಲ್ಲ ಎಂದು ಕನಕದಾಸರು ಹೇಳಿದ್ದಾರೆ. ಜನಸಾಮಾನ್ಯರಿಗೆ ತತ್ವ ಬೋಧಿಸಲು ಕನಕದಾಸರು ಮುಂಡಿಗೆಗಳನ್ನು ಬಳಸಿದ್ದಾರೆ ಎಂದು ಗದಗಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಸಿದ್ಧಣ್ಣ ಎಫ್. ಜಕಬಾಳ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಹಾಲುಮತ ಅಧ್ಯಯನ ಪೀಠವು ದಿನಾಂಕ ೬.೧೧.೨೦೧೭ರಂದು ಭುವನವಿಜಯ ಸಭಾಂಗಣದಲ್ಲಿ ಕನಕದಾಸರ ೫೦೦ನೇ ಜಯಂತಿಯ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಹಾಗೂ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ಕನಕದಾಸರ ಮುಂಡಿಗೆಗಳು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಸಂಗ್ರಹವಾಗಿರುವ ೫೦ ಮುಂಡಿಗೆಗಳಲ್ಲಿ ಪೌರಾಣಿಕ ಮುಂಡಿಗೆಗಳು ನಿಗೂಢ ಮುಂಡಿಗೆಗಳು, ಅನುಭಾವ ಮುಂಡಿಗೆಗಳು ಇವೆ. ವಚನ ಸಾಹಿತ್ಯದಲ್ಲಿರುವ ಬೆಡಗಿನ ರೀತಿ ದಾಸ ಸಾಹಿತ್ಯದಲ್ಲಿ ಮುಂಡಿಗೆಗಳಿವೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಗಟು, ಬೆಡಗು ಇವುಗಳ ಮುಂದಿನ ರೂಪ ಮುಂಡಿಗೆ. ಪದವೊಂದೇ ಇದ್ದರೂ ಬೇರೆ ಬೇರೆ ಅರ್ಥ ಕೊಡುವುದೇ ಬೆಡಗು, ಮುಂಡಿಗೆ. ಮುಳ್ಳ ಮೊನಿ ಮೇಲೆ ಮೂರು ತೆರಿಕಟ್ಟಿ ಎರಡು ತುಂಬಲೇ ಇಲ್ಲ ಒಂದು ತುಂಬೇ ಇಲ್ಲ ಎಂದು ನಿಗೂಢ ಮುಂಡಿಗೆಗೆ ಉದಾಹರಣೆ ನೀಡಿದರು. ಶಿವ ಎಂಬ ಪದಕ್ಕೆ ಸಮುದ್ರ, ನೀರು, ಪರ್ವತ, ಬ್ರಹ್ಮ ಹಾಗೂ ಹರಿ ಪದಕ್ಕೆ ಇಂದ್ರ, ಸೂರ್ಯ, ನಾರಾಯಣ, ಸಿಂಹ, ವಾನರ ಎಂಬ ಅರ್ಥಗಳಿವೆ. ಅಲ್ಲದೆ ಸವಾಲು ಜವಾಬು, ಡೊಳ್ಳಿನ ಹಾಡುಗಳಲ್ಲಿ ಮುಂಡಿಗೆಗಳು ಸಿಗುತ್ತವೆ. ಮುಂಡಿಗೆಯ ಪಲ್ಲವಿಗಳ ಅರ್ಥ ಸ್ಪಷ್ಟವಾದರೆ ಮುಂದಿನ ಸಾಲುಗಳ ಅರ್ಥ ತಿಳಿಯುತ್ತದೆ. ದಶಾವತಾರಗಳ ಬಗ್ಗೆ ಸ್ಪಷ್ಟತೆ ಇದ್ದರೆ ಪೌರಾಣಿಕ ಮುಂಡಿಗೆಗಳು ಅರ್ಥವಾಗುತ್ತವೆ ಭವ, ಭಯ, ವಿನಾಶ ಭೋ- ಇದು ಒಗಟಿನ ರೂಪದ ಮುಂಡಿಗೆಯಾಗಿದೆ ಎಂದು ತಿಳಿಸುತ್ತ, ಜಾನಪದರು ದೃಶ್ಯವನ್ನು ಕಟ್ಟಿ ಕೊಡುವುದರಲ್ಲಿ ನಿಸ್ಸೀಮರು. ಜನಸಾಮಾನ್ಯರಲ್ಲಿ ಬೆಳೆದ ಕನಕದಾಸರು ಹರಿಭಕ್ತಿಸಾರ, ನಳಚರಿತ್ರೆ, ಮೋಹನ ತರಂಗಿಣ, ರಾಮಧಾನ್ಯ ಚರಿತೆ ಅಲ್ಲದೆ ಮುಂಡಿಗೆಗಳನ್ನು ರಚಿಸಿ ಪಂಡಿತಕವಿ, ದಾರ್ಶನಿಕ ಕವಿ, ಜನಪದ ಕವಿಯಾಗಿ, ದಾಸರೊಳಗೆ ದಾಸರಾಗಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಮಾತನಾಡಿ ಸಮಾನತೆಯ ಪ್ರತಿಪಾದಕರಾದ ಕನಕದಾಸರು ಯಾವುದೇ ಸಮುದಾಯಕ್ಕೆ ಸೇರಿಲ್ಲದ, ಜಾತ್ಯಾತೀತರು. ಇವರನ್ನು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಲಾಗಿದೆ. ಇದು ಕನಕದಾಸರ ಆಶಯಗಳಿಗೆ ವಿರುದ್ಧವಾಗಿದ್ದು ಆತಂಕಕಾರಿಯಾಗಿದೆ. ಬದಲಾಗಿ ಅವರನ್ನು ಸಾಮಾಜೀಕರಣ ಗೊಳಿಸಬೇಕು. ಕೊಡುಕೊಳ್ಳುವಿಕೆ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಕನಕದಾಸರು ತಮ್ಮ ಪ್ರತಿರೋಧಗಳನ್ನು ನಿಗೂಢವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಒಳ ಒತ್ತಡಗಳಿಂದ ಪ್ರತಿಮೆ ಮತ್ತು ಸಾಂಕೇತಿಕವಾಗಿ ಮಾತಾಡಲು ಪ್ರಯತ್ನಿಸಿದ್ದಾರೆ. ಆ ಕಾಲದಲ್ಲಿ ಇಂತಹ ಬಿಕ್ಕಟ್ಟುಗಳು ಯಾಕೆ ಹುಟ್ಟಿದವು ಎಂದು ಈಗ ಹೊಸ ಓದಿನ ಮೂಲಕ ನೋಡಬೇಕಾಗಿದೆ.
ಇಂದಿಗೂ ಮುಂಡಿಗೆಯ ಭಾಷೆಯಲ್ಲಿ ಜಾತಿ ವ್ಯವಸ್ಥೆ ಬಲಿಷ್ಠವಾಗಿ ಛಾಸಿಗೊಳಿಸುತ್ತಿದೆ. ಇದನ್ನು ಕಾಲದ ಸತ್ಯ ಮತ್ತು ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಿಕೊಳ್ಳಬೇಕಾದ ತುರ್ತು ಇದೆ. ಬಾಗಿಲನು ತೆರೆದು ಸೇವೆಯನು ಕೊಡುಹರಿಯೇ ಎನ್ನುವ ಕೀರ್ತನೆಯು ವ್ಯಕ್ತಪಡಿಸುವ ಆರ್ದ್ರತೆ ಇಂತಹ ನೋವನ್ನು ಅನುಭವಿಸಿದವರಿಗೆ ಮಾತ್ರ ಕನಕದಾಸ ಅರ್ಥವಾಗುತ್ತಾನೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಗತಿಗಳಿಗೆ ಕನಕದಾಸರು ಕೈ ಹಾಕಿದಾಗ ವೈದಿಕಶಾಹಿಯು ಬೆಚ್ಚಿಬಿದ್ದಿತು. ಆಗ ಕನಕರಿಗೆ ತೊಂದರೆಗಳು ಶುರು ಆದವು ಎಂದು ಕೀರ್ತನೆಗಳಿಂದ ತಿಳಿಯುತ್ತದೆ. ಇಂದು ಜಾತಿ ವ್ಯವಸ್ಥೆ ಮುಂದುವರೆಸುವ ಸಲುವಾಗಿ ಮಾನವೀಯತೆಯನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಇದರ ಹಿಂದಿನ ಮರ್ಮ ಅರ್ಥಮಾಡಿಕೊಳ್ಳಬೇಕು. ಜ್ಯಾತಿವ್ಯವಸ್ಥೆಯ ಅಹಂಕಾರಗಳು ಇಂದಿಗೂ ನಿರಸನ ಆಗಿಲ್ಲ. ಕನಕದಾಸರಾದಿಯಾಗಿ ಎಲ್ಲ ಸಮಾಜ ಸುಧಾರಕರಿಗೆ ಇರುವ ಕಾಳಜಿ ನಮಗೂ ಇದ್ದರೆ ಈ ಜ್ಯಾತಿವ್ಯವಸ್ಥೆ ನಾಶವಾಗುತ್ತಿತ್ತು ಎಂದು ಹೇಳಿದರು.
ಇಡೀ ಚರಿತ್ರೆಯನ್ನು ಸೂಕ್ಷ್ಮವಾಗಿ ನೋಡಿದರೆ ಎಲ್ಲಿಯೂ ಪುರೋಹಿತ ಶಕ್ತಿಯನ್ನು ಕೊಲ್ಲುವ ಉದಾಹರಣೆಗಳಿಲ್ಲ. ಪುರಾಣಗಳನ್ನು ವೈಚಾರಿಕ ಪ್ರಜ್ಞೆಯಿಂದ ಓದುವ ಪ್ರಯತ್ನ ಮಾಡಿದರೆ ಅಲ್ಲಿ ಇರುವ ಜ್ಯಾತಿಸಂಘರ್ಷ ಮೇಲು, ಕೀಳು, ಅಸಮಾನತೆಗಳು ತಿಳಿಯುತ್ತವೆ. ಪುರಾಣಗಳನ್ನು ಮರುಪ್ರಶ್ನಿಸಬೇಕು. ಸಂವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕನಕದಾಸರು, ಶರಣರು, ಸರ್ವಜ್ಞರು ಇದ್ದಾರೆ. ಅದನ್ನು ನೋಡುವ ಬಗೆ ನಮಗೆ ಗೊತ್ತಾಗುತ್ತಿಲ್ಲ ಎಂದು ಕುಲಪತಿಯವರು ನುಡಿದರು.
ನಂತರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನುದಾನದಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ೧೬ ಪುಸ್ತಕಗಳ ೫೦ ಕಟ್ಟುಗಳನ್ನು ಸಂಶೋಧನಾ ವಿದ್ಯಾರ್ಥಿಗಳಾದ ಗೀತಾಬಾಯಿ ಬಡಿಗೇರ, ಶಿಲ್ಪ, ನಾಗಪ್ಪ, ನವೀನಕುಮಾರ ಇವರಿಗೆ ವೇದಿಕೆಯಲ್ಲಿ ಸಾಂಕೇತಿಕವಾಗಿ ವಿತರಿಸಿದರು. ವೈಚಾರಿಕ ತಿಳುವಳಿಕೆಯಿಂದ ಜಗತ್ತನ್ನು ನೋಡುವ ಶಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕಾಲಕ್ಕನುಗುಣವಾಗಿ ಶೈಕ್ಷಣಿಕ ಬೆಳವಣಿಗೆಗೆ ಕೊಡುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸರ್ವಸಿದ್ಧತೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಐ.ಎ.ಎಸ್. ಮತ್ತು ಕೆ.ಎ.ಎಸ್. ಅಧಿಕಾರಿಗಳಾಗಿ ಬರುವಂತಾಗಬೇಕು. ಕನಕರ ಸಾಮಾಜಿಕ ನ್ಯಾಯ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಲಿ ಎಂದು ಆಶಯ ವ್ಯಕ್ತಪಡಿಸಿದರು.
ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದು ಡಾ.ಜಕಬಾಳ ಅವರನ್ನು ಪರಿಚಯಿಸಿದರು. ಶ್ವೇತಾ ನಿರೂಪಿಸಿದರು. ಬಾಣದ ಮಂಜುನಾಥ ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಗಾಯನ ಮಾಡಿದರು. ವೇದಿಕೆಯ ಮೇಲಿದ್ದ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಹೊಸಪೇಟೆಯ ಹಾಲುಮತ ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು, ನಾಗರಿಕರು, ವಿಶ್ವವಿದ್ಯಾಲಯದ ಡೀನರು, ಅಧ್ಯಾಪಕರು, ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

23270262_10208688266559116_4460216275506151016_o

ನಿಮ್ಮ ಟಿಪ್ಪಣಿ ಬರೆಯಿರಿ