ತಾಯ್ನುಡಿಗಳ ಅಳಿವು ಉಳಿವು ವಿಶ್ವ ತಾಯ್ನುಡಿ ದಿನದ ಅಂಗವಾಗಿ ಉಪನ್ಯಾಸ- ಕನ್ನಡ ಭಾಷಾಧ್ಯಯನ ವಿಭಾಗ

ಪತ್ರಿಕಾ ವರದಿ

೨೧ನೇ ಶತಮಾನದಲ್ಲಿ ಸಮಾಸ ಪದಗಳಾದ ತಾಯ್ನುಡಿ ತಾಯಿನೆಲ ಹೊರಜಿಗಿತ ಮತ್ತು ಒಳಹಿಡಿತದ ಜಗ್ಗಾಟದಂತೆ ಕಾಣಿಸುತ್ತದೆ. ಯಾವುದೋ ಒಂದರಿಂದ ನಾವು ಹೊರಗಡೆ ಸಿಡಿದು ಹೋಗುತ್ತ ಇದ್ದೀವಿ ಎಂದು ಆದಾಗ ಮರಳಿ ಅದಕ್ಕೆ ಅಂಟಿಕೊಳ್ಳಬೇಕು ಅನ್ನುವ ಹಂಬಲ ಸಹ ಏಕಕಾಲದಲ್ಲಿ ಹುಟ್ಟಿಕೊಳ್ಳುತ್ತವೆ. ಈ ಕಳಚಿಕೊಳ್ಳುವಿಕೆ ಮತ್ತು ಅಂಟಿಕೊಳ್ಳುವಿಕೆ ಇದು ತಾಯ್ನುಡಿಗಳ ಮುಖ್ಯವಾದ ಬಿಕ್ಕಟ್ಟು ಎಂದು ಬೆಂಗಳೂರು ವಿಜಯಕರ್ನಾಟಕ ಸಹಾಯಕ ಸಂಪಾದಕರಾದ ಶ್ರೀ ಕೆ. ವೆಂಕಟೇಶ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಕನ್ನಡ ಭಾಷಾಧ್ಯಯನ ವಿಭಾಗವು ಮಂಟಪ ಸಭಾಂಗಣದಲ್ಲಿ ೨೧ನೇ ಫೆಬ್ರವರಿ ೨೦೧೭ರಂದು ವಿಶ್ವ ತಾಯ್ನುಡಿ ದಿನದ ಅಂಗವಾಗಿ ತಾಯ್ನುಡಿಗಳ ಅಳಿವು ಉಳಿವು ವಿಷಯ ಕುರಿತು ಉಪನ್ಯಾಸ ನೀಡುತ್ತ ಮಾತನಾಡಿದರು.
ಇಂಗ್ಲಿಷ್ ಭಾಷೆ ಸಿಂಹಿಣಿಯ ಹಾಲು. ಅದನ್ನು ಕುಡಿದರೆ ನೀವು ಗಟ್ಟಿಯಾಗುತ್ತೀರಿ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಮ್ಮ ಅನೇಕ ಸಂಕಥನಗಳನ್ನು ನೋಡಿದಾಗ ದಲಿತ ಚಿಂತಕರು ಹಾಗೂ ದಲಿತೇತರ ಚಿಂತಕರು ಇಂಗ್ಲಿಷ್ ಅನ್ನು ಜಾತಿಯ ಸಂಕಷ್ಟಗಳಿಂದ ಪೀಡನೆಗಳಿಂದ ಬಿಡುಗಡೆ ಗೊಳಿಸುವುದಕ್ಕೆ ಪರ್ಯಾಯವಾಗಿ ಸಮಾನವಾಗಿ ನೋಡುವ ಪರಿಪಾಠವಿದೆ. ವಾದ ವಿದೆ. ಇಂಗ್ಲಿಷ್ ಅನ್ನು ಅಭಿವೃದ್ಧಿಯ ಹರಿಕಾರ ಎಂದು ಭಾವಿಸಲಾಗಿದೆ. ಮಕ್ಕಳ ಶಿಕ್ಷಣದ ವಿಷಯದಲ್ಲಿ ತಂದೆ ತಾಯಿಗಳು ಕಟ್ಟಿಕೊಂಡಿರುವ ಕನಸಿನಲ್ಲಿ ಇಂಗ್ಲಿಷ್ ನಿರ್ಣಯಕವಾಗಿರುತ್ತದೆ. ಇಂಗ್ಲಿಷ್ ಕಲಿತರೆ ಎಲ್ಲವೂ ಸಿಗುತ್ತದೆ ಎಂದು ಭಾವಿಸಲಾಗಿದೆ. ಆದರೆ ೧೧ ಲಕ್ಷ ಇಂಜಿನಿಯರುಗಳು ತಾವು ಓದಿರುವುದಕ್ಕಿಂತ ಭಿನ್ನವಾದ ಉದ್ಯೋಗ ಮಾಡುತ್ತಿದ್ದಾರೆ. ಇಂತಹ ಸತ್ಯಾಸತ್ಯತೆಗಳ ಕುರಿತು ನಾವು ಪರೀಕ್ಷೆ ಮಾಡಿದ್ದೇವಾ ಎಂದು ತಾಯ್ನುಡಿಗಳ ಅಸ್ತಿತ್ವ ಮತ್ತು ವಿನಾಶದ ಪ್ರಶ್ನೆಗಳ ಸಂದರ್ಭದಲ್ಲಿ ಕೇಳಿಕೊಳ್ಳಬೇಕಾಗಿದೆ. ಮನೆಮಾತು ಅಥವಾ ತಾಯ್ನುಡಿಯಿಂದ ದೇಸೀ ಜ್ಞಾನ ಸಿಗುತ್ತದೆ. ನೆಲದೊಂದಿಗೆ ಆಳವಾದ ನಂಟನ್ನು ಉಂಟು ಮಾಡುತ್ತದೆ. ತುಂಬಾ ಪರಿಣಾಮಕಾರಿಯಾದ ಸಾಮಾಜೀಕರಣ ಆಗುತ್ತದೆ. ಸಾಂಸ್ಕೃತಿಕ ನೆನಪುಗಳು ಇರುತ್ತವೆ. ಆದರೆ ಪರಕೀಯ ನುಡಿಗಳಿಂದ ಇದು ಸಾಧ್ಯವಾಗುವುದಿಲ್ಲ ಎಂದು ಉಪನ್ಯಾಸದಲ್ಲಿ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಬಹುಭಾಷೆಯ ಮೂಲಕ ಸುಸ್ಥಿರ ಸಮಾಜ ಕಟ್ಟಬಹುದು ಎಂದು ಯುನೆಸ್ಕೋ ಹೊರಡಿಸಿರುವ ಘೋಷಣೆಯು ಜಾಗತಿಕ ಭಾಷಾರಾಜಕಾರಣದ ವ್ಯಾಖ್ಯಾನವಾಗಿದೆ. ಜಗತ್ತಿನಲ್ಲಿ ಇಂದು ತಂತ್ರ ಪ್ರಣೀತವಾದಂತಹ ರಾಜಕಾರಣ ಬಹಳ ದೊಡ್ಡ ಹುನ್ನಾರವನ್ನು ಹುಟ್ಟಿಸಿದೆ. ಭಾಷೆ, ಸಂಸ್ಕೃತಿ, ಸಮಾಜ, ಧರ್ಮ ಇವೆಲ್ಲವುಗಳ ಒಳಗೆ ಬಹಳ ಸೂಕ್ಷ್ಮವಾಗಿ ಸ್ಥಳೀಯ ಮತ್ತು ಹೊರಗಿನ ಅಹಂಕಾರಗಳು ಪ್ರವೇಶ ಮಾಡಿವೆ. ಹೀಗಾಗಿ ಬಹುಭಾಷೆಯ ಕಲಿಕೆಯ ಮೂಲಕ ಸುಸ್ಥಿರ ಸಮಾಜ ಅಂದರೆ ಬಹುಭಾಷೆಯಲ್ಲಿ ಯಾವ ಭಾಷೆ ಮೇಲಿರಬೇಕು, ಕೆಳಗಿರಬೇಕು ಎಂಬ ಪ್ರಶ್ನೆಗಳು ಕಾಡುತ್ತವೆ. ಬಹುಭಾಷೆ ಕಲಿಯಬೇಕಾದರೆ ಮೊದಲು ಕನ್ನಡ ಕಲಿಯಬೇಕೆ ಅಥವಾ ಇಂಗ್ಲಿಷ್ ಕಲಿಯಬೇಕೆ ಎಂಬ ಸಂದಿಗ್ಧ. ಹೀಗಾಗಿ ಬಹುಭಾಷೆ ಇಡೀ ಜಗತ್ತಿನ ಸಾಂಸ್ಕೃತಿಕ ಲೋಕವನ್ನು ಒಂದು ಚೌಕಟ್ಟಿಗೆ ಒಳಪಡಿಸುವಂತಹ ಬಹಳ ದೊಡ್ಡ ಅಪಾಯವನ್ನು ನಮ್ಮೆದುರಿಗೆ ಇಟ್ಟು ಅದು ಎಲ್ಲೋ ಒಂದು ಕಡೆಗೆ ಶಕ್ತಿರಾಜಕಾರಣದ ಜಾಗತಿಕ ಶಕ್ತಿರಾಜಕಾರಣದ ಅಸ್ತ್ರವನ್ನಾಗಿ ಭಾಷೆಯನ್ನು ಬಳಸಿಕೊಳ್ಳುತ್ತದೆ ಎಂಬುದು ನಿಚ್ಚಳವಾಗಿದೆ. ವಸಾಹತೋತ್ತರದ ನಂತರ ಅಭಿವೃದ್ಧಿಯ ಕಡೆಗೆ ಮುಖ ಮಾಡಿದ ಎಲ್ಲ ದೇಶಗಳಲ್ಲಿಯೂ ಭಾಷಾರಾಜಕಾರಣದ ಮೂಲಕ ಸಾಂಸ್ಕೃತಿಕ ಹಲ್ಲೆ ನಡೆಯುತ್ತಿರುವುದನ್ನು ನೋಡಬಹುದು. ಮಾಧ್ಯಮ ಭಾಷೆಯಾಗಿ, ಕಲಿಕೆಯ ಭಾಷೆಯಾಗಿ ಒಂದು ಪ್ರದೇಶದ ಭಾಷೆಯನ್ನು ಪಠ್ಯಕ್ಕೆ ಅಳವಡಿಸಿದ್ದರಿಂದ ಹಲವು ಕನ್ನಡ ಭಾಷೆಯ ಸೊಗಡುಗಳನ್ನು ಕಲಿಕೆಯ ಒಳಗೆ ಪ್ರವೇಶ ಮಾಡಲು ಇಂದಿನವರೆಗೂ ಮಡಿವಂತಿಕೆಯ ಮನಸ್ಸು ಬಿಡುತ್ತಿಲ್ಲ; ನಾವು ತೆರೆದುಕೊಂಡಿಲ್ಲ. ಇಂಗ್ಲಿಷ್ ಭಾಷೆಯನ್ನು ಓದುವುದು ತಪ್ಪಲ್ಲ. ಆದರೆ ನಮ್ಮ ಸಹಜತೆಯನ್ನು ಕಳೆದುಕೊಳ್ಳುವುದು ತಪ್ಪು ಎಂದು ಕುಲಪತಿಯವರು ನುಡಿದರು.
ಲಲಿತಕಲೆಗಳ ನಿಕಾಯದ ಡೀನರಾದ ಡಾ. ಅಶೋಕಕುಮಾರ ರಂಜೇರೆ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ವಿದ್ಯಾರ್ಥಿ ಡಾ. ಜೆ. ಕುಮಾರ ನಿರೂಪಿಸಿದರು. ಸಂಗೀತ ವಿದ್ಯಾರ್ಥಿ ಪ್ರಾರ್ಥಿಸಿದರು. ಡಾ. ಸಾಂಬಮೂರ್ತಿ ವಂದಿಸಿದರು. ಉಪನ್ಯಾಸದ ನಂತರ ಚರ್ಚೆಯಲ್ಲಿ ಡಾ. ಶಿವಾನಂದ ಎಸ್. ವಿರಕ್ತಮಠ, ಡಾ. ವೀರೇಶ ಬಡಿಗೇರ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು.

dsc00372-102-2001

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s