ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್ ೨೯ನೇ ಮಹಾಸಮ್ಮೇಳನ ಕಾರ್ಯಕ್ರಮ-೧೫.೦೨.೨೦೨೦

ಭಾಷೆಯ ಬಳಕೆಯಲ್ಲಿ ಮಹಿಳಾ ತಾರತಮ್ಯ ಎದ್ದು ಕಾಣುತ್ತದೆ : ಡಾ. ಹೆಚ್.ಎಸ್. ಅನುಪಮಾ, ಸ್ತ್ರೀವಾದಿ ಚಿಂತಕರು, ಕವಲಕ್ಕಿ

ಇವತ್ತಿನ ಭಾಷೆಯಲ್ಲಿರುವ ಬೈಗುಳಗಳನ್ನು ನಾವು ಗಮನಿಸಿದರೆ ಅದರಲ್ಲಿ ಲೈಂಗಿಕತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಮಹಿಳೆಯರ ಘನತೆಗೆ ಚ್ಯುತಿ ಬರುವ ರೀತಿಯಲ್ಲಿ ಬೈಗುಳ ಭಾಷೆಯನ್ನು ಬಳಸುತ್ತಿದ್ದಾರೆ. ಮುಖ್ಯವಾಗಿ ಸದನ ಕಲಾಪಗಳಲ್ಲಿ ರಾಜಕಾರಣಿಗಳು ನಾವೇನು ಕೈಗಳಿಗೆ ಬಳೆ ತೊಟ್ಟುಕೊಂಡಿಲ್ಲ ಎಂದು ಲಿಂಗತಾರತಮ್ಯವನ್ನು ಮಾಡುತ್ತಿದ್ದಾರೆ ಎಂದು ಸ್ತ್ರೀವಾದಿ ಚಿಂತಕರಾದ ಡಾ. ಹೆಚ್.ಎಸ್. ಅನುಪಮಾ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್(ರಿ,) ಬೆಂಗಳೂರು, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಕರ್ನಾಟಕ ಸರ್ಕಾರ ಬೆಂಗಳೂರು ಹಾಗೂ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕರ್ನಾಟಕ ಸರ್ಕಾರ ಮೈಸೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್ ೨೯ನೇ ಮಹಾಸಮ್ಮೇಳನದ ೨ನೇ ದಿನದ ಗೋಷ್ಠಿಯ ದತ್ತಿನಿಧಿ ಉಪನ್ಯಾಸದಲ್ಲಿ ಸ್ತ್ರೀವಾದಿ ಚರಿತ್ರೆ ಮತ್ತು ನಾನು ಕಸ್ತೂರಿಬಾ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದ ಅನುಪಮಾ ಅವರು ನಾವು ಗಾಂಧಿ-೧೫೦ ಎನ್ನುವ ವಿಷಯವನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಆದರೆ ಗಾಂಧೀಜಿಯವರ ಹೋರಾಟದ ಬದುಕಿನ ಉದ್ದಕ್ಕೂ ಕಸ್ತೂರಿಬಾ ಅವರ ಸದಾ ಬೆಂಬಲ ಅಮೂಲ್ಯವಾದದ್ದು. ಗಾಂಧೀಜಿಯವರಿಗಿಂತ ಕಸ್ತೂರಿಬಾ ಅವರು ಆರು ತಿಂಗಳು ದೊಡ್ಡವರು. ಅವರಿಗೂ ಕೂಡ ೧೫೦ ವರ್ಷಗಳಾಗಿವೆ. ಇಂತಹ ಧೀಮಂತ ಮಹಿಳೆಯನ್ನು ನಾವು ಗಾಂಧೀಜಿ ಅವರ ಜೊತೆಯಲ್ಲಿ ನೆನಪಿಸಿಕೊಳ್ಳಬೇಕಾಗಿದೆ ಎಂದರು.
ಇತ್ತೀಚಿನ ಮಹಿಳಾ ಉಡುಪುಗಳನ್ನು ಗಮನಿಸಿದರೆ ಅವರ ಉಡುಪುಗಳಲ್ಲಿ ಕಿಸೆಗಳಿರುವುದಿಲ್ಲ(ಜೇಬು). ಗಂಡಸರ ಉಡುಪಿನಲ್ಲಿ ನೋಡಿದರೆ ಎಲ್ಲಿ ಬೇಕಾದರೂ ಕಿಸೆಗಳು ಎದ್ದು ಕಾಣುತ್ತವೆ. ಇಲ್ಲಿಯೂ ಕೂಡ ಅಧಿಕಾರದ ತಾರತಮ್ಯವನ್ನು ನಾವು ಗಮನಿಸಬಹುದಾಗಿದೆ. ಜಾತಿ ಮತ್ತು ಲಿಂಗ ಎನ್ನುವುದು ನಮ್ಮ ಕೈಬೆರಳಿನಲ್ಲಿರುವ ಉಗುರಿನ ರೀತಿ. ಇದನ್ನು ಯಾವ ಸಂದರ್ಭದಲ್ಲಾದರೂ ಕೂಡ ತೆಗೆದು ಹಾಕಬಹುದಾಗಿದೆ. ಯಾವುದೇ ವಸ್ತುವನ್ನು ಅದರ ಮೌಲ್ಯ ತಿಳಿಯಬೇಕಾದರೆ ಅದರ ಹಿಂದಿರುವ ರಕ್ತ, ಬೆವರು, ಕಣ್ಣೀರು ನೋಡಬೇಕಾಗಿದೆ. ಇದರಲ್ಲಿ ಸ್ತ್ರೀವಾದದ ಪರಿಕಲ್ಪನೆ ಕಾಣಬಹುದಾಗಿದೆ. ಸ್ತ್ರೀವಾದ ಎನ್ನುವುದು ಸಾಮಾಜಿಕ ನೆಲೆಯಲ್ಲಿ ನಂಬಿಕೆಯಿಟ್ಟುಕೊಂಡಿರುವುದು ಇದು ಯಾವುದೇ ಶ್ರೇಣೀಕರಣವನ್ನು ಒಪ್ಪುವುದಿಲ್ಲ. ಪ್ರಮುಖವಾಗಿ ಎಲ್ಲಾ ಮನುಷ್ಯರನ್ನು ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ ಪರಿಕಲ್ಪನೆಯ ನೆಲೆಯಲ್ಲಿ ನೋಡುತ್ತದೆ. ಇದೇ ರೀತಿಯಾಗಿ ಸಕಲ ಜೀವಿರಾಶಿಗಳನ್ನು ಬದುಕುವ ಸ್ವಾತಂತ್ರ್ಯದ ಹಕ್ಕನ್ನು ಸಮತಾವಾದದ ನೆಲೆಯಲ್ಲಿ ನಿರ್ವಚಿಸುತ್ತದೆ.
ಆದಿಮಾನವರ ಇತಿಹಾಸದಿಂದ ಹಿಡಿದು ಇಲ್ಲಿಯವರೆಗಿನ ಚರಿತ್ರೆಯ ಭಾಷೆಯಲ್ಲಿ ಚರಿತ್ರಾಕಾರರು ಬರೀ ಗಂಡಸರನ್ನು ಮಾತ್ರ ಪ್ರತಿಪಾದಿಸುತ್ತಾರೆ. ಮುಖ್ಯವಾಗಿ ಇಲ್ಲಿ ಹೆಣ್ಣು ಕಣ್ಮರೆಯಾಗಿದ್ದಾಳೆ ಇದು ವಿಷಾದನೀಯ ಸಂಗತಿ. ಕರ್ನಾಟಕದ ಚರಿತ್ರೆಯನ್ನು ನೋಡುವ ಸಂದರ್ಭದಲ್ಲಿ ಬರೀ ರಾಣಿ ಚೆನ್ನಮ್ಮ ಮಾತ್ರ ನೋಡುತ್ತೇವೆ. ಆದರೆ ಗೋಸೆ ಕೊಪ್ಪಲದ ರಾಣಿ ಚನ್ನವೀರ ದೇವಿ ಅವರು ಕರ್ನಾಟಕದ ಚರಿತ್ರೆಯ ಇತಿಹಾಸದಲ್ಲಿ ೪೬ ವರ್ಷಗಳ ಸುದೀರ್ಘ ಆಡಳಿತ ನಡೆಸಿದ್ದಾಳೆ. ಇಂತಹ ಅನೇಕ ಮಹಿಳೆಯರು ಕಣ್ಮರೆಯಾಗಿದ್ದಾರೆ. ಇಂತಹ ವಿಷಯಗಳನ್ನು ಚರಿತ್ರೆಕಾರರು ಬೆಳಕಿಗೆ ತರಬೇಕಾಗಿದೆ ಎಂದು ಹೇಳಿದರು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀಮತಿ ಡಾ. ನಾಗರತ್ನಮ್ಮ ನಿಕಟಪೂರ್ವ ಸರ್ವಾಧ್ಯಕ್ಷರಾದ ಪ್ರೊ. ಎಸ್. ಷಡಕ್ಷರಯ್ಯ, ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಈರಣ್ಣ ಪತ್ತಾರ, ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ರಮೇಶ ನಾಯಕ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ರಾಜ್ಯದ ವಿವಿಧ ಭಾಗಗಳಿಂದ ಬಂದ ಸಂಶೋಧನಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s